ಜಾಮೀನಿನಲ್ಲಿ ಬಿಡುಗಡೆಗೊಂಡು ಜೈಲಿನಿಂದ ಹೊರಬಂದ ತಕ್ಷಣ ಅವರು ಹೋರಾಟದ ಕೆಚ್ಚನ್ನು ಮರು ಪ್ರದರ್ಶಿಸಿದರು. ಯುಎಪಿಎ ಕಾಯ್ದೆಯ ವಿರುದ್ಧ ಮತ್ತು ಅದರ ಆಧಾರದಲ್ಲಿ ಬಂಧಿಸಲಾಗಿರುವ ತಮ್ಮ ಸಂಗಾತಿಗಳ ಬಿಡುಗಡೆಗಾಗಿ ಆಗ್ರಹಿಸಿ ಪ್ರತಿಭಟಿಸಿದರು. ಆದರೆ ಸ್ಟ್ಯಾನ್ ಸ್ವಾಮಿ ಅಜ್ಜ. ಅವರಿಗೆ ಆ ಸಾಮರ್ಥ್ಯ ಇರಲಿಲ್ಲ. ಅವರನ್ನು ಬಂಧಿಸಿದರೂ ಬಿಡುಗಡೆಗೊಳಿಸಿದರೂ ಏನೂ ವ್ಯತ್ಯಾಸವಾಗದಷ್ಟು ಅವರು ದಣಿದಿದ್ದರು. ಕಳೆದ ಅಕ್ಟೋಬರ್‌ನಲ್ಲಿ ಬಂಧನಕ್ಕೀಡಾಗುವಾಗ ಅವರಿಗೆ 83 ವರ್ಷ ಕಳೆದಿತ್ತು. ಪಾರ್ಕಿನ್ಸನ್ ಕಾಯಿಲೆಯಿತ್ತು. ಬದುಕಿನ ಸಂಧ್ಯಾ ಕಾಲದಲ್ಲಿದ್ದ ಅವರನ್ನು ನಮ್ಮ ಪ್ರಭುತ್ವ ಎಷ್ಟು ಕ್ರೂರವಾಗಿ ನಡೆಸಿಕೊಂಡಿತು ಅಂದರೆ, ಪಾನೀಯ ಸೇವನೆಗಾಗಿ ಸ್ಟ್ರಾ ಮತ್ತು ಸಿಪ್ಪರ್ ಬಳಕೆಗೂ ಅನುಮತಿ ನೀಡಲಿಲ್ಲ. ನಡುಗುತ್ತಿದ್ದ ಕೈಯಿಂದ ಗ್ಲಾಸ್ ಹಿಡಿಯಲು ಸಾಧ್ಯವಾಗದ ಸ್ಟ್ಯಾನ್ ಸ್ವಾಮಿ, ಸ್ಟ್ರಾ ಕೊಡಿಸಿ ಎಂದು ಕೋರ್ಟಿನ ಮುಂದೆ ಬೇಡಿಕೊಂಡರು. ಅವರಿಗೆ ಸ್ಟ್ರಾ ಅಗತ್ಯ ಇದೆಯೋ ಇಲ್ಲವೋ ಎಂಬ ಬಗ್ಗೆ ಕೋರ್ಟಿಗೆ ಅಭಿಪ್ರಾಯ ತಿಳಿಸುವುದಕ್ಕೆ ರಾಷ್ಟ್ರೀಯ ತನಿಖಾ ದಳವು ಸುಮಾರು ಒಂದು ತಿಂಗಳ ಅವಧಿಯನ್ನು ತೆಗೆದುಕೊಂಡಿತು. ಅಂದಹಾಗೆ,
ಓರ್ವ ವಯೋವೃದ್ಧನಿಗೆ ಒದಗಿಸಬೇಕಾದ ಸ್ಟ್ರಾಗೂ ಇಷ್ಟೊಂದು ತಡೆ ಒಡ್ಡುವ ಮನಸ್ಸು ಈ ತನಿಖಾ ದಳದಲ್ಲಿ ಇದೆಯೆಂದ ಮೇಲೆ, ಅವರು ಜೈಲು ಕೋಣೆಯಿಂದ ಜೀವಂತ ಹೊರಬರುವ ನಿರೀಕ್ಷೆಯನ್ನೇ ಅಪರಾಧವೆನ್ನಬೇಕಾಗುತ್ತದೆ. ಅಷ್ಟಕ್ಕೂ,
ಸ್ಟ್ರಾ ಅಂದರೆ ಬಂದೂಕು ಅಲ್ಲವಲ್ಲ. ಎಲ್ಲೊ ನಗರದ ಚರ್ಚ್ ಒಳಗಡೆ ಆರಾಮವಾಗಿ ಇದ್ದಿರಬೇಕಾದ ಫಾದರ್ ಓರ್ವ ಅವೆಲ್ಲವನ್ನೂ ತೊರೆದು ಜಾರ್ಖಂಡ್ ಎಂಬ ಬುಡಕಟ್ಟುಗಳೇ ಅಧಿಕವಿರುವ ರಾಜ್ಯದಲ್ಲಿ ತಂಗಿದುದೇ ಒಂದು ವಿಸ್ಮಯ. ಬುಡಕಟ್ಟು-ಆದಿವಾಸಿಗಳು ಸಾಮಾನ್ಯವಾಗಿ ಕಾಡನ್ನೇ ಮನೆ ಮಾಡಿಕೊಂಡವರು. ಆದರೆ, ಆಧುನಿಕ ಅಭಿವೃದ್ಧಿ ಮಾದರಿಯಂತೂ ಈ ಕಾಡಿಗೇ ಕನ್ನ ಹಾಕುವ ಮನಸ್ಸಿನದ್ದು. ಅಭಿವೃದ್ಧಿಯ ಬುಲ್ಡೋಜರ್‌ಗೆ ಜನರು ಕಾಣಿಸುವುದಿಲ್ಲ. ಅವರ ಸಾಂಸ್ಕೃತಿಕ ವೈಶಿಷ್ಟ್ಯಗಳು ಅಮೂಲ್ಯ ಅನ್ನಿಸುವುದಿಲ್ಲ. ಕಾಡನ್ನು ಲೆಕ್ಕಿಸುವುದಿಲ್ಲ. ಕಾಡನ್ನು ಬಗೆದು ಸಂಪತ್ತನ್ನು ದೋಚುವುದು ಮತ್ತು ಕಾಡಲ್ಲಿರುವವರನ್ನು ಎತ್ತಂಗಡಿ ಮಾಡಿ ನಿರಾಶ್ರಿತರನ್ನಾಗಿಸುವುದರಲ್ಲಿ ನೈತಿಕ-ಅನೈತಿಕ ಪ್ರಶ್ನೆಯೂ ಕಾಡುವುದಿಲ್ಲ. ಸ್ಟ್ಯಾನ್ ಸ್ವಾಮಿ ಕಾಡು ನಿವಾಸಿಗಳ ಪರ ನಿಂತರು. ಅವರ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಡಿದರು. ಆದಿವಾಸಿಗಳನ್ನು ಸಂಘಟಿಸಿ ಆಧುನಿಕ ಅಭಿವೃದ್ಧಿ ಮಾದರಿಗೆ ಆದಿವಾಸಿಗಳು ಬಲಿಯಾಗದಂತೆ ತಡೆಯಲು ಯತ್ನಿಸಿದರು. ಯಾವಾಗ ಆದಿವಾಸಿಗಳಿಗೆ ಭಾರತೀಯ ಕಾಯ್ದೆ-ಕಾನೂನುಗಳ ಅರಿವು ಮೂಡಿಸುವ ಪ್ರಯತ್ನ ನಡೆಯತೊಡಗಿತೋ ಮತ್ತು ಅವರನ್ನು ಸಂಘಟಿತಗೊಳಿಸಿ ಹಕ್ಕುಗಳ ಪರ ಹೋರಾಡುವ ಛಲವನ್ನು ತುಂಬಲಾಯಿತೋ ಪ್ರಭುತ್ವದ ಕಣ್ಣು ಸ್ಟ್ಯಾನ್ ಸ್ವಾಮಿ ಎಂಬ ಏಕವ್ಯಕ್ತಿಯ ಮೇಲೆ ಬಿದ್ದಿತು. ಇದರ ಆರಂಭವಾಗಿ ಅವರಿಗೂ ನಕ್ಸಲ್ ಉಗ್ರವಾದಿಗಳಿಗೂ ನಡುವೆ ನಂಟು ಕಲ್ಪಿಸಲಾಯಿತು. ನಕ್ಸಲರಿರುವುದೂ ಕಾಡಲ್ಲಿ. ಆದಿವಾಸಿಗಳದ್ದೂ ಕಾಡೇ ತವರು. ಸ್ಟ್ಯಾನ್ ಸ್ವಾಮಿ ಇರುವುದೂ ಅಲ್ಲೇ. ಆದ್ದರಿಂದ
ಇಂಥದ್ದೊಂದು ಆರೋಪ ಹೊರಿಸಿದರೆ ತಕ್ಷಣಕ್ಕೆ ‘ಆಗಿರಬಹುದು’ ಎಂಬ ಅನುಮಾನ ನಗರ ಪ್ರದೇಶದ ಮಂದಿಯಲ್ಲಿ ಉದ್ಭವವಾಗುವುದು ಸಹಜ. ಇದರ ಜೊತೆಗೇ ಅವರ ಮೇಲೆ ಇನ್ನೊಂದು ಗಂಭೀರ ಆರೋಪವನ್ನೂ ರಾಷ್ಟ್ರೀಯ ತನಿಖಾ ದಳವು ಹೊರಿಸಿತು. 2017 ಡಿಸೆಂಬರ್ 31ರಂದು ಪುಣೆ ಸಮೀಪದ ಭೀಮಾ-ಕೋರೆಗಾಂವ್ ಗ್ರಾಮದಲ್ಲಿ ನಡೆದ ಸಭೆಯು ಹಿಂಸಾಚಾರದೊAದಿಗೆ ಕೊನೆಗೊಂಡಿತ್ತಲ್ಲದೇ, ಈ ಸಭೆಯನ್ನು ಆಯೋಜಿಸಿದ್ದ ಎಲ್ಗಾರ್ ಪರಿಷತ್‌ಗೂ ನಿಷೇಧಿತ ಮಾವೋವಾದಿಗಳಿಗೂ ಸಂಬAಧ ಇತ್ತು ಮತ್ತು ಅದರಲ್ಲಿ ಸ್ಟ್ಯಾನ್ ಸ್ವಾಮಿ ಕೂಡ ಒಬ್ಬರು ಎಂಬುದು ಈ ಆರೋಪವಾಗಿತ್ತು. ಎಲ್ಗಾರ್ ಪರಿಷತ್‌ನ ರೂವಾರಿಗಳು ಪ್ರಧಾನಿ ನರೇಂದ್ರ ಮೋದಿಯನ್ನು ಕೊಲ್ಲಬಯಸಿದ್ದರು ಎಂಬ ಆರೋಪವನ್ನು ಹೊರಿಸಿ, ಆ ಆರೋಪಿಗಳ ಪೈಕಿ ಓರ್ವರಾಗಿ ಸ್ಟ್ಯಾನ್ ಸ್ವಾಮಿಯನ್ನು ರಾಷ್ಟ್ರೀಯ ತನಿಖಾ ದಳವು ಬಿಂಬಿಸಿತು. ಮಾತ್ರವಲ್ಲ, ಯುಎಪಿಎ ಕಾಯ್ದೆಯಡಿ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡಿತು. ವಿಷಾದ ಏನೆಂದರೆ,
2020 ಅಕ್ಟೋಬರ್‌ನಲ್ಲಿ ಬಂಧಿತರಾದ ಬಳಿಕ ಸಾಯುವ ವರೆಗೂ ಅವರಿಗೆ ಜಾಮೀನು ಸಿಕ್ಕಿಲ್ಲ. ಅವರು ಕೊನೆಯುಸಿರೆಳೆದದ್ದು ಮುಂಬೈಯ ಖಾಸಗಿ ಆಸ್ಪತ್ರೆಯಲ್ಲಿ. ಹಾಗಂತ,
ಅವರು ವಯೋವೃದ್ಧರೆಂಬುದು ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೂ ಗೊತ್ತು. ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೂ ಗೊತ್ತು ಮತ್ತು ನ್ಯಾಯದಾನ ನೀಡಬೇಕಾದ ನ್ಯಾಯಾಧೀಶರಿಗೂ ಗೊತ್ತು. ಆದರೂ ಅವರು ಜಾಮೀನಿಗೆ ಅರ್ಹರಾಗಿಲ್ಲವೆಂದರೆ, ಅದಕ್ಕೆ ಕಾರಣ ಯುಎಪಿಎ ಕಾಯ್ದೆ. ಆರೋಪಿ ಯನ್ನು ಸತಾಯಿಸುವ ಮತ್ತು ಆರೋಪ ಹೊರಿಸುವ ಅಧಿಕಾರಿಗಳಿಗೆ ಅಪರಿಮಿತ ಅಧಿಕಾರವನ್ನು ನೀಡುವ ಈ ಕಾಯ್ದೆಯ ಕರಾಳ ಮುಖಕ್ಕೆ ಸ್ಟಾö್ಯನ್ ಸ್ವಾಮಿಯೇ ಅತ್ಯುತ್ತಮ ಉದಾಹರಣೆ. ಅವರು ಹೋರಾಡಿದ್ದು ಆದಿವಾಸಿಗಳ ಬದುಕುವ ಹಕ್ಕಿಗಾಗಿ. ಸಂವಿಧಾನ ಅವರಿಗೆ ನೀಡಿರುವ ಹಕ್ಕನ್ನು ಮರಳಿಸುವುದಕ್ಕಾಗಿ. ದುರಂತ ಏನೆಂದರೆ, ಸ್ಟ್ಯಾನ್ ಸ್ವಾಮಿಯ ಸರ್ವ ಹಕ್ಕುಗಳನ್ನೂ ಅದೇ ಸಂವಿಧಾನದ ಅಡಿಯಲ್ಲಿ ರೂಪಿಸಲಾದ ಕಾಯ್ದೆಯು ಕಸಿದುಕೊಂಡಿತು. ಜುಜುಬಿ ಸ್ಟ್ರಾ ಪಡೆಯುವ ಮೂಲಭೂತ ಹಕ್ಕನ್ನೂ ತಿಂಗಳ ಕಾಲ ಈ ಕಾಯ್ದೆ ಅವರಿಗೆ ನಿಷೇಧಿಸಿ ನಕ್ಕಿತು. ಏನೇ ಆಗಲಿ.
ಸ್ಟ್ಯಾನ್ ಸ್ವಾಮಿ ಈಗ ಹೊರಟು ಹೋಗಿದ್ದಾರೆ. ಅವರು ಬಿಟ್ಟು ಹೋಗಿರುವ ಒಂದೇ ಒಂದು ಕುರುಹು ಏನೆಂದರೆ ದುರ್ಬಲ ಸ್ಟ್ರಾ. ಅದೊಂದು ಸಂಕೇತ. ಪ್ರಭುತ್ವದ ಕೈಯಲ್ಲಿ ಕಾನೂನುಗಳು ಹೇಗೆ ದುರುಪಯೋಗಕ್ಕೀಡಾಗಬಹುದು ಎಂಬುದನ್ನು ಸೂಚಿಸುವ ಸಂಕೇತ. ಅಷ್ಟಕ್ಕೂ,
ಉತ್ತರ ಕೊರಿಯ, ಸಿರಿಯಾ, ಮ್ಯಾನ್ಮಾರ್, ಚೀನಾ ಇತ್ಯಾದಿ ರಾಷ್ಟ್ರಗಳಲ್ಲಿ ಈ ಯುಎಪಿಎ ಕಾಯ್ದೆ ರಚನೆಯಾಗಿರುತ್ತಿದ್ದರೆ ಅದಕ್ಕೆ ಅಚ್ಚರಿ ಪಡಬೇಕಿರಲಿಲ್ಲ. ಆದರೆ, ಪ್ರಜಾತಂತ್ರ ರಾಷ್ಟ್ರವಾದ ಭಾರತದಲ್ಲಿ ಅದೂ ಮಾನವ ಹಕ್ಕುಗಳಿಗೆ ವಿಪರೀತ ಆದ್ಯತೆ ನೀಡುವ ರಾಷ್ಟçದಲ್ಲಿ ಯುಎಪಿಎಯಂಥ ಕಾಯ್ದೆ ರಚನೆಯಾಗಿರುವುದೇ ಚೋದ್ಯದ ಸಂಗತಿ. ಈ ದೇಶದ ಸಂವಿಧಾನ ರಚನೆಯಾಗುವಾಗ ಮಾನವ ಹಕ್ಕುಗಳಿಗೆ ಭಾರೀ ಮಹತ್ವ ನೀಡಲಾಗಿತ್ತು. ದಲಿತರೆಂಬ ಶೋಷಿತ ಸಮುದಾಯವು ಹಕ್ಕುಗಳನ್ನೆಲ್ಲಾ ಕಳಕೊಂಡು ಬಲಿತರ ಗುಲಾಮರಂತೆ ಬದುಕುತ್ತಿದ್ದುದನ್ನು ತಡೆಯುವುದಕ್ಕಾಗಿಯೇ ಮಾನವ ಹಕ್ಕುಗಳಿಗೆ ಮಹತ್ವವನ್ನು ಕಲ್ಪಿಸುವ ಮತ್ತು ವ್ಯಕ್ತಿ ಸ್ವಾತಂತ್ರ‍್ಯವನ್ನು ಮೂಲಭೂತ ಹಕ್ಕುಗಳಾಗಿ ಒಪ್ಪಿಕೊಳ್ಳುವ ತತ್ವಗಳನ್ನು ಸಂವಿಧಾನದಲ್ಲಿ ಅಳವಡಿಸಲಾಯಿತು. ಆ ಸಂವಿಧಾನಕ್ಕೆ 7 ದಶಕಗಳು ಸಂದ ಈ ಹೊತ್ತಿನಲ್ಲಿ ಒಂದು ಸ್ಟ್ರಾ ಜೈಲಿನ ಕೋಣೆಯಲ್ಲೆಲ್ಲೋ ಅನಾಥವಾಗಿ ರೋಧಿಸುತ್ತಿದೆ. ಇದೇ ಸಂವಿಧಾನದ ಮೂಗಿನಡಿಯಲ್ಲೇ ರಚಿತವಾದ ಯುಎಪಿಎ ಎಂಬ ಕಾಯ್ದೆ ರೋಧಿಸುತ್ತಿರುವ ಆ ಸ್ಟ್ರಾವನ್ನೂ ಮತ್ತು 7 ದಶಕಗಳ ಹಿಂದಿನ ಆ ಸಂವಿಧಾನವನ್ನೂ ನೋಡುತ್ತಾ ವಿಕಟ ನಗು ಬೀರುತ್ತಿದೆ. ಆ ಸ್ಟ್ರಾದಲ್ಲಿ ಶಕ್ತಿಯಿಲ್ಲ. ಜನಸಾಮಾನ್ಯರಲ್ಲೂ ಶಕ್ತಿಯಿಲ್ಲ. ಆದರೆ ಅವರು ಆರಿಸಿ ಕಳುಹಿಸಿದ ಪ್ರತಿನಿಧಿಗಳು ಶಕ್ತಿವಂತರಾಗುತ್ತಿದ್ದಾರೆ. ಅವರ ಅಣತಿಯಂತೆ ಕಾಯ್ದೆಗಳು ರಚನೆಗೊಳ್ಳತೊಡಗಿವೆ. ಪ್ರಜೆಗಳೇ ಪ್ರಭುಗಳಾಗಬೇಕೆಂಬ ಸಂವಿಧಾನದ ಬಯಕೆ ತಿರುವು ಮುರುವಾಗುತ್ತಿದೆ. ಆರಿಸಿದವ ಅಡಿಯಾಳಾಗಿ ಮತ್ತು ಗೆದ್ದವ ದೊರೆಯಾಗಿ ಮಾರ್ಪಡುತ್ತಿದ್ದಾರೆ.
ಸ್ಟ್ಯಾನ್ ಸ್ವಾಮಿ ಬಿಟ್ಟು ಹೋಗಿರುವ ಸ್ಟ್ರಾ ಬಹುಶಃ ಅನ್ಯಾಯವನ್ನು ಪ್ರಶ್ನಿಸುವ ಈ ದೇಶದ ಪ್ರತಿಯೊಬ್ಬ ನಾಗರಿಕನ ಗುರುತು. ಆತ ಈ ಯುಎಪಿಎ ಎದುರು ಆ ಸ್ಟ್ರಾದಷ್ಟೇ ದುರ್ಬಲ.
--
--
No comments:
Post a Comment