ವಝೀರ್ ಪಾಶಾ ಕಡೆಯಿಂದ ನೀಡಲಾದ ದೂರನ್ನು ತಕ್ಷಣಕ್ಕೆ ಸ್ವೀಕರಿಸಲು ಪೊಲೀಸ್ ಇಲಾಖೆ ಸಿದ್ಧವಾಗಿಲ್ಲ. ಈ ಬಗ್ಗೆ
ಎಸ್ಪಿ ಕಚೇರಿಗೆ ದೂರು ನೀಡಿ, ಬಳಿಕ ಮುಸ್ಲಿಮ್ ಮಹಿಳೆಯರು ಅನ್ಯಾಯದ ವಿರುದ್ಧ ಠಾಣೆಯ ಎದುರು ಪ್ರತಿಭಟಿಸಿದ್ದಾರೆ. ಆ ಸಂದರ್ಭದಲ್ಲಿ ಅಂಬೇಡ್ಕರ್ ಝಿಂದಾಬಾದ್ ಎಂದೂ ಕೂಗಿದ್ದಾರೆ. ಇಡೀ ಪ್ರತಿಭಟನೆ ಪೊಲೀಸರ ಕ್ಯಾಮರಾದಲ್ಲೂ ಸೆರೆಯಾಗಿದೆ. ಇದಾದ ಬಳಿಕ ಇವರ ದೂರನ್ನೂ ಸ್ವೀಕರಿಸಲಾಗಿದೆ. ಈ ನಡುವೆ ಪತ್ರಕರ್ತ ಹರೀಶ್, ಶನಿವಾರ ಸಂತೆ ಗ್ರಾಮ ಪಂಚಾಯತ್ ಸದಸ್ಯ ಮತ್ತು ಸಂಘ ಪರಿವಾರ ಕಾರ್ಯಕರ್ತ ರಘು ಮತ್ತು ಗಿರೀಶ್ ಎಂಬವರು ಸೇರಿ ಗಂಭೀರ ಸಂಚೊoದನ್ನು ಹೆಣೆದಿದ್ದಾರೆ. ಅಂಬೇಡ್ಕರ್ ಝಿಂದಾಬಾದ್ ಘೋಷಣೆಯನ್ನು ಪಾಕಿಸ್ತಾನ್ ಝಿಂದಾಬಾದ್ ಎಂದು ತಿರುಚಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ್ದಾರೆ. ಇದರಿಂದಾಗಿ ಸೋಮವಾರಪೇಟೆ ಉದ್ವಿಘ್ನಗೊಂಡಿದೆ. ನವೆಂಬರ್ 15ರಂದು ಶನಿವಾರಸಂತೆ ಬಂದ್‌ಗೂ ಸಂಘಪರಿವಾರ ಕರೆ ನೀಡಿದೆ. ಪ್ರತಿಭಟನಾ ನಿರತ ಮುಸ್ಲಿಮ್ ಮಹಿಳೆಯರನ್ನು ದೇಶದ್ರೋಹಿಗಳಂತೆ ಬಿಂಬಿಸುವ ಶ್ರಮಗಳು ಈ ಅವಧಿಯಲ್ಲಿ ಸಾಕಷ್ಟು ನಡೆದಿದೆ. ಇ ದೀಗ ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಿರುವುದು ಪ್ರತಿಭಟನಾ ನಿರತ ಮುಸ್ಲಿಮ್ ಮಹಿಳೆಯರಲ್ಲ, ಈ ಮೇಲಿನ ಮೂವರು ಎಂದು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪ್ರತಿಭಟನಾಕಾರರು ಪಾಕಿಸ್ತಾನ್ ಝಿಂದಾಬಾದ್ ಕೂಗಿಲ್ಲ ಎಂದು ಖುದ್ದು ಶನಿವಾರಸಂತೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪರಶಿವ ಮೂರ್ತಿಯವರೇ ಹೇಳಿದ್ದಾರೆ.
ದೃಶ್ಯ ಮತ್ತು ಮುದ್ರಣ ಮಾಧ್ಯಮ ರಂಗವು ಬಹುತೇಕ ವಿಶ್ವಾಸಾರ್ಹತೆಯನ್ನು ಕಳಕೊಂಡಿರುವ ಈ ಹೊತ್ತಿನಲ್ಲಿ ಪತ್ರಕರ್ತ ಹರೀಶ್ ನಮ್ಮ ಮುಂದಿದ್ದಾರೆ. ಅಷ್ಟಕ್ಕೂ,
ತಪ್ಪಾದ ಸುದ್ದಿ ಮೂಲವನ್ನು ಆಧರಿಸಿ ಓರ್ವ ಪತ್ರಕರ್ತ ವರದಿ ತಯಾರಿಸುವುದು ಮತ್ತು ತಾನು ತಪ್ಪೆಸಗಿದ್ದೇನೆ ಎಂದು ಗೊತ್ತಾದಾಗ ಅದೇ ಸ್ಫೂರ್ತಿಯಿಂದ ತಿದ್ದಿಕೊಳ್ಳುವುದು.. ಇವೆಲ್ಲ ಅಸಹಜ ಅಲ್ಲ. ಪತ್ರಕರ್ತರೂ ಮನುಷ್ಯರಾಗಿರುವುದರಿಂದ ಪ್ರಮಾದಗಳೇ ಸಂಭವಿಸಲ್ಲ ಎಂದು ಹೇಳಲಾಗದು. ಆದರೆ ಸಂಚು ಹಾಗಲ್ಲ. ಅದು ಪ್ರಮಾದವಲ್ಲ. ಅದು ಉದ್ದೇಶಪೂರ್ವಕ. ಹರೀಶ್ ಭಾಗಿಯಾಗಿರುವುದು ಈ ಅಪಾಯಕಾರಿ ಸಂಚಿನ ಪ್ರಕರಣದಲ್ಲಿ. ಅಂಬೇಡ್ಕರ್ ಝಿಂದಾಬಾದ್ ಘೋಷಣೆಯನ್ನು ಪಾಕಿಸ್ತಾನ್ ಝಿಂದಾಬಾದ್ ಎಂದು ತಿರುಚುವುದಾದರೆ ಅದರ ಹಿಂದೆ ಉದ್ದೇಶಪೂರ್ವಕ ಸಂಚಿದೆ. ಪ್ರತಿಭಟನಾಕಾರರನ್ನು ದೇಶದ್ರೋಹಿಗಳಂತೆ ಮತ್ತು ಸಾರ್ವಜನಿಕರನ್ನು ಪ್ರತಿಭಟನಾಕಾರರ ವಿರುದ್ಧ ತಿರುಗಿ ಬೀಳುವಂತೆ ಮಾಡುವ ಹುನ್ನಾರ ಇದೆ. ಒಂದುವೇಳೆ, ಅಂಬೇಡ್ಕರ್ ಝಿಂದಾಬಾದ್ ಘೋಷಣೆಯನ್ನು ಪಾಕಿಸ್ತಾನ್ ಝಿಂದಾಬಾದ್ ಎಂದು ತಿರುಚಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳದೇ ಇರುತ್ತಿದ್ದರೆ ಸಂಘಪರಿವಾರ ಶನಿವಾರಸಂತೆ ಬಂದ್‌ಗೆ ಕರೆ ಕೊಡುವುದಕ್ಕೆ ಕಾರಣಗಳೂ ಇರಲಿಲ್ಲ ಮತ್ತು ಸಮಾಜ ಉದ್ವಿಘ್ನ ಸ್ಥಿತಿಗೆ ತಲುಪುವುದಕ್ಕೂ ಸಾಧ್ಯವಿರಲಿಲ್ಲ. ಅಂದಹಾಗೆ,
ಪತ್ರಕರ್ತ ಹರೀಶ್ ಸಾರ್ವಜನಿಕವಾಗಿ ಬೆತ್ತಲಾಗಿದ್ದಾರೆ, ಪತ್ರಿಕಾ ಧರ್ಮಕ್ಕೆ ದ್ರೋಹವೆಸಗಿದ್ದಾರೆ. ಈ ಘಟನೆ ಪತ್ರಕರ್ತರ ಪಾಲಿಗೆ ಕ ಪ್ಪುಚುಕ್ಕೆ... ಇತ್ಯಾದಿ ಪದಗಳನ್ನೆಲ್ಲಾ ನಾವು ಬಳಸಬಹುದಾದರೂ ವಾಸ್ತವದಲ್ಲಿ ಈ ಪದಗಳೆಲ್ಲ ಈಗಾಗಲೇ ಹಳಸಲಾಗಿವೆ. ಮಾಧ್ಯಮ ಕ್ಷೇತ್ರವನ್ನು ಇವತ್ತು ಯಾರೂ ಪವಿತ್ರವಾಗಿ ನೋಡುತ್ತಿಲ್ಲ. ಒಂದು ಪಕ್ಷದ, ಒಂದು ಸಿದ್ಧಾಂತದ ಮತ್ತು ನಿರ್ದಿಷ್ಟ ಧರ್ಮದ ವಕ್ತಾರರಾಗಿ ಬಹಳಷ್ಟು ಪತ್ರಕರ್ತರು ಬದಲಾಗಿರುವುದನ್ನು ಸಂದರ್ಭ ಮತ್ತು ಸನ್ನಿವೇಶಗಳು ಆಗಾಗ ಸಾಬೀತುಪಡಿಸುತ್ತಲೇ ಇವೆ. ಕೊರೋನಾ ಕಾಲವು ಅನೇಕ ಪತ್ರಕರ್ತರ ಮುಖವಾಡವನ್ನು ಬಹಿರಂಗಪಡಿಸಿತ್ತು. ತಬ್ಲೀಗ್ ವೈರಸ್, ಕೊರೋನಾ ಜಿಹಾದ್ ಮತ್ತಿತರ ಪದಗಳನ್ನು ಠಂಕಿಸಿ ನಾಗರಿಕರ ಬಾಯಿಗೆ ತುರುಕಿದ್ದು ಇವೇ ಮಾಧ್ಯಮ. ತಬ್ಲೀಗಿ ಜಮಾಅತ್ ಸದಸ್ಯರನ್ನು ನೆಪಮಾಡಿಕೊಂಡು ಇಡೀ ಮುಸ್ಲಿಮ್ ಸಮುದಾಯವನ್ನು ಸಂದೇಹವನ್ನು ಮೊನೆಯಲ್ಲಿ ನಿಲ್ಲಿಸಿದ್ದೂ ಇವೇ ಮಾಧ್ಯಮ. ಮುಸ್ಲಿಮ್ ಸಂಘಟನೆಗಳ ಹಸಿರು ಧ್ವಜವನ್ನು ಪಾಕಿಸ್ತಾನದ ಧ್ವಜವೆಂದು ಸುಳ್ಳು ಪ್ರಚಾರ ಮಾಡಿರುವುದೂ ಇವೇ ಮಾಧ್ಯಮ. ಗುಜರಾತ್ ಹತ್ಯಾಕಾಂಡವೂ ಸೇರಿದಂತೆ ಬಹುತೇಕ ಮುಸ್ಲಿಮ್ ವಿರೋಧಿ ದಂಗೆಗಳಲ್ಲಿ ಮಾಧ್ಯಮಗಳ ಕರಾಳ ಪಾತ್ರವನ್ನು ಆಯಾ ಸಂದರ್ಭದ ಸತ್ಯಶೋಧನಾ ವರದಿಗಳು ಬಹಿರಂಗ ಪಡಿಸುತ್ತಲೇ ಬಂದಿವೆ. ಈ ಮಾಧ್ಯಮ ಪಕ್ಷಪಾತಿ ಧೋರಣೆಗೆ ಇತ್ತೀಚಿನ ಉದಾಹರಣೆ ಬೇಕೆಂದರೆ,
ಅದು ರೈತ ಪ್ರತಿಭಟನೆ ಮತ್ತು ಎ ನ್‌ಆರ್‌ಸಿ ವಿರೋಧಿ ಹೋರಾಟ. ಈ ಎರಡನ್ನೂ ಜಾರಿಗೆ ಮಾಡಲು ಹೊರಟಿರುವುದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮತ್ತು ಈ ಎರಡರಲ್ಲೂ ಮುಖ್ಯವಾಹಿನಿ ಮಾಧ್ಯಮಗಳ ಪಾತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅವು ಮಾಧ್ಯಮ ಧರ್ಮಕ್ಕೆ ಮಾಡಿರುವ ಅಪಚಾರಗಳ ಪ್ರಮಾಣ ಎಷ್ಟು ಅಗಾಧವಾದುದು ಎಂಬುದು ಸ್ಪಷ್ಟವಾಗುತ್ತದೆ. ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಯ ವೇಳೆ, ಮಾಧ್ಯ ಮದ ಒಂದು ವಿಭಾಗವು ಸಂಪೂರ್ಣವಾಗಿ ಪ್ರತಿಭಟನಾಕಾರರ ವಿರುದ್ಧ ನಿಂತುವು. ಎಷ್ಟರ ಮಟ್ಟಿಗೆ ಎಂದರೆ, ಪ್ರತಿಭಟನೆಯನ್ನು ಮಟ್ಟ ಹಾಕಲು ಪ್ರಭುತ್ವ ಏನೆಲ್ಲ ಕಾನೂನು ವಿರೋಧಿ ಬಲಪ್ರಯೋಗಗಳನ್ನು ಮಾಡಿತೋ ಅವೆಲ್ಲವನ್ನೂ ಬಲವಾಗಿ ಸಮರ್ಥಿಸಿದುವು ಮತ್ತು ಆ ಸಮರ್ಥನೆಗೆ ಪೂರಕವಾಗಿ ಸನ್ನಿವೇಶಗಳನ್ನೇ ತಿರುಚುವ ದುಸ್ಸಾಹಸಕ್ಕೂ ಇಳಿದುವು. ಮಂಗಳೂರು ಗೋಲಿಬಾರ್ ಪ್ರಕರಣ ಇದಕ್ಕೆ ಅತ್ಯುತ್ತಮ ಪುರಾವೆ. ಎನ್‌ಆರ್‌ಸಿ ಪ್ರತಿಭಟನಾಕಾರರನ್ನು ದೇಶದ್ರೋಹಿಗಳಂತೆ, ಮುಸ್ಲಿಮರಂತೆ ಅಥವಾ ಮುಸ್ಲಿಮ್ ಬೆಂಬಲಿಗರಂತೆ ಹಾಗೂ ಹಿಂದೂ ವಿರೋಧಿಗಳಂತೆ ಬಿಂಬಿಸುವಲ್ಲಿ ಅವು ಶಕ್ತಿ ಮೀರಿ ಯತ್ನಿಸಿದುವು. ಶಾಹೀನ್‌ಬಾಗ್‌ನಲ್ಲಿ ದರಣಿ ಕುಳಿತ ಮಹಿಳೆಯರನ್ನು ಹೀನಾಯವಾಗಿ ಬಿಂಬಿಸಲಾಯಿತು. ಅವರ ವಿರುದ್ಧ ಸಮಾಜವನ್ನು ಎತ್ತಿ ಕಟ್ಟಲಾಯಿತು. ಬಳಿಕ ಇದೇ ಶಾಹೀನ್‌ಬಾಗ್‌ನ ಮಾದರಿಯಲ್ಲಿ ರೈತರೂ ದೆಹಲಿಯಲ್ಲಿ ಪ್ರತಿಭಟನಾ ಧರಣಿ ಕುಳಿತರು. ಶಾಹೀನ್‌ಬಾಗ್‌ನಷ್ಟು ತೀವ್ರವಾಗಿ ಅಲ್ಲದಿದ್ದರೂ ಇವರನ್ನೂ ಖಾಲಿಸ್ತಾನಿಗಳಂತೆ, ದಲ್ಲಾಳಿಗಳಂತೆ ಮತ್ತು ರೈತ ವಿರೋಧಿಗಳಂತೆ ಬಿಂಬಿಸುವಲ್ಲಿ ಪ್ರಭುತ್ವದ ಜೊತೆ ಮುಖ್ಯವಾಹಿನಿ ಮಾಧ್ಯಮಗಳ ಒಂದು ಗುಂಪು ಶಕ್ತಿ ಮೀರಿ ಪ್ರಯತ್ನಿಸಿದುವು. ಅವರ ವಿರುದ್ಧ ವಿವಿಧ ಸುಳ್ಳುಗಳನ್ನು ಹಬ್ಬಿಸಿದುವು. ಆದರೆ,
ಶಾಹೀನ್‌ಬಾಗ್ ಪ್ರತಿಭಟನಾಕಾರರಿಗೂ ಪ್ರತಿಭಟನಾ ನಿರತ ರೈತರಿಗೂ ನಡುವೆ ಇರುವ ವ್ಯತ್ಯಾಸ ಏನೆಂದರೆ, ರೈತರು ಮಾಧ್ಯಮಗಳ ಈ ಪ್ರಭುತ್ವ ಪರ ಧೋರಣೆಯನ್ನು ಆರಂಭದಲ್ಲೇ ಮನಗಂಡು ಪರ್ಯಾಯ ಮಾಧ್ಯಮವನ್ನೇ ಸೃಷ್ಟಿಸಿಕೊಂಡರು. ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡರಲ್ಲದೇ, ಪ್ರತಿಭಟನೆಯ ಬಗ್ಗೆ ನಾಗರಿಕರಿಗೆ ಮನವರಿಕೆ ಮಾಡಿಸಲು ಪತ್ರಿಕೆಗಳನ್ನೂ ಪ್ರಕಟಿಸಿದರು. ತಮ್ಮದೇ ಯೂಟ್ಯೂಬ್ ಚಾನೆಲನ್ನು ಹುಟ್ಟು ಹಾಕಿ ತಮ್ಮೆಲ್ಲ ಚಟುವಟಿಕೆಗಳನ್ನು ಜನರ ಬಳಿ ತಲುಪಿಸಿದರು. ಶಾಹೀನ್‌ಬಾಗ್ ಪ್ರತಿಭಟನೆ ವಿಫಲಗೊಂಡಿರುವುದು ಇಲ್ಲೇ. ನಿಜವಾಗಿ,
ಮಾಧ್ಯಮ ಕ್ಷೇತ್ರಕ್ಕೆ ಈಗಾಗಲೇ ಮೆತ್ತಿಕೊಂಡಿರುವ ಕಳಂಕಕ್ಕೆ ಪತ್ರಕರ್ತ ಹರೀಶ್ ಇನ್ನೊಂದು ಸೇರ್ಪಡೆ ಅಷ್ಟೇ. ಆತನ ಕೃತ್ಯದಿಂದ ಇಡೀ ಮಾಧ್ಯಮ ರಂಗವೇ ಹುಬ್ಬೇರುತ್ತದೆ ಮತ್ತು ಅವಮಾನದಿಂದ ತಲೆ ತಗ್ಗಿಸುತ್ತದೆ ಎಂದೆಲ್ಲಾ ಯಾರೂ ಭಾವಿಸಬೇಕಿಲ್ಲ. ಅದೆಲ್ಲ ಒಂದಾನೊಂದು ಕಾಲದ ಸ್ಥಿತಿ. ಈಗ ಮಾಧ್ಯಮ ರಂಗದ ವಾತಾವರಣವೇ ಬದಲಾಗಿದೆ. ಎಷ್ಟು ಬದಲಾಗಿದೆಯೆಂದರೆ, ಅಂಬೇಡ್ಕರ್ ಝಿಂದಾಬಾದನ್ನೇ ಪಾಕಿಸ್ತಾನ್ ಝಿಂದಾಬಾದ್ ಎಂದು ತಿರುಚುವಷ್ಟು ಮತ್ತು ಅದನ್ನು ಜನರ ನಡುವೆ ಹಂಚಿ ಗಲಭೆಗೆ ಪ್ರಚೋದಿಸುವಷ್ಟು. ಸತ್ಯ ಚಿರಾಯುವಾಗಲಿ ಎಂದಷ್ಟೇ ಪ್ರಾರ್ಥಿಸೋಣ.