Tuesday, 9 November 2021

ಮಂಗಳೂರು ಗೋಲೀಬಾರ್: ಸರ್ಕಾರದಿಂದ ಸತ್ಯದ ಅಣಕ




2019, ಡಿಸೆಂಬರ್ 19ರಂದು ದ.ಕ. ಜಿಲ್ಲೆಯ ಮಂಗಳೂರಿನಲ್ಲಿ ನಡೆದ ಗೋಲಿಬಾರ್; ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ  ರಾಷ್ಟ್ರ ಮಟ್ಟದಲ್ಲಿ ಸುದ್ದಿಗೊಳಗಾಗಿತ್ತು. ಅಂದಹಾಗೆ, ಗೋಲಿಬಾರ್ ಅದಕ್ಕಿಂತ ಮೊದಲೂ ನಡೆದಿದೆ ಮತ್ತು ಆ ಬಳಿಕವೂ ನಡೆದಿದೆ. ಆದರೆ,  ಈ ಗೋಲಿಬಾರ್ ಇವೆಲ್ಲವುಗಳಿಗಿಂತ ಭಿನ್ನವಾಗಿತ್ತು. ಈ ಗೋಲಿಬಾರ್‌ನ ಹಿಂದೆ-ಮುಂದೆ  ಹಲವು ಬೆಳವಣಿಗೆಗಳೂ ನಡೆದುವು.


ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿದ್ದರೂ ದ.ಕ. ಜಿಲ್ಲೆಯಲ್ಲಿ ಡಿಸೆಂಬರ್ 19ರ ವರೆಗೆ  ಪ್ರತಿಭಟನೆಗಳು ನಡೆದಿರಲಿಲ್ಲ. ಆದ್ದರಿಂದ, ಈ ಕಾಯ್ದೆಯ ವಿರುದ್ಧ ಪ್ರತಿಭಟನೆಯನ್ನು ವ್ಯಕ್ತಪಡಿಸಬೇಕು ಎಂಬ ಮನಸ್ಸುಳ್ಳವರು  ಜಿಲ್ಲೆಯಾದ್ಯಂತ ಧಾರಾಳ ಇದ್ದರು. ಇದಕ್ಕೆ ಪೂರಕವಾಗಿ ಜಿಲ್ಲಾಡಳಿತಕ್ಕೆ ಸಂಘಟನೆಯೊಂದು  ಮನವಿಯನ್ನೂ ಮಾಡಿಕೊಂಡಿತ್ತು ಮತ್ತು  ಡಿಸೆಂಬರ್ 19ರಂದು ಪ್ರತಿಭಟನೆಗೆ ಅನುಮತಿಯನ್ನೂ ಪಡೆದುಕೊಂಡಿತ್ತು. ಆದರೆ,

ಡಿಸೆಂಬರ್ 18ರ ಸಂಜೆ ದಿಢೀರ್ ಬೆಳವಣಿಗೆಗಳು ಉಂಟಾದುವು. ಪ್ರತಿಭಟನೆಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಲಾದ  ಮಾಹಿತಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಬಿತ್ತರವಾಯಿತು. ಇದನ್ನು ನಂಬಿದವರು ಮತ್ತು ನಂಬದವರು ಇದ್ದಂತೆಯೇ  ತಿಳಿದವರು ಮತ್ತು ತಿಳಿಯದವರೂ ಇದ್ದರು. ತಿಳಿದವರಿಗೂ ಈ ರದ್ದುಪಡಿಸುವಿಕೆಗೆ ನಿರ್ದಿಷ್ಟ ಕಾರಣ ಏನು ಎಂಬ ಬಗ್ಗೆಯೂ  ಸ್ಪಷ್ಟತೆಯಿರಲಿಲ್ಲ. ನಿಜವಾಗಿ, ಅಸ್ಪಷ್ಟತೆ ಯಾವಾಗಲೂ ಅಪಾಯಕಾರಿ. ಅವು ಅನೇಕ ಅಪಾಯಗಳ ತಾಯಿ. ಕಲ್ಪಿತ ಸುದ್ದಿಗಳು ಮತ್ತು  ವದಂತಿಗಳನ್ನು ಇಂಥ ಸಂದರ್ಭಗಳು ಹುಟ್ಟುಹಾಕುತ್ತವೆ. ಆ ಬಳಿಕ ವದಂತಿಗಳೇ ಮೇಲುಗೈ ಸಾಧಿಸಿ ವಾಸ್ತವ ಮರೆಗೆ ಸರಿಯುವುದೂ  ಇದೆ. ಡಿಸೆಂಬರ್ 18ರಂದು ಸಂಜೆಯ ವೇಳೆ ಉಂಟಾದ ಈ ದಿಢೀರ್ ಬೆಳವಣಿಗೆಯನ್ನು ನಿಭಾಯಿಸುವುದಕ್ಕೆ ಜಿಲ್ಲಾಡಳಿತ ಪ್ರಾಮಾಣಿಕ  ಪ್ರಯತ್ನ ಮಾಡಿರುತ್ತಿದ್ದರೆ ಡಿಸೆಂಬರ್ 19ರ ಘಟನೆಯನ್ನು ತಪ್ಪಿಸಬಹುದಿತ್ತೇನೋ. ಒಂದುಕಡೆ,

ಪೌರತ್ವ ಕಾಯ್ದೆಯನ್ನು ವಿರೋಧಿಸಬೇಕೆಂಬ ಸಾರ್ವಜನಿಕ ತುಡಿತ ಮತ್ತು ಇನ್ನೊಂದು ಕಡೆ ಪ್ರತಿಭಟನೆಗೆ ನೀಡಲಾದ ಅನುಮತಿಯನ್ನು  ಕೊನೆಕ್ಷಣದಲ್ಲಿ ದಿಢೀರ್ ರದ್ದುಪಡಿಸಲಾದುದು- ಇವೆರಡಕ್ಕೂ ಡಿಸೆಂಬರ್ 19ರ ವಿಷಾದಕರ ಘಟನೆಯಲ್ಲಿ ಪಾತ್ರವಿದೆ. ಸುಲಭವಾಗಿ  ನಿಭಾಯಿಸಬಹುದಾಗಿದ್ದ ಸ್ಥಿತಿಯನ್ನು ಪೊಲೀಸರು ಅತ್ಯಂತ ಕೆಟ್ಟದಾಗಿ ನಿರ್ವಹಿಸಿದರು. ಡಿಸೆಂಬರ್ 19ರಂದು ಮಧ್ಯಾಹ್ನ ಸಣ್ಣ  ಸಂಖ್ಯೆಯಲ್ಲಿ ಗುಂಪುಗೂಡಿದ್ದವರನ್ನು ಲಾಠಿಯಿಲ್ಲದೇ ಚದುರಿಸುವುದಕ್ಕೆ ಖಂಡಿತ ಸಾಧ್ಯವಿತ್ತು. ಅದಕ್ಕೆ ಬೇಕಿದ್ದುದು ಸಹನೆ ಮತ್ತು  ಚಾಕಚಕ್ಯತೆ. ಹೇಳಬೇಕಾದುದನ್ನು ಹೇಳುವುದಕ್ಕೆ ಆ ಸಣ್ಣ ಗುಂಪಿಗೆ ಅನುಮತಿ ನೀಡಿರುತ್ತಿದ್ದರೆ ಅದು ಅಲ್ಲಿಗೇ ಮುಗಿದು ಹೋಗುತ್ತಿತ್ತು.  ಆದರೆ,

ಪೊಲೀಸರು ಪೂರ್ವಾಗ್ರಹ ಪೀಡಿತರಂತೆ ವರ್ತಿಸಿದುದಕ್ಕೆ ಆ ಬಳಿಕ ಬಿಡುಗಡೆಗೊಂಡ ವೀಡಿಯೋಗಳು ಮತ್ತು ಮಾಧ್ಯಮ ವರದಿಗಳು  ಕೂಡ ಸಾಕ್ಷಿಯಾಗಿವೆ. ಪೊಲೀಸರು ಮನಬಂದಂತೆ ಲಾಠಿಚಾರ್ಜ್ ಮಾಡಿದರು. ಬಳಿಕ ಗುಂಪು ಚದುರಿತಲ್ಲದೇ ವಿವಿಧ ಜಾಗಗಳಲ್ಲಿ  ಜಮೆಯಾಗತೊಡಗಿತು. ಈ ಗುಂಪು ಮತ್ತು ಪೊಲೀಸರ ನಡುವೆ ಪರಸ್ಪರ ಕಲ್ಲೆಸೆತಗಳ ವಿನಿಮಯವೂ ನಡೆಯಿತು. ಕೊನೆಗೆ ಗೋಲಿಬಾರ್ ನಡೆಸಲಾಯಿತು. ಈ ಗೋಲಿಬಾರ್‌ಗಿಂತ ಮೊದಲು, ‘ಪ್ರತಿಭಟನಾಕಾರರಲ್ಲಿ ಇಬ್ಬರನ್ನು ಗುಂಡಿಟ್ಟು ಸಾಯಿಸು...’ ಎಂದು ಪೊಲೀಸ್ ಅಧಿಕಾರಿಯೋರ್ವರು ಇನ್ನೋರ್ವರಿಗೆ ಸೂಚಿಸುವ ವೀಡಿಯೋ ಕೂಡ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗೀಡಾಯಿತು. ಗೋಲಿಬಾರ್‌ಗೆ ಇಬ್ಬರು ಬಲಿಯೂ ಆದರು. ಆ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಇಬ್ಬರಿಗೂ ತಲಾ 10 ಲಕ್ಷ ರೂಪಾಯಿ  ಪರಿಹಾರವನ್ನು ಘೋಷಿಸಿದರು. ದಿನಗಳ ಬಳಿಕ ಆ ಘೋಷಣೆಯಿಂದ ಹಿಂದೆ ಸರಿದರು. ಇದೀಗ,

ಈ ಕುರಿತಾಗಿ ನಡೆಸಲಾದ ಮ್ಯಾಜಿಸ್ಟ್ರೇಟ್ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ರಾಜ್ಯ ಸರಕಾರವು ಹೈಕೋರ್ಟ್ ಗೆ  ಸಲ್ಲಿಸಿದೆ.  ಮಾತ್ರವಲ್ಲ, ಗೋಲಿಬಾರ್ ಪ್ರಕರಣದಲ್ಲಿ ಪೊಲೀಸರು ತಪ್ಪು ಮಾಡಿಲ್ಲ ಎಂದೂ ಸಮರ್ಥಿಸಿಕೊಂಡಿದೆ. ಮ್ಯಾಜಿಸ್ಟ್ರೇಟ್ ತನಿಖಾ ವರದಿಯನ್ನು ರಾಜ್ಯ ಸರಕಾರ ಪೂರ್ಣ ಪ್ರಮಾಣದಲ್ಲಿ ಒಪ್ಪಿಕೊಳ್ಳುತ್ತದೆ ಎಂದೂ ಹೈಕೋರ್ಟ್ ಗೆ  ತಿಳಿಸಿದೆ. ಅಂದಹಾಗೆ,

ಆ ಇಡೀ ಘಟನೆಗೆ ಎರಡು ವರ್ಷಗಳು ತುಂಬುತ್ತಾ ಬಂದಿವೆ. ಘಟನೆ ನಡೆದಾಗಿನ ಸಾರ್ವಜನಿಕ ಆಕ್ರೋಶ, ಚರ್ಚೆ, ಹೇಳಿಕೆಗಳ ಭರಾಟೆ  ಇವತ್ತು ಕಡಿಮೆಯಾಗಿವೆ. ಪೊಲೀಸರ ವರ್ಗಾವಣೆಯಾಗಿದೆ. ಮೃತ ಜಲೀಲ್ ಮತ್ತು ನೌಶೀನ್ ಕುಟುಂಬವನ್ನು ಹೊರತುಪಡಿಸಿ  ಉಳಿದವರು ಈ ಘಟನೆಯನ್ನು ಇವತ್ತು ದಿನಾ ಸ್ಮರಿಸಿಕೊಳ್ಳುವ ಸ್ಥಿತಿಯಲ್ಲೂ ಇಲ್ಲ. ಆದ್ದರಿಂದ ಆ ಇಡೀ ಘಟನೆಯ ಸುತ್ತ ಮರು  ಅವಲೋಕನವೊಂದಕ್ಕೆ ಇದು ಸೂಕ್ತ ಸಮಯ. ಪ್ರತಿಭಟನಾ ಸಮಯದಲ್ಲಿ ಇರಬೇಕಾದ ಎಚ್ಚರಿಕೆಗಳೇನು ಎಂಬಲ್ಲಿಂದ  ತೊಡಗಿ  ಅತಿಸೂಕ್ಷ್ಮ  ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು ಎಂಬಲ್ಲಿವರೆಗೆ ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆ ಯಾವ  ಪೂರ್ವಾಗ್ರಹವೂ ಇಲ್ಲದೇ ಆಲೋಚಿಸುವ ಅಗತ್ಯ ಇದೆ. ಅದರಲ್ಲೂ ಪೊಲೀಸ್ ಇಲಾಖೆಯ ಪಾತ್ರ ಈ ವಿಷಯದಲ್ಲಿ ಬಹಳ ಮಹತ್ವ ಪೂರ್ಣವಾದುದು. ಸಾರ್ವಜನಿಕರೆಂದ ಮೇಲೆ ಅಲ್ಲಿ ಏಕಪ್ರಕಾರದ ಜನರಿರುವುದಿಲ್ಲ. ಪ್ರತಿಭಟನೆಯೆಂದರೇನೆಂದೇ  ಗೊತ್ತಿಲ್ಲದವರು,  ಗೊತ್ತಿರುವವರು, ಶಿಕ್ಷಿತರು, ಅಶಿಕ್ಷಿತರು ಎಲ್ಲರೂ ಇರುವ ಒಂದು ಗುಂಪಾಗಿ ಸಾರ್ವಜನಿಕರನ್ನು ಪರಿಗಣಿಸಬೇಕು. ಪ್ರತಿಭಟನೆಗೆ  ಕುತೂಹಲದಿಂದ ಬರುವವರಿರುತ್ತಾರೆ. ದಾರಿಹೋಕರೂ ಒಂದುಕ್ಷಣ ಇಣುಕಿ ಹೋಗುವುದಿದೆ. ಪ್ರತಿಭಟನೆಯ ಇತಿ-ಮಿತಿಗಳ ಬಗ್ಗೆ  ಸ್ಪಷ್ಟತೆ ಇಲ್ಲದವರೂ ಸಾರ್ವಜನಿಕರಲ್ಲಿ ಇರುವವರಿರುತ್ತಾರೆ. ಆದರೆ,

ಪೊಲೀಸ್ ಇಲಾಖೆ ಹಾಗಲ್ಲ. ಅದು ಶಿಸ್ತುಬದ್ಧ ತಂಡ. ಅದಕ್ಕೆ ಪ್ರತಿಭಟನೆ ಏನೆಂದೂ ಗೊತ್ತಿರುತ್ತದೆ ಮತ್ತು ಕರ್ಫ್ಯೂ ಅಂದರೇನೆಂದೂ  ತಿಳಿದಿರುತ್ತದೆ. ಮಾತ್ರವಲ್ಲ, ಯಾವುದೇ ಸಂದರ್ಭದಲ್ಲೂ ಅತ್ಯಂತ ನ್ಯಾಯಯುತ ನಿಲುವನ್ನು ಮಾತ್ರ ಹೊಂದುವ ಮತ್ತು ಯಾವ  ಸಂದರ್ಭದಲ್ಲೂ ಪೂರ್ವಾಗ್ರಹ ಪೀಡಿತವಾಗಿ ವರ್ತಿಸದಿರುವ ತರಬೇತಿಯನ್ನೂ ಪಡೆದಿರುತ್ತದೆ. ಆದ್ದರಿಂದಲೇ, ಪೊಲೀಸರು ಸಾರ್ವಜನಿಕರಿಗಿಂತ ಹೆಚ್ಚು ಉತ್ತರದಾಯಿಗಳಾಗಿರುತ್ತಾರೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸುವ ಮತ್ತು ಸಾರ್ವಜನಿಕರಿಗೆ  ತೊಂದರೆಯಾಗದಂತೆ  ಜಾಣತನದಿಂದ ನಿಭಾಯಿಸುವ ಬುದ್ಧಿವಂತಿಕೆಯನ್ನು ಅವರು ಪ್ರದರ್ಶಿಸಬೇಕಾಗುತ್ತದೆ. ಸಾರ್ವಜನಿಕರು  ಕಲ್ಲೆಸೆದುದಕ್ಕೆ ನಾವೂ ಕಲ್ಲೆಸೆದೆವು, ಅವರು ಬೈದುದಕ್ಕೆ ನಾವೂ ಬೈದೆವು, ಅವರು ರಸ್ತೆ ತಡೆ ನಡೆಸಿದುದಕ್ಕೆ ನಾವೂ ನಡೆಸಿದೆವು ಎನ್ನುವುದಾದರೆ ಇವರಿಬ್ಬರ ನಡುವೆ ಯಾವ ವ್ಯತ್ಯಾಸವೂ ಇಲ್ಲ ಎಂದಾಗುತ್ತದೆ. ದುರಂತ ಏನೆಂದರೆ,

ಮಂಗಳೂರು ಗೋಲೀಬಾರ್ ಘಟನೆಯಲ್ಲಿ ಪೊಲೀಸರಿಂದ ಈ ತಪ್ಪು ಸಂಭವಿಸಿದೆ. ಅವರ ವರ್ತನೆ ಸಾರ್ವಜನಿಕರ ಮಟ್ಟಕ್ಕಿಂತಲೂ  ಕೆಳಗಿತ್ತು. ಪೊಲೀಸರು ಕಲ್ಲೆಸೆದರು. ಅನ್ಯಾಯವಾಗಿ ಲಾಠಿ ಬೀಸಿದರು. ಅಟ್ಟಾಡಿಸಿ ಹೊಡೆದರು. ಅಂತಿಮವಾಗಿ ಗುಂಡು ಹಾರಿಸಿ ಇಬ್ಬರನ್ನು ಸಾಯಿಸುವಂತೆ ಮಾತುಗಳನ್ನೂ ಆಡಿಕೊಂಡರು. ಇವೆಲ್ಲವೂ ವೀಡಿಯೋಗಳಲ್ಲಿ ಸೆರೆಯಾಗಿರುವ ಮಾಹಿತಿಗಳು. ಇನ್ನು, ಹೀಗೆ  ಸೆರೆಯಾಗದಿರುವ ವರ್ತನೆಗಳು ಏನೇನಿವೆಯೋ ಗೊತ್ತಿಲ್ಲ. ಅಂದಹಾಗೆ,

ಈಗಾಗಲೇ ಸಾರ್ವಜನಿಕವಾಗಿ ಯಾವೆಲ್ಲ ಮಾಹಿತಿಗಳು ಮತ್ತು ವರದಿಗಳು ಲಭ್ಯವಿವೆಯೋ ಅವುಗಳ ಆಧಾರದಲ್ಲಿ ಹೇಳುವುದಾದರೆ,  ಮಂಗಳೂರು ಗೋಲೀಬಾರ್ ಪ್ರಕರಣದಲ್ಲಿ ಪೊಲೀಸರ ಕಡೆಯಿಂದ ಗಂಭೀರ ತಪ್ಪುಗಳಾಗಿವೆ. ಆ ತಪ್ಪುಗಳ ಎದುರು ಸಾರ್ವಜನಿಕರ  ತಪ್ಪುಗಳು ಅತ್ಯಂತ ಕ್ಷುಲ್ಲಕ. ಗುಂಡು ಹಾರಿಸಿ ಕೊಲ್ಲುವಂತೆ ಕರ್ತವ್ಯನಿರತ ಅಧಿಕಾರಿಯೇ ಹೇಳುತ್ತಾರೆಂದರೆ, ಅದರಾಚೆಗೆ  ಹೇಳುವುದಕ್ಕಾದರೂ ಏನಿದೆ? ಡಿಸೆಂಬರ್ 18ರಿಂದ ಡಿಸೆಂಬರ್ 19ರ ವರೆಗಿನ ಈ 24 ಗಂಟೆಗಳ ಅವಧಿಯಲ್ಲಿ ಮಂಗಳೂರು ಪೊಲೀಸರು ನಡಕೊಂಡ ರೀತಿಯನ್ನು ಯಾವ ರೀತಿಯಲ್ಲೂ ಸಮರ್ಥಿಸಲು ಸಾಧ್ಯವಿಲ್ಲ. ಗಾಯಾಳುಗಳನ್ನು ದಾಖಲಿಸಲಾದ ಆಸ್ಪತ್ರೆಯ  ಐಸಿಯು ಕೊಠಡಿಯೊಳಕ್ಕೂ ನುಗ್ಗಿ ದಾಂಧಲೆ ನಡೆಸಿದ ಸಿಸಿಟಿವಿ ದೃಶ್ಯಗಳೇ ಪೊಲೀಸರನ್ನು ಕಟಕಟೆಯಲ್ಲಿ ನಿಲ್ಲಿಸುವುದಕ್ಕೆ ಧಾರಾಳ  ಸಾಕು. ಇಷ್ಟಿದ್ದೂ ಪೊಲೀಸರು ತಪ್ಪಿತಸ್ಥರ಼ಲ್ಲ ಎಂದು ಮ್ಯಾಜಿಸ್ಟ್ರೇಟ್ ವರದಿ ಹೇಳುತ್ತದೆಂದಾದರೆ ಮತ್ತು ಸರ್ಕಾರ ಅದನ್ನು  ಒಪ್ಪಿಕೊಳ್ಳುತ್ತದೆಂದಾದರೆ ಅದು ಸತ್ಯದ ಅಣಕ. ಅಂದಿನ ದಿನಗಳಿಗೆ ಸಾಕ್ಷಿಯಾದ ಯಾರೂ ಪೊಲೀಸರನ್ನು ಮುಗ್ಧರು ಎಂದು  ಹೇಳಲಾರರು.

No comments:

Post a Comment