ಸನ್ಮಾರ್ಗ ಸಂಪಾದಕೀಯ
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಅದರಲ್ಲೂ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಕ್ರಿಯೆಗಳಿಗೆ ಮುಸ್ಲಿಮ್ ಸಮುದಾಯ ವ್ಯಕ್ತಪಡಿಸುತ್ತಿರುವ ಪ್ರತಿಕ್ರಿಯೆ ಅತ್ಯಂತ ಜಾಣತನದ್ದು. ಬೆಂಗಳೂರಿನಲ್ಲಿ ನಡೆದ ಅನೈತಿಕ ಪೊಲೀಸ್‌ಗಿರಿಯಿಂದ ತೊಡಗಿ ಉಡುಪಿಯ ದುರ್ಗಾ ದೌಡ್‌ನ ವರೆಗೆ ಕಳೆದ ಒಂದು ತಿಂಗಳ ನಡುವೆ ಈ ಭಾಗದಲ್ಲಿ ಹಲವು ಬೆಳವಣಿಗೆಳು ನಡೆದಿವೆ. ಬೆಂಗಳೂರು ಘಟನೆಯ ಬಳಿಕ ಮಂಗಳೂರಿನ ಸುರತ್ಕಲ್‌ನಲ್ಲಿ ಅನೈತಿಕ ಪೊಲೀಸ್‌ಗಿರಿ ನಡೆಯಿತು. ಆ ಬಳಿಕ ಅಲ್ಲೇ ಬೃಹತ್ ಸಭೆಯೂ ನಡೆಯಿತು. ಈ ಸಭೆಯಲ್ಲಿ ಮುಸ್ಲಿಮರನ್ನು ಅತ್ಯಂತ ಹೀನಾಯವಾಗಿ ನಿಂದಿಸಲಾಯಿತು. ಅವರ ಉದ್ಯೋಗ ಮತ್ತು ಬದುಕನ್ನು ಹೀಯಾಳಿಸಲಾಯಿತು. ಆ ಬಳಿಕ ಗಂಗೊಳ್ಳಿಯಲ್ಲಿ ಇಂಥದ್ದೇ ಸಭೆ ನಡೆಯಿತು. ಅಲ್ಲಿ ಮುಸ್ಲಿಮರನ್ನಷ್ಟೇ ಅಲ್ಲ, ಪ್ರವಾದಿ ಮುಹಮ್ಮದ್(ಸ)ರನ್ನೂ ಮತ್ತು ಅಲ್ಲಾಹನನ್ನೂ ನಿಂದಿಸಲಾಯಿತು. ಆ ಭಾಷಣಕ್ಕೆ ಚಪ್ಪಾಳೆ, ಶಿಳ್ಳೆಗಳೂ ಬಿದ್ದುವು. ನಂತರದ ದಿನಗಳಲ್ಲಿ ಸುಮಾರು ಹತ್ತರಷ್ಟು ಅನೈತಿಕ ಪೊಲೀಸ್‌ಗಿರಿ ಪ್ರಕರಣಗಳು ನಡೆದುವು. ಆ ಬಳಿಕ ಮಂಗಳೂರಿನ ಕದ್ರಿಯಲ್ಲಿರುವ ವಿಶ್ವ ಹಿಂದೂ ಪರಿಷತ್‌ನ ಕಚೇರಿಯಲ್ಲಿ ತ್ರಿಶೂಲ ವಿತರಣೆ ನಡೆಯಿತು. ಆಯುಧ ಪೂಜೆಯ ನೆಪದಲ್ಲಿ ವಿಹಿಂಪ ಮುಖಂಡರೇ ತಮ್ಮ ಕಾರ್ಯಕರ್ತರಿಗೆ ಈ ಆಯುಧ ವಿತರಣೆ ನಡೆಸಿದರು. ಇದರ ಬೆನ್ನಿಗೆ ಉಡುಪಿಯಲ್ಲಿ ಹಿಂದೂ ಜಾಗರಣ ವೇದಿಕೆಯ ವತಿಯಿಂದ ದುರ್ಗಾ ದೌಡ್ ಪಾದಯಾತ್ರೆ ನಡೆಯಿತು. ಈ ಯಾತ್ರೆಯಲ್ಲಿ ತಲವಾರುಗಳನ್ನು ಪ್ರದರ್ಶಿಸುತ್ತಾ ಸಾಗಲಾಯಿತು. ಮಾತ್ರವಲ್ಲ ಈ ಯಾತ್ರೆಯಲ್ಲಿ ಸಚಿವ ಸುನಿಲ್ ಕುಮಾರ್ ಮತ್ತು ಸ್ಥಳೀಯ ಶಾಸಕ ರಘುಪತಿ ಭಟ್ ಕೂಡಾ ಇದ್ದರು. ಅಲ್ಲದೇ ಮುಸ್ಲಿಮರನ್ನು ನಿಂದಿಸುವ ಭಾಷಣವೂ ನಡೆಯಿತು. ಅಂದಹಾಗೆ,
ಮುಸ್ಲಿಮ್ ಸಮುದಾಯ ಎಲ್ಲೂ ತಾಳ್ಮೆಗೆಡಬಾರದು. ಜಾಣತನದ ಪ್ರತಿಕ್ರಿಯೆಯು ಎಂಥ ಪ್ರಚೋದನಾತ್ಮಕ ಕ್ರಿಯೆಯನ್ನೂ ಸೋಲಿಸಬಲ್ಲುದು.
ಸುರತ್ಕಲ್‌ನ ಅನೈತಿಕ ಪೊಲೀಸ್‌ಗಿರಿಯಿಂದ ಹಿಡಿದು ಉಡುಪಿಯ ದುರ್ಗಾ ದೌಡ್‌ನ ತಲವಾರು ಮತ್ತು ಭಾಷಣಗಳವರೆಗೆ ಎಲ್ಲವೂ ಮುಸ್ಲಿಮರನ್ನು ಪ್ರತ್ಯಕ್ಷವೋ ಪರೋಕ್ಷವೋ ಗುರಿಯಾಗಿಟ್ಟುಕೊಂಡ ಮತ್ತು ಪ್ರಚೋದಿಸುವ ಉದ್ದೇಶದ ಕ್ರಿಯೆಗಳು ಎಂಬುದು ಸ್ಪಷ್ಟ. ನಿಜವಾಗಿ, ಬಹುತ್ವದ ಭಾರತದಲ್ಲಿ ಹಿಂದೂ ಯುವಕ-ಮುಸ್ಲಿಮ್ ಯುವತಿ ಮತ್ತು ಮುಸ್ಲಿಮ್ ಯುವಕ-ಹಿಂದೂ ಯುವತಿ ಪರಸ್ಪರ ಮಾತಾಡುವುದೋ ಗೆಳೆತನದಲ್ಲಿರುವುದೋ ಅಸಹಜವೂ ಅಲ್ಲ, ಅಪರಾಧವೂ ಅಲ್ಲ. ಶಾಲೆಯಿಂದ ತೊಡಗಿ ಉದ್ಯೋಗ ಸ್ಥಳದವರೆಗೆ ಹೆಣ್ಣು-ಗಂಡು ಧರ್ಮ ಭೇದವಿಲ್ಲದೆ ಜೊತೆಯಾಗಿರುವ ದೇಶ ವೊಂದರಲ್ಲಿ ಅವರು ಪರಸ್ಪರ ಮಾತಾಡುವುದನ್ನೇ ಅಪರಾಧವೆನ್ನುವುದು ಅತ್ಯಂತ ಬಾಲಿಷ. ಹಾಗಂತ,
ಇದು ಅನೈತಿಕ ಪೊಲೀಸ್‌ಗಿರಿಯಲ್ಲಿ ಭಾಗಿಯಾದವರಿಗೂ ಗೊತ್ತು. ಅವರನ್ನು ಅದಕ್ಕಾಗಿ ಪ್ರಚೋ ದಿಸುವವರಿಗೂ ಗೊತ್ತು. ಮತ್ತೂ ಯಾಕೆ ಇಂಥದ್ದು ನಡೆಯುತ್ತದೆ ಎಂದರೆ, ಅದರ ಹಿಂದೆ ಒಳ ಉದ್ದೇಶವೊಂದು ಇರುತ್ತದೆ. ಮುಸ್ಲಿಮರು ಇಂಥದ್ದೇ ಪ್ರತಿಕ್ರಿಯೆಗೆ ಇಳಿಯಬೇಕು ಮತ್ತು ಆ ಮುಖಾಂತರ ಸಂಘರ್ಷದ ಸ್ಥಿತಿ ನಿರ್ಮಾಣವಾಗಬೇಕು ಎಂಬುದೇ ಆ ಉದ್ದೇಶ. ತಲವಾರು ಹಿಡಿದು ಮೆರವಣಿಗೆಯಲ್ಲಿ ಸಾಗುವುದಾಗಲಿ; ಮುಸ್ಲಿಮರನ್ನು, ಪ್ರವಾದಿಯನ್ನು ಮತ್ತು ಅಲ್ಲಾಹನನ್ನು ಹೀನಾತಿ ಹೀನವಾಗಿ ನಿಂದಿಸುವುದಾಗಲಿ ಯಾವುದೂ ಸಹಜ ಕ್ರಿಯೆಗಳಲ್ಲ. ಯಾಕೆಂದರೆ,
ಅAಥದ್ದೊಂದು ತೀವ್ರ ವಾಗ್ದಾಳಿಗೋ ನಿಂದನೆಗೋ ಗುರಿಯಾಗಬೇಕಾದ ಮತ್ತು ಆಯುಧ ಝಳಪಿಸಿ ಬೆದರಿಸಬೇಕಾದ ಯಾವ ಅ ಪರಾಧವನ್ನು ಮುಸ್ಲಿಮರು ಮಾಡಿದ್ದಾರೆ? ಉಡುಪಿಯಲ್ಲಿರುವುದು ಐದೋ ಏಳೋ ಶೇಕಡಾ ಮುಸ್ಲಿಮರು. ಇಡೀ ಕರಾವಳಿ ಭಾಗವನ್ನು ಎತ್ತಿಕೊಂಡರೂ ಈ ಶೇಕಡಾ ವಾರು ಸಂಖ್ಯೆಯಲ್ಲಿ ಭಾರೀ ಏರಿಕೆಯೇನೂ ಆಗುವುದಿಲ್ಲ. ಇಷ್ಟೊಂದು ಸಣ್ಣ ಸಮುದಾಯವನ್ನು ಈ ಪರಿ ಬೆದರಿಸುವುದೇಕೆ? ನಿಂದಿಸುವ ಮತ್ತು ಅವಮಾನಿಸುವ ಅಗತ್ಯವಾದರೂ ಏನು? ಈ ಸಣ್ಣ ಸಂಖ್ಯೆ ಯಾರಿಗೆ ಬೆದರಿಕೆ? ಅಪ್ಪಟ ಧಾರ್ಮಿಕ ಸಭೆಯಲ್ಲೂ ಮುಸ್ಲಿಮರನ್ನೇ ಗುರಿಯಾಗಿಸಿ ಭಾಷಣ ಮಾಡುವುದೇಕೆ? ಇಲ್ಲಿನ ಕಾನೂನಿಗಾಗಲಿ, ಸಂವಿಧಾನಕ್ಕಾಗಲಿ ಎಲ್ಲೂ ಎದುರಾಡದ ಮತ್ತು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮ ರಂಗ ಇತ್ಯಾದಿ ಎಲ್ಲದರಲ್ಲೂ ಅತ್ಯಂತ ನಗಣ್ಯ ಪಾಲ ನ್ನಷ್ಟೇ ಹೊಂದಿರುವ ಮುಸ್ಲಿಮರು ಇಲ್ಲಿನ ಬಹುಸಂಖ್ಯಾತರಿಗೆ ಬೆದರಿಕೆಯಾಗಿರುವುದಾದರೂ ಹೇಗೆ? ಸಂವಿಧಾನವೇ ಇರದಿದ್ದ ಕಾಲದಲ್ಲಿ 800 ವರ್ಷಗಳಷ್ಟು ದೀರ್ಘಕಾಲ ಮುಸ್ಲಿಮ್ ದೊರೆಗಳೇ ಇಲ್ಲಿ ಅಧಿಕಾರ ನಡೆಸಿದ ಹೊರತೂ ಮುಸ್ಲಿಮ್ ಜನಸಂಖ್ಯೆ ಶೇ. 15ನ್ನೂ ದಾಟದಿರುವಾಗ ಸಂವಿಧಾನ ಇರುವ ಮತ್ತು ಯಾವ ಅಧಿಕಾರವೂ ಇಲ್ಲದ ಈ ಹೊತ್ತಿನಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗುವುದೋ ಬೆದರಿಕೆಯಾಗುವುದೋ ಹೇಗೆ? ಹಾಗಂತ,
ಇಂಥ ಪ್ರಶ್ನೆಗಳು ಮತ್ತು ವಾಸ್ತವ ಆಧಾರಿತ ವಿಶ್ಲೇಷಣೆಗಳು ಈ ಮಣ್ಣಿನಲ್ಲಿ ನೂರಾರು ಬಾರಿ ನಡೆದಿವೆ. ಮಾತ್ರವಲ್ಲ, ಕೈಯಲ್ಲಿ ತಲವಾರು ಹಿಡಿದವರಿಗೂ ವೇದಿಕೆಯೇರಿ ಭಾಷಣ ಮಾಡುವವರಿಗೂ ಈ ವಾಸ್ತವದ ಅರಿವು ಖಂಡಿತ ಇದೆ. ಅವರ ಒಳಮನಸ್ಸು ಈ ಸತ್ಯವನ್ನು ಒಪ್ಪಿಕೊಳ್ಳದಷ್ಟು ಕಠೋರ ಎಂದು ಹೇಳುವಂತೆಯೂ ಇಲ್ಲ. ಆದರೆ ಅವರ ಮುಂದಿರುವ ಸವಾಲುಗಳು ಬೇರೆ. ಈ ಸವಾಲು ಈ ಸತ್ಯದ ಆಚೆಗಿನದು. ರಾಜಕೀಯ ಅಧಿಕಾರ ಕೈವಶವಾಗಬೇಕಾದರೆ ಇಂಥ ಅವಾಸ್ತವಿಕ ಕ್ರಿಯೆಗಳ ಅನಿವಾರ್ಯತೆ ಅವರಿಗಿದೆ. ಮಾತ್ರವಲ್ಲ, ಕ್ರಿಯೆಗಳಿಗೆ ಇದೇ ರೀತಿಯ ಮತ್ತು ಇಷ್ಟೇ ತೀವ್ರವಾದ ಪ್ರತಿಕ್ರಿಯೆಯನ್ನೂ ಅವರು ಬಯಸುತ್ತಿರುತ್ತಾರೆ. ಮುಸ್ಲಿಮ್ ಸಮುದಾಯ ಕೂಡ ತಲವಾರನ್ನು ಝಳಪಿಸಿ ಮೆರವಣಿಗೆ ನಡೆಸುವುದು, ಹಿಂದೂಗಳನ್ನು ನಿಂದಿಸುವ ಭಾಷಣ, ಅನೈತಿಕ ಪೊಲೀಸ್‌ಗಿರಿಯಲ್ಲಿ ತೊಡಗಿಸಿಕೊಳ್ಳುವುದು... ಇತ್ಯಾದಿಗಳನ್ನೇ ಪ್ರತಿಕ್ರಿಯೆಯ ರೂಪದಲ್ಲಿ ಆರಿಸಿಕೊಂಡಾಗ ಅವರ ಉದ್ದೇಶ ಈಡೇರುತ್ತದೆ. ಜೊತೆಗೇ ಇಡೀ ದೇಶವನ್ನೇ ಕಾಡುವ, ಹಸಿವು, ನಿರುದ್ಯೋಗ, ಬೆಲೆಏರಿಕೆಗಳಂಥ ಮುಖ್ಯ ವಿಷಯಗಳು ಚರ್ಚೆಯ ವ್ಯಾಪ್ತಿಯಿಂದ ಹೊರಬೀಳುತ್ತವೆ. ಇವು ಈ ಎಲ್ಲ ಬೆಳವಣಿಗೆಗಳ ಹಿಂದಿರುವ ಮುಖ್ಯ ಗುರಿ. ಆದ್ದರಿಂದಲೇ,
ಮುಸ್ಲಿಮ್ ಸಮುದಾಯ ಅಭಿನಂದನೆಗೆ ಅರ್ಹ. ಬೆಂಗಳೂರಿನ ಅನೈತಿಕ ಪೊಲೀಸ್‌ಗಿರಿ ಘಟನೆಯ ಆರೋಪಿಗಳಾದ ಮುಸ್ಲಿಮರನ್ನು ಬೆಂಬಸುವುದಾಗಲಿ, ಅವರ ಬಂಧನವನ್ನು ಪ್ರಶ್ನಿಸಿ ಸಭೆ ನಡೆಸುವುದನ್ನಾಗಲಿ ಮಾಡದೇ ಪ್ರಜ್ಞಾವಂತಿಕೆಯನ್ನು ಮೆರೆದ ಮುಸ್ಲಿಮ್ ಸಮುದಾಯ, ಆ ಬಳಿಕದ ಇಷ್ಟೂ ಬೆಳವಣಿಗೆಗಳ ಬಗ್ಗೆ ಅತ್ಯಂತ ಪ್ರಬುದ್ಧ ಪ್ರತಿಕ್ರಿಯೆಯನ್ನೇ ವ್ಯಕ್ತಪಡಿಸಿದೆ. ಎಲ್ಲೂ ಅದು ಕಾನೂನನ್ನು ಕೈಗೆತ್ತಿಕೊಂಡಿಲ್ಲ. ಹಿಂದೂ ಸಮುದಾಯಕ್ಕೆ ಘಾಸಿಯಾಗುವ ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಿಲ್ಲ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬ ನೆಲೆಯಲ್ಲಿ ವ್ಯಕ್ತಪಡಿಸಬಹುದಾದ ಯಾವ ಪ್ರಚೋದನಕಾರಿ ಚಟುವಟಿಕೆಯಲ್ಲೂ ಭಾಗಿಯಾಗಿಲ್ಲ. ಕ್ರಿಯೆಯ ಮರ್ಮವನ್ನು ಅರಿತುಕೊಳ್ಳುತ್ತಾ ಪ್ರತಿಕ್ರಿಯೆ ವ್ಯಕ್ತಪಡಿಸುವ ಈ ಬುದ್ಧಿವಂತಿಕೆಯೇ ಬಹುದೊಡ್ಡ ಯಶಸ್ಸು. ಮುಂದಿನ ದಿನಗಳಲ್ಲಿ ಮುಸ್ಲಿಮರ ಬು ದ್ಧಿವಂತಿಕೆಗೆ ಸವಾಲೆಸೆಯುವ ಕ್ರಿಯೆಗಳು ಖಂಡಿತ ನಡೆಯಬಹುದು. ಸ್ಥಳೀಯ ಸಂಸ್ಥೆ ಮತ್ತು ವಿಧಾನಸಭಾ ಚುನಾವಣೆ ಹತ್ತಿರವಿರುವುದರಿಂದ ಪ್ರಚೋದನಾತ್ಮಕ ಕ್ರಿಯೆಗಳು ಅನಿರೀಕ್ಷಿತವಲ್ಲ. ಆದ್ದರಿಂದ,
ಮುಸ್ಲಿಮ್ ಸಮುದಾಯ ಎಲ್ಲೂ ತಾಳ್ಮೆಗೆಡಬಾರದು. ಜಾಣತನದ ಪ್ರತಿಕ್ರಿಯೆಯು ಎಂಥ ಪ್ರಚೋದನಾತ್ಮಕ ಕ್ರಿಯೆಯನ್ನೂ ಸೋಲಿಸಬಲ್ಲುದು.
No comments:
Post a Comment