Monday, 13 November 2023

ಬಿಜೆಪಿ ಮತ್ತು ಮಡಿಲ ಮಾಧ್ಯಮವನ್ನು ಬೆತ್ತಲೆ ಮಾಡಿದ ಡೊಮಿನಿಕ್ ಮಾರ್ಟಿನ್

 





ಕೇರಳ ಬಾಂಬ್ ಸ್ಫೋಟದ ಆರೋಪಿಯನ್ನು ಘಟನೆ ನಡೆದ 7 ಗಂಟೆಗಳ ಒಳಗೆ ಪೊಲೀಸರು ಬಂಧಿಸಿದ್ದಾರೆ. ಕೇರಳದ ಕೊಚ್ಚಿ  ಸಮೀಪದ ಕಳಮಶ್ಶೇರಿಯ ಕನ್ವೆನ್ಶನ್ ಸೆಂಟರ್‌ನಲ್ಲಿ ಬಾಂಬ್ ಸ್ಫೋಟ ನಡೆದಾಗ ಸಮಯ ಸುಮಾರು ಬೆಳಗ್ಗಿನ 9 ಗಂಟೆ. ಆರೋಪಿ  ಡೊಮಿನಿಕ್ ಮಾರ್ಟಿನ್ ಎಂಬವನನ್ನು ಬಂಧಿಸಿದ್ದೇವೆ ಎಂದು ಕೇರಳ ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ಮಾಧ್ಯಮಗಳ ಮುಂದೆ  ಘೋಷಿಸುವಾಗ ಸಮಯ ಸಂಜೆ 4 ಗಂಟೆ 15 ನಿಮಿಷ. ಆದರೆ, ಈ 9ರಿಂದ ನಾಲ್ಕೂ ಕಾಲು ಗಂಟೆಯ ಈ ಸಣ್ಣ ಅವಧಿಯ ಒಳಗೆ  ಮಾಧ್ಯಮಗಳು, ಸೋಶಿಯಲ್ ಮೀಡಿಯಾ ಬಳಕೆದಾರರು ಮತ್ತು ಬಿಜೆಪಿ ನಾಯಕರು ಜನರನ್ನು ದಾರಿ ತಪ್ಪಿಸುವುದಕ್ಕೆ ಹರಡಿದ  ಸುಳ್ಳುಗಳು ಮಾತ್ರ ಭಯಾನಕವಾಗಿತ್ತು. ಈ ಸ್ಫೋಟದ ಹಿಂದೆ ಮುಸ್ಲಿಮರಿದ್ದಾರೆ ಎಂದು ನೇರವಾಗಿಯೋ ಪರೋಕ್ಷವಾಗಿಯೋ  ನಂಬಿಸಲು ಅವರೆಲ್ಲ ಯತ್ನಿಸಿದರು. ಕೇರಳ ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸಂದೀಪ್ ಜಿ. ವಾರಿಯರ್ ಅಂತೂ ‘ಯಹೋವನ ಸಾಕ್ಷಿ’  ಎಂಬ ಪಂಥವನ್ನು ಯಹೂದಿಗಳ ಗುಂಪು ಎಂದೇ ಕರೆದರು. ‘ಯಹೂದಿಗಳ ಪವಿತ್ರ ಗ್ರಂಥವಾದ ತೋರಾವನ್ನೇ ಈ ಯಹೋವನ  ಸಾಕ್ಷಿಗಳೂ ಅನುಸರಿಸುತ್ತಾರೆ, ಇವರಿಬ್ಬರೂ ಒಂದೇ ದೈವಿಕ ಗ್ರಂಥದ ಅನುಯಾಯಿಗಳು, ಹಮಾಸನ್ನು ಸಮರ್ಥಿಸಿದ ಸಿಪಿಎಂ ಮತ್ತು  ಕಾಂಗ್ರೆಸ್‌ಗಳು ಈ ಭಯೋತ್ಪಾದಕ ದಾಳಿಯ ಹೊಣೆಯನ್ನು ವಹಿಸಿಕೊಳ್ಳಬೇಕು..’ ಎಂದು ಹೇಳಿದರು. ಅಂದರೆ,

ಹಮಾಸ್ ಮೇಲೆ ಇಸ್ರೇಲ್ ಸಾರಿರುವ ಯುದ್ಧಕ್ಕೆ ಆಕ್ರೋಶಗೊಂಡ ಮುಸ್ಲಿಮರು ಯಹೂದಿಯರದ್ದೇ  ಪಂಗಡವಾದ ಯಹೋವನ  ಸಾಕ್ಷಿಗಳ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ ಎಂದೇ ಇದರರ್ಥ. ಇದೇ ಭಾವದ ಹೇಳಿಕೆಯನ್ನು ಕೇಂದ್ರ ಸಚಿವ ರಾಜೀವ್ ಚಂದ್ರ ಶೇಖರ್ ಕೂಡಾ ನೀಡಿದರು-
‘ಕೇರಳವನ್ನು ಲವ್ ಜಿಹಾದ್ ನಾಡನ್ನಾಗಿಸಲು ಹಾಗೂ ದ್ವೇಷವನ್ನು ಹಬ್ಬಿಸಲು ಭಯೋತ್ಪಾದಕ ಹಮಾಸ್  ಸಂಘಟನೆಯನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್-ಸಿಪಿಎಂ, ಯುಪಿಎ ಮೈತ್ರಿಕೂಟದ ಲಜ್ಜೆಗೆಟ್ಟ ತುಷ್ಠೀಕರಣ ರಾಜಕೀಯಕ್ಕೆ  ನಾಚಿಕೆಯಾಗಬೇಕು..’ ಎಂದವರು ಟ್ವೀಟ್ ಮಾಡಿದರು. ಈ ಟ್ವೀಟ್‌ನ ಟಾರ್ಗೆಟ್ ಕೂಡಾ ಮುಸ್ಲಿಮರೇ. ಬಿಜೆಪಿಯ ಇನ್ನೋರ್ವ  ನಾಯಕ ಮತ್ತು ಅದಕ್ಕಿಂತಲೂ ಮುಖ್ಯವಾಗಿ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅಂತೂ ಇವರಿಗಿಂತಲೂ ಒಂದು ಹೆಜ್ಜೆ  ಮುಂದಿಟ್ಟರು-
 `ಕಾಂಗ್ರೆಸ್ ಮತ್ತು ಸಿಪಿಎಂನಿಂದ  ದಶಕಗಳ ಕಾಲದ ಓಲೈಕೆ ಮತಬ್ಯಾಂಕ್ ರಾಜಕಾರಣವು ಮುಸ್ಲಿಮರನ್ನು  ಅವಿದ್ಯಾವಂತರನ್ನಾಗಿ, ಹಿಂದುಳಿದವರನ್ನಾಗಿ ಮತ್ತು ಅಪರಾಧಿಗಳನ್ನಾಗಿ ಮಾಡಿದೆ, ಅದರಿಂದಾಗಿ ಭಯೋತ್ಪಾದನೆಯನ್ನು ನಾವು ಮನೆಬಾಗಿಲಿಗೆ ಆಹ್ವಾನಿಸಿದ್ದೇವೆ, ಈ ಜನರು ಮುಖ್ಯವಾಹಿನಿಗೆ ಬರಲು ಯಾವಾಗ ಯೋಚಿಸುತ್ತಾರೆ..’ ಎಂದು ಟ್ವೀಟ್ ಮಾಡಿದರು. ಈ  ಟ್ವೀಟ್‌ನ ಗುರಿ ಕೂಡಾ ಮುಸ್ಲಿಮರೇ. ಮುಸ್ಲಿಮರು ಅವಿದ್ಯಾವಂತರಾಗಿದ್ದು, ಆ ಕಾರಣದಿಂದ ಅಪರಾಧಿಗಳಾಗುತ್ತಿದ್ದಾರೆ ಮತ್ತು  ಭಯೋತ್ಪಾದನೆ ಯಲ್ಲಿ ಭಾಗಿಯಾಗುತ್ತಿದ್ದಾರೆ ಎಂಬರ್ಥವನ್ನೇ ಈ ಟ್ವೀಟ್ ಧ್ವನಿಸುತ್ತದೆ. ಇವೆಲ್ಲಕ್ಕೂ ಕಲಶ ಇಟ್ಟಂತೆ ಕನ್ನಡದ ಪವರ್ ಟಿವಿ  ಸುದ್ದಿ ಪ್ರಕಟಿಸಿತು, ‘ಬಾಂಬ್ ಸ್ಫೋಟದ ಆರೋಪಿ ಪೊಲೀಸರಿಗೆ ಶರಣು’ ಎಂಬ ಶೀರ್ಷಿಕೆಯ ಸುದ್ದಿಯನ್ನು ಮುಸ್ಲಿಮನ  ಫೋಟೋದೊಂದಿಗೆ ಅದು ಪ್ರಕಟಿಸಿತು. ಇಷ್ಟೇ ಅಲ್ಲ,

ಈ ಸ್ಫೋಟ ನಡೆದ ಬೆನ್ನಿಗೇ ಸೋಷಿಯಲ್ ಮೀಡಿಯಾವಂತೂ ಸುಳ್ಳುಗಳನ್ನೇ ಹೊತ್ತುಕೊಂಡು ಮನಬಂದಂತೆ ತಿರುಗಾಡಿತು.  ‘ಯಹೋವನ ಸಾಕ್ಷಿಗಳು’ ಎಂಬ ಪಂಥವನ್ನು ಅದು ಯಹೂದಿಗಳೆಂದೇ ಬಿಂಬಿಸಿತು. ಯಹೂದಿಗಳನ್ನೇ ಗುರಿ ಮಾಡಿ ಬಾಂಬ್  ಸ್ಫೋಟಿಸಲಾಗಿದೆ ಎಂಬಂತೆ  ಆಡಿಕೊಂಡಿತು. ಈ ಸ್ಫೋಟಕ್ಕಿಂತ ಮೊದಲು ಕೇರಳದಲ್ಲಿ ನಡೆದ ಫೆಲೆಸ್ತೀನ್ ಪರ ರ‍್ಯಾಲಿಗಳನ್ನು ಎತ್ತಿ  ಹೇಳುತ್ತಾ, ಈ ಸ್ಫೋಟಕ್ಕೂ ಈ ರ‍್ಯಾಲಿಗೂ ನಡುವೆ ಸಂಬಂಧವನ್ನು ಕಲ್ಪಿಸಿತು. ನಿಜವಾಗಿ,

ಬಾಂಬ್ ಸ್ಫೋಟಗೊಂಡ ಕಳಮಶ್ಶೇರಿಯಲ್ಲಿ ಯಹೂದಿಗಳೇ ಇಲ್ಲ. ಕೇರಳದಲ್ಲಿ ಒಟ್ಟು 15ರಿಂದ 20ರಷ್ಟು ಯಹೂದಿಗಳಿದ್ದಾರೆ ಎಂದು  ಅಂಕಿ-ಅಂಶ  ಹೇಳುತ್ತದೆ. ಫ್ಯೂ ರಿಸರ್ಚ್ ಸೆಂಟರ್ 2021ರಲ್ಲಿ ಪ್ರಕಟಿಸಿದ ವರದಿ ಪ್ರಕಾರ, ಭಾರತದಲ್ಲಿ ಹೆಚ್ಚೆಂದರೆ 3ರಿಂದ 4 ಸಾವಿರ  ಯಹೂದಿ ಮತ್ತು ಬಹಾಯಿ ಸಮುದಾಯದವರಿದ್ದಾರೆ. ಕೇರಳದಲ್ಲಿ ಹಿಂದೂಗಳ ಸಂಖ್ಯೆ 54% ಇದ್ದರೆ, ಮುಸ್ಲಿಮರು 22% ಮತ್ತು  ಕ್ರೈಸ್ತರು 18% ಇದ್ದಾರೆ. ಈ ಯಹೋವನ ಸಾಕ್ಷಿಗಳು ಎಂಬುದು ಕ್ರೈಸ್ತರದ್ದೇ  ಒಂದು ಬಂಡಾಯ ಪಂಥ. ಈ ಗುಂಪು ಕ್ರೈಸ್ತರ ತ್ರಿ  ಏಕತ್ವವನ್ನು ಒಪ್ಪುವುದಿಲ್ಲ. ಇವರು ಯಹೋವನನ್ನು ನಿಜವಾದ ಸೃಷ್ಟಿಕರ್ತ ಎಂದು ವಾದಿಸುತ್ತಾರೆ ಮತ್ತು ಈ ಯಹೋವನು ಪ್ರವಾದಿ  ಇಬ್ರಾಹೀಮ್, ಮೂಸಾ ಮತ್ತು ಈಸಾರ ದೇವ ಎಂದು ಹೇಳುತ್ತಾರೆ. ಹಾಗೆಯೇ, ಇವರ ವೆಬ್‌ಸೈಟ್ ಮಾಹಿತಿಯ ಆಧಾರದಲ್ಲಿ  ಹೇಳುವುದಾದರೆ, ಇವರು ಝಿಯೋನಿಝಮ್ ಅನ್ನು ಒಂದು ಧರ್ಮ ಎಂದು ಒಪ್ಪುವುದಿಲ್ಲ ಮತ್ತು ರಾಜಕೀಯ ಝಿಯೋನಿಝಮ್  ಬಗ್ಗೆ ತಟಸ್ಥ ನಿಲುವನ್ನು ಹೊಂದಿದ್ದಾರೆ. ಆದರೆ, ಈ ಎಲ್ಲ ಸತ್ಯವನ್ನು ಅಡಗಿಸಿಟ್ಟು ಬಿಜೆಪಿ ನಾಯಕರು, ಮಾಧ್ಯಮ ಮತ್ತು ಸೋಶಿಯಲ್  ಮೀಡಿಯಾದ ಒಂದು ಗುಂಪು ಅತ್ಯಂತ ಅಮಾನವೀಯವಾದ ಪರಮ ಸುಳ್ಳನ್ನು ಹಂಚಿಕೊಂಡಿದೆ. ಆ ಮೂಲಕ ತಮ್ಮ ಮುಸ್ಲಿಮ್  ದ್ವೇಷವನ್ನು ಜಗಜ್ಜಾಹೀರುಗೊಳಿಸಿದೆ. ನಿಜವಾಗಿ,

ಈ ದೇಶದಲ್ಲಿ ಮುಸ್ಲಿಮ್ ದ್ವೇಷ ಎಂಬುದು ಒಂದೊಳ್ಳೆಯ ಸರಕು. ಪ್ರತಿನಿತ್ಯ ಈ ಸರಕನ್ನು ಮಾರುವ ಒಂದು ಗುಂಪು ಸೋಶಿಯಲ್  ಮೀಡಿಯಾದಲ್ಲಿ ಸಕ್ರಿಯವಾಗಿದೆ. ಮುಸ್ಲಿಮರನ್ನು ಖಳರಂತೆ ಬಿಂಬಿಸುವುದೇ ಈ ಗುಂಪಿನ ಪರಮ ಉದ್ದೇಶ. ಇದೇ ಗುಂಪು ಇದೇ  ಕೇರಳದ ವೀಡಿಯೋವೊಂದನ್ನು ವಾರದ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಮುಸ್ಲಿಮ್ ವಿದ್ಯಾರ್ಥಿನಿಯರು  ಓರ್ವ ಹಿಂದೂ ಮಹಿಳೆಯೊಂದಿಗೆ ವಾಗ್ವಾದ ನಡೆಸುವ ವೀಡಿಯೋ. ಬುರ್ಖಾ ಧರಿಸಿರದ ಕಾರಣಕ್ಕಾಗಿ ಹಿಂದೂ ಮಹಿಳೆಯನ್ನು  ಬಸ್ಸಿನಿಂದ ಕೆಳಗಿಳಿಸಿದ ಮುಸ್ಲಿಮ್ ವಿದ್ಯಾರ್ಥಿನಿಯರು ಎಂಬ ಒಕ್ಕಣೆಯೊಂದಿಗೆ ಈ ವೀಡಿಯೋವನ್ನು ಟ್ವೀಟರ್(ಎಕ್ಸ್)ನಲ್ಲಿ ವ್ಯಾಪಕವಾಗಿ  ಹಂಚಿಕೊಳ್ಳಲಾಗಿತ್ತು. ಉತ್ತರ ಭಾರತವೂ ಸೇರಿದಂತೆ ವಿದೇಶದಲ್ಲೂ ಈ ವೀಡಿಯೋ ಭಾರೀ ಪ್ರಚಾರವನ್ನು ಪಡೆಯಿತು. ‘ಪಶ್ಚಿಮ  ಕೇರಳದಲ್ಲಿ ಬುರ್ಖಾ ಧರಿಸದೇ ಬಸ್ಸಿನಲ್ಲಿ ಪ್ರಯಾಣಿಸಲೂ ಸಾಧ್ಯವಿಲ್ಲ..’ ಎಂದು ಈ ವೀಡಿಯೋ ಹಂಚಿಕೊಂಡ ಬಿಜೆಪಿಯ ರಾಷ್ಟ್ರೀಯ  ಕಾರ್ಯದರ್ಶಿ ಅನಿಲ್ ಆ್ಯಂಟನಿ ಟ್ವೀಟ್ ಮಾಡಿದ್ದರು. ಆದರೆ, ಈ ವೀಡಿಯೋದ ಕುರಿತಂತೆ ಅಕ್ಟೋಬರ್ 28ರಂದು ಇಂಡಿಯಾ ಟುಡೇ  ಪತ್ರಿಕೆಯು ಸತ್ಯಶೋಧನಾ ವರದಿಯನ್ನು ಪ್ರಕಟಿಸುವ ಮೂಲಕ ಸುಳ್ಳಿಗೆ ಬಲವಾದ ಏಟು ಕೊಟ್ಟಿತು. ನಿಜವಾಗಿ, ಆ ವೀಡಿಯೋಕ್ಕೂ  ಧರ್ಮಕ್ಕೂ ಸಂಬಂಧವೇ ಇರಲಿಲ್ಲ. ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾಕ್ಕೆ ಹೋಗುತ್ತಿದ್ದ ಬಸ್ಸಿನೊಳಗೆ ಅಕ್ಟೋಬರ್ 20ರಂದು ಆ  ಘಟನೆ ನಡೆದಿತ್ತು.

ಕುಂಬಳೆಯ ಖನ್ಸಾ ವಿಮೆನ್ಸ್ ಕಾಲೇಜಿನ ವಿದ್ಯಾರ್ಥಿನಿಯರು ಬಸ್ಸನ್ನು ತಡೆದು ಹತ್ತಿದ್ದರು. ಕಾಲೇಜಿನ ಎದುರು ಬಸ್ ನಿಲುಗಡೆ ಇಲ್ಲದೇ  ಇರುವುದನ್ನು ಪ್ರತಿಭಟಿಸಿ ಅವರು ಬಸ್ ತಡೆದಿದ್ದರು. ವೀಡಿಯೋದಲ್ಲಿರುವ ಆಶಾ ಭಾಸ್ಕರ್ ಅನ್ನುವ ಮಹಿಳೆ ಕುಂಬಳೆಯಲ್ಲಿರುವ ಶಿಕ್ಷಣ  ಸಂಸ್ಥೆಯೊಂದರ ಅಧಿಕಾರಿಯಾಗಿದ್ದು, ಬಸ್ ತಡೆದುದನ್ನು ಪ್ರಶ್ನಿಸಿದ್ದಲ್ಲದೇ, ಬಸ್ ಪರ ವಾದಿಸಿದ್ದರು. ಇದು ವಿದ್ಯಾರ್ಥಿನಿಯರನ್ನು  ಕೆರಳಿಸಿತ್ತು. ಅಲ್ಲದೇ, ಬಸ್ ಹತ್ತುವ ಗಡಿಬಿಡಿಯಲ್ಲಿ ವಿದ್ಯಾರ್ಥಿನಿಯರು ಅವರ ಪಾದಕ್ಕೂ ತುಳಿದಿದ್ದರು. ಈ ಹಿನ್ನೆಲೆಯಲ್ಲೇ  ಆ ವಾಗ್ವಾದ  ನಡೆದಿತ್ತು. ಧರ್ಮಕ್ಕೂ ಅದಕ್ಕೂ ಸಂಬಂಧವೇ ಇಲ್ಲ ಎಂದು ಆಶಾ ಭಾಸ್ಕರ್ ಇಂಡಿಯಾ ಟುಡೇಯೊಂದಿಗೆ ಹೇಳಿದರು. ಇವೇ ಅಭಿಪ್ರಾಯವನ್ನು ಬಸ್‌ನ ಕಂಡೆಕ್ಟರ್ ಮನೋಜ್ ಕೂಡಾ ಹೇಳಿದರು. ಹಾಗೆಯೇ, ‘ಆ ವೀಡಿಯೋದ ಜೊತೆಗೆ ಹಂಚಿಕೊಳ್ಳುತ್ತಿರುವ  ಮಾಹಿತಿಗಳು ಸಂಪೂರ್ಣ ಸುಳ್ಳಿನಿಂದ ಕೂಡಿದೆ’ ಎಂದು ಕುಂಬಳೆ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ಅನೂಪ್ ಕುಮಾರ್ ಕೂಡಾ  ಹೇಳಿದರು. ಖನ್ಸಾ ಕಾಲೇಜಿನ ಮುಂಭಾಗ ಬಸ್ ನಿಲ್ಲಿಸಬೇಕೆಂದು ಕಾಲೇಜು ಆಗ್ರಹಿಸುತ್ತಿದ್ದು, ಆರ್.ಟಿ.ಓ. ಅಧಿಕಾರಿಗಳು ಇನ್ನೂ ಅದಕ್ಕೆ  ಅನುಮತಿಸಿಲ್ಲ ಎಂದವರು ಹೇಳಿದರಲ್ಲದೇ, ವೀಡಿಯೋದಲ್ಲಿರುವ ಮಹಿಳೆ ಯಾವ ದೂರನ್ನೂ ಕೊಟ್ಟಿಲ್ಲ ಎಂದೂ ಹೇಳಿದರು. ಈ ಎಲ್ಲ  ಮಾಹಿತಿಯನ್ನು ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ವರದಿಯಲ್ಲಿ ವಿಸ್ತೃತವಾಗಿ  ವಿವರಿಸಲಾಗಿದೆ. ಅಂದಹಾಗೆ,

ಸುಳ್ಳು ಧರ್ಮವಿರೋಧಿ. ಆದರೆ, ಧರ್ಮ ರಕ್ಷಣೆ ಮಾಡುತ್ತೇವೆ ಎಂದು ಘೋಷಿಸುತ್ತಾ ತಿರುಗುವ ಗುಂಪು ಮತ್ತು ರಾಜಕೀಯ  ಪಕ್ಷವೊಂದು ತಮ್ಮ ಉದ್ದೇಶ ಸಾಧನೆಗಾಗಿ ಸುಳ್ಳನ್ನೇ ಆಶ್ರಯಿಸಿದೆ. ಇದು ಅತ್ಯಂತ ಆಘಾತಕಾರಿ ಮತ್ತು ವಿಡಂಬನಾತ್ಮಕ. ನಿಜವಾಗಿ,  ಮುಸ್ಲಿಮ್ ದ್ವೇಷವನ್ನೇ ಹಿಂದೂ ಧರ್ಮ ರಕ್ಷಣೆ ಎಂದು ನಂಬಿರುವ ಈ ಗುಂಪಿನಿಂದಲೇ ಹಿಂದೂ ಧರ್ಮಕ್ಕೆ ಅಪಾಯ ಇದೆ. ಧರ್ಮ  ಎಂಬ ಸತ್ಯಕ್ಕೆ ಸುಳ್ಳು ಎಂಬ ಅಧರ್ಮ ಎಂದೂ ಉತ್ತರ ಅಲ್ಲ, ಪರ್ಯಾಯವೂ ಅಲ್ಲ.

No comments:

Post a Comment