ಕಳೆದೆರಡು ತಿಂಗಳುಗಳಿಂದ ತಣ್ಣಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಧರ್ಮಸ್ಥಳದ ನೆಪದಲ್ಲಿ ಮತ್ತೆ ಬೆಂಕಿ ಹಚ್ಚುವ ಸಂಚುಗಳು ನಡೆಯತೊಡಗಿವೆ. ಇದಕ್ಕೆ ಬಿಜೆಪಿಯೇ ಚಾಲನೆಯನ್ನು ಕೊಟ್ಟಿದೆ.
ಧರ್ಮಸ್ಥಳ ಪ್ರಕರಣದ ಹಿಂದೆ ಮುಸ್ಲಿಮರಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಬಿಜೆಪಿಯ ಇನ್ನೋರ್ವ ನಾಯಕ ಅಶ್ವತ್ಥ ನಾರಾಯಣ ಅವರಂತೂ ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ‘ನಿಷೇಧಿತ ಪಿಎಫ್‌ಐ ಸಂಘಟನೆ ಇದರ ಹಿಂದಿದೆ’ ಎಂದು ಹೇಳಿದ್ದಾರೆ. ಇದಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಮುಸ್ಲಿಮರನ್ನು ಕೇಂದ್ರೀಕರಿಸಿ ಧರ್ಮಸ್ಥಳ ‘ಶವ’ ಪ್ರಕರಣಕ್ಕೆ ಮುಸ್ಲಿಮ್ ಬಣ್ಣವನ್ನು ಕೊಡುವ ಪ್ರಯತ್ನಗಳು ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ‘ಅಜ್ಞಾತ ದೂರುದಾರನ ಹಿಂದೆ ಮುಸ್ಲಿಮರಿದ್ದಾರೆ’, ‘ಧರ್ಮಸ್ಥಳ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳುವ ಸಂಚು ನಡೆಸಿದ್ದಾರೆ’, ‘ಧರ್ಮಸ್ಥಳ ಕ್ಷೇತ್ರವೊಂದನ್ನು ಬಿಟ್ಟರೆ ಉಳಿದಂತೆ ಅದರ ಸುತ್ತಮುತ್ತಲೆಲ್ಲ ಮಸೀದಿಗಳು ಮಾತ್ರ ಇವೆ..’ ಎಂಬೆಲ್ಲಾ ಅಭಿಪ್ರಾಯಗಳನ್ನು ಹಂಚಿಕೊಳ್ಳುವವರು ಭಾರೀ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ನಡುವೆಯೇ,
ಇನ್ನಿಬ್ಬರು ನಾಯಕರೂ ಧರ್ಮಸ್ಥಳ ಪ್ರಕರಣವನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸುವುದಕ್ಕೆ ಉತ್ತೇಜನ ನೀಡಿದ್ದಾರೆ. ಅವರಲ್ಲಿ ಓರ್ವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. ‘ಅನ್ಯಧರ್ಮದ ಜಾಗದಲ್ಲಿ ಶವ ಹೂತಿದ್ದೇವೆ ಎಂದು ಯಾರಾದರೂ ದೂರು ಕೊಟ್ಟರೆ ಧರ್ಮಸ್ಥಳ ಮಾದರಿಯ ಕಾರ್ಯಾಚರಣೆ ಮಾಡುತ್ತೀರಾ..’ ಎಂದು ರಾಜ್ಯ ಸರಕಾರವನ್ನು ಪ್ರಶ್ನಿಸಿದ್ದಾರೆ. ಇನ್ನೊಂದೆಡೆ ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿಯವರೂ ಇಂಥದ್ದೇ ಮಾತನ್ನಾಡಿದ್ದಾರೆ. ‘ಮಸೀದಿಯಲ್ಲಿ ಶವಗಳನ್ನು ಹೂತಿಡಲ್ವಾ..’ ಎಂದವರು ಪ್ರಶ್ನಿಸಿದ್ದಾರೆ. ಈ ಮೂಲಕ ಸ್ಮಶಾನವೇ ಅಲ್ಲದ ಜಾಗಗಳಲ್ಲಿ ಶವಗಳನ್ನು ಹೂತಿಡಲಾಗಿದೆ ಎಂಬ ಆರೋಪವಿರುವ ಧರ್ಮಸ್ಥಳ ಪ್ರಕರಣವನ್ನು ಮಸೀದಿ ವಠಾರದ ದಫನ ಭೂಮಿಗೆ ಹೋಲಿಸಿದ್ದಾರೆ. ಮಸೀದಿ ಪಕ್ಕದ ದಫನ ಭೂಮಿಯನ್ನು ಅವರು ಅಕ್ರಮ ಎಂದು ಪರೋಕ್ಷವಾಗಿ ಬಿಂಬಿಸುವುದಕ್ಕೆ ಯತ್ನಿಸಿದ್ದಾರೆ. ಅಂದಹಾಗೆ,
ಮುಸ್ಲಿಮರಿಗೂ ಧರ್ಮಸ್ಥಳ ಪ್ರಕರಣಕ್ಕೂ ಏನು ಸಂಬಂಧ ಇದೆ? 13 ವರ್ಷಗಳ ಹಿಂದೆ ಸೌಜನ್ಯ ಕಾಣೆಯಾದಂದಿನಿಂದ ಈ ಅಜ್ಞಾತ ದೂರುದಾರನ ವರೆಗೆ ಯಾವುದರಲ್ಲೂ ಮುಸ್ಲಿಮರು ಕಾಣಿಸಿಕೊಂಡೇ ಇಲ್ಲ. ಸೌಜನ್ಯ ಪರ ಹೋರಾಟಗಾರರ ಗುಂಪಿನಲ್ಲೂ ಮತ್ತು ಈ ಹೋರಾಟಗಾರರನ್ನು ಪ್ರಶ್ನಿಸುತ್ತಾ ಹುಟ್ಟಿಕೊಂಡ ಗುಂಪಿನಲ್ಲೂ ಇರುವವರೆಲ್ಲಾ ಹಿಂದೂಗಳೇ. ಧರ್ಮಸ್ಥಳ ಹೋರಾಟದಲ್ಲಿ ಕಾಣಿಸಿಕೊಂಡ ಎರಡೂ ಗುಂಪುಗಳ ಮುಂಚೂಣಿ ನಾಯಕರಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರವರೆಗೆ ಎಲ್ಲರೂ ಹಿಂದೂ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಮುಸ್ಲಿಮ್ ಸಮುದಾಯದ ಯಾವೊಬ್ಬ ಮೌಲ್ವಿಯೂ ಈ ವಿಷಯದಲ್ಲಿ ಹೇಳಿಕೆಯನ್ನು ಕೊಟ್ಟಿಲ್ಲ. ಮುಸ್ಲಿಮ್ ಸಮುದಾಯದ ಅಧಿಕೃತ ಧ್ವನಿ ಎಂದು ಗುರುತಿಸಲಾಗುವ ಖಾಝಿಯವರೂ ಈ ಬಗ್ಗೆ ಏನನ್ನೂ ಹೇಳಿಲ್ಲ. ಮುಸ್ಲಿಮ್ ಸಮುದಾಯದ ಪ್ರಮುಖ ಧಾರ್ಮಿಕ ಸಂಘಟನೆಗಳ ಯಾವೊಬ್ಬ ನಾಯಕರೂ ಈ ವಿಷಯದಲ್ಲಿ ಮಧ್ಯಪ್ರವೇಶಿಸಿಲ್ಲ. ವಿದ್ವಾಂಸರಾಗಲಿ, ಪಂಡಿತರಾಗಲಿ ಧರ್ಮಸ್ಥಳಕ್ಕೆ ಸಂಬಂಧಿಸಿ ಯಾವ ಮಾತನ್ನೂ ಆಡಿಲ್ಲ. ಅಜ್ಞಾತ ದೂರುದಾರನ ಪರ ವಹಿಸುವುದಾಗಲಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಿಲ್ಲುವುದಾಗಲಿ ಮಾಡಿಯೇ ಇಲ್ಲ. ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎಂದು ಆರೋಪಿಸಲಾಗುತ್ತಿರುವ ಹೆಣ್ಣು ಮಕ್ಕಳ ಪೈಕಿ ಯಾರೂ ಮುಸ್ಲಿಮರಿಲ್ಲ. ಅಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಲಾಗುತ್ತಿರುವವರಲ್ಲೂ ಮುಸ್ಲಿಮರಿಲ್ಲ. ಈ ಇಡೀ ಪ್ರಕರಣ ಮುಸ್ಲಿಮರಿಂದ ಮುಕ್ತವಾಗಿದೆ. ಮುಸ್ಲಿಮರ ಭಾಗೀದಾರಿಕೆಯಿಂದಲೂ ಮುಕ್ತವಾಗಿದೆ. ಇಷ್ಟೆಲ್ಲಾ ಇದ್ದೂ,
ಪದೇಪದೇ ಮುಸ್ಲಿಮರನ್ನು ಈ ವಿಷಯಕ್ಕೆ ಸಂಬಂಧಿಸಿ ಎಳೆದು ತರುತ್ತಿರುವುದೇಕೆ? ಮುಸ್ಲಿಮರನ್ನು ಸಂಚುಕೋರರಂತೆ ಬಿಂಬಿಸಿ ಹಿಂದೂಗಳನ್ನು ಪ್ರಚೋದಿಸುವುದು ಇದರ ಹಿಂದಿರುವ ಉದ್ದೇಶವೇ? ತಣ್ಣಗಿರುವ ಜಿಲ್ಲೆಗೆ ಮತ್ತೆ ಬೆಂಕಿಯನ್ನು ಕೊಟ್ಟು ಕಾರ್ಯಕರ್ತರನ್ನು ಮತ್ತೆ ಧರ್ಮದ ಅಮಲಿನಲ್ಲಿ ಬೀದಿಗಿಳಿಸುವ ತಂತ್ರವೇ? ಅಥವಾ ಹೇಗಾದರೂ ಮಾಡಿ ಮುಸ್ಲಿಮರನ್ನು ಪ್ರಚೋದಿಸಿ ಅನಗತ್ಯ ಹೇಳಿಕೆಯನ್ನು ಕೊಡುವಂತೆ ಪ್ರೇರೇಪಿಸಿ ಬಲೆಗೆ ಬೀಳಿಸುವ ಕುತಂತ್ರವೇ? ನಿಜವಾಗಿ,
ಈ ದೇಶದಲ್ಲಿ ಹಿಂದೂಗಳಿಗೂ ಮತ್ತು ಮುಸ್ಲಿಮರಿಗೂ ಇರೋದು ಒಂದೇ ಸಂವಿಧಾನ. ಈ ಸಂವಿಧಾನ ನ್ಯಾಯವನ್ನು ಹಿಂದೂ-ಮುಸ್ಲಿಮ್ ಎಂದು ವರ್ಗೀಕರಿಸಿಲ್ಲ. ಹಿಂದೂಗಳಿಗೆ ಅನ್ಯಾಯವಾದಾಗ ಮುಸ್ಲಿಮರು ಮಾತಾಡಬಾರದು ಮತ್ತು ಮುಸ್ಲಿಮರಿಗೆ ಅನ್ಯಾಯವಾದಾಗ ಹಿಂದೂಗಳು ಮಾತಾಡಬಾರದು ಎಂದೂ ಅದು ಹೇಳಿಲ್ಲ. ಅನ್ಯಾಯದ ವಿರುದ್ಧ ಹಿಂದೂ-ಮುಸ್ಲಿಮ್ ಇಬ್ಬರೂ ಜೊತೆಗೂಡಿ ಹೋರಾಡಬೇಕಾದುದು ಸಾಂವಿಧಾನಿಕ ಅಗತ್ಯ. ಆದರೆ ಸಂವಿಧಾನ ಜಾರಿಯಾಗಿ 7 ದಶಕಗಳೇ ಕಳೆದ ಬಳಿಕದ ಭಾರತದ ಪರಿಸ್ಥಿತಿ ಹೇಗಿದೆಯೆಂದರೆ, ಹಿಂದೂಗಳ ವಿಷಯದಲ್ಲಿ ಮುಸ್ಲಿಮರು ಮಾತಾಡಬಾರದು ಎಂಬಲ್ಲಿಗೆ ತಲುಪಿದೆ. ಮುಸ್ಲಿಮರನ್ನು ಬೈದರೆ ಓಟು ಸಿಗುತ್ತದೆ ಎಂಬ ಸ್ಥಿತಿಗೆ ಬಂದು ನಿಂತಿದೆ. ಮುಸ್ಲಿಮರನ್ನು ಅಪರಾಧಿಗಳಂತೆ, ಹಿಂದೂ ವಿರೋಧಿಗಳಂತೆ, ದೇಶದ್ರೋಹಿಗಳಂತೆ, ಭಯೋತ್ಪಾದಕರಂತೆ.. ಬಿಂಬಿಸಿದರೆ ಹಿಂದೂಗಳು ತೃಪ್ತರಾಗುತ್ತಾರೆ ಎಂಬಂಥ ವಾತಾವರಣವನ್ನು ಸೃಷ್ಟಿ ಮಾಡಲಾಗಿದೆ. ಇದು ಸಂವಿಧಾನದ ಬಯಕೆ ಅಲ್ಲವಾದರೂ ಪರಿಸ್ಥಿತಿ ಆ ಮಟ್ಟಕ್ಕೆ ಕೆಟ್ಟು ಹೋಗಿರುವುದರಿಂದ ಮುಸ್ಲಿಮರು ಪ್ರತಿಕ್ರಿಯಿಸುವಾಗ ಜಾಗರೂಕತೆಯನ್ನು ಪಾಲಿಸುವ ಅನಿವಾರ್ಯತೆ ಇದೆ. ಧರ್ಮಸ್ಥಳ ವಿಷಯಕ್ಕೂ ಈ ಎಚ್ಚರಿಕೆ ಅನ್ವಯವಾಗುತ್ತದೆ.
ಮುಸ್ಲಿಮರನ್ನು ಪ್ರಚೋದಿಸಿ ಧರ್ಮಸ್ಥಳ ಪ್ರಕರಣದಲ್ಲಿ ಭಾಗಿಯಾಗುವಂತೆ ಮಾಡುವ ಹುನ್ನಾರವೊಂದು ನಡೆಯುತ್ತಿದೆ. ಒಂದುವೇಳೆ, ಪ್ರಚೋದನೆಗೆ ಬಲಿಯಾಗಿ ಮುಸ್ಲಿಮ್ ಸಮುದಾಯದ ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು ಭಾಗಿಯಾದರೆ ಆ ಬಳಿಕ ಈ ಇಡೀ ಪ್ರಕರಣವನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಿ ಮುಖ್ಯ ವಿಷಯದಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸರಿಸುವ ದುರುದ್ದೇಶವೂ ಇದರ ಹಿಂದಿರಬಹುದು. ಮತ್ತೆ ದಕ್ಷಿಣ ಕನ್ನಡವನ್ನು ಧರ್ಮದ್ವೇಷದ ಸಂಘರ್ಷಕ್ಕೆ ದೂಡುವುದೂ ಇದರ ಹಿಂದಿನ ಉದ್ದೇಶವಾಗಿರಬಹುದು. ಅಂದಹಾಗೆ,
ಧರ್ಮಸ್ಥಳದ ಬಗ್ಗೆ ಅಜ್ಞಾತ ದೂರುದಾರ ನೀಡಿರುವ ದೂರಿನ ಮೇಲೆ ಸಿಟ್ ರಚಿಸಿರುವುದು ಸರಕಾರ. ಶವಗಳಿಗೆ ಹುಡುಕಾಡುತ್ತಿರುವುದೂ ಸರಕಾರವೇ ರಚಿಸಿದ ಪ್ರಮುಖ ಪೊಲೀಸ್ ಅಧಿಕಾರಿಗಳು ಮತ್ತು ಅವರ ತಂಡ. ಈ ಸರಕಾರವೂ ಅಷ್ಟೇ, ಸ್ವಯಂ ಘೋಷಿತ ಅಲ್ಲ. ನಾವೇ ಚುನಾಯಿಸಿದ ಸರಕಾರ. ಹೀಗಿರುತ್ತಾ, ಅಜ್ಞಾತ ದೂರುದಾರನನ್ನು, ಆತ ತೋರಿಸಿರುವ ಜಾಗಗಳನ್ನು ಮತ್ತು ಅದರ ಮೇಲೆ ತನಿಖೆಗಿಳಿದಿರುವ ಪೊಲೀಸ್ ಅಧಿಕಾರಿಗಳನ್ನು ನೆಪ ಮಾಡಿಕೊಂಡು ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವುದಕ್ಕೆ ಯಾವ ಅರ್ಥವೂ ಇಲ್ಲ. ಸದ್ಯ ನಾಗರಿಕರಾದ ನಾವು ಮಾಡಬಹುದಾದದ್ದು ಏನೆಂದರೆ,
ತನಿಖೆಯ ಫಲಿತಾಂಶಕ್ಕಾಗಿ ಕಾಯುವುದು. ದೂರುದಾರ ಸುಳ್ಳು ಹೇಳಿದ್ದರೆ ಆತನಿಗೆ ಶಿಕ್ಷೆಯಾಗಲಿ. ಆತನ ದೂರಿನಲ್ಲಿ ನಿಜ ಇದ್ದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಈ ಬಗ್ಗೆ ಸ್ಪಷ್ಟವಾಗಬೇಕಾದರೆ ತನಿಖೆ ಮುಕ್ತಾಯಗೊಳ್ಳಬೇಕು. ಅದು ಬಿಟ್ಟು ತನಿಖಾ ಹಂತದಲ್ಲೇ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಇಡೀ ತನಿಖಾ ಪ್ರಕ್ರಿಯೆಯನ್ನೇ ಬುಡಮೇಲುಗೊಳಿಸುವ ರೀತಿಯ ಹೇಳಿಕೆಗಳು ಸಮಾಜದ ಶಾಂತಿ-ಸುವ್ಯವಸ್ಥೆಯ ಮೇಲೆ ಪರಿಣಾಮ ಉಂಟು ಮಾಡಬಲ್ಲುದು. ಜನಸಾಮಾನ್ಯರು ಇಂಥ ಅಪಪ್ರಚಾರಗಳಿಂದ ಪ್ರಭಾವಿತರಾಗಿ ಮುಸ್ಲಿಮರನ್ನು ತಪ್ಪಿತಸ್ಥರಂತೆ ಮತ್ತು ಸಂಚುಕೋರರಂತೆ ಕಾಣಲು ಪ್ರಾರಂಭಿಸಬಹುದು. ಅಲ್ಲದೇ, ಇದು ಅಪಪ್ರಚಾರ ಮಾಡುವವರ ಉದ್ದೇಶವೂ ಆಗಿರಬಹುದು. ಆದ್ದರಿಂದ,
ಸರಕಾರ ಈ ಬಗ್ಗೆ ಜಾಗೃತವಾಗಬೇಕು. ಅಪಪ್ರಚಾರದಲ್ಲಿ ತೊಡಗಿರುವವರ ಮೇಲೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ಸೋಶಿಯಲ್ ಮೀಡಿಯಾದ ಮೇಲೆ ಹದ್ದಿನ ಕಣ್ಣಿಡಬೇಕು. ಪ್ರಚೋದನಾತ್ಮಕ ಬರಹ ಮತ್ತು ವೀಡಿಯೋಗಳನ್ನು ಪತ್ತೆ ಹಚ್ಚಿ, ಅದರ ಹಿಂದಿರುವವರಿಗೆ ಕಾನೂನಿನ ಪಾಠ ಮಾಡಬೇಕು.
.jpg)
.jpg)