Showing posts with label 'ಆನೆಯ' ಎದುರು ಹೋರಾಡಿ ಗೆದ್ದ 'ಆಡಿನ ಮರಿ'... Show all posts
Showing posts with label 'ಆನೆಯ' ಎದುರು ಹೋರಾಡಿ ಗೆದ್ದ 'ಆಡಿನ ಮರಿ'... Show all posts

Tuesday, 3 July 2012

ಅವರ ಕೈಯಲ್ಲಿ ವಿಷ ಕೊಟ್ಟವರು ಯಾರು?

ಪ್ರೀತಿ, ಪ್ರೇಮಗಳ ಕಾರಣದಿಂದಾಗಿ ಈ ದೇಶದಲ್ಲಿ ಆಗುತ್ತಿರುವ ಆತ್ಮಹತ್ಯೆ, ಹತ್ಯೆ, ಜಗಳಗಳ ಸಂಖ್ಯೆ ಕಡಿಮೆಯೇನೂ ಇಲ್ಲ. ಪ್ರತಿದಿನ ಪತ್ರಿಕೆಗಳು ಇಂಥದ್ದೊಂದು ಸುದ್ದಿಯನ್ನು ಹೊತ್ತುಕೊಂಡೇ ಬರುತ್ತವೆ. ಅವು ಇವತ್ತು ಎಷ್ಟು ಮಾಮೂಲಿ ಆಗಿಬಿಟ್ಟಿವೆ ಎಂದರೆ, ಹೆಚ್ಚಿನ ಬಾರಿ ಅವು ಓದುಗರ ಗಮನವನ್ನೇ ಸೆಳೆಯುತ್ತಿಲ್ಲ. ಓಡಿ ಹೋದ ಅಥವಾ ಆತ್ಮಹತ್ಯೆ ಮಾಡಿಕೊಂಡ ಯುವಜೋಡಿಯನ್ನು ಅಪರಾಧಿ ಸ್ಥಾನದಲ್ಲಿ ಕೂರಿಸಿ, ಅವರ ನಿರ್ಧಾರಕ್ಕೆ ನಾಲ್ಕು ಬೈಗುಳವನ್ನು ಸುರಿಸಿ  ನಾವೆಲ್ಲ ಸುಮ್ಮನಾಗುತ್ತೇವೆ. ನಿಜವಾಗಿ ಪರಸ್ಪರ ಪ್ರೀತಿಸುವ ಯುವ ಜೋಡಿಯೊಂದು ಅನಾಹುತಕಾರಿ ನಿರ್ಧಾರವನ್ನು ಕೈಗೊಳ್ಳುವುದರಲ್ಲಿ ಆ ಜೋಡಿಯ ಪಾತ್ರ ಮಾತ್ರ ಇರುವುದಲ್ಲ. ಅವರಿಗಿಂತ ದೊಡ್ಡ ಪಾತ್ರವನ್ನು ಈ ಸಮಾಜ ನಿರ್ವಹಿಸಿರುತ್ತದೆ. ದುರಂತ ಏನೆಂದರೆ, ಮನರಂಜನೆ, ಸಮಾನತೆ, ಸ್ವಾತಂತ್ರ್ಯ, ಆಧುನಿಕತೆ, ಸೆಕ್ಯುಲರಿಸಮ್ ಮುಂತಾದ ಆಕರ್ಷಕ ಪರಿಕಲ್ಪನೆಗಳ ಮೂಲಕ ಸಮಾಜ ತನ್ನ ಆ ಖಳ ಪಾತ್ರವನ್ನು ಸಮರ್ಥಿಸಿಕೊಳ್ಳುತ್ತಿದೆ.
          ಬಿಹಾರದ ಪಟ್ನಾದಲ್ಲಿ ಯುವತಿಯೊಬ್ಬಳು ತನ್ನ ತಂದೆ ಮತ್ತು ತಮ್ಮನಿಗೆ ವಿಷವುಣಿಸಿ ಜೂನ್ 30ರಂದು ಕೊಲೆ ಮಾಡಿದ್ದಾಳೆ. ಆಕೆಯ ಪ್ರೇಮ ಪ್ರಕರಣಕ್ಕೆ ತಂದೆ ಮತ್ತು ತಮ್ಮ ಅಡ್ಡಿಯಾಗಿರುವುದೇ ಇದಕ್ಕೆ  ಕಾರಣ. ಸದ್ಯ ಪೊಲೀಸರು ಆ ಯುವತಿಯನ್ನು ಬಂಧಿಸಿ ಕೊಲೆ ಕೇಸು ದಾಖಲಿಸಿದ್ದಾರೆ. ಒಂದು ರೀತಿಯಲ್ಲಿ ತಂದೆಯನ್ನು ಕೊಂದ, ತಮ್ಮನನ್ನು ಹತ್ಯೆ ಮಾಡಿದ ಭೀಕರ ಅಪರಾಧದೊಂದಿಗೆ ಯುವತಿಯೋರ್ವಳ ಬದುಕು ಆರಂಭವಾಗಿದೆ. ಆದರೆ ಇಂಥದ್ದೊಂದು ಬದುಕನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಆ ಯುವತಿಗೆ ಪ್ರೇರಣೆಯಾದದ್ದಾದರೂ ಏನು? ಆ ವರೆಗೆ ಸಾಕಿ ಸಲಹಿದ ಅಪ್ಪನನ್ನೇ ಕೊಲ್ಲುವಷ್ಟು, ತಮ್ಮನಿಗೇ ವಿಷ ಕೊಡುವಷ್ಟು ಆಕೆಯ ಹೃದಯವನ್ನು ಕಟುವಾಗಿಸಿದ್ದಾದರೂ ಯಾವುದು? ಆಕೆ ಈ ಮೊದಲು ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯೂ ಆಗಿರಲಿಲ್ಲ. ಪ್ರಿಯಕರನ ಮಾತು ಕೇಳಿ ತಂದೆಯನ್ನೇ ಕೊಂದಳು ಅನ್ನುವ ಒಂದು ವಾಕ್ಯದಲ್ಲಿ ಮುಕ್ತಾಯಗೊಳಿಸುವುದಕ್ಕೆ ಇಂಥ ಪ್ರಕರಣಗಳು ಅರ್ಹವೇ?
        ಯುವಕ ಮತ್ತು ಯುವತಿಯ ಮಧ್ಯೆ ಪ್ರೇಮಾಂಕುರವಾಗುವುದಕ್ಕೆ ಕಾರಣ ಅವರಿಬ್ಬರು ಮಾತ್ರ ಖಂಡಿತ ಅಲ್ಲ. ಅಂಥದ್ದೊಂದು ವಾತಾವರಣವನ್ನು ಹಿರಿಯರಾದ ನಾವೆಲ್ಲ ನಿರ್ಮಿಸಿ ಕೊಟ್ಟಿದ್ದೇವೆ. ನಮ್ಮ ಸಿನಿಮಾಗಳು ತಯಾರಾಗುವುದೇ ಪ್ರೀತಿ, ಪ್ರೇಮಗಳ ಸುತ್ತ. ತನ್ನ ಪ್ರೇಮವನ್ನು ಗೆಲ್ಲುವುದಕ್ಕಾಗಿ ಹೀರೋ ಯಾರ ಹತ್ಯೆ ಮಾಡುವುದಕ್ಕೂ ಹೇಸುವುದಿಲ್ಲ. ಈ ಪ್ರೇಮ ವ್ಯವಹಾರಕ್ಕೆ ಹಿರೋಯಿನ್ ಳ  ತಂದೆ ವಿರುದ್ಧ ಎಂದಾದರೆ ಆತನನ್ನು ಖಳನಂತೆ ಬಿಂಬಿಸಲಾಗುತ್ತದೆಯೇ ಹೊರತು ಆ ಅಪ್ಪನ ಅಪ್ಪಣೆ ಇಲ್ಲದೇ ಪ್ರೀತಿಸಿದ ಈ ಹೀರೋ ಹಿರೋಯಿನ್ ಗಳನ್ನಲ್ಲ. ಆ ಅಪ್ಪನಿಗೆ ಹೀರೋನಿಂದ ಬೀಳುವ ಪ್ರತಿ ಹೊಡೆತಕ್ಕೂ ಸಿನಿಮಾ ಮಂದಿರಗಳಲ್ಲಿ ಶಿಳ್ಳೆ ಬೀಳುತ್ತದೆ. ಹೀರೋ ಎಲ್ಲರನ್ನೂ ಚೆಂಡಾಡುವುದು, ಅಂತಿಮವಾಗಿ ಅಪ್ಪ ಆ ಪ್ರೀತಿಗೆ ಹಸಿರು ನಿಶಾನೆ ತೋರುವುದು ಅಥವಾ ಹೀರೋ - ಹಿರೋಯಿನ್ ಊರು ಬಿಟ್ಟು ಹೋಗುವುದು, ಸಾಯುವುದು.. ಹೀಗೆ ಸಾಗುತ್ತವೆ ಹೆಚ್ಚಿನ ಸಿನಿಮಾಗಳು. ಇನ್ನು, ಟಿವಿಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳ ಸ್ಥಿತಿಯೂ ಭಿನ್ನವಲ್ಲ. ರಿಯಾಲಿಟಿ ಶೋಗಳ ಪಾಡಂತೂ ಇದಕ್ಕಿಂತಲೂ ಕರಾಳ. ಪ್ರೇಮ ಕತೆಯಿಲ್ಲದ ಒಂದೇ ಒಂದು ಧಾರಾವಾಹಿ ಈ ದೇಶದಲ್ಲಿ ಪ್ರಸಾರವಾಗಿರುವ ಸಾಧ್ಯತೆ ಇಲ್ಲ. ಹಾಗಂತ ಇವುಗಳನ್ನು ನಿರ್ಮಿಸುವುದು ಹದಿಹರೆಯದ ಯುವಕ ಯುವತಿಯರು ಅಲ್ಲವಲ್ಲ. ಹೀಗಿರುವಾಗ ಅವರು ಕೈಗೊಳ್ಳುವ ತಪ್ಪು ನಿರ್ಧಾರಕ್ಕೆ ಅವರೊಬ್ಬರನ್ನೇ ದೂಷಿಸುವುದು ಎಷ್ಟು ಸರಿ? ತಮಾಷೆ ಏನೆಂದರೆ, ಇಂಥ ಸಿನಿಮಾಗಳನ್ನು ತಯಾರಿಸಿ ಸಮಾಜಕ್ಕೆ ಅರ್ಪಿಸುವವರಿಗೆ ರಾಷ್ಟ್ರ ಪ್ರಶಸ್ತಿ ಸಿಗುತ್ತದೆ. ಅತ್ಯುತ್ತಮ ಚಿತ್ರಕತೆ ಎಂದು ಕೊಂಡಾಡಲಾಗುತ್ತದೆ. ಸಮಾಜವನ್ನು ತಪ್ಪು ದಾರಿಗೆಳೆಯುವ ಪಾತ್ರವನ್ನು ನಿರ್ವಹಿಸಿದ್ದಕ್ಕಾಗಿ ಅತ್ಯುತ್ತಮ ನಟ, ನಟಿ, ನಿರ್ದೇಶಕ ಪ್ರಶಸ್ತಿಗಳೂ ಒಲಿಯುತ್ತವೆ. ಒಂದು ಕಡೆ, ಸಿನಿಮಾದ ಪಾತ್ರವನ್ನೇ ನಿಜ ಜೀವನದಲ್ಲಿ ನಿರ್ವಹಿಸಿದ್ದಕ್ಕಾಗಿ ಸರಕಾರ ಕೇಸು ದಾಖಲಿಸುವಾಗ, ಇನ್ನೊಂದು ಕಡೆ ಅದೇ ಸರಕಾರ ಅಂಥ ಸಿನಿಮಾವನ್ನು ನಿರ್ಮಿಸಿದ್ದಕ್ಕಾಗಿ ಬಹುಮಾನ ಕೊಟ್ಟು ಪುರಸ್ಕರಿಸುತ್ತದೆ. ಯಾಕಿಂಥ ದ್ವಂದ್ವಗಳು?
    ಕೇವಲ ಸಿನಿಮಾಗಳು, ಧಾರಾವಾಹಿಗಳು ಎಂದಲ್ಲ, ನಮ್ಮ ಒಟ್ಟು ಬದುಕುವ ವಿಧಾನವೇ ಆಧುನಿಕತೆಯ ಕೈಯಲ್ಲಿ ಹೈಜಾಕ್ ಆಗಿಬಿಟ್ಟಿದೆ. ಶಾಲೆ, ಕಾಲೇಜು, ಮಾರುಕಟ್ಟೆ, ಮದುವೆ, ಕ್ರೀಡೆ.. ಎಲ್ಲದರಲ್ಲೂ ಅತಿ ಅನ್ನುವಷ್ಟು ಮುಕ್ತತೆ ಇದೆ. ಹೆಣ್ಣು-ಗಂಡು ನಡುವಿನ ಸಹಜ ಅಂತರವು ಕಡಿಮೆಯಾಗುತ್ತಾ ಬರುತ್ತಿದೆ. ಹೀಗಿರುವಾಗ ಪರಸ್ಪರ ಆಕರ್ಷಣೆಗೆ ಒಳಗಾಗುವ ಹೆಣ್ಣು ಮತ್ತು ಗಂಡನ್ನಷ್ಟೇ ಅಪರಾಧಿಯಾಗಿ ಬಿಂಬಿಸುವುದಕ್ಕೆ ಯಾವ ಅರ್ಥವೂ ಇಲ್ಲ. ಅದು ಆ ಮಟ್ಟಕ್ಕೆ ಬೆಳೆಯುವುದರಲ್ಲಿ ನಮ್ಮೆಲ್ಲರ ಪಾತ್ರ ಇದೆ. ಈ ಸತ್ಯವನ್ನು ಒಪ್ಪಿಕೊಳ್ಳದ ಹೊರತು ಬರೇ ಕೇಸು ಜಡಿಯುವುದರಿಂದಲೋ ಶಾಪ ಹಾಕುವುದರಿಂದಲೋ ಸಮಸ್ಯೆಗೆ ಪರಿಹಾರ ಸಿಗಲಾರದು. ಹದಿಹರೆಯ ಎಂಬುದು ಕುತೂಹಲದ ವಯಸ್ಸು. ಈ ಕುತೂಹಲವನ್ನು ನೈತಿಕ ಪಾಠಗಳ ಮೂಲಕ ತಣಿಸುವ, ಅದಕ್ಕೆ ಪೂರಕವಾದ ವಾತಾವರಣವನ್ನು ಬೆಳೆಸುವ ಜವಾಬ್ದಾರಿ ಎಲ್ಲ ವಯಸ್ಕರ ಮೇಲಿದೆ. ಅವರ ಆಲೋಚನೆಗಳನ್ನು ಸಮಾಜಮುಖಿಗೊಳಿಸಬೇಕು. ಅದಕ್ಕೆ ಯೋಗ್ಯವಾದ ತಾಣಗಳಾಗಿ ಶಾಲೆ, ಕಾಲೇಜುಗಳನ್ನು ಮಾರ್ಪಡಿಸಬೇಕು. ಯುವ ಸಮೂಹದ ಮನಸ್ಸನ್ನು ಪ್ರಚೋದಿಸುವ ಯಾವುದೂ ಸಿನಿಮಾ, ಧಾರಾವಾಹಿಗಳ ಹೆಸರಲ್ಲಿ ಬಿಡುಗಡೆಗೊಳ್ಳದಂತೆ ನೋಡಿಕೊಳ್ಳಬೇಕು. ಮುಖ್ಯವಾಗಿ ಹದಿಹರೆಯದ ಮಕ್ಕಳ ಮನಸ್ಸನ್ನು ಅರಿಯುವ ಪ್ರಯತ್ನವನ್ನು  ಮನೆಯ ಹಿರಿಯರು ಮಾಡಬೇಕು. ಅವರು ತಮ್ಮ ಎಲ್ಲವನ್ನೂ ತಾಯಿಯಲ್ಲೋ ತಂದೆಯಲ್ಲೋ ಅಥವಾ ಹಿರಿಯರಲ್ಲೋ ಹಂಚಿಕೊಳ್ಳುವಂತಹ ವಾತಾವರಣವನ್ನು ಮನೆಯಲ್ಲಿ ಬೆಳೆಸಬೇಕು. ಆಗಾಗ ಹಿತ ವಚನಗಳನ್ನು ಹೇಳುತ್ತಾ, ಧಾರ್ಮಿಕ ಮೌಲ್ಯಗಳನ್ನು ನೆನಪಿಸುತ್ತಾ ತಿದ್ದುವ ಪ್ರಯತ್ನ ಮಾಡುತ್ತಲಿರಬೇಕು. ನಾವು ನಿಮ್ಮ ಹಿತಾಕಾಂಕ್ಷಿಗಳು ಅನ್ನುವ ಸೂಚನೆಯೊಂದು ಪ್ರತಿ ಸಂದರ್ಭದಲ್ಲೂ ಹೆತ್ತವರಿಂದ ದಾಟುತ್ತಲಿರಬೇಕು..
ಏನೇ ಆಗಲಿ, ಯುವ ಸಮೂಹಕ್ಕೆ ಮನರಂಜನೆಯ ಹೆಸರಲ್ಲಿ ಹಿರಿಯರಾದ ನಾವು ಕೊಡುತ್ತಿರುವುದು ವಿಷವನ್ನೇ. ಆ ವಿಷದ ಪ್ರಭಾವಕ್ಕೆ ಮಕ್ಕಳು ಒಳಗಾದರೆ ಅದಕ್ಕಾಗಿ ಕೇಸು ಜಡಿಯಬೇಕಾದುದು ಅವರ ಮೇಲಷ್ಟೇ ಅಲ್ಲ, ಅದನ್ನು ಕೊಟ್ಟವರ ಮೇಲೂ ಕೇಸು ಹಾಕಬೇಕು. ಆಗ ಮಾತ್ರ ವಿಷ ತಯಾರಿಸುವವರು ಎಚ್ಚೆತ್ತುಕೊಳ್ಳುತ್ತಾರೆ..

Monday, 25 June 2012

'ಆನೆಯ' ಎದುರು ಹೋರಾಡಿ ಗೆದ್ದ 'ಆಡಿನ ಮರಿ'..

`ಈಜಿಪ್ಟ್ ನ  ಹುಸ್ನಿ ಮುಬಾರಕ್ ರಿಗೆ ತೀವ್ರ ಮಟ್ಟದ ಮೆದುಳು ಆಘಾತವಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆಯೆಂದು’ ಜೂನ್ 20ರಂದು ಮಾಧ್ಯಮಗಳು ಸುದ್ದಿ ಪ್ರಕಟಿಸಿದ್ದುವು. ಅದಾಗಿ ಎರಡು ದಿನಗಳ ಬಳಿಕ, ಮುಸ್ಲಿಮ್ ಬ್ರದರ್ ಹುಡ್ ನ  ಮುಹಮ್ಮದ್ ಮುರ್ಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಗಳಿಸಿದ್ದಾರೆಂದು ಈಜಿಪ್ಟ್ ನ ಚುನಾವಣಾ ಮಂಡಳಿ ಘೋಷಿಸಿತು. ನಿಜವಾಗಿ, ಈ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಅಹ್ಮದ್  ಶಫೀಕ್ ಗೆಲ್ಲಲಿ ಎಂದು ಆಸೆ ಪಟ್ಟದ್ದು ಬರೇ ಮುಬಾರಕೋ ಅವರ ಪತ್ನಿ ಸುಝಾನ್ನೆಯೋ ಅಥವಾ ಅವರ ಮಕ್ಕಳೋ ಮಾತ್ರ ಆಗಿರಲಿಲ್ಲ. ಅವರಿಗೆ ಓಟು ಹಾಕಿದವರಿಗಿಂತಲೂ ಹೆಚ್ಚು ಅವರ ಗೆಲುವಿನ ಅಗತ್ಯವಿದ್ದುದು ಸೇನಾಪಡೆಯ ಸರ್ವೋಚ್ಚ ನ್ಯಾಯಮಂಡಳಿಗೆ, ಅಧಿಕಾರಶಾಹಿಗೆ; ಅಮೇರಿಕ, ಇಸ್ರೇಲ್, ಬ್ರಿಟನ್ ಗೆ . ಆದ್ದರಿಂದಲೇ ಜೂನ್ 21ರಂದು ಘೋಷಣೆಯಾಗಬೇಕಿದ್ದ ಚುನಾವಣಾ ಫಲಿತಾಂಶವನ್ನು ತಡೆ ಹಿಡಿದ ನ್ಯಾಯಮಂಡಳಿ ಜನರ ನಾಡಿಮಿಡಿತವನ್ನು ಪರೀಕ್ಷಿಸಿತು. ಇದನ್ನು ಪ್ರತಿಭಟಿಸಿ ತಹ್ರೀರ್ ಸ್ಕ್ವಾರ್ ನಲ್ಲಿ ಜನರು ಮತ್ತೆ ಸೇರತೊಡಗಿದರು. ಇದಕ್ಕೆ ಪ್ರತಿತಂತ್ರವನ್ನು ಹೆಣೆದ ನ್ಯಾಯಮಂಡಲಿ , ಫಲಿತಾಂಶ ಪ್ರಕಟಣೆಗೆ ಅನುಮತಿ ಕೊಡುವುದಕ್ಕಿಂತಲೂ ಮೊದಲು ಕೆಲವು ಕ್ರೂರ ನಿಯಮಗಳನ್ನು ಜಾರಿಗೊಳಿಸಿತು..
      1. ಹೊಸ ಸರಕಾರವು ರಚಿಸುವ ಸಂವಿಧಾನದ ಮೇಲೆ ಸೇನಾ ನ್ಯಾಯ ಮಂಡಳಿಗೆ ವೀಟೋ ಚಲಾಯಿಸುವ ಅಧಿಕಾರ.
 2. ಆಂತರಿಕ ಬಿಕ್ಕಟ್ಟು ಉದ್ಭವಿಸಿದೆ ಎಂದು ಸೇನೆಗೆ ಮನವರಿಕೆಯಾದರೆ (ಸರಕಾರ ಒಪ್ಪಬೇಕೆಂದಿಲ್ಲ) ಸೇನಾ ನಿಯೋಜನೆ ಮತ್ತು ಜನರನ್ನು ಬಂಧಿಸುವ ಅಧಿಕಾರ.
3. ಸೇನಾ ಪಡೆಯ ಮೇಲೆ ನಿಯಂತ್ರಣದ ಅಧಿಕಾರ.
4. ಯುದ್ಧ ಘೋಷಣೆಯ ಮೇಲೆ ವೀಟೋ ಅಧಿಕಾರ..
      ಇದೀಗ ಮುರ್ಸಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದರೂ ಅವರನ್ನು ಯಾವ ಸಂದರ್ಭದಲ್ಲೂ ಮುಖಭಂಗಕ್ಕೆ ಒಳಗಾಗಿಸುವ ಅಧಿಕಾರವನ್ನು ಮುಬಾರಕ್ ರ  ಸೇನಾ ನ್ಯಾಯ ಮಂಡಳಿ ತಯಾರಿಸಿ ಇಟ್ಟು ಕೊಂಡಿದೆ. ಒಂದು ರೀತಿಯಲ್ಲಿ, ಮುಬಾರಕ್ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಉಸಿರಾಡುತ್ತಿದ್ದರೂ ಅವರ ಮನಸ್ಥಿತಿಯನ್ನೇ ಹೊಂದಿರುವ ಮಂದಿ ಈಜಿಪ್ಟ್ ನ  ಸೇನೆಯಲ್ಲಿ, ನ್ಯಾಯ ಮಂಡಳಿಯಲ್ಲಿ, ಸರಕಾರಿ ಕಚೇರಿಗಳಲ್ಲಿ ಧಾರಾಳ ಇದ್ದಾರೆ. ಮುರ್ಸಿಗೆ 51% ಓಟು ಸಿಕ್ಕಿರುವಾಗ ಶಫೀಕ್ ಗೆ  48.3% ಓಟು ಸಿಕ್ಕಿರುವುದೇ ಇದಕ್ಕೆ ಪುರಾವೆ. ಈಜಿಪ್ಟ್ ನ  ಮಾಜಿ ಅಧ್ಯಕ್ಷ ಅನ್ವರ್ ಸಾದಾತ್ ರ  ಮೇಲೆ ಒತ್ತಡ ಹಾಕಿ ಇಸ್ರೇಲ್ ನ  ಪರವಾಗಿ ಕ್ಯಾಂಪ್ ಡೇವಿಡ್ ಒಪ್ಪಂದವನ್ನು ಮಾಡಿಸಿಕೊಂಡಿದ್ದ ಅಮೇರಿಕವು ಕಳೆದ 55 ವರ್ಷಗಳಿಂದಲೂ ಈಜಿಪ್ಟನ್ನು ಪರೋಕ್ಷವಾಗಿ ಆಳುತ್ತಿದೆ. ಈಜಿಪ್ಟ್ ನ  ಗಡಿಗಳು ಇಸ್ರೇಲ್ ನ  ಜೊತೆ ಹಂಚಿಕೊಂಡಿರುವುದರಿಂದ ಯಾವ ರೀತಿಯಿಂದಲೂ ಇಸ್ರೇಲನ್ನು, ಅದರ ಕ್ರೌರ್ಯವನ್ನು ಪ್ರಶ್ನಿಸುವ ಪಕ್ಷಗಳು ಈಜಿಪ್ಟ್ ನಲ್ಲಿ  ಅಧಿಕಾರಕ್ಕೆ ಬರುವುದನ್ನು ಅಮೇರಿಕ ಒಪ್ಪುವುದಕ್ಕೆ ಸಾಧ್ಯವೇ ಇಲ್ಲ. ಆದ್ದರಿಂದಲೇ ಟ್ಯುನೀಷ್ಯಾದ ಜೈನುಲ್  ಆಬಿದೀನ್ ರಂತೆ  ಮುಬಾರಕ್ ದೇಶ ಬಿಟ್ಟು ಪಲಾಯನ ಮಾಡಿಲ್ಲ. ಕ್ರಾಂತಿಯ ಸಂದರ್ಭದಲ್ಲಿ ಆದ 800ಕ್ಕಿಂತಲೂ ಅಧಿಕ ಮಂದಿಯ ಹತ್ಯೆಯ ಆರೋಪದಲ್ಲಿ ಅವರನ್ನು ಗಲ್ಲಿಗೇರಿಸಬೇಕೆಂದು ಜನರು ಬಲವಾಗಿ ಒತ್ತಾಯಿಸುತ್ತಿದ್ದರೂ ಸದ್ಯ ಅವರಿಗೆ ಆಗಿರುವುದು ಬರೇ ಜೀವಾವಧಿ. ಆದರೂ ಅವರು  ಜೈಲಲ್ಲಿಲ್ಲ. ಅತ್ಯಾಧುನಿಕ ಆಸ್ಪತ್ರೆಯಲ್ಲಿರುವ ಅವರನ್ನು ನೋಡಿ ಕೊಳ್ಳುವುದಕ್ಕೆ ಭ್ರಷ್ಟಾಚಾರದ ಆರೋಪವಿರುವ ಅವರ ಪತ್ನಿಯನ್ನೇ  ನೇಮಿಸಲಾಗಿದೆ. ಮಕ್ಕಳ ಮೇಲಿದ್ದ ಆರೋಪವನ್ನು ವಜಾಗೊಳಿಸಲಾಗಿದೆ. ಇಷ್ಟಕ್ಕೂ ಈಜಿಪ್ಟ್ ಕ್ರಾಂತಿಯ ಗುರಿ ಇದ್ದುದೇ ಮುಬಾರಕ್ ಆಡಳಿತವನ್ನು ಕೊನೆಗೊಳಿಸುವುದು. ಹೀಗಿರುವಾಗ ಮುಬಾರಕ್ ರ  ಸರ್ವಾಧಿಕಾರವನ್ನು ನೂರು ಶೇಕಡಾ ಬೆಂಬಲಿಸುತ್ತಿದ್ದ ಪ್ರಧಾನಿ ಅಹ್ಮದ್ ಶಫೀಕ್ ರು  ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಯಾದದ್ದಾದರೂ ಹೇಗೆ? ಅವರ ಉಮೇದುವಾರಿಕೆಯು ಕ್ರಾಂತಿಯ ಉದ್ದೇಶವನ್ನೇ ಅವಮಾನಿಸಿದಂತೆ ಆಗಲಿಲ್ಲವೇ? ಈ ಪ್ರಶ್ನೆಯನ್ನು ಚುನಾವಣೆಯಲ್ಲಿ ಭಾಗವಹಿಸಿದ್ದ ರಾಜಕೀಯ ಪಕ್ಷಗಳೂ ಎತ್ತಿದ್ದುವು. ಆದರೆ ಸೇನಾ ನ್ಯಾಯ ಮಂಡಳಿ ಶಫೀಕ್ ರನ್ನು  ಬೆಂಬಲಿಸಿತು. ಮಾತ್ರವಲ್ಲ, ಮುಸ್ಲಿಮ್ ಬ್ರದರ್ ಹುಡ್ ಬಹುಮತ ಪಡೆದಿದ್ದ ಪಾರ್ಲಿಮೆಂಟ್ ಚುನಾವಣೆಯನ್ನೇ ರದ್ದುಪಡಿಸಿತು.
          `ಬಿಟ್ವೀನ್ ಎ ರಾಕ್ ಆಂಡ್  ಎ ಹಾರ್ಡ್ ಪ್ಲೇಸ್’ ಎಂದು ದಿ ಹಿಂದೂ ಪತ್ರಿಕೆ ಜೂನ್ 25ರಂದು ಸಂಪಾದಕೀಯ ಬರೆದಿರುವುದೂ ಇದೇ ಕಾರಣದಿಂದ. ಬ್ರದರ್ ಹುಡ್ ನ  ಎದುರು ಸೇನಾ ನ್ಯಾಯ ಮಂಡಳಿ, ಅಮೇರಿಕ, ಇಸ್ರೇಲ್ ಎಂಬ ಬೃಹತ್ ಬಂಡೆಯೇ ಇದೆ. 80 ವರ್ಷದ ಇತಿಹಾಸವಿರುವ ಬ್ರದರ್ ಹುಡ್ ಗೆ ಈ ಬಂಡೆ ಪರಿಚಿತವೇ ಆಗಿದ್ದರೂ ಮುರ್ಸಿ ಅಧ್ಯಕ್ಷರಾದ ಕೂಡಲೇ ಈ ಬಂಡೆಯನ್ನು ಒಂದೇ ಏಟಿಗೆ ಪುಡಿ ಮಾಡುತ್ತಾರೆ ಎಂದು ನಂಬುವುದಕ್ಕೆ ಸಾಧ್ಯವಿಲ್ಲ. ಮುರ್ಸಿ ಕೈಗೊಳ್ಳುವ ಯಾವುದೇ ತೀರ್ಮಾನವನ್ನು ಸೇನಾ ನ್ಯಾಯಾಲಯ  ವೀಟೋ ಪ್ರಯೋಗಿಸಿ ರದ್ದುಪಡಿಸುವ ಸಾಧ್ಯತೆ ಯಾವ ಸಂದರ್ಭದಲ್ಲೂ ಇದೆ. ಆಂತರಿಕ ಗಲಭೆಯನ್ನು ಸ್ವಯಂ ಹುಟ್ಟು ಹಾಕಿ, ಅಧಿಕಾರವನ್ನೇ ಕೈವಶ ಮಾಡಿಕೊಳ್ಳುವುದನ್ನೂ ತಿರಸ್ಕರಿಸುವ ಹಾಗಿಲ್ಲ. ಹೊಸದಾಗಿ ನಡೆಯಲಿರುವ ಚುನಾವಣೆಯಲ್ಲಿ ಮುಬಾರಕ್ ಕಾಲದ ಅಧಿಕಾರಿಗಳು, ಬೆಂಬಲಿಗರೆಲ್ಲ ಪಾರ್ಲಿಮೆಂಟ್ ಪ್ರವೇಶಿಸುವುದಕ್ಕೆ ಪ್ರಯತ್ನಿಸುವ ಸಾಧ್ಯತೆಯೂ ಇದೆ.
ಏನೇ ಆಗಲಿ, ಸುಳ್ಳು, ಕ್ರೌರ್ಯ, ದಬ್ಬಾಳಿಕೆಗೆ ದೀರ್ಘ ಆಯುಷ್ಯ ಇರುವುದಿಲ್ಲ ಅನ್ನುವುದನ್ನು ಮುರ್ಸಿ ಗೆಲುವು ಸಾಬೀತುಪಡಿಸಿದೆ. ನಿಜವಾಗಿ ಅವರು ಸ್ಪರ್ಧಿಸಿದ್ದುದು ಶಫೀಕ್ ಎಂಬ ಬರೇ ಮಾಜಿ ಪ್ರಧಾನಿಯ ವಿರುದ್ಧವಷ್ಟೇ ಆಗಿರಲಿಲ್ಲ. ಬದಲು, ಮುಬಾರಕ್ ಎಂಬ ಸರ್ವಾಧಿಕಾರಿಯ ವಿರುದ್ಧ, 40 ವರ್ಷಗಳ ವರೆಗೆ ಈಜಿಪ್ಟ್ ನ  ಶಾಲೆ, ಕಾಲೇಜು, ಪತ್ರಿಕೆ, ಟಿ.ವಿ.ಗಳ ಸಹಿತ ಲಭ್ಯ ಇರುವ ಎಲ್ಲ ಮಾಧ್ಯಮಗಳ ಮೂಲಕ ಹರಡಿಬಿಟ್ಟ ಸುಳ್ಳಿನ ವಿರುದ್ಧ, ಸರ್ವೋಚ್ಚ ನ್ಯಾಯ ಮಂಡಳಿಯ ವಿರುದ್ಧ, ವಿದೇಶಿ ರಾಷ್ಟ್ರಗಳ ವಿರುದ್ಧ.. ಆದ್ದರಿಂದಲೇ ಮುರ್ಸಿಯ ಗೆಲುವನ್ನು ಗುಣಾಕಾರ-ಭಾಗಾಕಾರ ಮಾಡಿ, ಅತ್ಯಲ್ಪ ಅಂತರದ್ದೆಂದು ವ್ಯಾಖ್ಯಾ ನಿಸುವುದು ಖಂಡಿತ ತಪ್ಪು. ಆನೆ ಮತ್ತು ಆಡಿನ ಮರಿಯ ನಡುವಿನ ಹೋರಾಟವನ್ನು ಬರೇ ಇಬ್ಬರು ವ್ಯಕ್ತಿಗಳ ನಡುವಿನ ಹೋರಾಟವಾಗಿ ಬಿಂಬಿಸಬೇಕಿಲ್ಲ. ಆಡಿನ ಮರಿಯ ಜೊತೆ ಇದ್ದದ್ದು ಪ್ರಬಲ ಸಿದ್ಧಾಂತ, ಪ್ರಾಮಾಣಿಕತೆ, ಸತ್ಯ ಮತ್ತು ದೇವಭಯ. ಆನೆಯ ಜೊತೆ ಇಲ್ಲದೆ ಇದ್ದದ್ದೂ ಇದುವೇ. ಆದ್ದರಿಂದ ಮುರ್ಸಿಯ ಗೆಲುವನ್ನು ಬ್ರದರ್ ಹುಡ್ ನ  ಗೆಲುವು ಎಂದಷ್ಟೇ ಅಲ್ಲ, ಅದು ಪ್ರತಿಪಾದಿಸುವ ಇಸ್ಲಾಮೀ  ಮೌಲ್ಯದ ಗೆಲುವೆಂದೂ ಹೇಳಬೇಕು. ಆ ಕಾರಣದಿಂದಲೇ ಅವರಿಗೆ ಅಭಿನಂದನೆ ಸಲ್ಲಬೇಕು.