Showing posts with label ಪ್ರಧಾನಿಯವರೇ. Show all posts
Showing posts with label ಪ್ರಧಾನಿಯವರೇ. Show all posts

Saturday, 26 September 2015

ಪ್ರಧಾನಿಯವರೇ, ಆಂಡರ್ಸನ್‍ಗಾಗಿ ಮಾತೆತ್ತಿದ ನೀವು ರಾಯಭಾರಿಯನ್ನು ಕಳುಹಿಸಿಕೊಟ್ಟದ್ದೇಕೆ?

     ಕೇಂದ್ರ ಸರಕಾರದ ಕಾರ್ಯಶುದ್ಧಿಯ ಮೇಲೆ ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿ ಸೌದಿ ರಾಜತಾಂತ್ರಿಕ ಅಧಿಕಾರಿಯೋರ್ವರು ಭಾರತ ಬಿಟ್ಟು ಹೊರಟು ಹೋಗಿದ್ದಾರೆ. ಗುರ್ಗಾಂವ್‍ನಲ್ಲಿರುವ ಸೌದಿ ರಾಜತಾಂತ್ರಿಕ ಕಚೇರಿಯಲ್ಲಿ ಕೆಲಸಕ್ಕಿದ್ದ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯವೆಸಗಿದ ಆರೋಪವು ಮಜೀದ್ ಹಸನ್ ಅಶೂರ್ ಎಂಬ ಈ ಅಧಿಕಾರಿಯ ಮೇಲಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಈ ಆರೋಪಗಳು ಸಾಬೀತುಗೊಂಡಿರುವ ವರದಿಯೂ ಬಂದಿದೆ. ಇಷ್ಟಿದ್ದೂ, ಯಾವೊಂದು ತನಿಖೆಗೂ ಒಳಪಡಿಸದೇ ಈ ಅಧಿಕಾರಿಯನ್ನು ದೇಶಬಿಟ್ಟು ತೆರಳಲು ಕೇಂದ್ರ ಸರಕಾರ ಅನುವು ಮಾಡಿಕೊಟ್ಟದ್ದು ಹೇಗೆ ಮತ್ತು ಯಾಕೆ? ಭಾರತ ಮತ್ತು ಸೌದಿ ಸರಕಾರಗಳ ನಡುವೆ ಈ ಕುರಿತಂತೆ ಮಾತುಕತೆಗಳು ನಡೆದಿವೆಯೇ? ಅದರ ವಿವರಗಳು ಏನೆಲ್ಲ? ಗೃಹಸಚಿವಾಲಯ ಯಾಕೆ ಯಾವ ಮಾಹಿತಿಯನ್ನೂ ಸಾರ್ವಜನಿಕರಿಗೆ ಬಿಟ್ಟುಕೊಡುತ್ತಿಲ್ಲ? ಆರ್ಥಿಕ ಲೆಕ್ಕಾಚಾರಗಳು ಇದರ ಹಿಂದೆ ಕೆಲಸ ಮಾಡಿವೆಯೇ? ಜಿನೇವಾ ಒಡಂಬಡಿಕೆಯ ಕಟ್ಟಳೆಗಳೇನೇ ಇರಲಿ, ಮಹಿಳೆಯರ ಬಗ್ಗೆ ಅಪಾರ ಕಕ್ಕುಲಾತಿಯನ್ನು ತೋರ್ಪಡಿಸುವ ಸರಕಾರವೊಂದು ಈ ಮಟ್ಟದಲ್ಲಿ ತಗ್ಗಿ-ಬಗ್ಗಿ ನಡೆದದ್ದೇಕೆ? ಕೇರಳದ ಮೀನುಗಾರರನ್ನು ಹತ್ಯೆಗೈದ ಇಟಲಿಯ ನಾವಿಕರ ವಿಷಯದಲ್ಲಿ ಮನಮೋಹನ್ ಸಿಂಗ್ ಸರಕಾರವನ್ನು ಈ ಹಿಂದೆ ಬಿಜೆಪಿ ತೀವ್ರ ತರಾಟೆಗೆ ಎತ್ತಿಕೊಂಡಿತ್ತು. ಆ ನಾವಿಕರನ್ನು ಇಟಲಿಗೆ ಬಿಟ್ಟು ಕೊಡಬಾರದೆಂದು ಪ್ರಬಲವಾಗಿ ವಾದಿಸಿತ್ತು. ಮನಮೋಹನ್ ಸಿಂಗ್ ಸರಕಾರವು ಈ ಕುರಿತಂತೆ ಮೃದು ನೀತಿಯನ್ನು ಹೊಂದಿದೆ ಎಂದು ಬಾರಿಬಾರಿಗೂ ಟೀಕಿಸಿತ್ತು. ಭೋಪಾಲ್ ಅನಿಲ ದುರಂತದ ಆರೋಪಿ ವಾರೆನ್ ಆಂಡರ್ಸನ್‍ನನ್ನು ಯಾವ ತನಿಖೆಗೂ ಒಳಪಡಿಸದೇ ಅಮೇರಿಕಕ್ಕೆ ತೆರಳಲು ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಪಕ್ಷವನ್ನು ಅದು ಈಗಲೂ ಟೀಕಿಸುತ್ತಿದೆ. ಪಾಕಿಸ್ತಾನವು ಭಾರತೀಯ ಸೈನಿಕರ ಒಂದು ತಲೆಯನ್ನು ಉರುಳಿಸಿದರೆ ಪಾಕ್‍ನ ಹತ್ತು ತಲೆಯನ್ನು ಉರುಳಿಸುವೆವು ಎಂದು ಸಾರಿದ ಮತ್ತು ಸಾರುತ್ತಿರುವ ಪಕ್ಷ ಬಿಜೆಪಿ. ಇಂಥ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್‍ನಂತೆಯೇ ಆಡುತ್ತಿರುವುದೇಕೆ? ಅತ್ಯಾಚಾರದ ವಿರುದ್ಧ ಈ ದೇಶದಲ್ಲಿ 3 ವರ್ಷಗಳ ಹಿಂದೆ ದೊಡ್ಡದೊಂದು ಚಳವಳಿ ನಡೆದಿದೆ. ಆ ಚಳವಳಿ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ, ಅತ್ಯಾಚಾರದ ವಿರುದ್ಧ ಪ್ರಬಲ ಕಾನೂನನ್ನೇ ರಚಿಸುವಷ್ಟು. ಆ ಬಳಿಕ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗಳ ಸರಣಿ ಘೋಷಣೆಗಳು ನ್ಯಾಯಾಲಯಗಳಿಂದ ಪ್ರಕಟವಾದುವು. ಬಿಜೆಪಿಯನ್ನು ಬೆಂಬಲಿಸುವ ಸಂಘಪರಿವಾರವಂತೂ ಅತ್ಯಾಚಾರ ಬಿಡಿ, ಹೆಣ್ಣು-ಗಂಡು ಪರಸ್ಪರ ಮಾತಾಡುವುದನ್ನೇ ಅಪರಾಧ ಎಂದು ಹೇಳುವಷ್ಟು ನಿಷ್ಠುರತೆಯನ್ನು ಪ್ರದರ್ಶಿಸುತ್ತಿದೆ. ಹೆಣ್ಣನ್ನು ರಕ್ಷಿಸುವ ಹೆಸರಲ್ಲಿ ಥಳಿತ, ಹಲ್ಲೆ, ಹತ್ಯೆಗಳಂತಹ ಕೃತ್ಯಕ್ಕೂ ಕೈ ಹಾಕುತ್ತಿದೆ. ಹೀಗಿರುವಾಗ, ಕೇಂದ್ರ ಸರಕಾರದ ಈ ನಡೆಗೆ ಏನೆನ್ನಬೇಕು? ಹಾಗಾದರೆ ಹೆಣ್ಣಿನ ಬಗ್ಗೆ ಬಿಜೆಪಿ ಮತ್ತು ಅದರ ಪರಿವಾರಗಳು ವ್ಯಕ್ತಪಡಿಸುತ್ತಿರುವ ಗೌರವಾದರದ ಮಾತುಗಳು ನಕಲಿಯೇ? ಕನಿಷ್ಠ ಅಮೇರಿಕದಲ್ಲಿ ಭಾರತದ ರಾಜತಾಂತ್ರಿಕೆಯಾಗಿದ್ದ ದೇವಯಾನಿ ಖೋಬ್ರಗದೆಯವರ ಬಗ್ಗೆ ಅಮೇರಿಕ ವರ್ಷಗಳ ಹಿಂದೆ ನಡೆದುಕೊಂಡಷ್ಟಾದರೂ ನಿಷ್ಠುರತೆಯನ್ನು ಭಾರತಕ್ಕೆ ತೋರಬಹುದಿಲ್ಲವೇ? ರಾಯಭಾರ ಕಚೇರಿಯ ಅಧಿಕಾರಿಯಾಗಿದ್ದರೂ ಖೋಬ್ರಗದೆಯವರನ್ನು ಅಮೇರಿಕ ಸುಲಭದಲ್ಲಿ ಬಿಟ್ಟುಕೊಡಲಿಲ್ಲ. ಜಿನೇವಾ ಒಡಂಬಡಿಕೆಯಲ್ಲಿ ಅಷ್ಟರ ಮಟ್ಟಿಗೆ ಅವಕಾಶ ಇದೆಯೆಂದಾದರೆ ಮೋದಿಯವರು ಅದನ್ನೇಕೆ ಬಳಸಿಕೊಳ್ಳಲಿಲ್ಲ? ಹಾಗಂತ, ಇದನ್ನು ಕೇಂದ್ರದ ರಾಜತಾಂತ್ರಿಕ ವೈಫಲ್ಯ ಎಂಬ ಷರಾದೊಂದಿಗೆ ಮುಚ್ಚಿಹಾಕಬಹುದು. ದಿ ಹಿಂದೂ ಸಹಿತ ಹೆಚ್ಚಿನೆಲ್ಲಾ ಪತ್ರಿಕೆಗಳು ತಮ್ಮ ಸಂಪಾದಕೀಯಕ್ಕೆ ಕೊಟ್ಟ ಶೀರ್ಷಿಕೆಯೂ ಇದುವೇ. ಆದರೆ ವಾರನ್ ಆಂಡರ್ಸನ್‍, ಇಟಲಿಯ ನಾವಿಕರು ಅಥವಾ ಖೋಬ್ರಗದೆಯ ವಿಷಯದಲ್ಲಿ ಧಾರಾಳ ಮಾತಾಡಿದ್ದ ಬಿಜೆಪಿಯು ಸೌದಿ ಅಧಿಕಾರಿಯ ಕುರಿತಂತೆ ಒಂದು ವಾಕ್ಯದ ಸ್ಪಷ್ಟೀಕರಣವನ್ನೂ ಕೊಡದಷ್ಟು ಮೌನಿಯಾಗಿರುವುದೇಕೆ? ಈ ಮೌನದ ಹಿಂದಿರುವುದು ಅಸಹಾಯಕೆಯೋ ಅನಿವಾರ್ಯತೆಯೋ?
  ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮನಮೋಹನ್ ಸಿಂಗ್‍ರನ್ನು ದುರ್ಬಲ ಪ್ರಧಾನಿ ಎಂದು ಕರೆದಿದ್ದ ಬಿಜೆಪಿಯು ಆಗ ಸ್ವಯಂ ತನಗೆ ತಾನೇ ಪೌರುಷದ ಇಮೇಜನ್ನು ಕೊಟ್ಟುಕೊಂಡಿತ್ತು. ಭಾರತದ ಒಂದು ತಲೆಗೆ ಪಾಕಿಸ್ತಾನದ ಹತ್ತು ತಲೆಗಳ ಸ್ಲೋಗನ್ ಉದುರಿದ್ದೂ ಆವಾಗಲೇ. ಮನಮೋಹನ್ ಸಿಂಗ್‍ರ ಮೃದುತನದ ಎದುರು ಮೋದಿಯವರು ಖಡಕ್ ವ್ಯಕ್ತಿಯಾಗಿ ಕಂಗೊಳಿಸಿದ್ದರು. ಅವರು ಸಕಲ ಸಮಸ್ಯೆಗಳಿಗೂ ಪರಿಹಾರವಾಗಿ ಕಂಡರು. ಅವರ ಮಾತುಗಾರಿಕೆ, ಬಾಡಿ ಲಾಂಗ್ವೇಜ್, ಪ್ರಾಸಬದ್ಧ ಪದಗಳು ಮತ್ತು ಮಾತಿನ ಅಬ್ಬರಗಳೆಲ್ಲ ನಿಷ್ಠುರತೆಯ ಸಂಕೇತಗಳಾಗಿ ಕಂಡವು. ಮುಸ್ಲಿಮ್ ಧರ್ಮಗುರುಗಳು ನೀಡಿದ ಟೋಪಿಯನ್ನು ನಿರಾಕರಿಸಿದ್ದು, ‘ಹಮ್ ಪಾಂಚ್, ಹಮಾರೆ ಪಚ್ಚೀಸ್’ ಎಂದು ಹೇಳಿದ್ದು, ತಾನು ‘ಸ್ವಯಂ ಸೇವಕ' ಎಂದು ಬಹಿರಂಗವಾಗಿಯೇ ಘೋಷಿಸಿದ್ದು.. ಎಲ್ಲವೂ ಅವರ ಸುತ್ತ ನಿಷ್ಠುರತೆಯ ಪ್ರಭಾವಳಿಯೊಂದನ್ನು ಸೃಷ್ಟಿಸಿತ್ತು. ‘ಮೋದಿಯವರು ಪ್ರಧಾನಿಯಾದರೆ ಪಾಕ್‍ಗೆ ಅಣುಬಾಂಬ್ ಹಾಕುತ್ತಾರೆ..' ಎಂದು ಅವರ ಅನುಯಾಯಿಗಳು ಹೇಳುವಷ್ಟು ಅವರ ಗಡಸು ಇಮೇಜು ಜನಪ್ರಿಯವಾಯಿತು. ಆದರೆ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯಾದ ಬಳಿಕ ಪೌರುಷದ ಪ್ರಭಾವಳಿ ನಿಧಾನಕ್ಕೆ ದೂರ ಸರಿಯುತ್ತಿದೆ. ಅವರು ಇನ್ನೋರ್ವ ಮನಮೋಹನ್ ಸಿಂಗ್ ಆಗುತ್ತಿದ್ದಾರೆಯೇ ಹೊರತು ನಿಷ್ಠುರ ನರೇಂದ್ರ ಮೋದಿಯಲ್ಲ ಎಂಬುದು ದಿನೇ ದಿನೇ ಸ್ಪಷ್ಟವಾಗುತ್ತಿದೆ. ಅವರು ಪ್ರಧಾನಿಯಾದ ಒಂದು ವರ್ಷದಲ್ಲಿ ಪಾಕ್‍ನಿಂದ ಗಡಿ ಉಲ್ಲಂಘನೆಯ ಪ್ರಕರಣಗಳು ಈ ಹಿಂದೆಂದೂ ಆಗದಷ್ಟು ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆ. ಪಾಕ್ ಸೈನಿಕರ ಗುಂಡಿನ ದಾಳಿಯಿಂದ ಭಾರತೀಯ ಸೈನಿಕರು ಆಗಾಗ ಸಾವನ್ನಪ್ಪುತ್ತಲೂ ಇದ್ದಾರೆ. ಮಾಧ್ಯಮಗಳು ಈ ಕುರಿತಂತೆ ಅಂಕಿ-ಅಂಶಗಳನ್ನೂ ಬಹಿರಂಗಪಡಿಸುತ್ತಲೂ ಇದೆ. ಆದರೆ ಮನಮೋಹನ್ ಸಿಂಗ್‍ರನ್ನು ಇದೇ ಗಡಿ ಪ್ರಶ್ನೆಯನ್ನು ಮುಂದಿಟ್ಟು ನಿಷ್ಕ್ರಿಯ ಸರಕಾರ ಎಂದು ಕರೆದಿದ್ದ ಬಿಜೆಪಿಯು ಇದೀಗ ಅದೇ ನಿಷ್ಕ್ರಿಯ ಪ್ರತಿಕ್ರಿಯೆಯನ್ನಷ್ಟೇ ತೋರುತ್ತಿದೆ. ಪೌರುಷದ ಮಾತುಗಳಾಚೆಗೆ ಪ್ರಾಯೋಗಿಕವಾಗಿ ಅದು ಏನನ್ನೂ ಮಾಡುತ್ತಿಲ್ಲ. ಸೌದಿ ರಾಜತಾಂತ್ರಿಕ ಪ್ರಕರಣವು ಇದಕ್ಕೆ ಇನ್ನೊಂದು ಉದಾಹರಣೆ ಅಷ್ಟೇ.
  ಹಾಗಂತ, ಸಾಮಾನ್ಯ ನಾಗರಿಕರನ್ನು ಹಿಡಿದು ಜೈಲಿಗಟ್ಟುವಂತೆ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಶಿಕ್ಷಿಸಲು ಸಾಧ್ಯವಿಲ್ಲ ನಿಜ. ಜಿನೇವಾ ಒಡಂಬಡಿಕೆಯ ಪ್ರಕಾರವೇ ‘ರಾಜತಾಂತ್ರಿಕ' ಪ್ರಕರಣ ಗಳನ್ನು ಇತ್ಯರ್ಥಪಡಿಸಬೇಕಾಗುತ್ತದೆ. ಆದರೆ ಕದ್ದು ಮುಚ್ಚಿ ವಿಮಾನದಲ್ಲಿ ಕಳುಹಿಸಿಕೊಡುವಷ್ಟು ಜಿನೇವಾ ಒಡಂಬಡಿಕೆ ಕ್ರೂರವೇ? ಹಾಗಿದ್ದರೆ ದೇವಯಾನಿ ಖೋಬ್ರಗದೆ ಪ್ರಕರಣದಲ್ಲಿ ಅಮೇರಿಕ ಅಷ್ಟು ನಿಷ್ಠುರವಾಗಿ ನಡೆದುಕೊಂಡದ್ದು ಹೇಗೆ? ಅವರನ್ನು ಅಮೇರಿಕದ ಪೊಲೀಸರು ಕೈಕೋಳ ತೊಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತನಿಖೆಗೂ ಒಳಪಡಿಸಿದ್ದರು. ಆದರೆ ಮೋದಿಯವರ ಸರಕಾರವು ಕನಿಷ್ಠ ತನಿಖೆಗೂ ಒಳಪಡಿಸದೇ ರಹಸ್ಯವಾಗಿ ಸೌದಿ ರಾಜತಾಂತ್ರಿಕರನ್ನು ಕಳುಹಿಸಿಕೊಟ್ಟಿದೆ. ಇದು ಯಾವುದರ ಸೂಚನೆ? ಮೋದಿಯವರು ಮಾತಿನಲ್ಲಿ ಮಾತ್ರ ನಿಷ್ಠುರವೇ, ಕೃತಿಯಲ್ಲಿ ಅವರೂ ಮನಮೋಹನ್ ಸಿಂಗೇ ಆಗಿರುವರೇ?

Thursday, 18 June 2015

ಪ್ರಧಾನಿಯವರೇ, ಈ ಭಾವಚಿತ್ರವನ್ನೊಮ್ಮೆ ನೆನಪಿಸಿಕೊಳ್ಳುವಿರಾ?

    ಲೆಫ್ಟಿನೆಂಟ್ ಸೌರಭ್ ಕಾಲಿಯಾರ ಬಗ್ಗೆ ಈ ದೇಶದಲ್ಲಿ ಅತ್ಯಂತ ಹೆಚ್ಚು ಮಾತಾಡಿದ್ದು ಬಿಜೆಪಿ. ಕಾಲಿಯಾರ ಸುತ್ತ ಭಾವನಾತ್ಮಕ ಸನ್ನಿವೇಶವೊಂದನ್ನು ಅದು ಹುಟ್ಟು ಹಾಕಿತ್ತು. ಕಾಂಗ್ರೆಸ್ ಸರಕಾರದ ಪುಕ್ಕಲು ನೀತಿಯಿಂದಾಗಿ ಭಾರತೀಯ ಯೋಧರು ಪಾಕಿಸ್ತಾನದ ಕೈಯಲ್ಲಿ ಜೀವ ಕಳಕೊಳ್ಳುತ್ತಿದ್ದಾರೆ- ಎಂಬ ರೀತಿಯಲ್ಲಿ ಅದು ಮಾತಾಡಿತ್ತು. 1999ರ ಕಾರ್ಗಿಲ್ ಸಂಘರ್ಷದ ವೇಳೆ ಪಾಕಿಸ್ತಾನ ಸೆರೆ ಹಿಡಿದ ಐವರು ಯೋಧರಲ್ಲಿ ಕಾಲಿಯಾ ಕೂಡ ಒಬ್ಬರು. ಘಟನೆಯ ಮೂರು ವಾರಗಳ ಬಳಿಕ ಕಾಲಿಯಾರ ಜರ್ಝರಿತ ಮೃತದೇಹವನ್ನು ಪಾಕಿಸ್ತಾನ ಭಾರತಕ್ಕೆ ಒಪ್ಪಿಸಿತ್ತು. ಕಾಲಿಯಾ ಸೆರೆ ಸಿಕ್ಕಿಲ್ಲ ಮತ್ತು ಅವರು ವಾತಾವರಣದ ವೈಪರೀತ್ಯದಿಂದಾಗಿ ಸಾವಿಗೀಡಾಗಿದ್ದಾರೆ ಎಂದು ಪಾಕಿಸ್ತಾನ ವಾದಿಸಿದರೂ ಭಾರತ ಅದನ್ನು ಒಪ್ಪಿಕೊಂಡಿರಲಿಲ್ಲ. ಮೃತದೇಹದ ಮೇಲಾದ ಗಾಯಗಳು ಅವರನ್ನು ಚಿತ್ರಹಿಂಸೆಗೊಳಪಡಿಸಿ ಹತ್ಯೆಗೈಯಲಾಗಿದೆಯೆಂಬುದನ್ನು ಸಾಬೀತು ಪಡಿಸುವುದಾಗಿ ಭಾರತ ವಾದಿಸಿತು. ಈ ಸಂದರ್ಭದಲ್ಲಿ ಬಿಜೆಪಿ (NDA) ಈ ದೇಶವನ್ನು ಆಳುತ್ತಿತ್ತು. ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿಗೆ ಈ ಬಗ್ಗೆ ನೋಟೀಸು ಕಳುಹಿಸಲಾಯಿತು. ವಿದೇಶಾಂಗ ಸಚಿವ ಜಸ್ವಂತ್ ಸಿಂಗ್‍ರು ಪಾಕ್ ವಿದೇಶಾಂಗ ಸಚಿವ ಸರ್ತಾಜ್ ಅಝೀಝ್‍ರೊಂದಿಗೆ ಮಾತಾಡಿದರು. ಆ ಬಳಿಕ ಮನಮೋಹನ್ ಸಿಂಗ್‍ರು ಭಾರತದ ಪ್ರಧಾನಿಯಾದರು. ಈ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕೆಂದು ಸೌರಭ್ ಕಾಲಿಯಾರ ಕುಟುಂಬವು ಒತ್ತಾಯಿಸತೊಡಗಿತು. ಕಾಲಿಯಾರ ತಂದೆ ಎನ್.ಕೆ. ಕಾಲಿಯಾ ಅವರು ಈ ಕುರಿತಂತೆ ಆನ್‍ಲೈನ್ ಸಹಿ ಸಂಗ್ರಹಕ್ಕಿಳಿದರು. 2013 ಅಕ್ಟೋಬರ್‍ನಲ್ಲಿ ರಕ್ಷಣಾ ಸಚಿವ ಆ್ಯಂಟನಿಯವರು ಎನ್.ಕೆ. ಕಾಲಿಯಾರಿಗೆ ಪತ್ರ ಬರೆದರು. ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ದೂರು ಸಲ್ಲಿಸುವುದಕ್ಕೆ ಭಾರತ-ಪಾಕ್‍ಗಳ ನಡುವಿನ ಶಿಮ್ಲಾ ಒಪ್ಪಂದ ಮತ್ತು ಇನ್ನಿತರ ತೊಂದರೆಗಳು ತೊಡಕಾಗಿರುವುದಾಗಿ ವಿವರಿಸಿದರು. ಕಾಲಿಯಾ ಅದನ್ನು ಒಪ್ಪಿಕೊಳ್ಳಲಿಲ್ಲ. ಈ ಸಂದರ್ಭದಲ್ಲಿ ಕಾಂಗ್ರೆಸನ್ನು ಬೆನ್ನೆಲುಬಿಲ್ಲದ ಮತ್ತು ಯೋಧರನ್ನು ಪಾಕ್‍ಗೆ ಆಹುತಿ ಕೊಡುವ ಪಕ್ಷವೆಂಬಂತೆ ಟೀಕಿಸಿದ್ದು ಬಿಜೆಪಿ. ಅದು ಕಾಲಿಯಾರ ಪರ ನಿಂತು ಕಾಂಗ್ರೆಸ್ ಸರಕಾರವನ್ನು ಬಲವಾಗಿ ಖಂಡಿಸಿತ್ತು. ಭಾರತದ ಯೋಧರ ಬಗ್ಗೆ ಮತ್ತು ಅವರ ಪಹರೆಯಿಂದಾಗಿ ನಾವು ನೆಮ್ಮದಿಯ ನಿದ್ದೆ ಮಾಡುತ್ತಿರುವ ಬಗ್ಗೆ ಅತ್ಯಂತ ಭಾವುಕ ಪದಗಳೊಂದಿಗೆ ಕಾಂಗ್ರೆಸನ್ನು ಯೋಧ ವಿರೋಧಿಯೆಂಬಂತೆ ಅದು ಬಿಂಬಿಸಿತ್ತು. ಭಾರತೀಯ ಯೋಧರ ಒಂದು ತಲೆಗೆ ಪ್ರತಿಯಾಗಿ 10 ಪಾಕ್ ತಲೆಗಳನ್ನು ಉರುಳಿಸುವ ಭರ್ಜರಿ ಹೇಳಿಕೆಗಳೂ ಬಿಜೆಪಿ ಬೆಂಬಲಿಗರಿಂದ ಕೇಳಿ ಬಂದುವು. ಆದರೆ, ಇದೀಗ ಮೋದಿ ಸರಕಾರವು ಕಾಲಿಯಾ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ. ಸರಕಾರದ ಈ ನಿಲುವನ್ನು, ‘ಮೋದಿ ಗವರ್ನ್‍ಮೆಂಟ್ ಶಟ್ಸ್ ಡೋರ್ಸ್ ಆನ್ ಸೌರಭ್ ಕಾಲಿಯಾ..' (ಸೌರಭ್ ಕಾಲಿಯಾಗೆ ಬಾಗಿಲು ಮುಚ್ಚಿದ ಮೋದಿ ಸರಕಾರ) ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಕರೆದಿದೆ. ‘ಮೋದಿ ಗವರ್ನ್‍ಮೆಂಟ್ ಬೆಟ್ರಾಯ್ಸ್ ಕಾಲಿಯಾ' (ಮೋದಿ ಸರಕಾರದಿಂದ ಕಾಲಿಯಾಗೆ ವಿಶ್ವಾಸದ್ರೋಹ), ‘ಸೆಂಟರ್ ಟೇಕ್ಸ್ ಯೂ ಟರ್ನ್' (ಕೇಂದ್ರದಿಂದ ಯೂ ಟರ್ನ್).. ಎಂದೆಲ್ಲಾ ಮುಖ್ಯ ವಾಹಿನಿಯ ಪತ್ರಿಕೆಗಳು ಬರೆದಿವೆ. ಮೋದಿ ಸರಕಾರದ ನಿಲುವಿನ ಬಗ್ಗೆ ಮಾಧ್ಯಮಗಳು ಮತ್ತು ಎನ್.ಕೆ. ಕಾಲಿಯಾ ಅಚ್ಚರಿ ವ್ಯಕ್ತಪಡಿಸಿದ ಬಳಿಕ ಇದೀಗ ಸುಪ್ರೀಮ್ ಕೋರ್ಟ್‍ನ ಅಭಿಪ್ರಾಯ ಪಡೆದು ಮುಂದುವರಿಯುವುದಾಗಿ ಅದು ಜಾರಿಕೊಂಡಿದೆ. ನಿಜವಾಗಿ, ಮೋದಿ ಸರಕಾರದ ಹಲವಾರು ಯು ಟರ್ನ್‍ಗಳಲ್ಲಿ ಕಾಲಿಯಾ ಪ್ರಕರಣವೂ ಒಂದು. ವಿರೋಧ ಪಕ್ಷದಲ್ಲಿದ್ದಾಗ ಆಧಾರ್ ಕಾರ್ಡನ್ನು 'ಜೋಕ್' ಮಾಡಿದ್ದ ಮತ್ತು ಬಾಂಗ್ಲಾ ನುಸುಳುಕೋರರಿಗೂ ಆಧಾರ್ ಕಾರ್ಡ್ ಸಿಗುತ್ತಿವೆಯೆಂದು ಹೇಳಿದ್ದ ಬಿಜೆಪಿಯು, ಅಧಿಕಾರಕ್ಕೆ ಬಂದ ಬಳಿಕ ಅದೇ ಆಧಾರ್ ಕಾರ್ಡನ್ನು ಅಪ್ಪಿಕೊಂಡಿತು. ಗ್ಯಾಸ್ ಸಬ್ಸಿಡಿಯನ್ನು ಬ್ಯಾಂಕ್ ಅಕೌಂಟ್‍ಗೆ ವರ್ಗಾವಣೆ ಮಾಡುವ ಕಾಂಗ್ರೆಸ್ ಸರಕಾರದ ತೀರ್ಮಾನವನ್ನು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಿದ್ದು ಬಿಜೆಪಿಯೇ. ಆ ಧ್ವನಿ ಎಷ್ಟು ಜೋರಾಗಿತ್ತೆಂದರೆ ತನ್ನ ತೀರ್ಮಾನವನ್ನೇ ಕಾಂಗ್ರೆಸ್ ಹಿಂಪಡೆಯುವಷ್ಟು. ಇದೀಗ ಕಾಂಗ್ರೆಸ್‍ನ ಅದೇ ತೀರ್ಮಾನವನ್ನು ಅದೇ ರೀತಿಯಲ್ಲಿ ಬಿಜೆಪಿ ಜಾರಿಗೊಳಿಸಿದೆ. ಬಾಂಗ್ಲಾಕ್ಕೆ 10 ಸಾವಿರ ಎಕರೆಯಷ್ಟು ಭೂಮಿಯನ್ನು ಕೊಟ್ಟು ಗಡಿ ಒಪ್ಪಂದ ಮಾಡಿಕೊಳ್ಳುವ ಯೋಜನೆಯನ್ನು ಮೊದಲು ಪ್ರಸ್ತಾಪಿಸಿದ್ದು ಮನಮೋಹನ್ ಸಿಂಗ್ ಸರಕಾರ. ಬಿಜೆಪಿ ಇದನ್ನು ಬಲವಾಗಿ ಖಂಡಿಸಿತ್ತು. ಆದರೆ ಇದೀಗ ಖುದ್ದು ಮೋದಿಯವರೇ ಈ ಒಪ್ಪಂದಕ್ಕೆ ಬಾಂಗ್ಲಾದೊಂದಿಗೆ ಸಹಿ ಹಾಕಿದ್ದಾರೆ. ಕಪ್ಪು ಹಣ ವಾಪಸಾತಿಯ ವಿಷಯದಲ್ಲಿ ಮೋದಿಯವರು ಕಾಂಗ್ರೆಸನ್ನು ತೀವ್ರ ತರಾಟೆಗೆ ಎತ್ತಿಕೊಂಡಿದ್ದರು. ಅಧಿಕಾರಕ್ಕೆ ಬಂದ 100 ದಿನಗಳೊಳಗೆ ಕಪ್ಪು ಹಣವನ್ನು ವಾಪಸ್ ತರುವುದಾಗಿಯೂ ಪ್ರತಿ ಭಾರತೀಯ ಖಾತೆಗೂ 15 ಲಕ್ಷ ರೂಪಾಯಿ ಜಮೆಯಾಗಲಿದೆಯೆಂದೂ ಘೋಷಿಸಿದ್ದರು. ಆದರೆ ಅಧಿಕಾರಕ್ಕೆ ಬಂದು 365 ದಿನಗಳು ಕಳೆದ ಬಳಿಕವೂ ಕನಿಷ್ಠ ವಿದೇಶದಲ್ಲಿ ‘ಎಷ್ಟು ಕೋಟಿ ರೂಪಾಯಿ ಕಪ್ಪು ಹಣ ಇದೆ’ ಎಂಬುದನ್ನೇ ಪತ್ತೆ ಹಚ್ಚಲು ಅವರಿಗೆ ಸಾಧ್ಯವಾಗಿಲ್ಲ. ಕಾಂಗ್ರೆಸ್ ಸರಕಾರದ ಬಳಿಯಿದ್ದ ಕಪ್ಪು ಹಣ ಖಾತೆದಾರರ ಪಟ್ಟಿಗೆ ಹೊಸದಾಗಿ 10 ಹೆಸರನ್ನಾದರೂ ಸೇರಿಸಲೂ ಅವರು ಶಕ್ತವಾಗಿಲ್ಲ. ಒಂದು ರೀತಿಯಲ್ಲಿ, ಬಿಜೆಪಿಯು ಗಾಳಿಯಲ್ಲಿ ಹಾರಿಸಿದ್ದ ನಿರೀಕ್ಷೆಯ ಬಲೂನ್‍ಗಳೆಲ್ಲ ಒಂದೊಂದಾಗಿ ಠುಸ್ಸಾಗತೊಡಗಿವೆ. ಸೌರಭ್ ಕಾಲಿಯಾರ ತಂದೆ ಬಿಜೆಪಿಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿರುವುದೇ ಇದನ್ನು ಪುಷ್ಠೀಕರಿಸುತ್ತದೆ.
 ಯೋಧರನ್ನು ಎತ್ತಿಕೊಂಡು ಭಾವನಾತ್ಮಕ ಸನ್ನಿವೇಶವನ್ನು ಸೃಷ್ಟಿ ಮಾಡುವುದು ಸುಲಭ. ಪಾಕಿಸ್ತಾನವನ್ನೋ ಉಗ್ರರನ್ನೋ ತೋರಿಸಿ ಇಂಥದ್ದೊಂದು ವಾತಾವರಣವನ್ನು ಯಾವ ಸಂದರ್ಭದಲ್ಲೂ ನಿರ್ಮಾಣ ಮಾಡಬಹುದು. ಮ್ಯಾನ್ಮಾರ್‍ನ ಗಡಿ ದಾಟಿ ನಡೆಸಲಾದ ಕಾರ್ಯಾಚರಣೆಯ ಬಗ್ಗೆ ಸರಕಾರ ಈಗ ಇಂಥದ್ದೇ ಭಾಷೆಯಲ್ಲಿ ಮಾತಾಡುತ್ತಿದೆ. ಅದರ ದೂರಗಾಮಿ ಪರಿಣಾಮಗಳ ಬಗ್ಗೆ ಎಚ್ಚರಿಸುವವರ ಬಾಯಿಯನ್ನು ದೇಶಭಕ್ತ ಮಾತುಗಳೊಂದಿಗೆ ಮುಚ್ಚಿಸಲಾಗುತ್ತಿದೆ. ‘ತಾವು ಯೋಧರ ಪರ' ಎಂಬ ಹುಸಿ ಸಂದೇಶವನ್ನು ಹರಡುವ ಧಾವಂತದಲ್ಲಿದೆ ಸರಕಾರ. ಇದೇ ವೇಳೆ, ನಿವೃತ್ತ ಯೋಧರು ಸರಕಾರದ ಈ ಮುಖವನ್ನು ನಕಲಿ ಎಂದು ಸಾರುತ್ತಿದ್ದಾರೆ. ಅವರು ‘ಸಮಾನ ಶ್ರೇಣಿ, ಸಮಾನ ಪಿಂಚಣಿ' ಎಂಬ ಯೋಜನೆಯ ಜಾರಿಯನ್ನು ಆಗ್ರಹಿಸಿ ದೇಶದಾದ್ಯಂತ ಪ್ರತಿಭಟನೆಗಿಳಿದಿದ್ದಾರೆ. ಹಾಗಂತ, ಅವರು ದಿಢೀರ್ ಆಗಿ ಪ್ರತಿಭಟನೆ ಹಮ್ಮಿಕೊಂಡಿಲ್ಲ. ಸರಕಾರಕ್ಕೆ ಮುಂಚಿತವಾಗಿಯೇ ಈ ಬಗ್ಗೆ ತಿಳಿಸಿದ್ದಾರೆ. ಆದರೂ ಚುನಾವಣೆಯ ವೇಳೆ ಸರಕಾರ ನೀಡಿದ್ದ ಈ ಭರವಸೆಯನ್ನು ಈಡೇರಿಸುತ್ತಿಲ್ಲ. ಒಂದು ಕಡೆ, ಮಗನ ಭಾವಚಿತ್ರವನ್ನು ಹಿಡಿದು ನ್ಯಾಯಕ್ಕಾಗಿ ಆಗ್ರಹಿಸುತ್ತಿರುವ ಕಾಲಿಯಾ; ಇನ್ನೊಂದು ಕಡೆ, ಪಿಂಚಣಿಗೆ ಆಗ್ರಹಿಸಿ ಪ್ರತಿಭಟನೆಗೆ ಇಳಿದಿರುವ ಯೋಧರು ಹಾಗೂ ಮಗದೊಂದು ಕಡೆ, ‘ಬಾಗಿಲು ಮುಚ್ಚಿ’ ಕುಳಿತಿರುವ ಸರಕಾರ.. ಇದು ಮೋದಿ ಸರಕಾರದ ಸದ್ಯದ ಸ್ಥಿತಿ. ಅಷ್ಟಕ್ಕೂ, ಕೇವಲ ಕಿವಿ ತಣಿಸುವ ಮಾತುಗಳಿಂದ ಜನರನ್ನು ಸುಮ್ಮನಾಗಿಸಲು ಸಾಧ್ಯವಿಲ್ಲವಲ್ಲ.