Thursday, 18 June 2015

ಪ್ರಧಾನಿಯವರೇ, ಈ ಭಾವಚಿತ್ರವನ್ನೊಮ್ಮೆ ನೆನಪಿಸಿಕೊಳ್ಳುವಿರಾ?

    ಲೆಫ್ಟಿನೆಂಟ್ ಸೌರಭ್ ಕಾಲಿಯಾರ ಬಗ್ಗೆ ಈ ದೇಶದಲ್ಲಿ ಅತ್ಯಂತ ಹೆಚ್ಚು ಮಾತಾಡಿದ್ದು ಬಿಜೆಪಿ. ಕಾಲಿಯಾರ ಸುತ್ತ ಭಾವನಾತ್ಮಕ ಸನ್ನಿವೇಶವೊಂದನ್ನು ಅದು ಹುಟ್ಟು ಹಾಕಿತ್ತು. ಕಾಂಗ್ರೆಸ್ ಸರಕಾರದ ಪುಕ್ಕಲು ನೀತಿಯಿಂದಾಗಿ ಭಾರತೀಯ ಯೋಧರು ಪಾಕಿಸ್ತಾನದ ಕೈಯಲ್ಲಿ ಜೀವ ಕಳಕೊಳ್ಳುತ್ತಿದ್ದಾರೆ- ಎಂಬ ರೀತಿಯಲ್ಲಿ ಅದು ಮಾತಾಡಿತ್ತು. 1999ರ ಕಾರ್ಗಿಲ್ ಸಂಘರ್ಷದ ವೇಳೆ ಪಾಕಿಸ್ತಾನ ಸೆರೆ ಹಿಡಿದ ಐವರು ಯೋಧರಲ್ಲಿ ಕಾಲಿಯಾ ಕೂಡ ಒಬ್ಬರು. ಘಟನೆಯ ಮೂರು ವಾರಗಳ ಬಳಿಕ ಕಾಲಿಯಾರ ಜರ್ಝರಿತ ಮೃತದೇಹವನ್ನು ಪಾಕಿಸ್ತಾನ ಭಾರತಕ್ಕೆ ಒಪ್ಪಿಸಿತ್ತು. ಕಾಲಿಯಾ ಸೆರೆ ಸಿಕ್ಕಿಲ್ಲ ಮತ್ತು ಅವರು ವಾತಾವರಣದ ವೈಪರೀತ್ಯದಿಂದಾಗಿ ಸಾವಿಗೀಡಾಗಿದ್ದಾರೆ ಎಂದು ಪಾಕಿಸ್ತಾನ ವಾದಿಸಿದರೂ ಭಾರತ ಅದನ್ನು ಒಪ್ಪಿಕೊಂಡಿರಲಿಲ್ಲ. ಮೃತದೇಹದ ಮೇಲಾದ ಗಾಯಗಳು ಅವರನ್ನು ಚಿತ್ರಹಿಂಸೆಗೊಳಪಡಿಸಿ ಹತ್ಯೆಗೈಯಲಾಗಿದೆಯೆಂಬುದನ್ನು ಸಾಬೀತು ಪಡಿಸುವುದಾಗಿ ಭಾರತ ವಾದಿಸಿತು. ಈ ಸಂದರ್ಭದಲ್ಲಿ ಬಿಜೆಪಿ (NDA) ಈ ದೇಶವನ್ನು ಆಳುತ್ತಿತ್ತು. ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿಗೆ ಈ ಬಗ್ಗೆ ನೋಟೀಸು ಕಳುಹಿಸಲಾಯಿತು. ವಿದೇಶಾಂಗ ಸಚಿವ ಜಸ್ವಂತ್ ಸಿಂಗ್‍ರು ಪಾಕ್ ವಿದೇಶಾಂಗ ಸಚಿವ ಸರ್ತಾಜ್ ಅಝೀಝ್‍ರೊಂದಿಗೆ ಮಾತಾಡಿದರು. ಆ ಬಳಿಕ ಮನಮೋಹನ್ ಸಿಂಗ್‍ರು ಭಾರತದ ಪ್ರಧಾನಿಯಾದರು. ಈ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕೆಂದು ಸೌರಭ್ ಕಾಲಿಯಾರ ಕುಟುಂಬವು ಒತ್ತಾಯಿಸತೊಡಗಿತು. ಕಾಲಿಯಾರ ತಂದೆ ಎನ್.ಕೆ. ಕಾಲಿಯಾ ಅವರು ಈ ಕುರಿತಂತೆ ಆನ್‍ಲೈನ್ ಸಹಿ ಸಂಗ್ರಹಕ್ಕಿಳಿದರು. 2013 ಅಕ್ಟೋಬರ್‍ನಲ್ಲಿ ರಕ್ಷಣಾ ಸಚಿವ ಆ್ಯಂಟನಿಯವರು ಎನ್.ಕೆ. ಕಾಲಿಯಾರಿಗೆ ಪತ್ರ ಬರೆದರು. ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ದೂರು ಸಲ್ಲಿಸುವುದಕ್ಕೆ ಭಾರತ-ಪಾಕ್‍ಗಳ ನಡುವಿನ ಶಿಮ್ಲಾ ಒಪ್ಪಂದ ಮತ್ತು ಇನ್ನಿತರ ತೊಂದರೆಗಳು ತೊಡಕಾಗಿರುವುದಾಗಿ ವಿವರಿಸಿದರು. ಕಾಲಿಯಾ ಅದನ್ನು ಒಪ್ಪಿಕೊಳ್ಳಲಿಲ್ಲ. ಈ ಸಂದರ್ಭದಲ್ಲಿ ಕಾಂಗ್ರೆಸನ್ನು ಬೆನ್ನೆಲುಬಿಲ್ಲದ ಮತ್ತು ಯೋಧರನ್ನು ಪಾಕ್‍ಗೆ ಆಹುತಿ ಕೊಡುವ ಪಕ್ಷವೆಂಬಂತೆ ಟೀಕಿಸಿದ್ದು ಬಿಜೆಪಿ. ಅದು ಕಾಲಿಯಾರ ಪರ ನಿಂತು ಕಾಂಗ್ರೆಸ್ ಸರಕಾರವನ್ನು ಬಲವಾಗಿ ಖಂಡಿಸಿತ್ತು. ಭಾರತದ ಯೋಧರ ಬಗ್ಗೆ ಮತ್ತು ಅವರ ಪಹರೆಯಿಂದಾಗಿ ನಾವು ನೆಮ್ಮದಿಯ ನಿದ್ದೆ ಮಾಡುತ್ತಿರುವ ಬಗ್ಗೆ ಅತ್ಯಂತ ಭಾವುಕ ಪದಗಳೊಂದಿಗೆ ಕಾಂಗ್ರೆಸನ್ನು ಯೋಧ ವಿರೋಧಿಯೆಂಬಂತೆ ಅದು ಬಿಂಬಿಸಿತ್ತು. ಭಾರತೀಯ ಯೋಧರ ಒಂದು ತಲೆಗೆ ಪ್ರತಿಯಾಗಿ 10 ಪಾಕ್ ತಲೆಗಳನ್ನು ಉರುಳಿಸುವ ಭರ್ಜರಿ ಹೇಳಿಕೆಗಳೂ ಬಿಜೆಪಿ ಬೆಂಬಲಿಗರಿಂದ ಕೇಳಿ ಬಂದುವು. ಆದರೆ, ಇದೀಗ ಮೋದಿ ಸರಕಾರವು ಕಾಲಿಯಾ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ. ಸರಕಾರದ ಈ ನಿಲುವನ್ನು, ‘ಮೋದಿ ಗವರ್ನ್‍ಮೆಂಟ್ ಶಟ್ಸ್ ಡೋರ್ಸ್ ಆನ್ ಸೌರಭ್ ಕಾಲಿಯಾ..' (ಸೌರಭ್ ಕಾಲಿಯಾಗೆ ಬಾಗಿಲು ಮುಚ್ಚಿದ ಮೋದಿ ಸರಕಾರ) ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಕರೆದಿದೆ. ‘ಮೋದಿ ಗವರ್ನ್‍ಮೆಂಟ್ ಬೆಟ್ರಾಯ್ಸ್ ಕಾಲಿಯಾ' (ಮೋದಿ ಸರಕಾರದಿಂದ ಕಾಲಿಯಾಗೆ ವಿಶ್ವಾಸದ್ರೋಹ), ‘ಸೆಂಟರ್ ಟೇಕ್ಸ್ ಯೂ ಟರ್ನ್' (ಕೇಂದ್ರದಿಂದ ಯೂ ಟರ್ನ್).. ಎಂದೆಲ್ಲಾ ಮುಖ್ಯ ವಾಹಿನಿಯ ಪತ್ರಿಕೆಗಳು ಬರೆದಿವೆ. ಮೋದಿ ಸರಕಾರದ ನಿಲುವಿನ ಬಗ್ಗೆ ಮಾಧ್ಯಮಗಳು ಮತ್ತು ಎನ್.ಕೆ. ಕಾಲಿಯಾ ಅಚ್ಚರಿ ವ್ಯಕ್ತಪಡಿಸಿದ ಬಳಿಕ ಇದೀಗ ಸುಪ್ರೀಮ್ ಕೋರ್ಟ್‍ನ ಅಭಿಪ್ರಾಯ ಪಡೆದು ಮುಂದುವರಿಯುವುದಾಗಿ ಅದು ಜಾರಿಕೊಂಡಿದೆ. ನಿಜವಾಗಿ, ಮೋದಿ ಸರಕಾರದ ಹಲವಾರು ಯು ಟರ್ನ್‍ಗಳಲ್ಲಿ ಕಾಲಿಯಾ ಪ್ರಕರಣವೂ ಒಂದು. ವಿರೋಧ ಪಕ್ಷದಲ್ಲಿದ್ದಾಗ ಆಧಾರ್ ಕಾರ್ಡನ್ನು 'ಜೋಕ್' ಮಾಡಿದ್ದ ಮತ್ತು ಬಾಂಗ್ಲಾ ನುಸುಳುಕೋರರಿಗೂ ಆಧಾರ್ ಕಾರ್ಡ್ ಸಿಗುತ್ತಿವೆಯೆಂದು ಹೇಳಿದ್ದ ಬಿಜೆಪಿಯು, ಅಧಿಕಾರಕ್ಕೆ ಬಂದ ಬಳಿಕ ಅದೇ ಆಧಾರ್ ಕಾರ್ಡನ್ನು ಅಪ್ಪಿಕೊಂಡಿತು. ಗ್ಯಾಸ್ ಸಬ್ಸಿಡಿಯನ್ನು ಬ್ಯಾಂಕ್ ಅಕೌಂಟ್‍ಗೆ ವರ್ಗಾವಣೆ ಮಾಡುವ ಕಾಂಗ್ರೆಸ್ ಸರಕಾರದ ತೀರ್ಮಾನವನ್ನು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಿದ್ದು ಬಿಜೆಪಿಯೇ. ಆ ಧ್ವನಿ ಎಷ್ಟು ಜೋರಾಗಿತ್ತೆಂದರೆ ತನ್ನ ತೀರ್ಮಾನವನ್ನೇ ಕಾಂಗ್ರೆಸ್ ಹಿಂಪಡೆಯುವಷ್ಟು. ಇದೀಗ ಕಾಂಗ್ರೆಸ್‍ನ ಅದೇ ತೀರ್ಮಾನವನ್ನು ಅದೇ ರೀತಿಯಲ್ಲಿ ಬಿಜೆಪಿ ಜಾರಿಗೊಳಿಸಿದೆ. ಬಾಂಗ್ಲಾಕ್ಕೆ 10 ಸಾವಿರ ಎಕರೆಯಷ್ಟು ಭೂಮಿಯನ್ನು ಕೊಟ್ಟು ಗಡಿ ಒಪ್ಪಂದ ಮಾಡಿಕೊಳ್ಳುವ ಯೋಜನೆಯನ್ನು ಮೊದಲು ಪ್ರಸ್ತಾಪಿಸಿದ್ದು ಮನಮೋಹನ್ ಸಿಂಗ್ ಸರಕಾರ. ಬಿಜೆಪಿ ಇದನ್ನು ಬಲವಾಗಿ ಖಂಡಿಸಿತ್ತು. ಆದರೆ ಇದೀಗ ಖುದ್ದು ಮೋದಿಯವರೇ ಈ ಒಪ್ಪಂದಕ್ಕೆ ಬಾಂಗ್ಲಾದೊಂದಿಗೆ ಸಹಿ ಹಾಕಿದ್ದಾರೆ. ಕಪ್ಪು ಹಣ ವಾಪಸಾತಿಯ ವಿಷಯದಲ್ಲಿ ಮೋದಿಯವರು ಕಾಂಗ್ರೆಸನ್ನು ತೀವ್ರ ತರಾಟೆಗೆ ಎತ್ತಿಕೊಂಡಿದ್ದರು. ಅಧಿಕಾರಕ್ಕೆ ಬಂದ 100 ದಿನಗಳೊಳಗೆ ಕಪ್ಪು ಹಣವನ್ನು ವಾಪಸ್ ತರುವುದಾಗಿಯೂ ಪ್ರತಿ ಭಾರತೀಯ ಖಾತೆಗೂ 15 ಲಕ್ಷ ರೂಪಾಯಿ ಜಮೆಯಾಗಲಿದೆಯೆಂದೂ ಘೋಷಿಸಿದ್ದರು. ಆದರೆ ಅಧಿಕಾರಕ್ಕೆ ಬಂದು 365 ದಿನಗಳು ಕಳೆದ ಬಳಿಕವೂ ಕನಿಷ್ಠ ವಿದೇಶದಲ್ಲಿ ‘ಎಷ್ಟು ಕೋಟಿ ರೂಪಾಯಿ ಕಪ್ಪು ಹಣ ಇದೆ’ ಎಂಬುದನ್ನೇ ಪತ್ತೆ ಹಚ್ಚಲು ಅವರಿಗೆ ಸಾಧ್ಯವಾಗಿಲ್ಲ. ಕಾಂಗ್ರೆಸ್ ಸರಕಾರದ ಬಳಿಯಿದ್ದ ಕಪ್ಪು ಹಣ ಖಾತೆದಾರರ ಪಟ್ಟಿಗೆ ಹೊಸದಾಗಿ 10 ಹೆಸರನ್ನಾದರೂ ಸೇರಿಸಲೂ ಅವರು ಶಕ್ತವಾಗಿಲ್ಲ. ಒಂದು ರೀತಿಯಲ್ಲಿ, ಬಿಜೆಪಿಯು ಗಾಳಿಯಲ್ಲಿ ಹಾರಿಸಿದ್ದ ನಿರೀಕ್ಷೆಯ ಬಲೂನ್‍ಗಳೆಲ್ಲ ಒಂದೊಂದಾಗಿ ಠುಸ್ಸಾಗತೊಡಗಿವೆ. ಸೌರಭ್ ಕಾಲಿಯಾರ ತಂದೆ ಬಿಜೆಪಿಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿರುವುದೇ ಇದನ್ನು ಪುಷ್ಠೀಕರಿಸುತ್ತದೆ.
 ಯೋಧರನ್ನು ಎತ್ತಿಕೊಂಡು ಭಾವನಾತ್ಮಕ ಸನ್ನಿವೇಶವನ್ನು ಸೃಷ್ಟಿ ಮಾಡುವುದು ಸುಲಭ. ಪಾಕಿಸ್ತಾನವನ್ನೋ ಉಗ್ರರನ್ನೋ ತೋರಿಸಿ ಇಂಥದ್ದೊಂದು ವಾತಾವರಣವನ್ನು ಯಾವ ಸಂದರ್ಭದಲ್ಲೂ ನಿರ್ಮಾಣ ಮಾಡಬಹುದು. ಮ್ಯಾನ್ಮಾರ್‍ನ ಗಡಿ ದಾಟಿ ನಡೆಸಲಾದ ಕಾರ್ಯಾಚರಣೆಯ ಬಗ್ಗೆ ಸರಕಾರ ಈಗ ಇಂಥದ್ದೇ ಭಾಷೆಯಲ್ಲಿ ಮಾತಾಡುತ್ತಿದೆ. ಅದರ ದೂರಗಾಮಿ ಪರಿಣಾಮಗಳ ಬಗ್ಗೆ ಎಚ್ಚರಿಸುವವರ ಬಾಯಿಯನ್ನು ದೇಶಭಕ್ತ ಮಾತುಗಳೊಂದಿಗೆ ಮುಚ್ಚಿಸಲಾಗುತ್ತಿದೆ. ‘ತಾವು ಯೋಧರ ಪರ' ಎಂಬ ಹುಸಿ ಸಂದೇಶವನ್ನು ಹರಡುವ ಧಾವಂತದಲ್ಲಿದೆ ಸರಕಾರ. ಇದೇ ವೇಳೆ, ನಿವೃತ್ತ ಯೋಧರು ಸರಕಾರದ ಈ ಮುಖವನ್ನು ನಕಲಿ ಎಂದು ಸಾರುತ್ತಿದ್ದಾರೆ. ಅವರು ‘ಸಮಾನ ಶ್ರೇಣಿ, ಸಮಾನ ಪಿಂಚಣಿ' ಎಂಬ ಯೋಜನೆಯ ಜಾರಿಯನ್ನು ಆಗ್ರಹಿಸಿ ದೇಶದಾದ್ಯಂತ ಪ್ರತಿಭಟನೆಗಿಳಿದಿದ್ದಾರೆ. ಹಾಗಂತ, ಅವರು ದಿಢೀರ್ ಆಗಿ ಪ್ರತಿಭಟನೆ ಹಮ್ಮಿಕೊಂಡಿಲ್ಲ. ಸರಕಾರಕ್ಕೆ ಮುಂಚಿತವಾಗಿಯೇ ಈ ಬಗ್ಗೆ ತಿಳಿಸಿದ್ದಾರೆ. ಆದರೂ ಚುನಾವಣೆಯ ವೇಳೆ ಸರಕಾರ ನೀಡಿದ್ದ ಈ ಭರವಸೆಯನ್ನು ಈಡೇರಿಸುತ್ತಿಲ್ಲ. ಒಂದು ಕಡೆ, ಮಗನ ಭಾವಚಿತ್ರವನ್ನು ಹಿಡಿದು ನ್ಯಾಯಕ್ಕಾಗಿ ಆಗ್ರಹಿಸುತ್ತಿರುವ ಕಾಲಿಯಾ; ಇನ್ನೊಂದು ಕಡೆ, ಪಿಂಚಣಿಗೆ ಆಗ್ರಹಿಸಿ ಪ್ರತಿಭಟನೆಗೆ ಇಳಿದಿರುವ ಯೋಧರು ಹಾಗೂ ಮಗದೊಂದು ಕಡೆ, ‘ಬಾಗಿಲು ಮುಚ್ಚಿ’ ಕುಳಿತಿರುವ ಸರಕಾರ.. ಇದು ಮೋದಿ ಸರಕಾರದ ಸದ್ಯದ ಸ್ಥಿತಿ. ಅಷ್ಟಕ್ಕೂ, ಕೇವಲ ಕಿವಿ ತಣಿಸುವ ಮಾತುಗಳಿಂದ ಜನರನ್ನು ಸುಮ್ಮನಾಗಿಸಲು ಸಾಧ್ಯವಿಲ್ಲವಲ್ಲ.


No comments:

Post a Comment