ಮಗ ಹರೀಶ್ ಐಯ್ಯರ್ ಜೊತೆ ತಾಯಿ ಪದ್ಮ ಐಯ್ಯರ್ |
ಒಂದು ರೀತಿಯಲ್ಲಿ, ನೈತಿಕ-ಅನೈತಿಕಗಳು ಅನಾದಿ ಕಾಲದಿಂದಲೂ ಚರ್ಚೆಗೊಳಗಾಗುತ್ತಾ ಬಂದಿವೆ. ಜಗತ್ತು ಬೌದ್ಧಿಕವಾಗಿ ಮತ್ತು ತಾಂತ್ರಿಕವಾಗಿ ವಿಕಸಿತವಾದಂತೆಲ್ಲ ಇಂಥ ಚರ್ಚೆಗಳು ಬಿರುಸನ್ನು ಪಡೆಯುತ್ತಲೂ ಇವೆ. ವೇಶ್ಯಾವಾಟಿಕೆ ಕಾನೂನುಬದ್ಧಗೊಳ್ಳಬೇಕೋ ಬೇಡವೋ ಎಂಬುದು ನಮ್ಮ ರಾಜ್ಯದಲ್ಲಿ ಏಳೆಂಟು ತಿಂಗಳುಗಳ ಹಿಂದೆ ಹುಟ್ಟಿಕೊಂಡ ಗಂಭೀರ ಚರ್ಚೆ. ಸಲಿಂಗ ಮದುವೆಗೆ ಅನುಮತಿ ನೀಡಬೇಕೆಂದು ಕೋರಿ ಈಗಾಗಲೇ ಸುಪ್ರೀಮï ಕೋರ್ಟಿಗೆ ಅರ್ಜಿಯನ್ನೂ ಸಲ್ಲಿಸಲಾಗಿದೆ. ಬಹುಶಃ, ಪದ್ಮ ಐಯ್ಯರ್ ಕೊಟ್ಟ ಜಾಹೀರಾತನ್ನು ಪರಿಗಣಿಸಿದರೆ ಮುಂದಿನ ದಿನಗಳಲ್ಲಿ ಇಂಥ ಅರ್ಜಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲೂ ಬಹುದು. ಯಾಕೆಂದರೆ, ಪ್ರಕೃತಿ ನಿಯಮವನ್ನು ವಿೂರುವುದೇ ಬದುಕು ಎಂದು ಆಲೋಚಿಸುವ ಮತ್ತು ಅದನ್ನು ತನ್ನ ಸ್ವಾತಂತ್ರ್ಯವೆಂದು ಪ್ರತಿಪಾದಿಸುವ ಬೆಳವಣಿಗೆಗಳಿಗೆ ಆಧುನಿಕ ಜಗತ್ತಿನಲ್ಲಿ ಮಾನ್ಯತೆ ಲಭ್ಯವಾಗುತ್ತಿದೆ. ತೋಚಿದಂತೆ ಬದುಕುವುದನ್ನೇ ಜೀವನ ಕ್ರಮ ಎಂದು ಹೇಳಿಕೊಡಲಾಗುತ್ತಿದೆ. ಈ ಜೀವನ ಕ್ರಮದಲ್ಲಿ ವೇಶ್ಯಾವಾಟಿಕೆಯೂ ಸ್ವಾತಂತ್ರ್ಯ. ಮದುವೆಗೆ ಮುಂಚೆ ಮತ್ತು ನಂತರ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳುವುದೂ ಸ್ವಾತಂತ್ರ್ಯ. ಲಿವ್ ಇನ್ ಟುಗೆದರೂ ಸ್ವಾತಂತ್ರ್ಯ. ಆದರೆ ಇವುಗಳ ಜೊತೆಗೇ ಕೆಲವು ಪ್ರಶ್ನೆಗಳೂ ಉದ್ಭವಿಸುತ್ತವೆ. ಇಂಥ ಸ್ವಾತಂತ್ರ್ಯಗಳು ಅಂತಿಮವಾಗಿ ಸಮಾಜವನ್ನು ಎಲ್ಲಿಗೆ ತಲುಪಿಸಬಲ್ಲುದು? ಜನನ ಮತ್ತು ಮರಣ ಎಂಬುದು ಪ್ರಕೃತಿ ನಿಯಮ. ಅದರಲ್ಲೊಂದು ಸಮತೋಲನದ ಉದ್ದೇಶವಿದೆ. ಆ ಸಮತೋಲನದ ಮೇಲೆ ಮಾನವ ಜಗತ್ತು ಸ್ವಾಮ್ಯವನ್ನು ಪಡಕೊಳ್ಳಲು ಪ್ರಯತ್ನಿಸಿದಾಗಲೆಲ್ಲ ಪ್ರಕೃತಿ ಮುನಿದಿದೆ. ತನ್ನ ಅಸಮಾಧಾನವನ್ನು ವಿವಿಧ ರೂಪದಲ್ಲಿ ಹೊರಗೆಡಹಿದೆ. ಕುಟುಂಬಕ್ಕೊಂದೇ ಮಗು ಎಂಬ ಕಾನೂನನ್ನು ಅತ್ಯಂತ ಕಠಿಣವಾಗಿ ಜಾರಿಗೊಳಿಸಿದ ದೇಶ ಚೀನಾ. ಆ ನಿಯಮವು ಇವತ್ತು ಚೀನಾದ ಲಿಂಗಾನುಪಾತದಲ್ಲಿ ಎಷ್ಟು ಆಳವಾದ ಗಾಯವನ್ನು ಮೂಡಿಸಿಬಿಟ್ಟಿದೆಯೆಂದರೆ, ಇದೀಗ ಆ ನಿಯಮವನ್ನೇ ಸಡಿಲಿಸಬೇಕಾಗಿ ಬಂದಿದೆ. ಒಂದೇ ಮಗು ಎಂದಾಗ ಹೆಚ್ಚಿನ ಕುಟುಂಬಗಳೆಲ್ಲ ಗಂಡು ಮಗುವನ್ನೇ ಬಯಸಿದುವು. ಹೆಣ್ಣು ಮಕ್ಕಳನ್ನು ಹೊಟ್ಟೆಯಲ್ಲೇ ಕೊಲ್ಲುವ ಕ್ರೌರ್ಯಕ್ಕೂ ಅದು ಕಾರಣವಾಯಿತು. ಚೀನಾ ಎಂದಲ್ಲ ನಮ್ಮದೇ ದೇಶದ ಹರ್ಯಾಣ ಮತ್ತಿತರ ರಾಜ್ಯಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ತೀವ್ರ ಕುಸಿತಕ್ಕೆ ಪ್ರಕೃತಿ ವಿರೋಧಿ ಗಂಡು ಪ್ರೇಮವೇ ಕಾರಣವಾಗಿದೆ. ಹರ್ಯಾಣದಲ್ಲಿ ಇವತ್ತು ಹೆಣ್ಣಿನ ಬರ ಎಷ್ಟು ಬಿಗಡಾಯಿಸಿದೆ ಎಂದರೆ ಬಿಹಾರದಿಂದ ವಧುಗಳನ್ನು ಹರ್ಯಾಣಕ್ಕೆ ತಂದು ಮದುವೆ ಮಾಡಿಸಲಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಸಲಿಂಗ ಕಾಮ ಮತ್ತು ಸಲಿಂಗ ಮದುವೆಯ ಕಾನೂನು ಬದ್ಧತೆಯನ್ನೊಮ್ಮೆ ಕಲ್ಪಿಸಿಕೊಳ್ಳಿ. ಈ ಜೀವನ ಕ್ರಮದಲ್ಲಿ ಗಂಡು-ಗಂಡನ್ನು ವಿವಾಹವಾಗುತ್ತಾನೆ ಅಥವಾ ಒಟ್ಟಾಗಿ ಬದುಕುತ್ತಾನೆ. ದೈಹಿಕ ಸುಖವನ್ನು ಪರಸ್ಪರ ಹಂಚಿಕೊಳ್ಳಲಾಗುತ್ತದೆ.
ನಿಜವಾಗಿ, ಹೆಣ್ಣು ಮತ್ತು ಗಂಡಿನ ನಡುವೆ ಪ್ರಕೃತಿಯೇ ಅನುರಾಗವನ್ನು ಇಟ್ಟಿದೆ. ಆ ಅನುರಾಗದ ಹಿಂದೆ ಇರುವ ಉದ್ದೇಶವು ಕೇವಲ ದೈಹಿಕ ಸುಖವನ್ನು ಹಂಚಿಕೊಳ್ಳುವುದು ಮಾತ್ರವೇ ಅಲ್ಲ. ಆ ಅನುರಾಗದ ಮೂಲಕ ಜನನ ಪ್ರಕ್ರಿಯೆಗೆ ಒಂದು ವೇದಿಕೆಯನ್ನು ಸಿದ್ಧಪಡಿಸಲಾಗುತ್ತದೆ. ಮದುವೆ ಎಂಬ ಸಾಮಾಜಿಕ ಮಾನ್ಯತೆಯಡಿಯಲ್ಲಿ ಹೆಣ್ಣು-ಗಂಡು ಒಟ್ಟಾಗುತ್ತಾರೆ. ಆ ಮೂಲಕ ಭವಿಷ್ಯದ ಪೀಳಿಗೆಯ ಉದಯವನ್ನೂ ನಿರೀಕ್ಷಿಸಲಾಗುತ್ತದೆ. ಹೀಗೆ ಹೆಣ್ಣು-ಗಂಡು ಪರಸ್ಪರ ಆಕರ್ಷಿತಗೊಳ್ಳುವುದು, ಮದುವೆಯಲ್ಲಿ ಒಂದಾಗುವುದು ಮತ್ತು ಹೊಸ ಪೀಳಿಗೆಗೆ ಜನ್ಮ ಕೊಡುವ ಮೂಲಕ ಮಾನವ ಸಂತತಿಯ ಬೆಳವಣಿಗೆಯು ಮುಂದುವರಿಯುವಂತೆ ನೋಡಿಕೊಳ್ಳಲಾಗುತ್ತದೆ. ಆದರೆ ಸಲಿಂಗ ಮದುವೆಯಲ್ಲಿ ಈ ಪ್ರಕ್ರಿಯೆಗೆ ಅವಕಾಶಗಳೇ ಇಲ್ಲ. ಸಲಿಂಗ ಕಾಮ ಎಂಬುದು ಕೇವಲ ದೈಹಿಕ ಸುಖವನ್ನು ಅನುಭವಿಸುವುದಕ್ಕಿರುವ ಒಂದು ವೇದಿಕೆಯೇ ಹೊರತು ಅದರಿಂದ ಮಾನವ ಜಗತ್ತಿಗೆ ಯಾವ ಕೊಡುಗೆಯೂ ಸಿಗುವುದಿಲ್ಲ. ಅದೊಂದು ಒಣ ಬದುಕು. ಅಲ್ಲಿ ಮಕ್ಕಳಿಲ್ಲ. ಆದ್ದರಿಂದಲೇ ಆ ಬದುಕು ಅವರಲ್ಲಿಗೇ ಕೊನೆಗೊಳ್ಳುತ್ತದೆ. ಅಂದಹಾಗೆ, ಸಲಿಂಗ ಕಾಮವು ಸ್ವಾತಂತ್ರ್ಯದ ಹೆಸರಲ್ಲಿ ಕಾನೂನುಬದ್ಧಗೊಂಡರೆ, ಅದು ಬೀರುವ ಪರಿಣಾಮ ಹೇಗಿರಬಹುದು? ಸಲಿಂಗ ಮದುವೆಗಳು ಜನಪ್ರಿಯಗೊಳ್ಳುವುದರಿಂದ ಸಮಾಜದಲ್ಲಿ ಏನೇನು ಬದಲಾವಣೆಗಳಾಗಬಹುದು? ಗದ್ದೆಗಳು, ಕಾರ್ಖಾನೆಗಳು, ಶಾಲೆಗಳು ಸಹಿತ ವಿವಿಧ ಕ್ಷೇತ್ರಗಳ ಪರಿಸ್ಥಿತಿ ಹೇಗಿದ್ದೀತು? ಜನನ ಪ್ರಕ್ರಿಯೆ ನಿಂತು ಹೋದ ಅಥವಾ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಸಮಾಜದಲ್ಲಿ ಗದ್ದೆಯನ್ನು ಉಳುವವರಾದರೂ ಯಾರಿರುತ್ತಾರೆ? ಮಕ್ಕಳು, ಕುಟುಂಬ ಎಂಬೊಂದು ಪರಿಸರವೇ ಓರ್ವರನ್ನು ಗದ್ದೆ ಉಳುವುದಕ್ಕೆ, ಬೆಳೆ ಬೆಳೆಯುವುದಕ್ಕೆ ಅಥವಾ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಹೆಚ್ಚಿನ ಬಾರಿ ಪ್ರೇರೇಪಿಸುತ್ತದೆ. ಮಕ್ಕಳೇ ಇಲ್ಲದ ಕುಟುಂಬದಲ್ಲಿ ಕೃಷಿ ಚಟುವಟಿಕೆ, ಸಂಪಾದನೆಯ ಉತ್ಸಾಹ ಸಹಜವಾಗಿಯೇ ಕಡಿಮೆ. ಹಾಗೆಯೇ, ಯುವ ಪೀಳಿಗೆಯ ಅಭಾವದಿಂದಾಗಿ ಕಾರ್ಖಾನೆಗಳು ಮುಚ್ಚಬಹುದು. ಉತ್ಪಾದನಾ ರಂಗದಲ್ಲಿ ತೀವ್ರ ಕುಸಿತ ಉಂಟಾಗಬಹುದು. ಶಾಲೆಗಳ ಅಗತ್ಯವೇ ಕಂಡುಬರಲಾರದು. ಅಂಥದ್ದೊಂದು ಸಾಧ್ಯಾಸಾಧ್ಯತೆ ಎದುರಿರುವುದರಿಂದಲೇ ಪವಿತ್ರ ಕುರ್‍ಆನ್ ಸಹಿತ ಧಾರ್ಮಿಕ ಗ್ರಂಥಗಳು ಸಲಿಂಗ ಕಾಮವನ್ನು ಕಠಿಣವಾಗಿ ವಿರೋಧಿಸಿವೆ. ಮಾತ್ರವಲ್ಲ, ಈ ಕೃತ್ಯವನ್ನು ಜೀವನ ಕ್ರಮವಾಗಿ ಅಳವಡಿಸಿಕೊಂಡಿದ್ದ ಲೂತ್ ಎಂಬ ಹೆಸರಿನ ಪುರಾತನ ಸಮೂಹವೇ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವುದನ್ನು (ಅಧ್ಯಾಯ 11) ವಿವರಿಸಿದೆ.
ಏನೇ ಆಗಲಿ, ಪ್ರಕೃತಿ ಮತ್ತು ವಿಕೃತಿಗಳ ನಡುವೆ ಎಷ್ಟೆಲ್ಲ ಅರ್ಥ ವ್ಯತ್ಯಾಸ ಮತ್ತು ಭಾವ ವ್ಯತ್ಯಾಸಗಳಿವೆಯೋ ಅಷ್ಟೇ ವ್ಯತ್ಯಾಸ ಸಲಿಂಗ ಕಾಮ ಮತ್ತು ವ್ಯಕ್ತಿ ಸ್ವಾತಂತ್ರ್ಯದ ನಡುವೆಯೂ ಇದೆ. ಅವೆರಡರ ನಡುವೆ ಪರಸ್ಪರ ಸಂಧಿಸದಷ್ಟು ಅಂತರವಿದೆ. ಸ್ವಾತಂತ್ರ್ಯವು ಪ್ರಕೃತಿದತ್ತವಾದರೆ ಸಲಿಂಗ ಕಾಮವು ಪ್ರಕೃತಿ ವಿರೋಧಿ. ಅವೆರಡರ ನಡುವೆ ಸಂಘರ್ಷ ಏರ್ಪಡಬಹುದೇ ಹೊರತು ಸಹಮತವಲ್ಲ. ಪದ್ಮ ಐಯ್ಯರ್‍ರ ಜಾಹೀರಾತನ್ನು ಪ್ರಕಟಿಸಲು ಹಿಂಜರಿದ ಎರಡು ಪತ್ರಿಕೆಗಳೇ ಇದಕ್ಕೆ ಅತ್ಯುತ್ತಮ ಪುರಾವೆ.
No comments:
Post a Comment