Tuesday, 29 January 2013

ನಿಷ್ಠೆ ಬದಲಿಸುವ ರಾಜಕಾರಣಿಗಳೂ ಚರ್ಚೆಗೆ ಒಳಗಾಗದ ಭ್ರೂಣಗಳೂ


1. ಬಿಜೆಪಿ-ಆರೆಸ್ಸೆಸ್‍ಗಳ ಮೇಲೆ ಭಯೋತ್ಪಾದನೆಯ ಆರೋಪ ಹೊರಿಸಿದ ಗೃಹ ಸಚಿವ ಶಿಂಧೆ..
2. ಯಡಿಯೂರಪ್ಪ ನಿಷ್ಠ 13 ಶಾಸಕರಿಂದ ರಾಜ್ಯಪಾಲರ ಭೇಟಿ. ಸ್ಪೀಕರ್ ನಾಪತ್ತೆ..
3. ಟಿಪ್ಪು ಸುಲ್ತಾನ್ ವಿವಿಯನ್ನು ಬೆಂಬಲಿಸಿದ ಅನಂತಮೂರ್ತಿ..
4. ಬೆಳಗಾಂ ಜಿಲ್ಲೆಯ ಸಂಕೇಶ್ವರದ ಹಿರಣ್ಯಕೇಶಿ ನದಿದಡದಲ್ಲಿ ಹೂತಿಡಲಾಗಿದ್ದ 16 ಭ್ರೂಣಗಳು ಪತ್ತೆ..

   ಕಳೆದೊಂದು ವಾರದಲ್ಲಿ ಒಂದಲ್ಲ ಒಂದು ಪತ್ರಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡ ಶೀರ್ಷಿಕೆಗಳಿವು. ವಿಶೇಷ ಏನೆಂದರೆ, ‘ಭ್ರೂಣ'ದ ಸುದ್ದಿಯನ್ನು ಹೊರತುಪಡಿಸಿ ಉಳಿದಂತೆ ಎಲ್ಲ ಸುದ್ದಿಗಳೂ ಪತ್ರಿಕೆಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಚರ್ಚೆಗೊಳಗಾಗಿವೆ. ಅವುಗಳಿಗೆ ಸಂಬಂದಿಸಿದ ಲೇಖನಗಳು ಪ್ರಕಟವಾಗಿವೆ. ಟಿ.ವಿ. ಗಳಂತೂ, ಶೆಟ್ಟರ್ ಸರಕಾರ ಉಳಿಯುತ್ತೋ ಉರುಳುತ್ತೋ ಅನ್ನುವ ಧಾಟಿಯಲ್ಲಿ ಗಂಟೆಗಟ್ಟಲೆ ಚರ್ಚಿಸಿವೆ. ಟಿಪ್ಪು ಸುಲ್ತಾನ್ ಎಷ್ಟು ಶೇಕಡಾ ಮತಾಂಧ ಮತ್ತು ಎಷ್ಟು ಶೇಕಡಾ ಅಲ್ಲ ಎಂಬ ಬಗ್ಗೆ ‘ಗಂಭೀರ' ಕಾರ್ಯಕ್ರಮಗಳನ್ನು ಪ್ರಸಾರ ಮಾಡಿವೆ. ಆದರೆ ಪತ್ರಿಕೆಗಳಲ್ಲಾಗಲಿ, ಟಿ.ವಿ.ಗಲ್ಲಾಗಲಿ, ‘ಭ್ರೂಣ'ಗಳು ಚರ್ಚೆಗೆ ಒಳಗಾಗಿಯೇ ಇಲ್ಲ. ಭ್ರೂಣಕ್ಕೆ ಗಂಭೀರ ಚರ್ಚಾವಸ್ತುವಾಗುವ ಅರ್ಹತೆಯನ್ನು ಮಾಧ್ಯಮಗಳು ಬಿಡಿ, ಮಹಿಳಾವಾದಿಗಳು ಇಲ್ಲವೇ ಸಂಘಟನೆಗಳು ಕೂಡ  ಈ ವರೆಗೆ ನೀಡಿಲ್ಲ. ಅತ್ಯಾಚಾರದ ವಿರುದ್ಧ ಈ ದೇಶದಲ್ಲಿ ಪ್ರತಿಭಟನಾತ್ಮಕ ಮನಸ್ಥಿತಿಯನ್ನು ಹುಟ್ಟು ಹಾಕಿದಂತೆಯೇ ಭ್ರೂಣಹತ್ಯೆಯ ವಿರುದ್ಧ ಚಳವಳಿಯ ಪ್ರಜ್ಞೆಯನ್ನು ಹುಟ್ಟು ಹಾಕುವಲ್ಲಿ ಮಾಧ್ಯಮಗಳು ಮತ್ತು ಮಹಿಳಾ ಸಂಘಟನೆಗಳು ಮತ್ತೆ ಮತ್ತೆ ಸೋಲುತ್ತಲೇ ಇವೆ.
  ನಿಜವಾಗಿ, ಭ್ರೂಣ ಎಂಬುದು ಗೋವಿನಂತೆ ಅಲ್ಲ. ಭ್ರೂಣಕ್ಕೂ ಮನುಷ್ಯನಿಗೂ ಕರುಳ ಬಳ್ಳಿಯ ಸಂಬಂಧ ಇದೆ. ಭ್ರೂಣ ಹತ್ಯೆ ಎಂಬುದು ಓರ್ವ ಮನುಷ್ಯನ ದಾರುಣ ಹತ್ಯೆಗೆ, ಕೊಲೆಗೆ ಸಮಾನ. ದುರಂತ ಏನೆಂದರೆ, ಭ್ರೂಣಗಳಿಗೆ ರಾಜಕೀಯ ಇಮೇಜು ಇಲ್ಲದಿರುವುದು. ಆದರೆ ಗೋವಿಗೆ ಅದು ಲಭ್ಯವಾಗಿ ಬಿಟ್ಟಿದೆ. ಅಕ್ರಮವಾಗಿ ಗೋವಿನ ಸಾಗಾಟ ನಡೆಯುತ್ತದೋ ಎಂಬುದನ್ನು ಪತ್ತೆ ಹಚ್ಚುವುದಕ್ಕಾಗಿ ರಾತ್ರಿಯೆಲ್ಲಾ ನಿದ್ದೆಗೆಟ್ಟು ಕಾಯುವ ತಂಡಗಳು ನಮ್ಮ ನಡುವೆ ಇವೆ. ಅಕ್ರಮ ಗೋ ಸಾಗಾಟದ ಆರೋಪ ಹೊರಿಸಿ  ನಡುಬೀದಿಯಲ್ಲೇ ಥಳಿಸುವ, ಬೆತ್ತಲೆಗೊಳಿಸುವ ಗೋ ಪ್ರೇಮಿಗಳೂ  ನಮ್ಮಲ್ಲಿದ್ದಾರೆ. ಗೋಹತ್ಯೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಗಲ್ಲಿಗಲ್ಲಿಗಳಲ್ಲಿ ಪ್ರತಿಭಟನೆ ನಡೆಯುತ್ತದೆ. ವಿಚಾರಗೊಷ್ಟಿಗಳೂ ಸಂವಾದಗಳೂ ನಡೆಯುತ್ತವೆ. ಆದರೆ ಭ್ರೂಣಗಳಿಗೆ ಗೋವಿನ ಸಾಮರ್ಥ್ಯ ಇಲ್ಲದೇ ಇರುವುದರಿಂದ ಗೋವುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅವು ಹತ್ಯೆಗೆ ಒಳಗಾಗುತ್ತಿದ್ದರೂ  ಗಂಭೀರ ಸಮಸ್ಯೆಯಾಗಿ ಗುರುತಿಸಿಕೊಳ್ಳುತ್ತಲೇ ಇಲ್ಲ. ಒಂದು ವೇಳೆ ಭ್ರೂಣಗಳಿಗೆ ಮಾತಾಡುವ ಸಾಮರ್ಥ್ಯ  ಇರುತ್ತಿದ್ದರೆ, ಅವುಗಳ ಮಾತಿನ ಧಾಟಿಯಾದರೂ ಹೇಗಿರುತ್ತಿತ್ತು? ನಾಲ್ಕು ಕಾಲಿನ ಪ್ರಾಣಿಗೆ ಈ ದೇಶದಲ್ಲಿ ಇರುವ ಗೌರವ ಮತ್ತು ಆದರ, ಮನುಷ್ಯರಿಗೆ ಇಲ್ಲವೇ ಎಂದು ಅದು ಪ್ರಶ್ನಿಸುತ್ತಿತ್ತಲ್ಲವೇ? ಗೋ ಹತ್ಯೆಯನ್ನು ತಡೆಯುವ ಸ್ಪಷ್ಟವಾದ ಕಾನೂನು ಇನ್ನೂ ಜಾರಿಯಾಗಿಲ್ಲದಿದ್ದರೂ ಈಗಾಗಲೇ ಒಂದು ತಂಡ ಗೋವುಗಳ ಕಾವಲಿಗಾಗಿ ಬೀದಿಗಿಳಿದಿರುವುದನ್ನು ಉಲ್ಲೇಖಿಸುತ್ತಾ ‘ನೀವೇಕೆ ಹೀಗೆ’ ಎಂದು ಜನ ಪ್ರತಿನಿಧಿಗಳು, ಮಾಧ್ಯಮ ಮಿತ್ರರು, ಹೋರಾಟಗಾರರನ್ನು ಅದು ಚುಚ್ಚುತ್ತಿತ್ತಲ್ಲವೇ? ತಮ್ಮ ರಕ್ಷಣೆಗಾಗಿ ಲೋಕಾಯುಕ್ತದಂಥ ಪ್ರಬಲ ಕಾನೂನನ್ನು ರಚಿಸುವಂತೆ ಒತ್ತಾಯಿಸುತ್ತಿತ್ತಲ್ಲವೇ?
   ಮನುಷ್ಯ ಹೆಚ್ಚೆಚ್ಚು ಆಧುನಿಕಗೊಂಡಂತೆಯೇ ಆಲೋಚನೆಗಳಲ್ಲಿ ಹೆಚ್ಚೆಚ್ಚು ವಿಕಾರಗಳು ತುಂಬಿಕೊಳ್ಳುತ್ತಲೂ ಇವೆ. ಆಧುನಿಕ ಯುವ ಪೀಳಿಗೆಯು ಇಂಗ್ಲಿಷ್ ಭಾಷೆಯನ್ನು ಮಾತ್ರವಲ್ಲ, ಇಂಗ್ಲಿಷ್ ಮೌಲ್ಯಗಳನ್ನು ಕೂಡ ಧಾರಾಳವಾಗಿ ಅಪ್ಪಿಕೊಳ್ಳುತ್ತಿವೆ. ತಮಗೆ ದೊರಕದ ಅವಕಾಶಗಳು ಮಕ್ಕಳಿಗೆ ದೊರಕಲಿ ಎಂಬ ಅಭಿಲಾಷೆಯಿಂದ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಕಳುಹಿಸುತ್ತಿರುವ ಪೋಷಕರು ಒಂದೆಡೆಯಾದರೆ; ನೈತಿಕ, ಅನೈತಿಕತೆಗಳ ಪರಿವೆಯೇ ಇಲ್ಲದೆ ‘ಆಧುನಿಕ' ವಾಗುತ್ತಿರುವ ಮಕ್ಕಳು ಇನ್ನೊಂದು ಕಡೆ. ಈ ಹಿಂದೆ ನಾವು ಖರೀದಿಸುತ್ತಿದ್ದ ವಸ್ತುಗಳೆಲ್ಲ ರಿಪೇರಿ ಆಗುತ್ತಿದ್ದುವು. ರೇಡಿಯೋ, ಸೈಕಲ್, ಚಪ್ಪಲಿ, ಟಾರ್ಚು, ವಾಚು... ಎಲ್ಲವೂ. ಆದರೆ ಇವತ್ತು ರಿಪೇರಿಗೆ ಒಗ್ಗುವಂಥ ವಸ್ತುಗಳು ತಯಾರಾಗುತ್ತಲೇ ಇಲ್ಲ. ಎಲ್ಲವೂ ಬಳಸಿ ಎಸೆಯುವಂಥದ್ದು. ‘ಆಧುನಿಕ' ಯುವ ಸಮೂಹ ಬೆಳೆಯುತ್ತಿರುವುದೂ ಬಹುತೇಕ ಈ ರೀತಿಯಲ್ಲೇ. ಅವು ರಿಪೇರಿಗೆ ಹೊಂದಿಕೊಳ್ಳುತ್ತಿಲ್ಲ. ನಿಜವಾಗಿ ರಿಪೇರಿ ಎಂಬುದು ತಪ್ಪುಗಳನ್ನು ತಿದ್ದಿಕೊಳ್ಳುತ್ತಾ, ಹೆಚ್ಚೆಚ್ಚು ಪಕ್ವವಾಗುತ್ತಾ ಬೆಳೆಯುವುದರ ಹೆಸರು. ಹಾನಿಗೀಡಾದ ಸೈಕಲನ್ನು ಮೆಕ್ಯಾನಿಕ್ ರಿಪೇರಿ ಮಾಡುತ್ತಿರುವಾಗ, ಹತ್ತಿರವೇ ನಿಂತ ಮಾಲಿಕ ಅದನ್ನು ನೋಡುತ್ತಿರುತ್ತಾನೆ. ಸೈಕಲ್ ಹಾಳಾಗುವುದಕ್ಕಿರುವ  ಕಾರಣಗಳ ಬಗ್ಗೆ ಚರ್ಚಿಸುತ್ತಾನೆ. ಮುಂದೆ ಹೇಗೆಲ್ಲ ಸೈಕಲನ್ನು ಬಳಸಬಾರದು ಎಂಬುದನ್ನು ಕಲಿತುಕೊಳ್ಳು ತ್ತಾನೆ. ಒಂದು ರೀತಿಯಲ್ಲಿ ರಿಪೇರಿ ಎಂಬುದು ಮನುಷ್ಯನ ಪಾಲಿಗೆ ಒಂದು ಪುನರವಲೋಕನವಿದ್ದಂತೆ. ಆದರೆ ಆಧುನಿಕ ಇಂಗ್ಲಿಷ್ ಮೌಲ್ಯಗಳಲ್ಲಿ ಈ ‘ರಿಪೇರಿ'ಗೆ ಅವಕಾಶವೇ ಸಿಗುತ್ತಿಲ್ಲ. ಆದ್ದರಿಂದಲೇ ಗಂಡನ ವಿರುದ್ಧ ಪತ್ನಿ; ಮಕ್ಕಳ ವಿರುದ್ಧ ಹೆತ್ತವರು.. ವಿವಿಧ ಆರೋಪಗಳನ್ನು ಹೊರಿಸುತ್ತಾ ಕೋರ್ಟಿನ ಮೆಟ್ಟಲು ಹತ್ತುತ್ತಿರುವುದು. ದಿನಂಪ್ರತಿ ಅತ್ಯಾಚಾರದ, ಭ್ರಷ್ಟಾಚಾರದ ಸುದ್ದಿಗಳು ಕೇಳಿ ಬರುತ್ತಲೇ ಇರುವುದು.
   ಭ್ರಷ್ಟಾಚಾರ ಮತ್ತು ಅತ್ಯಾಚಾರದ ವಿರುದ್ಧ ಈ ದೇಶದಲ್ಲಿ ಪ್ರತಿಭಟನೆ ಕಾಣಿಸಿಕೊಂಡಂತೆಯೇ ಭ್ರೂಣ ಹತ್ಯೆಯ ವಿರುದ್ಧವೂ ಯೋಜಿತ ಚಳವಳಿಯೊಂದು ಹುಟ್ಟಿಕೊಳ್ಳಬೇಕಾದ ಅಗತ್ಯ ಇದೆ. ಆಸ್ಪತ್ರೆಗಳೆಂಬ ನಾಲ್ಕು ಗೋಡೆಗಳ ಒಳಗೆ ನಡೆಯುತ್ತಿರುವ ಮನುಷ್ಯ ಹತ್ಯೆಯನ್ನು, ‘ಪಾತಕ’ ಎಂದು ಆಧುನಿಕ ಜಗತ್ತಿಗೆ ಮನವರಿಕೆ ಮಾಡಿಸಬೇಕಾದ ಅನಿವಾರ್ಯತೆ  ಇದೆ. ಭ್ರೂಣಗಳಿಗೆ ಬಾಯಿ ಬರುವುದಿಲ್ಲ ಎಂಬುದು ಅವುಗಳ ಮೇಲಿನ ಕ್ರೌರ್ಯಕ್ಕೆ ಸಬೂಬು ಆಗಬಾರದು. ಇಷ್ಟಕ್ಕೂ ಪ್ರಾಣಿಗಳನ್ನು ಪ್ರೀತಿಸುವ, ಅವುಗಳ ಹಕ್ಕುಗಳಿಗಾಗಿ ಧರಣಿ ನಡೆಸುವ ಜಗತ್ತಿನಲ್ಲಿ, ಭ್ರೂಣಗಳಿಗಾಗಿ ಒಂದು ಗಂಟೆಯ ಪ್ರತಿಭಟನೆ ನಡೆಸುವುದಕ್ಕೂ ಜನರಿಲ್ಲ ಅನ್ನುವ ವಾತಾವರಣ ನಿರ್ಮಾಣಗೊಳ್ಳುತ್ತಿರುವುದು ಯಾವುದರ ಸೂಚನೆ? ಮನುಷ್ಯನ ಅರಿವಿನ ಮಟ್ಟ ವಿಸ್ತಾರವಾಗುತ್ತಾ ಹೋದಂತೆಯೇ ನೈತಿಕ ಅರಿವಿನ ಮಟ್ಟದಲ್ಲಿ ಕುಸಿತವಾಗುತ್ತಾ ಬರುತ್ತಿರುವುದೇಕೆ? ಜಗಮಗಿಸುವ ಮಾಲ್‍ಗಳು, ನಗರಗಳು, ಸಿನಿಮಾಗಳ ಮಧ್ಯೆ ಮನುಷ್ಯರು ಮನುಷ್ಯತ್ವವನ್ನೇ ಕಳಕೊಳ್ಳುತ್ತಿರುವರೇ?
   ಏನೇ ಆಗಲಿ, ನಿಷ್ಠೆ ಬದಲಿಸಿದ 13 ಶಾಸಕರಿಗಿಂತ ಬೆಳಗಾವಿಯಲ್ಲಿ ಪತ್ತೆಯಾದ 16 ಭ್ರೂಣಗಳು ಖಂಡಿತ ಹೆಚ್ಚು ತೂಕವುಳ್ಳವು. ಒಂದು ವೇಳೆ ಈ ಭ್ರೂಣಗಳನ್ನು ಬೆಳೆಯಲು ಬಿಡುತ್ತಿದ್ದರೆ, 16 ಮೌಲ್ಯವಂತ ಮನುಷ್ಯರು ಈ ಸಮಾಜಕ್ಕೆ ದೊರಕುತ್ತಿದ್ದರೇನೋ. ಆದ್ದರಿಂದ ಭ್ರೂಣಹತ್ಯೆಯಂಥ ಕ್ರೌರ್ಯಗಳ ವಿರುದ್ಧ ಸಾಮಾಜಿಕ ಜಾಗೃತಿ ಮೂಡಲಿ. ನಿಷ್ಠೆ ಬದಲಿಸುವ ರಾಜಕಾರಣಿ ಮತ್ತು ಭ್ರೂಣಹತ್ಯೆ ಇವೆರಡರಲ್ಲಿ ಭ್ರೂಣಕ್ಕೆ ಹೆಚ್ಚಿನ ಆದ್ಯತೆ ಸಿಗಲಿ.

Wednesday, 16 January 2013

ನರಕದ ಟಿಕೇಟನ್ನು ಖರೀದಿಸುತ್ತಿರುವ ‘ಶಿಕ್ಷಿತ’ ಮಕ್ಕಳು..


   ದೆಹಲಿ ಅತ್ಯಾಚಾರ ಪ್ರಕರಣದ ಸುತ್ತ ಪತ್ರಿಕೆಗಳು ಗಂಭೀರ ಚರ್ಚೆಯಲ್ಲಿ ತೊಡಗಿರುವಾಗಲೇ ದೆಹಲಿಯಲ್ಲೊಂದು ಆಘಾತಕಾರೀ ಘಟನೆ ನಡೆದಿತ್ತು. ಸುದ್ದಿ ಮಾಧ್ಯಮಗಳ ಮಂದಿ ತಮ್ಮ ಕ್ಯಾಮರಾ ಮತ್ತು ಪೆನ್ನನ್ನು ‘ಅತ್ಯಾಚಾರದ' ಸುತ್ತಲೇ ಕೇಂದ್ರೀಕರಿಸಿದ್ದರಿಂದ ಆ ಘಟನೆ ಅಷ್ಟಾಗಿ ಸುದ್ದಿಯಾಗಲಿಲ್ಲ. ಉನ್ನತ ಶಿಕ್ಷಣ ಪಡೆದ ದೆಹಲಿಯ ಇಬ್ಬರು ಗಂಡು ಮಕ್ಕಳು ತಮ್ಮ ತಾಯಿಯನ್ನು ಬೀದಿಗಟ್ಟಿದ್ದರು. ವೃದ್ಧಾಪ್ಯದಲ್ಲಿ ತನಗೆ ಆಸರೆಯಾಗಬಹುದೆಂದು ನಂಬಿದ್ದ ಮಕ್ಕಳೇ ಹೊರಹಾಕಿದಾಗ, ಆ ತಾಯಿಯು ಹಿರಿಯ ನಾಗರಿಕರ ನ್ಯಾಯಾಧೀಕರಣವನ್ನು ಸಂಪರ್ಕಿಸಿದರು. ಇದೀಗ ಈ ನ್ಯಾಯಾಧೀಕರಣವು ಆ ಇಬ್ಬರೂ ‘ಸುಶಿಕ್ಷಿತ' ಮಕ್ಕಳನ್ನು ಕರೆದು ಛೀಮಾರಿ ಹಾಕಿದೆಯಲ್ಲದೇ ಇಬ್ಬರು ಮಕ್ಕಳೂ ಪ್ರತಿ ತಿಂಗಳು ತಲಾ 4 ಸಾವಿರ ರೂಪಾಯಿಯಂತೆ ತಾಯಿಗೆ ಕೊಡಬೇಕೆಂದೂ ಮಾತ್ರವಲ್ಲ, ತಾಯಿಗೆ ಮನೆಯಲ್ಲೇ ಆಸರೆ ಒದಗಿಸಬೇಕೆಂದೂ ನಿರ್ದೇಶನ ನೀಡಿದೆ..
  ಇಷ್ಟಕ್ಕೂ, ಇದೇನೂ ಒಂಟಿ ಪ್ರಕರಣ ಅಲ್ಲ. ಹೆಲ್ಪ್ ಏಜ್ ಇಂಡಿಯಾ ಎಂಬ ಸಂಸ್ಥೆ ಇತ್ತೀಚೆಗೆ ನಡೆಸಿದ ಸರ್ವೇಯ ಪ್ರಕಾರ, ಈ ದೇಶದಲ್ಲಿ ಶೇ. 31ರಷ್ಟು ಹಿರಿಯರು ತಮ್ಮ ಮನೆಯಲ್ಲೇ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಹೆತ್ತವರನ್ನು ಪೀಡಿಸುವುದರಲ್ಲಿ ಅತ್ಯಂತ ಮುಂದಿರುವುದು ಗಂಡು ಮಕ್ಕಳೇ. ಇವರ ಸಂಖ್ಯೆ ಶೇ. 56. ದುರಂತ ಏನೆಂದರೆ, ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶದ ಹೆತ್ತವರು ಭಾಗ್ಯಶಾಲಿಗಳು. ನಗರ ಪ್ರದೇಶದಲ್ಲಿ ವಾಸಿಸುವ, ಅತ್ಯಂತ ಸುಶಿಕ್ಷಿತ ಮಕ್ಕಳೇ ತಮ್ಮ ಹೆತ್ತವರನ್ನು ಪೀಡಿಸುತ್ತಿದ್ದಾರೆ. ಪತಿ, ಪತ್ನಿ, ಮಕ್ಕಳು ಎಂಬ ಆಧುನಿಕ ಜೀವನ ಶೈಲಿಗೆ ಅಂಟಿಕೊಂಡಿರುವ ಈ ಮಕ್ಕಳು ಹೆತ್ತವರನ್ನು ಒಂಟಿಯಾಗಿಸಿ ನಗರಗಳಲ್ಲಿ ವಾಸಿಸುತ್ತಿದ್ದಾರೆ.. ಎಂದೆಲ್ಲಾ ಸರ್ವೇ ಅಭಿಪ್ರಾಯ ಪಟ್ಟಿದೆ.
   ನಿಜವಾಗಿ, ಈ ದೇಶದಲ್ಲಿ ದುರ್ಬಲ ಮತ್ತು ರೋಗಪೀಡಿತರಾದ ಹೆತ್ತವರ ಸ್ಥಿತಿ ಹೇಗಿದೆ ಎಂಬುದನ್ನು ಕಂಡುಕೊಳ್ಳುವುದಕ್ಕೆ ಸರ್ವೇಯ ಅಗತ್ಯವೇನೂ ಇಲ್ಲ. ನಗರಗಳ ಬೀದಿ; ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವೃದ್ಧಾಶ್ರಮಗಳಿಗೆ ಒಮ್ಮೆ ಭೇಟಿ ಕೊಟ್ಟರೆ, ಹೆತ್ತವರಿಗೆ ಈ ದೇಶ ಕೊಡುತ್ತಿರುವ ಗೌರವ ಏನೆಂಬುದು ಗೊತ್ತಾಗುತ್ತದೆ. ಒಂದು ಕಡೆ ದೇಶ ವೈಜ್ಞಾನಿಕವಾಗಿ ಮತ್ತು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಲೇ ಇದೆ. ಹೆಚ್ಚೆಚ್ಚು ಶಾಲೆ, ಕಾಲೇಜುಗಳು ನಿರ್ಮಾಣವಾಗುತ್ತಿವೆ. ಟ್ಯಾಬ್ಲೆಟ್‍ನಂತಹ ಅಗ್ಗದ ಕಂಪ್ಯೂಟರ್‍ಗಳನ್ನು ಸರಕಾರವೇ ಮಕ್ಕಳಿಗೆ ಒದಗಿಸುವ ಮೂಲಕ, ಶೈಕ್ಷಣಿಕ ಕ್ರಾಂತಿಗೆ ಪ್ರಯತ್ನಿಸುತ್ತಿದೆ. ಇನ್ನೊಂದು ಕಡೆ, ಅದೇ ಆಧುನಿಕ ಮಕ್ಕಳ ಹೆತ್ತವರು ತುಸು ಪ್ರೀತಿ, ಕರುಣೆಗಾಗಿ ಕೋರ್ಟು ಮೆಟ್ಟಲು ಹತ್ತುತ್ತಿದ್ದಾರೆ. ಅಂದ ಹಾಗೆ, ಶಿಕ್ಷಿತರಾಗುವುದು ಅಭಿವೃದ್ಧಿಯ ಮಾನದಂಡ ಎಂದಾದರೆ, ಆ ಅಭಿವೃದ್ಧಿಯಲ್ಲಿ ಹೆತ್ತವರೇಕೆ ಪ್ರತಿದಿನ ಅಭದ್ರತೆ ಅನುಭವಿಸುತ್ತಿದ್ದಾರೆ? ಓರ್ವ ವ್ಯಕ್ತಿ ಉನ್ನತ ಶಿಕ್ಷಣ ಪೂರೈಸಿ ಎಂಜನಿಯರೋ, ಡಾಕ್ಟರೋ ಆದರೆ ಈ ದೇಶ ಆತನನ್ನು ಶಿಕ್ಷಿತ ಎಂದು ಗುರುತಿಸುತ್ತದೆ. ಆತನಿಗೊಂದು ವಿಶೇಷ ವರ್ಚಸ್ಸು, ಗೌರವಾದರ ದೊರೆಯುತ್ತದೆ. ಅದೇ ವೇಳೆ ಓರ್ವ 7ನೇ ಕ್ಲಾಸಿಗೇ ಕಲಿಕೆಯನ್ನು ಕೊನೆಗೊಳಿಸಿದರೆ ಆತನಿಗೆ ಈ ಎಂಜಿನಿಯರ್‍ನ ಮುಂದೆ ಯಾವ ಸ್ಥಾನ-ಮಾನವೂ ಇರುವುದಿಲ್ಲ. ಶಾಲೆ ಕಲಿಯದ ಪಶ್ಚಾತ್ತಾಪದಲ್ಲಿ ಪ್ರತಿಕ್ಷಣವೂ ನರಳುವಂತಹ ಸನ್ನಿವೇಶವೊಂದು ಆತನ ಮುಂದೆ ನಿರ್ಮಾಣವಾಗಿರುತ್ತದೆ. ಶೈಕ್ಷಣಿಕ ಅಭಿವೃದ್ಧಿಯ ಮಾನದಂಡದಂತೆ, ಡಾಕ್ಟರ್ ಬಹಳ ಸುಖೀ ಮತ್ತು ಆಧುನಿಕ ಮನುಷ್ಯ. ಕೃಷಿಯನ್ನೋ ಕೂಲಿಯನ್ನೋ ಕೆಲಸವಾಗಿ ಆಯ್ಕೆ ಮಾಡಿಕೊಂಡಿರುವ 7ನೇ ತರಗತಿಯ ಮನುಷ್ಯ ಈ ಅಭಿವೃದ್ಧಿಯ ಮಾನದಂಡದಂತೆ ಅತ್ಯಂತ ದುರ್ದೈವಿ. ಆತ ಯಾರ ಪಾಲಿಗೂ ಮಾದರಿ ಅಲ್ಲ.. ಬಹುಶಃ ಇಂಥದ್ದೊಂದು ಮಾನಸಿಕತೆ ಬಲವಾಗಿ ಬೇರೂರುತ್ತಿರುವ ಈ ಸಂದರ್ಭದಲ್ಲೇ ದೆಹಲಿಯ ಆ ತಾಯಿ ಮತ್ತು ಹೆಲ್ಪ್ ಏಜ್ ಇಂಡಿಯಾದ ಸರ್ವೇಯು ಇನ್ನೊಂದು ಸತ್ಯವನ್ನು ಬಹಿರಂಗಕ್ಕೆ ತಂದಿದೆ. ಆಧುನಿಕ ಶಿಕ್ಷಣವು ಸುಖೀಯಾಗಿಸುವುದು ಅದನ್ನು ಪಡೆದವರನ್ನೇ ಹೊರತು ಅವರನ್ನು ಅವಲಂಬಿಸಿದವರನ್ನು ಅಲ್ಲ ಅನ್ನುವ ಆಘಾತಕಾರಿ ಅಂಶವನ್ನು ಬೆಳಕಿಗೆ ತಂದಿದೆ. ಆದ್ದರಿಂದಲೇ ನಮ್ಮ ಶಿಕ್ಷಣ ಕ್ಷೇತ್ರ ಪುನರವಲೋಕನಕ್ಕೆ ತೆರೆದುಕೊಳ್ಳಬೇಕಾಗಿದೆ. ನಮ್ಮ ಶಿಕ್ಷಣದಲ್ಲಿ ಎಲ್ಲೋ ಒಂದು ಕಡೆ ದೋಷ ಇದೆ. ಈ ಶಿಕ್ಷಣಕ್ಕೆ ಹೆತ್ತವರನ್ನು ಗೌರವಿಸುವಂತಹ ವಾತಾವರಣ ಬೆಳೆಸಲು ಸಾಧ್ಯವಾಗುತ್ತಿಲ್ಲ. ಹೆಣ್ಣು ಮಕ್ಕಳನ್ನು ಸಹೋದರಿಯರಂತೆ ಕಾಣುವಲ್ಲೂ ಸೋಲುತ್ತಿದೆ.
   ಯಾವ ಹೆತ್ತವರೂ ತಮ್ಮ ಮಕ್ಕಳನ್ನು ಕಟಕಟೆಯಲ್ಲಿ ನಿಲ್ಲಿಸುವುದಕ್ಕೆ ಇಷ್ಟಪಡುವುದಿಲ್ಲ. ತಮ್ಮ ಮಕ್ಕಳನ್ನು ಸಾರ್ವಜನಿಕವಾಗಿ ದೂರಿಕೊಳ್ಳುವುದೂ ಇಲ್ಲ. ಹೆತ್ತವರ ಈ ವಿಶಾಲ ಮನಸ್ಥಿತಿಯಿಂದಾಗಿಯೇ ಹೆಚ್ಚಿನ ಮಕ್ಕಳು ಇವತ್ತು ಸಮಾಜದಲ್ಲಿ ಮರ್ಯಾದೆಯನ್ನು ಉಳಿಸಿಕೊಂಡಿರುವುದು. ಒಂದು ವೇಳೆ ವೃದ್ಧ ಹೆತ್ತವರೇನಾದರೂ ಬಾಯಿ ತೆರೆದರೆ, ಜನರ ಮುಂದೆ ಸುಭಗರಂತೆ ಫೋಸು ಕೊಡುವ ಎಷ್ಟೋ ಮಕ್ಕಳ ಬಣ್ಣ ಖಂಡಿತ ಬಯಲಾದೀತು. ಆದ್ದರಿಂದ ಹೆತ್ತವರ ಈ ಹೃದಯ ವೈಶಾಲ್ಯತೆಗೆ ಆಧುನಿಕ ಶಿಕ್ಷಿತ ವರ್ಗ ಗೌರವ ನೀಡಬೇಕಾಗಿದೆ. ಮಕ್ಕಳು,  ಹೆತ್ತವರನ್ನು ಬೀದಿ ಪಾಲು ಮಾಡುವುದು ಬಿಡಿ, ‘ಛೆ' ಎಂಬ ಪದವನ್ನು ಕೂಡ ಪ್ರಯೋಗಿಸಬಾರದು (17:23) ಎಂದು ಪವಿತ್ರ ಕುರ್‍ಆನ್ ತಾಕೀತು ಮಾಡಿದೆ. ಓರ್ವರ ಸ್ವರ್ಗ ಇಲ್ಲವೇ ನರಕವನ್ನು ನಿರ್ಣಯಿಸುವುದು ಅವರ ಹೆತ್ತವರು ಎಂದಿದ್ದೂ ಇಸ್ಲಾಮ್. ಹೆತ್ತವರು ಮುನಿಸಿಕೊಂಡಿದ್ದರೆ ಎಷ್ಟೇ ನಮಾಝ್, ಹಜ್ಜ್ ನಿರ್ವಹಿಸಿದರೂ ಮಕ್ಕಳಿಗೆ ಸ್ವರ್ಗ ಸಿಗಲಾರದು ಎಂದಿದ್ದೂ ಇಸ್ಲಾಮೇ. ಪ್ರಸವದ ಸಂದರ್ಭದಲ್ಲಿ ತಾಯಿ ಅನುಭವಿಸಿದ ಒಂದು ಕ್ಷಣದ ನೋವಿಗೆ ಮಕ್ಕಳು ಜೀವನ ಪೂರ್ತಿ ಸೇವೆ ಮಾಡಿದರೂ ಸಾಟಿಯಾಗಲಾರದು ಎಂದು ಪ್ರವಾದಿ(ಸ) ಹೇಳಿದ್ದಾರೆ. ಒಂದು ರೀತಿಯಲ್ಲಿ, ಪವಿತ್ರ ಕುರ್‍ಆನ್ ಮತ್ತು ಪ್ರವಾದಿ ಮುಹಮ್ಮದ್‍ರು(ಸ) ಹೆತ್ತವರ ಸೇವೆಯನ್ನು ಸ್ವರ್ಗದ ಟಿಕೇಟು ಎಂದು ಮಾತ್ರವಲ್ಲ, ಶಿಕ್ಷಣದ ಮೂಲ ಪಾಠವಾಗಿ ಕಲಿಸಿದ್ದಾರೆ. ಹೆತ್ತವರನ್ನು ಬಸ್ ನಿಲ್ದಾಣದಲ್ಲಿ ತೊರೆದು ಬಿಡುವ, ಹೊರೆಯೆಂದು ಪರಿಗಣಿಸಿ ವೃದ್ಧಾಶ್ರಮಕ್ಕೆ ಅಟ್ಟುವವರನ್ನು ‘ನರಕ'ದ ಮನುಷ್ಯರೆಂಬ ಕಟು ಪಾಠವನ್ನು ಮೂಲಭೂತ ಶಿಕ್ಷಣವಾಗಿ ಕಲಿಸಿದ್ದಾರೆ. ಈ ಶಿಕ್ಷಣ ಇವತ್ತು ಸಾರ್ವತ್ರೀಕರಣಗೊಳ್ಳಬೇಕಾದ ಅಗತ್ಯ ಇದೆ. ಇಲ್ಲದಿದ್ದರೆ ಮುಂದೊಂದು ದಿನ ನ್ಯಾಯಾಲಯಗಳ ಕಟಕಟೆಯಲ್ಲಿ ಹೆತ್ತವರು ಮತ್ತು ಮಕ್ಕಳೇ ತುಂಬಿ ಹೋದಾರು.

Monday, 7 January 2013

'ನಿರ್ಭಯ' ತೆರೆದ ಬಾಗಿಲನ್ನು ಮುಚ್ಚದಿರೋಣ


ಹೆಣ್ಣು ಕಳೆದ ಮೊರ್ನಾಲ್ಕು  ವಾರಗಳಿಂದ ಮಾಧ್ಯಮಗಳ ಮುಖಪುಟದಲ್ಲಿದ್ದಾಳೆ. ಆಕೆಯನ್ನು ಕೇಂದ್ರೀಕರಿಸಿ ಪತ್ರಿಕೆಗಳಲ್ಲಿ ಸುದ್ದಿ ರಚನೆಯಾಗತೊಡಗಿವೆ. ರಾಜಕಾರಣಿಗಳು, ನ್ಯಾಯಾಧೀಶರು, ಟಿ.ವಿ. ಚಾನೆಲ್‍ಗಳು.. ಎಲ್ಲರೂ ಹೆಣ್ಣಿನ ಬಗ್ಗೆ ಮಾತಾಡತೊಡಗಿದ್ದಾರೆ. ಧರ್ಮಗಳಲ್ಲಿ ಹೆಣ್ಣಿನ ಸ್ಥಾನ-ಮಾನ, ಆಧುನಿಕ ಜಗತ್ತಿನಲ್ಲಿ ಹೆಣ್ಣು ಸಾಗುತ್ತಿರುವ ದಿಕ್ಕು, ಆಕೆಯ ಬಟ್ಟೆ, ವರ್ತನೆ, ಪಾಶ್ಚಾತ್ಯ ಸಂಸ್ಕ್ರಿತಿಯ ಸರಿ-ತಪ್ಪುಗಳು, ಸಡಿಲ ಕಾನೂನುಗಳು.. ಎಲ್ಲವೂ ಚರ್ಚೆಗೊಳಗಾಗುತ್ತಿವೆ. ನಿಜವಾಗಿ, ಹೆಣ್ಣು ಹೀಗೆ ದಿಢೀರ್ ಆಗಿ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಂಡದ್ದು ಪುಕ್ಕಟೆಯಾಗಿ ಅಲ್ಲ. ಪ್ರತಿ 20 ನಿಮಿಷಗಳಿಗೊಮ್ಮೆ ಅತ್ಯಾಚಾರಕ್ಕೆ ಒಳಗಾಗುತ್ತಾ, 'ಗಂಭೀರ ಸಮಸ್ಯೆಗಳ ಪಟ್ಟಿಯಲ್ಲಿ ತನ್ನನ್ನೂ ಸೇರಿಸಿಕೊಳ್ಳಿ..' ಎಂದು ದೀರ್ಘ ಸಮಯದಿಂದ ಹೆಣ್ಣು ಮೊರೆಯಿಡುತ್ತಿದ್ದಳು. ಸದ್ಯ ಆ 20 ನಿಮಿಷಗಳು 15 ನಿಮಿಷಗಳಾಗಿ ಬದಲಾಗಿವೆ. ಒಂದು ವೇಳೆ 'ನಿರ್ಭಯ'ಳ ಮೇಲಿನ ಅತ್ಯಾಚಾರವು ದೆಹಲಿ ಬಿಟ್ಟು ದೇಶದ ಇನ್ನಾವುದೋ ಭಾಗದಲ್ಲಿ ಆಗಿರುತ್ತಿದ್ದರೆ ಪತ್ರಿಕೆಗಳ ಮುಖಪುಟದಲ್ಲಿ ಅದಕ್ಕೆ ಜಾಗ ಸಿಗುವ ಸಾಧ್ಯತೆಯೇ ಇರಲಿಲ್ಲ. ಈ ಮಟ್ಟದ ಪ್ರತಿಭಟನೆಗಳಾಗಲಿ, ಕಾನೂನು ರಚನೆಯ ಪ್ರಯತ್ನಗಳಾಗಲೀ ಆಗುತ್ತಲೂ ಇರಲಿಲ್ಲ. ವಿಶೇಷ ಏನೆಂದರೆ, 'ನಿರ್ಭಯ' ಈಗ ಎಲ್ಲರನ್ನೂ ಎಚ್ಚರಗೊಳಿಸಿದ್ದಾಳೆ. ಹೆಣ್ಣು ಮತ್ತು ಗಂಡಿನ ನಡುವೆ ಇರುವ ವ್ಯತ್ಯಾಸ, ಇರಲೇಬೇಕಾದ ಅಂತರಗಳ ಬಗ್ಗೆ ಧೈರ್ಯದಿಂದ ಮಾತಾಡುವ ವಾತಾವರಣವನ್ನು ಸೃಷ್ಟಿ ಮಾಡಿದ್ದಾಳೆ. ಈ ಮೊದಲು ಹೆಣ್ಣಿನ ಉಡುಪನ್ನು ವಿಮರ್ಶಿಸುವುದನ್ನು ಮಹಿಳಾ ಆಯೋಗಗಳು ಮತ್ತು ಫೆಮಿನಿಸ್ಟ್ ಗಳು ಅಪರಾಧವೆಂಬಂತೆ ಪರಿಗಣಿಸುತ್ತಿದ್ದರು.  ಹೆಣ್ಣಿನ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ ಹೆಣ್ಣಿನ ಪಾತ್ರವೂ ಇದೆ ಎಂಬ ಬರಹ, ಪತ್ರಗಳನ್ನು ಪ್ರಕಟಿಸುವ ಧೈರ್ಯವನ್ನು ಪತ್ರಿಕೆಗಳು ಮಾಡಿದ್ದೂ ಕಡಿಮೆ. ಹಾಗಂತ ಅಂಥ ಬರಹಗಳ ಬಗ್ಗೆ ಸಂಪಾದಕೀಯ ಮಂಡಳಿಗೆ ಸಹಮತ ಇಲ್ಲ ಎಂದಲ್ಲ. ಸುಮ್ಮನೆ ರಿಸ್ಕ್ ಯಾಕೆ, ಮಹಿಳಾ ವಿರೋಧಿಗಳೆಂಬ ಹಣೆಪಟ್ಟಿಯನ್ನು ಯಾಕೆ ಹಚ್ಚಿಕೊಳ್ಳಬೇಕು ಎಂಬ ‘ಸುರಕ್ಷಿತ’ ನಿಲುವಿಗೆ ಹೆಚ್ಚಿನ ಪತ್ರಿಕೆಗಳು ಅಂಟಿಕೊಂಡಿದ್ದವು. ಆದರೆ ಸದ್ಯ ಈ ಮಡಿವಂತಿಕೆಯನ್ನು 'ನಿರ್ಭಯ' ಮುರಿದು ಹಾಕುವಲ್ಲಿ ಯಶಸ್ವಿಯಾಗಿದ್ದಾಳೆ. ಮಹಿಳೆಯರೇ ಮಹಿಳೆಯರ ಜೀವನ ವಿಧಾನವನ್ನು ವಿಮರ್ಶಿಸುವ ಧೈರ್ಯವನ್ನು ತೋರುತ್ತಿದ್ದಾರೆ. 'ಲೈಂಗಿಕ ದೌರ್ಜನ್ಯಕ್ಕೆ ಪುರುಷರಷ್ಟೇ ಮಹಿಳೆಯರೂ ಜವಾಬ್ದಾರರು..' ಎಂದು ಛತ್ತೀಸ್‍ಗಢ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ವಿಭಾ ರಾವ್ ಅಭಿಪ್ರಾಯಪಟ್ಟಿದ್ದಾರೆ. ಹೆಣ್ಣಿನ ಉಡುಪು ಮತ್ತು ವರ್ತನೆಗಳು ಪುರುಷರಿಗೆ ತಪ್ಪು ಸಂದೇಶವನ್ನು ಕೊಡುವಂತಿರುತ್ತವೆ, ಹೆಣ್ಣು ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ..' ಎಂದಿದ್ದಾರೆ. ಮಮತಾ ಬ್ಯಾನರ್ಜಿಯವರೂ ಇಂಥದ್ದೇ ಅರ್ಥ ಬರುವ ಮಾತಾಡಿದ್ದಾರೆ. ಪುದುಚೇರಿ ಸರಕಾರವಂತೂ ತನ್ನ ಶಿಕ್ಷಣ ನೀತಿಗಳಲ್ಲೇ ಬದಲಾವಣೆ ತರಲು ನಿರ್ಧರಿಸಿದೆ. ಹುಡುಗ ಮತ್ತು ಹುಡುಗಿಯರಿಗೆ ಬೇರೆ ಬೇರೆ ಶಾಲಾ ಬಸ್‍ಗಳನ್ನು ವ್ಯವಸ್ಥೆ ಮಾಡುವುದು; ಹೆಣ್ಣು ಮಕ್ಕಳು ಸಮವಸ್ತ್ರದ ಮೇಲೆ ಓವರ್ ಕೋಟನ್ನು (ಮೇಲು ಹೊದಿಕೆ) ಧರಿಸುವುದು; ಮೊಬೈಲನ್ನು ನಿರ್ಬಂಧಿಸುವುದು; ಹುಡುಗ, ಹುಡುಗಿಯರ ನಡುವಿನ ಸಂಪರ್ಕವನ್ನು ಸಾಕಷ್ಟು ಮಟ್ಟಿಗೆ ಕಡಿತಗೊಳಿಸುವುದು.. ಮುಂತಾದ ಸುಧಾರಣಾ ನೀತಿಗಳ ಜಾರಿಗಾಗಿ ಅದು ಗಂಭೀರ ಪ್ರಯತ್ನಕ್ಕಿಳಿದಿದೆ.
  ಒಂದು ರೀತಿಯಲ್ಲಿ ನಿರ್ಭಯಳ ಸಾವು ನಿರ್ಭಯ ಸಮಾಜವೊಂದರ ರಚನೆಯ ಬಗ್ಗೆ ಗಂಭೀರ ಚರ್ಚೆಯೊಂದನ್ನು ಹುಟ್ಟು ಹಾಕಲು ಯಶಸ್ವಿಯಾಗಿದೆ. ಇಷ್ಟಕ್ಕೂ ಹೆಣ್ಣಿಗೆ ಒಂದಷ್ಟು ಹಿತವಚನಗಳನ್ನು ಹೇಳುವುದು, ಪುರುಷರ ತಪ್ಪುಗಳನ್ನು ಖಂಡಿಸುತ್ತಲೇ ಹೆಣ್ಣಿನ ಅತಿರೇಕಗಳ ಬಗ್ಗೆಯೂ ಮಾತಾಡುವುದು ಯಾಕೆ ಪುರಾತನ ಅನ್ನಿಸಿಕೊಳ್ಳಬೇಕು? ಯಾವುದೇ ಒಂದು ಸಮಸ್ಯೆಯ ಬಗ್ಗೆ ಚರ್ಚಿಸುವಾಗ ಅದರ ಎರಡೂ ಮಗ್ಗುಲುಗಳನ್ನು ಚರ್ಚಿಸಬೇಕಾದುದು ಅಗತ್ಯವಲ್ಲವೇ? ಮತ್ತೇಕೆ ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ಒಂದು ಮಗ್ಗುಲು ಮಾತ್ರ ಚರ್ಚೆಗೊಳಗಾಗುವುದು? ಹೆಣ್ಣಿನ ಉಡುಪು, ಜೀವನ ವಿಧಾನ, ಸ್ವಚ್ಛಂದ ಬೆರೆಯುವಿಕೆಗಳನ್ನೆಲ್ಲ ವಿಮರ್ಶೆಗೊಡ್ಡುವುದು ಮಹಿಳಾ ವಿರೋಧಿಯೆಂದು ಯಾಕೆ ಗುರುತಿಸಿಕೊಳ್ಳಬೇಕು?  ವಿಮರ್ಶೆ, ಟೀಕೆಗಳಿಗೆ ಎಲ್ಲರೂ ಎಲ್ಲ ಕ್ಷೇತ್ರಗಳೂ ಮುಕ್ತವಾಗಿರುವುದೇ ಸುಧಾರಣೆಯ ದೃಷ್ಟಿಯಿಂದ ಹೆಚ್ಚು ಉತ್ತಮವಲ್ಲವೇ?
  ಆದ್ದರಿಂದಲೇ, ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಸದ್ಯ ಕಾಣಿಸಿಕೊಂಡಿರುವ ಚರ್ಚೆಗಳು ಹೆಚ್ಚು ಇಷ್ಟವಾಗುವುದು. ಈ ಮೊದಲು ಮಾಧ್ಯಮಗಳು ಹೆಣ್ಣನ್ನು ಸೌಂದರ್ಯದ ಕಾರಣಕ್ಕಾಗಿ ಮಾತ್ರ ಚರ್ಚೆಗೆತ್ತಿಕೊಳ್ಳುತ್ತಿದ್ದುವು. ಸೆಲೆಬ್ರಿಟಿಗಳಿಗಾಗಿ ಪ್ರತ್ಯೇಕ ಪುಟಗಳನ್ನು ಮೀಸಲಿಟ್ಟು, ಅಲ್ಲಿ ಅವರ ಕಾಲು, ಕೈ, ಮೊಗುಗಳನ್ನು ವರ್ಣಿಸುತ್ತಾ, ಅವರಿಗೆ ಯಾರ ಯಾರ ಜೊತೆ ಯಾವ್ಯಾವ ಬಗೆಯ ಅಫೇರ್‍ಗಳಿವೆ ಎಂಬುದನ್ನೆಲ್ಲಾ 'ಗಂಭೀರ' ಸುದ್ದಿಗಳಂತೆ ಪ್ರಕಟಿಸುತ್ತಿದ್ದುವು. ಒಂದು ವೇಳೆ ಪತ್ರಿಕೆಗಳ ಮುಖಪುಟದಲ್ಲಿ ಹೆಣ್ಣೊಬ್ಬಳು ಕಾಣಿಸಿಕೊಳ್ಳಬೇಕಾದರೆ ಒಂದೋ ಆಕೆ ಸೆಲೆಬ್ರಿಟಿಯಾಗಿರಬೇಕು ಇಲ್ಲವೇ ರಾಜಕಾರಣಿಯಾಗಿರಬೇಕು ಎಂಬಂಥ ವಾತಾವರಣವನ್ನು ಅವು ಸೃಷ್ಟಿಸಿದ್ದುವು. ಸೆಲೆಬ್ರಿಟಿಗಳು ಎಲ್ಲಾದರೂ ಸಿನಿಮಾ ಚಿತ್ರೀಕರಣಕ್ಕೆ ಹೋಗಿ ಅಲ್ಲಿ ಅಭಿಮಾನಿಯೊಬ್ಬ ಅಸಭ್ಯವಾಗಿ ವರ್ತಿಸಿದರೆ ಅದು ಮುಖಪುಟದಲ್ಲಿ ಸುದ್ದಿಯಾಗುತ್ತಿತ್ತೇ ಹೊರತು, ಸಾಮಾನ್ಯ ಹೆಣ್ಣು ಮಗಳೊಬ್ಬಳು ಅತ್ಯಾಚಾರಕ್ಕೀಡಾಗಿ ಸಾವಿಗೀಡಾದರೂ ಒಳಪುಟದಲ್ಲಿ ಒಂದು ಕಾಲಮ್‍ನ ಸುದ್ದಿಯಾಗಿ ಪ್ರಕಟವಾಗುತ್ತಿತ್ತು. ಹೆಣ್ಣೆಂದರೆ, ಅದು ಸಿನಿಮಾ ತಾರೆ ಮತ್ತು ಹೆಣ್ಣಿನ ಸಮಸ್ಯೆ ಎಂದರೆ ಅದು ಸಿನಿಮಾ ತಾರೆಯರ ಸಮಸ್ಯೆ ಎಂಬ ವಾತಾವರಣ ಇದ್ದುದರಿಂದಲೇ ಸಾಮಾನ್ಯ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, 'ನಿರ್ಭಯ'ಳ ಸಾವಿನ ವರೆಗೆ ಸುದ್ದಿಯಾಗದೇ ಸತ್ತು ಹೋಗುತ್ತಿದ್ದುದು. ಇದೀಗ ಪತ್ರಿಕೆಗಳ ಧೋರಣೆಯಲ್ಲಿ ಯಾವ ಮಟ್ಟದ ಬದಲಾವಣೆಯಾಗಿದೆಯೆಂದರೆ, 8ನೇ ತರಗತಿಯಿಂದ ಹೆಣ್ಣು ಮತ್ತು ಗಂಡು ಮಕ್ಕಳ ಶಿಕ್ಷಣ ಪ್ರತ್ಯೇಕವಾಗಿ ನಡೆಯಬೇಕು ಎಂದು ಅಭಿಪ್ರಾಯ ಪಡುವ 'ಪತ್ರ'ಗಳು ‘ದಿ ಹಿಂದೂ'ವಿನಂಥ ಪತ್ರಿಕೆಗಳಲ್ಲಿ ಪ್ರಕಟವಾಗುವಷ್ಟು. ಇದನ್ನು ಖಂಡಿತ ಸ್ವಾಗತಿಸಬೇಕು.
  ಏನೇ ಆಗಲಿ, 'ನಿರ್ಭಯ'ಳ ಸಾವು, ಸಾವಿಗೀಡಾಗಿರುವ ಮೌಲ್ಯಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯೊಂದನ್ನು ಹುಟ್ಟುಹಾಕಿದೆ. ಈ ವರೆಗೆ ಮಾತಾಡುವುದಕ್ಕೆ ಯಾರು ಮಡಿವಂತಿಕೆ ತೋರುತ್ತಿದ್ದರೋ ಅವರೆಲ್ಲ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವಷ್ಟು ಈ ಚರ್ಚಾವಲಯ ವಿಸ್ತಾರವಾಗುತ್ತಿದೆ. ಮಾಧ್ಯಮಗಳ ಧೋರಣೆಯಲ್ಲೂ ಒಂದು ಬಗೆಯ ಬದಲಾವಣೆ ಕಾಣಿಸುತ್ತಿದೆ. ಸಾಮಾನ್ಯ ಹೆಣ್ಣು ಮಗಳು ಪತ್ರಿಕೆಗಳ ಮುಖಪುಟದಲ್ಲಿ ಚರ್ಚೆಗೊಳಗಾಗುತ್ತಿದ್ದಾಳೆ. ಆಕೆಯ ಮೇಲಿನ ದೌರ್ಜನ್ಯಗಳು ಮುಖಪುಟದ ವಸ್ತುವಾಗುವಷ್ಟು ಮಹತ್ವಪೂರ್ಣ ಅನ್ನಿಸಿಕೊಳ್ಳುತ್ತಿವೆ. ಆಧುನಿಕ ಮಹಿಳೆಯರ ಬಗ್ಗೆ ಆಧುನಿಕ ಮಹಿಳೆಯರೇ ಮಾತಾಡುವಂಥ; ಹೆಣ್ಣಿನ ಬಟ್ಟೆ, ಸಂಸ್ಕ್ರಿತಿ, ಜೀವನ ಕ್ರಮಗಳ ಬಗ್ಗೆ ಚರ್ಚಿಸುವಂಥ ಮುಕ್ತ ವಾತಾವರಣ ಸೃಷ್ಟಿಯಾಗುತ್ತಿದೆ. ನಿಜವಾಗಿ, ನಿರ್ಭಯ ಸಮಾಜವೊಂದು ತಯಾರಾಗಬೇಕಾದರೆ ಇಂಥದ್ದೊಂದು ಮುಕ್ತ ಚರ್ಚೆ ನಡೆಯಬೇಕಾದುದು ಅತೀ ಅಗತ್ಯ. 'ನಿರ್ಭಯ'ಳ ಮೊಲಕ ತೆರೆದುಕೊಂಡ ಈ ಚರ್ಚೆಯ ಬಾಗಿಲು ಇನ್ನಷ್ಟು ದಿನ ತೆರೆದಿರಲಿ ಮತ್ತು ನಿರ್ಮಲ ಸಮಾಜವನ್ನು ಕಟ್ಟುವಲ್ಲಿ ಈ ಚರ್ಚೆಗಳು ಸಹಾಯಕವಾಗಲಿ.

Monday, 31 December 2012

'ನಿರ್ಭಯ'ಳಿಗೆ ಸಲ್ಲಿಸುವ ಸಂತಾಪದಲ್ಲಿ ತೋಮರ್ ಗೂ ಪಾಲಿರಲಿ..


   ಸಾವು ಎಲ್ಲರ ಪಾಲಿಗೆ ಸಹಜವೇ ಆಗಿದ್ದರೂ ಕೆಲವು ಸಾವುಗಳು ಪ್ರತಿಭಟನೆಗೆ, ಇನ್ನೊಬ್ಬರ ಸಾವಿಗೆ ಕಾರಣವಾಗಿ ಸುದ್ದಿಗೊಳಗಾಗುವುದಿದೆ. ದೆಹಲಿಯಲ್ಲಿ ಅತ್ಯಾಚಾರಕ್ಕೀಡಾದ ಯುವತಿ ‘ನಿರ್ಭಯ’ (ಮಾಧ್ಯಮಗಳೇ ಕೊಟ್ಟ ಹೆಸರು) ಡಿ. 29ರಂದು ಸಾವಿಗೀಡಾಗುವುದಕ್ಕಿಂತ 3 ದಿನಗಳ ಮೊದಲೇ ಪ್ರತಿಭಟನಾಕಾರರ ಹಲ್ಲೆಯಿಂದ ಸುಭಾಶ್ಚಂದ್ರ ತೋಮರ್ ಎಂಬ ಪೊಲೀಸ್ ಕಾನ್‍ಸ್ಟೇಬಲ್ ಸಾವಿಗೀಡಾಗಿದ್ದರು. ಹೆಣ್ಣಾಗಿರುವುದೇ ನಿರ್ಭಯಳ ಅಪರಾಧವಾಗಿದ್ದರೆ ಕಾನೂನು ಪಾಲನೆಗೆ ಮುಂದಾದುದೇ ತೋಮರ್‍ರ ಅಪರಾಧವಾಗಿತ್ತು. ನಿರ್ಭಯಳಿಗೆ ತಂದೆ, ತಾಯಿ, ಸಹೋದರಿಯರಿರುವಂತೆಯೇ ತೋಮರ್‍ಗೂ ಪತ್ನಿ, ಮಕ್ಕಳು, ಕುಟುಂಬವಿದೆ. ಒಂದು ರೀತಿಯಲ್ಲಿ ಎರಡೂ ಕುಟುಂಬಗಳು ಸಮಾನ ನೋವಿಗೆ ಒಳಗಾಗಿವೆ. ಕಣ್ಣೀರು ಹರಿಸಿವೆ. ದುರಂತ ಏನೆಂದರೆ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂದು ಘೋಷಿಸುವವರ ಮಧ್ಯೆ ತೋಮರ್‍ರ ನೋವು ಎಲ್ಲೂ ಕಾಣಿಸುತ್ತಲೇ ಇಲ್ಲ. ನಿರ್ಭಯಳ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳು ತಪ್ಪನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಆದರೆ ತೋಮರ್‍ರ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ತಪ್ಪನ್ನೂ ಒಪ್ಪಿಕೊಳ್ಳುತ್ತಿಲ್ಲ. ತೋಮರ್‍ರ ಸಾವನ್ನು ಸಹಜ ಸಾವೆಂದು ಬಿಂಬಿಸಲು ಅವರು ವಿವಿಧ ನೆಪಗಳನ್ನು ಹುಡುಕುತ್ತಿದ್ದಾರೆ.
  ನಿಜವಾಗಿ, ಪ್ರತಿಭಟನಾಕಾರರಲ್ಲಿ ಕೆಲವು ಮೂಲಭೂತ ಗುಣಗಳು ಇದ್ದಿರಲೇಬೇಕು. ಇಲ್ಲದಿದ್ದರೆ ಪ್ರತಿಭಟನಾಕಾರರ ಪ್ರಾಮಾಣಿಕತೆಯೇ ಪ್ರಶ್ನೆಗೀಡಾಗುತ್ತದೆ. ಇಷ್ಟಕ್ಕೂ ಒಂದು ಅತ್ಯಾಚಾರಕ್ಕೆ ಇನ್ನೊಂದು ಅತ್ಯಾಚಾರ ಪರಿಹಾರವಾಗುತ್ತದೆಯೇ? ಪೊಲೀಸರಲ್ಲಿ ಕೆಟ್ಟವರಿದ್ದಾರೆ ಎಂಬ ಮಾತ್ರಕ್ಕೇ ಎಲ್ಲ ಪೊಲೀಸರನ್ನೂ ಕೆಟ್ಟವರೆಂಬಂತೆ ನೋಡಬೇಕಾದ ಅಗತ್ಯವೂ ಇಲ್ಲವಲ್ಲವೇ? ಸದ್ಯದ ಪರಿಸ್ಥಿತಿ ಹೇಗಿದೆಯೆಂದರೆ, ಪ್ರತಿಭಟನೆಯ ವೇಳೆ ಪೊಲೀಸರು ಹಲ್ಲೆಗೋ ಸಾವಿಗೋ ಒಳಗಾದರೆ ಅದನ್ನು ಗಂಭೀರವಾಗಿ ಪರಿಗಣಿಸುವ ವಾತಾವರಣ ಮಾಧ್ಯಮಗಳಲ್ಲಾಗಲಿ, ಪ್ರತಿಭಟನಾಕಾರರಲ್ಲಾಗಲಿ ಕಾಣಿಸುತ್ತಲೇ ಇಲ್ಲ. ಅಂದಹಾಗೆ, ಎಲ್ಲೇ ಪ್ರತಿಭಟನೆ, ಧರಣಿ, ಕೋಮುಗಲಭೆ, ಏನೇ ಆಗಲಿ ಅಲ್ಲಿಗೆ ಮೊತ್ತಮೊದಲು ತಲುಪುವುದು ಸಾಮಾನ್ಯ ಪೊಲೀಸ್ ಪೇದೆಗಳು. ಆಕ್ರೋಶಿತ ಗುಂಪುಗಳ ಕಲ್ಲಿನೇಟಿಗೆ ಮೊದಲು ಗುರಿಯಾಗುವುದೂ ಅವರೇ. ಪೊಲೀಸ್ ಕಮೀಷನರೋ ಅಥವಾ ಇನ್ನಾರೋ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಾಗ ಆಕ್ರೋಶಿತ ಗುಂಪುಗಳ ಬತ್ತಳಿಕೆಯಲ್ಲಿರುವ ಕಲ್ಲುಗಳು ಖಾಲಿಯಾಗಿರುತ್ತವೆ. ಇಷ್ಟಾದರೂ ಪೊಲೀಸರು ಸಾರ್ವಜನಿಕರ ಅನುಕಂಪಕ್ಕೆ ಒಳಗಾಗುವುದು ಕಡಿಮೆ. ಇದಕ್ಕೆ ಕಾರಣವೂ ಇದೆ. ಈ ದೇಶದ ಅತ್ಯಂತ ಭ್ರಷ್ಟ ಇಲಾಖೆಯಲ್ಲಿ ಪೊಲೀಸ್ ಇಲಾಖೆಯೂ ಒಂದು. ಅತ್ಯಾಚಾರಕ್ಕೀಡಾದ ಯುವತಿ ದೂರು ಕೊಡಲು ಪೊಲೀಸ್ ಠಾಣೆಗೆ ಹೋದರೆ ಆಕೆಯನ್ನೇ ಅತ್ಯಾಚಾರಕ್ಕೊಳಪಡಿಸುವ ಕ್ರೂರಿಗಳೂ ಪೊಲೀಸ್ ಇಲಾಖೆಯಲ್ಲಿದ್ದಾರೆ. 100 ರೂಪಾಯಿ ಪಿಕ್ ಪಾಕೆಟ್ ಮಾಡಿ ಸಿಕ್ಕಿ ಬಿದ್ದವನನ್ನು ಠಾಣೆಯಲ್ಲೇ  ಕೊಲೆ ಮಾಡುವ ಪೊಲೀಸರಿದ್ದಾರೆ. ಕೋಮು ಗಲಭೆಯ ಸಂದರ್ಭದಲ್ಲಿ ನಿರ್ದಿಷ್ಟ ಕೋಮಿನ ಪಕ್ಷಪಾತಿಯಾಗಿ ಇಡೀ ಗಲಭೆಯ ಬಗ್ಗೆ ತಪ್ಪು ವರದಿ ಕೊಡುವ ಖಾಕಿ ಸಮವಸ್ತ್ರಧಾರಿಗಳಿದ್ದಾರೆ. ದುಡ್ಡು ಪಡಕೊಂಡು ನ್ಯಾಯವನ್ನೇ ನಿರಾಕರಿಸುವವರಿದ್ದಾರೆ. ಸಾಮಾನ್ಯ ಕೂಲಿ ಕಾರ್ಮಿಕನೊಬ್ಬ ಠಾಣೆಯನ್ನು ಹತ್ತಬೇಕಾದರೆ ಇನ್‍ಫ್ಲುಯೆನ್ಸ್ ಗೆ ಯಾರನ್ನಾದರೂ ಜೊತೆಗೆ ಠಾಣೆಗೆ ಕೊಂಡೊಯ್ಯಲೇಬೇಕು ಎಂಬ ವಾತಾವರಣವನ್ನು ನಿರ್ಮಿಸಿದವರಿದ್ದಾರೆ. ಆದರೂ ಎಲ್ಲ ಪೊಲೀಸರೂ ಹಾಗಲ್ಲವಲ್ಲ. ನಿರ್ಭಯಳ ಮೇಲೆ ಅತ್ಯಾಚಾರ ಮಾಡಿದವರನ್ನು ಮುಂದಿಟ್ಟುಕೊಂಡು ಎಲ್ಲ ಪುರುಷರೂ ಹೀಗೆಯೇ ಎಂದು ಹೇಳುವುದು ಹೇಗೆ ತಪ್ಪೋ ಹಾಗೆಯೇ ಇದೂ ಅಲ್ಲವೇ?
  ಅತ್ಯಾಚಾರದ ವಿರುದ್ಧ ದೇಶಾದ್ಯಂತ ಸಂಚಲನ ಮೂಡಿಸುವುದಕ್ಕೆ ನಿರ್ಭಯಳ ಸಾವು ಕಾರಣವಾದಂತೆಯೇ, ಪ್ರತಿಭಟನೆಗಳು ಹೇಗಿರಬೇಕು ಎಂಬ ಬಗ್ಗೆ ಒಂದೊಳ್ಳೆಯ ಚರ್ಚೆಗೆ ತೋಮರ್‍ರ ಸಾವೂ ನೆಪವಾಗಬೇಕು. ಪ್ರತಿಭಟನೆ ಅಂದರೆ, ಜನರ ಕೈಯಲ್ಲಿ ಕಲ್ಲು, ಸಲಾಕೆಗಳು ಇರಲೇಬೇಕೆಂದೇನೂ ಇಲ್ಲವಲ್ಲ. ಪ್ರತಿಭಟಿಸುವುದು ಯಾರ ವಿರುದ್ಧ ಮತ್ತು ಯಾವುದರ ವಿರುದ್ಧ ಎಂಬುದರ ಕುರಿತು ಸ್ಪಷ್ಟ ತಿಳುವಳಿಕೆ ಇರುವ ಮಂದಿ ಆಯುಧಗಳನ್ನು ಬಳಸುವುದಕ್ಕೆ ಸಾಧ್ಯವೂ ಇಲ್ಲ. ಹಾಗೆಯೇ, ತೋಮರ್‍ರ ಸಾವಿಗೆ ತಾವೆಷ್ಟು ಕಾರಣರು ಎಂಬ ಬಗ್ಗೆ ಪೊಲೀಸ್ ಇಲಾಖೆಯೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ತಮ್ಮನ್ನು ಜನರೇಕೆ ಅನುಮಾನದಿಂದ ನೋಡುತ್ತಾರೆ ಎಂಬುದಕ್ಕೆ ಅದು ಕಾರಣಗಳನ್ನು ಕಂಡುಕೊಳ್ಳಬೇಕು. ಇವತ್ತು ಯಾವುದೇ ಒಂದು ಪೊಲೀಸ್ ಠಾಣೆಗೆ, ತಾನು ನೂರಕ್ಕೆ ನೂರು ಪ್ರಾಮಾಣಿಕ ಎಂದು ಬೋರ್ಡು ತಗುಲಿಸಿಕೊಳ್ಳಲು ಸಾಧ್ಯವೇ? ಒಂದು ವೇಳೆ ಹಾಗೆ ಬೋರ್ಡು ಹಾಕಿದರೂ ಅದನ್ನು ಜನಸಾಮಾನ್ಯರು ನಂಬಿಯಾರೇ? ಇಂಥದ್ದೊಂದು ಕೆಟ್ಟ ಗುರುತಿನಿಂದ ಹೊರಬರಲು ಎಲ್ಲ ಠಾಣೆಗಳೂ ಸಿದ್ಧವಾಗಬೇಕಾದ ಅಗತ್ಯವಿದೆ. ಜನಸಾಮಾನ್ಯರು ಪೊಲೀಸರನ್ನು ಕಾಣುವಾಗ ಕಲ್ಲಿನ ಬದಲು ಹೂವನ್ನು ಎತ್ತಿಕೊಳ್ಳಬೇಕಾದರೆ ಹೂವಿನಂಥ ಮನಸ್ಸು ಮತ್ತು ವರ್ಚಸ್ಸು ಪೊಲೀಸರಿಗೂ ಇರಬೇಕಾಗುತ್ತದೆ. ಅಂಥ ವರ್ಚಸ್ಸನ್ನು ಪೊಲೀಸ್ ಇಲಾಖೆ ಸದ್ಯ ಕಳ ಕೊಂಡದ್ದರಿಂದಲೇ ತೋಮರ್‍ರಂಥ ಕಾನ್‍ಸ್ಟೇಬಲ್‍ಗಳ ಸಾವು ಜನರನ್ನು ತಲುಪಲು ವಿಫಲವಾಗಿರುವುದು. ಆದ್ದರಿಂದ ಪ್ರಾಮಾಣಿಕ ಪೊಲೀಸರು ತಮ್ಮ ಸಹೋದ್ಯೋಗಿಗಳ ಅಪ್ರಾಮಾಣಿಕತೆ, ಅನ್ಯಾಯ, ಕೋಮುವಾದಿ ಮನಸ್ಥಿತಿಯ ವಿರುದ್ಧ ಧ್ವನಿಯೆತ್ತುವ ಮೂಲಕ ಕಳೆದ ಹೋಗಿರುವ ಗೌರವವನ್ನು ಪೊಲೀಸ್ ಇಲಾಖೆಗೆ ಮರಳಿ ದೊರಕಿಸಲು ಪ್ರಯತ್ನಿಸಬೇಕಾಗಿದೆ. ನಿರ್ಭಯಳ ಜೀವ ಎಷ್ಟು ಅಮೂಲ್ಯವೋ ಅಷ್ಟೇ ತೋಮರ್‍ರ ಜೀವವೂ ಅಮೂಲ್ಯ ಎಂದು ಜನಸಾಮಾನ್ಯರೂ ಘೋಷಿಸುವಂಥ ವಾತಾವರಣವನ್ನು ತಮ್ಮ ವರ್ತನೆಯ ಮುಖಾಂತರ ಪೊಲೀಸರು ಸಾಬೀತುಪಡಿಸಬೇಕಾಗಿದೆ.
  ಏನೇ ಆಗಲಿ, ನಿರ್ಭಯ ಮತ್ತು ತೋಮರ್‍ರ ಸಾವು, ಈ ದೇಶ ಗಮನಹರಿಸಲೇಬೇಕಾದ ಎರಡು ಸಂಗತಿಗಳತ್ತ ಬೊಟ್ಟು ಮಾಡಿವೆ. ನಿರ್ಭಯಳ ಸಾವು ಅತ್ಯಾಚಾರಿಗಳ ವಿರುದ್ಧ ಪ್ರಬಲ ಕಾನೂನಿನ ರಚನೆಗೆ ಕಾರಣವಾಗುವಂತೆಯೇ ತೋಮರ್‍ರ ಸಾವು ಪೊಲೀಸ್ ಇಲಾಖೆಯ ಸುಧಾರಣೆಗೂ ಕಾರಣವಾಗಬೇಕು. ಹಾಗೆಯೇ ಪ್ರತಿಭಟನಾಕಾರರ ಮನಸ್ಥಿತಿಯ ಬದಲಾವಣೆಗೂ ಇದು ಹೇತುವಾಗಬೇಕು. ನಮಗೆ ನಿರ್ಭಯಳೂ ಬೇಕು, ತೋಮರ್‍ರೂ ಬೇಕು. ಯಾರೂ ಅನ್ಯಾಯವಾಗಿ ಸಾವಿಗೀಡಾಗಬಾರದು.

Wednesday, 26 December 2012

ನಮ್ಮೆಲ್ಲರ ಆತ್ಮಸಾಕ್ಷಿಗೆ ಚುಚ್ಚಿ ಹೊರಟುಹೋದ ಉಪನ್ಯಾಸಕ


  ಅನೇಕ ಬಾರಿ, ಓರ್ವರ ಒಂದು ಗೆರೆಯ ಹೇಳಿಕೆ ನೂರಾರು ಪ್ರತಿಕ್ರಿಯೆಗಳಿಗೆ ಕಾರಣವಾಗುವುದಿದೆ. ದೇಶದಲ್ಲಿ ಪ್ರತಿದಿನ ಅನೇಕಾರು ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ ಒಂದು ಪ್ರಕರಣಕ್ಕೆ ಇತರೆಲ್ಲವುಗಳಿಗಿಂತ ಹೆಚ್ಚು ಪ್ರಚಾರ ಸಿಕ್ಕಿ, ಅಭೂತಪೂರ್ವ ಪ್ರತಿಭಟನೆಗೆ ಕಾರಣವಾಗುವುದಿದೆ. ಆತ್ಮಹತ್ಯೆಯೂ ಹಾಗೆಯೇ. ಪತ್ರಿಕೆಗಳ ತೀರಾ ಒಳಪುಟದಲ್ಲಿ ಸಣ್ಣದೊಂದು ಸುದ್ದಿಯಾಗಿ ಪ್ರಕಟವಾಗುವಷ್ಟು ಮಾಮೂಲು ಎನಿಸಿಬಿಟ್ಟಿರುವ ಆತ್ಮಹತ್ಯೆಯು, ಕೆಲವೊಮ್ಮೆ ತನ್ನ ವಿಶಿಷ್ಟತೆಯಿಂದಾಗಿ ಸಾರ್ವಜನಿಕ ಚರ್ಚೆಗೆ ಒಳಗಾಗುವುದಿದೆ. ಡಾ| ಯು.ಬಿ. ಅಶೋಕ್ ಕುಮಾರ್‍ರ ಆತ್ಮಹತ್ಯೆಯು ಇಂಥದ್ದೊಂದು ಚರ್ಚೆಗೆ ಅವಕಾಶ ಒದಗಿಸಿದೆ. ನಿಜವಾಗಿ, ಮೈಸೂರಿನ ಮಹಾರಾಜ ಸಂಜೆ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕರಾದ ಇವರ ಆತ್ಮಹತ್ಯೆಯು ಚರ್ಚೆಗೆ ಒಳಗಾಗಬೇಕಾದದ್ದು ಇವರು ಉಪನ್ಯಾಸಕರು ಎಂಬ ಕಾರಣಕ್ಕಾಗಿ ಖಂಡಿತ ಅಲ್ಲ. ಇವರ ಆತ್ಮಹತ್ಯೆಯಲ್ಲಿ ಒಂದು ವೈಶಿಷ್ಟ್ಯವಿದೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತ ಮೊದಲು ಅದಕ್ಕೆ ಕಾರಣವನ್ನು ಬರೆದಿಟ್ಟು ಹೋಗಿದ್ದಾರೆ. ವ್ಯಾಪಕವಾಗುತ್ತಿರುವ ಭ್ರಷ್ಟಾಚಾರ, ಜಾತೀಯತೆ, ಅತ್ಯಾಚಾರ, ಕೆಟ್ಟ ರಾಜಕಾರಣಗಳನ್ನು ನೋಡಿ ಮನಸ್ಸಿಗೆ ಆಘಾತವಾಗಿದೆ ಎಂದಿದ್ದಾರೆ. ಮುಂದಿನ ಜನಾಂಗವನ್ನು ರೂಪಿಸಬೇಕಾದ ವಿಶ್ವ ವಿದ್ಯಾಲಯಗಳಲ್ಲೇ ಕುಲಪತಿಯಂಥ ಹುದ್ದೆಗಾಗಿ ಲಾಬಿ, ಭ್ರಷ್ಟತನ ನಡೆಯುತ್ತಿದೆ, ಹೀಗಿರುವಾಗ ಹೇಗೆ ನಾನು ಮಕ್ಕಳಿಗೆ ಮೌಲ್ಯವನ್ನು ಬೋಧಿಸಲಿ.. ಎಂದು ಪ್ರಶ್ನಿಸಿದ್ದಾರೆ.
  ಸಮಸ್ಯೆಗೆ ಆತ್ಮಹತ್ಯೆ ಪರಿಹಾರ ಖಂಡಿತ ಅಲ್ಲ. ಅದರಲ್ಲೂ ಉಪನ್ಯಾಸಕರೋರ್ವರು, ಆತ್ಮಹತ್ಯೆಯನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಆಘಾತಕಾರಿಯಾದದ್ದು. ಆದರೆ, ಓರ್ವ ಪ್ರಾಮಾಣಿಕ ವ್ಯಕ್ತಿಯ ಮೇಲೆ ಈ ದೇಶದ ಸದ್ಯದ ಬೆಳವಣಿಗೆಗಳು ಯಾವ ಬಗೆಯ ಪರಿಣಾಮ ಬೀರುತ್ತವೆಂಬುದಕ್ಕೆ ಈ ಆತ್ಮಹತ್ಯೆ ಒಂದು ಅತ್ಯುತ್ತಮ ಪುರಾವೆ. ಮೌಲ್ಯಗಳನ್ನು ಕಲಿಸಬೇಕಾದ, ಮೌಲ್ಯವಂತ ಪೀಳಿಗೆಯನ್ನು ತಯಾರಿಸಬೇಕಾದ ಶಿಕ್ಷಣ ಸಂಸ್ಥೆಗಳು ಮೌಲ್ಯರಹಿತ ಕಸುಬಿನಲ್ಲಿ ತೊಡಗಿ ಬಿಟ್ಟರೆ ಕೆಡುಕುರಹಿತ ಸಮಾಜ ನಿರ್ಮಾಣವಾಗುವುದಾದರೂ ಹೇಗೆ? ಸಮಾಜದಲ್ಲಿ ಇವತ್ತು ನೂರಾರು ಕೆಡುಕುಗಳಿವೆ. ಆ ಕೆಡುಕುಗಳಿಗೆಲ್ಲ ಕಾರಣವಾಗಿರುವುದು ಅನ್ಯಗೃಹದ ಜೀವಿಗಳೇನೂ ಅಲ್ಲ. ದುರಂತ ಏನೆಂದರೆ, ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕರಿಗೆ ಕಣ್ಣೀರು ಮಿಡಿದು ಭ್ರಷ್ಟಾಚಾರಿಗಳಿಗೆ ಶಿಕ್ಷೆಯಾಗಲಿ ಎಂದು ನಾವು ಆಗ್ರಹಿಸುತ್ತೇವೆಯೇ ಹೊರತು ಭ್ರಷ್ಟಾಚಾರದ ಮೊಲಕ್ಕೆ ಮದ್ದರೆಯುವ ಬಗ್ಗೆ ಆಲೋಚಿಸುವುದೇ ಇಲ್ಲ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಆಗ್ರಹಿಸುತ್ತೇವೆ. ಪ್ರತಿಭಟನೆ ನಡೆಸುತ್ತೇವೆ. ಆದರೆ ಹೀಗೆ ಆಗ್ರಹಿಸುತ್ತಿರುವಾಗಲೂ ಅತ್ಯಾಚಾರದ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇಷ್ಟಕ್ಕೂ ಅತ್ಯಾಚಾರಕ್ಕೆ ಮರಣ ದಂಡನೆಯಾಗಬೇಕು, ನಿಜ. ಆದರೆ ಕೇವಲ ಮರಣದಂಡನೆಯೊಂದೇ ಅತ್ಯಾಚಾರ ಪ್ರಕರಣಕ್ಕೆ ಕಡಿವಾಣ ಹಾಕೀತು ಅಂತ ಹೇಳಲು ಸಾಧ್ಯವೇ? ಅತ್ಯಾಚಾರಕ್ಕೆ ಯಾವುದು ಪ್ರಚೋದಕವಾಗುತ್ತದೋ ಅವುಗಳ ಬಗ್ಗೆ ಕಣ್ಣು ಮುಚ್ಚಿಕೊಳ್ಳುತ್ತಾ ಗಲ್ಲು ಶಿಕ್ಷೆಯ ಬಗ್ಗೆ ಮಾತಾಡುವುದು ಎಷ್ಟು ಪರಿಣಾಮಕಾರಿ? ನಮ್ಮ ಸಿನಿಮಾಗಳು, ಸಾಂಸ್ಕ್ರಿತಿಕ ಕಾರ್ಯಕ್ರಮಗಳು, ಮಾಧ್ಯಮಗಳು ಮತ್ತು ಆಧುನಿಕತೆಯ ಹೆಸರಲ್ಲಿ ಸಮರ್ಥಿಸಲಾಗುತ್ತಿರುವ ಮುಕ್ತ ಸಂಸ್ಕ್ರಿತಿಗಳೆಲ್ಲ ಕಲಿಸುವುದಾದರೂ ಏನನ್ನು? ಸಿನಿಮಾ ಪರದೆಯ ಮೇಲೆ ಹಿರೋಯಿನ್‍ಗಳ ಬಟ್ಟೆಯನ್ನು ಹೀರೋ ಎಲ್ಲರೆದುರೇ ಒಂದು ಹಂತದವರೆಗೆ ಬಿಚ್ಚುತ್ತಾನೆ ಅಥವಾ ಹಿರೋಯಿನ್‍ಳ ಬಟ್ಟೆಯೇ ಅಷ್ಟು ಕನಿಷ್ಠ ಮಟ್ಟದಲ್ಲಿರುತ್ತದೆ. ಅಲ್ಲದೆ ಜಾಹೀರಾತುಗಳಲ್ಲಿ ಬರುವ ಮಾಡೆಲ್‍ಗಳ ಭಂಗಿಯು ಒಂದು ಕುಟುಂಬದ ಎಲ್ಲರೂ ಒಟ್ಟಿಗೆ ಕೂತು ನೋಡುವಂತೆಯೂ ಇರುವುದಿಲ್ಲ. ಇಂತಹ ಸಿನಿಮಾ ಮತ್ತು ಜಾಹೀರಾತುಗಳನ್ನು ವೀಕ್ಷಿಸುವ ಸಾವಿರಾರು ಮಂದಿಯಲ್ಲಿ ಒಬ್ಬರೋ ಇಬ್ಬರೋ ನಕಾರಾತ್ಮಕ ಪ್ರಚೋದನೆಗೆ ಒಳಗಾಗಲಾರರೆಂದು ಹೇಗೆ ಹೇಳುವುದು? ಅಂದ ಹಾಗೆ, ಮದ್ಯಪಾನಕ್ಕೇನೂ ಈ ದೇಶದಲ್ಲಿ ನಿಷೇಧ ಇಲ್ಲವಲ್ಲ. ಒಂದು ಕಡೆ ಲೈಂಗಿಕ ಪ್ರಚೋದನೆಗೆ ಪೂರಕವಾದ ದೃಶ್ಯಗಳು, ಇನ್ನೊಂದು ಕಡೆ ಮನುಷ್ಯರನ್ನು ಭ್ರಮೆಯಲ್ಲಿ ತೇಲಿಸುವ ಮದ್ಯ.. ಇವೆರಡೂ ಒಟ್ಟಾದರೆ ಕೆಡುಕಲ್ಲದೇ ಒಳಿತು ಉಂಟಾಗಲು ಸಾಧ್ಯವೇ? ಕೆಡುಕುಗಳಿಗೆ ಪ್ರಚೋದಕವಾಗುವ ಯಾವೆಲ್ಲ ಪ್ರಕಾರಗಳಿವೆಯೋ ಅವುಗಳಿಗೆಲ್ಲ ಸಮಾಜದಲ್ಲಿ ಮುಕ್ತ ಸ್ವಾತಂತ್ರ್ಯವನ್ನು ನೀಡುತ್ತಾ, ಅದರಿಂದ ಜನರು ಪ್ರಚೋದಿತರಾಗಬಾರದೆಂದು ಬಯಸುವುದು ಎಷ್ಟು ಪ್ರಾಯೋಗಿಕವಾಗಬಹುದು? ಅಂದಹಾಗೆ, ಒಂದು ಊರಿನಲ್ಲಿ ಮಲೇರಿಯದ ಹಾವಳಿ ಇದ್ದರೆ, ಸರಕಾರ ಮಲೇರಿಯಾಕ್ಕೆ ಮದ್ದು ಸರಬರಾಜು ಮಾಡುವ ಕೆಲಸವನ್ನಷ್ಟೇ ಮಾಡುವುದಲ್ಲವಲ್ಲ. ಸೊಳ್ಳೆಗಳ ಮೇಲೆ ರಾಸಾಯನಿಕವನ್ನು ಸಿಂಪಡಿಸುವ ಕೆಲಸವನ್ನೂ ಮಾಡುತ್ತದಲ್ಲವೇ? ಗೆರಟೆ, ಟೈರುಗಳಲ್ಲಿ ನೀರು ನಿಂತು ಕ್ರಿಮಿಗಳು ಉತ್ಪಾದನೆಯಾಗದಂತೆ ನೋಡಿಕೊಳ್ಳಬೇಕೆಂಬ ಮುನ್ನೆಚ್ಚರಿಕೆಯನ್ನೂ ಕೊಡುತ್ತದಲ್ಲವೇ? ಹೀಗಿರುವಾಗ ಅತ್ಯಾಚಾರ ಇಲ್ಲವೇ ಭ್ರಷ್ಟಾಚಾರದಂಥ ಕೆಡುಕುಗಳ ನಿರ್ಮೂಲನವು ಬರೇ ಕಠಿಣ ಶಿಕ್ಷೆಯಿಂದ ಸಾಧ್ಯವಾಗಬಹುದೇ? ಅದಕ್ಕೆ ಪ್ರಚೋದಕವಾಗುವ ಮೂಲ ಅಂಶಗಳಿಗೆ ಕಡಿವಾಣ ಹಾಕದಿದ್ದರೆ, ರೋಗಕಾರಕ ಸೊಳ್ಳೆಗಳು ರೋಗವನ್ನು ಹಂಚುತ್ತಲೇ ಇರಲಾರದೇ?
  ಕಾನೂನು ಮತ್ತು ಪೊಲೀಸರ ಕಣ್ಣು ತಪ್ಪಿಸಿ ಬದುಕಲು ಮನುಷ್ಯನಿಗೆ ಖಂಡಿತ ಸಾಧ್ಯವಿದೆ. ಆದ್ದರಿಂದಲೇ ಭ್ರಷ್ಟ ಮತ್ತು ಅತ್ಯಾಚಾರಿ ಮನಸ್ಥಿತಿಯನ್ನು ಇಲ್ಲವಾಗಿಸಲು ದೇವವಿಶ್ವಾಸದ ಅಗತ್ಯ ಎದ್ದು ಕಾಣುವುದು. ತಾನು ಎಲ್ಲಿದ್ದರೂ ಯಾವ ಆಲೋಚನೆಯನ್ನೇ ಮಾಡಿದರೂ ಅದನ್ನು ದೇವನು ಅರಿಯುತ್ತಾನೆ ಎಂಬ ಪ್ರಜ್ಞೆ ಮತ್ತು ಭೂಮಿಯ ಕಾನೂನು ಶಿಕ್ಷಿಸದಿದ್ದರೂ ನಾಳೆ ದೇವನು ಖಂಡಿತ ಶಿಕ್ಷಿಸುತ್ತಾನೆ ಎಂಬ ಅರಿವು ಮನುಷ್ಯನಲ್ಲಿ ದೃಢವಾಗುತ್ತಾ ಹೋದಂತೆ ಅಪರಾಧ ಕೃತ್ಯಗಳು ಕಡಿಮೆಯಾಗುತ್ತಾ ಹೋಗುತ್ತವೆ. ಈ ಹಿನ್ನೆಲೆಯಲ್ಲಿ ಅಶೋಕ್ ಕುಮಾರ್‍ರ ಆತ್ಮಹತ್ಯೆಯನ್ನು ಕೆಡುಕುಗಳ ವಿರುದ್ಧದ ಒಂದು ಪ್ರತಿಭಟನೆಯಾಗಿ ನಾವು ಪರಿಗಣಿಸಬೇಕು. ಅವರದ್ದು ತಪ್ಪು ಹೆಜ್ಜೆ ನಿಜ. ಆದರೆ ಅವರು ಎತ್ತಿದ ಪ್ರಶ್ನೆ ಅತ್ಯಂತ ಸಕಾಲಿಕವಾದದ್ದು. ಓರ್ವ ಪ್ರಾಮಾಣಿಕ ಉಪನ್ಯಾಸಕನಲ್ಲಿ ಉಂಟಾಗುವ ಮಾನಸಿಕ ಗೊಂದಲದ ಸಂಕೇತವಾಗಿ ಅವರ ಆತ್ಮಹತ್ಯೆಯನ್ನು ನಾವು ಪರಿಗಣಿಸಬೇಕಾಗಿದೆ. ಹಾಗೆಯೇ, ಅವರ ಆತ್ಮಹತ್ಯೆಯನ್ನು ಎದುರಿಟ್ಟುಕೊಂಡು ಅವರೆತ್ತಿದ ಕೆಡುಕುಗಳ ನಿರ್ಮೂಲನೆಯ ಬಗ್ಗೆ ಪ್ರಾಮಾಣಿಕ ಚರ್ಚೆ ನಡೆಸಬೇಕಾಗಿದೆ.

Monday, 17 December 2012

4 ರೂಪಾಯಿಯ `ಶ್ರೀಮಂತರೂ’ ಸಂಸ್ಕೃತಿ ರಕ್ಷಿಸುವ ಪ್ರತಿಭಟನಾಕಾರರೂ...


  ಬಡತನವನ್ನು ವಸ್ತುವಾಗಿಟ್ಟುಕೊಂಡು ಈ ಜಗತ್ತಿನಲ್ಲಿ ಅಸಂಖ್ಯ ಕತೆ, ಕಾದಂಬರಿಗಳು; ನಾಟಕ, ಸಿನಿಮಾಗಳು ಬಂದಿವೆ. ಮನುಷ್ಯರು ಮಾತ್ರವಲ್ಲ, ಪ್ರಾಣಿಗಳ ಹಸಿವನ್ನೂ ಕತೆ-ಕಾದಂಬರಿಗಳಿಗೆ ಬಳಸಿಕೊಳ್ಳಲಾಗಿದೆ. ಆದರೆ ಯಾವ ಕತೆಯಲ್ಲೂ, ಸಿನೆಮಾದಲ್ಲೂ ಬಡತನವನ್ನು ವಿಡಂಬನೆಗೆ ಒಳಪಡಿಸಲಾಗಿಲ್ಲ. ಬಡವರನ್ನು ಜೋಕರ್‍ಗಳಂತೆ ಬಿಂಬಿಸಲಾಗಿಲ್ಲ. ಇಷ್ಟಕ್ಕೂ, ಹಾಗೆ ಮಾಡದಿರುವುದಕ್ಕೆ ಕಾರಣ, ಬಡವರು ಪ್ರತಿಭಟಿಸಿಯಾರು ಎಂದಲ್ಲ. ಹೊಟ್ಟೆ ತುಂಬಿಸಿಕೊಳ್ಳುವುದಕ್ಕೇ ಸಾಮರ್ಥ್ಯ ಇಲ್ಲದವರು ಇನ್ನು, ಪ್ರತಿಭಟಿಸುವುದಾದರೂ ಹೇಗೆ? ನಿಜವಾಗಿ, ಬಡತನವನ್ನು ಮತ್ತು ಹಸಿವನ್ನು ಅವಮಾನಕ್ಕೆ ಒಳಪಡಿಸುವುದು ಅಮಾನವೀಯ ಎಂಬೊಂದು ಕಾಮನ್‍ಸೆನ್ಸು ಕತೆ, ಕಾದಂಬರಿಕಾರರಲ್ಲಿ ಇದ್ದಿರುವುದೇ ಇದಕ್ಕೆ ಕಾರಣ. ಆದರೆ ರಾಜಕಾರಣಿಗಳಿಗೆ ಕನಿಷ್ಠ ಈ ಕಾಮನ್‍ಸೆನ್ಸೂ ಇಲ್ಲ. ಬಹುಶಃ ಬಡತನಕ್ಕೆ ಅವರು 'ವಿರೋಧ ಪಕ್ಷ' ಎಂಬ ಅರ್ಥ ಕೊಟ್ಟಿರಬೇಕು. ಆದ್ದರಿಂದಲೇ, ತಮ್ಮ ವಿರೋಧಿಗಳನ್ನು ಅಗ್ಗದ ಭಾಷೆಯಲ್ಲಿ ಹೀಯಾಳಿಸುವಂತೆಯೇ ಅವರು 'ಬಡತನ'ವನ್ನೂ ಹೀಯಾಳಿಸುತ್ತಿದ್ದಾರೆ. ಇಲ್ಲದಿದ್ದರೆ, ಓರ್ವ ವ್ಯಕ್ತಿಯ ದಿನದ ಖರ್ಚಿಗೆ ನಾಲ್ಕು ರೂಪಾಯಿ ಧಾರಾಳ ಸಾಕು ಎಂದು ದಿಲ್ಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್  ಹೇಳಲು ಸಾಧ್ಯವೇ? ಒಂದು ವೇಳೆ ಶೀಲಾ ದೀಕ್ಷಿತ್‍ರಿಗೆ 120 ರೂಪಾಯಿ ಕೊಟ್ಟು, ‘ನೀವು ಈ ಹಣದಲ್ಲಿ ಒಂದು ತಿಂಗಳು ಬದುಕಿ ತೋರಿಸಿ..’ ಅಂಥ ಹೇಳಿದರೆ ಅವರ ಪ್ರತಿಕ್ರಿಯೆಯಾದರೂ ಹೇಗಿದ್ದೀತು? ಯೋಜನಾ ಆಯೋಗದ ಉಪಾಧ್ಯಕ್ಷ  ಮಾಂಟೆಕ್ ಸಿಂಗ್ ಅಹ್ಲುವಾಲಿಯಾರು ಈ ಮೊದಲು ಶೀಲಾ ದೀಕ್ಷಿತ್‍ರಂತೆಯೇ ಮಾತಾಡಿದ್ದರು. ನಗರ ಪ್ರದೇಶದ ವ್ಯಕ್ತಿ ದಿನವೊಂದರಲ್ಲಿ 32 ರೂಪಾಯಿ ಮತ್ತು ಗ್ರಾಮೀಣ ವ್ಯಕ್ತಿ 26 ರೂಪಾಯಿಯಲ್ಲಿ ಜೀವನ ಸಾಗಿಸಬಹುದು ಎಂದಿದ್ದರು. ಆದರೆ ಈ ಹೇಳಿಕೆಯ ಕೆಲವು ದಿನಗಳಲ್ಲೇ ಅವರು ತಮ್ಮ ಕಚೇರಿಯ ಶೌಚಾಲಯದ ರಿಪೇರಿಗೆ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದ್ದರು.
  ನಿಜವಾಗಿ, ನಾವು ಸದ್ಯ ಒಪ್ಪಿಕೊಂಡಿರುವ ವ್ಯವಸ್ಥೆಯಲ್ಲೇ ಸಾಕಷ್ಟು ಗೊಂದಲ ಇದೆ. ಅನೇಕ ವೈರುಧ್ಯಗಳಿವೆ. ಬಡತನವನ್ನು ಇಲ್ಲವಾಗಿಸಲು ಯಾರು ವಿಧಾನಸಭೆ ಇಲ್ಲವೇ ಪಾರ್ಲಿಮೆಂಟಲ್ಲಿ ಕಾರ್ಯತಂತ್ರಗಳನ್ನು ರೂಪಿಸಬೇಕೋ ಅವರಿಗೆ ಬಡತನದ ಕಾವು ಬಹುತೇಕ ತಟ್ಟಿರುವುದೇ ಇಲ್ಲ. ಅವರು ಬೆಳೆದಿರುವುದೇ ತುಂಬಿದ ಅನ್ನದ ಬಟ್ಟಲನ್ನು ನೋಡಿಕೊಂಡು. ಬಟ್ಟೆ ಒಗೆಯುವ ಸಾಬೂನನ್ನು ಸ್ನಾನಕ್ಕೆ ಬಳಸಿ ಅವರಿಗೆ ಗೊತ್ತಿರುವುದೇ ಇಲ್ಲ. ಬಿಸಿ ಊಟವಾಗಲಿ, ಹರಿದ ಬಟ್ಟೆ ತೊಟ್ಟು ಬರಿಗಾಲಲ್ಲಿ ನಡೆದ ಅನುಭವವಾಗಲಿ ಅವರಿಗೆ ಇರುವುದೂ ಇಲ್ಲ. ಅವರು ಶಾಲೆಗೆ ಹೋದದ್ದು ಕಾರಲ್ಲಿ. ಧರಿಸಿದ್ದು ಬಹುಬ್ರಾಂಡ್‍ಗಳ ಉಡುಪುಗಳನ್ನು. ಮನೆ ಮನೆಗೆ ಹಾಲು ಹಾಕಿಯೋ, ಪೇಪರ್ ಕೊಟ್ಟೋ ಅಥವಾ ಶಾಲಾ ರಜೆಯ ಸಂದರ್ಭದಲ್ಲಿ ದುಡಿದೋ ಗೊತ್ತಿಲ್ಲದೇ ಬೆಳೆದ ಇಂಥ ಮಂದಿಯೇ ಚುನಾವಣೆಗಳಲ್ಲಿ ಸ್ಪರ್ಧಿಸೋದು. ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುವ ಸಾಮರ್ಥ್ಯ  ಇದ್ದವರಿಗೆ ಮಾತ್ರ ನಮ್ಮ ರಾಜಕೀಯ ಕ್ಷೇತ್ರವು ಮೀಸಲಾಗಿರುವುದರಿಂದ ಶೀಲಾ ದೀಕ್ಷಿತ್‍ರ '4 ರೂಪಾಯಿಯ ಶ್ರೀಮಂತ' ಸ್ಪರ್ಧಿಸುವುದು ಬಿಡಿ, ಅಭ್ಯರ್ಥಿಯ ಕೈ ಕುಲುಕುವುದಕ್ಕೂ ಅನರ್ಹನಾಗಿರುತ್ತಾನೆ.
  ರಾಜಕಾರಣಿ, ಇಂಜಿನಿಯರ್, ಡಾಕ್ಟರ್ ಏನೇ ಆಗಿದ್ದರೂ ಮನುಷ್ಯ ಎಂಬ ನೆಲೆಯಲ್ಲಿ ಕೆಲವು ಮೂಲಭೂತ ಗುಣಗಳು ನಮ್ಮಲ್ಲಿ ಇದ್ದೇ ಇರುತ್ತವೆ. ಬಡತನವನ್ನು ರೋಗ ಎಂದು ಚಿತ್ರಿಸಿ ಯಾರೂ ನಾಟಕ ರಚಿಸುವುದಿಲ್ಲ. ರೋಗಿಗಳನ್ನು 'ಪೀಡೆ' ಎಂದು ಬಿಂಬಿಸಿ ಯಾರೂ ಸಿನಿಮಾ ಮಾಡುವುದಿಲ್ಲ. ವೃದ್ಧರನ್ನು ದ್ವೇಷಿಸುವ, ಭ್ರಷ್ಟಾಚಾರವನ್ನು ಪ್ರೀತಿಸುವ, ಸಿನಿಮಾ, ಕಾದಂಬರಿಗಳೆಲ್ಲ ರಚನೆ ಆಗುವುದೂ ಇಲ್ಲ. ಭ್ರಷ್ಟಾಚಾರದಿಂದ ಕೋಟಿಗಟ್ಟಲೆ ದುಡ್ಡು ಮಾಡಿದವ ಕೂಡ ವೇದಿಕೆಯೇರಿ ಮಾತಾಡುವ ಪ್ರಸಂಗ ಎದುರಾದರೆ ಭ್ರಷ್ಟಾಚಾರದ ವಿರುದ್ಧವೇ ಮಾತಾಡುತ್ತಾನೆ. ರೋಗಿಯನ್ನು ಸುಲಿಯುವುದೇ ವೈದ್ಯ ಧರ್ಮ ಅಂತ ತಿಳಿದ ವೈದ್ಯನೂ ಮಾತಾಡುವಾಗ ಸುಲಿಗೆ ಧರ್ಮಕ್ಕೆ ವಿರುದ್ಧವಾಗಿಯೇ ಮಾತಾಡುತ್ತಾನೆ. ಯಾಕೆ ಹೀಗೆ ಅಂದರೆ, ಮನುಷ್ಯನ ಪ್ರಕೃತಿಯೇ ಹಾಗೆ. ಸುಳ್ಳು, ವಂಚನೆ, ವ್ಯಂಗ್ಯ, ಬೂಟಾಟಿಕೆಗಳನ್ನೆಲ್ಲ 'ಅಮೌಲ್ಯ'ದ ಪಟ್ಟಿಯಲ್ಲಿಡುವಂತೆ ಪ್ರಕೃತಿಯೇ ಆತನಿಗೆ ಕಲಿಸಿರುತ್ತದೆ. ಆದರೂ ಕೆಲವೊಮ್ಮೆ ರಾಜಕಾರಣಿಗಳ ವರ್ತನೆ ನೋಡಿದರೆ, ಅವರು ಪ್ರಕೃತಿ ಕಲಿಸುವ ಈ ಮೊಲಭೂತ ಪಾಠಗಳಿಂದಲೂ ತಪ್ಪಿಸಿಕೊಂಡಿರಬಹುದೇ ಎಂಬ ಅನುಮಾನ ಮೂಡುತ್ತದೆ. ಹುತಾತ್ಮ ಯೋಧರಿಗಾಗಿ ಸಿದ್ಧಪಡಿಸಲಾದ ಶವ ಮಂಚದಿಂದಲೂ ಅವರು ದುಡ್ಡು ಕಸಿಯುತ್ತಾರೆ. ವರ್ಷಂಪ್ರತಿ ತಮ್ಮ ಭತ್ತೆ, ಸಂಬಳಗಳನ್ನು ತಾವೇ ಏರಿಸಿಕೊಳ್ಳುತ್ತಾರೆ. ಮೊರು ಹೊತ್ತಿನ ಊಟಕ್ಕೂ ಗತಿಯಿಲ್ಲದೇ ಬಡತನ ರೇಖೆಗಿಂತ ಕೆಳಗೆ ಎಂಬ ಪಟ್ಟಿಯಲ್ಲಿ ಗುರುತಿಸಿಕೊಂಡಿರುವವರನ್ನು 4 ರೂಪಾಯಿಯ ಸಿದ್ಧಾಂತ ಮಂಡಿಸಿ ಬಡವರಲ್ಲ ಅಂದುಬಿಡುತ್ತಾರೆ.. ಇಂಥ ವೈರುಧ್ಯಗಳು ನೂರಾರು ಇವೆ. ದುರಂತ ಏನೆಂದರೆ, ಹೆಣ್ಣು ಗಂಡು ಮಾತಾಡಿದ ನೆಪದಲ್ಲಿ, ದನ ಸಾಗಾಟದ ನೆಪದಲ್ಲಿ ಅಥವಾ ಇಂಥ ಇನ್ನೇನೋ ಜನಪ್ರಿಯ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ, ಘೋಷಣೆಗಳನ್ನು ಹಮ್ಮಿಕೊಳ್ಳುವವರೆಲ್ಲ  ಬಡವರ ಇಂಥ ವಿಷಯಗಳ ಬಗ್ಗೆ  ಮಾತೇ ಆಡುವುದಿಲ್ಲ ಅನ್ನುವುದು. ಅಹ್ಲುವಾಲಿಯಾರ 26 ರೂಪಾಯಿ ಅಥವಾ ದೀಕ್ಷಿತ್‍ರ 4 ರೂಪಾಯಿ ಸಿದ್ಧಾಂತವನ್ನು ಖಂಡಿಸಿ ನಮ್ಮಲ್ಲಿ ಎಷ್ಟು ಪ್ರತಿಭಟನೆಗಳಾಗಿವೆ? ಜಿಲ್ಲಾಧಿಕಾರಿಗಳಿಗೆ, ರಾಜ್ಯಪಾಲರಿಗೆಲ್ಲ ಎಷ್ಟು ಮಂದಿ ಮನವಿ ಸಲ್ಲಿಸಿದ್ದಾರೆ? ಸಂಸ್ಕೃತಿ ಅಂದರೆ ದನ ಒಂದೇ ಅಲ್ಲವಲ್ಲ. ಬಡವರೂ ಸಂಸ್ಕೃತಿಯ ಭಾಗವೇ ಅಲ್ಲವೇ? ಆದರೆ ಸಂಸ್ಕೃತಿಯ ಹೆಸರಲ್ಲಿ ಬಡವರನ್ನು ಮತ್ತು ಮಧ್ಯಮ ವರ್ಗವನ್ನು ಪ್ರತಿ ಪ್ರತಿಭಟನೆಗಳಲ್ಲೂ ಬಳಸಿಕೊಳ್ಳುವ ಮಂದಿಯೇ ಬಡವರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಒಂದೇ ಒಂದು ಪ್ರತಿಭಟನೆಯನ್ನೂ ಆಯೋಜಿಸುವುದಿಲ್ಲವಲ್ಲ, ಯಾಕೆ? ರಾಜಕಾರಣಿಗಳಂತೆಯೇ ಈ ವರ್ಗವೂ ಬಡವರ ವಿರೋಧಿಯಾಗಿ ಮಾರ್ಪಟ್ಟಿವೆ ಅನ್ನುವುದಕ್ಕೆ ಇದು ಪುರಾವೆಯಲ್ಲವೇ?
  4 ರೂಪಾಯಿಯ ಸಿದ್ಧಾಂತವನ್ನು ಶೀಲಾ ದೀಕ್ಷಿತ್ ಮಂಡಿಸುವಾಗ ಅವರ ಪಕ್ಕವೇ ಸೋನಿಯಾ ಗಾಂಧಿಯೂ ಇದ್ದರು. ಆದ್ದರಿಂದ ಇದನ್ನು  ಕಾಂಗ್ರೆಸ್ ಪಕ್ಷದ ನಿಲುವು ಎಂದೇ  ಹೇಳಬೇಕಾಗುತ್ತದೆ. ಹೀಗಿರುವಾಗ, ಇಂಥ ಪಕ್ಷ  ಬಡವರಿಂದ ಅಗ್ಗದ ಸಿಲಿಂಡರು, ಡೀಸೆಲ್ಲು, ಸೀಮೆ ಎಣ್ಣೆಯನ್ನು ಕಸಿದುಕೊಂಡದ್ದರಲ್ಲಿ ಅಚ್ಚರಿಯಾದರೂ ಏನಿದೆ? ಅಂದಹಾಗೆ, ಜನಪ್ರಿಯ ವಿಷಯಗಳ ಸುತ್ತ ಪ್ರತಿಭಟನೆಗಳನ್ನು  ಆಯೋಚಿಸುವವರೆಲ್ಲ ಇಂಥ ರಾಜಕೀಯದ ವಿರುದ್ಧ ಜನಜಾಗೃತಿ ಮೊಡಿಸದಿದ್ದರೆ ಭವಿಷ್ಯದಲ್ಲಿ, 'ಬಡತನ' ಎಂಬ ಪದವನ್ನೇ ರಾಜಕಾರಣಿಗಳು  ನಾಪತ್ತೆ ಮಾಡಿಯಾರು.

Monday, 10 December 2012

ದಾದಿಯನ್ನು ಕೊಲೆಗೈದು ಅಡಗಿ ಕೂತ ಮಾಧ್ಯಮ

ಜೆಸಿಂತಾ

  ಮಾಧ್ಯಮ ಕ್ಷೇತ್ರ ಮತ್ತೊಮ್ಮೆ ಚರ್ಚೆಗೆ ಒಳಗಾಗಿದೆ. ಮೇಲ್ ಗ್ರೇಗ್ ಮತ್ತು ಮೈಕೆಲ್ ಕ್ರಿಸ್ಟಿಯನ್ ಎಂಬ ಆಸ್ಟ್ರೇಲಿಯದ ಇಬ್ಬರು ರೇಡಿಯೋ ನಿರೂಪಕರು ನಾಪತ್ತೆಯಾಗಿದ್ದಾರೆ. ‘ಇಂಗ್ಲೆಂಡಿನ ಕಿಂಗ್ ಎಡ್ವರ್ಡ್ ಆಸ್ಪತ್ರೆಯಲ್ಲಿ ದಾದಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಜೆಸಿಂತಾರನ್ನು ಕೊಂದ ಪಾಪಿಗಳು ನೀವು..' ಎಂದು ಫೇಸ್‍ಬುಕ್‍ನಲ್ಲಿ ಸಾವಿರಾರು ಮಂದಿ ಇವರನ್ನು ದೂಷಿಸಿದ್ದಾರೆ. ಕೇವಲ ಎರಡೇ ದಿನಗಳಲ್ಲಿ ಹದಿಮೂರೂವರೆ ಸಾವಿರಕ್ಕಿಂತಲೂ ಅಧಿಕ ಮಂದಿ ಫೇಸ್ ಬುಕ್‍ನಲ್ಲಿ ಇವರ ವಿರುದ್ಧ ಸಿಟ್ಟು ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೂ, ಮೇಲುನೋಟಕ್ಕೆ ಇವರಿಬ್ಬರು ಕೊಲೆಗಾರರೇ ಅಲ್ಲ. ಆಸ್ಟ್ರೇಲಿಯಾದ ಟುಡೇ ಎಫ್.ಎಂ. ಎಂಬ ರೇಡಿಯೋದ ನಿರೂಪಕರಾದ ಇವರು ಕಿಂಗ್ ಎಡ್ವರ್ಡ್ ಆಸ್ಪತ್ರೆಗೆ ದೂರವಾಣಿ ಕರೆ ಮಾಡಿದರು. ‘ನಿಮ್ಮಲ್ಲಿ ದಾಖಲಾಗಿರುವ ರಾಜಕುಮಾರ ವಿಲಿಯಮ್ಸ್ ರ  ಪತ್ನಿ ಕೇಟ್‍ಳ ಆರೋಗ್ಯ ಮಾಹಿತಿಯನ್ನು ಕೊಡಿ'.. ಅಂತ ವಿನಂತಿಸಿದರು. ತಾವು ಬ್ರಿಟನ್ನಿನ ರಾಣಿ ಎಲಿಜಬೆತ್ ಮತ್ತು ರಾಜಕುಮಾರ ವಿಲಿಯಮ್ಸ್ ರ  ತಂದೆ ಚಾರ್ಲ್ಸ್  ಮಾತಾಡುತ್ತಿರುವುದು ಅಂತಲೂ ಹೇಳಿದರು. ದೂರವಾಣಿ ಕರೆಯನ್ನು ಸ್ವೀಕರಿಸಬೇಕಿದ್ದ ರಿಸೆಪ್ಶನ್ ಕೆಲಸ ಮುಗಿಸಿ ಹೋಗಿದ್ದರಿಂದ ದಾದಿ ಜೆಸಿಂತಾ ಅದನ್ನು ಸ್ವೀಕರಿಸಿ ಕೇಟ್‍ಳನ್ನು ಆರೈಕೆ ಮಾಡುತ್ತಿದ್ದ ದಾದಿಗೆ ವರ್ಗಾಯಿಸಿದಳು. ಆಕೆ ಎಲ್ಲ ಮಾಹಿತಿಯನ್ನೂ ಅವರಿಗೆ ನೀಡಿದಳು. ಇದಾಗಿ ಎರಡು ದಿನಗಳ ಬಳಿಕ ಜೆಸಿಂತಾ ಆತ್ಮಹತ್ಯೆ ಮಾಡಿಕೊಂಡಳು.
  ಮಾಧ್ಯಮಗಳ ಮೇಲೆ ಇವತ್ತು ಇರುವ ಆರೋಪ ಏನೆಂದರೆ, ಅವು ಸುಳ್ಳು ಸುದ್ದಿಯನ್ನು ಬಿತ್ತರಿಸುತ್ತವೆ ಅನ್ನುವುದು. ಪತ್ರಿಕೆಯ ಮಾಲಿಕ, ಸಂಪಾದಕ ಮತ್ತು ವರದಿಗಾರನ ಮರ್ಜಿಗೆ ತಕ್ಕಂತೆ ಸುದ್ದಿಗಳು ತಯಾರಾಗುತ್ತವೆ ಎಂಬುದು. ಇವತ್ತು ಪತ್ರಿಕೆಯೊಂದಕ್ಕೆ ನಿರ್ದಿಷ್ಟ ಪಕ್ಷ  ಇಲ್ಲವೇ ವ್ಯಕ್ತಿಯ ಮೇಲೆ ಒಲವು ಇದ್ದರೆ, ಆ ಪಕ್ಷದ ಪರ ಜನರ ಅಲೆಯಿದೆ ಎಂಬಂತೆ ಸುದ್ದಿಗಳನ್ನು ರಚಿಸುವುದಿದೆ. ವ್ಯಕ್ತಿ ಎಷ್ಟೇ ಭ್ರಷ್ಟನಾಗಿದ್ದರೂ ಜನರ ಮಧ್ಯೆ ಅವು ಚರ್ಚೆಯಾಗದಂತೆ ನೋಡಿಕೊಳ್ಳುತ್ತಾ, ವ್ಯಕ್ತಿಯನ್ನು ಮೆರೆಸುವ, ಅನುಕಂಪ ಪೂರಿತ ಲೇಖನಗಳನ್ನು ಸಂದರ್ಭಕ್ಕೆ ತಕ್ಕಂತೆ ಪ್ರಕಟಿಸುವುದೂ ಇದೆ. ವಿಶೇಷವಾಗಿ, ಬಾಬರಿ ಮಸೀದಿಯನ್ನು ಉರುಳಿಸಿದ ದಿನಗಳಲ್ಲಿ ಮತ್ತು ಆ ಬಳಿಕದ ಕೋಮು ಉದ್ವಿಘ್ನತೆಯ ವೇಳೆಯಲ್ಲೆಲ್ಲಾ ಕೆಲವೊಂದು ಪತ್ರಿಕೆಗಳು ಈ ಗುಣವನ್ನು ಧಾರಾಳ ಪ್ರದರ್ಶಿಸಿವೆ. ಗುಜರಾತ್ ಹತ್ಯಾಕಾಂಡವನ್ನು ಮೃದು ಪದಗಳಲ್ಲಿ ಖಂಡಿಸುವ ಲೇಖನಗಳನ್ನು ಪ್ರಕಟಿಸುತ್ತಲೇ ಕ್ರಿಯೆಗೆ ಪ್ರತಿಕ್ರಿಯೆ ಎಂಬ ಮೋದಿಯ ಸಿದ್ಧಾಂತದಡಿಯಲ್ಲಿ ಹತ್ಯಾಕಾಂಡವನ್ನು ಸಮರ್ಥಿಸುವ ದುಪ್ಪಟ್ಟು ಲೇಖನಗಳನ್ನು ಪ್ರಕಟಿಸಿದ್ದೂ ಇವೆ. ಈ ಮನಃಸ್ಥಿತಿಯನ್ನು ಇನ್ನಷ್ಟು ಚೆನ್ನಾಗಿ ಅರಿತುಕೊಳ್ಳಬೇಕಾದರೆ ಎಲ್ಲಾದರೂ ಬಾಂಬ್ ಸ್ಫೋಟವಾಗಬೇಕು. ಆಗ ಕೆಲವು ಪತ್ರಿಕೆಗಳ ಸುದ್ದಿ ಮತ್ತು ವಿವರಗಳು ಎಷ್ಟು ಅಸಹ್ಯ ಆಗಿರುತ್ತವೆ ಅಂದರೆ, ಇತರ ಯಾವ ಪತ್ರಕರ್ತರಿಗೂ ಸಿಗದ 'ಮೂಲಗಳ ವಿವರಗಳು' ಅವಕ್ಕೆ ಸಿಕ್ಕಿರುತ್ತವೆ. ನಿಜವಾಗಿ, ಮಾಧ್ಯಮಗಳ ಈ ಮನಸ್ಥಿತಿಯು ಸಾರ್ವಜನಿಕವಾಗಿ ಚರ್ಚೆಯಲ್ಲಿರುವಾಗಲೇ ಜೆಸಿಂತಾ ಸಾವಿಗೀಡಾಗಿದ್ದಾಳೆ. ಇದು ಬರೇ ಆತ್ಮಹತ್ಯೆಯಲ್ಲ, ಸುಳ್ಳಿನ ಪತ್ರಿಕೋದ್ಯಮಕ್ಕೆ ಓರ್ವ ದುರ್ಬಲ ದಾದಿ ತೋರಿದ ಪ್ರತಿಭಟನೆ. ಆದ್ದರಿಂದಲೇ ಆತ್ಮಹತ್ಯೆ ಎಂಬ ನಾಲ್ಕಕ್ಷರಗಳಲ್ಲಿ ನಾವು ಈ ಸಾವಿಗೆ ಸಮಾಧಿಯನ್ನು ಕಟ್ಟಬಾರದು. ಅಂದಹಾಗೆ, ಕಿಂಗ್ ಎಡ್ವರ್ಡ್ ಆಸ್ಪತ್ರೆಯಲ್ಲಿ ರಾಜಕುಮಾರಿ ಕೇಟ್ ದಾಖಲಾಗಿದ್ದುದು ಗರ್ಭದ ತಪಾಸಣೆಗಾಗಿ. ದೂರವಾಣಿ ಕರೆಯನ್ನು ದಾದಿಗೆ ವರ್ಗಾಯಿಸುವ ಸ್ವಾತಂತ್ರ್ಯ ಜೆಸಿಂತಾಳಿಗೆ ಇಲ್ಲದಿದ್ದರೂ ಕರೆ ಮಾಡಿದವರ ಸುಳ್ಳನ್ನು ನಂಬಿ ಆಕೆ ವರ್ಗಾಯಿಸಿದ್ದಳು. ಆದ್ದರಿಂದಲೇ ಆಕೆ ಆಸ್ಪತ್ರೆಯ ಅಧಿಕಾರಿಗಳ ತರಾಟೆಗೂ ಒಳಗಾದಳು..
  ಇಷ್ಟಕ್ಕೂ, ಗರ್ಭದಾರಣೆ ಎಂಬುದು ತೀರಾ ಖಾಸಗಿ ವಿಚಾರ. ರಾಜಕುಟುಂಬವಾದರೂ ಕೂಲಿ ಕಾರ್ಮಿಕನ ಕುಟುಂಬವಾದರೂ ಎಲ್ಲದಕ್ಕೂ ಖಾಸಗಿತನ ಎಂಬುದಿದೆ. ಅದಕ್ಕೆ ಕ್ಯಾಮರಾ ಇಡುವುದು ಎಷ್ಟು ಸರಿ?  ಪತ್ರಿಕೋದ್ಯಮಕ್ಕೆ ಸುಳ್ಳು ಅನಿವಾರ್ಯವೇ? ತಾನು ಇಂತಿಂಥ ಸುದ್ದಿಯನ್ನು, ಇಂತಿಂಥವರಲ್ಲಿ ಸುಳ್ಳು ಹೇಳಿ, ವಂಚಿಸಿ ಪಡಕೊಂಡೆ ಎಂದು ಯಾವ ಪತ್ರಕರ್ತರೇ ಆಗಲಿ ಬಹಿರಂಗವಾಗಿ ಹೇಳಿಕೊಳ್ಳಬಲ್ಲರೇ? ಅಂದಹಾಗೆ, ಭ್ರಷ್ಟಾಚಾರಕ್ಕೂ ಗರ್ಭಧಾರಣೆಯಂಥ ಖಾಸಗಿ ಸಂಗತಿಗಳಿಗೂ ಖಂಡಿತ ವ್ಯತ್ಯಾಸ ಇದೆ. ಭ್ರಷ್ಟಾಚಾರ ವ್ಯಕ್ತಿಯ ಖಾಸಗಿ ಸಂಗತಿಯಲ್ಲ. ಅಂತಹವರನ್ನು ಕಾನೂನಿನ ಮುಂದೆ ತರುವುದಕ್ಕಾಗಿ ಕೆಲವೊಮ್ಮೆ ಸ್ಟಿಂಗ್ ಆಪರೇಶನ್‍ನಂಥ ಚಟುವಟಿಕೆ ಅನಿವಾರ್ಯ ಆಗಿರಬಹುದು. ಹಾಗಂತ ತೀರಾ ಖಾಸಗಿ ವಿಚಾರಕ್ಕೂ ಸುಳ್ಳಿನ ಮುಖಾಂತರ ನುಸುಳತೊಡಗಿದರೆ ಅದನ್ನು ಹೇಗೆ ಸಮರ್ಥಿಸುವುದು?
  ಮಾಧ್ಯಮ ಪೈಪೋಟಿಯು ಇವತ್ತು ಯಾವ ಮಟ್ಟಕ್ಕೆ ಮುಟ್ಟಿದೆಯೆಂದರೆ ರೋಚಕ ಸುದ್ದಿಯನ್ನು ಕೊಡುವ ಧಾವಂತದಲ್ಲಿ ಸರಿ-ತಪ್ಪುಗಳನ್ನೇ ಕಡೆಗಣಿಸುವಷ್ಟು. ರೋಚಕ ಸುದ್ದಿ ಸಿಗದೇ ಹೋದರೆ ಅಂಥದ್ದೊಂದು ಸುದ್ದಿಯನ್ನು ಸೃಷ್ಟಿಸುವ ಸಣ್ಣತನ ಕೂಡ ಇವತ್ತು ಪತ್ರಿಕಾ ರಂಗದಲ್ಲಿ ಕಾಣಿಸಿಕೊಳ್ಳುತ್ತಿವೆ. ದುಡ್ಡು ಪಡಕೊಂಡು ಸುದ್ದಿ ತಯಾರಿಸುವ ಪತ್ರಿಕೆಗಳೂ ಪತ್ರಕರ್ತರೂ ಇವತ್ತಿದ್ದಾರೆ. ಇಂಥ ಮನಸ್ಥಿತಿಯು ಕ್ರಮೇಣ ಪತ್ರಕರ್ತರು ಮತ್ತು ಪತ್ರಿಕೆಗಳ ಕುರಿತಂತೆ ಸಾರ್ವಜನಿಕರಲ್ಲಿ ಗೌರವವನ್ನು ಕಡಿಮೆಗೊಳಿಸಲಾರದೇ? ಒಂದಷ್ಟು ಕಾಸು ಕೊಟ್ಟರೆ ಆತ/ಕೆ ಯಾವ ಸುಳ್ಳನ್ನೂ ಗೀಚಬಹುದು ಎಂದು ಸಾರ್ವಜನಿಕರು ಪತ್ರಕರ್ತರನ್ನು ನೋಡಿ ಹೇಳುವಂಥ ಸನ್ನಿವೇಶ ಸೃಷ್ಟಿಯಾಗಿ ಬಿಟ್ಟರೆ ಏನಾಗಬಹುದು? ಈಗಾಗಲೇ ಝೀ ಟಿ.ವಿ.ಯ ಸಂಪಾದಕರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ನಿಜವಾಗಿ, ಪತ್ರಿಕಾರಂಗ  ಸುದ್ದಿಯಲ್ಲಿರಬೇಕಾದುದು ಕೊಲೆ ಆರೋಪಿಯಾಗಿಯೋ, ಭ್ರಷ್ಟಾಚಾರಿಯಾಗಿಯೋ ಅಲ್ಲ. ಸಮಾಜದ ಅಂಕು-ಡೊಂಕುಗಳಿಗೆ ಕನ್ನಡಿ ಹಿಡಿಯುವವರು ಸ್ವಯಂ ಅಂಕು-ಡೊಂಕಾಗಿದ್ದರೆ ಸಮಾಜ ಅವರ ಬಗ್ಗೆ ಯಾವ ಬಗೆಯ ಅಭಿಪ್ರಾಯವನ್ನು ಇಟ್ಟುಕೊಳ್ಳಬಹುದು?
  ಜೆಸಿಂತಾಳ ಸಾವು ಪ್ರತಿಯೋರ್ವ ಪತ್ರಕರ್ತೆ/ರ್ತನನ್ನೂ ಚಿಂತನೆಗೆ ಒಳಪಡಿಸಬೇಕು. 'ಸುಳ್ಳಿನ ಪತ್ರಿಕೋದ್ಯಮದಲ್ಲಿ ತನ್ನ ಪಾತ್ರ ಏನಿದೆ' ಎಂಬ ಬಗ್ಗೆ ಎದೆಗೆ ಕೈಯಿಟ್ಟು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಯಾಕೆಂದರೆ ಒಂದೇ ಒಂದು ಸುಳ್ಳು ವಾಕ್ಯವು ಸಾವಿರಾರು ಮಂದಿಯ ಸಾವಿಗೆ, ದುಃಖಕ್ಕೆ, ಕಣ್ಣೀರಿಗೆ ಕಾರಣವಾಗಬಹುದು. ಆದ್ದರಿಂದ ಪತ್ರಕರ್ತ/ರ್ತೆ ಸತ್ಯವಂತನಾಗಲಿ. ಜೆಸಿಂತಾಳ ಆತ್ಮಹತ್ಯೆ ಪತ್ರಿಕಾ ರಂಗವನ್ನು ಸ್ವಚ್ಛಗೊಳಿಸುವಲ್ಲಿ ನೆರವಾಗಲಿ.