Monday, 9 July 2012

ಅಂದು, ನಾವೆಲ್ಲಾ ಹಿಂದು - ಒಂದು, ಇಂದು..?

ತನ್ನದು `ಲಿಂಗಾಯಿತರ ಪಕ್ಷ’ ಅನ್ನುವುದನ್ನು ರಾಜ್ಯ ಬಿಜೆಪಿ ಅಧಿಕೃತವಾಗಿ ಘೋಷಿಸಿದೆ. ಜಗದೀಶ್ ಶೆಟ್ಟರ್ ರನ್ನು ಮುಖ್ಯಮಂತ್ರಿ ಎಂದು ಘೋಷಿಸಿದ ಸಂದರ್ಭದಲ್ಲಿ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ನಾಯಕರು ಕೊಟ್ಟ ಹೇಳಿಕೆಗಳೇ ಇದಕ್ಕೆ ಅತಿ ಪ್ರಬಲ ಪುರಾವೆ. ಆದ್ದರಿಂದ ಇನ್ನು ಮುಂದೆ ಕನಿಷ್ಠ ಬಿಜೆಪಿಯ ರಾಜ್ಯ ಘಟಕವಾದರೂ ತನ್ನನ್ನು `ಭಾರತೀಯ ಲಿಂಗಾಯಿತರ ಪಕ್ಷ’ (ಬಿ ಎಲ್ ಪಿ ) ಎಂದು ಬದಲಿಸಿಕೊಂಡು ಮುಂದಿನ ಚುನಾವಣೆಯನ್ನು ಎದುರಿಸುವುದು ಉತ್ತಮ. ಇಲ್ಲದಿದ್ದರೆ ಮತದಾರರು ಈ ಬಿ.ಎಲ್.ಪಿ.ಯನ್ನೇ ಬಿಜೆಪಿಯೆಂದು ನಂಬಿ ಅನಾಹುತವಾಗುವ ಸಾಧ್ಯತೆ ಇದೆ.
          ನಿಜವಾಗಿ, ರಾಜ್ಯದಲ್ಲಿ ಬಿಜೆಪಿ ನಾಪತ್ತೆಯಾಗಿ ಬಿಟ್ಟಿದೆ. `ಭಾರತದ ಜನರ ಪಕ್ಷ’ (ಬಿಜೆಪಿ) ಅನ್ನುವ ಅದರ ಹೆಸರನ್ನು ಅದರ ರಾಜ್ಯ ನಾಯಕರು ಎಷ್ಟಂಶ ಕೆಡಿಸಿ ಬಿಟ್ಟಿದ್ದಾರೆಂದರೆ, ಅದರ ಪ್ರತಿಯೊಬ್ಬ ನಾಯಕರೂ ಜಾತಿಗಳ ಮೂಲಕವೇ ಗುರುತಿಸಿಕೊಳ್ಳುತ್ತಿದ್ದಾರೆ. 'ಜನರ' ಪಕ್ಷದಲ್ಲಿ ಜನರು ಕಾಣೆಯಾಗಿ ಎಲ್ಲೆಡೆಯೂ ಜಾತಿಗಳೇ ಕಾಣಿಸುತ್ತಿವೆ. ನಾಲ್ಕು ವರ್ಷಗಳ ಹಿಂದೆ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ, `ಹಿಂದು-ನಾವೆಲ್ಲ ಒಂದು’ ಅನ್ನುವ ಸ್ಲೋಗನ್ನನ್ನು ಬಿಜೆಪಿ ಧಾರಾಳ ಬಳಸಿತ್ತು. ಚುನಾವಣಾ ಭಾಷಣಗಳು ಮುಗಿಯುತ್ತಿದ್ದುದೇ ಹಿಂದೂ-ಒಂದು ಅನ್ನುವ ಘೋಷಣೆಯ ಮೂಲಕವೇ. ತಾನು ಲಿಂಗಾಯಿತ ಅನ್ನುವುದು ಯಡಿಯೂರಪ್ಪರಿಗೆ ಅಂದು ಯಾವ ವೇದಿಕೆಯಲ್ಲೂ ನೆನಪಿಗೇ ಬಂದಿರಲಿಲ್ಲ. ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಸದಾನಂದ ಗೌಡರು, ತಾನು ಒಕ್ಕಲಿಗ ಎಂದು ಹೇಳಿಕೊಂಡೂ ಇರಲಿಲ್ಲ. ಬಿಜೆಪಿಗೆ ಹಿಂದೂಗಳ ಪಕ್ಷ ಎಂಬ ಇಮೇಜು ತರುವ ಯತ್ನವನ್ನು ಅವರಿಬ್ಬರೂ ಮಾಡಿದ್ದರು. ಆದರೆ ಆ ಹಿಂದೂಗಳನ್ನೆಲ್ಲಾ ಬಿಜೆಪಿ ಇವತ್ತು ಅಧಿಕೃತವಾಗಿ ವಿಭಜಿಸಿಬಿಟ್ಟಿದೆ. ಹಿಂದೂಗಳಲ್ಲಿ ಲಿಂಗಾಯಿತರು ಹೆಚ್ಚು ಆಪ್ತರು ಎಂಬ ಸೂಚನೆಯನ್ನು ಬಿಜೆಪಿಯ ಕೇಂದ್ರ ನಾಯಕರೇ ಕನ್ನಡಿಗರಿಗೆ ರವಾನಿಸಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಶೆಟ್ಟರ್ ರ  ಕೈಯಲ್ಲಿರುವ ಬಿಜೆಪಿ ನಾಲ್ಕು ವರ್ಷಗಳ ಹಿಂದಿನ ಬಿಜೆಪಿ ಖಂಡಿತ ಅಲ್ಲ. ಇದು ಲಿಂಗಾಯಿತರ ಬಿಜೆಪಿ. ಸದಾನಂದ ಗೌಡರ ಕೈಯಲ್ಲಿರುವುದು ಒಕ್ಕಲಿಗರ ಬಿಜೆಪಿ. ಹೀಗೆ ಜಾತಿಗಳಾಗಿ ವಿಭಜಿಸಿ ಹೋಗಿರುವ ಬಿಜೆಪಿಯು, `ಹಿಂದು-ಒಂದು’ ಅನ್ನುವ ಸ್ಲೋಗನ್ನನ್ನು ಉದುರಿಸುತ್ತದಲ್ಲ, ಅದಕ್ಕಿಂತ ದೊಡ್ಡ ಬೊಗಳೆಯಾದರೂ ಏನಿದೆ? ಹಿಂದೂ ಸಮುದಾಯದಲ್ಲಿರುವ ಅಸ್ಪøಶ್ಯತೆ, ಅಸಮಾನತೆ, ಮಡೆಸ್ನಾನಗಳಂಥ ಮನುಷ್ಯ ನಿರ್ಮಿತ ವಿಭಜನೆಯನ್ನು ಇಂಥ ಪಕ್ಷಕ್ಕೆ ನಿರ್ಮೂಲನಗೊಳಿಸಲು ಸಾಧ್ಯವೇ? ಅಂದಹಾಗೆ, ನಿಜವಾದ ಬಿಜೆಪಿಯಾದರೂ ಯಾವುದು? ಅದು ಎಲ್ಲಿದೆ? ಅದರ ಸಿದ್ಧಾಂತವೇನು? ಜಾತಿಯನ್ನು ಇಷ್ಟು ಪ್ರಬಲವಾಗಿ ನೆಚ್ಚಿಕೊಂಡ ಪಕ್ಷವೊಂದು ಎಲ್ಲ ಹಿಂದೂಗಳ ಪಕ್ಷವಾಗುವುದಾದರೂ ಹೇಗೆ? ನಾಳೆ ದಲಿತರು ಮತ್ತು ಲಿಂಗಾಯಿತರ ಮಧ್ಯೆ ಸಮಸ್ಯೆಯೊಂದು ಹುಟ್ಟಿಕೊಂಡರೆ ಬಿಜೆಪಿಯ ನಿಲುವು ಏನಿರಬಹುದು? ಲಿಂಗಾಯಿತರ ಸಂಖ್ಯೆಗೆ ಹೋಲಿಸಿದರೆ ಒಕ್ಕಲಿಗರ ಸಂಖ್ಯೆ ಕಡಿಮೆ ಎಂಬ ಲೆಕ್ಕಾಚಾರದ ಆಧಾರದಲ್ಲಿ ಸದಾನಂದ ಗೌಡರನ್ನು ಪದಚ್ಯುತಗೊಳಿಸಿದ ಪಕ್ಷವೊಂದು ದಲಿತರಿಗೆ, ಕುರುಬರಿಗೆ ಅಥವಾ ಇನ್ನಾವುದೇ ಅಲ್ಪಸಂಖ್ಯೆಯ ವರ್ಗಕ್ಕೆ ನ್ಯಾಯ ಕೊಡುತ್ತದೆಂದು ಹೇಗೆ ನಂಬುವುದು?
      ತುಷ್ಟೀಕರಣ, ಓಟ್ ಬ್ಯಾಂಕ್ ರಾಜಕಾರಣ .. ಎಂಬೆಲ್ಲಾ ಪದಗಳನ್ನು ಚಾಲ್ತಿಗೆ ತಂದದ್ದು ಬಿಜೆಪಿಯೇ. ಕಾಂಗ್ರೆಸ್ ಸಹಿತ ತನ್ನ ಎದುರಾಳಿ ಪಕ್ಷಗಳನ್ನು ಹಣಿಯುವುದಕ್ಕೆ ಬಿಜೆಪಿ ಅಸ್ತ್ರವಾಗಿ ಬಳಸಿಕೊಂಡದ್ದೂ ಈ ಪದಗಳನ್ನೇ. ಮುಸ್ಲಿಮ್ ತುಷ್ಟೀಕರಣ, ಓಟ್ ಬ್ಯಾಂಕ್  ರಾಜಕಾರಣ ಎಂಬುದನ್ನೆಲ್ಲಾ ಬಿಜೆಪಿ ಅತ್ಯಂತ ಸಮರ್ಥವಾಗಿಯೇ ಬಳಸಿಕೊಂಡಿದೆ. ಆದರೆ ಇವತ್ತು ಬಿಜೆಪಿ ಮಾಡಿದ್ದಾದರೂ ಏನು? ಲಿಂಗಾಯಿತ ತುಷ್ಟೀಕರಣವನ್ನೇ ಅಲ್ಲವೇ? ಅಲ್ಪಸಂಖ್ಯಾತರ ಮೀಸಲಾತಿಯ ಬಗ್ಗೆ ಕಾಂಗ್ರೆಸ್ ಮಾತಾಡಿದರೆ, ಹಜ್ಜ್ ಸಬ್ಸಿಡಿಯ ಪರ ವಾದಿಸಿದರೆ ಅದನ್ನು ಓಟ್ ಬ್ಯಾಂಕ್ ರಾಜಕಾರಣ ಅನ್ನುವ ಬಿಜೆಪಿ ಈಗ ಮಾಡಿದ್ದೇನು, ಲಿಂಗಾಯಿತ ಓಟ್ ಬ್ಯಾಂಕ್ ರಾಜಕಾರಣವನ್ನಲ್ಲವೇ? ಕಾಂಗ್ರೆಸ್ ಮಾಡಿದರೆ ಅಪರಾಧವಾಗುವುದು, ಅದನ್ನೇ ತಾನು ಮಾಡಿದರೆ ರಾಜಕೀಯ ಅನಿವಾರ್ಯತೆ ಅನ್ನಿಸಿಕೊಳ್ಳುವುದೆಲ್ಲಾ ಯಾಕೆ?
      ಸದ್ಯದ ಬೆಳವಣಿಗೆಗಳನ್ನು ನೋಡಿದರೆ ಬಿಜೆಪಿಗೆ ತನ್ನದೇ ಆದ ನಿಲುವು, ಸಿದ್ಧಾಂತ ಇಲ್ಲ ಅನ್ನುವುದು ಸ್ಪಷ್ಟವಾಗುತ್ತದೆ. ರಾಜಕೀಯವಾಗಿ ಯಾವುದು ಹೆಚ್ಚು ಲಾಭ ತರುತ್ತದೋ ಅದನ್ನು ಅದು ತನ್ನ ನಿಲುವಾಗಿ ಆರಿಸಿಕೊಳ್ಳುತ್ತಿದೆ. ನಾಳೆ ಲಿಂಗಾಯಿತರು ಸಂಖ್ಯೆಯಲ್ಲಿ ಕಡಿಮೆಯಾಗಿ ಒಕ್ಕಲಿಗರು ಹೆಚ್ಚಾಗಿ ಬಿಟ್ಟರೆ ಅದು ಒಕ್ಕಲಿಗ ಪಕ್ಷವಾಗಿ ಬಿಡುವ ಸಾಧ್ಯತೆ ಇದೆ. ಮಡೆಸ್ನಾನ, ಅಸ್ಪøಶ್ಯತೆ, ಮಲ ಹೊರುವ ಪದ್ಧತಿ.. ಮುಂತಾದುವುಗಳನ್ನೆಲ್ಲಾ ನಂಬಿಕೆಯ ವಿಚಾರವೆಂದು ಹೇಳುವ ಮಂದಿ ಎಲ್ಲಾದರೂ ಸಂಖ್ಯೆಯಲ್ಲಿ ಬಹುಸಂಖ್ಯಾತರಾದರೆ ಅವೆಲ್ಲವನ್ನೂ ಕಾನೂನು ಪ್ರಕಾರ ಸಿಂಧಗೊಳಿಸಿ ಬಿಜೆಪಿ ಅವರ ಪರ ಬಹಿರಂಗವಾಗಿಯೇ ನಿಲ್ಲುವುದಕ್ಕೂ ಸಾಧ್ಯವಿದೆ. ಬಾಬರಿ ಮಸೀದಿಯನ್ನು ಉರುಳಿಸಿದ ಇದೇ ಬಿಜೆಪಿ, ಲಾಭ ಕಂಡು ಬಂದರೆ ಮತ್ತೆ ಬಾಬರಿಯನ್ನು ಕಟ್ಟಲೂಬಹುದು.. ಒಂದು ರೀತಿಯಲ್ಲಿ ಬಿಜೆಪಿಗೆ ತನ್ನದೇ ಆದ ನಿರ್ದಿಷ್ಟ ಮುಖವೆಂಬುದು ಇಲ್ಲವೇ ಇಲ್ಲ. ಅದು ಮುಖವಾಡದ ಜೊತೆಗೇ ಬದುಕುತ್ತಿದೆ. ಇಂಥ ಪಕ್ಷವೊಂದು ಹಿಂದೂಗಳನ್ನು ಒಂದು ಮಾಡಲು ಸಾಧ್ಯವೇ?              
       ಅಂದಹಾಗೆ, ಪಕ್ಷ ಯಾವುದೇ ಇರಲಿ, ಅದಕ್ಕೆ ನಿರ್ದಿಷ್ಟ ರೂಪ, ಚಲನೆ, ನಿಲುವು ಇರಲೇಬೇಕಾದುದು ಅತ್ಯಗತ್ಯ. ಒಂದು ರೀತಿಯಲ್ಲಿ ಅದು ಆ ಪಕ್ಷದ ಗುರುತು. ಆ ಗುರುತನ್ನು ಒಪ್ಪಬೇಕೋ ಬೇಡವೋ ಎಂಬುದನ್ನು ಆ ಬಳಿಕ ಮತದಾರ ತೀರ್ಮಾನಿಸುತ್ತಾನೆ. ಆದರೆ ಬಿಜೆಪಿಗೆ ತನ್ನ ಗುರುತಿನಲ್ಲೇ ಗೊಂದಲ ಇದೆ. ಇವತ್ತೊಂದು ರೂಪ ಅದರದ್ದಾದರೆ ನಾಳೆ ಇನ್ನೊಂದು. ನಾಳಿದ್ದು ಮತ್ತೊಂದು. ಇಂಥ ಪಕ್ಷಕ್ಕೆ ಮತ ಚಲಾಯಿಸಿ ಶುಭ ನಿರೀಕ್ಷೆ ಇಟ್ಟುಕೊಳ್ಳುವುದು ಎಷ್ಟು ಸರಿ? ನಿಜವಾಗಿ ಬಣ್ಣ ಬದಲಿಸುವುದೇ ಬಿಜೆಪಿಯ ಗುರುತು. ಅದು ಈ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಮಾಡಿದ್ದೂ ಅದನ್ನೇ. ಆದ್ದರಿಂದ ಇವತ್ತು ಮತದಾರರು ಅಸಂತುಷ್ಟರಾಗಿದ್ದರೆ ಅದಕ್ಕೆ ಬಿಜೆಪಿ ಕಾರಣ ಅಲ್ಲ, ಅವರೇ. ಆದ್ದರಿಂದ ಬಣ್ಣಕ್ಕೆ ಮರುಳಾಗದೇ ತತ್ವಕ್ಕೆ ಬದ್ಧವಾಗಲು ರಾಜ್ಯದ ಜನತೆ ಮುಂದಿನ ಬಾರಿ ಸಿದ್ಧರಾಗಬೇಕು.

No comments:

Post a Comment