ಜುಲೈ 27ರಂದು ಉದ್ಘಾಟನೆಗೊಂಡ ಲಂಡನ್ ಒಲಿಂಪಿಕ್ಸ್ ಗಿಂತ ಒಂದು ದಿನ ಮೊದಲು ಮಧ್ಯಪ್ರದೇಶದ ಭೋಪಾಲ್ ನಲ್ಲಿ , `ಭೋಪಾಲ್ ಸ್ಪೆಶಲ್ ಒಲಿಂಪಿಕ್ಸ್’ ಉದ್ಘಾಟನೆಗೊಂಡಿತ್ತು. ಮುಚ್ಚಲ್ಪಟ್ಟಿರುವ ಯೂನಿಯನ್ ಕಾರ್ಬೈಡ್ ಕಂಪೆನಿಯ ಬಲಬದಿಯಲ್ಲಿರುವ ಅಫ್ರಿ ನಗರ್ ಮೈದಾನದಲ್ಲಿ ನಡೆದ ಈ ಒಂದು ದಿನದ ಒಲಿಂಪಿಕ್ಸ್ ನ ಧ್ಯೇಯ ವಾಕ್ಯ, `ಈಸ್ಟ್ ಇಂಡಿಯಾ ಕಂಪೆನಿಯಿಂದ ಡೌ ಕೆಮಿಕಲ್ ಕಂಪೆನಿ ವರೆಗೆ’ ಎಂದಿತ್ತು. ಈ ಒಲಿಂಪಿಕ್ಸ್ ನಲ್ಲೂ ಕ್ರ್ಯಾಬ್ ರೇಸ್, 25 ಮೀಟರ್ ಸ್ಟ್ರಿಂಟ್, ವಾಕಿಂಗ್.. ಮುಂತಾದ ಕ್ರೀಡೆಗಳಿದ್ದುವು. ಆದರೆ ಇದರಲ್ಲಿ ಭಾಗವಹಿಸಿದ್ದು ಉಸೇನ್ ಬೋಲ್ಟ್, ಜೊನಾಥನ್ ಮೆರ್ಲಿ, ಅಸಾಫಾ ಪಾವೆಲ್ ಮುಂತಾದ ಖ್ಯಾತ ಓಟಗಾರರಲ್ಲ. ಭೋಪಾಲ್ ಅನಿಲ ದುರಂತದಲ್ಲಿ ಸಂತ್ರಸ್ತರಾದ ಅಂಗವಿಕಲ ಮಕ್ಕಳೇ ಇಲ್ಲಿಯ ಸ್ಪರ್ಧಿಗಳು. ಲಂಡನ್ ಒಲಿಂಪಿಕ್ಸ್ ನಲ್ಲಿ ಒಲಿಂಪಿಕ್ಸನ್ನು ಸ್ತುತಿಸುವ ಹಾಡಿದ್ದರೆ ಭೋಪಾಲ್ ನಲ್ಲಿ ಈ ಮಕ್ಕಳು ಲಂಡನ್ ಒಲಿಂಪಿಕ್ಸ್ ಗೆ ಶೇಮ್ ಶೇಮ್ ಎಂದು ಹಾಡಿದರು.
ಲಂಡನ್ ಒಲಿಂಪಿಕ್ಸ್ ನಲ್ಲಿ ಯಾವ್ಯಾವ ರಾಷ್ಟ್ರಗಳು ಎಷ್ಟೆಷ್ಟು ಪದಕಗಳನ್ನು ದೋಚಿವೆ ಮತ್ತು ಯಾರು ಈ ಬಾರಿ ಅತ್ಯಧಿಕ ಚಿನ್ನದ ಪದಕ ಪಡೆಯುತ್ತಾರೆ ಎಂಬುದು ಚರ್ಚೆಯಲ್ಲಿರುವ ಈ ಸಂದರ್ಭದಲ್ಲೇ ನಡೆದ `ಭೋಪಾಲ್ ಒಲಿಂಪಿಕ್ಸ್’ ನಮ್ಮೆಲ್ಲರ ಚರ್ಚೆಗೆ ಅತ್ಯಂತ ಯೋಗ್ಯವಾದದ್ದು. ಕೈಯೋ ಕಾಲೋ ಕಣ್ಣೋ ಕಳಕೊಂಡ ವಿಕಲ ಮಕ್ಕಳು ಮೈದಾನದಲ್ಲಿ ಓಡುವುದೇ ತ್ರಾಸದಾಯಕ. ಆದ್ದರಿಂದಲೇ ಅಲ್ಲಿ ನೆರೆದವರಾರೂ ಚಪ್ಪಾಳೆ ತಟ್ಟಲಿಲ್ಲ. ಕೆಲವರ ಕಣ್ಣುಗಳು ಹನಿಗೂಡಿದುವು. 1984 ಡಿಸೆಂಬರ್ 2ರಂದು ರಾತ್ರಿ ಭೋಪಾಲ್ ನ ಯೂನಿಯನ್ ಕಾರ್ಬೈಡ್ ಕಂಪೆನಿಯಿಂದ ವಿಷಾನಿಲ ಸೋರಿಕೆಯಾಯಿತು. ಅದೆಷ್ಟು ಭೀಕರವಾದ ವಾತಾವರಣವನ್ನು ಸೃಷ್ಟಿಸಿತೆಂದರೆ, ತಕ್ಷಣ 10 ಸಾವಿರಕ್ಕಿಂತಲೂ ಹೆಚ್ಚು ಮಂದಿ ಸಾವಿಗೀಡಾದರು. ದುರ್ಘಟನೆ ನಡೆದು 28 ವರ್ಷಗಳಾದರೂ ವಿಷಾನಿಲದ ಪ್ರಭಾವದಿಂದ ಪ್ರದೇಶ ಈಗಲೂ ಮುಕ್ತವಾಗಿಲ್ಲ. ಕಂಪೆನಿ ಮುಚ್ಚಿದ್ದರೂ ಅದರಿಂದ ವಿಷಾನಿಲ ಇವತ್ತೂ ಭೂಮಿಗೆ ಸೇರುತ್ತಿದ್ದು, ನೀರನ್ನು ಕಲುಷಿತಗೊಳಿಸುತ್ತಿದೆ. ಅಂಗವೈಕಲ್ಯಕ್ಕೆ ಒಳಗಾದ ಮಕ್ಕಳು ಈಗಲೂ ಹುಟ್ಟುತ್ತಿದ್ದಾರೆ. ಆದರೆ ದುರ್ಘಟನೆಯ ಬಳಿಕ ಯೂನಿಯನ್ ಕಾರ್ಬೈಡ್ ಕಂಪೆನಿಯನ್ನು ಖರೀದಿಸಿ ಡೌ ಕೆಮಿಕಲ್ ಕಂಪೆನಿಯು, ಸಂತ್ರಸ್ತರಿಂದ ಮಾರು ದೂರ ನಿಂತಿದೆ. ಸಂತ್ರಸ್ತರಿಗೆ ನೆರವಾಗುವ ಎಲ್ಲ ಜವಾಬ್ದಾರಿಗಳಿಂದಲೂ ನುಣುಚಿಕೊಳ್ಳುತ್ತಿದೆ. ವಿಶೇಷ ಏನೆಂದರೆ, ಇದೇ ಡೌ ಕಂಪೆನಿಯು ಲಂಡನ್ ಒಲಿಂಪಿಕ್ಸ್ ಅನ್ನು ಪ್ರಾಯೋಜಿಸುತ್ತಿರುವುದು. ಆದ್ದರಿಂದಲೇ ಈ ಪ್ರಾಯೋಜಕತ್ವವನ್ನು ಖಂಡಿಸಿ ಭೋಪಾಲ್ ನ ಅಂಗವಿಕಲ ಮಕ್ಕಳು ಅಫ್ರಿ ನಗರ್ ಮೈದಾನದಲ್ಲಿ ಓಡಿದ್ದಾರೆ. ಇದಕ್ಕಿಂತ ಮೊದಲು ಭೋಪಾಲ್ ನಲ್ಲಿ ಸಾಕಷ್ಟು ರಾಲಿಗಳು ನಡೆದಿದ್ದುವು. ಡೌ ಕಂಪೆನಿಯ ಪ್ರಾಯೋಜಕತ್ವದ ವಿರುದ್ಧ ಭಾರತವೂ ಪ್ರತಿಭಟಿಸಿತ್ತು. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಮುಖ್ಯಸ್ಥೆಯೊಬ್ಬರು ಡೌವನ್ನು ಖಂಡಿಸಿ ಹುದ್ದೆಗೆ ರಾಜೀನಾಮೆಯನ್ನೂ ನೀಡಿದ್ದರು. ಆದರೂ ಪ್ರಭಾವಿ ಕಂಪೆನಿಯಾದ ಡೌವನ್ನು ಹೊರಗಿಡಲು ಲಂಡನ್ ಒಲಿಂಪಿಕ್ ಸಮಿತಿ ಮುಂದಾಗಲಿಲ್ಲ.
ನಿಜವಾಗಿ, ಭೋಪಾಲ್ ಅನಿಲ ದುರಂತಕ್ಕೆ ಡೌ ಕಂಪೆನಿ ನೇರವಾಗಿ ಹೊಣೆಗಾರ ಅಲ್ಲದೇ ಇರಬಹುದು. ಆದರೆ ಅದು ಖರೀದಿಸಿದ್ದು ಕೊಲೆಪಾತಕ ಕಂಪೆಯನ್ನು. ಕಂಪೆನಿಯ ಅಪರಾಧ ಏನು, ಸಂತ್ರಸ್ತರ ಮೇಲೆ ಅದರ ಹೊಣೆಗಾರಿಕೆ ಏನು ಅನ್ನುವುದೆಲ್ಲಾ ಖರೀದಿಸುವಾಗ ಡೌ ಕಂಪೆನಿಗೆ ಚೆನ್ನಾಗಿಯೇ ಗೊತ್ತಿತ್ತು. ಹೀಗಿರುವಾಗ ಸಂತ್ರಸ್ತರಿಗೆ ನೆರವಾಗುವುದು ನಮ್ಮ ಕರ್ತವ್ಯವಲ್ಲ ಎಂದರೆ ಹೇಗೆ? ಯೂನಿಯನ್ ಕಾರ್ಬೈಡ್ ಯಾವೆಲ್ಲ ದೇಶಗಳಿಗೆ ತನ್ನ ಉತ್ಪನ್ನಗಳನ್ನು ರವಾನಿಸುತ್ತಿತ್ತೋ ಅವೆಲ್ಲ ದೇಶಗಳಿಗೆ ಇವತ್ತು ಉತ್ಪನ್ನ ಸರಬರಾಜು ಮಾಡುವುದು ಡೌ ಕಂಪೆನಿ. ಯೂನಿಯನ್ ಕಾರ್ಬೈಡ್ ಈ ಹಿಂದೆ ಹೊಂದಿದ್ದ ಮಾರುಕಟ್ಟೆ ಇವತ್ತು ಡೌನ ವಶವಾಗಿದೆ. ಹಾಗಿರುವಾಗ ಯೂನಿಯನ್ ಕಾರ್ಬೈಡ್ ನ ಪ್ರಮಾದಗಳು ತನಗೆ ಬೇಡ, ಅದರ ಮಾರುಕಟ್ಟೆ ಮತ್ತು ಲಾಭಗಳು ಮಾತ್ರ ಸಾಕು ಅನ್ನುವುದಕ್ಕೆ ಏನೆನ್ನಬೇಕು?
ಇವತ್ತು, ದೊಡ್ಡ ದೊಡ್ಡ ಉದ್ದಿಮೆಗಳು ಯಾವುದೇ ಒಂದು ಪ್ರದೇಶದಲ್ಲಿ ಬಂಡವಾಳ ಹೂಡುವುದು, ಆ ಪ್ರದೇಶದ ಉದ್ಧಾರಕ್ಕೆ ಖಂಡಿತ ಅಲ್ಲ. ಲಾಭವೇ ಅವುಗಳ ಮುಖ್ಯ ಗುರಿ. ಅವುಗಳ ಪಾಲಿಗೆ ಮನುಷ್ಯರು ಬರೇ ಗಿನಿಪಿಗ್ ಗಳು . ಆದ್ದರಿಂದಲೇ ಭೋಪಾಲ್ ದುರಂತದ ಸಂತ್ರಸ್ತ ಮಕ್ಕಳ ಸ್ಪೆಷಲ್ ಒಲಿಂಪಿಕ್ಸ್ ಮುಖ್ಯವಾಗುವುದು. ಡೌ ಕಂಪೆನಿಗೆ ಹೋಲಿಸಿದರೆ ಕಳೆದ 28 ವರ್ಷಗಳಿಂದ ನ್ಯಾಯಯುತ ಪರಿಹಾರಕ್ಕಾಗಿ ಹೋರಾಡುತ್ತಾ ಬಂದಿರುವ ಸಂತ್ರಸ್ತರು ಏನೇನೂ ಅಲ್ಲ. ಡೌ ಕಂಪೆನಿಯಂತೆ ಅವರು ಕೋಟ್ಯಂತರ ರೂಪಾಯಿಗಳ ಒಡೆಯರೂ ಅಲ್ಲ. ಕೈಯನ್ನೋ ಕಾಲನ್ನೋ ಕಳಕೊಂಡು ಶಾಶ್ವತ ಮೂಲೆ ಸೇರಿರುವ ಮಗನನ್ನೋ ಮಗಳನ್ನೋ ಅಪ್ಪ ಅಲ್ಲಿ ಸಾಕುತ್ತಿರುತ್ತಾನೆ. ಅಂಧ ಮಗಳನ್ನು ಮನೆಯೊಳಗಿಟ್ಟು ದಿನದ ತುತ್ತಿಗಾಗಿ ತಾಯಿ ದುಡಿಯಲು ಹೋಗುತ್ತಾಳೆ. ಒಂದು ಮನೆಯಲ್ಲಿ ವಿಕಲ ಗಂಡನನ್ನು ಸಾಕುವ ಪತ್ನಿಯಿದ್ದರೆ ಇನ್ನೊಂದು ಮನೆಯಲ್ಲಿ ವಿಕಲ ಮಕ್ಕಳನ್ನು ಸಾಕುವ ತಂದೆ. ಪ್ರತಿ ಮನೆಗಳೂ ಒಂದೊಂದು ಕತೆಯನ್ನು ಹೇಳುತ್ತಾ ಭೋಪಾಲ್ ನಲ್ಲಿ ಬದುಕುತ್ತಿವೆ. ಅಲ್ಲದೇ, ಇವನ್ನು ಹೇಳಿ ಹೇಳಿ ಮಾಧ್ಯಮಗಳಿಗೂ ಬೋರಾಗಿ ಬಿಟ್ಟಿವೆ. ಆದ್ದರಿಂದಲೋ ಏನೋ ಭೋಪಾಲ್ ಸ್ಪೆಷಲ್ ಒಲಿಂಪಿಕ್ಸ್ ಗೆ ಅವು ಸ್ಪೇಸನ್ನೇ ಕೊಟ್ಟಿಲ್ಲ. ಮೈಕೆಲ್ ಫೆಲ್ಪ್ಸ್, ಫೆಡರರ್, ನೆಹ್ವಾಲ್, ಪಾವೆಲ್ ರನ್ನು ಕೊಂಡಾಡುವ ಧಾವಂತದಲ್ಲಿ ಈ ವಿಕಲ ಮಕ್ಕಳ ಕೂಗು ಅವಕ್ಕೆ ಕೇಳಿಸಿಯೂ ಇಲ್ಲ.
ಏನೇ ಆಗಲಿ, ಲಂಡನ್ ಒಲಿಂಪಿಕ್ಸ್ ನ ಸಂದರ್ಭದಲ್ಲಿ ನಡೆದ ಭೋಪಾಲ್ ಸ್ಪೆಷಲ್ ಒಲಿಂಪಿಕ್ಸ್ ಖಂಡಿತ ಸ್ಪೆಷಲ್. ಅದಕ್ಕೆ ಲಂಡನ್ ಒಲಿಂಪಿಕ್ಸ್ ನ ಖದರು, ಚೆಲುವು ಇಲ್ಲ ಎಂಬುದನ್ನು ಬಿಟ್ಟರೆ ಉಳಿದಂತೆ ನಮ್ಮನ್ನೆಲ್ಲಾ ಆಕರ್ಷಿಸುವುದಕ್ಕೆ ಮತ್ತು ತುಸು ಹೊತ್ತು ಕೂತು ಚರ್ಚಿಸುವಂತೆ ಒತ್ತಾಯಿಸುವುದಕ್ಕೆ ನೂರು ಶೇಕಡಾ ಅರ್ಹತೆ ಉಳ್ಳದ್ದು. ಲಂಡನ್ ಒಲಿಂಪಿಕ್ಸ್ ನಲ್ಲಿ ಯಾರೋ ಅಥ್ಲೀಟ್ ಒಬ್ಬ ಚಿಗರೆಯಂತೆ ಓಡಿದುದನ್ನು ಟಿ.ವಿ. ಮುಂದೆ ಕೂತು ಆನಂದಿಸುವಾಗ ಆ ಓಟದ ಹಿಂದೆ ಡೌ ಕಂಪೆನಿಯ ದುಡ್ಡಿದೆ ಎನ್ನುವುದನ್ನು ನಾವೆಲ್ಲ ತಿಳಿದಿರಬೇಕು. ಮಾತ್ರವಲ್ಲ, ಅದೇ ದುಡ್ಡಿನ ಒಂದಂಶವನ್ನು ಸಂತ್ರಸ್ತರಿಗೆ ನೀಡಲು ಅದು ಒಪ್ಪುತ್ತಿಲ್ಲ ಅನ್ನುವುದೂ ಗೊತ್ತಿರಬೇಕು. ಒಂದು ವೇಳೆ ಅದು ಭೋಪಾಲ್ ಸಂತ್ರಸ್ತರ ಕಣ್ಣೀರು ಒರೆಸಲು ಮುಂದಾಗುತ್ತಿದ್ದರೆ ಅಫ್ರಿ ಮೈದಾನದಲ್ಲಿ ವಿಕಲ ಮಕ್ಕಳು ಓಡುವ ಪರಿಸ್ಥಿತಿ ಬರುತ್ತಿರಲಿಲ್ಲ.

No comments:
Post a Comment