Monday, 6 August 2012

ಸಂಸ್ಕೃತಿ ರಕ್ಷಕರು ಮತ್ತು ವೃಂದಾವನದ ವಿಧವೆಯರು

ಮಂಗಳೂರಿನ ಹೋಮ್‍ಸ್ಟೇ ದಾಳಿ ಮತ್ತು ಅಣ್ಣಾ ಹಜಾರೆಯ ಜಂತರ್-ಮಂತರ್ ಪ್ಲಾಪ್ ಶೋನ ಮಧ್ಯೆ ನಾವು ನಿಜವಾಗಿಯೂ ಗಂಭೀರವಾಗಿ ಚರ್ಚಿಸಲೇಬೇಕಾಗಿದ್ದ ಸುದ್ದಿಯೊಂದು ಅಷ್ಟಾಗಿ ಯಾರ ಗಮನವನ್ನೂ ಸೆಳೆಯದೇ ಕಳೆದವಾರ ಕಣ್ಮರೆಯಾಯಿತು. `ಶ್ರೀಕೃಷ್ಣನ ಜನ್ಮಸ್ಥಾನವಾದ ಮಥುರಾದ ವೃಂದಾವನದಲ್ಲಿ 15 ಸಾವಿರದಷ್ಟು ವಿಧವೆಯರಿದ್ದು, ಸಾವಿಗೀಡಾಗುವ ವಿಧವೆಯರನ್ನು ಕತ್ತರಿಸಿ, ಗೋಣಿ ಚೀಲದಲ್ಲಿ ಹಾಕಿ ರಾತ್ರಿ ವೇಳೆ ಎಸೆಯಲಾಗುತ್ತದೆ, ಶವಸಂಸ್ಕಾರಕ್ಕೆ ದುಡ್ಡಿಲ್ಲದಿರುವುದೇ ಇದಕ್ಕೆ ಕಾರಣ’.. ಎಂಬ ಬೆಚ್ಚಿ ಬೀಳಿಸುವ ಸತ್ಯವನ್ನು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಸುಪ್ರೀಮ್ ಕೋರ್ಟ್‍ ನ ಮುಂದೆ ತಂದಾಗ ನ್ಯಾಯಮೂರ್ತಿಗಳಾದ ಡಿ.ಕೆ. ಜೈನ್ ಮತ್ತು ಠಾಕೂರ್ ಆಘಾತಗೊಂಡರು. `ವೃಂದಾವನ ಮತ್ತು ಪರಿಸರದಲ್ಲಿ ಬದುಕುವ ವಿಧವೆಯರ ದುರವಸ್ಥೆ’ ಎಂಬ ಶೀರ್ಷಿಕೆಯ ವರದಿಯನ್ನು ಇಂಗ್ಲಿಷ್ ಪತ್ರಿಕೆಯೊಂದು ಇತ್ತೀಚೆಗೆ ಪ್ರಕಟಿಸಿತ್ತು. ಇದರ ಆಧಾರದಲ್ಲಿ ಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಲಾಗಿತ್ತು. ದುರಂತ ಏನೆಂದರೆ, ವೃಂದಾವನದ ಸುತ್ತಮುತ್ತಲಿರುವ ನೂರಾರು ದೇಗುಲಗಳಲ್ಲಿ ಈ ವಿಧವೆಯರು ನಿತ್ಯ ಭಿಕ್ಷಾಟನೆ ನಡೆಸುತ್ತಾರೆ. ತುತ್ತು ಅನ್ನಕ್ಕಾಗಿ ಭಜನೆ ಮಾಡುತ್ತಾರೆ. ಬೆಳಿಗ್ಗೆ ಮತ್ತು ಸಂಜೆ ತಲಾ 4 ಗಂಟೆ ಶ್ರೀ ಕೃಷ್ಣನ ಭಜನೆ ಮಾಡಿದರೆ 4 ರೂ. ಮತ್ತು ಒಂದಿಷ್ಟು ಅಕ್ಕಿ ಸಿಗುತ್ತದೆ. ಪತಿಯ ನಿಧನದ ಬಳಿಕ, `ಪವಿತ್ರ ವಿಧವೆಯ ಬದುಕನ್ನು’ ವೃಂದಾವನದಲ್ಲಿ ನಡೆಸುವಂತೆ ಕುಟುಂಬಗಳು ಬಲಾತ್ಕರಿಸುತ್ತವೆ.. ಎಂದೆಲ್ಲಾ ಪ್ರಾಧಿಕಾರದ ವರದಿಯಲ್ಲಿ ಹೇಳಲಾಗಿದೆ. ನಿಜವಾಗಿ, ಸಂಸ್ಕೃತಿಯ ಹೆಸರಲ್ಲಿ ಹೆಣ್ಣು ಮಕ್ಕಳ ಮೇಲೆ ದಾಳಿ ನಡೆಸುವವರು ಬಿಡುವು ಮಾಡಿಕೊಂಡು ಒಮ್ಮೆ ವೃಂದಾವನಕ್ಕೆ ಹೋಗಬೇಕು. ಹೆಣ್ಣು-ಗಂಡು ಪರಸ್ಪರ ಮಾತಾಡುವುದು ಸಂಸ್ಕೃತಿಗೆ ಏಟು ಅನ್ನುವ ಮಂದಿಗೆ ಸಂಸ್ಕೃತಿಯ ಕೆಲಸ ಮಾಡುವುದಕ್ಕೆ ಅಲ್ಲಿ ಧಾರಾಳ ಅವಕಾಶವಿದೆ. ಅಷ್ಟಕ್ಕೂ ಈ ಸಂಸ್ಕೃತಿ ರಕ್ಷಕರು ವೃಂದಾವನಕ್ಕೆ ಉಚಿತ ಪಾಸ್ ಕೊಟ್ಟರೂ ಖಂಡಿತ ಹೋಗಲಾರರು. ಯಾಕೆಂದರೆ, ವೃಂದಾವನದಲ್ಲಿರುವುದು ಯುವತಿಯರು ಅಲ್ಲವಲ್ಲ.
     ಸಂಸ್ಕೃತಿ ಅಂದರೆ ಯಾರು ಎಷ್ಟು ಉದ್ದದ ಬಟ್ಟೆ ಧರಿಸಿದ್ದಾರೆ, ಯಾರ ಜೊತೆ ಮಾತಾಡುತ್ತಾರೆ, ಎಲ್ಲಿದ್ದಾರೆ ಅನ್ನುವುದನ್ನು ಪತ್ತೆ ಮಾಡುವುದಲ್ಲ. ಅದು ಅಸಂಸ್ಕೃತಿ ಅಷ್ಟೆ. ವೃಂದಾವನ ಎಂದಲ್ಲ, ಈ ದೇಶದ ಕೋಟ್ಯಂತರ ಮನೆಗಳಲ್ಲಿ, ಬೀದಿ, ಪಟ್ಟಣಗಳಲ್ಲಿ ವಿಧವೆಯರಿದ್ದಾರೆ. ಅವರ ತಪ್ಪು ಏನು ಅಂದರೆ, ಪತಿ ಸಾವಿಗೀಡಾಗಿರುವುದು. ವಿಧವೆಯರನ್ನು ಅಮಂಗಲ ಎಂದು ತೀರ್ಮಾನಿಸಿದ ಒಂದು ದೊಡ್ಡ ವರ್ಗ ಈ ದೇಶದಲ್ಲಿ ಈಗಲೂ ಬದುಕುತ್ತಾ ಇದೆ. ಅವರು ಮರು ಮದುವೆ ಆಗುವಂತಿಲ್ಲ. ಮದುವೆ, ಔತಣಗಳಲ್ಲಿ ಭಾಗವಹಿಸುವಂತಿಲ್ಲ. ಶೃಂಗಾರ ಮಾಡುವಂತಿಲ್ಲ.. ಇಂಥ 'ಇಲ್ಲ'ಗಳ ದೊಡ್ಡದೊಂದು ಪಟ್ಟಿಯನ್ನು ಸಮಾಜ ಅವರ ಕುತ್ತಿಗೆಗೆ ಕಟ್ಟಿ ಮೂಲೆಗೆ ತಳ್ಳಿ ಬಿಟ್ಟಿದೆ. ಅಂದಹಾಗೆ, ವಿಧವೆಯನ್ನು ಮರು ಮದುವೆಯಾಗಬೇಡ ಎಂದು ಹೇಳುವ ಸಮಾಜ ವಿಧುರನಿಗೆ ಆ ಅವಕಾಶ ಕೊಡುವುದಾದರೂ ಯಾಕೆ? ವಿಧವೆ ಅಮಂಗಲಳಾದರೆ ವಿಧುರ ಯಾಕೆ ಮಂಗಲನಾಗಬೇಕು? ಆತ ಮದುವೆ, ಔತಣಗಳಲ್ಲಿ ಭಾಗವಹಿಸುವುದು ಯಾಕೆ ಅಪರಾಧ ಅನ್ನಿಸುತ್ತಿಲ್ಲ? ಆತನೇಕೆ ವೃಂದಾವನದಲ್ಲಿ ಭಿಕ್ಷೆ ಬೇಡುವುದಿಲ್ಲ? ಜನನ ಮತ್ತು ಮರಣ ಎಂಬ ಪ್ರಕೃತಿಯ ಸಾಮಾನ್ಯ ಚಕ್ರವನ್ನು ಹೆಣ್ಣಿನ ಪಾಲಿಗೆ ಶಾಪಗೊಳಿಸಿದ್ದಾದರೂ ಯಾಕೆ?
      ಪ್ರವಾದಿ ಮುಹಮ್ಮದ್‍ರು(ಸ) ಮೊತ್ತಮೊದಲು ಮದುವೆಯಾದದ್ದೇ ತನಗಿಂತ 15 ವರ್ಷ ಹಿರಿಯಳಾದ, ಮೂರು ಮಕ್ಕಳ ತಾಯಿಯಾದ ವಿಧವೆಯನ್ನು. ಆವರೆಗೆ ಆ ಸಮಾಜದಲ್ಲಿ ಹೆಣ್ಣು ಅಪವಿತ್ರ, ಅಮಂಗಲಳೇ ಆಗಿದ್ದಳು. ವೈಧವ್ಯದ ಬದುಕು ಹೆಣ್ಣಿನ ಪಾಲಿಗೆ ಸಾಮಾನ್ಯ ಆಗಿತ್ತು. 6ನೇ ಶತಮಾನದಲ್ಲಿ ಪ್ರವಾದಿ ಮುಹಮ್ಮದ್‍ರು(ಸ) ಕೈಗೊಂಡ ಈ ಕ್ರಾಂತಿಕಾರಿ ನಿರ್ಧಾರ ಒಟ್ಟು ಸಮಾಜದ ಆಲೋಚನೆಯನ್ನೇ ಬದಲಿಸಿತು. ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ ಎಂದು ನಂಬಿದ್ದ ಸಮಾಜವನ್ನು ಪ್ರವಾದಿ ಮುಹಮ್ಮದ್‍ರು ಪ್ರಾಯೋಗಿಕವಾಗಿ ತಿದ್ದಲು ಮುಂದಾದರು. ಹೆಣ್ಣು ವಿಚ್ಛೇದನಗೊಂಡರೆ ಅಥವಾ ವಿಧವೆಯಾದರೆ ಆಕೆಯನ್ನು ಸಲಹುವ ಎಲ್ಲ ಹೊಣೆಗಾರಿಕೆಯನ್ನೂ ಅವರು ತವರು ಮನೆಗೇ ವಹಿಸಿಕೊಟ್ಟರು. ಆಸ್ತಿಯಲ್ಲಿ ಆಕೆಗೆ ಪಾಲು ಕೊಡಿಸಿದರು. ಯಾರಿಗಾದರೂ ಮೂವರು ಹೆಣ್ಣು ಮಕ್ಕಳಿದ್ದು, ಅವರು ಆ ಹೆಣ್ಣು ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ವಿದ್ಯೆ ನೀಡಿ, ಮದುವೆ ಮಾಡಿಸಿ ಕೊಟ್ಟರೆ ಅವರಿಗೆ ಸ್ವರ್ಗ ಇದೆ ಅಂದರು. ನಿಮ್ಮ ಸೇವೆಗೆ ಅತ್ಯಂತ ಅರ್ಹರು ಯಾರೆಂದರೆ ಅದು ತಾಯಿ ಅಂದರು. ವೃದ್ಧ ಹೆತ್ತವರು ಮನೆಯಲ್ಲಿದ್ದರೆ ಅವರನ್ನು ಹೊರ ಹಾಕುವುದು ಬಿಡಿ, ಛೆ ಎಂಬ ಉದ್ಘಾರ ಕೂಡ ನಿಮ್ಮ ಬಾಯಿಯಿಂದ ಬರಬಾರದು ಎಂದು ತಾಕೀತು ಮಾಡಿದರು. ಎಲ್ಲಿಯ ವರೆಗೆಂದರೆ, ಒಂದು ವೇಳೆ ನಿಮ್ಮ ತಾಯಿ ಅಥವಾ ತಂದೆ ಮುಸ್ಲಿಮೇತರರಾಗಿದ್ದರೂ ಇದೇ ವರ್ತನೆ ನಿಮ್ಮದಾಗಿರಬೇಕು ಎಂದು ಆದೇಶಿಸಿದರು. ಅಂದಹಾಗೆ ಓರ್ವ ವ್ಯಕ್ತಿ ನಮಾಝ್, ಉಪವಾಸ, ಹಜ್ಜ್ ಮುಂತಾದ ಎಲ್ಲವನ್ನೂ ಮಾಡುತ್ತಿರುವ ಮಾತ್ರವಲ್ಲ, ಸಾರ್ವಜನಿಕವಾಗಿ ಭಾರೀ ಗೌರವಾದರಗಳನ್ನು ಗಿಟ್ಟಿಸಿಕೊಂಡ ಭಕ್ತನೇ ಆಗಿದ್ದರೂ ಆತನ ವಿರುದ್ಧ ತಾಯಿ ಮುನಿಸಿಕೊಂಡಿದ್ದರೆ ಆತ ಸ್ವರ್ಗ ಪ್ರವೇಶಿಸಲಾರ ಅಂದದ್ದೂ ಪ್ರವಾದಿಯೇ.
      ಇವತ್ತು ವೃಂದಾವನದಲ್ಲಿರುವ ವಿಧವೆಯರ ದೊಡ್ಡ ದೂರೇನೆಂದರೆ, ತಮ್ಮ ಮಕ್ಕಳು ತಮ್ಮನ್ನು ಮನೆಯಿಂದ ಹೊರಗಟ್ಟಿದರು ಅನ್ನುವುದು. ಮುದಿ ಹೆತ್ತವರನ್ನು ಹೊರೆ ಎಂದು ಭಾವಿಸುವ ಮಕ್ಕಳಿರುವ ದೇಶವೊಂದರಲ್ಲಿ ಸಂಸ್ಕೃತಿ ರಕ್ಷಕರ ಪಾತ್ರವಾದರೂ ಏನಾಗಿರಬೇಕು? ತಾಯಿಯನ್ನು ತುಂಡರಿಸಿ ಗೋಣಿ ಚೀಲದಲ್ಲಿ ತುಂಬಿಸಿ, ಸಫಾಯಿ ಕರ್ಮಾಚಾರಿಗಳು ಎಸೆಯುವ ದೃಶ್ಯವನ್ನೊಮ್ಮೆ ಕಲ್ಪಿಸಿಕೊಳ್ಳಿ. ಯಾವ ಮಕ್ಕಳಿಗೆ ತಾನೇ ಅದು ಇಷ್ಟವಾದೀತು? ಇಷ್ಟಿದ್ದೂ ವಿಧವೆಯರ ಸಮಸ್ಯೆಯನ್ನು ಎತ್ತಿಕೊಂಡು ಎಷ್ಟು ಸಂಸ್ಕೃತಿ ರಕ್ಷಕರು ಪ್ರತಿಭಟಿಸಿದ್ದಾರೆ? ಅವರನ್ನು ಸಮಾಜದ ಇತರರಂತೆ ಕಾಣಬೇಕೆಂದು ಒತ್ತಾಯಿಸಿ ಎಷ್ಟು ಮನೆಗಳಿಗೆ ನುಗ್ಗಿದ್ದಾರೆ? ಸಂಸ್ಕೃತಿ ಎಂಬುದು ಹೆಣ್ಣು-ಗಂಡುಗಳ ಮಾತುಕತೆಗೆ ಮಾತ್ರ ಸೀಮಿತವಾ?
     ಹೊಡೆತ, ಬಡಿತ, ಥಳಿತದಿಂದ ಒಂದು ಸಮಾಜವನ್ನು ಬದಲಿಸಲು ಖಂಡಿತ ಸಾಧ್ಯವಿಲ್ಲ. ಅದಕ್ಕೆ ಪ್ರವಾದಿ ಮುಹಮ್ಮದರಂತೆ ಪ್ರಾಯೋಗಿಕ ವಿಧಾನದ ಅಗತ್ಯವಿದೆ. ಸಮಾಜದ ಸಮಸ್ಯೆಗೆ ಸೈದ್ಧಾಂತಿಕ ಪರಿಹಾರ ಇಲ್ಲದವರು ಮಾತ್ರ ದಾಂಧಲೆಗಿಳಿಯುತ್ತಾರೆ. ಇದೆಂದೂ ಪರಿಹಾರ ಆಗಲಾರದು.

1 comment:

  1. really acceptable editorial.... thanx for publish in:fb

    ReplyDelete