ಓರ್ವ ಉಪವಾಸಿಗನ ನಿಜವಾದ ಉಪವಾಸ ಆರಂಭವಾಗುವುದೇ ಈದ್‍ನ ಬಳಿಕ. ಆದರೆ ಈ ಉಪವಾಸದಲ್ಲಿ ನೀರು ಕುಡಿಯಬಹುದು. ಊಟ ಮಾಡಬಹುದು. ಬೇಕಾದಾಗ ತಿನ್ನ ಬಹುದು. ಸಹ್ರಿ ಉಣ್ಣಬೇಕಿಲ್ಲ. ಇಫ್ತಾರ್ ಮಾಡಬೇಕಿಲ್ಲ. ತರಾವೀಹ್ ಇಲ್ಲ.. ಆದರೂ ಈ ಉಪವಾಸ ರಮಝಾನ್‍ನ ಉಪವಾಸಕ್ಕಿಂತ ಎಷ್ಟೋ ಪಾಲು ಕಠಿಣ. ಈ ಉಪವಾಸವನ್ನು ಭಂಗಪಡಿಸುವುದಕ್ಕೆ ನೂರಾರು ಆಮಿಷಗಳು ಎದುರಾಗುತ್ತಲೇ ಇರುತ್ತವೆ. ರಮಝಾನಿನ ಒಂದು ತಿಂಗಳಲ್ಲಿ ಯಾವೆಲ್ಲ ಕಟ್ಟುನಿಟ್ಟು, ಮೌಲ್ಯಗಳನ್ನು ಪಾಲಿಸಿದ್ದೆವೋ ಅವೆಲ್ಲವನ್ನೂ ಕೈಬಿಡುವಂತೆ ಸುತ್ತಲಿನ ಪ್ರಪಂಚ ಒತ್ತಾಯಿಸತೊಡಗುತ್ತದೆ. ರಮಝಾನ್ ಬೇರೆ, ಉಳಿದ 11 ತಿಂಗಳು ಬೇರೆ ಅನ್ನುತ್ತದೆ. ವರದಕ್ಷಿಣೆ ಪಡೆದುಕೋ, ವ್ಯಾಪಾರದಲ್ಲಿ ಸುಳ್ಳು ಹೇಳು, ನಮಾಝ್‍ನ ಜೊತೆ ರಾಜಿಯಾಗು, ಝಗಮಗಿಸುವ ಜಗತ್ತಿನಲ್ಲಿ ಜಾಲಿಯಾಗಿರು.. ಎಂದೆಲ್ಲಾ ಹೇಳತೊಡಗುತ್ತದೆ. ಒಂದು ರೀತಿಯಲ್ಲಿ ಉಪವಾಸಿಗ, ಬೆಳೆದ ಬಾಳೆಗೊನೆಯಷ್ಟೇ ಆಕರ್ಷಣೀಯ ವಸ್ತು. ಮೂರ್ನಾಲ್ಕು ವಾರಗಳ ಮೊದಲು ಯಾವ ಬೆಲೆಯೂ ಇಲ್ಲದೇ ನೇತಾಡಿಕೊಂಡಿದ್ದ, ಮಾಲಿಕನನ್ನೋ ವ್ಯಾಪಾರಿಯನ್ನೋ ಆಕರ್ಷಿಸದೇ ಇದ್ದ ಬಾಳೆಗೊನೆ ಪ್ರಬುದ್ಧವಾದಂತೆ ಮಾಲಿಕ, ವ್ಯಾಪಾರಿ.. ಎಲ್ಲರನ್ನೂ ಆಕರ್ಷಿಸತೊಡಗುತ್ತದೆ. ಮಾಲಿಕ ದುಡ್ಡು ಲೆಕ್ಕ ಹಾಕುತ್ತಾನೆ. ವ್ಯಾಪಾರಿ ಚೌಕಾಶಿಗಿಳಿಯುತ್ತಾನೆ. ವಿವಿಧ ಕಡೆಗಳಿಂದ ಆಮಿಷಗಳೂ ಬರತೊಡಗುತ್ತವೆ. ಒಂದು ದಿನ, ವ್ಯಾಪಾರಿಯು ಮಾಲಿಕನಿಂದ ಅದನ್ನು ಖರೀದಿಸಿ ಮಾರುಕಟ್ಟೆಯಲ್ಲಿ ಮಾರಿದರೆ, ಮಾರುಕಟ್ಟೆಯವ ಮದ್ದು ಸಿಂಪಡಿಸಿಯೋ ವಿವಿಧ ಕೃತಕ ವಿಧಾನಗಳನ್ನು ಬಳಸಿಯೋ ಹಣ್ಣಾಗಿಸುತ್ತಾನೆ. ಹೀಗೆ ಎಲ್ಲರ ಆಕರ್ಷಣೆಗೆ ಒಳಗಾದ ಬಾಳೆಗೊನೆಯು ಕೊನೆಗೊಂದು ದಿನ ಯಾರದೋ ಹೊಟ್ಟೆ ಸೇರಿ ತನ್ನ ಅಸ್ತಿತ್ವವನ್ನೇ ಕಳಕೊಂಡು ಬಿಡುತ್ತದೆ. ನಿಜವಾಗಿ, ಓರ್ವ ಉಪವಾಸಿಗ ಈದ್‍ನ ಬಳಿಕ ಎದುರಿಸುವ ಸವಾಲು ಇದು. ಆತ ಯಾಕೆ ಆಕರ್ಷಣೀಯ ಎಂದರೆ, ಆತನ ಜೊತೆ ರಮಝಾನಿನಲ್ಲಿ ಗಳಿಸಿದ ಬೆಲೆಬಾಳುವ ಮೌಲ್ಯ ಇರುತ್ತದೆ. ಕೆಡುಕಿನ ಜಗತ್ತು ಆ ಮೌಲ್ಯವನ್ನು ಖರೀದಿಸಲು ಈದ್‍ನ ಬಳಿಕ ಪ್ರತಿ ಸೆಕೆಂಡೂ ಕಾಯುತ್ತಿರುತ್ತದೆ. ಯಾರು ಬಾಳೆಗೊನೆಯಂತೆ ಖರೀದಿಗೆ ಒಳಗಾಗುತ್ತಾರೋ ಅವರು ಹಣ್ಣಾದ ಬಾಳೆ ಹಣ್ಣಿನಂತೆ ಕೊನೆಗೆ ಅಸ್ತಿತ್ವವನ್ನೇ ಕಳಕೊಂಡು ಬಿಡುತ್ತಾರೆ..
ಆದ್ದರಿಂದ ಈದ್‍ನ ಪ್ರವಚನ ಕೇಳಿ, ಕಣ್ಣು ಮಂಜಾಗಿಸಿ, ಭಾರ ಹೃದಯದಿಂದ ರಮಝಾನ್‍ಗೆ ವಿದಾಯ ಕೋರುವ ಪ್ರತಿಯೋರ್ವರೂ ತಮ್ಮ ಕಣ್ಣ ಮುಂದೆ, ಬೆಳೆದ ಬಾಳೆಗೊನೆಯ ದೃಶ್ಯವನ್ನೊಮ್ಮೆ ತಂದುಕೊಳ್ಳಬೇಕು. ತಾನು ಎಂದೆಂದೂ ಈ ಆಕರ್ಷಣೆಯನ್ನು ಉಳಿಸಿಕೊಳ್ಳುವೆ, ಮಾರಾಟವಾಗಲಾರೆ ಎಂದು ಎದೆಗೆ ಕೈಯಿಟ್ಟು ತೀರ್ಮಾನಿಸಬೇಕು. ಇಲ್ಲದಿದ್ದರೆ ನಮ್ಮ ತಕ್ಬೀರ್‍ಗೆ, ಹೊಸ ಬಟ್ಟೆಗೆ, ಪಫ್ರ್ಯೂಮ್‍ಗೆ, ಮಂಜಾದ ಕಣ್ಣಿಗೆ ಯಾವ ಅರ್ಥವೂ ಇರುವುದಿಲ್ಲ.
No comments:
Post a Comment