Tuesday, 6 November 2012

ಅಹಿಂಸಾವಾದಿಗಳ ಹಿಂಸೆ ಮತ್ತು ಸೂಕಿಯ ಮೌನ


    ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಹೊರ ಜಗತ್ತಿಗೆ ಕಾಣಿಸದಂತೆ ಅಡಗಿಸಿಡಲಾಗಿದ್ದ  ಆಂಗ್ ಸ್ಯಾನ್   ಸೂಕಿಯ ಇನ್ನೊಂದು ಮುಖವನ್ನು ಮ್ಯಾನ್ಮಾರ್ ನ  ಬೌದ್ಧರು ಮತ್ತು ಮುಸ್ಲಿಮರು ಬಹಿರಂಗಕ್ಕೆ ತಂದಿದ್ದಾರೆ. ಸೂಕಿಗೆ ಬ್ರಿಟನ್, ಅಮೇರಿಕ ಮುಂತಾದ ಶ್ರೀಮಂತ ರಾಷ್ಟ್ರಗಳಲ್ಲಿ ಭಾರೀ ಬೆಲೆಯಿದೆ. ಆಕೆಯ ಇಬ್ಬರು ಮಕ್ಕಳಿರುವುದು ಬ್ರಿಟನ್ನಿನಲ್ಲಿ. ಆಕೆಯನ್ನು ಪ್ರಜಾತಂತ್ರ ಪರ ನಾಯಕಿ ಎಂದು ಅವು ಕರೆದಿದೆ. ನೋಬೆಲ್ ಪ್ರಶಸ್ತಿ ಕೊಟ್ಟು ಪುರಸ್ಕರಿಸಿವೆ. ಆಕೆಯ ಹೋರಾಟಕ್ಕೆ ಬೆಂಬಲ ಸಾರುವುದಕ್ಕಾಗಿಯೇ ಈ ರಾಷ್ಟ್ರಗಳು ಮ್ಯಾನ್ಮಾರ್ ನ  ಮೇಲೆ ದಿಗ್ಬಂಧನವನ್ನೂ ವಿಧಿಸಿತ್ತು. ಅಂದಹಾಗೆ, ಮ್ಯಾನ್ಮಾರನ್ನು ಬೌದ್ಧ ಸರ್ವಾಧಿಕಾರಿಗಳಿಂದ ಬಿಡಿಸಿ ಪ್ರಜಾತಂತ್ರದೆಡೆಗೆ ತರುವುದಕ್ಕಾಗಿ ಹೋರಾಡುವುದು, ಅದಕ್ಕಾಗಿ ಹತ್ತಾರು ವರ್ಷಗಳ ಕಾಲ ಗೃಹಬಂಧನಕ್ಕೆ ಒಳಗಾಗುವುದೆಲ್ಲ ಸಣ್ಣ ಸಾಧನೆ ಖಂಡಿತ ಅಲ್ಲ. ಇವತ್ತು ಮ್ಯಾನ್ಮಾರ್ ನ  ಅಧ್ಯಕ್ಷ ತೇನ್ ಸೇನ್ ರ  ಮಾತಿಗಿಂತ ಸೂಕಿಯ ಅಭಿಪ್ರಾಯಕ್ಕೆ ಜಾಗತಿಕವಾಗಿ ಹೆಚ್ಚು ಮನ್ನಣೆಯೂ ಇದೆ. ಆದ್ದರಿಂದಲೇ, ಮ್ಯಾನ್ಮಾರ್ ನ  ರಾಖಿನೆ ರಾಜ್ಯದಲ್ಲಿ ನಡೆಯುತ್ತಿರುವ ಮುಸ್ಲಿಮರು ಮತ್ತು ಬೌದ್ಧರ ನಡುವಿನ ಘರ್ಷಣೆಯ ಬಗ್ಗೆ ಸೂಕಿ ಅಭಿಪ್ರಾಯ ವ್ಯಕ್ತಪಡಿಸಲಿ ಎಂದು ಜಗತ್ತು ಆಸೆ ಪಟ್ಟದ್ದು. ಆದರೆ ಸೂಕಿ ಈ ಎಲ್ಲ ನಿರೀಕ್ಷೆಯನ್ನೂ  ಸುಳ್ಳು ಮಾಡಿದ್ದಾರೆ. ಬೌದ್ಧರು ಮತ್ತು ಮುಸ್ಲಿಮರ ನಡುವಿನ ಘರ್ಷಣೆಯ ಬಗ್ಗೆ ತಾನು ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಲ್ಲ ಅಂದಿದ್ದಾರೆ.
     ನಿಜವಾಗಿ, ಜೈಲಲ್ಲಿದ್ದ ಸೂಕಿಗೂ ಇದೀಗ ರಾಜಕಾರಣಿಯಾಗಿ ಬದಲಾಗಿರುವ ಸೂಕಿಗೂ ಬಹಳ ವ್ಯತ್ಯಾಸವಿದೆ. ಜೈಲಲ್ಲಿರುವಾಗ ಸೂಕಿ ಮಾತಾಡುತ್ತಿದ್ದುದು ಮ್ಯಾನ್ಮಾರ್ ಜನತೆಯ ಬಗ್ಗೆ. ಮ್ಯಾನ್ಮಾರ್ ಜನತೆ ಅಂದರೆ ಬೌದ್ಧರು ಮಾತ್ರ ಎಂದು ಅವರು ಆಗ ವ್ಯಾಖ್ಯಾನಿಸಿಯೇ ಇರಲಿಲ್ಲ. ಅಲ್ಲಿನ ಮುಸ್ಲಿಮರು ಸೂಕಿಯ ಹೋರಾಟಕ್ಕೆ ದೊಡ್ಡ ಮಟ್ಟದ ಬೆಂಬಲವನ್ನೂ ಸಾರಿದ್ದರು. ಆದರೆ ಇದೀಗ ರಾಜಕಾರಣಿಯಾಗಿ ಬದಲಾಗಿರುವ ಸೂಕಿ ಏನನ್ನೋ ಮುಚ್ಚಿಡುತ್ತಿದ್ದಾರೆ. ಇಲ್ಲದಿದ್ದರೆ, ಕಳೆದ ಜೂನ್ ಮತ್ತು ಅಕ್ಟೋಬರ್ ಗಳಲ್ಲಿ  ರಾಖಿನೆ ರಾಜ್ಯದಲ್ಲಿ ಮುಸ್ಲಿಮ್ ಮತ್ತು ಬೌದ್ಧರ ಮಧ್ಯೆ ಎರಡು ಬಾರಿ ಘರ್ಷಣೆಗಳು ನಡೆದಿವೆ. ಸರಕಾರವೇ ನೀಡಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ, ಕೇವಲ ಅಕ್ಟೋಬರ್ ನಲ್ಲಿ ನಡೆದ ಘರ್ಷಣೆಯಲ್ಲೇ  5351 ಮನೆಗಳು ಭಸ್ಮವಾಗಿವೆ. 32 ಸಾವಿರ ಮಂದಿ ನಿರಾಶ್ರಿತರಾಗಿದ್ದಾರೆ. 89 ಮಂದಿ ಸಾವಿಗೀಡಾಗಿದ್ದಾರೆ. ‘5 ಸಾವಿರದಷ್ಟಿದ್ದ ಬೌದ್ಧರ ಗುಂಪು ನಮ್ಮ ಗ್ರಾಮಗಳಿಗೆ ನುಗ್ಗಿ ಮನೆಗಳಿಗೆ ಬೆಂಕಿ ಕೊಟ್ಟವು’ ಎಂದು ದಿ ಹಿಂದೂ ಪತ್ರಿಕೆಯ ಪ್ರತಿನಿಧಿಗೆ ಮರ್ಯಮ್ ಬೀಬಿ (5-11-2012) ತಿಳಿಸಿದ್ದಾಳೆ. ಮುಸ್ಲಿಮರು ಅಪಾರ ಸಂಖ್ಯೆಯಲ್ಲಿ ನಿರಾಶ್ರಿತರಾಗಿದ್ದು ಮೂಲ ಸೌಲಭ್ಯಗಳೂ ಇಲ್ಲದ ಮದ್ರಸಗಳಲ್ಲಿ, ಶಿಬಿರಗಳಲ್ಲಿ ತುಂಬಿ ಹೋಗಿದ್ದಾರೆ ಎಂದೂ ಪತ್ರಿಕೆ ವರದಿ ಮಾಡಿದೆ. ಇವೆಲ್ಲ ಕಣ್ಣೆದುರಿಗಿದ್ದೂ ಸೂಕಿ ಏನೂ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲವೆಂದರೆ ಹೇಗೆ? ಅದೇನನ್ನು ಸೂಚಿಸುತ್ತದೆ?
     ನೋಬೆಲ್ ಬಹುಮಾನಕ್ಕೆ ಸೂಕಿ ಆಯ್ಕೆಗೊಂಡಾಗ ಮ್ಯಾನ್ಮಾರ್ ನ  ಬೌದ್ಧ ನಾಯಕರನ್ನು ಬಿಟ್ಟರೆ, ಉಳಿದಂತೆ ಈ ಜಗತ್ತಿನ ಯಾರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಹಾಗಂತ, ಜಗತ್ತು ನೀಡಿದ ಈ ಬೆಂಬಲಕ್ಕೆ ಆಕೆಯ ಬಿಳಿ ಚರ್ಮವೋ ಇಂಗ್ಲಿಷ್ ಕುರಿತಾದ ಜ್ಞಾನವೋ  ಕಾರಣವೂ ಆಗಿರಲಿಲ್ಲ. ಜೈಲಿನಲ್ಲಿದ್ದಾಗ  ಸೂಕಿ ಮಾತಾಡುತ್ತಿದ್ದುದೆಲ್ಲ ಮನುಷ್ಯರ ಬಗ್ಗೆ, ಅವರ ಸ್ವಾತಂತ್ರ್ಯದ ಬಗ್ಗೆ. ಆದ್ದರಿಂದಲೇ ಜಗತ್ತಿನಾದ್ಯಂತ ದಮನಿತರಾಗಿರುವ ಮನುಷ್ಯರ ವಿಮೋಚನೆಯ ಸಂಕೇತವಾಗಿ ಮಾಧ್ಯಮಗಳು ಆಕೆಯನ್ನು ಬಿಂಬಿಸಿದುವು. ಮ್ಯಾನ್ಮಾರ್ ನ  ಮುಸ್ಲಿಮರು ಆಕೆಯ ಮಾತುಗಳನ್ನು ನಂಬಿದರು. ಆದರೆ ಇವತ್ತು ಸೂಕಿಯ ವರ್ತನೆಗಳನ್ನು ನೋಡಿದರೆ ನಿರಾಸೆಯಾಗುತ್ತದೆ. ಆಕೆ ಪಕ್ಕಾ ರಾಜಕಾರಣಿಯಂತೆ ಮಾತಾಡುತ್ತಿದ್ದಾರೆ. ಸತ್ಯ ಹೇಳಿ ಬಹುಸಂಖ್ಯಾತ ಬೌದ್ಧರ ವಿರೋಧ ಕಟ್ಟಿಕೊಳ್ಳುವುದಕ್ಕಿಂತ ಸುಮ್ಮನಿರುವುದು ಲಾಭದಾಯಕ ಎಂದು ಅವರು ಭಾವಿಸಿದ್ದಾರೆ. ವಿಶೇಷ ಏನೆಂದರೆ, ಬೌದ್ಧ ಗುಂಪುಗಳು ಮುಸ್ಲಿಮರನ್ನು ಕೊಲ್ಲುವುದಕ್ಕಿಂತ ಒಕ್ಕಲೆಬ್ಬಿಸಿ ಅತಂತ್ರ ರಾಗಿಸುವುದಕ್ಕೇ  ಹೆಚ್ಚು ಒತ್ತು ಕೊಟ್ಟಿರುವುದು. ಮನೆಗಳಿಗೆ ಬೆಂಕಿ ಹಚ್ಚಿ ಅವರ ಅಸ್ತಿತ್ವ ನಾಶ ಮಾಡುವುದನ್ನೇ ಅವು ಗುರಿಯಾಗಿಸಿಕೊಂಡಿವೆ. ಇದು ಘರ್ಷಣೆಯ ಕುರಿತಂತೆ ಅನುಮಾನಗಳನ್ನೂ  ಮೂಡಿಸುತ್ತಿದೆ. ಯಾಕೆಂದರೆ, ಪ್ರಜಾತಂತ್ರಕ್ಕೆ ಮರಳಿದ ಮ್ಯಾನ್ಮಾರ್ ನಲ್ಲಿ  ಬಂಡವಾಳ ಹೂಡಲು ಜಾಗತಿಕವಾಗಿ ಪೈಪೋಟಿಟಿಗಳು ಪ್ರಾರಂಭವಾಗಿವೆ. ದಶಕಗಳಿಂದ ಜಾರಿಯಲ್ಲಿದ್ದ ದಿಗ್ಬಂಧನ ಹೊರಟು ಹೋಗುತ್ತಿದ್ದು, ಬಂಡವಾಳ ಹೂಡುವಂತೆ ತೇನ್ ಸೇನ್ ರ  ಸರಕಾರ ವಿದೇಶಿ ಕಂಪೆನಿಗಳನ್ನು ಆಹ್ವಾನಿಸುತ್ತಲೂ ಇದೆ. ಅಲ್ಲದೆ ಮ್ಯಾನ್ಮಾರ್ ನಲ್ಲಿ  ಅಪಾರ ಪ್ರಮಾಣದ ಪ್ರಾಕೃತಿಕ ಸಂಪನ್ಮೂಲಗಳೂ ಇವೆ ಎನ್ನಲಾಗುತ್ತಿದೆ. ಬಹುಶಃ ಬೃಹತ್ ಕಂಪೆನಿಗಳಿಗೆ ಭೂಮಿ ಒದಗಿಸಲು ಇಂಥದ್ದೊಂದು ಘರ್ಷಣೆಯನ್ನು ವ್ಯವಸ್ಥೆಯೇ ಹುಟ್ಟು ಹಾಕಿದ್ದಿರಬಹುದೇ? ಜನರನ್ನು ಒಕ್ಕಲೆಬ್ಬಿಸಿ ಆ ಜಾಗಗಳನ್ನು ಕಂಪೆನಿಗಳ ವಶಕ್ಕೆ ಒಪ್ಪಿಸುವುದಕ್ಕಾಗಿ ಮುಸ್ಲಿಮರ ಪೌರತ್ವದ ಬಗ್ಗೆ ಅನುಮಾನಗಳನ್ನು ಹುಟ್ಟು ಹಾಕಲಾಗಿದೆಯೇ? ಯಾಕೆಂದರೆ ಘರ್ಷಣೆ ಕಾಣಿಸಿಕೊಂಡಿರುವ ರಾಖಿನೆ ರಾಜ್ಯದ ಸಿಟ್ವೆ ನಗರದಲ್ಲಿ ಭಾರತದ ಎಸ್ಸಾರ್ ಕಂಪೆನಿಯ ದೊಡ್ಡದೊಂದು ಟ್ರಾನ್ಸ್ ಪೋರ್ಟ್ ನಿರ್ಮಾಣ ಯೋಜನೆಯು ಪ್ರಗತಿಯಲ್ಲಿದೆ. ಅಲ್ಲದೆ ಈ ನಗರದಲ್ಲಿ ಘರ್ಷಣೆಯ ಯಾವ ಕುರುಹುಗಳೂ ಇಲ್ಲ. ಹೀಗಿರುವಾಗ ಒಳಪ್ರದೇಶದಲ್ಲಿರುವ ಬೌದ್ಧರು ಮತ್ತು ಮುಸ್ಲಿಮರ ಮಧ್ಯೆ ಈ ಮಟ್ಟದ ದ್ವೇಷ ಹುಟ್ಟಿಕೊಳ್ಳಲು ಕಾರಣವಾದರೂ ಏನಿರಬಹುದು?
    ಸೂಕಿಗೆ ಮಾತಾಡುವುದಕ್ಕೆ ದಾರಾಳ ಸಂಗತಿಗಳಿವೆ. ಕನಿಷ್ಠ ನೋಬೆಲ್ ಪ್ರಶಸ್ತಿಯ ಗೌರವವನ್ನು ಉಳಿಸಿಕೊಳ್ಳುವುದಕ್ಕಾದರೂ ಅವರು ಮಾತಾಡಲೇಬೇಕಿದೆ. ಮ್ಯಾನ್ಮಾರ್ ನಲ್ಲಿ  ಸದ್ಯ ಕಾಣಿಸಿಕೊಂಡಿರುವ ಘರ್ಷಣೆಯ ಮೂಲ ಉದ್ದೇಶವಾದರೂ ಏನು? ಅಹಿಂಸೆಯ ಬುದ್ಧ ಧರ್ಮವು ಹಿಂಸಾತ್ಮಕವಾಗಿ ಪರಿವರ್ತನೆಗೊಂಡದ್ದು ಹೇಗೆ? ನೂರಾರು ವರ್ಷಗಳಿಂದ ರಾಖಿನೆಯಲ್ಲಿರುವ ಮುಸ್ಲಿಮರ ಪೌರತ್ವವನ್ನು ಅನುಮಾನಾಸ್ಪದ ಗೊಳಿಸಿರುವುದರಲ್ಲಿ ಸರಕಾರದ ಮತ್ತು ಬಂಡವಾಳಶಾಹಿಗಳ ಪಾತ್ರವೇನಾದರೂ ಇದೆಯೇ? ಅಷ್ಟಕ್ಕೂ ಮುಸ್ಲಿಮರ ಪೌರತ್ವದ ಕುರಿತು ಅನುಮಾನಗಳೇನೇ ಇರಲಿ, ಅದರ ನೆಪದಲ್ಲಿ ಒಂದು ಸಮೂಹವನ್ನೇ ಅತಂತ್ರಗೊಳಿಸುವುದನ್ನು ಕನಿಷ್ಠ ಖಂಡಿಸುವುದಕ್ಕೂ ಸೂಕಿಗೆ ಸಾಧ್ಯವಾಗುವುದಿಲ್ಲವೆಂದರೆ ಅವರನ್ನು ಶಾಂತಿದೂತೆ ಎಂದು ಹೇಗೆ ಕರೆಯುವುದು? ಒಂದು ವೇಳೆ ಸೂಕಿ ಇನ್ನೂ ಮೌನವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆಂದಾದರೆ, ನೋಬೆಲ್ ಆಯ್ಕೆ ಮಂಡಳಿಯು ಆಕೆಯಿಂದ ಪ್ರಶಸ್ತಿಯನ್ನು ಹಿಂಪಡೆದು ಅದರ ಗೌರವವನ್ನಾದರೂ ಕಾಪಾಡಲಿ.

No comments:

Post a Comment