Monday, 19 November 2012

ಅಡ್ಡಾದಿಡ್ಡಿ ಚಲಿಸಿ ಹೊರಟುಹೋದ ಠಾಕ್ರೆ


‘ದ್ವಂದ್ವ' ಎಂಬ ಪದಕ್ಕೆ ಅತ್ಯಂತ ಒಪ್ಪುವ ವ್ಯಕ್ತಿತ್ವ ಬಾಳಾ ಠಾಕ್ರೆಯದ್ದು. ‘ಫ್ರಿಪ್ರೆಸ್ ಜರ್ನಲ್’ ಪತ್ರಿಕೆಯಲ್ಲಿ ವ್ಯಂಗ್ಯ ಚಿತ್ರಕಾರನಾಗಿ ಬದುಕನ್ನು ಆರಂಭಿಸಿದ ಅವರು, ಬಳಿಕ ವ್ಯಂಗ್ಯ ಚಿತ್ರಕಾರರಿಗೇ ವಸ್ತುವಾಗಿ ಬಿಟ್ಟರು. ಜಲೀಲ್ ಪಾರ್ಕರ್ ಎಂಬ ಹೃದಯತಜ್ಞನನ್ನು ತನ್ನ ಖಾಸಗಿ ವೈದ್ಯರಾಗಿ ಇಟ್ಟುಕೊಂಡೇ, ಜಲೀಲ್‍ರ ಸಮುದಾಯದ ಮೇಲೆ ಕಟುವಾಗಿ ವರ್ತಿಸಿದರು. ಪಾಕ್ ಕ್ರಿಕೆಟಿಗ ಮಿಯಾಂದಾದ್‍ರನ್ನು ತನ್ನ ಮನೆಯಲ್ಲಿ ಕೂರಿಸಿ ಸತ್ಕರಿಸಿದ್ದೂ ಅವರೇ. ವಾಂಖೇಡೆ ಮೈದಾನದ ಕ್ರಿಕೆಟ್ ಪಿಚ್ ಅನ್ನು ತನ್ನ ಬೆಂಬಲಿಗರ ಮೂಲಕ ಅಗೆಸಿದ್ದೂ ಅವರೇ. ಒಂದು ರೀತಿಯಲ್ಲಿ ತನ್ನ ದ್ವಂದ್ವತನದಿಂದಾಗಿ ಬಾಳಾ ಠಾಕ್ರೆ ಎಂಬ ಮನುಷ್ಯ ಉದ್ದಕ್ಕೂ ಸುದ್ದಿಗೊಳಗಾಗುತ್ತಲೇ ಬದುಕಿದರು.
    ಸಾವು ಎಂಬ ಎರಡಕ್ಷರಕ್ಕೆ 'ಬದುಕು' ಎಂಬ ಅರ್ಥ ಇಲ್ಲ. ಸಾವಿನ ಬಳಿಕ ಏನು, ಪುನರ್ಜನ್ಮ ಇದೆಯೋ ಇಲ್ಲವೋ.. ಮುಂತಾದ ಚರ್ಚೆಗಳೆಲ್ಲ ಸಮಾಜದಲ್ಲಿ ಆಗಾಗ ಕಾಣಿಸಿಕೊಳ್ಳುವುದಕ್ಕೆ ಕಾರಣ ಕೂಡಾ ಸಾವೇ. ಸಾವು ನಿಶ್ಚಿತ ಎಂಬುದು ಸ್ಪಷ್ಟವಾಗಿರುವುದರಿಂದಲೇ ಸಾವಿನ ಬಳಿಕದ ಅವಸ್ಥೆಯ ಕುರಿತಂತೆ ಪ್ರಶ್ನೆಗಳೇಳುವುದು. ನಿಜವಾಗಿ ಕೆಲವರ ಸಾವು ಯಾವ ಮಟ್ಟದಲ್ಲಿರುತ್ತದೆಂದರೆ, ಅದು ಚರ್ಚೆಗೆ ಒಳಗಾಗಲೇ ಬೇಕು ಅನ್ನುವಷ್ಟು. ಠಾಕ್ರೆಯ ಸಾವು ಸಾಮಾಜಿಕವಾಗಿ ಅಂಥದ್ದೊಂದು ತುರ್ತನ್ನು ಸೃಷ್ಟಿಸಿಬಿಟ್ಟಿದೆ. ಈಗಾಗಲೇ ಮಾಧ್ಯಮಗಳಲ್ಲಿ ಠಾಕ್ರೆಯ ಕುರಿತಂತೆ ಧಾರಾಳ ಚರ್ಚೆಗಳಾಗಿವೆ. ಅವರ ಬಗ್ಗೆ ಬಂದಿರುವ ಎಲ್ಲ ಅಭಿಪ್ರಾಯಗಳನ್ನು ಒಟ್ಟು ಸೇರಿಸಿ ನೋಡಿದರೆ, ಅದು ಠಾಕ್ರೆಗೆ ಖುಷಿ ಕೊಡುವ ರೂಪದಲ್ಲೇನೂ ಇಲ್ಲ. ಠಾಕ್ರೆಯ ಸಾವಿಗೆ ಸಂತಾಪ ಸೂಚಿಸಿದವರು ಕೂಡ ತಮ್ಮ ಭಾಷೆ, ಶೈಲಿಯಲ್ಲಿ ಠಾಕ್ರೆಯನ್ನು ಅನುಸರಿಸಲೂ ಇಲ್ಲ. ಒಂದು ರಾಜಕೀಯ ಪಕ್ಷವನ್ನು ಕಟ್ಟಿ, 86 ವರ್ಷಗಳ ವರೆಗೆ ಅದನ್ನು ಮುನ್ನಡೆಸಿದ ವ್ಯಕ್ತಿಯೊಬ್ಬ ಮರಣ ಹೊಂದುವಾಗ ಕನಿಷ್ಠ ಭಾಷೆಯನ್ನೂ ಇತರರಿಗೆ ಮಾದರಿಯಾಗಿ ಬಿಟ್ಟು ಹೋಗದಿರಲು ಕಾರಣವೇನು? ಅವರ ಅಂತ್ಯ ಸಂಸ್ಕಾರದಲ್ಲಿ ಸೇರಿದ ಬೃಹತ್ ಜನಸ್ತೋಮದಲ್ಲಿ, ಠಾಕ್ರೆ ಏನಾಗಿದ್ದರು ಎಂದು ಕೇಳಿದರೆ ಹೀಗೆಯೇ ಎಂದು ನಿರ್ದಿಷ್ಟವಾಗಿ ಹೇಳಿಬಿಡುವಂಥ ವ್ಯಕ್ತಿತ್ವವೊಂದನ್ನು ಠಾಕ್ರೆ ಉಳಿಸಿ ಹೋಗಿದ್ದಾರೆಯೇ? ಠಾಕ್ರೆಯವರು ಮಾತಾಡುವಾಗಲೆಲ್ಲ ಈ ದೇಶದ ದೊಡ್ಡದೊಂದು ಜನಸಮೂಹ ಆತಂಕ, ಅನುಮಾನದೊಂದಿಗೇ  ಅವರನ್ನು ನೋಡುತ್ತಿದ್ದುದು ಎಲ್ಲರಿಗೂ ಗೊತ್ತು. ಆ ಆತಂಕ ಎಲ್ಲಿಯ ವರೆಗೆ ಮುಂದುವರಿಯಿತೆಂದರೆ, ಅವರ ಅಂತ್ಯಸಂಸ್ಕಾರದ ವರೆಗೂ. ಆಗ ವಾಹನ ಸಂಚಾರ ಸ್ಥಗಿತಗೊಂಡುವು. ಮುಂಬೈಯಲ್ಲಿ ನಿಗದಿಯಾಗಿದ್ದ ಎಲ್ಲ ಕಾರ್ಯಕ್ರಮಗಳೂ ರದ್ದುಗೊಂಡುವು. ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದರು. ಮುಂಬೈಯಲ್ಲಿ ಎಲ್ಲ ಟಿ.ವಿ. ಚಾನೆಲ್‍ಗಳೂ ಇತರೆಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಬರೇ ಠಾಕ್ರೆಯನ್ನಷ್ಟೇ ತುಂಬಿಕೊಂಡವು. ಅಂದಹಾಗೆ, ಇದು ಠಾಕ್ರೆಗೆ ಸಲ್ಲಿಸಲಾದ ಗೌರವವೋ ಅಥವಾ ಅವರ ವ್ಯಕ್ತಿತ್ವದ ಪ್ರತಿಫಲನವೋ?
    ನಿಜವಾಗಿ 86ನೇ ವರ್ಷದಲ್ಲಿ ಸಾವಿಗೀಡಾಗುವಾಗ ಠಾಕ್ರೆಗೆ ಯಾವ ಇಮೇಜು ಇತ್ತೋ, ಅದು ಅವರದೇ ಆಯ್ಕೆ ಎಂದು ಹೇಳುವಂತಿಲ್ಲ. ಯಾಕೆಂದರೆ, ಮುಂಬೈಯ ಕೂಲಿ ಕಾರ್ಮಿಕರನ್ನು ಒಟ್ಟು ಸೇರಿಸಿ, ‘ಕಾರ್ಮಿಕ ಆಂದೋಲನ’ ನಡೆಸುವಾಗ, ಠಾಕ್ರೆಗೆ ಈಗಿನಂಥ ಗುರುತೇನೂ ಇರಲಿಲ್ಲ. ಬರಬರುತ್ತಾ ಅವರನ್ನು ಮನುಷ್ಯ ವಿರೋಧಿಗಳು ಬಳಸಿಕೊಂಡರೇನೋ ಎಂಬ ಅನುಮಾನ ಮೂಡುವುದು ಈ ಕಾರಣದಿಂದಲೇ. ಇದಕ್ಕೆ ಇನ್ನೊಂದು ಕಾರಣ, ಅವರ ದ್ವಂದ್ವ ನಿಲುವು. ಬಹುಶಃ ಈ ದೇಶವನ್ನು ತಮ್ಮ ಕನಸಿನ ಹಿಂದೂ ರಾಷ್ಟ್ರವಾಗಿಸಲು ಪ್ರಯತ್ನಿಸುತ್ತಿರುವ ‘ಪರಿವಾರ’ಗಳ ಕೈಯಲ್ಲಿ ಸಿಲುಕಿ ಠಾಕ್ರೆ ತನ್ನತನವನ್ನು ಕಳಕೊಂಡರೇನೋ ಅನ್ನಿಸುತ್ತಿದೆ. ರಾಜಕೀಯ ಮಹತ್ವಾಕಾಂಕ್ಷೆ ಉಳ್ಳವರನ್ನು ಭೇಟಿಯಾಗಿ ಅವರಲ್ಲಿ ವಿವಿಧ ಭ್ರಮೆಗಳನ್ನು ಹುಟ್ಟಿಸಿ, ತಮಗೆ ಬೇಕಾದಂತೆ ಪರಿವಾರ ದುಡಿಸಿಕೊಳ್ಳುವುದೇನೂ ಗುಟ್ಟಾಗಿಲ್ಲ. ಅಣ್ಣಾ ಹಜಾರೆಯರ ಮೇಲೂ ಇಂಥ ಪ್ರಯತ್ನ ನಡೆದಿದೆ. ಕೇಜ್ರಿವಾಲ್‍ರ ತಂಡದಲ್ಲಿ ಪರಿವಾರದ ಮಂದಿಯಿದ್ದಾರೆ ಎಂಬುದು ಇತ್ತೀಚೆಗಷ್ಟೇ ಬಹಿರಂಗವಾಗಿತ್ತು. ಆದ್ದರಿಂದಲೇ ಕಾರ್ಮಿಕರನ್ನು ಒಟ್ಟು ಸೇರಿಸಿ ಏನೋ ಮಾಡಲು ಹೋದ ಠಾಕ್ರೆ ಎಂಬ ಯುವಕನನ್ನು ದ್ವಂದ್ವ ಮನುಷ್ಯನಾಗಿ ಪರಿವಾರ ಬೆಳೆಸಿರಬಹುದು ಅನ್ನುವ ಅನುಮಾನ ಬಲ ಪಡೆಯುವುದು. ಪರಿವಾರದ ಕನಸಿನ ರಾಷ್ಟ್ರ ಕಟ್ಟುವುದಕ್ಕೆ ಬಿಜೆಪಿ ಒಂದಕ್ಕೇ ಸಾಧ್ಯ ಎಂದು ಅದು ನಂಬಿರುವ ಸಾಧ್ಯತೆ ಖಂಡಿತವಾಗಿಯೂ ಇಲ್ಲ. ಆದ್ದರಿಂದಲೇ ಠಾಕ್ರೆಯಂಥ ಹತ್ತಾರು ಮಂದಿಯನ್ನು ಅದು ದೇಶದಲ್ಲೆಡೆ ತಯಾರಿಸುತ್ತಲೇ ಇರುತ್ತದೆ. ವಿವಿಧ ಭ್ರಮೆಗಳನ್ನು ಅವರ ತಲೆಯೊಳಗೆ ಹರಡಿ, ಅವರಿಂದ ವಿವಿಧ ಸಂದರ್ಭಗಳಲ್ಲಿ ಹೇಳಿಕೆಗಳನ್ನು ಹೊರಡಿಸುತ್ತಲೂ ಇರುತ್ತದೆ. ಸುಷ್ಮಾ ಸ್ವರಾಜ್, ಜೇಟ್ಲಿ, ಅಡ್ವಾಣಿಗೆ ಹೇಳಲು ಸಾಧ್ಯವಾಗದಂಥ ಅಗ್ಗದ ಮಾತುಗಳನ್ನು ಠಾಕ್ರೆಯಂಥವರಲ್ಲಿ ಹೇಳಿಸಿ ತಮ್ಮ ವಿಚಾರ ಚರ್ಚೆಯಲ್ಲಿರುವಂತೆ ನೋಡಿಕೊಳ್ಳುತ್ತಲೂ ಇರುತ್ತದೆ.
     ಏನೇ ಆಗಲಿ, ಠಾಕ್ರೆ ಹೊರಟು ಹೋಗಿದ್ದಾರೆ. ಅವರಾಡಿದ ಮಾತು, ವರ್ತನೆಗಳಲ್ಲಿ ಅವರದ್ದೆಷ್ಟು, ಬೇರೆಯವರದ್ದೆಷ್ಟು ಎಂದು ವಿಭಜಿಸಿ ನೋಡುವುದಕ್ಕೆ ಸಮಾಜದ ಬಳಿ ಉಪಕರಣವೇನೂ ಇಲ್ಲ. ಆದರೆ ಕೆಲವೊಮ್ಮೆ ಅವರು ತಮ್ಮ ಮಾತಿನ ಮೂಲಕ ಪರಿವಾರವನ್ನೇ ಮುಜುಗರಕ್ಕೆ ಸಿಲುಕಿಸುತ್ತಿದ್ದುದು ಮತ್ತು ಕೆಲವೊಮ್ಮೆ ನಿಷ್ಠನಂತೆ ವರ್ತಿಸುತ್ತಿದ್ದುದೆಲ್ಲ ಅವರೊಳಗಿನ ಗೊಂದಲವನ್ನು ಸೂಚಿಸುತ್ತದೆ. ಬಹುಶಃ ಇನ್ನೇನೋ ಆಗಲು ಬಯಸಿದ ಅವರನ್ನು ದುರ್ಬಳಕೆಗೆ ಒಳಪಡಿಸಲಾಯಿತೋ ಏನೋ? ಅಂತೂ ‘ರಾಜಕಾರಣ’ ಎಂಬ ವಿಶಾಲ ಹುಲ್ಲುಗಾವಲಿನಲ್ಲಿ ಅಡ್ಡಾದಿಡ್ಡಿ ಚಲಿಸಿ ಒಂದಷ್ಟು ಭೀತಿಯನ್ನು ಹುಟ್ಟಿಸಲು ಯಶಸ್ವಿಯಾಗಿರುವರೆಂಬುದನ್ನು ಬಿಟ್ಟರೆ ಉಳಿದಂತೆ ಗೌರವದಿಂದ ಸ್ಮರಿಸಿಕೊಳ್ಳುವುದಕ್ಕೆ ಠಾಕ್ರೆ ಇಲ್ಲಿ ಏನನ್ನೂ ಉಳಿಸಿ ಹೋಗಿಲ್ಲ. ಇದು ಠಾಕ್ರೆಯ ಸೋಲು ಮಾತ್ರವಲ್ಲ, ಅವರನ್ನು ಅನುಸರಿಸುವವರದ್ದೂ.

No comments:

Post a Comment