Tuesday, 28 May 2013

ನಮ್ಮ ವೈಫಲ್ಯಗಳನ್ನು ಅಡಗಿಸುವುದಕ್ಕಾಗಿ ಅತಿಥಿಯನ್ನು ದೂರದಿರೋಣ

   ಬಾಯಿ ಬಾರದ, ದಾವೆ ಹೂಡುವ ಸಾಮರ್ಥ್ಯವೂ ಇಲ್ಲದ ಮಳೆಯ ಮೇಲೆ ಆರೋಪಗಳನ್ನು ಹೊರಿಸಿ, ತಮ್ಮೆಲ್ಲ ವೈಫಲ್ಯಗಳಿಂದ ನುಣುಚಿಕೊಳ್ಳಲು ವ್ಯವಸ್ಥೆ ಸಜ್ಜಾಗುತ್ತಿರುವಂತೆ ಕಾಣುತ್ತಿದೆ. ‘ಮಳೆಗೆ, ಚಳಿಗೆ ಮತ್ತು ಬಿಸಿಲಿಗೆ ಇಂತಿಷ್ಟು ಮಂದಿ ಸಾವಿಗೀಡಾದರು’ ಎಂಬ ಪದವನ್ನು ನಾವು ಈಗಾಗಲೇ ಸಂಶೋಧಿಸಿ ಇಟ್ಟಿದ್ದೇವೆ. ಇಂಥ ಪದಗಳನ್ನು ಅತ್ಯಂತ ಹೆಚ್ಚು ಬಳಕೆ ಮಾಡುವುದು ವ್ಯವಸ್ಥೆ. ಜನರು ನೀರಿನಲ್ಲಿ ಕೊಚ್ಚಿ ಹೋದರೆ, ಗುಡಿಸಲು ಕುಸಿದು ಬಿದ್ದರೆ ಇಲ್ಲವೇ ಒಂದು ಪ್ರದೇಶವೇ ನೀರಿನಿಂದ ಆವೃತ್ತವಾದರೆ ತಕ್ಷಣ ಸಚಿವರು ಮಳೆಯನ್ನು ಅಪರಾಧಿಯೆಂದು ಘೋಷಿಸುತ್ತಾರೆ. ಅಷ್ಟಕ್ಕೂ, ಮಳೆಯೇನೂ ಸರದಿ ತಪ್ಪಿಸಿ ಸೆಖೆಗಾಲದಲ್ಲೋ ಚಳಿಗಾಲದಲ್ಲೋ ಬರುವುದಿಲ್ಲವಲ್ಲ. ಅದು ಬರುವುದಕ್ಕಿಂತ ತಿಂಗಳುಗಳ ಮೊದಲೇ ಸೂಚನೆ ಕೊಡುತ್ತದೆ. ಒಂದೆರಡೆ ಬಾರಿ ಸುರಿದು, ಅವ್ಯವಸ್ಥೆಗಳ ಕಡೆಗೆ ಬೊಟ್ಟು ಮಾಡಿ ಕೆಲವು ದಿನಗಳ ವರೆಗೆ ಕಾಯುತ್ತದೆ. ಒಂದು ರೀತಿಯಲ್ಲಿ, ಚರಂಡಿಯನ್ನು ದುರಸ್ತಿಗೊಳಿಸುವುದಕ್ಕೆ, ರಸ್ತೆಗಳನ್ನು ತೋಡುಗಳಾಗುವುದರಿಂದ ತಪ್ಪಿಸುವುದಕ್ಕೆ, ಉರುಳಿ ಬೀಳಬಹುದಾದ ಮರಗಳನ್ನು ತೆರವುಗೊಳಿಸುವುದಕ್ಕೆ ರವಾನೆಯಾಗುವ ಕೊನೆಯ ಸೂಚನೆ ಅದು. ಎಷ್ಟೋ ವಿದ್ಯುತ್ ಕಂಭಗಳು ಉರುಳಿ ಬೀಳುವುದು ಮಳೆಗಾಲದಲ್ಲೇ. ವಿದ್ಯುತ್ ತಂತಿಗಳೂ ಮಳೆಗಾಲದಲ್ಲಿ ಕಡಿದು ಬೀಳುವುದಿದೆ.  ರಸ್ತೆಗಳಂತೂ ಹೊಂಡಗಳ ರೂಪ ಪಡೆಯುತ್ತವೆ. ಇನ್ನು, ಕಾಯಿಲೆಗಳ ಬಗ್ಗೆ ಹೇಳುವಂತೆಯೇ ಇಲ್ಲ. ಡೆಂಗ್ಯೂ ಈಗಾಗಲೇ ಕೆಲವು ಜೀವಗಳನ್ನು ಬಲಿ ಪಡೆದಿದೆ. ಕಳೆದ ವರ್ಷ 3824 ಮಂದಿಯನ್ನು ಈ ಡೆಂಗ್ಯೂ ಕಾಡಿತ್ತು. ಅಲ್ಲದೆ, ಮಲೇರಿಯ ಮತ್ತಿತರ ಕಾಯಿಲೆಗಳು ಕಾಣಿಸಿಕೊಳ್ಳುವುದೂ ಈ  ಮಳೆಗಾಲದಲ್ಲೇ. ದುರಂತ ಏನೆಂದರೆ, ಮಳೆ ರವಾನಿಸುವ ಯಾವ ಸೂಚನೆಯನ್ನೂ ಗಂಭೀರವಾಗಿ ಎತ್ತಿಕೊಳ್ಳದೇ, ಅದು ಹರಿದು ಹೋಗುವಲ್ಲೆಲ್ಲಾ ಅಡೆ-ತಡೆಗಳನ್ನು ನಿರ್ಮಿಸಿ, ಕಾಯಿಲೆಗಳಿಗೆ ಪೂರಕವಾದ ಪರಿಸರವನ್ನು ಸೃಷ್ಟಿ ಮಾಡಿ, ಕೊನೆಗೆ ಮಳೆಯನ್ನೇ ನಾವು ಅಪರಾಧಿಯೆಂದು ದೂಷಿಸುತ್ತೇವೆ.
   ಈ ಭೂಮಿಯ ಮೇಲೆ ಸುರಿಯುವುದರಿಂದ ಮಳೆಗೆ ಭಾರೀ ಲಾಭ ಇದೆ ಎಂದು ಈ ವರೆಗೆ ಯಾರೂ ವಾದಿಸಿಲ್ಲ. ಯಾಕೆಂದರೆ, ಮಳೆಯ ಅಗತ್ಯ ಮನುಷ್ಯನಿಗಿದೆಯೇ ಹೊರತು ಮನುಷ್ಯನ ಅಗತ್ಯ ಮಳೆಗಲ್ಲ. ನೀರಿಲ್ಲದೇ ಮನುಷ್ಯ ಬದುಕಲಾರ. ಮಳೆ ಸುರಿದು ಭೂಮಿ ಹಸನಾಗದೇ ಬೆಳೆಗಳೂ ಉತ್ಪತ್ತಿಯಾಗವು. ಹೀಗೆ ಮಳೆಯನ್ನು ಅವಲಂಬಿಸಿಕೊಂಡ ಮನುಷ್ಯ ಮತ್ತು ಭೂಮಿ ಅಂತಿಮವಾಗಿ, ಮಳೆಯನ್ನೇ ಆರೋಪಿ ಸ್ಥಾನದಲ್ಲಿ ಕೂರಿಸುವುದಕ್ಕೆ ಏನೆನ್ನಬೇಕು? ಒಂದು ವೇಳೆ, ಹಾನಿ ಮಾಡುವುದು ಮಳೆಯ ಉದ್ದೇಶವೇ ಆಗಿದ್ದರೆ, ಅದು ಪೂರ್ಣ ವೇಗದಲ್ಲಿ ಸುರಿದರೂ ಧಾರಾಳ ಸಾಕಿತ್ತು. ಮಳೆ ಭೂಮಿಯ ಮೇಲೆ 1200 ಮೀಟರ್ ಎತ್ತರದಿಂದ ಸುರಿಯುತ್ತದೆ. ನಿಜವಾಗಿ, ಒಂದು ಮಳೆ ಬಿಂದುವಿನಷ್ಟೇ ಭಾರದ ಕಲ್ಲೋ ಅಥವಾ ಇನ್ನಾವುದಾದರೂ ವಸ್ತೋ ಅಷ್ಟೇ ಎತ್ತರದಿಂದ ಭೂಮಿಗೆ ಬೀಳುವುದಾದರೆ ಅದರ ವೇಗ ಗಂಟೆಗೆ 558 ಕಿಲೋ ಮೀಟರ್ ಆಗಿರುತ್ತದೆ. ಇಷ್ಟು ವೇಗದಿಂದ ಮಳೆ ಬಂದು ಭೂಮಿಗೆ ಬಿದ್ದರೆ ಖಂಡಿತ ಬೆಳೆಗಳು ನಾಶವಾದೀತು. ಮನುಷ್ಯರಿಗೆ ಗಂಭೀರ ಗಾಯಗಳಾದಾವು. ಮನೆಗಳಿಗೂ ಹಾನಿಯಾದೀತು. ಸುರಕ್ಷಿತ ಕ್ರಮಗಳನ್ನು ಅಳವಡಿಸಿಕೊಳ್ಳದೇ ಯಾವೊಬ್ಬ ಮನುಷ್ಯನಿಗೂ ಮನೆಯಿಂದ ಹೊರಬರಲು ಸಾಧ್ಯವಿಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದಲೇ, ಮಳೆ ಭೂಮಿಗೆ 8-10 ಕಿಲೋ ಮೀಟರ್ ವೇಗದಲ್ಲಷ್ಟೇ ಬೀಳುತ್ತದೆ. ಅದಕ್ಕೊಂದು ನಿಯಂತ್ರಣವನ್ನು ಮತ್ತು ನಿಶ್ಚಿತ ಪ್ರಮಾಣವನ್ನು ಪ್ರಕೃತಿಯೇ (ಪವಿತ್ರ ಕುರ್‍ಆನ್: 43: 11) ಅಳವಡಿಸಿಬಿಟ್ಟಿದೆ. ಈ ಕಾರಣದಿಂದಲೇ ಮಳೆ ಸುರಿದ ಕೂಡಲೇ ಒಣಗಿದ ಭೂಮಿ ಮತ್ತೆ ಜೀವ ಪಡೆಯುವುದು ಮತ್ತು ಹಚ್ಚಹಸಿರಾಗುವುದು (ಪವಿತ್ರ ಕುರ್‍ಆನ್: 22: 63, 30: 24). ಆದರೆ ನಮ್ಮ ಸ್ಥಿತಿ ಹೇಗಿದೆಯೆಂದರೆ, ಮಳೆಗಾಲ ಮುಗಿದ ಬಳಿಕ, ಮಳೆ ನೀರು ಹರಿದು ಹೋಗುವ ತೋಡು, ಚರಂಡಿಗಳನ್ನೆಲ್ಲ ಎಷ್ಟು ಸಾಧ್ಯವೋ ಅಷ್ಟು ಕೆಡಿಸಿ ಬಿಡುತ್ತೇವೆ. ಅವುಗಳನ್ನೇ ಒತ್ತುವರಿ ಮಾಡಿಕೊಂಡು ಕಟ್ಟಡ ಕಟ್ಟುತ್ತೇವೆ. ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸುಟು, ಸೊಳ್ಳೆಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುತ್ತೇವೆ. ದುರ್ಬಲ ಗುಡಿಸಲುಗಳಲ್ಲಿ ಬದುಕುವ ಬಡವರಿಗೆ ಸೂಕ್ತ ಸೂರಿನ ವ್ಯವಸ್ಥೆ ಮಾಡುವ ಹೊಣೆಗಾರಿಕೆ ಸರಕಾರದ್ದಾದರೂ ಅದು ನುಣುಚಿಕೊಳ್ಳುತ್ತದೆ. ಅಂದಹಾಗೆ, ಮರಗಳು, ವಿದ್ಯುತ್ ತಂತಿಗಳು, ರಸ್ತೆಗಳು.. ಇವೆಲ್ಲದರ ರಕ್ಷಣೆ ಯನ್ನು ಮಳೆ ವಹಿಸಿಕೊಂಡಿಲ್ಲವಲ್ಲ. ರಸ್ತೆಯನ್ನು ಸಂಚಾರಕ್ಕೆ ಯೋಗ್ಯವಾಗಿ ಮಾಡಿಡಬೇಕಾದ ಹೊಣೆಯಾದರೂ ಯಾರದ್ದು, ಮಳೆಯದ್ದೇ? ಉರುಳಿ ಬೀಳಬಹುದಾದ ಮರಗಳನ್ನು ಕತ್ತರಿಸುವ ಕೆಲಸವನ್ನು ಮಳೆಗೆ ವಹಿಸಿಕೊಡಲಾಗಿದೆಯೇ?
   ನಿಜವಾಗಿ, ಮಳೆಗಾಲದಲ್ಲಿ ಮಳೆಯ ಮೇಲೆ ಏನೆಲ್ಲ ಆರೋಪಗಳನ್ನು ಹೊರಿಸಲಾಗುತ್ತದೋ ಆ ಎಲ್ಲ ಆರೋಪಗಳ ಹಿಂದೆ ಆರೋಪಿಸುವವರದ್ದೇ  ದೊಡ್ಡ ಪಾತ್ರವಿದೆ. ತಮ್ಮ ಅಪರಾಧವನ್ನು ಮುಚ್ಚಿಡುವುದಕ್ಕಾಗಿಯೇ ಮಳೆಯನ್ನು ಅವರು ಕಟಕಟೆಯಲ್ಲಿ ನಿಲ್ಲಿಸುತ್ತಿದ್ದಾರೆ. ಒಂದು ವೇಳೆ ಮಳೆ ರವಾನಿಸುವ ಸೂಚನೆಗೆ ಅವರೆಲ್ಲ ತುಸು ಸ್ಪಂದಿಸಿರುತ್ತಿದ್ದರೂ, 'ಮಳೆಯಿಂದಾಗಿ ಹಾನಿ, ಮಳೆಯಿಂದಾಗಿ ಸಾವು..' ಎಂಬೆಲ್ಲ ಸಂದರ್ಭಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಬಹುದಿತ್ತು. ಮಳೆಯನ್ನು ಪ್ರೀತಿಯಿಂದ ಸ್ವಾಗತಿಸುವಂಥ ವಾತಾವರಣವನ್ನು ನಿರ್ಮಿಸಬಹುದಿತ್ತು. ಮಳೆಯೆಂಬುದು ಭೂಮಿಯ ಪಾಲಿಗೆ ಎರಡ್ಮೂರು ತಿಂಗಳ ಅತಿಥಿ. ಮನುಷ್ಯರ ಒಟ್ಟು ಬದುಕಿನ ವಿಧಾನವನ್ನೇ ಬದಲಿಸುವ, ರಮ್ಯ ಭಾವನೆಗಳನ್ನು ಹುಟ್ಟು ಹಾಕುವ, ಪರಿಸರವನ್ನು ಹಚ್ಚಹಸಿರಾಗಿಸುವ ಈ ಅತಿಥಿ, ಯಾವತ್ತೂ ಮನುಷ್ಯ ವಿರೋಧಿ ಆಗಿರಲು ಸಾಧ್ಯವೇ ಇಲ್ಲ. ಮಳೆಯ ಸುತ್ತ ಸಾವಿರಾರು ಕತೆ, ಕವನ, ಕಾದಂಬರಿಗಳು ನಿರ್ಮಾಣವಾಗಿವೆ. ಬಾಲ್ಯದಲ್ಲಿ ಕಾಗದದ ದೋಣಿಯನ್ನು ನೀರಿನಲ್ಲಿ ಹರಿಸಿ ಖುಷಿಪಟ್ಟವರೇ ನಾವೆಲ್ಲ. ಮಕ್ಕಳ ಪಾಲಿಗೆ ಈಗಲೂ ಕೂಡ ಮಳೆಯೆಂದರೆ ಖುಷಿಯೇ. ಅದು ಅವರ ಪಾಲಿನ ಆತ್ಮೀಯ ಅತಿಥಿ. ಆದರೆ ಮನುಷ್ಯ ಬೆಳೆಯುತ್ತಾ ಎಷ್ಟು ಬದಲಾದನೆಂದರೆ ತನ್ನೆಲ್ಲ ವೈಫಲ್ಯಗಳನ್ನು ದುರ್ಬಲರ ಮೇಲೆ ಹೊರಿಸತೊಡಗಿದ. ಆಡಳಿತದ ಮಂದಿ ಇವತ್ತು ಮಳೆಯನ್ನು ದೂರುವುದು ಈ ಆಧಾರದಲ್ಲೇ. ಒಂದು ವೇಳೆ ಮಳೆಗಾಲದಲ್ಲಿ ಸಾವಿಗೀಡಾಗುವವರು, ಕಾಯಿಲೆ ಬೀಳುವವರೆಲ್ಲ  ಮಳೆಯಂತೆ ಬಾಯಿ ಬಾರದವರು ಆಗಿರುತ್ತಿದ್ದರೆ, ಅವರನ್ನೂ ಈ ವ್ಯವಸ್ಥೆ ಆರೋಪಿ ಸ್ಥಾನದಲ್ಲಿ ಕೂರಿಸುತ್ತಿತ್ತೋ ಏನೋ? ಆದ್ದರಿಂದ ಮಳೆಯನ್ನು ದೂರುವುದಕ್ಕಿಂತ ನಮ್ಮ ನಮ್ಮ ದುರಾಸೆಯನ್ನು ದೂರೋಣ. ತಪ್ಪುಗಳನ್ನು ತಿದ್ದಿಕೊಂಡು ಸೂಕ್ತ ತಯಾರಿಯೊಂದಿಗೆ ಅತಿಥಿಯನ್ನು ಸ್ವಾಗತಿಸೋಣ.

Monday, 20 May 2013

ಮಾರ್ಗ ಮಧ್ಯೆ ಸಾವಿಗೀಡಾಗುವ ‘ಶಂಕಿತರು’?

ಖಾಲಿದ್ ಮುಜಾಹಿದ್
    ಭಯೋತ್ಪಾದಕರ ಬಗ್ಗೆ; ಅವರ ಉಡುಪು, ಅಡಗುತಾಣ, ಸಂಚುಗಳ ಕುರಿತಂತೆ ಖಾಲಿದ್ ಮುಜಾಹಿದ್ ಮತ್ತು ಲಿಯಾಕತ್ ಷಾ ಎಂಬಿಬ್ಬರು ವ್ಯಕ್ತಿಗಳು ಈ ದೇಶದ ಮುಂದೆ ಕೆಲವು ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಆದರೆ,  ಈ ಪ್ರಯತ್ನದಲ್ಲಿ ಖಾಲಿದ್ ಮೃತಪಟ್ಟು ಲಿಯಾಕತ್  ಷಾ ಸುರಕ್ಷಿತವಾಗಿ ಮನೆ ತಲುಪಿದ್ದಾನೆ. ಪ್ರಕರಣ ಎಷ್ಟು ಗಂಭೀರವಾದುದೆಂದರೆ, ಮೇ 20ರಂದು ದಿ ಹಿಂದೂ ಇವರ ಮೇಲೆ ಸಂಪಾದಕೀಯ ಬರೆದಿದೆ. ಉತ್ತರ ಪ್ರದೇಶ ಸರಕಾರವು ಖಾಲಿದ್‍ನ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿಕೊಟ್ಟಿದೆ. ಪೊಲೀಸರು ಮತ್ತು ಹಿರಿಯ ಅಧಿಕಾರಿಗಳ ಸಹಿತ 42 ಮಂದಿಯ ವಿರುದ್ಧ, ಕೊಲೆ, ಕೊಲೆ ಸಂಚುಗಳ ಆರೋಪ ಪಟ್ಟಿಯನ್ನು (FIR) ದಾಖಲಿಸಲಾಗಿದೆ.
   2007ರಲ್ಲಿ ಉತ್ತರ ಪ್ರದೇಶದ ಗೋರಖ್‍ಪುರ್, ಲಕ್ನೋ, ಫೈಝಾಬಾದ್ ಕೋರ್ಟ್ ಆವರಣದಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದಿದ್ದುವು. 2007 ಡಿಸೆಂಬರ್ 20ರಂದು ಉತ್ತರ ಪ್ರದೇಶದ ವಿಶೇಷ ಪೊಲೀಸ್ ದಳದ ಅಧಿಕಾರಿಗಳು ಖಾಲಿದ್ ಮುಜಾಹಿದ್‍ನನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿ, ಬರಬಂಕಿ ರೈಲ್ವೆ ನಿಲ್ದಾಣದ ಬಳಿ ಸ್ಫೋಟಕಗಳೊಂದಿಗೆ ಈತನನ್ನು ಬಂಧಿಸಿರುವುದಾಗಿ ಹೇಳಿಕೊಂಡಿದ್ದರು. ಆದರೆ ಖಾಲಿದ್‍ನ ಕುಟುಂಬ ಆರಂಭದಿಂದಲೂ ಇದನ್ನು ಕಟ್ಟುಕತೆ ಅಂದಿತ್ತು. ಖಾಲಿದ್ ಒಳಸಂಚಿಗೆ ಬಲಿಯಾಗಿದ್ದಾನೆ ಎಂದು ವಾದಿಸಿತ್ತು. ಆದ್ದರಿಂದಲೇ, ಮಾಯಾವತಿಯವರ ಸರಕಾರವು ಪ್ರಕರಣವನ್ನು ತನಿಖಿಸುವುದಕ್ಕಾಗಿ ನಿಮೇಶ್ ಆಯೋಗವನ್ನು ರಚಿಸಿತ್ತು. ಅದು, ಖಾಲಿದ್‍ನ ಮೇಲೆ ಹೊರಿಸಲಾಗಿರುವ ಆರೋಪಗಳು ಸುಳ್ಳಾಗಿದ್ದು, ಆತನನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ ಎಂದು ಬಲವಾಗಿ ವಾದಿಸಿತು. ಇದನ್ನನುಸರಿಸಿಯೇ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್‍ರು, ಖಾಲಿದ್‍ನನ್ನು ಆರೋಪಮುಕ್ತಗೊಳಿಸಿ ಬಿಡುಗಡೆಗೊಳಿಸುವಂತೆ ಫೈಝಾಬಾದ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ಮೇ 10ರಂದು ನ್ಯಾಯಾಲಯ ಈ ಮನವಿಯನ್ನು ತಿರಸ್ಕರಿಸಿತ್ತು. ಇದರ ವಿರುದ್ಧ ಹೈಕೋರ್ಟ್ ಮೆಟ್ಟಲೇರಲು ಸರಕಾರ ತೀರ್ಮಾನಿಸಿರುವಂತೆಯೇ, ಮೊನ್ನೆ  ಮೇ 18ರಂದು ಫೈಝಾಬಾದ್ ನ್ಯಾಯಾಲಯದಿಂದ ಲಕ್ನೋ ಜೈಲಿಗೆ ಪೊಲೀಸರ ಜೊತೆ ಸಾಗುವಾಗ ದಾರಿ ಮಧ್ಯೆ ಆತ ಮೃತಪಟ್ಟಿದ್ದಾನೆ.
   ಭಯೋತ್ಪಾದನೆಯು ಈ ದೇಶದಲ್ಲಿ ಅಸಂಖ್ಯ ಬಾರಿ ಚರ್ಚೆಗೊಳಗಾಗಿದೆ. 10 ವರ್ಷಗಳ ಹಿಂದೆ ಈ ಚರ್ಚೆಯ ಧಾಟಿ, ಆರೋಪಗಳ ಗುರಿ ಹೇಗಿತ್ತೋ ಹಾಗೆ ಇವತ್ತಿಲ್ಲ. ಅಷ್ಟಕ್ಕೂ, ಇದಕ್ಕೆ ಸ್ಫೋಟ ಪ್ರಕರಣಗಳಲ್ಲಿ ಆಗಿರುವ ವ್ಯತ್ಯಾಸ ಕಾರಣ ಅಲ್ಲ. 10 ವರ್ಷಗಳ ಹಿಂದೆ ಭಯೋತ್ಪಾದನಾ ಕೃತ್ಯಕ್ಕೆ (ನಿಜವಾಗಿ ಬಾಂಬ್ ಸ್ಫೋಟವೊಂದೇ ಭಯೋತ್ಪಾದನೆ ಅಲ್ಲ) ಯಾವೆಲ್ಲ ರಾಸಾಯನಿಕಗಳನ್ನು ಬಳಸಲಾಗುತ್ತಿತ್ತೋ ಬಹುತೇಕ ಅವುಗಳನ್ನೇ ಇವತ್ತೂ ಬಳಸಲಾಗುತ್ತಿದೆ. ಅವತ್ತೂ ಶಂಕಿತರಾಗಿ ಪ್ರದರ್ಶನಗೊಳ್ಳುತ್ತಿದ್ದುದು ಮನುಷ್ಯರೇ. ಇವತ್ತೂ ಮನುಷ್ಯರೇ. ಆದರೆ ಬರಬರುತ್ತಾ, ಬಾಂಬ್ ಸ್ಫೋಟಗಳು ಅನುಮಾನ ತರಿಸತೊಡಗಿದುವು. ಮುಸ್ಲಿಮ್ ಹೆಸರುಳ್ಳ, ಗಡ್ಡ, ಟೋಪಿ, ಪೈಜಾಮ ಧರಿಸಿದ ವ್ಯಕ್ತಿಗಳಿಗೆ ಮಾತ್ರ ಬಾಂಬ್ ಸ್ಫೋಟಿಸಲು ಸಾಧ್ಯ ಎಂದು ಬಲವಾಗಿ ನಂಬಿದ್ದ ಮುಗ್ಧ ಭಾರತೀಯರನ್ನು ಸಾಧ್ವಿಗಳು, ಪುರೋಹಿತ್‍ಗಳು ಬೆಚ್ಚಿ ಬೀಳಿಸಿದರು. ಆ ಬಳಿಕ ಭಡ್ತಿಗಾಗಿ, ಪರಮ ವೀರ ಚಕ್ರಕ್ಕಾಗಿ ಪೊಲೀಸರು ಹೇಗೆ ನಕಲಿ ಭಯೋತ್ಪಾದಕರನ್ನು ಸೃಷ್ಟಿಸುತ್ತಾರೆ ಅನ್ನುವುದು ಇಶ್ರತ್ ಜಹಾನ್ ಘಟನೆಯ ಸಹಿತ ಕೆಲವಾರು ಪ್ರಕರಣಗಳು ಮನದಟ್ಟು ಮಾಡಿದುವು. ಖಾಲಿದ್ ಮುಜಾಹಿದ್‍ನ ಸುತ್ತ ಹಬ್ಬಿರುವುದೂ ಇಂಥ ಅನುಮಾನಗಳೇ. ರಾಜ್ಯ ಸರಕಾರ ಹೈಕೋರ್ಟ್ ಮೆಟ್ಟಲೇರಿ ಆತನನ್ನು ಬಿಡುಗಡೆಗೊಳಿಸಿಕೊಂಡರೆ ಮುಂದೆ ಆತ ಪೊಲೀಸ್ ಭಯೋತ್ಪಾದನೆಗೆ  ಪ್ರಬಲ ಸಾಕ್ಷಿಯಾಗಬಹುದು ಎಂಬುದನ್ನು ಮನಗಂಡೇ ಆತನನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇಲ್ಲದಿದ್ದರೆ, ಆರೋಗ್ಯವಂಥ ಯುವಕನೊಬ್ಬ ಕೋರ್ಟು ಮತ್ತು ಜೈಲಿನ ನಡುವಿನ ಹಾದಿಯ ಮಧ್ಯೆ ಸಾವಿಗೀಡಾಗುವುದೆಂದರೇನು? ಕಳೆದ ಮಾರ್ಚ್ 20ರಂದು ನೇಪಾಳದ ಗಡಿಯಿಂದ ಲಿಯಾಕತ್ ಷಾನನ್ನು ಬಂಧಿಸಿದ ದೆಹಲಿ ಪೊಲೀಸರು ಹೇಳಿದ್ದೂ ಭಯೋತ್ಪಾದಕ ಕಥೆಯನ್ನೇ ಅಲ್ಲವೇ? ಹೋಳಿಯ ಸಂದರ್ಭದಲ್ಲಿ ರಾಜಧಾನಿಯಲ್ಲಿ ಬಾಂಬ್ ಸ್ಫೋಟಿಸಲು ಆತ ಸಂಚು ನಡೆಸಿದ್ದ ಎಂಬ ದೆಹಲಿ ಪೊಲೀಸರ ಆರೋಪ ನಿಜವೇ ಆಗಿದ್ದರೆ, ಕೇಂದ್ರ ತನಿಖಾ ತಂಡ ಆತನನ್ನು ನಿರ್ದೋಷಿ ಎಂದದ್ದೇಕೆ? ಜಾಮೀನಿನಲ್ಲಿ ಕೋರ್ಟು ಕಳೆದ ವಾರ ಬಿಡುಗಡೆಗೊಳಿಸಿದ್ದೇಕೆ? ಅಂದಹಾಗೆ, ಆತ ಕಾಶ್ಮೀರದ ಪ್ರತ್ಯೇಕತಾ ಹೋರಾಟಗಾರ ಎಂಬುದು ನಿಜ. ಕಳೆದ 15 ವರ್ಷಗಳಿಂದ ಆತ ಇದ್ದದ್ದೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ. ಆದರೆ, ಶರಣಾಗತ ಹೋರಾಟಗಾರರಿಗೆ ಕ್ಷಮೆ ಮತ್ತು ಪುನರ್ವಸತಿ ನೀಡಲಾಗುತ್ತದೆಂಬ ಕಾಶ್ಮೀರಿ ಸರಕಾರದ ವಾಗ್ದಾನವನ್ನು ನಂಬಿ, ಪತ್ನಿ-ಮಕ್ಕಳೊಂದಿಗೆ ಭಾರತಕ್ಕೆ ಬರುತ್ತಿದ್ದಾಗ ಈತನನ್ನು ಅಪಹರಿಸಿದ ದೆಹಲಿ ಪೊಲೀಸರು, ಬಳಿಕ ಸುಳ್ಳು ಕತೆ ಸೃಷ್ಟಿಸಿದ್ದರು ಎಂಬುದನ್ನಲ್ಲವೇ ಆತನ ಬಿಡುಗಡೆ ಸಾಬೀತುಪಡಿಸುತ್ತಿರುವುದು?
   ನಿಜವಾಗಿ, ಭಯೋತ್ಪಾದಕರ ಕುರಿತಂತೆ ನಡೆಸಲಾಗುವ ಸಿದ್ಧ ಮಾದರಿಯ (Stereo Typed ) ಚರ್ಚೆಗೆ ತಿರುವು ಕೊಟ್ಟ ಇತ್ತೀಚಿನ ಎರಡು ಸಂಕೇತಗಳಾಗಿ ಖಾಲಿದ್ ಮತ್ತು ಲಿಯಾಕತ್‍ರನ್ನು ಸ್ಮರಿಸಿಕೊಳ್ಳಬೇಕಾಗಿದೆ. ಒಂದು ವೇಳೆ, ಲಿಯಾಕತ್‍ನ ಪ್ರಕರಣವನ್ನು ದೆಹಲಿ ಪೊಲೀಸರ ಕೈಯಿಂದ ಕಿತ್ತು ಕೇಂದ್ರೀಯ ತನಿಖಾ ದಳಕ್ಕೆ ಕೇಂದ್ರ ಸರಕಾರವು ವಹಿಸದೇ ಇರುತ್ತಿದ್ದರೆ, ಒಂದು ದಿನ ಆತನೂ ಮಾರ್ಗ ಮಧ್ಯದಲ್ಲಿ ಸಾವಿಗೀಡಾಗುವ ಸರ್ವ ಸಾಧ್ಯತೆಯೂ ಇತ್ತು. ಇಲ್ಲದಿದ್ದರೆ, ನಾಗರಾಜ ಜಂಬಗಿ ಯಂತೆ, ಸಿದ್ದಿಕಿಯಂತೆ ಸಹಕೈದಿಗಳಿಂದ ಹಲ್ಲೆಗೀಡಾಗಿ ಜೈಲಿನಲ್ಲೇ ಕೊನೆಯುಸಿರೆಳೆಯುವುದಕ್ಕೂ ಸಾಧ್ಯವಿತ್ತು.  ಈ ಹಿನ್ನೆಲೆಯಲ್ಲಿ ಖಾಲಿದ್ ಎಂಬ ಶಂಕಿತನ ಸುತ್ತ ಹುಟ್ಟಿಕೊಂಡಿರುವ ಅನುಮಾನಗಳ ಪರದೆಯನ್ನು ಸರಿಸಲೇಬೇಕಾಗಿದೆ. ಆತನ ಸಾವು; ವ್ಯವಸ್ಥೆಯ ಭಯೋತ್ಪಾದನೆಯು ಬಹಿರಂಗಗೊಳ್ಳುವುದಕ್ಕೆ ಹೇತುವಾಗಬೇಕಾಗಿದೆ. ಶಂಕಿತ ಹಣೆಪಟ್ಟಿಯನ್ನು ಹಚ್ಚಿಕೊಂಡು ವಿಚಾರಣೆಯೂ ಇಲ್ಲದೇ ಜೈಲಿನಲ್ಲಿ ಕೊಳೆಯುತ್ತಿರುವ ಅಮಾಯಕರ ಕುರಿತಂತೆ ಗಂಭೀರ ಚರ್ಚೆಗೆ, ಅವರನ್ನು ಆಕಸ್ಮಿಕ ಸಾವಿನಿಂದ ತಡೆಯುವುದಕ್ಕೆ ಖಾಲಿದ್‍ನ ಸಾವು ಎಚ್ಚರಿಕೆಯಾಗಿ ಬಳಕೆಯಾಗಬೇಕಾಗಿದೆ. ನಿಜವಾಗಿ, ಓರ್ವ 'ಶಂಕಿತ'ನ ಸಾವು ನೂರಾರು ಶಂಕಿತರ ಮುಗ್ಧತೆಯನ್ನು ಸಾಬೀತುಪಡಿಸುವುದಕ್ಕೆ ನೆರವಾಗುವುದಾದರೆ ಮತ್ತು ಅವರನ್ನು ಶಂಕಿತಗೊಳಿಸಿದ ನಿಜವಾದ ಭಯೋತ್ಪಾದಕರ ಮುಖವನ್ನು ಈ ದೇಶಕ್ಕೆ ಪರಿಚಯಿಸುವುದಾದರೆ ಖಾಲಿದ್ ಸಾವಿನಲ್ಲೂ ಗೆದ್ದಿದ್ದಾನೆ ಎಂದೇ ಹೇಳಬೇಕು.

Monday, 13 May 2013

ಧೋನಿ, ತೆಂಡುಲ್ಕರ್‍ಗಳನ್ನು ಬೆತ್ತಲೆಗೊಳಿಸಿದ ಎಳಸು ಕ್ರಿಕೆಟಿಗ

   ಚಿಯರ್‍ ಗರ್ಲ್ಸ್ ಗಳು; ಬೌಂಡರಿ, ಸಿಕ್ಸರ್‍ಗಳು; ಧೋನಿ, ಕೋಹ್ಲಿಗಳೇ ಸುದ್ದಿ ಮಾಡುತ್ತಿರುವ ಐಪಿಎಲ್ ಕ್ರಿಕೆಟ್‍ಗೆ ಪರ್ವೇಝ್ ರಸೂಲ್ ಅನ್ನುವ ಅಪರಿಚಿತ ಯುವಕನೊಬ್ಬ ಪುಟ್ಟದೊಂದು ತಿರುವು ಕೊಟ್ಟಿದ್ದಾನೆ. ಸಮಾಜದ ಬಗ್ಗೆ ಕಳಕಳಿಯುಳ್ಳ ಯಾರಿಗೆ ಆಗಲಿ, ಈ ತಿರುವು ಬಹಳ ಮಹತ್ವಪೂರ್ಣವಾದದ್ದು. ಮುಂದಿನ ದಿನಗಳಲ್ಲಿ ಗಂಭೀರ ಚರ್ಚೆಯೊಂದರ ಹುಟ್ಟಿಗೆ ಕಾರಣವಾಗುವಷ್ಟು ಪ್ರಭಾವಶಾಲಿಯಾದದ್ದು. ಇಷ್ಟಕ್ಕೂ; ತೆಂಡುಲ್ಕರ್, ಸೆಹ್ವಾಗ್‍ರಂತೆ ಈತನೂ ಓರ್ವ ಕ್ರಿಕೆಟಿಗನೇ. ಆದರೆ, ಅವರಂತೆ ಕ್ರಿಕೆಟಿಗಾಗಿ ಮೌಲ್ಯವನ್ನು ಕೈ ಬಿಡಲು ತಾನು ಸಿದ್ಧವಿಲ್ಲ ಎಂದು ಘೋಷಿಸಿದ್ದಾನೆ. ಐಪಿಎಲ್ ಅಂಕಪಟ್ಟಿಯಲ್ಲಿ ತಳಮಟ್ಟದಲ್ಲಿರುವ ಪುಣೆ ವಾರಿಯರ್ಸ್ ತಂಡದ ಸದಸ್ಯನಾಗಿರುವ ಈತ, ‘ಮದ್ಯ ಕಂಪೆನಿಯ ಲೋಗೋ (ಚಿಹ್ನೆ) ಉಳ್ಳ ಜೆರ್ಸಿ(ಟೀಶರ್ಟ್)ಯನ್ನು ಧರಿಸಿ ಆಡಲಾರೆ, ಅದು ನನ್ನ ಧರ್ಮಕ್ಕೆ ವಿರುದ್ಧ’ ಅಂದಿದ್ದಾನೆ. ಮಾತ್ರವಲ್ಲ, ಲೋಗೋ ಗೋಚರಿಸದಂತೆ ಅದರ ಮೇಲೆ  ಪಟ್ಟಿಯನ್ನು ಅಂಟಿಸಿಯೇ ಮೈದಾನಕ್ಕೆ ಇಳಿದಿದ್ದಾನೆ. ಒಂದು ರೀತಿಯಲ್ಲಿ, ಇದು ಧೋನಿ, ಕೋಹ್ಲಿ, ತೆಂಡುಲ್ಕರ್‍ಗಳಿಗೆ ಈ ಎಳಸು ಕ್ರಿಕೆಟಿಗ ಕೊಟ್ಟ ಕಪಾಲಮೋಕ್ಷವೂ ಹೌದು.
   ಐಪಿಎಲ್‍ನ ಸುತ್ತ ಈಗಾಗಲೇ ಧಾರಾಳ ಚರ್ಚೆಗಳು ನಡೆದಿವೆ. ನವಜೋತ್ ಸಿಂಗ್ ಸಿದ್ದುರ ಮಂಗಚೇಷ್ಟೆಗಳು; ಗವಾಸ್ಕರ್, ಜಡೇಜಾರ ಗಿಲೀಟಿನ ಮಾತುಗಳು ಅತಿ ಅನ್ನಿಸುವಷ್ಟು ಟಿ.ವಿ.ಗಳಲ್ಲಿ ತುಂಬಿಕೊಂಡಿವೆ. ಆದರೆ ಇವರಾರೂ ಐಪಿಎಲ್ ಅನ್ನು ಆಳುವ ಮದ್ಯದ ಬಗ್ಗೆ, ಹರಿದಾಡುವ ದುಡ್ಡಿನ ಬಗ್ಗೆ ಈ ವರೆಗೂ ಮಾತಾಡಿಲ್ಲ. ಬಿಸಿಸಿಐಗೆ ಎದುರಾಗಿ ಐಸಿಎಲ್ ಅನ್ನು ಹುಟ್ಟು ಹಾಕಿ ಬಂಡಾಯ ಸಾರಿದ್ದ ಕಪಿಲ್ ದೇವ್‍ರಂಥ ಸ್ವಾಭಿಮಾನಿಯೇ ಇವತ್ತು ಕಾಂಚಾಣದೆದುರು ಕುಣಿಯುತ್ತಿ ದ್ದಾರೆ. ಇಂಥ ಹೊತ್ತಲ್ಲಿ ಸಚಿನ್, ಧೋನಿ, ಕೋಹ್ಲಿಗೆ ಹೋಲಿಸಿದರೆ ಏನೇನೂ ಅಲ್ಲದ, ಅವರ ಒಂದು ಶೇಕಡಾದಷ್ಟೂ 'ಬೆಲೆ' ಬಾಳದ ಯುವ ಕ್ರಿಕೆಟಿಗನೊಬ್ಬ ಕ್ರಿಕೆಟ್‍ನಲ್ಲೂ ಮೌಲ್ಯದ ಬಗ್ಗೆ ಮಾತಾಡುವುದೆಂದರೆ ಅದೇಕೆ ಸಣ್ಣ ಸಂಗತಿಯಾಗಬೇಕು? ಪುಣೆ ವಾರಿಯರ್ಸ್ ತಂಡ ರಸೂಲ್ ನನ್ನು ಖರೀದಿಸಿದ್ದು ಕೆಲವು ಲಕ್ಷಗಳಿಗೆ. ‘ಧೋನಿಗಳಿಗೆ’ ಹೋಲಿಸಿದರೆ ಈ ದುಡ್ಡು ತೀರಾ ಜುಜುಬಿ. ಅಷ್ಟಕ್ಕೂ, ಧೋನಿಯಂತೆ ರಸೂಲ್ ಪುಣೆ ವಾರಿಯರ್ಸ್ ನ  ಅನಿವಾರ್ಯ ಆಟಗಾರನೇನೂ ಅಲ್ಲ. ಆತ ಈ ವರೆಗೆ ಆಡಿದ್ದೇ ಒಂದು ಪಂದ್ಯ. (ಈವರೆಗೆ ಆಡಿಸದೇ ಇರುವುದಕ್ಕೆ ಆತನ ಮದ್ಯ ತಕರಾರು ಕಾರಣವಾಗಿರಬಹುದೇನೋ) ತಂಡದ ನಿಯಮ, ಉದ್ದೇಶ, ಒಪ್ಪಂದಗಳ ಬಗ್ಗೆ ತಕರಾರು ಎತ್ತಿ ದಕ್ಕಿಸಿಕೊಳ್ಳುವಷ್ಟು ಪ್ರಭಾವಶಾಲಿ ಆಟಗಾರನೂ ಆತನಲ್ಲ. ಆದರೂ ಆತ ತಂಡದ ಧೋರಣೆಯ ವಿರುದ್ಧ ಮಾತನಾಡಿದ್ದಾನೆಂದರೆ, ಅದನ್ನು ಅಭಿನಂದಿಸಲೇಬೇಕು. ನಿಜವಾಗಿ, ಇನ್ನೂ ಅಂತಾರಾಷ್ಟ್ರೀಯ ಮಟ್ಟದ ಪಂದ್ಯವನ್ನಾಡದ ಕ್ರಿಕೆಟಿಗನೊಬ್ಬ ಜಾಹೀರಾತುದಾರರ ವಿರುದ್ಧ ಮಾತಾಡುವುದೆಂದರೆ ಕೆರಿಯರ್‍ಗೇ ಧಕ್ಕೆ ತಂದಂತೆ. ಮದ್ಯ ಎಂಬುದು ಇವತ್ತು ಈ ದೇಶದ ಎಲ್ಲ ಕ್ಷೇತ್ರವನ್ನೂ ಆಳುವಷ್ಟು ಪ್ರಭಾವಶಾಲಿಯಾಗಿದೆ. ಬಿಸಿಸಿಐಯ ಪ್ರಮುಖ ಆದಾಯ ಮೂಲವೇ ಮದ್ಯದ ದುಡ್ಡು. ಐಪಿಎಲ್ ಅಂತೂ ಮದ್ಯದ ಜಾಹೀರಾತಿನಿಂದಲೇ ಬದುಕುತ್ತಿದೆ. ಹೀಗಿರುವಾಗ ಈಗಷ್ಟೇ ಕಣ್ಣು ಬಿಡುತ್ತಿರುವ ಕಾಶ್ಮೀರಿ ಕ್ರಿಕೆಟಿಗನೊಬ್ಬ 'ಮದ್ಯ'ದ ವಿರುದ್ಧ ಮಾತಾಡಿದರೆ ಆತ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬಲ್ಲನೇ? ಆತನ ಬೌಲಿಂಗ್ ಶೈಲಿಯನ್ನೋ ಫಾರ್ಮನ್ನೋ ನೆಪವಾಗಿಸಿ ರಾಷ್ಟ್ರೀಯ ತಂಡದಿಂದ ದೂರ ಇಡಲು ಮದ್ಯ ಕಂಪೆನಿಗಳು ಸಂಚು ನಡೆಸಲಾರವೇ?
   ನಿಜವಾಗಿ, 'ಧರ್ಮ ಮನೆಯಲ್ಲಿರಲಿ' ಎಂದು ಪ್ರತಿಪಾದಿಸುವ ಸರ್ವರನ್ನೂ ರಸೂಲ್ ತನ್ನ ನಿಲುವಿನ ಮುಖಾಂತರ ತರಾಟೆಗೆ ಎತ್ತಿಕೊಂಡಿದ್ದಾನೆ. ಸಚಿನ್, ಧೋನಿಗಳೆಲ್ಲ ತಮ್ಮ ಧರ್ಮವನ್ನು ಮನೆಯಲ್ಲಿಟ್ಟಿರುವುದರಿಂದಲೇ ಅವರಿಗೆ ಮದ್ಯವನ್ನು ಪ್ರಚಾರ ಮಾಡಲು ಸಾಧ್ಯವಾಗುತ್ತಿರುವುದು. ಅಂದಹಾಗೆ, ಇವತ್ತು ಅತ್ಯಾಚಾರ, ಭ್ರಷ್ಟಾಚಾರ, ಹಿಂಸೆ, ಮೋಸಗಳೆಲ್ಲ ನಡೆಯುತ್ತಿರುವುದಕ್ಕೆ ಧರ್ಮ ವನ್ನು ಮನೆಯಲ್ಲಿಟ್ಟಿರುವುದೇ ಕಾರಣವಲ್ಲವೇ? ಒಂದು ವೇಳೆ ರಸೂಲ್ ತನ್ನ ಧರ್ಮವನ್ನು ಮನೆಯಲ್ಲೇ ಬಿಟ್ಟು ಬರುತ್ತಿದ್ದರೆ, ಆತನಿಗೆ ಮದ್ಯದ ವಿರುದ್ಧ ಮಾತೆತ್ತಲು ಸಾಧ್ಯವಿತ್ತೇ? ಧೋನಿ, ತೆಂಡುಲ್ಕರ್‍ಗಳೆಲ್ಲ ಇವತ್ತು ಮದ್ಯದ ವಿರುದ್ಧ ಮಾತಾಡದಂಥ ಸ್ಥಿತಿಯಲ್ಲಿರುವುದು, ಅವರು 'ಧರ್ಮ' ವನ್ನು ಮನೆಯಲ್ಲಿಟ್ಟು ಬಂದುದೇ ತಾನೇ. ಧರ್ಮವನ್ನು ಮನೆಯಲ್ಲಿ ಕಳಚಿಡದೇ ತನ್ನ ಜೊತೆಗೇ ಒಯ್ದ ರಸೂಲ್ ಎಂಬ ಮರಿ ಕ್ರಿಕೆಟಿಗನನ್ನು ಅವನ ಧರ್ಮವು ಮದ್ಯದ ವಿರುದ್ಧ; ತನ್ನ ಕೆರಿಯರ್, ದುಡ್ಡು, ಭವಿಷ್ಯವನ್ನು ಲೆಕ್ಕಿಸದೆಯೇ ಮಾತಾಡುವಂತೆ ಪ್ರಚೋದಿಸುವಾಗ, ಧರ್ಮವನ್ನು ಮನೆಯಲ್ಲಿಟ್ಟು ಬಂದ ಕೋಹ್ಲಿ, ತೆಂಡುಲ್ಕರ್‍ಗಳನ್ನು ಮದ್ಯ ಬಾಯಿ ಕಟ್ಟಿಸುತ್ತದೆ. ಇವೆರಡೂ ರವಾನಿಸುವ ಸಂದೇಶವಾದರೂ ಏನು? ಧರ್ಮವನ್ನು ಜೊತೆಗೊಯ್ದ ವ್ಯಕ್ತಿ ಕೆಡುಕಿನ ವಿರುದ್ಧ ಮುಲಾಜಿಲ್ಲದೇ ಮಾತಾಡುತ್ತಾನೆ ಎಂದಲ್ಲವೇ? ಇಷ್ಟಕ್ಕೂ ಈ ಕ್ರಿಕೆಟಿಗರಿಗೆ 'ಮದ್ಯ'ದಿಂದಾಗುವ ಹಾನಿಯ ಬಗ್ಗೆ ಗೊತ್ತಿಲ್ಲ ಎಂದಲ್ಲ. ಈ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ಮದ್ಯಕ್ಕೆ ಪ್ರಮುಖ ಪಾತ್ರ ಇದೆ. ಆದರೆ, ಧರ್ಮ, ಮೌಲ್ಯಗಳನ್ನು ಕಟ್ಟಿಕೊಂಡು ತಾನೇಕೆ ದುಡ್ಡು ಕಳಕೊಳ್ಳಬೇಕು ಎಂಬ 'ಅಧರ್ಮ' ಅವರನ್ನೆಲ್ಲಾ ಕಟ್ಟಿಹಾಕುತ್ತಿದೆ. ಇಂಥ ಸಂದರ್ಭದಲ್ಲಿ ಜುಜುಬಿ ಕ್ರಿಕೆಟಿಗನೊಬ್ಬ ಧರ್ಮ ಕ್ಕಿಂತ ಕ್ರಿಕೆಟ್ ದೊಡ್ಡದಲ್ಲ ಎಂದು ಸಾರಿದ್ದು ಯಾಕೆ ಸಾರ್ವಜನಿಕ ಚರ್ಚೆಗೆ ಅಡಿಗಲ್ಲು ಹಾಕಬಾರದು? ಒಂದು ವೇಳೆ ರಸೂಲ್‍ನಂತೆ ತೆಂಡುಲ್ಕರೋ ಧೋನಿಯೋ ತಮ್ಮ ಧರ್ಮವನ್ನು ತಮ್ಮ ಜೊತೆಗೂ ಆಟದ ಮೈದಾನಕ್ಕೂ ತರುತ್ತಿದ್ದರೆ ಏನಾಗುತ್ತಿತ್ತು? ಮದ್ಯದ ವಿರುದ್ಧ ರಾಷ್ಟ್ರಮಟ್ಟದಲ್ಲೇ ಒಂದು ಚಳವಳಿ ಏರ್ಪಡುವುದಕ್ಕೆ ಕಾರಣವಾಗುತ್ತಿರಲಿಲ್ಲವೇ?
   ಪರ್ವೇಝ್ ರಸೂಲ್‍ನ ನಿಲುವು ಆತನ ಕೆರಿಯರ್‍ಗೆ ತೊಡಕಾಗುತ್ತದೋ ಇಲ್ಲವೋ, ಆದರೆ ಆತ ದುಡ್ಡಿಗಾಗಿ ಧರ್ಮವನ್ನು ಕೈಬಿಟ್ಟ ತೆಂಡುಲ್ಕರ್, ಝಹೀರ್‍ಗಳನ್ನೆಲ್ಲಾ ಸಾರ್ವಜನಿಕವಾಗಿ ಬೆತ್ತಲೆ ಗೊಳಿಸಿದ್ದಾನೆ. ಧರ್ಮವು ಜೊತೆಗಿದ್ದರೆ ಕೆಡುಕಿನ ವಿರುದ್ಧ ಮಾತಾಡುವುದಕ್ಕೆ ಧೈರ್ಯ ಬರುತ್ತದೆ ಎಂಬ ಸಂದೇಶ ರವಾನಿಸಿದ್ದಾನೆ. ಐಪಿಎಲ್‍ನಲ್ಲಿ ರನ್‍ಗಳ ರಾಶಿಯನ್ನೇ ಹರಿಸುತ್ತಿರುವ ಮತ್ತು ಟಿ.ವಿ.ಯಲ್ಲಿ ವಿದೂಷಕರಂತೆ ಆಡುತ್ತಿರುವ ಎಲ್ಲರೂ ರಸೂಲ್‍ನನ್ನು ಮಾದರಿಯಾಗಿ ಆಯ್ಕೆ ಮಾಡಬೇಕು. ಆಡಿದ ಪಂದ್ಯ ಒಂದೇ ಒಂದು ಆಗಿದ್ದರೂ ಒಂದುನೂರು ಪಂದ್ಯ ಆಡಿದವರಲ್ಲೂ ಇಲ್ಲದ ಮೌಲ್ಯವನ್ನು ಆತ ಪ್ರದರ್ಶಿಸಿದ್ದಾನೆ. ರಸೂಲ್‍ನಿಗೆ ಅಭಿನಂದನೆಗಳು.

Monday, 6 May 2013

ರಾಜಕಾರಣಿಗಳ ಎದುರು 'ಪಾಸ್' ಆಗುವ ವಿದ್ಯಾರ್ಥಿ

    ರಾಜಕಾರಣಿಗಳ ಫಲಿತಾಂಶಕ್ಕಿಂತ ಎರಡು ದಿನಗಳ ಮೊದಲೇ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ. ಆದರೆ, ಪಾಸ್ ಮತ್ತು ಫೇಲನ್ನು ಜೀವನದ ಸೋಲು ಮತ್ತು ಗೆಲುವು ಎಂದು ನಂಬುವ ಮುಗ್ಧ ವಿದ್ಯಾರ್ಥಿಗಳಿಗೂ, ಸೋಲಿನಲ್ಲೂ ಎದುರಾಳಿಯ ಕೈವಾಡವನ್ನು ಶಂಕಿಸುವ ರಾಜಕಾರಣಿಗಳಿಗೂ ದೊಡ್ಡ ವ್ಯತ್ಯಾಸವಿದೆ. ಫೇಲ್ ಆದ ವಿದ್ಯಾರ್ಥಿಗಳು ಒಂದು ವಾರಗಳ ತನಕ ತಮ್ಮ ಆಪ್ತರು, ಕುಟುಂಬಿಕರು, ಗೆಳೆಯರಿಂದ ತಪ್ಪಿಸಿಕೊಂಡು ಬದುಕುತ್ತಾರೆ. ವಿಷಾದ, ಅಪರಾಧಿ ಭಾವವೊಂದು ಅವರ ಮುಖದಲ್ಲಿ ಸದಾ ಇದ್ದಿರುತ್ತದೆ. ಕೆಲವು ವಿದ್ಯಾರ್ಥಿಗಳಂತೂ ಆತ್ಮಹತ್ಯೆಯಂಥ ಅತಿರೇಕಕ್ಕೆ ಹೋಗುವುದೂ ಇದೆ. ಇಷ್ಟಾದರೂ ಯಾವ ವಿದ್ಯಾರ್ಥಿಯೂ ತಮ್ಮ ಫೇಲ್‍ಗೆ ಸರಕಾರವನ್ನು ದೂರುವುದಿಲ್ಲ. ಸರಕಾರ ಕರೆಂಟ್ ಕೊಡದೇ ಕತ್ತಲಲ್ಲಿರಿಸಿದ್ದು ತಮ್ಮ ಪರೀಕ್ಷಾ ತಯಾರಿಗೆ ತೊಡಕಾಯಿತು ಅನ್ನುವುದಿಲ್ಲ. ಸೂಕ್ತ ಉಪನ್ಯಾಸಕರನ್ನು, ಮೂಲ ಸೌಕರ್ಯಗಳನ್ನು ಸರಕಾರ ಒದಗಿಸದಿರುವುದೇ ತಮ್ಮ ಫೇಲ್‍ಗೆ ಕಾರಣ ಅನ್ನುವುದಿಲ್ಲ. ಇಷ್ಟಕ್ಕೂ, ಎಲ್ಲ ವಿದ್ಯಾರ್ಥಿಗಳೂ ಚಿನ್ನದ ಚಮಚವನ್ನೇ ಬಾಯಲ್ಲಿಟ್ಟುಕೊಂಡು ಹುಟ್ಟುವುದಿಲ್ಲವಲ್ಲ. ವಿದ್ಯಾರ್ಥಿಯಿಂದ ವಿದ್ಯಾರ್ಥಿಗೆ ಬಡತನ, ಶ್ರೀಮಂತಿಕೆ, ಪ್ರತಿಭೆ.. ಎಲ್ಲದರಲ್ಲೂ ವ್ಯತ್ಯಾಸ ಇದ್ದೇ ಇರುತ್ತದೆ. ತನ್ನ ಕುಟುಂಬ ತೀರಾ ದಾರಿದ್ರ್ಯದಲ್ಲಿ ಬದುಕುತ್ತಿದ್ದುದರಿಂದ ಪರೀಕ್ಷೆಗೆ ತಯಾರಿ ನಡೆಸಲು ಕಷ್ಟವಾಯಿತು ಎಂದು ಓರ್ವ ವಿದ್ಯಾರ್ಥಿ ಸಮರ್ಥಿಸಿಕೊಳ್ಳುವುದಕ್ಕೆ ಖಂಡಿತ ಅವಕಾಶವಿದೆ. ರಜೆಯ ದಿನಗಳಲ್ಲಿ ಅಥವಾ ಕೆಲವೊಮ್ಮೆ ರಜೆ ಮಾಡಿಯೇ ದುಡಿಯಬೇಕಾದ ಜರೂರತ್ತು ಅನೇಕ ವಿದ್ಯಾರ್ಥಿಗಳಿಗೆ ಇರುತ್ತದಲ್ಲವೇ? ಸರಕಾರ ತಮಗೆ ಸೂಕ್ತ ವ್ಯವಸ್ಥೆ ಮಾಡಿರುತ್ತಿದ್ದರೆ 'ಫೇಲ್' ಫಲಿತಾಂಶ ಬರುತ್ತಿರಲಿಲ್ಲವೆಂದು ಅವರಿಗೆ ವಾದಿಸಬಹುದಲ್ಲವೇ? ಆದರೂ ವಿದ್ಯಾರ್ಥಿಗಳಾರೂ ಹೀಗೆ ವಾದಿಸಿದ್ದು ಎಲ್ಲೂ ನಡೆದಿಲ್ಲ. ಆದರೆ ರಾಜಕಾರಣಿ ಹಾಗಲ್ಲ. ತನ್ನ ಫೇಲ್‍ಗೆ ತನ್ನನ್ನು ಹೊರತುಪಡಿಸಿ ಇತರೆಲ್ಲರನ್ನೂ ದೂರತೊಡಗುತ್ತಾನೆ. ತನ್ನ ಅಭಿವೃದ್ಧಿ ಯೋಜನೆಗಳು ಜನರಿಗೆ ಸರಿಯಾಗಿ ಮನವರಿಕೆ ಆಗಿಲ್ಲ ಅನ್ನುತ್ತಾನೆ. ಆಡಳಿತ ವಿರೋಧಿ ಅಲೆ ಅಥವಾ ಎದುರಾಳಿಯ ಪಿತೂರಿಯಿಂದಾಗಿ ತಾನು ಸೋಲಬೇಕಾಯಿತು ಅನ್ನುತ್ತಾನೆ. ಆತ ತಲೆ ತಗ್ಗಿಸುವುದಿಲ್ಲ. ತನ್ನ ಭ್ರಷ್ಟಾಚಾರ, ಜನವಿರೋಧಿ ನಿಲುವು.. ಇವಾವುದನ್ನೂ ಆತ ಕಾರಣವಾಗಿ ಒಪ್ಪಿಕೊಳ್ಳುವುದೇ ಇಲ್ಲ. ಫೇಲ್ ಆದರೂ ಪಾಸ್ ಆದವನಂತೆ ಫೋಸ್ ಕೊಡುತ್ತಾ, ಅವರಿವರನ್ನು ದೂರುತ್ತಾ ಮುಂದಿನ ಪರೀಕ್ಷೆಗೆ ಸಿದ್ಧನಾಗುತ್ತಾನೆ. ಇಷ್ಟಕ್ಕೂ, ಚುನಾವಣೆಯಲ್ಲಿ ಫೇಲ್ ಆದ  ಯಾವ ರಾಜಕಾರಣಿಯೇ ಆಗಲಿ ಆತ್ಮಹತ್ಯೆ ಮಾಡಿಕೊಂಡದ್ದಿದೆಯೇ? ಊರು ಬಿಟ್ಟು ಹೋದದ್ದಿ ದೆಯೇ? ನಿಜವಾಗಿ, ಆತ್ಮಹತ್ಯೆ ಮಾಡಿಕೊಳ್ಳುವುದಾದರೆ ಅದಕ್ಕೆ ಅತ್ಯಂತ ಸೂಕ್ತ ವ್ಯಕ್ತಿಗಳು ರಾಜಕಾರಣಿಗಳೇ. ಯಾಕೆಂದರೆ, ಅವರು ಚುನಾವಣೆಯಲ್ಲಿ ಫೇಲ್ ಆಗುವುದಕ್ಕೆ ಸೂಕ್ತ ಸೌಲಭ್ಯಗಳ ಕೊರತೆ ಕಾರಣ ಆಗಿರುವುದಿಲ್ಲ. ಅವರಲ್ಲಿ ದುಡ್ಡೂ ಇರುತ್ತದೆ. ಶ್ರಮವನ್ನೂ ಹಾಕಿರುತ್ತಾರೆ. ಇಷ್ಟೆಲ್ಲ ಆಗಿಯೂ ಅವರು ಫೇಲ್ ಆಗುತ್ತಾರೆಂದಾದರೆ, ಅದಕ್ಕೆ ಸ್ವಯಂ ಅವರು ಕಾರಣರೇ ಹೊರತು ಇನ್ನಾರೂ ಅಲ್ಲ. ಆದರೆ ವಿದ್ಯಾರ್ಥಿಗಳು ಹಾಗಲ್ಲ. ಅವರಿಗೆ ದೂರಿಕೊಳ್ಳುವುದಕ್ಕೆ ನೂರೊಂದು ಕಾರಣಗಳಿರುತ್ತವೆ. ಹೀಗಿದ್ದೂ ರಾಜಕಾರಣಿಗಳ ಬದಲು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಮುಂದಾಗುತ್ತಾರೆಂದರೆ, ಏನೆನ್ನಬೇಕು? ನಿಜವಾಗಿ, ತಮ್ಮ ಫೇಲ್‍ಗೆ ಕಾರಣವಾಗಿರುವ 'ಇತರ'ರನ್ನು ದೂರದೇ ಎಲ್ಲ ತಪ್ಪನ್ನೂ ತಮ್ಮ ಖಾತೆಗೇ ಸೇರಿಸುವ ವಿದ್ಯಾರ್ಥಿಗಳು ರಾಜಕಾರಣಿಗಳಿಗಿಂತ ಮೇಲು ಎಂದು ಅನಿಸುವುದಿಲ್ಲವೇ?
   ದುರಂತ ಏನೆಂದರೆ, ಫಲಿತಾಂಶಗಳು ಪ್ರಕಟವಾದ ಹೊತ್ತಿನಿಂದಲೇ ವಿದ್ಯಾರ್ಥಿಗಳ ಆತ್ಮಹತ್ಯೆಯ ಸುದ್ದಿಗಳೂ ಕೇಳಿ ಬರತೊಡಗುವುದು. ಅಂದಹಾಗೆ, ಪಾಸ್ ಮತ್ತು ಫೇಲ್ ಎಂಬುದು ಎರಡು ಪದಗುಚ್ಛಗಳೇ ಹೊರತು ಅವು ಬದುಕಿನ ಸೋಲು ಮತ್ತು ಗೆಲುವು ಖಂಡಿತ ಅಲ್ಲ. ಫೇಲ್ ಅನ್ನು ಪಾಸ್ ಆಗಿಸುವುದಕ್ಕೆ ಆ ಬಳಿಕವೂ ನೂರಾರು ಅವಕಾಶಗಳಿವೆ. ಪರೀಕ್ಷೆಯಲ್ಲಿ  ಪಾಸ್ ಆಗದೆಯೂ ಬದುಕಿನಲ್ಲಿ ಪಾಸ್ ಆದವರ ಅಸಂಖ್ಯ ಘಟನೆಗಳು ನಮ್ಮ ಸುತ್ತಮುತ್ತ ಧಾರಾಳ ಇವೆ. ಬದುಕಿನ ಅತಿದೊಡ್ಡ ಸೋಲು ಯಾವುದೆಂದರೆ, ಅದು ಆತ್ಮಹತ್ಯೆ. ಯಾಕೆಂದರೆ ಆತ್ಮಹತ್ಯೆಯ ಬಳಿಕ ಬದುಕಿನಲ್ಲಿ ಪಾಸ್ ಆಗುವುದಕ್ಕೆ ಅವಕಾಶವೇ ಸಿಗುವುದಿಲ್ಲ. ಆದ್ದರಿಂದಲೇ ಪವಿತ್ರ ಕುರ್‍ಆನ್ ಆತ್ಮಹತ್ಯೆಯನ್ನು ಧರ್ಮವಿರೋಧಿ ಕೃತ್ಯ ಎಂದು ಘೋಷಿಸಿದ್ದು (4:29). ಇಷ್ಟಕ್ಕೂ ಹೆತ್ತವರು ಮಕ್ಕಳನ್ನು ಶಾಲೆಗೆ ಕಳುಹಿಸುವುದು, ಉತ್ತಮ ಫಲಿತಾಂಶಕ್ಕಾಗಿ ಒತ್ತಡ ಹಾಕುವುದೆಲ್ಲ ಅವರು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದಲ್ಲವಲ್ಲ. ತನ್ನ ಮಗು ಉತ್ತಮ ಅಂಕ ಪಡೆದು ಪಾಸ್ ಆಗಬೇಕು ಎಂದು ಎಲ್ಲ ಹೆತ್ತವರೂ ಆಸೆ ಪಡುತ್ತಾರೆ. ಅದನ್ನು ಅಪರಾಧ ಅನ್ನುವಂತಿಲ್ಲ. ಈ ದೇಶದ ಶೈಕ್ಷಣಿಕ ಪದ್ಧತಿ 'ಅಂಕ' ಆಧಾರಿತ ಆಗಿರುವಾಗ ಅವರಲ್ಲಿ ಬೇರೆ ಆಯ್ಕೆಗಳಾದರೂ ಯಾವುದಿರುತ್ತದೆ? ಆದರೆ, ಹೆತ್ತವರ ಈ ಬಯಕೆ, ಒತ್ತಡಗಳು ಮಗುವಿನ ಪುಟ್ಟ ಮೆದುಳು ಸಹಿಸಿಕೊಳ್ಳಲಾರದಷ್ಟು ಅತಿ ಆಗಬಾರದು. ಮಗುವಿನ ಸಾಮರ್ಥ್ಯ  ಏನು ಎಂಬುದನ್ನು ಅಧ್ಯಾಪಕರಲ್ಲಿ ಚರ್ಚಿಸಿ ಹೆತ್ತವರು ದೃಢಪಡಿಸಿಕೊಳ್ಳಬೇಕು. ಮುಖ್ಯವಾಗಿ, ಮಕ್ಕಳಲ್ಲಿ ಸುರಕ್ಷಿತತೆಯ ಭಾವವನ್ನು ಮೂಡಿಸುವುದು ಬಹಳ ಮುಖ್ಯ. ತಾನು ಹೆತ್ತವರ ನಿರೀಕ್ಷೆಯನ್ನು ಮುಟ್ಟದಿದ್ದರೂ ಅವರು ತನ್ನನ್ನು ಪ್ರೀತಿಸುತ್ತಾರೆ ಎಂಬ ನಂಬುಗೆ ಪ್ರತಿ ಮಗುವಿನಲ್ಲೂ ಹುಟ್ಟಿಸಬೇಕಾದದ್ದು ಎಲ್ಲ ಹೆತ್ತವರ ಜವಾಬ್ದಾರಿಯಾಗಿದೆ. ಯಾಕೆಂದರೆ, ಇವತ್ತಿನ ದಿನಗಳಲ್ಲಿ ಮಕ್ಕಳು ಹಲವು ಮೂಲಗಳಿಂದ ಪ್ರಭಾವಿತರಾಗಿರುತ್ತಾರೆ. ಅವರನ್ನು ಟಿ.ವಿ., ಇಂಟರ್‍ನೆಟ್ ಸಹಿತ ವಿವಿಧ ಮಾಧ್ಯಮಗಳು ಸುತ್ತುವರಿದಿರುತ್ತವೆ. ಅಲ್ಲಿಯ ಸಿಟ್ಟು, ಜಗಳ, ಕೊಲೆ, ಆತ್ಮ ಹತ್ಯೆಗಳೆಲ್ಲ ಒಂದು ಹಂತದವರೆಗೆ ಮಕ್ಕಳನ್ನೂ ಕಾಡಿರುತ್ತವೆ. ಇಂಥ ಸ್ಥಿತಿಯಲ್ಲಿ ಮಕ್ಕಳು ಅತಿರೇಕದ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಈ ಹಿಂದಿಗಿಂತಲೂ ಇವತ್ತು ಹೆಚ್ಚಿದೆ. ಆದ್ದರಿಂದ ಹೆತ್ತವರು ಮಕ್ಕಳನ್ನು 'ಅಂಕ'ಗಳ ಜಗತ್ತಿಗೆ ಸಿದ್ಧಪಡಿಸುವಾಗ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಮನೆಯ ಬಾಗಿಲು ಪಾಸ್ ಮತ್ತು ಫೇಲ್ ಆದ ಇಬ್ಬರಿಗೂ ಒಂದೇ ಬಗೆಯಲ್ಲಿ ತೆರೆದುಕೊಳ್ಳುತ್ತದೆ ಎಂಬ ಧೈರ್ಯವನ್ನು ಮಕ್ಕಳಿಗೆ ರವಾನಿಸಬೇಕು. ಫೇಲ್ ಆಗುವುದು ಯಾವ ರೀತಿಯಲ್ಲೂ ಅವಮಾನಕಾರಿಯಲ್ಲ ಎಂಬ ಸಂದೇಶವನ್ನು ಎಲ್ಲ ಮಕ್ಕಳಿಗೂ ಹೆತ್ತವರು ಮತ್ತು ಅಧ್ಯಾಪಕರು ನೀಡುತ್ತಿರಬೇಕು. ಫೇಲ್‍ಗೆ ಆತ್ಮಹತ್ಯೆ ಉತ್ತರವಲ್ಲ ಎಂಬ ಸ್ಲೋಗನ್ನು ಎಲ್ಲ ಶಾಲೆ ಮತ್ತು ಮನೆಗಳ ಧ್ಯೇಯ ವಾಕ್ಯ ಆಗಬೇಕು. ಇಲ್ಲದಿದ್ದರೆ, ನಾವು ಕೊಲೆಗಾರರಾಗುತ್ತೇವೆ.