Monday, 6 May 2013

ರಾಜಕಾರಣಿಗಳ ಎದುರು 'ಪಾಸ್' ಆಗುವ ವಿದ್ಯಾರ್ಥಿ

    ರಾಜಕಾರಣಿಗಳ ಫಲಿತಾಂಶಕ್ಕಿಂತ ಎರಡು ದಿನಗಳ ಮೊದಲೇ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ. ಆದರೆ, ಪಾಸ್ ಮತ್ತು ಫೇಲನ್ನು ಜೀವನದ ಸೋಲು ಮತ್ತು ಗೆಲುವು ಎಂದು ನಂಬುವ ಮುಗ್ಧ ವಿದ್ಯಾರ್ಥಿಗಳಿಗೂ, ಸೋಲಿನಲ್ಲೂ ಎದುರಾಳಿಯ ಕೈವಾಡವನ್ನು ಶಂಕಿಸುವ ರಾಜಕಾರಣಿಗಳಿಗೂ ದೊಡ್ಡ ವ್ಯತ್ಯಾಸವಿದೆ. ಫೇಲ್ ಆದ ವಿದ್ಯಾರ್ಥಿಗಳು ಒಂದು ವಾರಗಳ ತನಕ ತಮ್ಮ ಆಪ್ತರು, ಕುಟುಂಬಿಕರು, ಗೆಳೆಯರಿಂದ ತಪ್ಪಿಸಿಕೊಂಡು ಬದುಕುತ್ತಾರೆ. ವಿಷಾದ, ಅಪರಾಧಿ ಭಾವವೊಂದು ಅವರ ಮುಖದಲ್ಲಿ ಸದಾ ಇದ್ದಿರುತ್ತದೆ. ಕೆಲವು ವಿದ್ಯಾರ್ಥಿಗಳಂತೂ ಆತ್ಮಹತ್ಯೆಯಂಥ ಅತಿರೇಕಕ್ಕೆ ಹೋಗುವುದೂ ಇದೆ. ಇಷ್ಟಾದರೂ ಯಾವ ವಿದ್ಯಾರ್ಥಿಯೂ ತಮ್ಮ ಫೇಲ್‍ಗೆ ಸರಕಾರವನ್ನು ದೂರುವುದಿಲ್ಲ. ಸರಕಾರ ಕರೆಂಟ್ ಕೊಡದೇ ಕತ್ತಲಲ್ಲಿರಿಸಿದ್ದು ತಮ್ಮ ಪರೀಕ್ಷಾ ತಯಾರಿಗೆ ತೊಡಕಾಯಿತು ಅನ್ನುವುದಿಲ್ಲ. ಸೂಕ್ತ ಉಪನ್ಯಾಸಕರನ್ನು, ಮೂಲ ಸೌಕರ್ಯಗಳನ್ನು ಸರಕಾರ ಒದಗಿಸದಿರುವುದೇ ತಮ್ಮ ಫೇಲ್‍ಗೆ ಕಾರಣ ಅನ್ನುವುದಿಲ್ಲ. ಇಷ್ಟಕ್ಕೂ, ಎಲ್ಲ ವಿದ್ಯಾರ್ಥಿಗಳೂ ಚಿನ್ನದ ಚಮಚವನ್ನೇ ಬಾಯಲ್ಲಿಟ್ಟುಕೊಂಡು ಹುಟ್ಟುವುದಿಲ್ಲವಲ್ಲ. ವಿದ್ಯಾರ್ಥಿಯಿಂದ ವಿದ್ಯಾರ್ಥಿಗೆ ಬಡತನ, ಶ್ರೀಮಂತಿಕೆ, ಪ್ರತಿಭೆ.. ಎಲ್ಲದರಲ್ಲೂ ವ್ಯತ್ಯಾಸ ಇದ್ದೇ ಇರುತ್ತದೆ. ತನ್ನ ಕುಟುಂಬ ತೀರಾ ದಾರಿದ್ರ್ಯದಲ್ಲಿ ಬದುಕುತ್ತಿದ್ದುದರಿಂದ ಪರೀಕ್ಷೆಗೆ ತಯಾರಿ ನಡೆಸಲು ಕಷ್ಟವಾಯಿತು ಎಂದು ಓರ್ವ ವಿದ್ಯಾರ್ಥಿ ಸಮರ್ಥಿಸಿಕೊಳ್ಳುವುದಕ್ಕೆ ಖಂಡಿತ ಅವಕಾಶವಿದೆ. ರಜೆಯ ದಿನಗಳಲ್ಲಿ ಅಥವಾ ಕೆಲವೊಮ್ಮೆ ರಜೆ ಮಾಡಿಯೇ ದುಡಿಯಬೇಕಾದ ಜರೂರತ್ತು ಅನೇಕ ವಿದ್ಯಾರ್ಥಿಗಳಿಗೆ ಇರುತ್ತದಲ್ಲವೇ? ಸರಕಾರ ತಮಗೆ ಸೂಕ್ತ ವ್ಯವಸ್ಥೆ ಮಾಡಿರುತ್ತಿದ್ದರೆ 'ಫೇಲ್' ಫಲಿತಾಂಶ ಬರುತ್ತಿರಲಿಲ್ಲವೆಂದು ಅವರಿಗೆ ವಾದಿಸಬಹುದಲ್ಲವೇ? ಆದರೂ ವಿದ್ಯಾರ್ಥಿಗಳಾರೂ ಹೀಗೆ ವಾದಿಸಿದ್ದು ಎಲ್ಲೂ ನಡೆದಿಲ್ಲ. ಆದರೆ ರಾಜಕಾರಣಿ ಹಾಗಲ್ಲ. ತನ್ನ ಫೇಲ್‍ಗೆ ತನ್ನನ್ನು ಹೊರತುಪಡಿಸಿ ಇತರೆಲ್ಲರನ್ನೂ ದೂರತೊಡಗುತ್ತಾನೆ. ತನ್ನ ಅಭಿವೃದ್ಧಿ ಯೋಜನೆಗಳು ಜನರಿಗೆ ಸರಿಯಾಗಿ ಮನವರಿಕೆ ಆಗಿಲ್ಲ ಅನ್ನುತ್ತಾನೆ. ಆಡಳಿತ ವಿರೋಧಿ ಅಲೆ ಅಥವಾ ಎದುರಾಳಿಯ ಪಿತೂರಿಯಿಂದಾಗಿ ತಾನು ಸೋಲಬೇಕಾಯಿತು ಅನ್ನುತ್ತಾನೆ. ಆತ ತಲೆ ತಗ್ಗಿಸುವುದಿಲ್ಲ. ತನ್ನ ಭ್ರಷ್ಟಾಚಾರ, ಜನವಿರೋಧಿ ನಿಲುವು.. ಇವಾವುದನ್ನೂ ಆತ ಕಾರಣವಾಗಿ ಒಪ್ಪಿಕೊಳ್ಳುವುದೇ ಇಲ್ಲ. ಫೇಲ್ ಆದರೂ ಪಾಸ್ ಆದವನಂತೆ ಫೋಸ್ ಕೊಡುತ್ತಾ, ಅವರಿವರನ್ನು ದೂರುತ್ತಾ ಮುಂದಿನ ಪರೀಕ್ಷೆಗೆ ಸಿದ್ಧನಾಗುತ್ತಾನೆ. ಇಷ್ಟಕ್ಕೂ, ಚುನಾವಣೆಯಲ್ಲಿ ಫೇಲ್ ಆದ  ಯಾವ ರಾಜಕಾರಣಿಯೇ ಆಗಲಿ ಆತ್ಮಹತ್ಯೆ ಮಾಡಿಕೊಂಡದ್ದಿದೆಯೇ? ಊರು ಬಿಟ್ಟು ಹೋದದ್ದಿ ದೆಯೇ? ನಿಜವಾಗಿ, ಆತ್ಮಹತ್ಯೆ ಮಾಡಿಕೊಳ್ಳುವುದಾದರೆ ಅದಕ್ಕೆ ಅತ್ಯಂತ ಸೂಕ್ತ ವ್ಯಕ್ತಿಗಳು ರಾಜಕಾರಣಿಗಳೇ. ಯಾಕೆಂದರೆ, ಅವರು ಚುನಾವಣೆಯಲ್ಲಿ ಫೇಲ್ ಆಗುವುದಕ್ಕೆ ಸೂಕ್ತ ಸೌಲಭ್ಯಗಳ ಕೊರತೆ ಕಾರಣ ಆಗಿರುವುದಿಲ್ಲ. ಅವರಲ್ಲಿ ದುಡ್ಡೂ ಇರುತ್ತದೆ. ಶ್ರಮವನ್ನೂ ಹಾಕಿರುತ್ತಾರೆ. ಇಷ್ಟೆಲ್ಲ ಆಗಿಯೂ ಅವರು ಫೇಲ್ ಆಗುತ್ತಾರೆಂದಾದರೆ, ಅದಕ್ಕೆ ಸ್ವಯಂ ಅವರು ಕಾರಣರೇ ಹೊರತು ಇನ್ನಾರೂ ಅಲ್ಲ. ಆದರೆ ವಿದ್ಯಾರ್ಥಿಗಳು ಹಾಗಲ್ಲ. ಅವರಿಗೆ ದೂರಿಕೊಳ್ಳುವುದಕ್ಕೆ ನೂರೊಂದು ಕಾರಣಗಳಿರುತ್ತವೆ. ಹೀಗಿದ್ದೂ ರಾಜಕಾರಣಿಗಳ ಬದಲು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಮುಂದಾಗುತ್ತಾರೆಂದರೆ, ಏನೆನ್ನಬೇಕು? ನಿಜವಾಗಿ, ತಮ್ಮ ಫೇಲ್‍ಗೆ ಕಾರಣವಾಗಿರುವ 'ಇತರ'ರನ್ನು ದೂರದೇ ಎಲ್ಲ ತಪ್ಪನ್ನೂ ತಮ್ಮ ಖಾತೆಗೇ ಸೇರಿಸುವ ವಿದ್ಯಾರ್ಥಿಗಳು ರಾಜಕಾರಣಿಗಳಿಗಿಂತ ಮೇಲು ಎಂದು ಅನಿಸುವುದಿಲ್ಲವೇ?
   ದುರಂತ ಏನೆಂದರೆ, ಫಲಿತಾಂಶಗಳು ಪ್ರಕಟವಾದ ಹೊತ್ತಿನಿಂದಲೇ ವಿದ್ಯಾರ್ಥಿಗಳ ಆತ್ಮಹತ್ಯೆಯ ಸುದ್ದಿಗಳೂ ಕೇಳಿ ಬರತೊಡಗುವುದು. ಅಂದಹಾಗೆ, ಪಾಸ್ ಮತ್ತು ಫೇಲ್ ಎಂಬುದು ಎರಡು ಪದಗುಚ್ಛಗಳೇ ಹೊರತು ಅವು ಬದುಕಿನ ಸೋಲು ಮತ್ತು ಗೆಲುವು ಖಂಡಿತ ಅಲ್ಲ. ಫೇಲ್ ಅನ್ನು ಪಾಸ್ ಆಗಿಸುವುದಕ್ಕೆ ಆ ಬಳಿಕವೂ ನೂರಾರು ಅವಕಾಶಗಳಿವೆ. ಪರೀಕ್ಷೆಯಲ್ಲಿ  ಪಾಸ್ ಆಗದೆಯೂ ಬದುಕಿನಲ್ಲಿ ಪಾಸ್ ಆದವರ ಅಸಂಖ್ಯ ಘಟನೆಗಳು ನಮ್ಮ ಸುತ್ತಮುತ್ತ ಧಾರಾಳ ಇವೆ. ಬದುಕಿನ ಅತಿದೊಡ್ಡ ಸೋಲು ಯಾವುದೆಂದರೆ, ಅದು ಆತ್ಮಹತ್ಯೆ. ಯಾಕೆಂದರೆ ಆತ್ಮಹತ್ಯೆಯ ಬಳಿಕ ಬದುಕಿನಲ್ಲಿ ಪಾಸ್ ಆಗುವುದಕ್ಕೆ ಅವಕಾಶವೇ ಸಿಗುವುದಿಲ್ಲ. ಆದ್ದರಿಂದಲೇ ಪವಿತ್ರ ಕುರ್‍ಆನ್ ಆತ್ಮಹತ್ಯೆಯನ್ನು ಧರ್ಮವಿರೋಧಿ ಕೃತ್ಯ ಎಂದು ಘೋಷಿಸಿದ್ದು (4:29). ಇಷ್ಟಕ್ಕೂ ಹೆತ್ತವರು ಮಕ್ಕಳನ್ನು ಶಾಲೆಗೆ ಕಳುಹಿಸುವುದು, ಉತ್ತಮ ಫಲಿತಾಂಶಕ್ಕಾಗಿ ಒತ್ತಡ ಹಾಕುವುದೆಲ್ಲ ಅವರು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದಲ್ಲವಲ್ಲ. ತನ್ನ ಮಗು ಉತ್ತಮ ಅಂಕ ಪಡೆದು ಪಾಸ್ ಆಗಬೇಕು ಎಂದು ಎಲ್ಲ ಹೆತ್ತವರೂ ಆಸೆ ಪಡುತ್ತಾರೆ. ಅದನ್ನು ಅಪರಾಧ ಅನ್ನುವಂತಿಲ್ಲ. ಈ ದೇಶದ ಶೈಕ್ಷಣಿಕ ಪದ್ಧತಿ 'ಅಂಕ' ಆಧಾರಿತ ಆಗಿರುವಾಗ ಅವರಲ್ಲಿ ಬೇರೆ ಆಯ್ಕೆಗಳಾದರೂ ಯಾವುದಿರುತ್ತದೆ? ಆದರೆ, ಹೆತ್ತವರ ಈ ಬಯಕೆ, ಒತ್ತಡಗಳು ಮಗುವಿನ ಪುಟ್ಟ ಮೆದುಳು ಸಹಿಸಿಕೊಳ್ಳಲಾರದಷ್ಟು ಅತಿ ಆಗಬಾರದು. ಮಗುವಿನ ಸಾಮರ್ಥ್ಯ  ಏನು ಎಂಬುದನ್ನು ಅಧ್ಯಾಪಕರಲ್ಲಿ ಚರ್ಚಿಸಿ ಹೆತ್ತವರು ದೃಢಪಡಿಸಿಕೊಳ್ಳಬೇಕು. ಮುಖ್ಯವಾಗಿ, ಮಕ್ಕಳಲ್ಲಿ ಸುರಕ್ಷಿತತೆಯ ಭಾವವನ್ನು ಮೂಡಿಸುವುದು ಬಹಳ ಮುಖ್ಯ. ತಾನು ಹೆತ್ತವರ ನಿರೀಕ್ಷೆಯನ್ನು ಮುಟ್ಟದಿದ್ದರೂ ಅವರು ತನ್ನನ್ನು ಪ್ರೀತಿಸುತ್ತಾರೆ ಎಂಬ ನಂಬುಗೆ ಪ್ರತಿ ಮಗುವಿನಲ್ಲೂ ಹುಟ್ಟಿಸಬೇಕಾದದ್ದು ಎಲ್ಲ ಹೆತ್ತವರ ಜವಾಬ್ದಾರಿಯಾಗಿದೆ. ಯಾಕೆಂದರೆ, ಇವತ್ತಿನ ದಿನಗಳಲ್ಲಿ ಮಕ್ಕಳು ಹಲವು ಮೂಲಗಳಿಂದ ಪ್ರಭಾವಿತರಾಗಿರುತ್ತಾರೆ. ಅವರನ್ನು ಟಿ.ವಿ., ಇಂಟರ್‍ನೆಟ್ ಸಹಿತ ವಿವಿಧ ಮಾಧ್ಯಮಗಳು ಸುತ್ತುವರಿದಿರುತ್ತವೆ. ಅಲ್ಲಿಯ ಸಿಟ್ಟು, ಜಗಳ, ಕೊಲೆ, ಆತ್ಮ ಹತ್ಯೆಗಳೆಲ್ಲ ಒಂದು ಹಂತದವರೆಗೆ ಮಕ್ಕಳನ್ನೂ ಕಾಡಿರುತ್ತವೆ. ಇಂಥ ಸ್ಥಿತಿಯಲ್ಲಿ ಮಕ್ಕಳು ಅತಿರೇಕದ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಈ ಹಿಂದಿಗಿಂತಲೂ ಇವತ್ತು ಹೆಚ್ಚಿದೆ. ಆದ್ದರಿಂದ ಹೆತ್ತವರು ಮಕ್ಕಳನ್ನು 'ಅಂಕ'ಗಳ ಜಗತ್ತಿಗೆ ಸಿದ್ಧಪಡಿಸುವಾಗ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಮನೆಯ ಬಾಗಿಲು ಪಾಸ್ ಮತ್ತು ಫೇಲ್ ಆದ ಇಬ್ಬರಿಗೂ ಒಂದೇ ಬಗೆಯಲ್ಲಿ ತೆರೆದುಕೊಳ್ಳುತ್ತದೆ ಎಂಬ ಧೈರ್ಯವನ್ನು ಮಕ್ಕಳಿಗೆ ರವಾನಿಸಬೇಕು. ಫೇಲ್ ಆಗುವುದು ಯಾವ ರೀತಿಯಲ್ಲೂ ಅವಮಾನಕಾರಿಯಲ್ಲ ಎಂಬ ಸಂದೇಶವನ್ನು ಎಲ್ಲ ಮಕ್ಕಳಿಗೂ ಹೆತ್ತವರು ಮತ್ತು ಅಧ್ಯಾಪಕರು ನೀಡುತ್ತಿರಬೇಕು. ಫೇಲ್‍ಗೆ ಆತ್ಮಹತ್ಯೆ ಉತ್ತರವಲ್ಲ ಎಂಬ ಸ್ಲೋಗನ್ನು ಎಲ್ಲ ಶಾಲೆ ಮತ್ತು ಮನೆಗಳ ಧ್ಯೇಯ ವಾಕ್ಯ ಆಗಬೇಕು. ಇಲ್ಲದಿದ್ದರೆ, ನಾವು ಕೊಲೆಗಾರರಾಗುತ್ತೇವೆ.

No comments:

Post a Comment