Tuesday, 28 May 2013

ನಮ್ಮ ವೈಫಲ್ಯಗಳನ್ನು ಅಡಗಿಸುವುದಕ್ಕಾಗಿ ಅತಿಥಿಯನ್ನು ದೂರದಿರೋಣ

   ಬಾಯಿ ಬಾರದ, ದಾವೆ ಹೂಡುವ ಸಾಮರ್ಥ್ಯವೂ ಇಲ್ಲದ ಮಳೆಯ ಮೇಲೆ ಆರೋಪಗಳನ್ನು ಹೊರಿಸಿ, ತಮ್ಮೆಲ್ಲ ವೈಫಲ್ಯಗಳಿಂದ ನುಣುಚಿಕೊಳ್ಳಲು ವ್ಯವಸ್ಥೆ ಸಜ್ಜಾಗುತ್ತಿರುವಂತೆ ಕಾಣುತ್ತಿದೆ. ‘ಮಳೆಗೆ, ಚಳಿಗೆ ಮತ್ತು ಬಿಸಿಲಿಗೆ ಇಂತಿಷ್ಟು ಮಂದಿ ಸಾವಿಗೀಡಾದರು’ ಎಂಬ ಪದವನ್ನು ನಾವು ಈಗಾಗಲೇ ಸಂಶೋಧಿಸಿ ಇಟ್ಟಿದ್ದೇವೆ. ಇಂಥ ಪದಗಳನ್ನು ಅತ್ಯಂತ ಹೆಚ್ಚು ಬಳಕೆ ಮಾಡುವುದು ವ್ಯವಸ್ಥೆ. ಜನರು ನೀರಿನಲ್ಲಿ ಕೊಚ್ಚಿ ಹೋದರೆ, ಗುಡಿಸಲು ಕುಸಿದು ಬಿದ್ದರೆ ಇಲ್ಲವೇ ಒಂದು ಪ್ರದೇಶವೇ ನೀರಿನಿಂದ ಆವೃತ್ತವಾದರೆ ತಕ್ಷಣ ಸಚಿವರು ಮಳೆಯನ್ನು ಅಪರಾಧಿಯೆಂದು ಘೋಷಿಸುತ್ತಾರೆ. ಅಷ್ಟಕ್ಕೂ, ಮಳೆಯೇನೂ ಸರದಿ ತಪ್ಪಿಸಿ ಸೆಖೆಗಾಲದಲ್ಲೋ ಚಳಿಗಾಲದಲ್ಲೋ ಬರುವುದಿಲ್ಲವಲ್ಲ. ಅದು ಬರುವುದಕ್ಕಿಂತ ತಿಂಗಳುಗಳ ಮೊದಲೇ ಸೂಚನೆ ಕೊಡುತ್ತದೆ. ಒಂದೆರಡೆ ಬಾರಿ ಸುರಿದು, ಅವ್ಯವಸ್ಥೆಗಳ ಕಡೆಗೆ ಬೊಟ್ಟು ಮಾಡಿ ಕೆಲವು ದಿನಗಳ ವರೆಗೆ ಕಾಯುತ್ತದೆ. ಒಂದು ರೀತಿಯಲ್ಲಿ, ಚರಂಡಿಯನ್ನು ದುರಸ್ತಿಗೊಳಿಸುವುದಕ್ಕೆ, ರಸ್ತೆಗಳನ್ನು ತೋಡುಗಳಾಗುವುದರಿಂದ ತಪ್ಪಿಸುವುದಕ್ಕೆ, ಉರುಳಿ ಬೀಳಬಹುದಾದ ಮರಗಳನ್ನು ತೆರವುಗೊಳಿಸುವುದಕ್ಕೆ ರವಾನೆಯಾಗುವ ಕೊನೆಯ ಸೂಚನೆ ಅದು. ಎಷ್ಟೋ ವಿದ್ಯುತ್ ಕಂಭಗಳು ಉರುಳಿ ಬೀಳುವುದು ಮಳೆಗಾಲದಲ್ಲೇ. ವಿದ್ಯುತ್ ತಂತಿಗಳೂ ಮಳೆಗಾಲದಲ್ಲಿ ಕಡಿದು ಬೀಳುವುದಿದೆ.  ರಸ್ತೆಗಳಂತೂ ಹೊಂಡಗಳ ರೂಪ ಪಡೆಯುತ್ತವೆ. ಇನ್ನು, ಕಾಯಿಲೆಗಳ ಬಗ್ಗೆ ಹೇಳುವಂತೆಯೇ ಇಲ್ಲ. ಡೆಂಗ್ಯೂ ಈಗಾಗಲೇ ಕೆಲವು ಜೀವಗಳನ್ನು ಬಲಿ ಪಡೆದಿದೆ. ಕಳೆದ ವರ್ಷ 3824 ಮಂದಿಯನ್ನು ಈ ಡೆಂಗ್ಯೂ ಕಾಡಿತ್ತು. ಅಲ್ಲದೆ, ಮಲೇರಿಯ ಮತ್ತಿತರ ಕಾಯಿಲೆಗಳು ಕಾಣಿಸಿಕೊಳ್ಳುವುದೂ ಈ  ಮಳೆಗಾಲದಲ್ಲೇ. ದುರಂತ ಏನೆಂದರೆ, ಮಳೆ ರವಾನಿಸುವ ಯಾವ ಸೂಚನೆಯನ್ನೂ ಗಂಭೀರವಾಗಿ ಎತ್ತಿಕೊಳ್ಳದೇ, ಅದು ಹರಿದು ಹೋಗುವಲ್ಲೆಲ್ಲಾ ಅಡೆ-ತಡೆಗಳನ್ನು ನಿರ್ಮಿಸಿ, ಕಾಯಿಲೆಗಳಿಗೆ ಪೂರಕವಾದ ಪರಿಸರವನ್ನು ಸೃಷ್ಟಿ ಮಾಡಿ, ಕೊನೆಗೆ ಮಳೆಯನ್ನೇ ನಾವು ಅಪರಾಧಿಯೆಂದು ದೂಷಿಸುತ್ತೇವೆ.
   ಈ ಭೂಮಿಯ ಮೇಲೆ ಸುರಿಯುವುದರಿಂದ ಮಳೆಗೆ ಭಾರೀ ಲಾಭ ಇದೆ ಎಂದು ಈ ವರೆಗೆ ಯಾರೂ ವಾದಿಸಿಲ್ಲ. ಯಾಕೆಂದರೆ, ಮಳೆಯ ಅಗತ್ಯ ಮನುಷ್ಯನಿಗಿದೆಯೇ ಹೊರತು ಮನುಷ್ಯನ ಅಗತ್ಯ ಮಳೆಗಲ್ಲ. ನೀರಿಲ್ಲದೇ ಮನುಷ್ಯ ಬದುಕಲಾರ. ಮಳೆ ಸುರಿದು ಭೂಮಿ ಹಸನಾಗದೇ ಬೆಳೆಗಳೂ ಉತ್ಪತ್ತಿಯಾಗವು. ಹೀಗೆ ಮಳೆಯನ್ನು ಅವಲಂಬಿಸಿಕೊಂಡ ಮನುಷ್ಯ ಮತ್ತು ಭೂಮಿ ಅಂತಿಮವಾಗಿ, ಮಳೆಯನ್ನೇ ಆರೋಪಿ ಸ್ಥಾನದಲ್ಲಿ ಕೂರಿಸುವುದಕ್ಕೆ ಏನೆನ್ನಬೇಕು? ಒಂದು ವೇಳೆ, ಹಾನಿ ಮಾಡುವುದು ಮಳೆಯ ಉದ್ದೇಶವೇ ಆಗಿದ್ದರೆ, ಅದು ಪೂರ್ಣ ವೇಗದಲ್ಲಿ ಸುರಿದರೂ ಧಾರಾಳ ಸಾಕಿತ್ತು. ಮಳೆ ಭೂಮಿಯ ಮೇಲೆ 1200 ಮೀಟರ್ ಎತ್ತರದಿಂದ ಸುರಿಯುತ್ತದೆ. ನಿಜವಾಗಿ, ಒಂದು ಮಳೆ ಬಿಂದುವಿನಷ್ಟೇ ಭಾರದ ಕಲ್ಲೋ ಅಥವಾ ಇನ್ನಾವುದಾದರೂ ವಸ್ತೋ ಅಷ್ಟೇ ಎತ್ತರದಿಂದ ಭೂಮಿಗೆ ಬೀಳುವುದಾದರೆ ಅದರ ವೇಗ ಗಂಟೆಗೆ 558 ಕಿಲೋ ಮೀಟರ್ ಆಗಿರುತ್ತದೆ. ಇಷ್ಟು ವೇಗದಿಂದ ಮಳೆ ಬಂದು ಭೂಮಿಗೆ ಬಿದ್ದರೆ ಖಂಡಿತ ಬೆಳೆಗಳು ನಾಶವಾದೀತು. ಮನುಷ್ಯರಿಗೆ ಗಂಭೀರ ಗಾಯಗಳಾದಾವು. ಮನೆಗಳಿಗೂ ಹಾನಿಯಾದೀತು. ಸುರಕ್ಷಿತ ಕ್ರಮಗಳನ್ನು ಅಳವಡಿಸಿಕೊಳ್ಳದೇ ಯಾವೊಬ್ಬ ಮನುಷ್ಯನಿಗೂ ಮನೆಯಿಂದ ಹೊರಬರಲು ಸಾಧ್ಯವಿಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದಲೇ, ಮಳೆ ಭೂಮಿಗೆ 8-10 ಕಿಲೋ ಮೀಟರ್ ವೇಗದಲ್ಲಷ್ಟೇ ಬೀಳುತ್ತದೆ. ಅದಕ್ಕೊಂದು ನಿಯಂತ್ರಣವನ್ನು ಮತ್ತು ನಿಶ್ಚಿತ ಪ್ರಮಾಣವನ್ನು ಪ್ರಕೃತಿಯೇ (ಪವಿತ್ರ ಕುರ್‍ಆನ್: 43: 11) ಅಳವಡಿಸಿಬಿಟ್ಟಿದೆ. ಈ ಕಾರಣದಿಂದಲೇ ಮಳೆ ಸುರಿದ ಕೂಡಲೇ ಒಣಗಿದ ಭೂಮಿ ಮತ್ತೆ ಜೀವ ಪಡೆಯುವುದು ಮತ್ತು ಹಚ್ಚಹಸಿರಾಗುವುದು (ಪವಿತ್ರ ಕುರ್‍ಆನ್: 22: 63, 30: 24). ಆದರೆ ನಮ್ಮ ಸ್ಥಿತಿ ಹೇಗಿದೆಯೆಂದರೆ, ಮಳೆಗಾಲ ಮುಗಿದ ಬಳಿಕ, ಮಳೆ ನೀರು ಹರಿದು ಹೋಗುವ ತೋಡು, ಚರಂಡಿಗಳನ್ನೆಲ್ಲ ಎಷ್ಟು ಸಾಧ್ಯವೋ ಅಷ್ಟು ಕೆಡಿಸಿ ಬಿಡುತ್ತೇವೆ. ಅವುಗಳನ್ನೇ ಒತ್ತುವರಿ ಮಾಡಿಕೊಂಡು ಕಟ್ಟಡ ಕಟ್ಟುತ್ತೇವೆ. ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸುಟು, ಸೊಳ್ಳೆಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುತ್ತೇವೆ. ದುರ್ಬಲ ಗುಡಿಸಲುಗಳಲ್ಲಿ ಬದುಕುವ ಬಡವರಿಗೆ ಸೂಕ್ತ ಸೂರಿನ ವ್ಯವಸ್ಥೆ ಮಾಡುವ ಹೊಣೆಗಾರಿಕೆ ಸರಕಾರದ್ದಾದರೂ ಅದು ನುಣುಚಿಕೊಳ್ಳುತ್ತದೆ. ಅಂದಹಾಗೆ, ಮರಗಳು, ವಿದ್ಯುತ್ ತಂತಿಗಳು, ರಸ್ತೆಗಳು.. ಇವೆಲ್ಲದರ ರಕ್ಷಣೆ ಯನ್ನು ಮಳೆ ವಹಿಸಿಕೊಂಡಿಲ್ಲವಲ್ಲ. ರಸ್ತೆಯನ್ನು ಸಂಚಾರಕ್ಕೆ ಯೋಗ್ಯವಾಗಿ ಮಾಡಿಡಬೇಕಾದ ಹೊಣೆಯಾದರೂ ಯಾರದ್ದು, ಮಳೆಯದ್ದೇ? ಉರುಳಿ ಬೀಳಬಹುದಾದ ಮರಗಳನ್ನು ಕತ್ತರಿಸುವ ಕೆಲಸವನ್ನು ಮಳೆಗೆ ವಹಿಸಿಕೊಡಲಾಗಿದೆಯೇ?
   ನಿಜವಾಗಿ, ಮಳೆಗಾಲದಲ್ಲಿ ಮಳೆಯ ಮೇಲೆ ಏನೆಲ್ಲ ಆರೋಪಗಳನ್ನು ಹೊರಿಸಲಾಗುತ್ತದೋ ಆ ಎಲ್ಲ ಆರೋಪಗಳ ಹಿಂದೆ ಆರೋಪಿಸುವವರದ್ದೇ  ದೊಡ್ಡ ಪಾತ್ರವಿದೆ. ತಮ್ಮ ಅಪರಾಧವನ್ನು ಮುಚ್ಚಿಡುವುದಕ್ಕಾಗಿಯೇ ಮಳೆಯನ್ನು ಅವರು ಕಟಕಟೆಯಲ್ಲಿ ನಿಲ್ಲಿಸುತ್ತಿದ್ದಾರೆ. ಒಂದು ವೇಳೆ ಮಳೆ ರವಾನಿಸುವ ಸೂಚನೆಗೆ ಅವರೆಲ್ಲ ತುಸು ಸ್ಪಂದಿಸಿರುತ್ತಿದ್ದರೂ, 'ಮಳೆಯಿಂದಾಗಿ ಹಾನಿ, ಮಳೆಯಿಂದಾಗಿ ಸಾವು..' ಎಂಬೆಲ್ಲ ಸಂದರ್ಭಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಬಹುದಿತ್ತು. ಮಳೆಯನ್ನು ಪ್ರೀತಿಯಿಂದ ಸ್ವಾಗತಿಸುವಂಥ ವಾತಾವರಣವನ್ನು ನಿರ್ಮಿಸಬಹುದಿತ್ತು. ಮಳೆಯೆಂಬುದು ಭೂಮಿಯ ಪಾಲಿಗೆ ಎರಡ್ಮೂರು ತಿಂಗಳ ಅತಿಥಿ. ಮನುಷ್ಯರ ಒಟ್ಟು ಬದುಕಿನ ವಿಧಾನವನ್ನೇ ಬದಲಿಸುವ, ರಮ್ಯ ಭಾವನೆಗಳನ್ನು ಹುಟ್ಟು ಹಾಕುವ, ಪರಿಸರವನ್ನು ಹಚ್ಚಹಸಿರಾಗಿಸುವ ಈ ಅತಿಥಿ, ಯಾವತ್ತೂ ಮನುಷ್ಯ ವಿರೋಧಿ ಆಗಿರಲು ಸಾಧ್ಯವೇ ಇಲ್ಲ. ಮಳೆಯ ಸುತ್ತ ಸಾವಿರಾರು ಕತೆ, ಕವನ, ಕಾದಂಬರಿಗಳು ನಿರ್ಮಾಣವಾಗಿವೆ. ಬಾಲ್ಯದಲ್ಲಿ ಕಾಗದದ ದೋಣಿಯನ್ನು ನೀರಿನಲ್ಲಿ ಹರಿಸಿ ಖುಷಿಪಟ್ಟವರೇ ನಾವೆಲ್ಲ. ಮಕ್ಕಳ ಪಾಲಿಗೆ ಈಗಲೂ ಕೂಡ ಮಳೆಯೆಂದರೆ ಖುಷಿಯೇ. ಅದು ಅವರ ಪಾಲಿನ ಆತ್ಮೀಯ ಅತಿಥಿ. ಆದರೆ ಮನುಷ್ಯ ಬೆಳೆಯುತ್ತಾ ಎಷ್ಟು ಬದಲಾದನೆಂದರೆ ತನ್ನೆಲ್ಲ ವೈಫಲ್ಯಗಳನ್ನು ದುರ್ಬಲರ ಮೇಲೆ ಹೊರಿಸತೊಡಗಿದ. ಆಡಳಿತದ ಮಂದಿ ಇವತ್ತು ಮಳೆಯನ್ನು ದೂರುವುದು ಈ ಆಧಾರದಲ್ಲೇ. ಒಂದು ವೇಳೆ ಮಳೆಗಾಲದಲ್ಲಿ ಸಾವಿಗೀಡಾಗುವವರು, ಕಾಯಿಲೆ ಬೀಳುವವರೆಲ್ಲ  ಮಳೆಯಂತೆ ಬಾಯಿ ಬಾರದವರು ಆಗಿರುತ್ತಿದ್ದರೆ, ಅವರನ್ನೂ ಈ ವ್ಯವಸ್ಥೆ ಆರೋಪಿ ಸ್ಥಾನದಲ್ಲಿ ಕೂರಿಸುತ್ತಿತ್ತೋ ಏನೋ? ಆದ್ದರಿಂದ ಮಳೆಯನ್ನು ದೂರುವುದಕ್ಕಿಂತ ನಮ್ಮ ನಮ್ಮ ದುರಾಸೆಯನ್ನು ದೂರೋಣ. ತಪ್ಪುಗಳನ್ನು ತಿದ್ದಿಕೊಂಡು ಸೂಕ್ತ ತಯಾರಿಯೊಂದಿಗೆ ಅತಿಥಿಯನ್ನು ಸ್ವಾಗತಿಸೋಣ.

No comments:

Post a Comment