Monday, 8 July 2013

ಬುದ್ಧಗಯಾದ ಬಾಂಬ್!

   ಯಾವುದೇ ಒಂದು ಬಾಂಬ್ ಸ್ಫೋಟವನ್ನು ಖಂಡಿಸುವುದಕ್ಕೆ- ಸ್ಫೋಟ ನಡೆದ ಜಾಗ, ಸಾವಿಗೀಡಾದವರ ಸಂಖ್ಯೆ, ಅವರ ಧರ್ಮಗಳನ್ನು ಪರಿಗಣಿಸುವುದು ಮನುಷ್ಯ ವಿರೋಧಿ ಕ್ರಮ ಎಂದು ಬಲವಾಗಿ ಸಾರುತ್ತಲೇ ನಾವೆಲ್ಲ ಬುದ್ಧಗಯಾದ ಬಾಂಬ್ ಸ್ಫೋಟವನ್ನು ಖಂಡಿಸಬೇಕಾಗಿದೆ. ಬಾಂಬಿಟ್ಟವರು ಯಾವ ಸಂಘಟನೆಗೇ ಸೇರಿರಲಿ ಮತ್ತು ಅವರ ಹೆಸರ ಏನೇ ಆಗಿರಲಿ, ನಾವು ಖಂಡನೆಗೆ ಬಳಸುವ ಭಾಷೆ, ಹೇಳುವ ಧಾಟಿ ಮತ್ತು ಮಾಡುವ ಪ್ರತಿಭಟನೆಗಳಲ್ಲಿ ಯಾವ ರಾಜಿಯನ್ನೂ ಮಾಡದಿರೋಣ. ಈ ಹಿಂದೆ ಮಾಲೆಗಾಂವ್, ಮಕ್ಕಾ ಮಸೀದಿ, ಸಂಜೋತಾ ಎಕ್ಸ್‍ಪ್ರೆಸ್ ಸ್ಫೋಟಗಳ ಸಂದರ್ಭದಲ್ಲಿ ಮಾಧ್ಯಮಗಳು ಅತಿ ಗಂಭೀರ ತಪ್ಪುಗಳನ್ನು ಎಸಗಿದ್ದುವು. ಸ್ಫೋಟಿಸಿದವರು ಪತ್ರಿಕಾ ಕಚೇರಿಗಳಲ್ಲೇ ಅವಿತು ಕೂತಿದ್ದಾರೋ ಎಂದು ಓದುಗರು ಅನುಮಾನಿಸುವಷ್ಟು ಖಚಿತವಾಗಿ ಆರೋಪಿಗಳ ಹೆಸರನ್ನೂ ಸಂಘಟನೆಯನ್ನೂ ಅವು ಹೆಸರಿಸಿದ್ದುವು. ಮಾಧ್ಯಮಗಳು ಮಾಡಿದ ಈ ಪ್ರಮಾದ ಸಮಾಜದ ಮೇಲೆ ಯಾವ ಮಟ್ಟಿನ ಅಡ್ಡ ಪರಿಣಾಮ ಬೀರಿತೆಂದರೆ, ಒಂದು ಸಮುದಾಯವನ್ನೇ ಟೆರರಿಸ್ಟ್ ಗಳಾಗಿ ಕಾಣುವಷ್ಟು. ಅನೇಕಾರು ಯುವಕರು ಹಲವು ವರ್ಷಗಳ ವರೆಗೆ ಅನ್ಯಾಯವಾಗಿ ಜೈಲಲ್ಲಿ ಕೊಳೆಯುವಷ್ಟು. ಆದರೆ ಆ ಬಳಿಕ ಅಸೀಮಾನಂದ, ಸ್ವಾಮಿ ದಯಾನಂದ, ಸಾಧ್ವಿ ಪ್ರಜ್ಞಾ ಸಿಂಗ್, ಕರ್ನಲ್ ಪುರೋಹಿತರೆಲ್ಲ ಮಾಧ್ಯಮಗಳ ಈ ಪ್ರಮಾದವನ್ನು ಬಹಿರಂಗಕ್ಕೆ ತಂದರೂ ನಿರೀಕ್ಷಿತ ಮಟ್ಟದಲ್ಲಿ ಮಾಧ್ಯಮಗಳು ಆತ್ಮಾವಲೋಕನಕ್ಕೆ ಇಳಿದದ್ದು ಕಡಿಮೆ. ಆದ್ದರಿಂದಲೇ ಬುದ್ಧಗಯಾ ಸ್ಫೋಟದ ಕುರಿತಂತೆ ಮಾಧ್ಯಮಗಳು ಮಾಡಿರುವ ಪ್ರಥಮ ವರದಿ ಮತ್ತು ವಿಶ್ಲೇಷಣೆಯ ಬಗ್ಗೆ ವಿಷಾದ ಮೂಡುವುದು.
   ಬಾಂಬ್ ಸ್ಫೋಟಕ್ಕೆ ಈಡಾದ ಮಹಾಬೋಧಿ ಮಂದಿರವಷ್ಟೇ ಬುದ್ಧಗಯಾದಲ್ಲಿ ಇರುವುದಲ್ಲ. ಅದು 12 ಎಕ್ರೆ ಪ್ರದೇಶಗಳ ವಿಶಾಲ ಆವರಣ. ಬೌದ್ಧರ ಇನ್ನೂ ಐದಾರು ಮಂದಿರಗಳು ಈ ಬುದ್ಧಗಯಾ ಆವರಣದಲ್ಲಿವೆ. ಅಕ್ಟೋಬರ್ ಮತ್ತು ಮಾರ್ಚ್ ಗಳ ಮಧ್ಯೆ ಲಕ್ಷಾಂತರ ಮಂದಿ ಈ ಮಂದಿರಗಳಿಗೆ ಭೇಟಿ ಕೊಡುತ್ತಾರೆ. ಬೋಧಿವೃಕ್ಷದ ಬಳಿ ಮಹಾಬೋಧಿ ಮಂದಿರವನ್ನು ರಾಜ ಅಶೋಕ ಕಟ್ಟಿದ್ದರೂ ಬೌದ್ಧ ಧರ್ಮದ ವಿರುದ್ಧ ಶಂಕರಾಚಾರ್ಯರ ನೇತೃತ್ವದಲ್ಲಿ ನಡೆದ ಆಂದೋಲನದಿಂದಾಗಿ ಅದು ಪಾಳು ಬಿದ್ದಿತು. ಬೌದ್ಧರು ಚೆಲ್ಲಾಪಿಲ್ಲಿಯಾದರು. 1861ರಲ್ಲಿ ಬ್ರಿಟಿಷ್ ಪುರಾತತ್ವ ಇಲಾಖೆಯು ಮಹಾಬೋಧಿ ಆವರಣದಲ್ಲಿ ನಡೆಸಿದ ಉತ್ಖನನದ ಬಳಿಕ ಮಂದಿರ ಮತ್ತೆ ಚಲಾವಣೆಗೆ ಬಂತು. ಆದರೆ ಬೌದ್ಧ ನಿರ್ಮೂಲನ ಚಳವಳಿಯಿಂದ ಪ್ರಭಾವಿತರಾದ ಕೆಲವರು ಈ ಬೌದ್ಧ ಮಂದಿರ ಆವರಣದಲ್ಲಿ ಶಿವ ದೇವಾಲಯವನ್ನು ಸ್ಥಾಪಿಸಿದರು. 1949ರಲ್ಲಿ ಬಿಹಾರ ಸರಕಾರವು ಬುದ್ಧಗಯಾ ಟೆಂಪಲ್ ಕಾಯ್ದೆಯನ್ನು ಜಾರಿಗೆ ತಂದು ಮಂದಿರದ ಆವರಣವನ್ನು ವಶಕ್ಕೆ ತೆಗೆದುಕೊಂಡಾಗ ಹಿಂದೂಗಳು ತಗಾದೆ ತೆಗೆದಿದ್ದರು. ಮಂದಿರ ವ್ಯವಹಾರದಲ್ಲಿ ತಮಗೂ ಹಕ್ಕಿದೆಯೆಂದು ವಾದಿಸಿದ್ದರು. ಆದ್ದರಿಂದ ಸರಕಾರವು ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ 5 ಮಂದಿ ಹಿಂದೂಗಳು ಮತ್ತು 4 ಮಂದಿ ಬೌದ್ಧರನ್ನೊಳಗೊಂಡ ಸಮಿತಿಯನ್ನು ರಚಿಸಿ ಬುದ್ಧಗಯಾ ಆವರಣದ ವ್ಯವಹಾರವನ್ನು ಅದರ ಕೈಗೆ ಒಪ್ಪಿಸಿತು. ಆದರೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗವು ಮಂದಿರ ಆವರಣದ ನಿರ್ವಹಣೆಯ ಹೊಣೆಯನ್ನು ಬೌದ್ಧರಿಗೆ ನೀಡಬೇಕೆಂದು ಶಿಫಾರಸು ಮಾಡಿತು. ಇದನ್ನು ಹಿಂದೂಗಳು ವಿರೋಧಿಸಿದರು. ಬೌದ್ಧರು ಬೆಂಬಲಿಸಿದರು. ಈ ವಿವಾದ ಇನ್ನೂ ಬಗೆಹರಿದಿಲ್ಲ.
   ನಿಜವಾಗಿ, ಬುದ್ಧಗಯಾದ ಬಾಂಬ್ ಸ್ಫೋಟವನ್ನು ಯಾರು ನಡೆಸಿರಬಹುದು ಎಂದು ಖಚಿತವಾಗಿ ಹೇಳುವುದಕ್ಕಿಂತ ಮೊದಲು ಇಂಥ ಸಾಧ್ಯತೆಗಳ ಸುತ್ತವೂ ಗಮನ ಹರಿಸಬೇಕಿದೆ. ಉಗ್ರರು ಬಾಂಬ್ ಸ್ಫೋಟಿಸಿದ್ದು ಬೆಳಗ್ಗಿನ ಪ್ರಾರ್ಥನೆ ಮುಗಿದು ಸುಮಾರು ನೂರರಷ್ಟಿದ್ದ ಭಕ್ತರು ಬಹುತೇಕ ಚದುರಿದ ಬಳಿಕ. ಹಾಗಾದರೆ ಉಗ್ರರ ಉದ್ದೇಶವೇನು? ಮಾಧ್ಯಮಗಳು ಹೇಳುವಂತೆ, ರೋಹಿಂಗ್ಯನ್ ಮುಸ್ಲಿಮರ ಮೇಲಿನ ದಾಳಿಗೆ ಪ್ರತೀಕಾರವಾಗಿ ಈ ಸ್ಫೋಟ ನಡೆದಿದೆಯೆಂದಾದರೆ ಅಕ್ಟೋಬರ್ ಮತ್ತು ಮಾರ್ಚ್ ತಿಂಗಳುಗಳ  ಮಧ್ಯೆ ಸ್ಫೋಟ ನಡೆಯಬೇಕಿತ್ತು. ಯಾಕೆಂದರೆ ಬೌದ್ಧರು ಸಾವಿರಾರು ಸಂಖ್ಯೆಯಲ್ಲಿ ಸೇರುವುದು ಈ ತಿಂಗಳಲ್ಲೇ. ಹೀಗಿರುವಾಗ ಈ ಬಾಂಬುಗಳಿಗೆ ರೋಹಿಂಗ್ಯನ್ ಬಣ್ಣವನ್ನು ಬಳಿದು, ಹಿಂದೂ-ಬೌದ್ಧಮಯಗೊಳಿಸುವುದಾದರೂ ಏಕೆ? ರೋಹಿಂಗ್ಯನ್ ಹೊರತಾದ ಇತರ ಸಾಧ್ಯತೆಗಳ ಬಗ್ಗೆಯೇಕೆ ಮಾಧ್ಯಮಗಳು ಚರ್ಚಿಸುತ್ತಿಲ್ಲ? ಅಂದಹಾಗೆ, ಮಾಧ್ಯಮಗಳು ಹೇಳುತ್ತಿರುವ ಇಂಡಿಯನ್ ಮುಜಾಹಿದೀನ್ ಅಂತೂ ಮನುಷ್ಯರನ್ನು ಕೊಲ್ಲುವಲ್ಲಿ ಸಾಕಷ್ಟು ಅನುಭವ ಇರುವ ಸಂಘಟನೆಯಾಗಿ ಈ ದೇಶದಲ್ಲಿ ಗುರುತಿಸಿಕೊಂಡಿದೆ. ಅಂಥ ಚತುರ ಸಂಘಟನೆಯೊಂದು ಬುದ್ಧಗಯಾದಲ್ಲಿ ಯಾರಿಗೂ ತೊಂದರೆ ಉಂಟು ಮಾಡಲಾರದ ಬಾಂಬು ಸ್ಫೋಟವೊಂದನ್ನು ನಡೆಸಿದೆಯೆಂದು ನಂಬುವುದಾದರೂ ಹೇಗೆ? ಅದು ಮನುಷ್ಯರ ಬಗ್ಗೆ ಈ ಮಟ್ಟದ ಕರುಣೆಯನ್ನು ಯಾವಾಗಿನಿಂದ ಬೆಳೆಸಿಕೊಂಡಿದೆ?
   ಒಂದು ರೀತಿಯಲ್ಲಿ, ಇಂಡಿಯನ್ ಮುಜಾಹಿದೀನ್ ಎಂಬ- ಹೆಸರು, ವಿಳಾಸ ಗೊತ್ತಿಲ್ಲದ ಸಂಘಟನೆಯ ಮೇಲೆ ಈ ವರೆಗೆ ಇರುವ ಆರೋಪಗಳಿಗೆ ಹೋಲಿಸಿದರೆ ಬುದ್ಧಗಯಾದಲ್ಲಿ ನಡೆದ ಸ್ಪೋಟ ಯಾವ ರೀತಿಯಲ್ಲೂ  ತಾಳೆಯಾಗುತ್ತಿಲ್ಲ. ಸ್ಫೋಟದ ಸಮಯ ಮತ್ತು ಹಾನಿಯನ್ನು ಪರಿಗಣಿಸಿದರೆ ಈ ಬಾಂಬುಗಳಿಗೆ ಮಾಧ್ಯಮಗಳು ಹೇಳದಂಥ ಇನ್ನಾವುದೋ ಉದ್ದೇಶ ಇರುವಂತಿದೆ. ಆದರೆ ಅದನ್ನು ಪತ್ತೆ ಹಚ್ಚುವುದಕ್ಕೆ ಇಲ್ಲಿನ ರಾಜಕೀಯ ಪಕ್ಷಗಳು ತನಿಖಾ ಸಂಸ್ಥೆಗಳಿಗೆ ಎಷ್ಟಂಶ ಸ್ವಾತಂತ್ರ್ಯವನ್ನು ಕೊಡಬಲ್ಲವು? ಬಿಜೆಪಿ ಈಗಾಗಲೇ ಬಿಹಾರ್ ಬಂದ್ ನಡೆಸಿದೆ. ನಿತೀಶ್ ಕುಮಾರ್‍ರ ವೈಫಲ್ಯಕ್ಕೆ ಪುರಾವೆಯಾಗಿ ಈ ಸ್ಫೋಟವನ್ನು ಬಿಂಬಿಸಲು ಅವರ ವಿರೋಧಿಗಳು ಪ್ರಯತ್ನಿಸುತ್ತಿದ್ದಾರೆ. ಇಂಥ ಹೊತ್ತಲ್ಲಿ ಬುದ್ಧಗಯಾವನ್ನು ಬೆದರಿಸಿದ ನಿಜವಾದ ಅಪರಾಧಿಗಳು ಶಿಕ್ಷೆಗೊಳಪಟ್ಟಾರೆಂದು ಹೇಗೆ ನಂಬುವುದು? ವಿರೋಧಿಗಳ ಬಾಯಿ ಮುಚ್ಚಿಸಬೇಕಾದರೆ ನಿತೀಶ್ ಕುಮಾರ್‍ರಿಗೆ ತಕ್ಷಣ ಕೆಲವು ಭಯೋತ್ಪಾದಕರ ಅಗತ್ಯವಿದೆ. ಬಿಜೆಪಿಗಂತೂ ಆ ಭಯೋತ್ಪಾದಕರು ಮುಸ್ಲಿಮರೇ ಆಗಿರಬೇಕೆಂಬ ಹಠವಿದೆ. ಈ ಹಠ ಮತ್ತು ಅಗತ್ಯಗಳ ನಡುವೆ ನಿಜವಾದ ಉಗ್ರರು ತಪ್ಪಿಸಿಕೊಳ್ಳುವ ಸಾಧ್ಯತೆ ಖಂಡಿತ ಇದೆ. ಯಾರನ್ನಾದರೂ ಎನ್‍ಕೌಂಟರ್‍ನಲ್ಲಿ ಸಾಯಿಸಿ ಅವರಿಗೆ ಬುದ್ಧಗಯಾದ ಬಾಂಬನ್ನು ಅಂಟಿಸಿಬಿಡುವುದಕ್ಕೂ ಅವಕಾಶ ಇದೆ. ಆದ್ದರಿಂದ ರಾಜಕೀಯ ಲಾಭ-ನಷ್ಟಗಳಿಗೆ ಸಿಲುಕದೇ ಬುದ್ಧಗಯಾ ತನಿಖೆಗೆ ಒಳಪಡಲಿ. ಅಪರಾಧಿಗಳು ತಮ್ಮ ‘ಧರ್ಮ'ದ ಕಾರಣಕ್ಕಾಗಿ ಯಾರ ಕೃಪೆಗೂ ಒಳಗಾಗದಿರಲಿ.

6 comments:

  1. Sir, I don't know it is done by Indian Mujahudin or any other group. But I think you will be happy if it is not done by Indian Mujahidin or any othere Muslim group. You are realy not protesting the incident. you are saying that it is not done by Indian Mujahidin. Sir I am common man. Pls don't talk like Politician, they divided India. Terrorist belongs to any group. We should protest them not on any group. When some bad thing happens Hindhus pointing on Muslim, and Muslim pointing on Hindus. Sory. I may wrong.

    ReplyDelete
    Replies
    1. ಪ್ರಿಯ ರುದ್ರಪದ ಅವರೇ
      ನಾನು ಖಂಡನೆಯೊಂದಿಗೆ ಸಂಪಾದಕೀಯ ಆರಂಬಿಸಿದ್ದೇನೆ. ಬ್ಲಾಗ್ ನಲ್ಲಿ ಓದಿದ್ದರೆ ಇದು ನಿಮಗೆ ಗೊತ್ತಾದೀತು.ತಪ್ಪಿತಸ್ತರ ಪರವಾಗಿ ಒಂದೇ ಒಂದು ಪದವೂ ನನ್ನ ಬರಹದಲ್ಲಿ ಇಲ್ಲ. ಇನ್ನು, ಇಂಡಿಯನ್ ಮುಜಾಹಿದೀನ್ ಮಾಡಿಲ್ಲ ಅಂತ ನಾನು ಎಲ್ಲೂ ಬರೆದಿಲ್ಲ. ಇತರ ಸಾಧ್ಯತೆಗಳ ಬಗ್ಗೆ ಅಷ್ಟೇ ಬೆಳಕು ಚೆಲ್ಲಲು ಯತ್ನಿಸಿದ್ದೇನೆ. ಓರ್ವ ಬರಹಗಾರನಾಗಿ ಘಟನೆಯೊಂದರ ಅನಂತ ಸಾಧ್ಯತೆಗಳ ಬಗ್ಗೆ ಆಲೋಚಿಸುವುದು ತಪ್ಪು ಅಂತ ನಾನು ಭಾವಿಸಿಲ್ಲ. ನನ್ನನ್ನು ಇಂಥ ಸಾಧ್ಯತೆಗಳ ಬಗ್ಗೆ ಆಲೋಚಿಸುವುದಕ್ಕೆ ನಿರ್ಭಂದಿಸಿದ್ದು ಈ ಹಿಂದಿನ ಸ್ಪೋಟ ಪ್ರಕರಣಗಳೇ .ಅಲ್ಲದೇ, ಇದೀಗ ಬಂದನಕ್ಕೆ ಒಳಗಾದವರು ಯಾರು ಯಾರೆಂದು ಎಲ್ಲರಿಗೂ ಗೊತ್ತಿದೆ. ಇದು ಅಂತಿಮ ಅಲ್ಲದೇ ಇರಬಹುದು. ಆದರೆ, ಯಾರನ್ನೂ ಪೂರ್ವಾಗ್ರಹ ಪೀಡಿತವಾಗಿ ನೋಡಬಾರದು ಎಂಬುದಷ್ಟೇ ನನ್ನ ನಿಲುವು. ಇನ್ನು, ಅನ್ಯಾಯವನ್ನು ಬೆಂಬಲಿಸಿದರೆ ಆ ಬಳಿಕ ನಾನು ಮುಸ್ಲಿಂ ಆಗಿ ಉಳಿಯುವುದಿಲ್ಲ . ಬಹುಶ ನೀವು ಇಡೀ ಬರಹ ಓದಿಲ್ಲ ಅಂತ ಅನಿಸ್ತದೆ . ಅಥವಾ ... ನಿಮ್ಮ ಅಭಿಪ್ರಾಯವನ್ನು ಗವ್ರವಿಸುತ್ತಲೇ ನೀವ್ ಅಂದುಕೊಂಡಂತ ವ್ಯಕ್ತಿ ನಾನಲ್ಲ ಎಂದು ವಿನಯಪೂರ್ವಕ ತಿಳಿಸಲು ಇಷ್ಟಪಡುತ್ತೇನೆ

      Delete
  2. nice article, Killing innocent not at all allowed, should be punished whomever it had done.thorough and detailed investigation without any partiality should be done to bring justice.

    ReplyDelete
  3. This comment has been removed by the author.

    ReplyDelete
    Replies
    1. ಮಾನ್ಯರೆ, ನಿಮ್ ಲೇಖನದ ತಾತ್ಪರ್ಯದಲ್ಲಿ ರುದ್ರಪ್ಪಾಚಾರ್ಯ ಹೇಳುವಂತೆ ಐಎಂ ಅನ್ನು ಪರೋಕ್ಷವಾಗಿ ನೆರವು ನೀಡುವ ಸಮರ್ಥನೆ ವಾಸನೆ ಹೊಡೆಯುತ್ತಿದೆ. ನೀವೇ ಹೇಳುವಂತೆ ತನಿಖೆ ನಿಷ್ಪಕ್ಷಪಾತವಾಗಿರಬೇಕು ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು. ಆದರೆ ಅಜ್ಮಲ್ ಕಸಬಗೆ ಶಿಕ್ಷೆ ಆಗಬೇಕು ಅಂತಾ ಯಾರು ಎಷ್ಟು ಸಲ ಹೇಳಿದರು? ಹೇಳಿದ್ದೀರಿ ನೀವು? ಅಫಜಲ್ ಗುರುವನ್ನು ಬಿಡಿ ಅವನು ಹಾಳಾಗಿ ಹೋಗಲಿ. ಇನ್ನು ಇಲ್ಲಿ ನೀವೇ ಹೇಳುವಂತೆ ಐಎಂಗೆ ವಿಳಾಸವೇ ಇಲ್ಲ ವೆಂದು ಹೇಳುತ್ತಿರಿ ಜೊತೆಗೆ ಅದು ಏನಾದರೂ ಭಯೋತ್ಪಾದಕ ದಾಳಿ ನಡೆಸಿದ್ದರೆ ಹೆಚ್ಚಿನ ಸಾವು ನೋವು ಆಗುತ್ತಿತ್ತು ಎಂದು ನೀವೇ ಒಪ್ಪಿಕೊಂಡಿದ್ದೀರಿ! ಅಂದರೆ ಇಲ್ಲಿ ಐಎಂ ಮುಂಡೆ ಮಕ್ಕಳ 'ಕೈ'ವಾಡ ಇಲ್ಲ ಎಂದು ನೀವು ಹೇಳಲು ಹೊರಟಿರುವ ಪರಿಯಲ್ಲೇ ನಿಮ್ ಒಳ ಮನನ್ಸಿನ ಗುಪ್ತ ವಿಚಾರ ಪರೋಕ್ಷವಾಗಿ ಅನಾವರಣಗೊಂಡಿದೆ! ಒಂದು ವ್ಯತ್ಯಾಸವೆನೆಂದರೆ ಬಹುತೇಕ ಸಂದರ್ಭಗಳಲ್ಲಿ ಕೆಲ ಅಲ್ಪಸಂಖ್ಯಾತರ (ಸಂಘಗಳ) ಹಲ್ಕಟ್ ಗಿರಿ(ಭಯೋತ್ಪಾದನೆಗೆ ಈ ಪದಬಳಸಲಗಿದೆ ಯಾಕೆಂದರೆ ಹಸಿರು ಭಯೋತ್ಪಾದನೆ ಎನ್ನಲು ನನಗೆ ಮನಸ್ಸಿಲ್ಲ ಯಾಕೆಂದರೆ ಹಸಿರು ಇಸ್ಲಾಂ ಸಂಕೇತ ಝಕೀರ್ ನಾಯಕ್ ಹೇಳುವಂತೆ ಇಸ್ಲಾಂ ಪರಫೆಕ್ಟ ಬಟ್ ನಾಟ್ ಮು ಸ್ಲೀಂ!) ಗಳ ಬಗ್ಗೆ ಮಾತೇ ಆಡುವುದಿಲ್ಲ ಆಡಿದರೂ ಈಗ ನೀವು ಆಡಿದಂತೆಯೇ ಆಡುತ್ತಾರೆ. ಅದರಲ್ಲೂ ಅವರು ತಮ್ಮ ಮಾತುಗಳಲ್ಲಿಯೇ ಹಿಡನ್ ಅಜೆಂಡಾ ನಮಗೆ ಸ್ಪಷ್ಟವಾಗಿ ಕಾಣುತ್ತದೆ! ಇನ್ನೊಂದು ಗೊತ್ತಿರಲಿ ಭಾವುಕ ಮೂರ್ಖರಾದ ಕೆಲ ಹಿಂದು ಪರವಾದಿಗಳು ಹಿಡನ್ ಅಜೆಂಡಾ ಇಲ್ಲದೇ ಮಾತನಾಡುವುದರಿಂದಲೇ ಅವರಲ್ಲಿ ಒಡಕು ಮೂಡಿ ಒಗ್ಗಟ್ಟು ಸಾಧ್ಯವಾಗುತ್ತಿಲ್ಲ! ಇದು ನಾವು ಕಂಡ ಸತ್ಯವಾಗಿದೆ. (ಮುಕ್ತ ಚರ್ಚೆಗೆ ನಾವು ಸದಾ ಸಿದ್ಧ)

      Delete