Tuesday, 23 July 2013

ಬಾಂಬ್ ಹುಡುಕುವ ನಾವು ಮತ್ತು ಪ್ರತಿಭಟಿಸುವ ಅವರು

   ಕಾಶ್ಮೀರವನ್ನು ಭಾರತದ ಭಾಗವೆಂದು ಸಾಧಿಸಿ ತೋರಿಸುವುದಕ್ಕಾಗಿ ಐತಿಹಾಸಿಕ ದಾಖಲೆ, ಅಂಕಿ-ಅಂಶಗಳನ್ನು ಈ ದೇಶದಲ್ಲಿ ಧಾರಾಳ ಪ್ರಮಾಣದಲ್ಲಿ ಮಂಡಿಸಲಾಗಿದೆ. ಕಾಶ್ಮೀರಿಗಳ ಕುರಿತಂತೆ, ಅವರ ನೋವು, ಸಂಕಟಗಳ ಕುರಿತಂತೆ ಚರ್ಚಿಸಿದುದಕ್ಕಿಂತ ಹೆಚ್ಚು, ಕಾಶ್ಮೀರ ಎಂಬ ಕಲ್ಲು-ಮಣ್ಣಿನ ಭೂಮಿಯ ಬಗ್ಗೆ ಅತೀವ ಕಾಳಜಿಯಿಂದ ಮಾತಾಡಿದವರೂ ಇಲ್ಲಿದ್ದಾರೆ. ಅವರಿಗೆ ಕಾಶ್ಮೀರ ಬೇಕೇ ಹೊರತು ಕಾಶ್ಮೀರಿಗಳಲ್ಲ. ಕಾಶ್ಮೀರಿಗಳೆಲ್ಲ ಒಂದೋ ಉಗ್ರವಾದಿಗಳು ಇಲ್ಲವೇ ಅವರ ಬೆಂಬಲಿಗರು ಎಂಬ ಧಾಟಿಯಲ್ಲೇ ಅವರು ಮಾತಾಡುತ್ತಾರೆ. ಕಾಶ್ಮೀರಿಗಳು ಪ್ರತಿಭಟಿಸಿದರೆ ಈ ಮಂದಿ ಪ್ರತಿಭಟನಾಕಾರರನ್ನೇ ಟೀಕಿಸುತ್ತಾರೆ. ಸದ್ಯ ಕಾಶ್ಮೀರದಲ್ಲಿ ಕಾಣಿಸಿಕೊಂಡಿರುವ ಪ್ರತಿಭಟನೆಯ ಬಗ್ಗೆಯೂ ದೇಶದ ಒಂದು ವರ್ಗ ಇಂಥ ನಕಾರಾತ್ಮಕ ಧಾಟಿಯಲ್ಲೇ ಮಾತಾಡುತ್ತಿದೆ.
   ದಿ ಹಿಂದೂ ಪತ್ರಿಕೆಯಲ್ಲಿ ಜೂನ್ 30ರಂದು ‘ನೈಟ್ ಆಫ್ ಹಾರರ್’ ಎಂಬೊಂದು ಲೇಖನವನ್ನು ಹರ್ಷಮಂದರ್ ಬರೆದಿದ್ದರು. ಕಾಶ್ಮೀರಿಗಳನ್ನು ಭಯೋತ್ಪಾದಕರಂತೆ ಮತ್ತು ಅಲ್ಲಿಯ ಭದ್ರತಾ ಪಡೆಗಳನ್ನು ನೂರು ಶೇಕಡಾ ಸಭ್ಯರಂತೆ ಬಿಂಬಿಸುವವರೆಲ್ಲ ಒಮ್ಮೆ ಆ ಲೇಖನವನ್ನು ಓದಬೇಕು. 1991 ಫೆಬ್ರವರಿ 23ರ ರಾತ್ರಿ ಕುಪ್ವಾರ ಜಿಲ್ಲೆಯ ಕುನನ್ ಪೋಶ್‍ಪೋರಾ ಗ್ರಾಮಕ್ಕೆ ಸೇನೆ ನುಗ್ಗುತ್ತದೆ. ಭಯೋತ್ಪಾದಕರು ಅಡಗಿಕೊಂಡಿದ್ದಾರೆಂಬ ನೆಪವೊಡ್ಡಿ ಮನೆ ಮನೆ ತಪಾಸಿಸುತ್ತದೆ. ಮಕ್ಕಳ ಎದುರೇ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತದೆ. ಪುರುಷರನ್ನು ಭೀಕರ ಹಿಂಸೆಗೆ ಗುರಿಪಡಿಸುತ್ತದೆ. ಎಲ್ಲಿಯವರೆಗೆಂದರೆ ಆ ಗ್ರಾಮದ ಮಹಿಳೆಯರು ಎರಡ್ಮೂರು ದಿನಗಳ ವರೆಗೆ ದೂರು ಕೊಡುವುದಕ್ಕೂ ಹಿಂಜರಿಯುತ್ತಾರೆ. ಕೊನೆಗೆ ರಾಜ್ಯ ಮಾನವ ಹಕ್ಕು ಆಯೋಗವು ಸಂತ್ರಸ್ತರ ದೂರನ್ನು ಆಲಿಸಲು ಮುಂದಾಗುತ್ತದಲ್ಲದೇ 2011 ಅಕ್ಟೋಬರ್ 16ರಂದು ವರದಿಯನ್ನು ಮಂಡಿಸುತ್ತದೆ. ಯೋಧರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವುದಾಗಿ ಅದು ದಾಖಲೆ ಸಮೇತ ಸಾಬೀತುಪಡಿಸುತ್ತದೆ. ಆದ್ದರಿಂದ ಸಂತ್ರಸ್ತ ಮಹಿಳೆಯರಿಗೆ 3 ಲಕ್ಷ ಪರಿಹಾರ ನೀಡಬೇಕು ಮತ್ತು ಯೋಧರ ವಿರುದ್ಧ ಹೂಡಲಾಗಿರುವ ಕ್ರಿಮಿನಲ್ ಮೊಕದ್ದಮೆಯ ತನಿಖೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸುತ್ತದೆ. ಹಿರಿಯ ಪತ್ರಕರ್ತೆ ಸೀಮಾ ಮುಸ್ತಫಾ, ಜಾನ್ ದಯಾಳ್, ಸೆಹ್ಬಾ ಫಾರೂಖಿ, ಇ.ಎನ್. ರಾಮ್ ಮೋಹನ್, ಬಾಲಚಂದ್ರ, ಮುಹಮ್ಮದ್ ಸಲೀಮ್.. ಮತ್ತಿತರ ಮಾನವ ಹಕ್ಕು ಕಾರ್ಯಕರ್ತರು 2013 ಜೂನ್‍ನಲ್ಲಿ ಈ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಮಾತುಗಳನ್ನು ಆಲಿಸಿದ್ದರು. ಘಟನೆ ನಡೆದು 22 ವರ್ಷಗಳಾಗಿದ್ದರೂ ಸಂತ್ರಸ್ತ ಮಹಿಳೆಯರು ಅಂದಿನ ಭೀತಿಯಿಂದ ಹೊರಬಂದಿಲ್ಲ ಎಂದೂ ಹೇಳಿದ್ದರು. ನಿಜವಾಗಿ, ಕಾಶ್ಮೀರದಲ್ಲಿ ಈಗ ಉದ್ಭವಿಸಿರುವ ಆತಂಕಕಾರಿ ಪರಿಸ್ಥಿತಿಯನ್ನು ಇಂಥ ಹಿನ್ನೆಲೆಗಳ ಜೊತೆಗಿಟ್ಟು ನೋಡಬೇಕಾದ ಅಗತ್ಯ ಇದೆ. 2009ರಲ್ಲಿ ಬೆಂಗಳೂರಿನಲ್ಲಿ ಸಿ.ಕೆ. ನಾಯ್ಡು ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿತ್ತು. ಕಾಶ್ಮೀರ ತಂಡವನ್ನು ಪ್ರತಿನಿಧಿಸಿದ್ದ ಪರ್ವೇಝ್ ರಸೂಲ್ ಎಂಬ ಯುವ ಕ್ರಿಕೆಟಿಗನನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡರು. ಆತ ತನ್ನ ಬ್ಯಾಗ್‍ನಲ್ಲಿ ಬ್ಯಾಟು, ಪ್ಯಾಡು, ಬಾಲ್‍ಗಳ ಬದಲು ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದಾನೆ ಎಂಬುದಾಗಿ ಪೊಲೀಸರು ಅನುಮಾನಿಸಿದ್ದರು. ಆ ಯುವಕ ಇವತ್ತು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾನೆ. ಅಷ್ಟಕ್ಕೂ, ಓರ್ವ ಕ್ರಿಕೆಟಿಗನ ಮೇಲೆಯೇ ಪೊಲೀಸರ ನಡವಳಿಕೆ ಈ ಮಟ್ಟದಲ್ಲಿದೆಯೆಂದ ಮೇಲೆ ಸಾಮಾನ್ಯ ಯುವಕರನ್ನು ಭದ್ರತಾ ಪಡೆಗಳು ಹೇಗೆ ನಡೆಸಿಕೊಂಡಾವು? ಕಾಶ್ಮೀರಿಗಳ ಪ್ರತಿಭಟನೆ, ಕಲ್ಲೆಸೆತಗಳನ್ನು ಟೀಕಿಸುವವರೆಲ್ಲ ಅದರ ಇನ್ನೊಂದು ಮುಖವನ್ನು ಎಷ್ಟರ ಮಟ್ಟಿಗೆ ಅರ್ಥೈಸಲು ಪ್ರಯತ್ನಿಸಿದ್ದಾರೆ? ಕಾಶ್ಮೀರವು ಭಾರತದ ಭಾಗವಾಗುವುದಕ್ಕಿಂತ ಮೊದಲು ಕಾಶ್ಮೀರಿಗಳನ್ನು ಭಾರತದ ಭಾಗವಾಗುವಂತೆ ಮಾಡುವುದಕ್ಕೆ ಸರ್ಕಾರಗಳು, ಭದ್ರತಾ ಪಡೆಗಳು ಯಾವ ಮಟ್ಟದಲ್ಲಿ ಶ್ರಮಿಸಿವೆ? ಕಾಶ್ಮೀರ ಅಂದರೆ ಬರೇ ಪ್ರವಾಸಿಗರನ್ನು ಸೆಳೆಯುವ, ಆಪಲ್ ಬೆಳೆಯುವ ಭೂಮಿಯಷ್ಟೇ ಅಲ್ಲವಲ್ಲ. ಕಾಶ್ಮೀರ ಭಾರತದ ಭಾಗವಾಗುವುದೆಂದರೆ ಕಾಶ್ಮೀರಿಗಳೂ ಭಾರತದ ಭಾಗವಾಗುವುದೆಂದರ್ಥ. ಆದರೆ ಇಂಥದ್ದೊಂದು ಇನ್‍ಕ್ಲೂಸಿವ್ ಧೋರಣೆಯನ್ನು ತಳೆಯಲು ನಮಗೆ ಎಷ್ಟರ ಮಟ್ಟಿಗೆ ಸಾಧ್ಯವಾಗಿದೆ? ಕಾಶ್ಮೀರದ ಪ್ರತ್ಯೇಕತಾ ಹೋರಾಟದ ಬಗ್ಗೆ, ಪಂಡಿತರ ವಲಸೆಯ ಕುರಿತು ಸರಿ-ತಪ್ಪುಗಳ ಚರ್ಚೆ ನಡೆಸುವುದು ಸುಲಭ. ಕಾಶ್ಮೀರಿಗಳ ಮೇಲಿನ ದೌರ್ಜನ್ಯವನ್ನು ಎತ್ತಿ ಹೇಳಿದಾಗಲೆಲ್ಲ, ಪಂಡಿತರ ಸ್ಥಿತಿಯನ್ನು ಉಲ್ಲೇಖಿಸಿ ಎದುರುತ್ತರ ಕೊಡುವುದು ಈ ದೇಶದಲ್ಲಿ ಸಾಮಾನ್ಯವಾಗಿಬಿಟ್ಟಿದೆ. ನಿಜವಾಗಿ, ಇಂಥ ಜಿದ್ದಾಜಿದ್ದಿಗಳೇ ಕಾಶ್ಮೀರವನ್ನು ಇವತ್ತು ಈ ಹಂತಕ್ಕೆ ತಲುಪಿಸಿರುವುದು. ಪ್ರತ್ಯೇಕತಾ ಹೋರಾಟ, ಅದಕ್ಕೆ ಬೆಂಬಲವಾಗಿ ನಿಂತ ವಿದೇಶಿ ಶಕ್ತಿಗಳು, ಅದರಿಂದಾಗಿ ಕಣಿವೆಯಲ್ಲಾದ ರಕ್ತಪಾತಗಳು ಮತ್ತು ಜಗ್ಮೋಹನ್ ಎಂಬ ರಾಜ್ಯಪಾಲರ ಪಕ್ಷಪಾತಿ ನಿಲುವುಗಳು.. ಎಲ್ಲವೂ ಚರಿತ್ರೆಗೆ ಸೇರಿ ಹೋಗಿವೆ. ಇವತ್ತು ಕಾಶ್ಮೀರವನ್ನು ಪ್ರತಿ ನಿಧಿಸುತ್ತಿರುವುದು ಒಂದಾನೊಂದು ಕಾಲದ ಮಂದಿಯಲ್ಲ. ಯುವ ಸಮೂಹ. ಅವರನ್ನು ವಿಶ್ವಾಸದಿಂದ ನಡೆಸಿಕೊಳ್ಳುವ ಬದಲು ಪ್ರತ್ಯೇಕತಾವಾದಿಗಳಂತೆ ನಡೆಸಿಕೊಂಡರೆ ಕಣಿವೆ ಶಾಂತವಾಗುವುದಾದರೂ ಹೇಗೆ? ಕಾಶ್ಮೀರದಲ್ಲಿ ಮಾನವ ಹಕ್ಕುಗಳಿಗೆ ಭಾರೀ ತೂಕವೇನೂ ಇಲ್ಲ. ಹಕ್ಕುಗಳ ಬಗ್ಗೆ ತೀವ್ರ ನಿರಾಶೆಗೊಂಡ ಒಂದು ದೊಡ್ಡ ಸಮೂಹವೇ ಅಲ್ಲಿ ನಿರ್ಮಾಣವಾಗಿದೆ. ಕಾಶ್ಮೀರವು ಇವತ್ತು ಮಾಧ್ಯಮಗಳಲ್ಲಿ ಸುದ್ದಿಯಾಗಬೇಕಾದರೆ ನಾಲ್ಕೈದು ಮಂದಿಯ ಸಾವಾದರೂ ಸಂಭವಿಸಬೇಕು ಎಂಬಂಥ ವಾತಾವರಣವಿದೆ. ಇಂಥ ಸ್ಥಿತಿಯಲ್ಲಿ ಕಾಶ್ಮೀರವನ್ನು ಭಾರತದ ಭಾಗ ಎಂದು ಡಂಗುರ ಸಾರುವುದರಿಂದ ಏನು ಲಾಭವಿದೆ? ಕಾಶ್ಮೀರಿಗಳನ್ನು ವಿಶ್ವಾಸದಿಂದ ನಡೆಸಿಕೊಳ್ಳದ ಹೊರತು ಅವರನ್ನು ಭಾಗವಾಗಿಸುವುದಾದರೂ ಹೇಗೆ?
   ಕಾಶ್ಮೀರದ ಯುವ ಸಮೂಹದ ಆಗ್ರಹಗಳಿಗೆ ಕಿವಿಯಾಗುವ ಮತ್ತು ಅವರಲ್ಲಿ ಭರವಸೆ ತುಂಬುವ ಕೆಲಸ ತೀವ್ರಗತಿಯಲ್ಲಿ ನಡೆಯಬೇಕಿದೆ. ಕಾಶ್ಮೀರಿಗಳೆಂದರೆ ಭಯೋತ್ಪಾದಕರಲ್ಲ, ನಮ್ಮ ಸಹೋದರರು ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕಿದೆ. ಕ್ರಿಕೆಟ್ ಆಟಗಾರನ ಬ್ಯಾಗ್‍ನಲ್ಲಿ ಬಾಂಬು ಹುಡುಕುವ, ಪ್ರತಿ ಮನೆಯಲ್ಲೂ ಭಯೋತ್ಪಾದಕನನ್ನು ಕಾಣುವ, ಕಾಶ್ಮೀರ ಎಂಬ ಭೂಮಿಯನ್ನು ಮಾತ್ರ ಪ್ರೀತಿಸುವ ನಮ್ಮ ಸಣ್ಣ ಮನಸನ್ನೂ ತುಸು ವಿಶಾಲಗೊಳಿಸಬೇಕಿದೆ.

No comments:

Post a Comment