Wednesday, 23 October 2013

ಕಾರು ಎಂಬ ಸೌoದರ್ಯ ಮತ್ತು ಸೈಕಲ್ ಎಂಬ ಕುರೂಪ


ಈ ಸುದ್ದಿಗಳನ್ನು ಓದಿ
  1. 174 ದೊಡ್ಡ ಮತ್ತು ಸಣ್ಣ ರಸ್ತೆಗಳಲ್ಲಿ ಸೈಕಲ್ ಸಂಚಾರವನ್ನು ನಿಷೇಧಿಸುವ ಪಶ್ಚಿಮ ಬಂಗಾಲ ಸರಕಾರದ ತೀರ್ಮಾನದ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ.
  2. ಕಳೆದ 10 ವರ್ಷಗಳಲ್ಲಿ ಸ್ಲಮ್ ನಿವಾಸಿಗಳ ಸಂಖ್ಯೆಯಲ್ಲಿ 25% ಹೆಚ್ಚಳವಾಗಿದ್ದು, ಸ್ಲಮ್ ಮುಕ್ತ ನಗರ ನಿರ್ಮಾಣಕ್ಕೆ ಹಿನ್ನಡೆಯಾಗಿದೆ.
  ಮಾಧ್ಯಮಗಳಲ್ಲಿ ಕಳೆದ ವಾರ ಪ್ರಕಟವಾದ ಈ ಎರಡೂ ಸುದ್ದಿಗಳಲ್ಲಿ ಒಂದು ಪ್ರಮುಖ ಹೋಲಿಕೆಯಿದೆ. ಅದೇನೆಂದರೆ, ಇವೆರಡೂ ಜನಸಾಮಾನ್ಯರಿಗೆ ಸಂಬಂಧಿಸಿದವು. ಸೈಕಲ್ ಶ್ರೀಮಂತರ ಸಂಕೇತ ಅಲ್ಲ. ಅದು ಬಡವರಷ್ಟೇ ತೆಳ್ಳಗೆ. ತೂಕವೂ ಕಡಿಮೆ. ಆಧುನಿಕ ಕಾರುಗಳ ಯಾವ ಥಳಕು-ಬಳುಕೂ ಜನಸಾಮಾನ್ಯರ ಸೈಕಲ್‍ಗಳಿಗಿಲ್ಲ. ಕೂಲಿ ಕಾರ್ಮಿಕರ ನರಗಳಂತೆ ಅದರ ಚಕ್ರದ ಸರಿಗೆಗಳು ಎದ್ದು ಕಾಣುತ್ತವೆ. ಮಳೆಗೆ ಒದ್ದೆಯಾಗದೇ ಬಿಸಿಲಿಗೆ ಬೆವರದೇ ಇರುವ ವ್ಯವಸ್ಥೆ ಶ್ರೀಮಂತರ ವಾಹನಗಳಲ್ಲಿರುವಾಗ ಸೈಕಲ್‍ನಲ್ಲಿ ಅಂಥ ವ್ಯವಸ್ಥೆಯೇ ಇಲ್ಲ. ಭೂಮಿಯಿಂದ ಅಗೆದು ತೆಗೆದ ತೈಲವನ್ನು ಸೈಕಲ್ ಸ್ವೀಕರಿಸುವುದಿಲ್ಲ. ಶ್ರೀಮಂತರು ಆಧುನಿಕ ಕಾರುಗಳಲ್ಲಿ ಆರಾಮವಾಗಿ ಪ್ರಯಾಣಿಸುವಾಗ, ಬಡವರು ಸೈಕಲನ್ನು ತುಳಿದುಕೊಂಡೋ ದೂಡಿಕೊಂಡೋ ಸಂಚರಿಸುತ್ತಾರೆ. ಕಾರು, ರಿಕ್ಷಾ, ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ಸ್ಥಳಗಳಿರುವಂತೆ ಸೈಕಲ್‍ಗೆಂದೇ ಅಂಥ ಪಾರ್ಕಿಂಗ್‍ಗಳಿರುವುದು ತೀರಾ ಕಡಿಮೆ. ಒಂದು ರೀತಿಯಲ್ಲಿ, ಸೈಕಲ್ ಮತ್ತು ಅದರಲ್ಲಿ ಸಂಚರಿಸುವವರ ಈ ಕೊರತೆಗಳನ್ನು ಆಧುನಿಕ ಆಲೋಚನೆಗಳು ಇವತ್ತು ದೌರ್ಬಲ್ಯ ಎಂದು ತೀರ್ಮಾನಿಸುವ ಹಂತಕ್ಕೆ ತಲುಪಿಬಿಟ್ಟಿವೆ. ನಗರ ಸುಂದರವಾಗಿ ಕಾಣಿಸಬೇಕಾದರೆ ಸೈಕಲ್‍ಗಳು ಇಲ್ಲವಾಗಬೇಕು, ತಳ್ಳುಗಾಡಿಗಳು ತೊಲಗಬೇಕು, ಕೈಗಾಡಿಗಳು ಕಾಣಿಸಿಕೊಳ್ಳಬಾರದು.. ಎಂದೆಲ್ಲಾ ಅವು ಅಂದುಕೊಂಡಿವೆ. ಅದಕ್ಕೆ ಪೂರಕವಾಗಿ ಕಾನೂನು ರೂಪಿಸುವಂತೆ ಅವು ಸರಕಾರಗಳ ಮೇಲೆ ಒತ್ತಡ ಹೇರುತ್ತಿವೆ.
  ದುರಂತ ಏನೆಂದರೆ, ಉತ್ತರ ಪ್ರದೇಶದ ದೌಂಡಿಯಾ ಖೇರಾ ಗ್ರಾಮದಲ್ಲಿ ನಡೆಯುತ್ತಿರುವ ನಿಧಿ ಶೋಧವು ಹುಟ್ಟು ಹಾಕಿರುವ ಕುತೂಹಲ. ಮಾಧ್ಯಮಗಳಲ್ಲಿ ಪ್ರತಿದಿನದ ಚಟುವಟಿಕೆಗಳು ವರದಿಯಾಗುತ್ತಿವೆ. ಎಷ್ಟು ಅಗಲ, ಉದ್ದದಲ್ಲಿ, ಎಷ್ಟು ಸೆಂಟಿ ವಿೂಟರ್ ಜಾಗವನ್ನು ಅಗೆಯಲಾಯಿತು ಎಂಬೆಲ್ಲಾ ಮಾಹಿತಿಗಳನ್ನು ಅವು ಭಾರೀ ಆಸಕ್ತಿಯಿಂದ ಪ್ರಕಟಿಸುತ್ತಿವೆ. ನಿಜವಾಗಿ, ಇನ್ನೂ ಖಚಿತವಲ್ಲದ ನಿಧಿಯ ಬಗ್ಗೆ ನಮ್ಮ ವ್ಯವಸ್ಥೆ ತೋರ್ಪಡಿಸುತ್ತಿರುವ ಆಸಕ್ತಿಯ ಸಣ್ಣ ಪ್ರಮಾಣವನ್ನಾದರೂ ಬಡವರ ಬಗ್ಗೆ ತೋರಿಸುತ್ತಿದ್ದರೆ, ಸೈಕಲ್ ಇವತ್ತು ನಿಷೇಧಕ್ಕೆ ಅರ್ಹವಾಗುವಷ್ಟು ಅಪಾಯಕಾರಿ ವಾಹನ ಆಗುತ್ತಿರಲಿಲ್ಲ. ಕನಿಷ್ಠ, ಪರ್ಯಾಯ ರಸ್ತೆಯ ವ್ಯವಸ್ಥೆಯನ್ನೇ ಮಾಡದೆ ಸೈಕಲನ್ನು ನಿಷೇಧಿಸಲಾಗುತ್ತದೆಂದರೆ, ಅದನ್ನು ‘ಬಡವರಿಗೆ ನಿಷೇಧ’ ಎಂದಲ್ಲದೇ ಬೇರೇನೆಂದು ವ್ಯಾಖ್ಯಾನಿಸಲು ಸಾಧ್ಯ? ಹಾಗಾದರೆ, ಜಾಗದ ದುರುಪಯೋಗ ಎಂದು ವಾದಿಸಿ ಶ್ರೀಮಂತರ ಬೃಹತ್ ಬಂಗಲೆಗಳನ್ನು ನಮ್ಮ ವ್ಯವಸ್ಥೆ ನಿಷೇಧಿಸಬಲ್ಲುದೇ? ತಾನು, ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳಿಗಾಗಿ ಮುಖೇಶ್ ಅಂಬಾನಿ ಕಟ್ಟಿದ 27 ಅಂತಸ್ತಿನ ಮನೆಯ ಬಗ್ಗೆ ವ್ಯವಸ್ಥೆಯ ನಿಲುವೇನು? ಆ ದುಡ್ಡಿನಲ್ಲಿ ಸ್ಲಂನಲ್ಲಿ ಜೀವಿಸುವ ಅನೇಕಾರು ಮಂದಿಗೆ ಮನೆಗಳನ್ನು ನಿರ್ಮಿಸಿಕೊಡಬಹುದಿತ್ತು ಎಂದು ಅದು ಹೇಳುತ್ತದೆಯೇ? 5 ಮಂದಿಯ ಕುಟುಂಬವು 10ಕ್ಕಿಂತಲೂ ಹೆಚ್ಚು ಆಧುನಿಕ ವಾಹನಗಳನ್ನು ಪೇರಿಸಿಕೊಟ್ಟುಕೊಂಡು ಬದುಕುತ್ತಿರುವುದು ನಮ್ಮ ವ್ಯವಸ್ಥೆಗೇಕೆ ಅಸಂಗತ ಅನ್ನಿಸುತ್ತಿಲ್ಲ? ವಾಹನ ದಟ್ಟಣೆಗೆ, ತೈಲದ ದುರ್ಬಲಕೆಗೆ ಇಂಥ ಐಶಾರಾಮದ ಬದುಕು ಕಾರಣ ಎಂದು ಹೇಳಿ ಅವನ್ನು ನಿಷೇಧಿಸುವುದಕ್ಕೇಕೆ ಮುಂದಾಗುತ್ತಿಲ್ಲ? ಒಂದು ಕಡೆ, ನಮ್ಮ ವ್ಯವಸ್ಥೆ ಓರ್ವ ಸಾಧುವಿನ ಕನಸನ್ನು ಬೆನ್ನಟ್ಟಿಕೊಂಡು ಬುಲ್ಡೋಜರ್‍ನೊಂದಿಗೆ ಅಗೆಯಲು ಪ್ರಾರಂಭಿಸುತ್ತದೆ. ಇನ್ನೊಂದು ಕಡೆ, ಇದೇ ವ್ಯವಸ್ಥೆ ಇದೇ ಬುಲ್ಡೋಜರನ್ನು ಸ್ಲಂಗಳ ಧ್ವಂಸಕ್ಕಾಗಿ ಕಳುಹಿಸುತ್ತದೆ. ನಮ್ಮ ವ್ಯವಸ್ಥೆಗೆ ದುಡ್ಡು, ಶ್ರೀಮಂತರು ಅಗತ್ಯವೇ ಹೊರತು ಬಡವರು, ಸೈಕಲ್‍ಗಳು ಅಲ್ಲ ಎಂಬುದನ್ನಲ್ಲವೇ ಇವು ಸಮರ್ಥಿಸುತ್ತಿರುವುದು?
  ನಿಜವಾಗಿ, ಸ್ಲಮ್‍ಗಳ ಸಂಖ್ಯೆ ವರ್ಷಂಪ್ರತಿ ಹೆಚ್ಚಳವಾಗುತ್ತಿದೆಯೆಂದರೆ ನಮ್ಮನ್ನಾಳುವವರ ಆಲೋಚನೆಗಳು ದಿನೇ ದಿನೇ ಶ್ರೀಮಂತರಿಂದ ಪ್ರಭಾವಿತಗೊಳ್ಳುತ್ತಿವೆ ಎಂದೇ ಅರ್ಥ. ಅವರು ಬೇಕೆಂದ ಕಡೆ ನಮ್ಮ ವ್ಯವಸ್ಥೆ ಭೂಮಿಯನ್ನು ಒದಗಿಸುತ್ತದೆ. ಅವರಿಗೆ ಸಬ್ಸಿಡಿ ದರದಲ್ಲಿ ಸಾಲ ಕೊಡುತ್ತದೆ. ಒಂದು ಹಂತದ ವರೆಗೆ ಉಚಿತವಾಗಿ ನೀರು, ವಿದ್ಯುತ್ ಒದಗಿಸುತ್ತದೆ. ಅವರ ಕೈಯಲ್ಲಿ ಈ ದೇಶದ ಭವಿಷ್ಯವಿದೆ ಎಂದು ನಮ್ಮನ್ನಾಳುವವರು ತೀರ್ಮಾನಿಸಿರುವುದರಿಂದ ಅವರಿಗಾಗಿ ಈ 'ಸೈಕಲ್ ಮನುಷ್ಯರನ್ನು' ಒಕ್ಕಲೆಬ್ಬಿಸಬೇಕಾಗುತ್ತದೆ. ತಮ್ಮದೇ ಆದ ತುಂಡು ಭೂಮಿ, ಕೆಲಸಗಳನ್ನು ತೊರೆದು ಈ ಮಂದಿ ಎಲ್ಲೆಲ್ಲಿಗೋ ಹೋಗಬೇಕಾಗುತ್ತದೆ. ಅನೇಕ ಬಾರಿ ಪರಿಹಾರದ ಹೆಸರಲ್ಲಿ ಅವರ ಕೈಗೆ ಬರುವ ದುಡ್ಡು ಹೊಸತೊಂದು ಮನೆ ಖರೀದಿಸುವುದಕ್ಕೋ ವ್ಯಾಪಾರ ಆರಂಭಿಸುವುದಕ್ಕೋ ಸಾಲುವುದಿಲ್ಲ. ಪ್ರತಿಭಟನೆ, ಅದು-ಇದು ಎಂದು ಅತ್ತಿತ್ತ ಓಡಾಡಿಯೇ ದುಡ್ಡಿನ ದೊಡ್ಡದೊಂದು ಪಾಲು ಅದಾಗಲೇ ಮುಗಿದಿರುತ್ತದೆ. ಇಂಥವರು ಕೊನೆಗೆ ಸ್ಲಮ್‍ಗಳಂಥ ಪ್ರದೇಶಗಳಲ್ಲಿ ಬಿಡಾರ ಹೂಡುವ ಅನಿವಾರ್ಯತೆ ತಲೆದೋರುತ್ತದೆ. ಸರಿಯಾದ ಉದ್ಯೋಗವಾಗಲಿ, ಮನೆಯಾಗಲಿ ಇಲ್ಲದೇ ಅಪರಿಚಿತ ಪ್ರದೇಶದಲ್ಲಿ ಬದುಕುವ ಓರ್ವ ಬಡವನನ್ನು ಊಹಿಸಿ.. ಆತನನ್ನು ಮತ್ತು ಅಂಥ ಅಸಂಖ್ಯ ಸಂತ್ರಸ್ತರನ್ನು ನಗರದ ಸೌಂದರ್ಯಕ್ಕೆ ಕಳಂಕ ಎಂದು ನಾವು ತೀರ್ಮಾನಿಸುವಾಗ ಅಂಥದ್ದೊಂದು ಪರಿಸ್ಥಿತಿಯನ್ನು ನಿರ್ಮಿಸಿದವರ ಬಗ್ಗೆ ನಮ್ಮಲ್ಲೇಕೆ ಆಕ್ರೋಶ ವ್ಯಕ್ತವಾಗುತ್ತಿಲ್ಲ? ಅಭಿವೃದ್ಧಿ ಎಂಬುದು ಬಡವನ ಮನೆ, ಗದ್ದೆ, ಸೈಕಲನ್ನು ಧ್ವಂಸ ಮಾಡಿ ಸಾಧಿಸುವಂಥದ್ದೇ? ಸ್ಲಮ್ ಮುಕ್ತ ನಗರ, ಸೈಕಲು ಮುಕ್ತ ರಸ್ತೆ ಎಂಬೆಲ್ಲ ಪ್ರಾಸಬದ್ಧ ವಾಕ್ಯಗಳನ್ನು ರಚಿಸುವುದು ಸುಲಭ. ಅದು ಕೇಳಲೂ ಇಂಪಾಗಿರುತ್ತದೆ. ಆದರೆ, ಎಲ್ಲ ಅಭಿವೃದ್ಧಿ ಮತ್ತು ಸೌಂದರ್ಯದ ಕಲ್ಪನೆ ಬಡವರನ್ನು ಗುರಿಯಾಗಿಸಿಕೊಂಡೇ ಯಾಕೆ ಬರುತ್ತವೆ? ಬಡತನ ಎಂಬುದು ಖಂಡಿತ ಕುರೂಪದ ಹೆಸರಲ್ಲ. ಅದನ್ನು ನಮ್ಮ ವ್ಯವಸ್ಥೆ ಕುರೂಪ ಎಂದು ಭಾವಿಸುತ್ತದಾದರೆ ಆ ಕುರೂಪತನದ ಹೊಣೆಯನ್ನು ವ್ಯವಸ್ಥೆಯೇ ವಹಿಸಿಕೊಳ್ಳಬೇಕು. ಆ ಕುರೂಪತನವನ್ನು ಸೌಂದರ್ಯವಾಗಿ ಮಾರ್ಪಡಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಬೇಕು. ಅದು ಬಿಟ್ಟು, ಬಡವರ ಅಸ್ತಿತ್ವ, ಸಂಕೇತಗಳನ್ನೇ ನಿಷೇಧಿಸುವುದು ವ್ಯವಸ್ಥೆಯ ಕುರೂಪತನವನ್ನಷ್ಟೇ ತೋರಿಸುತ್ತದೆ.
  ನಿಜವಾಗಿ, ಶ್ರೀಮಂತರು ಮತ್ತು ಬಡವರು ಒಂದು ವ್ಯವಸ್ಥೆಯ ಎರಡು ಕಣ್ಣುಗಳೇ ಹೊರತು ಅದರಲ್ಲಿ ಒಂದನ್ನು ಸುಂದರ ಮತ್ತು ಇನ್ನೊಂದನ್ನು ಕುರೂಪ ಎಂದು ವಿಭಜಿಸುವುದೇ ತಪ್ಪು. ಒಂದು ಪ್ರದೇಶದ ಶ್ರೀಮಂತರು ಒಟ್ಟು ಸೇರಿ ತಮ್ಮ ಪ್ರದೇಶದ ಬಡವರ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವಂತಹ ಪ್ರಯತ್ನಗಳು ನಡೆದರೆ ಶ್ರೀಮಂತರನ್ನು ಬಡವರು ಅಸೂಯೆಯಿಂದ ನೋಡುವ ಸಂದರ್ಭಗಳು ಕೊನೆಗೊಂಡೀತು. ಮನಸ್ಸು ಮಾಡಿದರೆ ಬಡವರನ್ನು ಸಬಲರನ್ನಾಗಿಸುವುದಕ್ಕೆ ಹತ್ತು-ಹಲವು ಅವಕಾಶಗಳು ಖಂಡಿತ ಇವೆ. ವರ್ಷಕ್ಕೊಮ್ಮೆ ತಮ್ಮ ಲಾಭದ ಒಂದಂಶವನ್ನು ಒಟ್ಟು ಸೇರಿಸಿ ತಮ್ಮ ಪ್ರದೇಶದ ಬಡವನನ್ನು ಸಬಲನನ್ನಾಗಿಸುವುದಕ್ಕೆ ಶ್ರೀಮಂತರು ವಿನಿಯೋಗಿಸಬಹುದು. ಆತ ಆ ದುಡ್ಡನ್ನು ವ್ಯಾಪಾರದಲ್ಲೋ ಇನ್ನಿತರ ಮಾರ್ಗದಲ್ಲೋ ಹೂಡಿ ಸಬಲನಾಗುವಂತೆ ನೋಡಿಕೊಳ್ಳಬಹುದು. ಇಂಥ ಕ್ರಮಕ್ಕೆ ಯಾರಾದರೂ ಚಾಲನೆ ಕೊಟ್ಟರೆ ಖಂಡಿತ ಮುಂದೊಂದು ದಿನ ಅದು ಚಳವಳಿಯಾಗಿ ಮಾರ್ಪಾಡಬಹುದಲ್ಲದೇ ಶ್ರೀಮಂತರನ್ನು ಅಭಿಮಾನದಿಂದ ನೋಡುವ ವರ್ಗವೊಂದು ಬೆಳೆದು ಬಂದೀತು. ಆದ್ದರಿಂದ, ಸೈಕಲ್ ಇಲ್ಲದ ರಸ್ತೆ ಮತ್ತು ಸ್ಲಂಗಳಿಲ್ಲದ ಪಟ್ಟಣವನ್ನು ನಿರ್ಮಿಸಲು ಹೊರಟಿರುವ ವ್ಯವಸ್ಥೆಯು, `ಸೈಕಲ್‍ಗಳನ್ನೂ' `ಸ್ಲಂಗಳನ್ನೂ' ಸುಂದರಗೊಳಿಸಲು ಪ್ರಯತ್ನಿಸಬೇಕಾಗಿದೆ. ಸ್ಲಂಗಳಲ್ಲಿ ವಾಸಿಸುವವರು ಮತ್ತು ಸೈಕಲ್‍ನಲ್ಲಿ ಪ್ರಯಾಣಿಸುವವರು ದ್ವಿತೀಯ ದರ್ಜೆಯ ನಾಗರಿಕರಲ್ಲ ಎಂದು ಸಾರಬೇಕಾಗಿದೆ.

No comments:

Post a Comment