Monday, 11 November 2013

ಯಾವುದು ನಂಬಿಕೆ, ಯಾವುದೆಲ್ಲ ಮೂಢನಂಬಿಕೆ?

    ಯಾವುದು ನಂಬಿಕೆ, ಯಾವುದೆಲ್ಲ ಮೂಢನಂಬಿಕೆ ಎಂದು ವಿಭಜಿಸುವುದಕ್ಕೆ ನಮ್ಮಲ್ಲಿರುವ ಮಾನದಂಡಗಳು ಯಾವುವು? ವಿಚಾರವಾದಿಗಳಿಗೆ ಮೂಢನಂಬಿಕೆಯಂತೆ ಕಾಣುವ ಆಚರಣೆಯೊಂದು ಆಸ್ತಿಕರಿಗೆ ನಂಬಿಕೆಯಾಗಿ ಕಾಣಬಹುದು. ಆಸ್ತಿಕರಿಗೆ ನಿಂದನೆಯಂತೆ ಕಾಣುವ ವಿಷಯವೊಂದು ನಾಸ್ತಿಕರಿಗೆ ಬಂಡಾಯ ಪ್ರವೃತ್ತಿಯಂತೆ ಗೋಚರಿಸಬಹುದು. ನಂಬಿಕೆಗೂ ಮೂಢನಂಬಿಕೆಗೂ ನಡುವೆ ಸಮಾಜ ಎಳೆದಿರುವ ಗೆರೆ ಬಹಳ ತೆಳುವಾದದ್ದು. ಒಂದು ಧರ್ಮ ನಂಬಿಕೆಯಾಗಿ ಒಪ್ಪಿಕೊಂಡಿರುವುದನ್ನು ಇನ್ನೊಂದು ಧರ್ಮ ಹಾಗೆಯೇ ಒಪ್ಪಿಕೊಳ್ಳಬೇಕೆಂದಿಲ್ಲ. ಇಸ್ಲಾಮ್ ಏಕದೇವವಾದವನ್ನು ಪ್ರತಿ ಪಾದಿಸುತ್ತದೆ. ವಿಗ್ರಹ ಆರಾಧನೆಯು ಇಸ್ಲಾಮಿನ ಮಟ್ಟಿಗೆ ಅನ್ಯವಾದದ್ದು. ಒಂದು ರೀತಿಯಲ್ಲಿ ಮೂಢ ಆರಾಧನೆ. ಸುನ್ನತಿ ಕರ್ಮವನ್ನು ಮುಸ್ಲಿಮರು ಬಹಳ ಶ್ರದ್ಧೆಯಿಂದ ಪಾಲಿಸುತ್ತಾರೆ. ಮುಸ್ಲಿಮೇತರರ ಮಟ್ಟಿಗೆ ಅದು ಅತಿರೇಕ ಮತ್ತು ಮೂಢ ಆಚರಣೆಯಾಗಿ ಕಾಣಬಹುದು. ಇವು ಒಂದೆರಡು ಉದಾಹರಣೆಗಳಷ್ಟೇ. ಇಂಥವುಗಳ ಪಟ್ಟಿ ಸಾಕಷ್ಟು ಉದ್ದವಿದೆ. ಹೀಗಿರುವಾಗ, ಸಿದ್ಧರಾಮಯ್ಯರು ಜಾರಿಗೆ ತರಲು ಹೊರಟಿರುವ ಮೂಢನಂಬಿಕೆ ತಡೆ ಮಸೂದೆಯನ್ನು ಒಂದೇ ಏಟಿಗೆ ಸ್ವಾಗತಾರ್ಹವೆಂತಲೋ ಖಂಡನಾರ್ಹವೆಂತಲೋ ಷರಾ ಬರೆದು ಬಿಡುವುದು ತಪ್ಪಾಗಬಹುದು. ಮುಖ್ಯವಾಗಿ, ಮಸೂದೆಯ ಅಂಶಗಳು ಇನ್ನೂ ಸಾರ್ವಜನಿಕವಾಗಿ ಬಿಡುಗಡೆಗೊಂಡಿಲ್ಲ. ಅದರಲ್ಲಿ ಏನೇನಿವೆ, ಯಾವುದನ್ನೆಲ್ಲ ಮೂಢನಂಬಿಕೆಯಾಗಿ ಪಟ್ಟಿ ಮಾಡಲಾಗಿದೆ, ಹಿಂದೂ ಧರ್ಮವನ್ನು ಮಾತ್ರ ಕೇಂದ್ರೀಕರಿಸಿ ಕರಡು ಪ್ರತಿಯನ್ನು ರಚಿಸಲಾಗಿದೆಯೇ.. ಮುಂತಾದ ಪ್ರಶ್ನೆಗಳಿಗೆ ಸೂಕ್ತ ಉತ್ತರ ದೊರೆಯಬೇಕಾದರೆ ಮಸೂದೆಯು ಸಾರ್ವಜನಿಕವಾಗಿ ಬಹಿರಂಗಗೊಳ್ಳಬೇಕು. ದುರಂತ ಏನೆಂದರೆ, ಕೆಲವು ನಿರ್ದಿಷ್ಟ ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳು ಕರಡು ಪ್ರತಿಯ ವಿರುದ್ಧ ಸಮರವನ್ನೇ ಸಾರಿಬಿಟ್ಟಿವೆ. ಮಸೂದೆಯನ್ನು ‘ಹಿಂದೂ ವಿರೋಧಿ' ಎಂಬಲ್ಲಿ ವರೆಗೆ ಅವು ತಂದು ಮುಟ್ಟಿಸಿವೆ. ‘ಮೂಢನಂಬಿಕೆ ವಿರೋಧಿ ಮಸೂದೆ’ಯನ್ನು ನಂಬಿಕೆ ವಿರೋಧಿ ಮಸೂದೆಯೆಂಬಂತೆ ತಪ್ಪಾಗಿ ಬಿಂಬಿಸುವ ಪ್ರಯತ್ನದಲ್ಲಿ ಅವು ತಮ್ಮನ್ನು 24 ಗಂಟೆಯೂ ತೊಡಗಿಸಿಕೊಂಡಿವೆ. ಇಷ್ಟಕ್ಕೂ, ಮಸೂದೆಯ ರಚನಾ ಮಂಡಳಿಯಲ್ಲಿ ಇರುವವರನ್ನು ನೋಡಿಕೊಂಡು ಒಟ್ಟು ಸಮೂದೆಯ ಭವಿಷ್ಯವನ್ನೇ ನಿರ್ಧರಿಸುವುದಕ್ಕೆ ಏನೆನ್ನಬೇಕು? ಮಸೂದೆಯೊಂದು ಸ್ವೀಕಾರಾರ್ಹವೋ ಅಲ್ಲವೋ ಎಂಬುದನ್ನು ನಿರ್ಧರಿಸುವುದಕ್ಕೆ ಮಸೂದೆಯಲ್ಲಿ ಅಡಕವಾಗಿರುವ ಅಂಶಗಳು ಮಾನದಂಡವಾಗಬೇಕೇ ಹೊರತು ಅದನ್ನು ರಚಿಸಿದವರು ಅಲ್ಲವಲ್ಲ. ಸದ್ಯ ಈ ಮಸೂದೆಯನ್ನು ವಿರೋಧಿಸುತ್ತಿರುವ ನಿರ್ದಿಷ್ಟ ವರ್ಗವೊಂದರ ಭಾಷೆ, ವಾದ ಮಂಡನೆ, ಆಕ್ರೋಶದ ಧಾಟಿಯನ್ನು ನೋಡುವಾಗ ಅವರ ಉದ್ದೇಶ ಶುದ್ಧಿಯ ಬಗ್ಗೆಯೇ  ಅನುಮಾನ ಉಂಟಾಗುತ್ತದೆ.
   ಹಾಗಂತ, ಎಲ್ಲ ಧರ್ಮಗಳೂ ವಿರೋಧಿಸುವ ಅನೇಕ ಮೂಢನಂಬಿಕೆಗಳು ಸಮಾಜದಲ್ಲಿವೆ. ಅವು ಧರ್ಮದ ಮೂಲದಿಂದ ಹುಟ್ಟಿಕೊಂಡದ್ದಲ್ಲ. ಧರ್ಮಕ್ಕೂ ಅವುಗಳಿಗೂ ಸಂಬಂಧವೂ ಇರುವುದಿಲ್ಲ. ಆದರೆ, ಅವು ಸಮಾಜದ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆಯೆಂದರೆ, ಧರ್ಮವನ್ನೂ ಮೀರಿ ಅವು ವರ್ಚಸ್ಸು ಬೆಳೆಸಿಕೊಂಡಿವೆ. ಮಸೀದಿ, ದೇವಾಲಯ, ಚರ್ಚುಗಳಲ್ಲಿ ಸೇರುವುದಕ್ಕಿಂತ ಅಧಿಕ ಮಂದಿ ಇವತ್ತು ಇಂಥ ಮೂಢನಂಬಿಕೆಗಳ ಸುತ್ತ ನೆರೆಯುವುದಿದೆ. ಅಲ್ಲಿ ಶೋಷಣೆಯೂ ನಡೆಯುತ್ತದೆ. ಅತ್ಯಾಚಾರ, ವಂಚನೆಯೂ ನಡೆಯುತ್ತದೆ. ಒಂದು ಸರಕಾರ ತರುವ ಕಾನೂನು ಇಂಥ ಧರ್ಮ ವಿರೋಧಿ ನಂಬಿಕೆಗಳ ವಿರುದ್ಧವೇ ಆಗಿದ್ದರೆ ಅದನ್ನು ಸ್ವಾಗತಿಸಲೇಬೇಕು. ಆದರೆ ಅದಕ್ಕಿಂತಲೂ ಮೊದಲು, ಕಾನೂನಿಗಿಂತ ಹೊರತಾದ ಜಾಗೃತಿ ಕಾರ್ಯಕ್ರಮಗಳ ಮೂಲಕ ಇವನ್ನು ಅಳಿಸಬಹುದೇ ಎಂದು ಯೋಚಿಸುವುದೂ ಬಹಳ ಅಗತ್ಯ. ಯಾಕೆಂದರೆ, ನಂಬಿಕೆಗಳೆಂಬುದು ಕ್ರಿಮಿನಲ್ ಕೃತ್ಯಗಳಂತೆ ಅಲ್ಲ. ಕಳ್ಳತನ, ಅತ್ಯಾಚಾರ, ಕೊಲೆ ಮುಂತಾದುವುಗಳ ಜೊತೆ ವ್ಯವಹರಿಸು ವಂತೆ ಸಾಮಾಜಿಕ ನಂಬಿಕೆಗಳೊಂದಿಗೆ ವ್ಯವಹರಿಸುವುದು ತಪ್ಪು. ನಿರ್ದಿಷ್ಟ ನಂಬಿಕೆಯೊಂದು ಧರ್ಮ ವಿರೋಧಿಯೇ ಆಗಿದ್ದರೂ ಅದನ್ನು ಆಚರಿಸುವವರು ಆ ಬಗ್ಗೆ ಗಾಢ ಅಭಿಮಾನವನ್ನು ಹೊಂದಿರುತ್ತಾರೆ. ತಮ್ಮ ನಂಬಿಕೆಯಲ್ಲಿ ದೃಢ ವಿಶ್ವಾಸವನ್ನು ಇಟ್ಟಿರುತ್ತಾರೆ. ಅವರನ್ನು ತಿದ್ದುವುದಕ್ಕೆ ಲಾಠಿ, ಖಾಕಿಯನ್ನು ಬಳಸುವುದರಿಂದ ಸಂಘರ್ಷದ ವಾತಾವರಣವನ್ನು ಹುಟ್ಟು ಹಾಕಿದಂತಾಗುತ್ತದೆಯೇ ಹೊರತು, ಅವರನ್ನು ತಿದ್ದಿದಂತಲ್ಲ. ನಂಬಿಕೆಗೂ ಕ್ರಿಮಿನಲ್ ಕೃತ್ಯಕ್ಕೂ ನಡುವೆ ಇರುವ ಈ ವ್ಯತ್ಯಾಸ ವನ್ನು ವ್ಯವಸ್ಥೆ ಗಂಭೀರವಾಗಿ ಪರಿಗಣಿಸಬೇಕು. ಆದ್ದರಿಂದಲೇ, ಕಾನೂನು ಜಾರಿಗಿಂತಲೂ ಮೊದಲು ವ್ಯವಸ್ಥಿತ ಮತ್ತು ಪರಿಣಾಮಕಾರಿ ಜಾಗೃತಿ ಕಾರ್ಯಕ್ರಮವೊಂದನ್ನು ಸರಕಾರ ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸುವುದು. ಯಾಕೆಂದರೆ,      ಸಮಾಜ ಈ ವಂಚಕರನ್ನು ಮುಗ್ಧವಾಗಿ ಅನುಸರಿಸುತ್ತಿದೆ. ಅವರು ಹೇಳಿದಷ್ಟು ದುಡ್ಡು, ಹರಕೆ.. ಇನ್ನಿತರ ವಸ್ತುಗಳನ್ನು ಉದಾರವಾಗಿ ನೀಡುತ್ತಿದೆ. ಹೀಗಿರುವಾಗ, ಸರಕಾರವೇ, ‘ಮೂಢನಂಬಿಕೆ ವಿರೋಧಿ' ಅಭಿಯಾನವನ್ನು ಆರಂಭಿಸಿದರೆ ಒಳಿತಲ್ಲವೇ? ಯಾವುದೆಲ್ಲ ಮೂಢನಂಬಿಕೆ, ಧರ್ಮಕ್ಕೂ ಅದಕ್ಕೂ ಸಂಬಂಧಗಳೇನು, ಬೂದಿ ಬಾಬಾಗಳಿಗೆ ಧಾರ್ಮಿಕವಾಗಿ ಏನು ಸ್ಥಾನಮಾನವಿದೆ, ಧರ್ಮಗಳ ನಿಜವಾದ ಸಾರವೇನು.. ಎಂಬಿತ್ಯಾದಿ ವಿಷಯಗಳ ಸುತ್ತ ಎಲ್ಲ ಧರ್ಮದ ಪ್ರತಿನಿಧಿಗಳನ್ನು ಸೇರಿಸಿ ಸಮಾಜ ಶುದ್ಧಿ ಕಾರ್ಯಕ್ರಮವನ್ನು ಹಮ್ಮಿ ಕೊಂಡರೆ ಮೂಢನಂಬಿಕೆಯ ಜೊತೆ ಗುರುತಿಸಿಕೊಂಡ ಮುಗ್ಧರಲ್ಲಿ ದೊಡ್ಡದೊಂದು ವರ್ಗ ಆ ಬಗ್ಗೆ ಜಿಗುಪ್ಸೆ ತಾಳುವ ಸಾಧ್ಯತೆ ಇದೆ. ಅನೇಕ ಕಡೆ ಭಕ್ತರೇ ವಂಚಕರ ವಿರುದ್ಧ ಬಂಡೇಳಲೂ ಬಹುದು. ಇಂಥ ಪ್ರಯತ್ನಗಳು ವ್ಯಾಪಕ ಮಟ್ಟದಲ್ಲಿ ನಡೆದ ಬಳಿಕ ಕಾನೂನು ಜಾರಿಯ ಬಗ್ಗೆ ಚರ್ಚೆ, ಸಂವಾದಗಳು ನಡೆದರೆ ಅವು ಹೆಚ್ಚು ಅರ್ಥಪೂರ್ಣವಾಗುವುದಕ್ಕೆ ಅವಕಾಶಗಳಿವೆ.
   ಏನೇ ಆಗಲಿ, ಸಾಕಷ್ಟು ಅರ್ಥವ್ಯಾಪ್ತಿಯಿರುವ ನಂಬಿಕೆ-ಮೂಢನಂಬಿಕೆ ಎಂಬ ವಿಷಯಗಳ ಸುತ್ತ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹುಟ್ಟು ಹಾಕಿರುವ ಚರ್ಚೆಯನ್ನು ಒಂದೇ ಏಟಿಗೆ ಧರ್ಮವಿರೋಧಿ ಎಂಬ ಹಣೆಪಟ್ಟಿ ಹಚ್ಚಿ ತಿರಸ್ಕರಿಸಬೇಕಿಲ್ಲ. ಸಮಾಜದಲ್ಲಿರುವ ಮತ್ತು ಸಕಲ ಧರ್ಮಗಳೂ ವಿರೋಧಿಸುವ ಮೂಢನಂಬಿಕೆಗಳ ಪಟ್ಟಿ ಮಾಡುವುದಕ್ಕೆ ಮತ್ತು ಅವುಗಳಿಂದಾಗುವ ಹಾನಿಯನ್ನು ತಿಳಿದುಕೊಳ್ಳುವುದಕ್ಕೆ ಈ ಚರ್ಚೆ ಖಂಡಿತ ಉಪಯುಕ್ತವಾಗಬಹುದು. ಅಂಥದ್ದೊಂದು ಚರ್ಚೆಗೆ ಸಿದ್ಧರಾಮಯ್ಯರ ಕರಡು ಮಸೂದೆ ಪ್ರೇರಕವಾಗಲಿ ಎಂದು ಹಾರೈಸೋಣ.

No comments:

Post a Comment