Monday, 18 November 2013

ರನ್ನುಗಳ ರಾಶಿಯಲ್ಲಿ ಚರ್ಚೆಯಾಗದೇ ಉಳಿದ ಬಾಲ್ಯ

    ಕ್ರಿಕೆಟ್‍ಗೆ ವಿದಾಯ ಕೋರಿದ ಸಚಿನ್ ತೆಂಡುಲ್ಕರ್‍ರ ಸುತ್ತ ಟಿ.ವಿ. ಚಾನೆಲ್‍ಗಳು ಗಂಭೀರ ಚರ್ಚೆಯಲ್ಲಿ ಮುಳುಗಿದ್ದಾಗಲೇ ಅತ್ತ ಹೈದರಾಬಾದ್‍ನಲ್ಲಿ, ‘ಚಿಲ್ಡ್ರನ್ ಇನ್ ಮೀಡಿಯಾ: ರೈಟ್ಸ್ ಆಫ್ ಚೈಲ್ಡ್ ಆರ್ಟಿಸ್ಟ್' ಎಂಬ ವಿಷಯದ ಮೇಲೆ ಗೋಷ್ಠಿಯೊಂದು ನಡೆಯುತ್ತಿತ್ತು. ಗೋಷ್ಠಿಯ ಕೇಂದ್ರೀಯ ವಿಷಯದಲ್ಲಿ ಸಚಿನ್ ಇಲ್ಲದೇ ಇದ್ದರೂ ಸಚಿನ್ ಅಲ್ಲಿ ಪ್ರಸ್ತಾಪವಾದರು. ವಿಶ್ವನಾಥನ್ ಆನಂದ್ ಚರ್ಚೆಗೊಳಪಟ್ಟರು. ಖ್ಯಾತ ಚಿಂತಕ ಅಮೋಲ್ ಪಾಲೇಕರ್, ಬಬಿತಾ ಶರ್ಮಾ ಮತ್ತು ಡಾಕ್ಯುಮೆಂಟರಿ ನಿರ್ದೇಶಕಿ ಉಮಾ ಮಗಳ್... ಮುಂತಾದವರಿದ್ದ ಚರ್ಚೆಯು ಎಷ್ಟು ಆಸಕ್ತಿಕರವಾಗಿತ್ತೆಂದರೆ, ಸಚಿನ್‍ರ ಪ್ರಭಾವಳಿಯಲ್ಲಿ ಮಾಧ್ಯಮಗಳು ಹೇಗೆ ಬಹುಮುಖ್ಯ ವಿಚಾರವನ್ನು ಮರೆತುಬಿಟ್ಟಿವೆ ಎಂಬುದನ್ನು ಅವರು ಬಿಚ್ಚಿಟ್ಟರು. ಸಚಿನ್‍ರ ಶಿಕ್ಷಣ, ರಿಯಾಲಿಟಿ ಶೋಗಳಲ್ಲಿ ಬೊಂಬೆಗಳಂತೆ ಕಾಣುವ ಮಕ್ಕಳ ಮನಃಸ್ಥಿತಿ, ಸಿನಿಮಾದಲ್ಲಿರುವ ಬಾಲ ನಟರ ಮೇಲಿನ ಒತ್ತಡಗಳು.. ಎಲ್ಲವನ್ನೂ ಈ ಗೋಷ್ಠಿ ಅತ್ಯಂತ ಆಳವಾಗಿ ಚರ್ಚಿಸಿತು. ಒಂದು ವೇಳೆ; ರವಿಶಾಸ್ತ್ರಿ, ಗಂಗೂಲಿ, ಕಪಿಲ್, ಗವಾಸ್ಕರ್.. ಮುಂತಾದವರನ್ನು ಕೂರಿಸಿಕೊಂಡು ಟಿ.ವಿ. ಚಾನೆಲ್‍ಗಳು ‘ಸಚಿನ್ ವಿದಾಯ'ವನ್ನು ಚರ್ಚಿಸುವುದಕ್ಕಿಂತ ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಿರುತ್ತಿದ್ದರೆ, ಈ ದೇಶದ ಕೋಟ್ಯಂತರ ಮಕ್ಕಳು ಖಂಡಿತ ಸಂತಸಪಡುತ್ತಿದ್ದುವು.
   ಕ್ರಿಕೆಟ್‍ನಲ್ಲಿ ಸಚಿನ್ ರಾಶಿ ರಾಶಿ ರನ್ನುಗಳನ್ನು ಸಂಗ್ರಹಿಸಿರಬಹುದು. ಆದರೆ, ರನ್ನುಗಳ ಈ ಭರಾಟೆಯಲ್ಲಿ ಅವರಿಗೆ ತಮ್ಮ ಹೈಸ್ಕೂಲ್ ಶಿಕ್ಷಣವನ್ನು ಪೂರ್ಣಗೊಳಿಸಲೂ ಸಾಧ್ಯವಾಗಿಲ್ಲ. 19 ವರ್ಷದವರಿಗಿರುವ ಕ್ರಿಕೆಟ್ ತಂಡದ ನಾಯಕನಾಗಿದ್ದ ಉನ್ಮುಕ್ತ್ ಚಂದ್‍ಗೆ ಪಿಯು ಓದುವುದಕ್ಕೂ ಸಾಧ್ಯವಾಗುತ್ತಿಲ್ಲ. ಇನ್ನು, ಟಿ.ವಿ. ಚಾನೆಲ್‍ಗಳಲ್ಲಿ ಪ್ರದರ್ಶನದ ಬೊಂಬೆಗಳಾಗುತ್ತಿರುವ ಮಕ್ಕಳನ್ನು ನೋಡುವಾಗಲಂತೂ ದಿಗಿಲಾಗುತ್ತದೆ. ತಮ್ಮದಲ್ಲದ ಮಾತು, ವಯಸ್ಸನ್ನೂ ಮೀರಿದ ಪ್ರೌಢತೆ, ನಗು, ಹಾವ-ಭಾವಗಳನ್ನು ಆ ಮಕ್ಕಳು ಪ್ರದರ್ಶಿಸುತ್ತಿರುವುದು ಯಾರ ಒತ್ತಡದಿಂದ? ಯಾವುದೇ ಒಂದು ಮಗುವಿನ ವರ್ತನೆಗೂ ವಯಸ್ಸಿಗೂ ಖಂಡಿತ ಸಂಬಂಧವಿರುತ್ತದೆ. ನಿಜವಾಗಿ, 5 ವರ್ಷದ ಮಗು ಸಚಿನ್‍ನಂತೆ ಬ್ಯಾಟು ಬೀಸಬೇಕು ಎಂದು ಬಯಸುವುದು ಖಂಡಿತ ತಪ್ಪು. 10 ವರ್ಷದ ಹುಡುಗನಿಂದ ಮನ್‍ಮೋಹನ್ ಸಿಂಗ್‍ರ ಆರ್ಥಿಕ ನಡೆಗಳ ಬಗ್ಗೆ ವ್ಯಾಖ್ಯಾನವನ್ನು ಬಯಸುವುದಕ್ಕೆ ಯಾವ ಅರ್ಥವೂ ಇಲ್ಲ. ಪಿ.ಟಿ. ಉಷಾರ ಟ್ರ್ಯಾಕ್ ದಾಖಲೆಯನ್ನು ಪುಟಾಣಿಯೊಂದು ಅಳಿಸಿ ಹಾಕಬೇಕೆಂದು ಯಾರೂ ಬಯಸುತ್ತಿಲ್ಲ. ಯಾಕೆಂದರೆ, ಮಗು ಮಗುವೇ. ದೊಡ್ಡವರು ದೊಡ್ಡವರೇ. ಆದರೆ ನಾವೆಲ್ಲ ಸೇರಿಕೊಂಡು ಪುಟಾಣಿಗಳಿಂದ ಈ ‘ಮಗು’ತನವನ್ನು ಕಸಿದುಕೊಳ್ಳುತ್ತಿದ್ದೇವೆಯೇ ಎಂದು ಗಂಭೀರವಾಗಿ ಆಲೋಚಿಸಬೇಕಾಗಿದೆ. ಸಿನಿಮಾದಲ್ಲಿ ನಟಿಸುವ ಮಗುವನ್ನೇ ಎತ್ತಿಕೊಳ್ಳಿ. ಅದರ ಮುಂದೆ ಡಯಲಾಗ್‍ನ ಸಿದ್ಧ ಮಾದರಿಯೊಂದು ಇರುತ್ತದೆ. ಹಿರಿಯ ನಟರಂತೆ ಮಗುವಿಗೆ ಡಯಲಾಗನ್ನು ಹೇಳಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ಅದು ಮನನ ಮಾಡಲೇಬೇಕು. ಹೀಗೆ ಮನನ ಮಾಡಿದ್ದನ್ನು ಒಂದೇ ಬಾರಿ ಹೇಳಿ ಮುಗಿಸುವಂತಿಲ್ಲ. ಹೇಳುವ ರೀತಿ, ಆಂಗಿಕ ಅಭಿನಯ, ಭಾವಾಭಿವ್ಯಕ್ತತೆ.. ಎಲ್ಲವನ್ನೂ ಪರಿಗಣಿಸಲಾಗುತ್ತದೆ. ಹೀಗೆ, ಮತ್ತೆ ಮತ್ತೆ ಅಭಿನಯಿಸಬೇಕಾದ ಮತ್ತು ನಿರ್ದೇಶಕರಿಂದಲೋ ಸಹ ನಟರಿಂದಲೋ ಬೈಸಿಕೊಳ್ಳಬೇಕಾದ ಒತ್ತಡದಲ್ಲಿ ಮಗು ಸಿಲುಕುತ್ತದೆ. ಎಲ್ಲೋ ತಮ್ಮದಲ್ಲದ ಊರಿನಲ್ಲಿ ಅಭಿನಯಕ್ಕಾಗಿ ಕಾಯುತ್ತಾ, ಮತ್ತೆ ಮತ್ತೆ ಅಭಿನಯಿಸುತ್ತಾ ಬೆಳೆಯುವ ಮಗುವಿನ ಮನಃಸ್ಥಿತಿ ಹೇಗಿರಬಹುದು? ಅದು ಎದುರಿಸುವ ಒತ್ತಡಗಳ ಪ್ರಮಾಣ ಎಷ್ಟಿರಬಹುದು?
   ಟಿ.ವಿ.ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಮಕ್ಕಳ ಪರಿಸ್ಥಿತಿಯಂತೂ ಇದಕ್ಕಿಂತಲೂ ಭೀಕರ. ಅವುಗಳ ಬಾಲ್ಯವನ್ನು ತಮ್ಮ ಜನಪ್ರಿಯತೆಗಾಗಿ ಚಾನೆಲ್‍ಗಳು ಕಸಿದುಕೊಳ್ಳುತ್ತವೆ. ಒಂದು ಮಗು ಹಾಡುವುದು ಬೇರೆ, ಆ ಹಾಡಿಗಾಗಿ ದಿನ, ವಾರಗಟ್ಟಲೆ ಒತ್ತಡಕ್ಕೆ ಸಿಲುಕಿಸುವುದು ಬೇರೆ. ಕೇವಲ ಇವಷ್ಟೇ ಅಲ್ಲ- ವೇದಿಕೆಯಲ್ಲಿ ಹೇಗೆಲ್ಲ ಮಾತಾಡಬೇಕು, ದೊಡ್ಡವರೊಂದಿಗೆ ಹೇಗೆ ಕಿಚಾಯಿಸಬೇಕು, ಎಲ್ಲರ ಗಮನ ಕೇಂದ್ರವಾಗಲು ಹೇಗೆ ಆಂಗಿಕ ಅಭಿನಯ ಮಾಡಬೇಕು.. ಎಲ್ಲವನ್ನೂ ಮಗು ದೊಡ್ಡವರಿಂದ ಹೇಳಿಸಿಕೊಳ್ಳುತ್ತದೆ. ಇದರ ಮಧ್ಯೆ ಹೆತ್ತವರು ಕ್ಷಣಕ್ಷಣಕ್ಕೂ ಮಗುವಿಗೆ ತನ್ನ ಜವಾಬ್ದಾರಿಯನ್ನು ನೆನಪಿಸುತ್ತಿರುತ್ತಾರೆ. ಹೀಗೆ, ತನ್ನ ವಯಸ್ಸಿನ ಮಕ್ಕಳ ಜೊತೆ ಸ್ವಚ್ಛಂದವಾಗಿ ಬಾಲ್ಯವನ್ನು ಕಳೆಯಬೇಕಾದ ಮಕ್ಕಳನ್ನು ಜಗಮಗಿಸುವ ವೇದಿಕೆಯಲ್ಲಿ, ಹಿರಿಯರೊಂದಿಗೆ ಮಾತುಕತೆಗೆ ಇಳಿಸಲಾಗುತ್ತದೆ. ಒಂದು ರೀತಿಯಲ್ಲಿ, ಇದು ಪ್ರಾಣಿಯನ್ನು ಕಸಾಯಿಖಾನೆಗೆ ಒಯ್ದಂತೆ. ಕಸಾಯಿಖಾನೆಯು ಪ್ರಾಣಿಯ ಆಯ್ಕೆ ಅಲ್ಲ. ಅದು ಆ ಪ್ರಾಣಿಯ ಮಾಲಿಕ ಮತ್ತು ಖರೀದಿದಾರರ ಆಯ್ಕೆ. ಅದು ಅವರ ಆಣತಿಯಂತೆ ವರ್ತಿಸಬೇಕಾಗುತ್ತದೆಯೇ ಹೊರತು ತನ್ನತನವನ್ನಲ್ಲ. ಟಿ.ವಿ. ಚಾನೆಲ್‍ಗಳು, ಚಿತ್ರರಂಗ ಮತ್ತು ಮಕ್ಕಳ ಹೆತ್ತವರು ಇವತ್ತು ಮಾಡುತ್ತಿರುವುದು ಇದನ್ನೇ. ಮಕ್ಕಳನ್ನು ಅವರ ಹೆತ್ತವರಿಂದ ಖರೀದಿಸಿ ಶೋಗಳೆಂಬ ಕಸಾಯಿಖಾನೆಗೆ ಚಾನೆಲ್‍ಗಳು ಮತ್ತು ಚಿತ್ರರಂಗವು ಯೋಗ್ಯಗೊಳಿಸುತ್ತವೆ. ಮಕ್ಕಳು ‘ಕಸಾಯಿ’ಗೆ ಸಂಪೂರ್ಣ ಯೋಗ್ಯವೆಂದು ಮನವರಿಕೆಯಾದ ಬಳಿಕ ವೇದಿಕೆಯೆಂಬ ಕಸಾಯಿಖಾನೆಯಲ್ಲಿ ತಂದು ನಿಲ್ಲಿಸುತ್ತದೆ. ಪ್ರೇಕ್ಷಕರೆಂಬ ಖರೀದಿದಾರರು ಆ ಕಸಾಯಿಖಾನೆಯ ಸುತ್ತ ನೆರೆದಿರುತ್ತಾರೆಂಬುದು ಇವುಗಳಿಗೆ ಚೆನ್ನಾಗಿ ಗೊತ್ತು. ಹೀಗೆ ಹೆತ್ತವರನ್ನು ಮರುಳುಗೊಳಿಸಿ ಟಿ.ವಿ. ಚಾನೆಲ್‍ಗಳು ಮಕ್ಕಳನ್ನು ಬಲಿಪ್ರಾಣಿಯಂತೆ ಬಳಸಿ ಬಿಸಾಕುತ್ತಿವೆ. ಆ ಬಳಿಕ ಆ ಮಕ್ಕಳ ಭವಿಷ್ಯ ಏನಾಗಿದೆ, ಅವು ರಿಯಾಲಿಟಿ ಶೋಗಳ ಒತ್ತಡಗಳಿಂದ ಹೇಗೆ ಹೊರಬಂದಿವೆ, ಟಿ.ವಿ.ಗಳಲ್ಲಿ ಪ್ರದರ್ಶಿಸಿದ ಪ್ರತಿಭೆಯನ್ನು ಎಷ್ಟರ ಮಟ್ಟಿಗೆ ಉಳಿಸಿಕೊಂಡಿವೆ.. ಎಂಬುದನ್ನೆಲ್ಲಾ ಶೋ ಮುಗಿದ ಬಳಿಕ ಯಾರೂ ಕೆದಕುವುದಿಲ್ಲವಾದ್ದರಿಂದ ಅದೊಂದು ಚರ್ಚಿಸಲೇ ಬೇಕಾದ ಇಶ್ಶೂವಾಗಿಯೂ ಗುರುತಿಸಿಕೊಳ್ಳುವುದಿಲ್ಲ. ಆದ್ದರಿಂದ,  
   ಸಚಿನ್ ತೆಂಡುಲ್ಕರ್‍ರ ವಿದಾಯವು ಈ ನಿಟ್ಟಿನಲ್ಲಿ ಚರ್ಚೆಯೊಂದಕ್ಕೆ ಕಾರಣವಾಗಬೇಕಾಗಿದೆ. ಕ್ರಿಕೆಟ್‍ನ ಉನ್ನತ ಮೆಟ್ಟಲನ್ನು ಹತ್ತಿದರೂ ಹೈಸ್ಕೂಲ್ ಮೆಟ್ಟಲನ್ನೂ ಹತ್ತದ ಅವರು, ಪುಟ್ಟ ಮಕ್ಕಳಿಗೆ ‘ಬಾಲ್ಯ'ವನ್ನು ಒದಗಿಸುವಂತೆ ಒತ್ತಾಯಿಸುವುದಕ್ಕೆ ಪ್ರೇರಕವಾಗಬೇಕಾಗಿದೆ. ಹೆತ್ತವರ ವಿಪರೀತ ಕನಸಿಗೆ ಮಕ್ಕಳ ಬಾಲ್ಯ ಕಮರಿ ಹೋಗದಂತೆ ಎಚ್ಚರಿಕೆಯ ಸಂದೇಶವನ್ನು ಸಚಿನ್ ಬದುಕು ರವಾನಿಸಬೇಕಾಗಿದೆ.

No comments:

Post a Comment