Wednesday, 29 January 2014

ಹುಲಿ, ಗೋವು, ಭಯೋತ್ಪಾದನೆ ಮತ್ತು ದಲಿತರು

 2000ದಲ್ಲಿ ನಡೆದ ದಲಿತ ಹತ್ಯಾಕಾಂಡದಲ್ಲಿ
ಕುಟುಂಬದ ನಾಲ್ವರನ್ನು ಕಳಕೊಂಡ
 ಗೋಪಿನಾಥನ್

  1. ಪಶ್ಚಿಮ ಬಂಗಾಲದ ಬೀರ್ಭಮ್ ಜಿಲ್ಲೆ, 2. ಕರ್ನಾಟಕದ ಕೋಲಾರ ಜಿಲ್ಲೆ , 3. ಸುಪ್ರೀಮ್ ಕೋರ್ಟು.. ಇವು ಮೂರೂ ಕಳೆದ ವಾರ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿ ಗಮನ ಸೆಳೆದುವು. ಮನುಷ್ಯರ ಪ್ರಾಣ, ಘನತೆಯ ಬಗ್ಗೆ ಸುಪ್ರೀಮ್ ಕೋರ್ಟು ಅತೀವ ಕಾಳಜಿಯನ್ನು ವ್ಯಕ್ತಪಡಿಸಿ, ಮರಣ ದಂಡನೆಯನ್ನು ಜೀವಾವಧಿಗೆ ಇಳಿಸಲು ತೀರ್ಮಾನಿಸಿದಾಗ ಮೇಲಿನೆರಡು ಜಿಲ್ಲೆಗಳು ಅದನ್ನು ಅಪಹಾಸ್ಯಗೊಳಿಸುವಂತೆ ವರ್ತಿಸಿದುವು. ಒಂದು ವೇಳೆ ಸಮಾನತೆ, ಮಾನವ ಘನತೆ, ದಲಿತ ಸಬಲೀಕರಣ.. ಮುಂತಾದುವುಗಳ ಬಗ್ಗೆ ಮಾಧ್ಯಮಗಳು ವ್ಯಕ್ತಪಡಿಸುತ್ತಿರುವ ಕಾಳಜಿ ಪ್ರಾಮಾಣಿಕವೇ ಆಗಿರುತ್ತಿದ್ದರೆ, ಮಿಕ್ಕೆಲ್ಲ ಸುದ್ದಿಗಳನ್ನು ತುಸು ಬದಿಗಿರಿಸಿ ಈ ಬಗ್ಗೆ ನಿರಂತರ ಸಾರ್ವಜನಿಕ ಜಾಗೃತಿಯನ್ನು ಮೂಡಿಸುವುದಕ್ಕೆ ಈ ಎರಡು ಪ್ರಕರಣಗಳು ಅರ್ಹವಾಗಿದ್ದುವು.
 ಬೀರ್ಭಮ್ ಜಿಲ್ಲೆಯ ಸುಬಲ್‍ಪುರ್ ಗ್ರಾಮದ ಬುಡಕಟ್ಟು ಜನಾಂಗದ ಯುವತಿಯೊಬ್ಬಳು ಅನ್ಯಜಾತಿಯ ಯುವಕನನ್ನು ಪ್ರೀತಿಸಿದಳು. ಈ ಪ್ರೀತಿಯನ್ನು ಗಂಭೀರ ಅಪರಾಧವೆಂದು ಪರಿಗಣಿಸಿದ ಖಾಪ್ ಪಂಚಾಯತ್, ಯುವಕನಿಗೆ ದಂಡ ವಿಧಿಸಿ ಬಿಟ್ಟು ಬಿಟ್ಟಿತಲ್ಲದೇ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಆದೇಶಿಸಿತು. ಒಂದು ರಾತ್ರಿಯಿಡೀ ಯುವತಿಯನ್ನು ಲೈಂಗಿಕವಾಗಿ ಹಿಂಸಿಸಲಾಯಿತು. ಕೋಲಾರ ಜಿಲ್ಲೆಯ ನಂಗಲಿ ಬಳಿಯ ಕಗ್ಗನ ಹಳ್ಳಿಯಲ್ಲಂತೂ ದಲಿತ ಕುಟುಂಬಗಳಿಗೆ ಮೇಲ್ವರ್ಗವು ಸಾಮೂಹಿಕ ಬಹಿಷ್ಕಾರವನ್ನು ಹೇರಿದೆ. ಹೊಟೇಲು, ಅಂಗಡಿಗಳು ಈ ಕುಟುಂಬಗಳೊಂದಿಗೆ ವ್ಯವಹರಿಸದಂತೆ ಧ್ವನಿವರ್ಧಕಗಳಲ್ಲಿ ಎಚ್ಚರಿಸಲಾಗಿದೆ. ಉಲ್ಲಂಘಿಸಿದವರಿಗೆ ನಿರ್ದಿಷ್ಟ ಪ್ರಮಾಣದ ದಂಡವನ್ನು ಘೋಷಿಸಲಾಗಿದೆ. ಊರ ಕೊಳವೆ ಬಾವಿಯಿಂದ ದಲಿತರು ನೀರು ಬಳಸದಂತೆ ತಡೆಯಲಾಗಿದೆ. ಸಂಕ್ರಾಂತಿ ಹಬ್ಬವನ್ನು ಮೇಲ್ವರ್ಗಕ್ಕಿಂತ ಮೊದಲೇ ಆಚರಿಸಿದುದು ಇದಕ್ಕೆ ಕಾರಣ ಎಂದು ದಲಿತರು ಹೇಳುತ್ತಿದ್ದಾರೆ..
 ಇಲ್ಲಿ ಗೋಹತ್ಯೆ ವಿರೋಧಿ ರಾಲಿಗಳನ್ನು ಏರ್ಪಡಿಸಿ ಆಗಾಗ ಜನರ ಗಮನ ಸೆಳೆಯುವ ಪ್ರಯತ್ನಗಳು ನಡೆಯುತ್ತಿರುತ್ತವೆ. ಭಿನ್ನ ಧರ್ಮದ ಯುವಕ-ಯುವತಿಯರು ಪರಸ್ಪರ ಮಾತಾಡುವುದನ್ನು ತಡೆಯಲು, ಅವರನ್ನು ಪತ್ತೆ ಹಚ್ಚಿ ಥಳಿಸಲು ಇಲ್ಲಿ ತಂಡಗಳೇ ರಚನೆಯಾಗಿವೆ. ‘ಹುಲಿಯನ್ನು ರಾಷ್ಟ್ರೀಯ ಪ್ರಾಣಿಯಾಗಿ ಮಾಡಿರುವುದೇ ಭಯೋತ್ಪಾದನೆ ಉಂಟಾಗಲು ಕಾರಣ..’ ಎಂದು ಪೇಜಾವರ ಶ್ರೀಗಳೇ ಹೇಳುತ್ತಿದ್ದಾರೆ. ‘ಸಾಧು ಪ್ರಾಣಿಯಾದ ಗೋವನ್ನು ಒಂದು ವೇಳೆ ರಾಷ್ಟ್ರ ಪ್ರಾಣಿಯಾಗಿ ಮಾಡಿರುತ್ತಿದ್ದರೆ ದೇಶ ಉಗ್ರವಾದದಿಂದ ಮುಕ್ತವಾಗಿರುತ್ತಿತ್ತು..’ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ಉರುಳು ಸೇವೆ ನಡೆಯುತ್ತಿದೆ. ಪಂಕ್ತಿ ಬೇಧ ಜಾರಿಯಲ್ಲಿದೆ. ದಲಿತ ವರ್ಗವನ್ನು ಪ್ರತಿನಿಧಿಸುತ್ತಿರುವ ಅಂಬೇಡ್ಕರ್‍ರ ನೇತೃತ್ವದಲ್ಲಿ ರಚನೆಯಾದ ಸಂವಿಧಾನಕ್ಕೆ 67 ವರ್ಷಗಳು ತುಂಬಿದ ಈ ಹೊತ್ತಲ್ಲಿ ಕಾಣುತ್ತಿರುವ ವೈರುಧ್ಯಗಳಿವು. ಹುಟ್ಟಿನ ಆಧಾರದಲ್ಲಿ ಒಂದು ದೊಡ್ಡ ಸಮೂಹವನ್ನು ಭಯದ ಕೂಪಕ್ಕೆ ತಳ್ಳುವುದನ್ನು ಏನೆಂದು ಕರೆಯಬೇಕು? ಬಹಿಷ್ಕಾರದ ಭೀತಿಯಲ್ಲಿ ಬದುಕುವ ಒಂದು ಸಮೂಹದ ಪಾಲಿಗೆ ಯಾವುದು ಭಯೋತ್ಪಾದನೆಯಾಗಿರಬಹುದು? ಬಾಂಬು, ಬಂದೂಕುಗಳನ್ನು ಈ ವರೆಗೂ ನೋಡಿರದ ಈ ದೇಶದ ಅಸಂಖ್ಯ ಗ್ರಾಮಗಳ ಕೋಟ್ಯಂತರ ದಲಿತರು ಭಯೋತ್ಪಾದನೆಗೆ ಕೊಡುವ ವ್ಯಾಖ್ಯಾನ ಏನಿರಬಹುದು?
 ನಾವೆಲ್ಲ ಭಯೋತ್ಪಾದನೆಗೆ ಒಂದು ಸೀಮಿತ ಅರ್ಥವನ್ನು ಕೊಟ್ಟಿದ್ದೇವೆ. ಆ ಅರ್ಥದಂತೆ ಬಾಂಬು, ಬಂದೂಕುಗಳು ಮಾತ್ರ ಭಯೋತ್ಪಾದನೆಯ ಚೌಕಟ್ಟಿನೊಳಗೆ ಬರುತ್ತದೆ. ಮಾಧ್ಯಮಗಳ ಮುಖಪುಟದಲ್ಲಿ ಇಂಥ ಪ್ರಕರಣಗಳಿಗೆ ದಪ್ಪಕ್ಷರದ ಹೆಡ್‍ಲೈನ್‍ಗಳೂ ಸಿಗುತ್ತವೆ. ಅವು ತಪ್ಪು ಎಂದಲ್ಲ. ಮನುಷ್ಯರನ್ನು ಕೊಲ್ಲುವ, ಅವರನ್ನು ಭೀತಿಯಲ್ಲಿ ಕೆಡಹುವ ಯಾವ ಕೃತ್ಯಗಳೇ ಆಗಲಿ ಅದು ಖಂಡನಾರ್ಹ ಮತ್ತು ಅಂಥ ಪ್ರಕರಣಗಳು ಮಾಧ್ಯಮಗಳ ಮುಖಪುಟದಲ್ಲಿ ಪ್ರಮುಖ ಸುದ್ದಿಯಾಗಿ ಕಾಣಿಸಿಕೊಳ್ಳಬೇಕಾದದ್ದು ಅತ್ಯಂತ ಅಗತ್ಯ. ಆದರೆ, ಭಯೋತ್ಪಾದನೆಯ ವ್ಯಾಖ್ಯಾನವನ್ನು ನಾವು ಅಷ್ಟಕ್ಕೇ ಸೀಮಿತಗೊಳಿಸಿದರೆ ಸಾಕೇ? ಬಾಂಬು ಭಯೋತ್ಪಾದನೆಯ ವಿರುದ್ಧ ಜನರಲ್ಲಿ ಒಂದು ಬಗೆಯ ಪ್ರಜ್ಞೆಯನ್ನು ಬೆಳೆಸಲು ಸಾಧ್ಯವಾಗಿರುವಂತೆಯೇ ಹುಟ್ಟಿನ ಆಧಾರದಲ್ಲಿ ನಡೆಸಲಾಗುವ ಭಯೋತ್ಪಾದನೆಯ ಬಗ್ಗೆಯೂ ಸಮಾಜವನ್ನು ಜಾಗೃತಗೊಳಿಸುವ ಅಗತ್ಯವಿಲ್ಲವೇ? ನಮ್ಮಂತೆ ಕಣ್ಣು, ಕೈ, ಕಾಲು, ಕಿವಿ, ಮೂಗನ್ನು ಹೊಂದಿರುವ ಒಂದು ದೊಡ್ಡ ಸಮೂಹವನ್ನು ಬಹಿಷ್ಕಾರಕ್ಕೆ ಒಳಪಡಿಸುವುದನ್ನೇಕೆ ನಾವು ಬಾಂಬು ಭಯೋತ್ಪಾದನೆಯಷ್ಟೇ ಗಂಭೀರ ಪ್ರಕರಣವಾಗಿ ಪರಿಗಣಿಸುತ್ತಿಲ್ಲ? ಈ ಭಯೋತ್ಪಾದನೆಗೆ ಯಾವ ಪ್ರಾಣಿ ಕಾರಣ? ರಾಜ್ಯದಲ್ಲಿ ಮುಖ್ಯವಾಗಿ ನಮ್ಮ ಕರಾವಳಿ ಪ್ರದೇಶದಲ್ಲಿ ಜಾನುವಾರುಗಳನ್ನು ಕಸಾಯಿಖಾನೆಗೆ ತಲುಪದಂತೆ ಬಲವಂತದಿಂದ ತಡೆಯುವ ಪ್ರಯತ್ನಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಜಾನುವಾರುಗಳನ್ನು ಕೊಂಡೊಯ್ಯುವ ವಾಹನಗಳನ್ನು ಅಡ್ಡಗಟ್ಟಿ ಅದರಲ್ಲಿರುವವರನ್ನು ಥಳಿಸುವ ಪ್ರಕರಣಗಳು ನಡೆಯುತ್ತಿರುತ್ತವೆ. ಹೆಣ್ಣು-ಗಂಡು ಪರಸ್ಪರ ಮಾತಾಡುವುದನ್ನು ತಡೆಯುವುದಕ್ಕೆ ಇಲ್ಲಿ ತಂಡಗಳು ಕಾರ್ಯಾಚರಿಸುತ್ತಿವೆ. ಮಾತ್ರವಲ್ಲ, ತಮ್ಮೆಲ್ಲ ಕೃತ್ಯಗಳನ್ನು ಧರ್ಮರಕ್ಷಣೆ ಎಂದು ಅವು ಸಮರ್ಥಿಸಿಕೊಳ್ಳುತ್ತಲೂ ಇವೆ. ಹೋಮ್‍ಸ್ಟೇ, ಪಬ್ ದಾಳಿ, ಹಾಜಬ್ಬ ಬೆತ್ತಲೆ ಪ್ರಕರಣಗಳನ್ನೆಲ್ಲ ಧರ್ಮರಕ್ಷಣೆಯ ಹೆಸರಲ್ಲಿಯೇ ಇಲ್ಲಿ ಸಮರ್ಥಿಸಿಕೊಳ್ಳಲಾಗಿದೆ. ಅಷ್ಟಕ್ಕೂ, ಯುವತಿಯರು ಮತ್ತು ಜಾನುವಾರುಗಳ ಮೇಲೆ ತೋರುತ್ತಿರುವ ಈ ಮಟ್ಟದ ಪ್ರೀತಿಯ ಸಣ್ಣದೊಂದು ಅಂಶವನ್ನಾದರೂ ದಲಿತರ ಮೇಲೆ ತೋರುತ್ತಿದ್ದರೆ, ಈ ದೇಶದ ಪರಿಸ್ಥಿತಿ ಹೇಗಿರುತ್ತಿತ್ತು? ನಿಜವಾಗಿ, ಕೋಲಾರದ ನಂಗಲಿ ಗ್ರಾಮ ಕೇವಲ ಒಂದು ಉದಾಹರಣೆ ಅಷ್ಟೇ. ಇಂಥ ಪ್ರಕರಣಗಳು ಈ ದೇಶದಲ್ಲಿ ಆಗಾಗ ನಡೆಯುತ್ತಲೇ ಇವೆ. ಆದರೆ, ಧರ್ಮರಕ್ಷಣೆಯ ಹೆಸರಲ್ಲಿ ಜಾನುವಾರುಗಳನ್ನು ತಡೆಯುವ ಮತ್ತು ಯುವಕರನ್ನು ಥಳಿಸುವ ತಂಡಗಳು, ದಲಿತರನ್ನು ಬಹಿಷ್ಕರಿಸಿದವರನ್ನು ಥಳಿಸಿದ ಪ್ರಕರಣ ಈವರೆಗೂ ನಡೆದಿಲ್ಲ. ಯಾಕೆ ಹೀಗೆ? ಹೆಣ್ಣು-ಗಂಡು ಮಾತಾಡುವುದು ಒಂದು ಸಮೂಹವನ್ನೇ ಬಹಿಷ್ಕಾರಕ್ಕೆ ಒಳಪಡಿಸುವುದಕ್ಕಿಂತಲೂ ಭೀಕರ ಅಪರಾಧವೇ? ಅಥವಾ ದಲಿತರು ಧರ್ಮದ ಚೌಕಟ್ಟಿನೊಳಗೆ ಬರುವುದಿಲ್ಲವೇ? ಬಹಿಷ್ಕಾರದಂಥ ಭಯೋತ್ಪಾದನಾ ಕೃತ್ಯಗಳ ಕುರಿತಂತೆ ಥಳಿಸುವ ತಂಡಗಳು ತೋರುತ್ತಿರುವ ಮೌನ ಪ್ರತಿಕ್ರಿಯೆಯನ್ನು ನೋಡಿದರೆ, ಈ ಬಗ್ಗೆ ಸಾಕಷ್ಟು ಅನುಮಾನಗಳು ಮೂಡುತ್ತವೆ. ನಿಜವಾಗಿ, ಹೆಣ್ಣು-ಗಂಡು ಮಾತುಕತೆ, ಜಾನುವಾರು ಹತ್ಯೆ.. ಮುಂತಾದುವುಗಳಿಗಿಂತಲೂ ದಲಿತ ಬಹಿಷ್ಕಾರದಂಥ ಪ್ರಕರಣಗಳು ಅತೀ ಗಂಭೀರವಾದುದು. ಇಂಥ ಕೃತ್ಯಗಳು ಧರ್ಮದ  ನಿಜ ಸ್ವರೂಪವನ್ನೇ ಪ್ರಶ್ನಿಸುತ್ತವೆ. ಮನುಷ್ಯರು ಎಲ್ಲ ಪ್ರಾಣಿಗಳಿಗಿಂತಲೂ ಮಿಗಿಲು ಎಂದು ನಾವು ಒಪ್ಪುವುದಾದರೆ ಮೊಟ್ಟಮೊದಲು ಹುಟ್ಟಿನ ಆಧಾರದಲ್ಲಿ ಆಗುವ ಭಯೋತ್ಪಾದನೆಯ ಬಗ್ಗೆ ಪ್ರಬಲ ಪ್ರತಿಭಟನೆಯನ್ನು ಸಲ್ಲಿಸಬೇಕಾಗುತ್ತದೆ. ಬಹಿಷ್ಕøತರ ಬೆಂಬಲಕ್ಕೆ ಧಾವಿಸಬೇಕಾಗುತ್ತದೆ. ಆ ಮೂಲಕ ಮನುಷ್ಯರೆಲ್ಲ ಸಮಾನ ಎಂದು ಸಾರಬೇಕಾಗುತ್ತದೆ. ಆದರೆ, ಜಾನುವಾರುಗಳ ಬಗ್ಗೆ ಮತ್ತು ಹೆಣ್ಣು-ಗಂಡು ಮಾತುಕತೆಯ ಬಗ್ಗೆ ಒಂದು ವರ್ಗದಿಂದ ವ್ಯಕ್ತವಾಗುತ್ತಿರುವ ಕಾಳಜಿಯು ದಲಿತರ ಬಗ್ಗೆ ಕಾಣಿಸುತ್ತಿಲ್ಲ. ನಿಜವಾಗಿ, ಧರ್ಮವನ್ನು ಪ್ರೀತಿಸುವುದೆಂದರೆ ಧರ್ಮದ ಹೆಸರಲ್ಲಿ ಅಸ್ತಿತ್ವದಲ್ಲಿರುವ ಅನಾಚಾರಗಳನ್ನು ವಿರೋಧಿಸುವುದು. ಅವುಗಳ ನಿರ್ಮೂಲನೆಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದು. ಮಾತ್ರವಲ್ಲ, ನಿಷ್ಠಾವಂತ ಧರ್ಮಾನುಯಾಯಿಯಾಗಿ ಜೀವಿಸುವುದು. ಆದರೆ, ಇವತ್ತು ಇನ್ನೊಂದು ಧರ್ಮವನ್ನು ಮತ್ತು ಅದರ ಆಚರಣೆಗಳನ್ನು ಗೇಲಿ ಮಾಡುವುದೇ ಧರ್ಮಪ್ರೀತಿ ಆಗಿಬಿಟ್ಟಿದೆ. ದಲಿತ ಬಹಿಷ್ಕಾರದಂಥ ಮನುಷ್ಯ ವಿರೋಧಿ ಕೃತ್ಯಗಳನ್ನು ತಡೆಯುವ ಅಥವಾ ಅದನ್ನು ಪ್ರತಿಭಟಿಸುವ ಬಗ್ಗೆ ಇಲ್ಲದ ಉತ್ಸಾಹ ಹೆಣ್ಣು-ಗಂಡನ್ನು ಥಳಿಸುವಲ್ಲಿ, ಜಾನುವಾರುಗಳ ವಾಹನವನ್ನು ತಡೆದು ಹಲ್ಲೆಗೈಯುವಲ್ಲಿ ಕಾಣಿಸುತ್ತಿದೆ. ಪ್ರಾಣಿಗೆ ಇರುವ ಮಹತ್ವದ ಒಂದಂಶವನ್ನೂ ಮನುಷ್ಯರಿಗೆ ಕೊಡದೆಯೂ ಧರ್ಮಪ್ರೇಮಿಗಳಾಗಿ ಗುರುತಿಸಿಕೊಳ್ಳುವುದಕ್ಕೆ ಇವತ್ತು ಸಾಧ್ಯವಾಗುತ್ತಿದೆ. ಬಹುಶಃ ನಂಗಲಿ ಮತ್ತು ಸಬಲ್‍ಪುರದ ಘಟನೆಗಳು ಇಂಥ ಧರ್ಮಪ್ರೇಮವನ್ನು ಇವತ್ತು ಬಹಿರಂಗವಾಗಿಯೇ ಪ್ರಶ್ನಿಸುತ್ತಿದೆ. ದಲಿತರನ್ನು ಮನುಷ್ಯರಾಗಿ ಒಪ್ಪಲೂ ಸಿದ್ಧವಿಲ್ಲದ ಸಾಮಾಜಿಕ ಮನಸ್ಥಿತಿಗೆ ಎಲ್ಲರೆದುರೇ ಛೀಮಾರಿ ಹಾಕುತ್ತಿದೆ. ಹುಲಿಯನ್ನೂ ಗೋವನ್ನೂ ತುಲನೆ ಮಾಡಿ ಚರ್ಚಿಸುವುದಕ್ಕಿಂತ ಮೊದಲು ಮನುಷ್ಯರನ್ನು ಮನುಷ್ಯರಿಗೆ ತುಲನೆ ಮಾಡಿ ಚರ್ಚಿಸಿ ಎಂದು ಕರೆ ಕೊಡುತ್ತಿದೆ.

No comments:

Post a Comment