Saturday, 7 June 2014

ಮಹೇಶ್ವರಿ, ಶಿಲ್ಪ, ಶ್ರೀನಿವಾಸ ಮತ್ತು ನಾವು

   ಪ್ರೀತಿ, ಪ್ರೇಮಗಳ ಕಾರಣದಿಂದಾಗಿ ಈ ದೇಶದಲ್ಲಿ ಆಗುತ್ತಿರುವ ಹತ್ಯೆ ಮತ್ತು ಆತ್ಮಹತ್ಯೆಗಳ ಸಂಖ್ಯೆ ಸಣ್ಣದೇನೂ ಅಲ್ಲ. ಪತ್ರಿಕೆಗಳು ಇಂಥ ಸುದ್ದಿಗಳನ್ನು ಪ್ರತಿದಿನ ಹೊತ್ತುಕೊಂಡೇ ಬರುತ್ತವೆ. ಅವು ಇವತ್ತು ಎಷ್ಟು ಮಾಮೂಲಿ ಆಗಿಬಿಟ್ಟಿವೆ ಎಂದರೆ ಹೆಚ್ಚಿನ ಬಾರಿ ಅವು ಓದುಗರ ಗಮನವನ್ನೇ ಸೆಳೆಯುತ್ತಿಲ್ಲ. ಪತ್ರಿಕೆಗಳ ಒಳಪುಟಗಳಲ್ಲಿ ಪ್ರಕಟವಾಗುವಷ್ಟು ಸಹಜ ಅನ್ನಿಸಿಕೊಂಡಿರುವ ಇಂಥ ಪ್ರಕರಣಗಳು ಓದುಗರಲ್ಲಿ ಅಪಾರ ಕುತೂಹಲವನ್ನು ಇವತ್ತು ಉಳಿಸಿಕೊಂಡೂ ಇಲ್ಲ. ಓಡಿಹೋದ ಅಥವಾ ಆತ್ಮಹತ್ಯೆ ಮಾಡಿಕೊಂಡ ಯುವ ಜೋಡಿಯನ್ನು ಅಪರಾಧಿ ಸ್ಥಾನದಲ್ಲಿ ಕೂರಿಸಿ, ಅವರ ನಿರ್ಧಾರಕ್ಕೆ ನಾಲ್ಕು ಬೈಗುಳಗಳನ್ನು ಬೈಯ್ದು ನಾವೆಲ್ಲ ಸುಮ್ಮನಾಗುತ್ತೇವೆ. ಪ್ರೀತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಹೆತ್ತವರನ್ನೇ ತೊರೆಯುವ ಹದಿಹರೆಯದ ಆವೇಶವನ್ನು ಖಂಡಿಸುತ್ತೇವೆ. ನಿಜವಾಗಿ, ಪರಸ್ಪರ ಪ್ರೀತಿಸುವ ಯುವ ಜೋಡಿಯೊಂದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೋ ಪರಾರಿಯಾಗುವುದಕ್ಕೋ ನಿರ್ಧರಿಸುವುದರಲ್ಲಿ ಆ ಜೋಡಿಯ ಪಾತ್ರ ಮಾತ್ರ ಇರುವುದಲ್ಲ. ಅವರಿಗಿಂತ ದೊಡ್ಡ ಪಾತ್ರವನ್ನು ಈ ಸಮಾಜ ನಿರ್ವಹಿಸುತ್ತದೆ. ಆದರೆ ಅದನ್ನು ಗುರುತಿಸಿ, ಸಮಾಜವನ್ನು ತರಾಟೆಗೆ ತೆಗೆದುಕೊಳ್ಳುವುದಕ್ಕೆ ಹದಿಹರೆಯಕ್ಕೆ ಸಾಧ್ಯವಾಗುವುದಿಲ್ಲ. ತಮ್ಮ ಪ್ರೇಮವು ಗಲ್ಲು ಶಿಕ್ಷೆಗೆ ಅರ್ಹವಾದ ಅಪರಾಧ ಎಂಬ ತಪ್ಪಿತಸ್ಥ ಭಾವನೆಯಲ್ಲಿ ಇಂಥ ಜೋಡಿಗಳು ಹೆಚ್ಚಿನ ಬಾರಿ ಕುಗ್ಗಿ ಹೋಗುವುದೇ ಹೆಚ್ಚು. ಹೀಗೆ ಸಮಾಜವನ್ನು ಎದುರಿಸುವ ಸಾಮರ್ಥ್ಯವಿಲ್ಲದೇ ಓಡಿ ಹೋಗುವ ಅಥವಾ ಸಾವಿಗೆ ಶರಣಾಗುವ ಯುವ ಜೋಡಿಗಳ ಪ್ರಕರಣಗಳು ಇವತ್ತಿನ ದಿನಗಳಲ್ಲಿ ಮತ್ತೆ ಮತ್ತೆ ಸುದ್ದಿಯಾಗುತ್ತಿವೆ.
 ಬಳ್ಳಾರಿಯ ಸಿರಗುಪ್ಪ ತಾಲೂಕಿನ ಹನುಮಂತ ಮತ್ತು ಮಹೇಶ್ವರಿ ಎಂಬ ಯುವ ಜೋಡಿಯನ್ನು ಕಳೆದ ವಾರ ಕೊಲೆ ಮಾಡಲಾಗಿದೆ. ಆಕೆ ಹನುಮಂತನನ್ನು ಪ್ರೀತಿಸುತ್ತಿದ್ದಳು. ಆದರೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಮನೆಯವರು ಶ್ರೀನಿವಾಸ ಎಂಬವನಿಗೆ ಮದುವೆ ಮಾಡಿಕೊಟ್ಟರು. ಈ ಮದುವೆಯನ್ನು ಒಪ್ಪಿಕೊಳ್ಳದೇ ಆಕೆ ಹನುಮಂತನೊಂದಿಗೆ ಹೊರಟು ಹೋದಾಗ ಶ್ರೀನಿವಾಸನು ಅವಮಾನ ತಡೆಯಲಾರದೇ ಅವರಿಬ್ಬರನ್ನು ಊರ ಹೊರಗೆಯೇ ಹತ್ಯೆ ಮಾಡಿಸಿದ್ದಾನೆ. ಈ ಪ್ರಕರಣಕ್ಕಿಂತ ಒಂದು ತಿಂಗಳು ಮೊದಲಷ್ಟೇ ಮೈಸೂರಿನ ಶಿಲ್ಪಾ ನಾಯಕ್‍ಳನ್ನು ಕೊಲೆ ಮಾಡಲಾಗಿತ್ತು. ಅಭಿಷೇಕ್ ಎಂಬ ದಲಿತನನ್ನು ಪ್ರೀತಿಸಿ ವಿವಾಹವಾದದ್ದೇ ಈ ಹತ್ಯೆಗೆ ಕಾರಣವಾಗಿತ್ತು. ಸಾಮಾನ್ಯವಾಗಿ, ಇಂಥ ಪ್ರೇಮ ಪ್ರಕರಣಗಳು ಹತ್ಯೆ, ಆತ್ಮಹತ್ಯೆ, ಪರಾರಿಗಳ ಮೂಲಕ ಕೆಲವೊಮ್ಮೆ ಸುದ್ದಿಯಾದರೆ ಇನ್ನೂ ಹಲವು ಸುದ್ದಿಯಾಗದೇ ಸತ್ತು ಹೋಗುತ್ತವೆ. ಇವತ್ತು ಓರ್ವ ಹೆಣ್ಣು ಮಗಳನ್ನು ಕೊಲೆಗೈದ ಕ್ರಿಮಿನಲ್ ಅಪರಾಧದೊಂದಿಗೆ ಶ್ರೀನಿವಾಸ ತನ್ನ ‘ಮಧುಚಂದ್ರ’ದ ಬದುಕನ್ನು ಆರಂಭಿಸಿದ್ದಾನೆ. ಆದರೆ ಅಂಥದ್ದೊಂದು ಭೀಕರ ಕೃತ್ಯ ನಡೆಸುವಲ್ಲಿ ಆತನಿಗೆ ಪ್ರಚೋದನೆ ಕೊಟ್ಟದ್ದಾದರೂ ಯಾವುದು? ಮಹೇಶ್ವರಿಯ ನಿರ್ಧಾರವನ್ನು ಖಂಡಿಸುವಾಗಲೂ, ಅದರ ಜೊತೆಗೆ ಹತ್ತು-ಹಲವು ಪ್ರಶ್ನೆಗಳು ಎದುರಾಗುತ್ತವೆ. ಸಾಕಿ-ಸಲಹಿದ ಹೆತ್ತವರನ್ನೇ ತೊರೆದು ಹೋಗುವಷ್ಟು ಆಕೆಯ ಹೃದಯವನ್ನು ಕಟುವಾಗಿಸಿದ್ದು ಯಾವುದು? ಶ್ರೀನಿವಾಸನಾಗಲಿ, ಮಹೇಶ್ವರಿಯಾಗಲಿ ಈ ಹಿಂದೆ ಕ್ರಿಮಿನಲ್ ಕೃತ್ಯಗಳಲ್ಲೇನೂ ಭಾಗಿಯಾಗಿರಲಿಲ್ಲ. ವಿವಾಹ ಬಂಧನದೊಂದಿಗೆ ಜೀವನದ ಹೊಸ ಮಜಲನ್ನು ತುಳಿಯಬೇಕಾದ ಯುವ ಸಮೂಹವನ್ನು ಅರ್ಥೈಸಿಕೊಳ್ಳುವಲ್ಲಿ ಹೆತ್ತವರು ಎಡವುತ್ತಿದ್ದಾರೆಯೇ? ಈ ಎಡವಿಕೆಗೆ ಕಾರಣವೇನು? ಪ್ರಿಯಕರನ ಮಾತು ಕೇಳಿ ಗಂಡನನ್ನೇ ನಿರ್ಲಕ್ಷಿಸಿದಳು ಅಥವಾ ಹೆತ್ತವರನ್ನೇ ತೊರೆದಳು ಅನ್ನುವ ಒಂದು ವಾಕ್ಯದಲ್ಲಿ ಮುಕ್ತಾಯಗೊಳಿಸುವುದಕ್ಕೆ ಇಂಥ ಪ್ರಕರಣಗಳು ಅರ್ಹವೇ?
 ಯುವಕ ಮತ್ತು ಯುವತಿಯ ಮಧ್ಯೆ ಪ್ರೇಮಾಂಕುರವಾಗುವುದಕ್ಕೆ ಕಾರಣ ಅವರಿಬ್ಬರು ಮಾತ್ರ ಖಂಡಿತ ಅಲ್ಲ. ಅಂಥದ್ದೊಂದು ವಾತಾವರಣವನ್ನು ಹಿರಿಯರಾದ ನಾವೆಲ್ಲ ನಿರ್ಮಿಸಿಕೊಟ್ಟಿದ್ದೇವೆ. ನಮ್ಮ ಸಿನಿಮಾಗಳು ತಯಾರಾಗುವುದೇ ಪ್ರೀತಿ-ಪ್ರೇಮಗಳ ಸುತ್ತ. ತನ್ನ ಪ್ರೇಮವನ್ನು ಗೆಲ್ಲುವುದಕ್ಕಾಗಿ ಹೀರೋ ಯಾರ ಹತ್ಯೆ ಮಾಡುವುದಕ್ಕೂ ಹೇಸುವುದಿಲ್ಲ. ಈ ಪ್ರೇಮ ವ್ಯವಹಾರಕ್ಕೆ ಹೀರೋಯಿನ್‍ಳ ತಂದೆ ವಿರುದ್ಧ ಎಂದಾದರೆ ಆತನನ್ನು ಖಳನಂತೆ ಬಿಂಬಿಸಲಾಗುತ್ತದೆಯೇ ಹೊರತು ಆ ಅಪ್ಪನ ಅನುಮತಿ ಇಲ್ಲದೇ ಪ್ರೀತಿಸಿದ ಹೀರೋ ಹೀರೋಯಿನ್‍ಗಳನ್ನಲ್ಲ. ಆ ಅಪ್ಪನಿಗೆ ಹೀರೋನಿಂದ ಬೀಳುವ ಪ್ರತಿ ಹೊಡೆತಕ್ಕೂ ಸಿನಿಮಾ ಮಂದಿರಗಳಲ್ಲಿ ಶಿಳ್ಳೆ ಬೀಳುತ್ತದೆ. ಹೀರೋ ಎಲ್ಲರನ್ನೂ ಚೆಂಡಾಡುವುದು, ಅಂತಿಮವಾಗಿ ಹೋರೋಯಿನ್‍ಳ ಅಪ್ಪ ಆ ಪ್ರೀತಿಗೆ ಹಸಿರು ನಿಶಾನೆ ತೋರುವುದು ಅಥವಾ ಹೀರೋ-ಹೀರೋಯಿನ್ ಊರು ಬಿಟ್ಟು ಹೋಗುವುದು, ಸಾಯುವುದು.. ಹೀಗೆ ಸಾಗುತ್ತವೆ ಹೆಚ್ಚಿನ ಸಿನಿಮಾಗಳು. ಇನ್ನು, ಟಿ.ವಿ.ಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳ ಸ್ಥಿತಿಯೂ ಭಿನ್ನವಲ್ಲ. ರಿಯಾಲಿಟಿ ಶೋಗಳ ಪಾಡಂತೂ ಇದಕ್ಕಿಂತಲೂ ಕರಾಳ. ಪ್ರೇಮ ಕತೆಯಿಲ್ಲದ ಒಂದೇ ಒಂದು ಧಾರಾವಾಹಿ ಈ ದೇಶದಲ್ಲಿ ಪ್ರಸಾರವಾಗಿರುವ ಸಾಧ್ಯತೆ ಇಲ್ಲ. ಹಾಗಂತ ಇವುಗಳನ್ನು ನಿರ್ಮಿಸುವುದು ಈ ಹದಿಹರೆಯದ ಯುವಕ-ಯುವತಿಯರು ಅಲ್ಲವಲ್ಲ. ಹೀಗಿರುವಾಗ ಅವರು ಕೈಗೊಳ್ಳುವ ತಪ್ಪು ನಿರ್ಧಾರಕ್ಕೆ ಅವರೊಬ್ಬರನ್ನೇ ದೂಷಿಸುವುದು ಎಷ್ಟು ಸರಿ? ತಮಾಷೆ ಏನೆಂದರೆ, ಇಂಥ ಸಿನಿಮಾಗಳನ್ನು ತಯಾರಿಸಿ ಸಮಾಜಕ್ಕೆ ಅರ್ಪಿಸುವವರಿಗೆ ರಾಷ್ಟ್ರಪ್ರಶಸ್ತಿ ಸಿಗುತ್ತದೆ. ಅತ್ಯುತ್ತಮ ಚಿತ್ರಕತೆ ಎಂದು ಕೊಂಡಾಡಲಾಗುತ್ತದೆ. ಸಮಾಜವನ್ನು ತಪ್ಪು ದಾರಿಗೆಳೆಯುವ ಪಾತ್ರ ನಿರ್ವಹಿಸಿದ್ದಕ್ಕಾಗಿ ಅತ್ಯುತ್ತಮ ನಟ, ನಟಿ, ನಿರ್ದೇಶಕ ಪ್ರಶಸ್ತಿಗಳೂ ಒಲಿಯುತ್ತವೆ. ಒಂದು ಕಡೆ ಸಿನಿಮಾಗಳ ಪಾತ್ರವನ್ನೇ ನಿಜ ಜೀವನದಲ್ಲಿ ನಿರ್ವಹಿಸಿದ್ದಕ್ಕಾಗಿ ಸರಕಾರ ಕೇಸು ದಾಖಲಿಸುವಾಗ ಇನ್ನೊಂದು ಕಡೆ ಅದೇ ಸರಕಾರ ಅಂಥ ಸಿನಿಮಾಗಳನ್ನು ನಿರ್ಮಿಸಿದ್ದಕ್ಕಾಗಿ ಬಹುಮಾನ ಕೊಟ್ಟು ಪುರಸ್ಕರಿಸುತ್ತದೆ. ಯಾಕಿಂಥ ದ್ವಂದ್ವಗಳು?
 ಕೇವಲ ಸಿನಿಮಾಗಳು, ಧಾರಾವಾಹಿಗಳು ಎಂದಲ್ಲ. ನಮ್ಮ ಒಟ್ಟು ಬದುಕುವ ವಿಧಾನವೇ ಆಧುನಿಕತೆಯ ಕೈಯಲ್ಲಿ ಹೈಜಾಕ್ ಆಗಿಬಿಟ್ಟಿದೆ. ಶಾಲೆ, ಕಾಲೇಜು, ಮಾರುಕಟ್ಟೆ, ಮದುವೆ, ಕ್ರೀಡೆ.. ಎಲ್ಲದರಲ್ಲೂ ಅತಿ ಅನ್ನುವಷ್ಟು ಮುಕ್ತತೆ ಇದೆ. ಗಂಡು ಮಕ್ಕಳಿಗೆ ಮಾತ್ರವಾಗಿದ್ದ ಕಾಲೇಜುಗಳು ಇವತ್ತಿನ ದಿನಗಳಲ್ಲಿ ಹೆಣ್ಣು ಮಕ್ಕಳನ್ನೂ ಸೇರಿಸಿಕೊಳ್ಳುತ್ತಿವೆ. ಕೇವಲ ಗಂಡು  ಮಕ್ಕಳೇ ಇರುವ ಅಥವಾ ಹೆಣ್ಣು ಮಕ್ಕಳೇ ಇರುವ ಕಾಲೇಜುಗಳಿಗೆ ಸೇರ್ಪಡೆಗೊಳ್ಳಲು ಮಕ್ಕಳು ಹಿಂಜರಿಯುತ್ತಿದ್ದಾರೆ ಎಂಬ ಸಬೂಬನ್ನು ಕಾಲೇಜು ಆಡಳಿತ ಮಂಡಳಿಗೇ ಇವತ್ತು ನೀಡತೊಡಗಿವೆ. ಒಂದು ರೀತಿಯಲ್ಲಿ, ಹೆಣ್ಣು-ಗಂಡು ನಡುವಿನ ಸಹಜ ಅಂತರವು ಕಡಿಮೆಯಾಗುತ್ತಾ ಬರುತ್ತಿದೆ. ಹೀಗಿರುವಾಗ, ಪರಸ್ಪರ ಆಕರ್ಷಣೆಗೆ ಒಳಗಾಗುವ ಯುವಕ ಮತ್ತು ಯುವತಿಯನ್ನು ಮಾತ್ರವೇ ಅಪರಾಧಿಯಾಗಿ ಬಿಂಬಿಸುವುದಕ್ಕೆ ಯಾವ ಅರ್ಥವೂ ಇಲ್ಲ. ಈ ಆಕರ್ಷಣೆಯು ಈ ಮಟ್ಟಕ್ಕೆ ಬೆಳೆಯುವುದರಲ್ಲಿ ನಮ್ಮೆಲ್ಲರ ಪಾತ್ರ ಇದೆ.. ಮಹೇಶ್ವರಿ ಆಗಲಿ, ಶಿಲ್ಪಾ ನಾಯಕ್ ಆಗಲಿ ನಮ್ಮದೇ ಉತ್ಪನ್ನಗಳು. ಈ ಸಮಾಜದ ಆಗು-ಹೋಗುಗಳು, ಅಭಿರುಚಿಗಳು, ಸಿನಿಮಾಗಳು.. ಮುಂತಾದುವುಗಳನ್ನು ನೋಡಿಕೊಂಡೇ ಅವರು ಬೆಳೆದಿದ್ದಾರೆ. ಶ್ರೀನಿವಾಸ ಕೂಡಾ ಈ ಸಮಾಜದ ಮಗುವೇ. ಆತ ಇವತ್ತು ಖಳನಾಯಕನಾಗಿ ಗುರುತಿಸಿಕೊಳ್ಳುತ್ತಿದ್ದರೂ ಆತನೊಳಗೆ ಅಂಥದ್ದೊಂದು ಕ್ರೌರ್ಯವನ್ನು ತುಂಬಿರುವುದು ಈ ಸಮಾಜದ ದ್ವಂದ್ವಗಳೇ. ಇಂಥ ಕಟು ಸತ್ಯಗಳನ್ನು ಒಪ್ಪಿಕೊಳ್ಳದ ಹೊರತು ಬರೇ ಕೇಸು ಜಡಿಯುವುದರಿಂದಲೋ ಶಾಪ ಹಾಕುವುದರಿಂದಲೋ ಸಮಸ್ಯೆಗೆ ಪರಿಹಾರ ಸಿಗಲಾರದು. ಹದಿಹರೆಯ ಎಂಬುದು ಕುತೂಹಲದ ವಯಸ್ಸು. ಈ ಕುತೂಹಲವನ್ನು ನೈತಿಕ ಪಾಠಗಳ ಮೂಲಕ ತಣಿಸುವ, ಅದಕ್ಕೆ ಪೂರಕವಾದ ವಾತಾವರಣವನ್ನು ಬೆಳೆಸುವ ಜವಾಬ್ದಾರಿ ಎಲ್ಲ ಹಿರಿಯರ ಮೇಲಿದೆ. ಹದಿಹರೆಯದವರ ಆಲೋಚನೆಯನ್ನು ಸಮಾಜಮುಖಿಗೊಳಿಸಬೇಕು. ಅದಕ್ಕೆ ಯೋಗ್ಯವಾದ ತಾಣಗಳಾಗಿ ಶಾಲೆ, ಕಾಲೇಜುಗಳನ್ನು ಮಾರ್ಪಡಿಸಬೇಕು. ಯುವ ಸಮೂಹದ ಮನಸ್ಸನ್ನು ಪ್ರಚೋದಿಸುವ ಯಾವುದೂ ಸಿನಿಮಾ, ಧಾರಾವಾಹಿಗಳ ಹೆಸರಲ್ಲಿ ಬಿಡುಗಡೆಗೊಳ್ಳದಂತೆ ನೋಡಿಕೊಳ್ಳಬೇಕು. ಅವರು ತಮ್ಮ ಎಲ್ಲವನ್ನೂ ತಾಯಿಯಲ್ಲೋ ತಂದೆಯಲ್ಲೋ ಅಥವಾ ಹಿರಿಯರಲ್ಲೋ ಹಂಚಿಕೊಳ್ಳುವಂತಹ ಮುಕ್ತ ವಾತಾವರಣವನ್ನು ಮನೆಯಲ್ಲಿ ಬೆಳೆಸಬೇಕು. ಆಗಾಗ ಹಿತ ವಚನಗಳನ್ನು ಹೇಳುತ್ತಾ ಧಾರ್ಮಿಕ ಮೌಲ್ಯಗಳನ್ನು ನೆನಪಿಸುತ್ತಾ ತಿದ್ದುವ ಪ್ರಯತ್ನ ಮಾಡುತ್ತಲಿರಬೇಕು. ನಾವು ನಿಮ್ಮ ಹಿತಾಕಾಂಕ್ಷಿಗಳು ಎಂಬ ಸೂಚನೆಯೊಂದು ಪ್ರತಿ ಸಂದರ್ಭದಲ್ಲೂ ಹೆತ್ತವರಿಂದ ಅವರಿಗೆ ದಾಟುತ್ತಲಿರಬೇಕು.
 ಏನೇ ಆಗಲಿ, ಯುವ ಸಮೂಹಕ್ಕೆ ಮನರಂಜನೆಯ ಹೆಸರಲ್ಲಿ ಹಿರಿಯರಾದ ನಾವು ಕೊಡುತ್ತಿರುವುದು ವಿಷವನ್ನೇ. ಆ ವಿಷದ ಪ್ರಭಾವಕ್ಕೆ ಮಕ್ಕಳು ಒಳಗಾದರೆ ಅದಕ್ಕಾಗಿ ಕೇಸು ಜಡಿಯಬೇಕಾದುದು ಅವರ ಮೇಲಷ್ಟೇ ಅಲ್ಲ. ಅದನ್ನು ಕೊಟ್ಟವರ ಮೇಲೂ ಕೇಸು ಹಾಕಬೇಕು. ಆಗ ಮಾತ್ರ ವಿಷ ತಯಾರಿಸುವವರು ಎಚ್ಚೆತ್ತುಕೊಳ್ಳುತ್ತಾರೆ.

2 comments:

  1. ಪ್ರೀತಿ-ಪ್ರೇಮ ಮನುಷ್ಯ ಸಹಜ ಗುಣ. ಅದು ಇಂದು ನಿನ್ನೆಯದಲ್ಲ. ಸಿನೆಮಾ-ಮನೋರಂಜನೆ ಶುರುವಾದ ಮೇಲೆ ಶುರುವಾಗಿದ್ದೂ ಅಲ್ಲ. ಅದು ಜೀವ ಸಹಜ ಗುಣ ಅನ್ನೋದನ್ನ ತಿಳಿಯಿರಿ.
    ಆಧುನಿಕತೆಗೆ ತೆರೆದುಕೊಂಡಂತೆ ಮಾನವ ಒಂದೊಂದೇ ಕಟ್ಟುಪಾಡುಗಳನ್ನು ಹಾಕಿಕೊಳ್ಳುತ್ತಾ ಮದುವೆ, ಏಕ ಪತಿ-ಪತ್ನಿ ಕಡ್ಡಾಯ, ಮದುವೆಯ ನಂತರವೇ ಸೆಕ್ಸ್ ಮುಂತಾದ ಶಾಸನಗಳನ್ನು ರೂಪಿಸಿದ. ಆದರೆ ವಯೋ ಸಹಜ ಆಕಾಂಕ್ಷೆ ಇದನ್ನು ಇಂದಿಗೂ ಒಪ್ಪುವುದಿಲ್ಲ. ಇದು ಆಧುನಿಕ ಮಾನವನ ಕಾನೂನಿಗೂ ಆಂತರಿಕ ಮಾನವನ ಆಕಾಂಕ್ಷೆಗೂ ನಡೆದಿರುವ ಸಂಘರ್ಷ. ಇಂದು ಪ್ರೇಮಿಗಳನ್ನು ಹೆತ್ತವರು ಕೊಲ್ಲುತ್ತಿರಬಹುದು. ಮುಂದೊಮ್ಮೆ ಪ್ರೇಮಿಗಳೇ ಹೆತ್ತವರನ್ನು ಕೊಲ್ಲುವ ಸಮಯ ಕೂಡಾ ಬರಬಹುದು. (ಇಂತಹ ಸುದ್ದಿಗಳೂ ಆಗಾಗ ಬರುತ್ತಿವೆ.) ಎಚ್ಚೆತ್ತುಕೊಳ್ಳಬೇಕಾದವರು ಗೊಡ್ಡು ಸಂಪ್ರದಾಯಗಳ ಮುಸುಗು ಹೊದ್ದವರು.
    ಪ್ರೇಮ ಅಸಹಜವೂ ಅಲ್ಲ, ನಿಷಿದ್ಧವೂ ಅಲ್ಲ. ಪ್ರಾಣಿಗಳೇ ಪರಸ್ಪರ ಪ್ರೇಮಿಸಿಕೊಂಡು ಜೀವಿಸುತ್ತವೆ. ಆದರೆ ಮನುಷ್ಯ ಮಾತ್ರ ಮನೋರಂಜನೆಯ ಮೂಲಕ ಪ್ರೇಮವೆಂಬ ವಿಷ ನೀಡುತ್ತಿದ್ದೇವೆ ಎಂಬಂತಹ ಸಂಪಾದಕೀಯ ಬರೆಯುತ್ತಿದ್ದಾನೆ.

    ReplyDelete
  2. ನಾವು ಹಾರ್ಡ್ ಮನಿ ಸಾಲದ ಅನುದಾನ

    5% - ನಾವು 3% ವರೆಗೆ ಬಡ್ಡಿ ದರ, ಹಾರ್ಡ್ ಹಣವನ್ನು ಸಾಲ ಮತ್ತು ಸಾಲಗಳನ್ನು ಪ್ರತಿಯೊಂದು ಇತರ ರೀತಿಯ ಅನುದಾನ. ನಾವು 1,000.00 ರಿಂದ 100 ದಶಲಕ್ಷ USD / ಪೌಂಡ್ / ಯುರೋ ಹಿಡಿದು, ವೈಡ್ ಸಾಲ ನೇಷನ್ ಔಟ್ ನೀಡುವ. ನಾವು ಆಸ್ತಿ ಸ್ವಾಧೀನ 100% ಹಣ ಮತ್ತು 75% -85% ನಷ್ಟು ಎಲ್ಟಿವಿ ಜೊತೆ.

    ನಾವು ಹಾರ್ಡ್ ಹಣವನ್ನು ಸಾಲ ಕೆಳಗಿನ ರೀತಿಯ ನೀಡುತ್ತವೆ:

    ಹಾರ್ಡ್ ಮನಿ ಸಾಲದ; ಸಾಲದ ಲೈನ್,
    ವಾಣಿಜ್ಯ ಹಾರ್ಡ್ ಮನಿ ಸಾಲಗಳು
    ವೈಯಕ್ತಿಕ ಹಾರ್ಡ್ ಮನಿ ಸಾಲಗಳು
    ವ್ಯಾಪಾರ ಹಾರ್ಡ್ ಮನಿ ಸಾಲಗಳು
    ಇನ್ವೆಸ್ಟ್ಮೆಂಟ್ಸ್ ಹಾರ್ಡ್ ಮನಿ ಸಾಲಗಳು
    ಅಭಿವೃದ್ಧಿ ಹಾರ್ಡ್ ಮನಿ ಸಾಲಗಳು
    ಸ್ವಾಧೀನ ಸಾಲ ಸಲಕರಣೆ ಲೀಸಿಂಗ್
    ಸ್ಟಾರ್ಟ್ ಅಪ್ ಸಾಲಗಳು ವಾಣಿಜ್ಯ ಆಸ್ತಿ ಸಾಲ
    ಇನ್ವೆಂಟರಿ ಸಾಲ ಅಸುರಕ್ಷಿತ ಸಾಲ
    ನಿರ್ಮಾಣ ಸಾಲ
    ಕ್ರೆಡಿಟ್ ಸ್ವೀಕರಿಸುವಂತಹ ಖಾತೆಗಳು ಸಾಲ ಲೈನ್ಸ್
    ವೇರ್ಹೌಸ್ ಹಣಕಾಸು ಅಪವರ್ತನ
    ಮೆಷಿನರಿ ಸಾಲ
    ವರ್ಕಿಂಗ್ ಕ್ಯಾಪಿಟಲ್ ಸಾಲ ನೆಲ ಲೈನ್ಸ್
    ಕೃಷಿ ಸಾಲಗಳು, ಅಂತರರಾಷ್ಟ್ರೀಯ ಸಾಲಗಳ
    ಖರೀದಿ ಆದೇಶವನ್ನು ಹಣಕಾಸು: ವಾಸ್ತವವಾಗಿ ಯಾವುದೇ ರೀತಿಯ ವ್ಯಾಪಾರ ಸಾಲ
    E.T.C. ..

    ವೇಳೆ ಆಸಕ್ತಿ ಇಮೇಲ್ ಮೂಲಕ ನಮ್ಮನ್ನು ಸಂಪರ್ಕಿಸಿ; fredlenders01@gmail.com

    ಅಭಿನಂದನೆಗಳು
    ಶ್ರೀ ಫ್ರೆಡ್ ಫಿನ್ಸ್

    ReplyDelete