Tuesday, 10 June 2014

ಮಿರ್ಝಾ ಎತ್ತಿರುವ ಪ್ರಶ್ನೆಗಳು ಮತ್ತು ಅನಾಥ ಗುರುತಚೀಟಿ

ಮಿರ್ಜಾ
   ಇನ್ನೂ ದೃಢಪಟ್ಟಿಲ್ಲದ ಆರೋಪವೊಂದರ ಹೆಸರಿನಲ್ಲಿ ಮಹಾರಾಷ್ಟ್ರದ ಪುಣೆಯ ಶೇಖ್ ಮುಹ್ಸಿನ್ ಸಾದಿಕ್ ಎಂಬ ಟೆಕ್ಕಿಯನ್ನು (ಕಂಪ್ಯೂಟರ್ ಎಂಜಿನಿಯರ್) ಹಿಂದೂ ರಾಷ್ಟ್ರ ಸೇನೆಯ ಕಾರ್ಯಕರ್ತರು ಕೊಲೆಗೈದ ಮರುದಿನವೇ ಇತ್ತ ಬೆಂಗಳೂರಿನಲ್ಲಿ ಎಜಾಝ್ ಅಹ್ಮದ್ ಮಿರ್ಝಾ ಎಂಬ ಯುವಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್.ಐ.ಎ.) ನಿರಪರಾಧಿ ಎಂದು ಘೋಷಿಸಿದೆ. ಹಾಗಂತ, ಈ ಎರಡೂ ಪ್ರಕರಣಗಳು ಪರಸ್ಪರ ಸಂಬಂಧ ಹೊಂದಿವೆ ಎಂದಲ್ಲ. ರಾಜ್ಯದ ಪತ್ರಕರ್ತರು ಮತ್ತು ರಾಜಕಾರಣಿಗಳ ಹತ್ಯೆಗೆ ಸಂಚು ನಡೆಸಿದ್ದಾರೆಂದು ಆರೋಪಿಸಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಪತ್ರಕರ್ತ ಮುತೀಉರ್ರಹ್ಮಾನ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿ.ಆರ್.ಡಿ.ಓ.) ಕಿರಿಯ ಸಂಶೋಧಕ ಎಜಾಝ್ ಮಿರ್ಝಾ ಸೇರಿದಂತೆ 15 ಮಂದಿಯನ್ನು 2012 ಆಗಸ್ಟ್ 29ರಂದು ಬೆಂಗಳೂರಿನ ಪೊಲೀಸರು ಬಂಧಿಸಿದ್ದರು. ಆ ಬಳಿಕ ಮಾಧ್ಯಮಗಳಲ್ಲಿ ಭಯೋತ್ಪಾದನೆಯ ಹತ್ತು-ಹಲವು ಚಿತ್ರಕತೆಗಳು ಪ್ರಕಟವಾದುವು. ಪತ್ರಕರ್ತ ಮುತೀಉರ್ರಹ್ಮಾನ್ ಸಿದ್ದೀಕಿಯು ಇಡೀ ಭಯೋತ್ಪಾದಕ ಸಂಚಿನ ರೂವಾರಿ ಎಂದು ಕೆಲವು ಪತ್ರಿಕೆಗಳು ಬರೆದುವು. ಕೃಷ್ಣರಾಜ ಸಾಗರ ಅಣೆಕಟ್ಟನ್ನು ಸ್ಫೋಟಿಸುವ ಸಂಚನ್ನು ಈತ ಹೆಣೆದಿದ್ದ ಅಂದುವು. ಪತ್ರಕರ್ತ, ಸಂಶೋಧಕನ ವೇಷದಲ್ಲಿ ಭಯೋತ್ಪಾದಕರು ಹೇಗೆ ವ್ಯವಸ್ಥೆಯೊಳಗೆ ನುಸುಳಿಕೊಳ್ಳುತ್ತಾರೆ ಎಂಬ ಸಂಶೋಧನಾತ್ಮಕ ವರದಿಯನ್ನು ಭೀತಿಯ ಪದಗಳಲ್ಲಿ ಮಂಡಿಸಿದುವು. ಮಾಧ್ಯಮ ಭಯೋತ್ಪಾದನೆಯ ಪ್ರಭಾವ ಎಷ್ಟಿತ್ತೆಂದರೆ ಸ್ವತಃ ಡೆಕ್ಕನ್ ಹೆರಾಲ್ಡ್ ಪತ್ರಿಕೆಯೇ ಒಂದು ಹಂತದ ವರೆಗೆ ತಬ್ಬಿಬ್ಬಾಯಿತು. ಇದಾಗಿ ಆರು ತಿಂಗಳುಗಳ ಬಳಿಕ ಮುತೀಉರ್ರಹ್ಮಾನ್‍ನನ್ನು ಎನ್.ಐ.ಏ. ನಿರಪರಾಧಿಯೆಂದು ಘೋಷಿಸಿತು. ಇದೀಗ ಮಿರ್ಝಾನನ್ನು ಅದು ನಿರಪರಾಧಿಯೆಂದು ಸಾರಿದೆ. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಸಾದಿಕ್‍ನನ್ನು ಬರ್ಬರವಾಗಿ ಕೊಲೆಗೈಯಲಾಗಿದೆ. ಶಿವಾಜಿ ಮತ್ತು ಬಾಳಾಠಾಕ್ರೆಯ ವಿರುದ್ಧ ಫೇಸ್‍ಬುಕ್‍ನಲ್ಲಿ ಅಸಭ್ಯ ಸ್ಟೇಟಸ್ ಹಾಕಿದ್ದಾನೆ ಎಂಬುದು ಈತನ ಮೇಲಿನ ಆರೋಪ. ಆದರೆ, ಕಿಡಿಗೇಡಿಗಳು ಆತನ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದು ಈ ಸ್ಟೇಟಸ್ ಅನ್ನು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಏನೇ ಆದರೂ, ಇದರ ಸತ್ಯಾಂಶ ಹೊರಬರುವ ಮೊದಲೇ ಆತನನ್ನು ಕೊಲೆ ಮಾಡಲಾಗಿದೆ.
 ಅಂದ ಹಾಗೆ, ಇಲ್ಲಿರುವ ಎರಡೂ ಘಟನೆಗಳಲ್ಲೂ ಒಂದು ಪ್ರಮುಖ ಸಾಮ್ಯತೆಯಿದೆ. ಅದುವೇ ಶಂಕೆ. ಏಜಾಝ್ ಮಿರ್ಝಾ ಅಥವಾ ಮುತೀಉರ್ರಹ್ಮಾನ್‍ನ ಬಂಧನದಲ್ಲೂ ಈ ಶಂಕೆಯೇ ಪ್ರಧಾನ ಪಾತ್ರ ವಹಿಸಿತ್ತು. ಇವರ ಬಂಧನಕ್ಕೆ ಪೂರಕವಾಗಿ ಪೊಲೀಸರು ಸಮಾಜದ ಮುಂದೆ ಯಾವ ಸಾಕ್ಷ್ಯವನ್ನೂ ಮಂಡಿಸಿರಲಿಲ್ಲ. ಪತ್ರಿಕಾಗೋಷ್ಠಿ ಕರೆದು ಒಂದೆರಡು ಆರೋಪಗಳನ್ನು ಹೊರಿಸಿದ್ದರೇ ಹೊರತು ಆ ಆರೋಪ ಹುಟ್ಟು ಹಾಕುವ ಹತ್ತು-ಹಲವು ಪ್ರಶ್ನೆಗಳಿಗೆ ಆವತ್ತಾಗಲಿ ಆ ಬಳಿಕವಾಗಲಿ ಉತ್ತರಿಸುವ ಪ್ರಯತ್ನವನ್ನೇ ಮಾಡಿಲ್ಲ. ಆ ನಂತರ ಮಾಧ್ಯಮಗಳಲ್ಲಿ ಪ್ರಕಟವಾದದ್ದೆಲ್ಲ ಶಂಕಿತ ಬರಹಗಳೇ. ಇದೀಗ ಪುಣೆಯ ಟೆಕ್ಕಿಯ ಹತ್ಯೆಗೂ ಇಂಥದ್ದೇ ಶಂಕೆ ಕಾರಣವಾಗಿದೆ. ಆತನ ಮೇಲೆ ಶಂಕೆ ವ್ಯಕ್ತಪಡಿಸಲಾಗಿತ್ತೇ ಹೊರತು ಆತನೇ ತಪ್ಪಿತಸ್ಥ ಎಂದು ಖಚಿತವಾಗಿ ಪೊಲೀಸರೂ ಹೇಳಿರಲಿಲ್ಲ. ಆದರೆ ಈ ದೇಶದಲ್ಲಿ ಮುಸ್ಲಿಮ್ ವ್ಯಕ್ತಿಯೋರ್ವ ಶಂಕೆಗೆ ಗುರಿಯಾಗುವುದು ಎಷ್ಟು ಅಪಾಯಕಾರಿ ಎಂಬುದು ಸಾದಿಕ್‍ನ ಮೂಲಕ ಮತ್ತೊಮ್ಮೆ ಸ್ಪಷ್ಟವಾಗಿದೆ. ನಿಜವಾಗಿ, ಸಾದಿಕ್‍ನ ಮೇಲೆ ತಕ್ಷಣಕ್ಕೆ ಶಂಕೆ ವ್ಯಕ್ತಪಡಿಸುವುದಕ್ಕೆ ಸಣ್ಣದೊಂದು ಆಧಾರವಾದರೂ ಇತ್ತು. ಆದರೆ ಹೆಚ್ಚಿನ ಬಾರಿ ಮುಸ್ಲಿಮ್ ಯುವಕರು ಶಂಕಿತಗೊಳ್ಳುವುದಕ್ಕೆ ಇಷ್ಟು ಆಧಾರಗಳೂ ಇರುವುದಿಲ್ಲ. ಈ ದೇಶದ ಉದ್ದಗಲದಿಂದ ಭಯೋತ್ಪಾದನೆ ಮತ್ತು ಶಂಕೆಯ ಹೆಸರಲ್ಲಿ ಅನೇಕ ಮುಸ್ಲಿಮ್ ಯುವಕರನ್ನು ಬಂಧಿಸಲಾಗಿದೆ. ಅನೇಕ ಬಾರಿ ಅವರ ಬಗ್ಗೆ ಅನುಮಾನ ಪಡುವುದಕ್ಕೆ ಇರುವ ಏಕೈಕ ಕಾರಣ ಅವರ ಮುಸ್ಲಿಮ್ ಐಡೆಂಟಿಟಿ. ಮುಸ್ಲಿಮ್ ಹೆಸರು ಮತ್ತು ಚಹರೆಯನ್ನು ಹೊಂದಿರುವ ವ್ಯಕ್ತಿಯ ಮೇಲೆ ಅನುಮಾನ ಬರುವುದು ಸಹಜ ಎಂಬ ವಾತಾವರಣವನ್ನು ಈ ದೇಶದಲ್ಲಿ ವ್ಯವಸ್ಥಿತವಾಗಿ ಹುಟ್ಟು ಹಾಕಲಾಗಿದೆ. ಆದ್ದರಿಂದಲೇ ಮಿರ್ಝಾ, ಮುತೀಅïರನ್ನು ಪೊಲೀಸರು ಭಯೋತ್ಪಾದಕರೆಂದು ಕರೆದಾಗ ಅದನ್ನು ಸಮರ್ಥಿಸುವಂತೆ ಮಾಧ್ಯಮ ಕ್ಷೇತ್ರದ ಕೆಲವರು ವರ್ತಿಸಿದ್ದು. ಈ ಬಂಧಿತರಲ್ಲಿ ಭಯೋತ್ಪಾದನೆಯ ರೋಗಾಣುಗಳು ಇವೆಯೇ ಎಂಬ ಪತ್ತೆದಾರಿಕೆಯಲ್ಲಿ ತೊಡಗಿದ್ದು.
 ಭಯೋತ್ಪಾದಕನೆಂಬ ಗುರುತು ಚೀಟಿಯನ್ನು ಎರಡು ವರ್ಷಗಳ ವರೆಗೆ ಕೊರಳಿಗೆ ತೂಗು ಹಾಕಿಕೊಂಡ ಮಿರ್ಝಾನಿಗೆ ಇದೀಗ ನಿರಪರಾಧಿ ಎಂಬ ಗುರುತು ಚೀಟಿ ಲಭ್ಯವಾಗಿದೆ. ಹಾಗಂತ, ಆತ ಆ ಭಯೋತ್ಪಾದಕ ಗುರುತು ಚೀಟಿಯನ್ನು ಕೇಳಿ ಪಡೆದಿರಲಿಲ್ಲ ಅಥವಾ ಸ್ವಯಂ ಸಂಪಾದಿಸಿಯೂ ಇರಲಿಲ್ಲ. ಅದನ್ನು ಸ್ಥಾಪಿತ ಹಿತಾಸಕ್ತಿಗಳು ಬಲವಂತವಾಗಿ ಆತನ ಕೊರಳಿಗೆ ನೇತು ಹಾಕಿದ್ದುವು. ಆತ ಧರಿಸಲು ಒಪ್ಪದೇ ಇದ್ದಾಗ ಆತನ ಮೇಲೆ ಹಿಂಸೆ ಎಸಗಲಾಯಿತು. ಖಾಲಿ ಪತ್ರಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಯಿತು. ನ್ಯಾಯಾಧೀಶರ ಮುಂದೆ ಈ ಗುರುತು ಚೀಟಿಯನ್ನು ಸಮರ್ಥಿಸಿಕೊಳ್ಳುವಂತೆ ಬೆದರಿಕೆ ಹಾಕಲಾಯಿತು. ಅದೇ ವೇಳೆ, ನಾಗರಿಕ ಜಗತ್ತು ಮತ್ತು ಆ ಜಗತ್ತಿನಲ್ಲಿ ಪ್ರಾಬಲ್ಯ ಸ್ಥಾಪಿಸಿರುವ ಮಾಧ್ಯಮದ ಮಂದಿಯೂ ಆತನ ಆ ಗುರುತು ಚೀಟಿಯನ್ನು ಅಸಲಿ ಎಂದೇ ಕರೆದರು. ಆ ಗುರುತು ಚೀಟಿ ಇಡೀ ರಾಜ್ಯವನ್ನೇ ಧ್ವಂಸಗೊಳಿಸುವಷ್ಟು ಭೀಕರ ರೂಪದ್ದು ಅಂದರು. ಆತನೊಂದಿಗೆ ಸಲುಗೆಯಿಂದಿದ್ದ ಗೆಳೆಯರೇ ಆ ಗುರುತನ್ನು ಕಂಡು ಭಯಪಟ್ಟರು. ಮನೆ ಸ್ಮಶಾನವಾಯಿತು. ಡಿಆರ್‍ಡಿಓ ಅಂತೂ ಆತನನ್ನು ಕೆಲಸದಿಂದಲೇ ವಜಾಗೊಳಿಸಿತು. ಹೀಗೆ ಪಡಬಾರದ ಸಂಕಟವನ್ನು ಅನುಭವಿಸಿದ ಆತನಿಗೆ ಇದೀಗ 'ನಿರಪರಾಧಿ' ಎಂಬ ಗುರುತು ಚೀಟಿಯನ್ನು ನೀಡಲಾಗಿದೆ. ಆದರೆ, ಇದನ್ನು ಧರಿಸುವ ಮೊದಲು ಈ ಮೊದಲಿನ ಗುರುತು ಚೀಟಿಯ ಇತ್ಯರ್ಥ  ಆಗಬೇಕಾಗಿದೆ. ಅದನ್ನು ಧರಿಸಬೇಕಾದವರು ಯಾರೆಲ್ಲ? ಅವರೇಕೆ ಇದೀಗ ಅದನ್ನು ಧರಿಸಿಕೊಳ್ಳುವ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ? ಎರಡು ವರ್ಷಗಳ ವರೆಗೆ ಧರಿಸಿಕೊಂಡು ಓಡಾಡಿದ ಆತನ ಗುರುತು ಚೀಟಿಯನ್ನು ಕನಿಷ್ಠ ಎರಡು ದಿನಗಳ ಮಟ್ಟಿಗಾದರೂ ಧರಿಸಿಕೊಂಡು ಓಡಾಡಲು ಇವರು ಮುಂದೆ ಬರುತ್ತಿಲ್ಲವೇಕೆ? ಮಿರ್ಝಾ ನಿರಪರಾಧಿ ಎಂದಾದರೆ, ಆತನನ್ನು ಭಯೋತ್ಪಾದಕನೆಂದು ಕರೆದವರು ಏನಾಗಬೇಕು? ಅವರ ಕೊರಳಿಗೆ ಈ ಸಮಾಜ ಯಾವ ಗುರುತನ್ನು ನೇತು ಹಾಕಬೇಕು?
  
ಸಾದಿಕ್

ಏನೇ ಆದರೂ, ಮಿರ್ಝಾ ಆಗಲಿ, ಸಾದಿಕ್ ಆಗಲಿ  ಸಮಾಜವೆಂಬ ನಾವೇ ಹುಟ್ಟು ಹಾಕಿರುವ ಭ್ರಮೆಯೊಂದರ ಬಲಿಪಶುಗಳು. ಅವರು ಶಂಕಿತರಾದದ್ದು ತಮ್ಮ ಕೃತ್ಯಗಳಿಂದಲ್ಲ, ನಮ್ಮ ಭ್ರಮೆಗಳಿಂದ. ಈ ಭ್ರಮೆಯು ಸಾದಿಕ್‍ನ ಜೀವ ತೆಗೆದರೆ, ಮಿರ್ಝಾನ ಅತ್ಯಮೂಲ್ಯ ಸಂತಸವನ್ನೂ ಆಯುಷ್ಯವನ್ನೂ ಕಸಿದುಕೊಂಡಿದೆ. ಮಾತ್ರವಲ್ಲ, ಇಂಥ ಅನೇಕಾರು ಮಿರ್ಝಾರ ಬದುಕನ್ನು ಅದು ಇವತ್ತೂ ಕಸಿದುಕೊಳ್ಳುತ್ತಲೂ ಇವೆ. ಒಂದು ವೇಳೆ ಸಾದಿಕ್‍ನ ಮೇಲಿದ್ದ ಶಂಕೆ ನಿಜವೇ ಆಗಿರುತ್ತಿದ್ದರೂ ಆತನಿಗೆ ಕೆಲವು ತಿಂಗಳುಗಳ ಶಿಕ್ಷೆಯಷ್ಟೇ ಆಗುತ್ತಿತ್ತು. ಆದರೆ ನಾವು ಬಿತ್ತಿರುವ ಭ್ರಮೆಯು ಯಾವ ಪ್ರಮಾಣದಲ್ಲಿದೆಯೆಂದರೆ, ಕೊಲೆಯೇ ನಡೆಸುವಷ್ಟು ಮತ್ತು ಅದನ್ನು ನಿರ್ಲಜ್ಜವಾಗಿ ಸಮರ್ಥಿಸುವಷ್ಟು. ಇವತ್ತು ನಿರಪರಾಧಿ ಮಿರ್ಝಾ ಎತ್ತಿರುವ ಪ್ರಶ್ನೆಯನ್ನು ನಾಳೆ ಸಾದಿಕ್‍ನೂ ಎತ್ತಬಹುದು. ಆದರೆ ಉತ್ತರಿಸುವವರು ಯಾರು?

No comments:

Post a Comment