ಕ್ಲೆಪ್ಪೋಮೇನಿಯಾ ಎಂಬೊಂದು ರೋಗವಿದೆ. ಕದಿಯುವುದೇ ಈ ರೋಗದ ಲಕ್ಷಣ. ಈ ರೋಗಕ್ಕೆ ತುತ್ತಾದವರು ಸಾಮಾನ್ಯವಾಗಿ ಸಹಜವಾಗಿರುತ್ತಾರೆ. ಕ್ಲೆಪ್ಪೋಮೇನಿಯ ರೋಗಿ ಎಂದು ನೋಡಿದ ಕೂಡಲೇ ಹೇಳಿ ಬಿಡಬಹುದಾದ ಯಾವ ಲಕ್ಷಣಗಳೂ ಬಾಹ್ಯನೋಟಕ್ಕೆ ಗೋಚರಿಸುವುದಿಲ್ಲ. ಆದರೆ ರೋಗಿ ಒಳಗೊಳಗೇ ಒತ್ತಡ ಅನುಭವಿಸುತ್ತಿರುತ್ತಾನೆ/ಳೆ. ಕದಿಯುವಂತೆ ವ್ಯಕ್ತಿಯ ಮೇಲೆ ಆ ರೋಗ ಒತ್ತಾಯವನ್ನು ಹೇರುತ್ತಲೇ ಇರುತ್ತದೆ. ಅಂತಿಮವಾಗಿ ಕಳ್ಳತನ ಮಾಡುವ ಮೂಲಕ ಆ ಒತ್ತಡದಿಂದ ಆತ/ಕೆ ಹೊರಬರುತ್ತಾರೆ. ದುರಂತ ಏನೆಂದರೆ, ಕ್ಲೆಪ್ಪೋಮೇನಿಯ ರೋಗದ ಬಗ್ಗೆ ಸಮಾಜಕ್ಕೆ ಗೊತ್ತಿರುವುದು ತೀರಾ ಕಡಿಮೆ. ಕಳ್ಳತನವನ್ನು ರೋಗವಾಗಿ ನೋಡುವ ಹಂತಕ್ಕೆ ಸಮಾಜ ಇನ್ನೂ ಬೆಳೆದಿಲ್ಲ. ಆದ್ದರಿಂದಲೇ ಕಳ್ಳತನ ಪ್ರಕರಣಗಳ ಬಗ್ಗೆ ನಡೆಯುವ ಹೆಚ್ಚಿನೆಲ್ಲ ಚರ್ಚೆಗಳು ಕ್ಲೆಪ್ಪೋಮೇನಿಯದ ಉಲ್ಲೇಖವಿಲ್ಲದೇ ಅಥವಾ ಅಂಥದ್ದೊಂದು ಸಾಧ್ಯತೆಯನ್ನು ಚರ್ಚೆಗೊಡ್ಡದೆಯೇ ಕೊನೆಗೊಳ್ಳುತ್ತದೆ. ಟೀಕೆ, ನಿಂದನೆ, ಅಪಹಾಸ್ಯದ ಮಾತುಗಳು ಧಾರಾಳ ಕೇಳಿ ಬರುತ್ತವೆ. ಒಂದು ಕಡೆ ರೋಗದ ಒತ್ತಡ, ಇನ್ನೊಂದು ಕಡೆ ರೋಗವನ್ನು ಅರ್ಥೈಸಿಕೊಳ್ಳದ ಸಮಾಜ - ಇವುಗಳ ಮಧ್ಯೆ ರೋಗಿಗಳು ಸಹಜವಾಗಿ ಕುಗ್ಗಿ ಹೋಗುತ್ತಾರೆ. ಅವಮಾನದಿಂದ ಖಿನ್ನತೆಗೆ ಒಳಗಾಗುವುದೂ ಇದೆ. ಕಳೆದ ವಾರ ಸಾವಿಗೀಡಾದ ಎಚ್.ಎಸ್. ಲಲಿತಾರು ಇದಕ್ಕೆ ಅತ್ಯುತ್ತಮ ಉದಾಹರಣೆ.
ಕಳೆದ ಮಾರ್ಚ್‍ನಲ್ಲಿ ಕನ್ನಡದ ಹೆಚ್ಚಿನೆಲ್ಲ ಟಿ.ವಿ. ಚಾನೆಲ್‍ಗಳು ‘ಕಳ್ಳಿ ಕಾರ್ಪೋರೇಟರ್' ಎಂಬ ಆನೆಗಾತ್ರದ ಶೀರ್ಷಿಕೆಯಲ್ಲಿ ಬ್ರೇಕಿಂಗ್ ನ್ಯೂಸ್ ಪ್ರಕಟಿಸಿದ್ದುವು. ಬೆಂಗಳೂರು ಮಹಾ ನಗರ ಪಾಲಿಕೆಯ ಗಿರಿನಗರ ವಾರ್ಡ್‍ನ ಬಿಜೆಪಿ ಕಾರ್ಪೋರೇಟರ್ ಲಲಿತಾ ಎಂಬವರು ಬಟ್ಟೆ ಅಂಗಡಿಯೊಂದರಲ್ಲಿ ಸೀರೆ ಕದ್ದು ಸಿಕ್ಕಿಬಿದ್ದ ಸುದ್ದಿ ಅದು. ಸಿ.ಸಿ. ಟಿ.ವಿ.ಯಲ್ಲಿ ಸೆರೆಯಾದ ದೃಶ್ಯಗಳನ್ನು ಪದೇಪದೇ ಪ್ರಸಾರ ಮಾಡುತ್ತಾ ಲಲಿತ ಅವರನ್ನು ಮತ್ತು ಅವರ ಕುಟುಂಬವನ್ನು ಟಿ.ವಿ. ಚಾನೆಲ್‍ಗಳು ಮಾನಸಿಕವಾಗಿ ಕೊಂದಿದ್ದುವು. ಪ್ರಕರಣವನ್ನು ವೈಭವೀಕರಿಸಿದಂತೆ ಅವರ ಕುಟುಂಬವು ಆ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ವಿನಂತಿಸಿತ್ತು. ಲಲಿತಾ ಅವರು ಕ್ಲೆಪ್ಪೋಮೇನಿಯ ರೋಗಕ್ಕೆ ತುತ್ತಾಗಿರುವುದನ್ನು ದಾಖಲೆಗಳ ಸಮೇತ ಅವರ ಪತಿ ಮಾಧ್ಯಮಗಳ ಎದುರು ಬಿಡಿಸಿಟ್ಟಿದ್ದರು. ಆದರೆ ಆ ಹೊತ್ತಿಗಾಗಲೇ ಲಲಿತಾ ‘ಕಳ್ಳಿ'ಯ ಇಮೇಜನ್ನು ಗಳಿಸಿಕೊಂಡು ಬಿಟ್ಟಿದ್ದರು.
ಘಟನೆಗೆ ಎಷ್ಟು ದೊಡ್ಡ ಮಟ್ಟದ ಪ್ರಚಾರ ಸಿಕ್ಕಿತ್ತೆಂದರೆ, ಬಿಜೆಪಿ ಅವರನ್ನು ವಜಾಗೊಳಿಸಿತು. ಕ್ಲೆಪ್ಪೋಮೇನಿಯ ರೋಗದ ಬಗ್ಗೆ ಮತ್ತು ಲಲಿತಾ ಅವರು ಅದರಿಂದ ಬಳಲುತ್ತಿರುವ ಬಗ್ಗೆ ಮಾಧ್ಯಮಗಳ ಮುಂದೆ ವಿವರಿಸಿ ನೊಂದ ಕುಟುಂಬಕ್ಕೆ ಮಾನಸಿಕ ಧೈರ್ಯ ಕೊಡುವ ಬದಲು ಬಿಜೆಪಿ ಇಡೀ ಪ್ರಕರಣದಿಂದ ಪಲಾಯನ ಮಾಡಿತು. ನಿಜವಾಗಿ, ಲಲಿತ ಅವರನ್ನು ಕಳ್ಳತನದ ಆರೋಪದಿಂದ ಪಾರು ಮಾಡುವ ಸಾಮರ್ಥ್ಯವಿದ್ದುದು ಒಂದು ಬಿಜೆಪಿಗಾದರೆ ಇನ್ನೊಂದು ಮಾಧ್ಯಮಕ್ಕೆ. ಆದರೆ ಅವೆರಡೂ ತೀರಾ ಬೇಜವಾಬ್ದಾರಿಯಿಂದ ವರ್ತಿಸಿದ್ದುವು. ಕಳ್ಳಿ ಕಾರ್ಪೋರೇಟರ್ ಎಂದಿದ್ದ ಮಾಧ್ಯಮಗಳಿಗೆ ಕ್ಲೆಪ್ಪೋಮೇನಿಯ ಕಾರ್ಪೋರೇಟರ್ ಎಂದು ತಿದ್ದಿಕೊಳ್ಳುವ ಅವಕಾಶವೂ ಇತ್ತು. ಆದರೆ ಮಾಧ್ಯಮ ಕ್ಷೇತ್ರದ ಬೇಜವಾಬ್ದಾರಿ ವರ್ತನೆಯು ಲಲಿತ ಮತ್ತು ಅವರ ಕುಟುಂಬವನ್ನು ತೀವ್ರವಾಗಿ ಘಾಸಿಗೊಳಿಸಿತು. ಲಲಿತ ಖಿನ್ನತೆಗೆ ಒಳಗಾದರು. ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದು ಕೊನೆಗೆ ಮೃತಪಟ್ಟರು.
ಬಹುಶಃ, ಅವಸರದ ಪತ್ರಿಕೋದ್ಯಮಕ್ಕೆ ಜೀವತೆತ್ತವರ ಪಟ್ಟಿಯಲ್ಲಿ ಲಲಿತಾರ ಹೆಸರು ಎಷ್ಟನೆಯದೋ ಗೊತ್ತಿಲ್ಲ. ಆದರೆ ಬ್ರಿಟನ್ನಿನ ರಾಜಕುಮಾರಿ ಡಯಾನರಂತೆ ಲಲಿತ ಕೂಡ ಮಾಧ್ಯಮ ದಾಹಕ್ಕೆ ಬಲಿಯಾಗಿದ್ದಾರೆ. ಆದರೂ ಮಾಧ್ಯಮಗಳಲ್ಲಿ ಮುಖ್ಯವಾಗಿ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಈ ಬಗ್ಗೆ ಎಳ್ಳಷ್ಟೂ ಪಶ್ಚಾತ್ತಾಪಭಾವ ಕಾಣಿಸಿಕೊಂಡಿಲ್ಲ. ಕನಿಷ್ಠ ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಅವಕಾಶವನ್ನೂ ಅವು ಬಳಸಿಕೊಂಡಿಲ್ಲ. ನಿಜವಾಗಿ, ಕಾರ್ಪೋರೇಟರ್ ಓರ್ವರು ಸೀರೆ ಕದಿಯುತ್ತಾರೆಂಬುದೇ ಅಚ್ಚರಿಯ ಸಂಗತಿ. ಯಾಕೆಂದರೆ, ಕಾರ್ಪೋರೇಟರ್‍ಗೆ ಅವರದ್ದೇ ಆದ ಸಾಮಾಜಿಕ ಸ್ಥಾನಮಾನ, ಗೌರವಾದರಗಳಿವೆ. ಕದ್ದು ಸೀರೆ ಉಡಬೇಕಾದಷ್ಟು ಬಡತನವಿರುವ ಕಾರ್ಪೋರೇಟರ್‍ಗಳು ಬೆಂಗಳೂರಿನಲ್ಲಿದ್ದಾರೆಂಬುದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಅಲ್ಲದೇ, ಲಲಿತ ಅವರ ಹಿನ್ನೆಲೆಯೂ ಬಡತನದ್ದಲ್ಲ... ಸುದ್ದಿ ತಯಾರಿಸುವ ಸಂದರ್ಭದಲ್ಲಿ ಓರ್ವ ಪತ್ರಕರ್ತನ/ಳನ್ನು ವಿವೇಚನೆಗೆ ಒಡ್ಡಬೇಕಾದ ಅಂಶಗಳಿವು. 'ಕಳ್ಳಿ ಕಾರ್ಪೋರೇಟರ್' ಎಂಬ ಶೀರ್ಷಿಕೆಯನ್ನು ರಚಿಸುವುದಕ್ಕಿಂತ ಮೊದಲು ನಿಜವಾಗಿಯೂ ಅದು ಕಳ್ಳತನವೇ ಎಂಬೊಂದು ಅನುಮಾನ ಓರ್ವ ಪತ್ರಕರ್ತನಲ್ಲಿ ಮೂಡಿ ಬರಲೇಬೇಕಿತ್ತು. ಕಾರ್ಪೋರೇಟರ್ ಕದ್ದದ್ದೇಕೆ ಎಂಬ ಶಂಕೆಯ ಹುಳವೊಂದು ಮೆದುಳನ್ನು ಕೆರೆಯುವ ಸಂದರ್ಭ
ಸೃಷ್ಟಿಯಾಗಬೇಕಿತ್ತು. ಅಷ್ಟಕ್ಕೂ, ಬಟ್ಟೆಯ ಅಂಗಡಿಗಳಲ್ಲಿ ಸಿ.ಸಿ. ಕ್ಯಾಮೆರಾ ಇರುತ್ತದೆ, ಏನೇ ಎಡವಟ್ಟು ಮಾಡಿಕೊಂಡರೂ ಗೊತ್ತಾಗುತ್ತದೆ.. ಎಂಬ ಪ್ರಜ್ಞೆ ಲಲಿತ ಅವರನ್ನು ಬಿಡಿ ತೀರಾ ಸಾಮಾನ್ಯರಿಗೂ ಇವತ್ತು ಗೊತ್ತಿರುತ್ತದೆ. ಹೀಗಿರುತ್ತಾ ಕಾರ್ಪೋರೇಟರ್‍ರನ್ನು ಕಳ್ಳಿ ಎಂದು ಒಂದೇ ಏಟಿಗೆ ಕರೆದದ್ದನ್ನು ಏನೆಂದು ಪರಿಗಣಿಸಬೇಕು? ಪತ್ರಿಕೋದ್ಯಮದ ತುರ್ತುಗಳು ಏನೇ ಇರಲಿ, ಅದಕ್ಕಿಂತ ಓರ್ವ ವ್ಯಕ್ತಿಯ ಮಾನ ಮತ್ತು ಘನತೆ ಅಮೂಲ್ಯವಾದುದು. ತುರ್ತುಗಳ ನೆಪದಲ್ಲಿ ಓರ್ವ ವ್ಯಕ್ತಿಯ ಘನತೆಗೆ ಧಕ್ಕೆತರುವ ಸ್ವಾತಂತ್ರ್ಯ ಯಾವ ಪತ್ರಕರ್ತರಿಗೂ ಇಲ್ಲ. ಆದರೂ ಲಲಿತಾರ ಪ್ರಕರಣದಲ್ಲಿ ಮಾಧ್ಯಮಗಳು ಬೇಕಾಬಿಟ್ಟಿಯಾಗಿ ವರ್ತಿಸಿದುವು. ಓರ್ವ ಮಹಿಳೆಯಾಗಿ ಮತ್ತು ಜನಪ್ರತಿನಿಧಿಯಾಗಿ ಅವರಿಗಿರಬಹುದಾದ ಸ್ಥಾನಮಾನವನ್ನು ಪರಿಗಣಿಸದೆಯೇ ಮತ್ತು ಅವರಿಗೆ ತಮ್ಮನ್ನು ಸಮರ್ಥಿಸಿಕೊಳ್ಳುವುದಕ್ಕೆ ಇರುವ ಸ್ವಾತಂತ್ರ್ಯವನ್ನು ಮಾನ್ಯ ಮಾಡದೆಯೇ ತಾವೇ ತೀರ್ಪು ಕೊಟ್ಟವು.
ಅಂದಹಾಗೆ, ಮಾಧ್ಯಮಗಳು ಕಟಕಟೆಯಲ್ಲಿ ನಿಲ್ಲುವುದು ಇದು ಮೊದಲ ಸಲವೇನೂ ಅಲ್ಲ. ಅವುಗಳ ಈಗಿನ ವರ್ತನೆಯನ್ನು ನೋಡಿದರೆ ಇದು ಕೊನೆಯದಾಗುವ ಸಾಧ್ಯತೆಯೂ ಇಲ್ಲ. ಪತ್ರಿಕೆಗಳು ಮತ್ತು ಚಾನೆಲ್‍ಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದರಿಂದ ಪತ್ರಿಕಾ ರಂಗಕ್ಕೆ ಒಳತಾಗಬಹುದು ಎಂದೇ ಭಾವಿಸಲಾಗಿತ್ತು. ಸಣ್ಣ ಪುಟ್ಟ ಸುದ್ದಿಗಳಿಗೂ ಸ್ಪೇಸ್ ಸಿಗಬಹುದು, ಸುದ್ದಿಗೆ ನ್ಯಾಯ ಒದಗಬಹುದು, ಪಾರದರ್ಶಕತೆ ಉಂಟಾಗಬಹುದು.. ಎಂಬೆಲ್ಲ ನಿರೀಕ್ಷೆಗಳನ್ನು ಹುಟ್ಟಿಸಲಾಗಿತ್ತು. ಸಾಮಾನ್ಯವಾಗಿ, ಗ್ರಾವಿೂಣ ಪ್ರದೇಶಗಳು ಯಾವಾಗಲೂ ಮಾಧ್ಯಮ ಕಣ್ಣಿನಿಂದ ಹೊರಗಿರುತ್ತವೆ. ಅಲ್ಲಿನ ಸಮಸ್ಯೆಗಳಿಗೆ ಕ್ಯಾಮರಾ ಮತ್ತು ಪೆನ್ನು ಹಿಡಿಯುವ ಕೈಗಳು ಸಿಗುವುದು ಕಡಿಮೆ. ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳ ಹೆಚ್ಚಳದಿಂದಾಗಿ ಈ ಕೊರತೆಗಳನ್ನು ತುಂಬಬಹುದು ಎಂದೂ ಹೇಳಲಾಗುತ್ತಿತ್ತು. ಇವತ್ತು ಈ ನಿರೀಕ್ಷೆಗಳಿಗೆ ಸ್ವಲ್ಪ ಮಟ್ಟಿನ ನ್ಯಾಯ ಸಿಕ್ಕಿವೆಯಾದರೂ ಅದಕ್ಕಿಂತಲೂ ಭಯಾನಕ ಅಪಾಯವೊಂದು ಈಗ ಸೃಷ್ಟಿಯಾಗಿಬಿಟ್ಟಿವೆ. ಅದುವೇ ಪೈಪೋಟಿ. ತಾವೇ ಮೊದಲು ಸುದ್ದಿಯನ್ನು ಬಿತ್ತರಿಸಬೇಕು ಎಂಬ ಅವಸರವು ಸರಿ-ತಪ್ಪುಗಳನ್ನು ವಿವೇಚಿಸದ ಹಂತಕ್ಕೆ ಪತ್ರಕರ್ತರನ್ನು ತಲುಪಿಸಿಬಿಟ್ಟಿವೆ. ಯಾವ ಎಚ್ಚರಿಕೆಯನ್ನೂ ಇರಿಸದೇ ಬ್ರೇಕಿಂಗ್ ನ್ಯೂಸ್, ಎಕ್ಸ್ ಕ್ಲೂಸಿವ್ ನ್ಯೂಸ್‍ಗಳನ್ನು ತಯಾರಿಸುವಷ್ಟು ಅದು ಪತ್ರಕರ್ತರನ್ನು ಸಂವೇದನಾರಹಿತಗೊಳಿಸಿವೆ. ಘನತೆ, ಗೌರವ, ಸ್ಥಾನ-ಮಾನ, ಸತ್ಯ, ಗೌಪ್ಯತೆ.. ಮುಂತಾದುವುಗಳೆಲ್ಲ ಪತ್ರಿಕೋದ್ಯಮದ ತುರ್ತುಗಳು ಮತ್ತು ಪೈಪೋಟಿಯ ರಭಸಕ್ಕೆ ಸಿಲುಕಿ ನಿಧನ ಹೊಂದುತ್ತಿವೆ. ಲಲಿತ ಅದರ ಇತ್ತೀಚಿನ ಬಲಿ. ಆದ್ದರಿಂದ ಈ ಬಲಿಗಳ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳ ಉಂಟಾಗದಿರಲಿಕ್ಕಾಗಿ ಮಾಧ್ಯಮ ಕ್ಷೇತ್ರವು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ. ಮಾಧ್ಯಮ ಜಗತ್ತು ಯಾಕೆ ಸಂವೇದನಾಶೀಲವಾಗಬೇಕು ಎಂಬ ಪ್ರಶ್ನೆ ಎದ್ದಾಗಲೆಲ್ಲ ಲಲಿತ ನೆನಪಾಗಲಿ. ಅವರ ಸಾವು ಮಾಧ್ಯಮ ಕ್ಷೇತ್ರದ ಒಣ ಮನಸ್ಸುಗಳಿಗೆ ವಿವೇಚನೆಯನ್ನು ತುಂಬಲಿ.

No comments:
Post a Comment