Wednesday, 17 December 2014

ಆಗ್ರಾ ಮತಾಂತರದ ಹಿಂದೆ ಮತಾಂತರವನ್ನೇ ನಿಷೇಧಿಸುವ ಉದ್ದೇಶ ಇದೆಯೇ?

    ಸಾಧ್ವಿ ಜ್ಯೋತಿ ನಿರಂಜನ್, ಸಾಕ್ಷಿ ಮಹಾರಾಜ್ ಮತ್ತು ಸುಶ್ಮಾ ಸ್ವರಾಜ್‍ರನ್ನು ವಿವಾದದಿಂದ ರಕ್ಷಿಸಲು ಆಗ್ರಾದ ಮಧುನಗರ ಕೊಳೆಗೇರಿಯು ಯಶಸ್ವಿಯಾಗಿದೆ. ಪಾರ್ಲಿಮೆಂಟ್‍ನಲ್ಲಿ ಕಪ್ಪುಹಣದ ಚರ್ಚೆ ನಡೆಯುತ್ತಿದ್ದಾಗ ದೆಹಲಿಯ ಕಾರ್ಯಕ್ರಮದಲ್ಲಿ ಸಾಧ್ವಿ ವಿವಾದಿತ ಹೇಳಿಕೆಯೊಂದನ್ನು ಕೊಟ್ಟರು. ಪಾರ್ಲಿಮೆಂಟು ಸಾಧ್ವಿಯ ಸುತ್ತ ತಿರುಗತೊಡಗಿತು. ಕಪ್ಪು ಹಣವನ್ನು ಕೈಬಿಟ್ಟು ಪ್ರತಿಪಕ್ಷಗಳು ಸಾಧ್ವಿಯನ್ನು ಎತ್ತಿಕೊಂಡವು. ಕ್ಷಮೆಯಾಚನೆಯನ್ನೂ ಪಡೆದುವು. ಅದೇ ವೇಳೆ ಸಾಕ್ಷಿ ಮಹಾರಾಜ್ ಎಂಬ ಸಂಸದ ಗೋಡ್ಸೆಯನ್ನು ಮಹಾನ್ ದೇಶಭಕ್ತ ಎಂದು ಹೊಗಳಿದರು. ಸಾಧ್ವಿಯ ಸುತ್ತ ನೆರೆದಿದ್ದ ವಿರೋಧ ಪಕ್ಷಗಳು ಮಹಾರಾಜ್‍ರ ಸುತ್ತ ನೆರೆದುವು. ಅವರಿಂದ ಕ್ಷಮಾಯಾಚನೆಯನ್ನು ಪಡಕೊಳ್ಳುವುದಕ್ಕಾಗಿ ಒತ್ತಡವನ್ನು ಹೇರತೊಡಗಿದುವು. ಅವರಿಂದ ಮೂರು ಮೂರು ಬಾರಿ ಕ್ಷಮೆ ಯಾಚನೆಯನ್ನು ಪಡೆಯುವ ಹೊತ್ತಲ್ಲೇ ಭಗವದ್ಗೀತೆ ರಾಷ್ಟ್ರ ಗ್ರಂಥವಾಗಬೇಕು ಎಂದು ಸುಶ್ಮಾ ಸ್ವರಾಜ್ ಹೇಳಿಕೆಯನ್ನು ಕೊಟ್ಟರು. ಸಾಧ್ವಿ ಮತ್ತು ಸಾಕ್ಷಿಯನ್ನು ಕೈಬಿಟ್ಟ ವಿರೋಧ ಪಕ್ಷಗಳು ಸುಶ್ಮಾರನ್ನು ತರಾಟೆಗೆ ತೆಗೆದುಕೊಂಡವು. ಈ ಕುರಿತಂತೆ ಮಾಧ್ಯಮಗಳಲ್ಲಿ ಚರ್ಚೆಗಳೂ ನಡೆದುವು. ಈ ಚರ್ಚೆ ಇನ್ನೂ ಮುಗಿಯುವುದಕ್ಕಿಂತ ಮೊದಲೇ ಆಗ್ರಾದ ಮಧುನಗರ ಕೊಳೆಗೇರಿಯ 56 ಮುಸ್ಲಿಮ್ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಸುದ್ದಿ ಪ್ರಕಟವಾದುವು. ಮಾಧ್ಯಮಗಳಲ್ಲಿ ಮಾತ್ರವಲ್ಲ, ಪಾರ್ಲಿಮೆಂಟಿನಲ್ಲೂ ಇದು ತೀವ್ರ ಚರ್ಚೆ, ವಿವಾದಕ್ಕೆ ಕಾರಣವಾಯಿತು. ಇದೀಗ ಈ ಸುದ್ದಿಯನ್ನು ಮರೆಸುವಂತೆ ಅಲೀಘಡ್‍ನಲ್ಲಿ ಡಿ. 25ರಂದು ಸಂಘಪರಿವಾರ ನಡೆಸಲುದ್ದೇಶಿಸಿರುವ ಮತಾಂತರ ಕಾರ್ಯಕ್ರಮವು ಪ್ರಚಾರ ಪಡೆಯುತ್ತಿದೆ. ಅಂತೂ ಕಪ್ಪು ಹಣದ ಸುತ್ತ ಆರಂಭಗೊಂಡ ಚರ್ಚೆಯು ಬೇಕಾಬಿಟ್ಟಿ ತಿರುವು ಪಡೆದು ಮೋದಿಯನ್ನೂ ಮತ್ತು ಅವರ ಪಕ್ಷವನ್ನೂ ರಕ್ಷಿಸುವಲ್ಲಿ ಸಫಲವಾಗಿದೆ.
 ನಿಜವಾಗಿ, ಆಗ್ರಾ ಮತಾಂತರ ಪ್ರಕರಣಕ್ಕೆ ಬಿಜೆಪಿ ನೀಡುತ್ತಿರುವ ಪ್ರತಿಕ್ರಿಯೆಗಳನ್ನು ನೋಡಿದರೆ ಆ ಇಡೀ ಪ್ರಕ್ರಿಯೆಯೇ ಸಂಚಿನಂತೆ ಕಾಣುತ್ತದೆ. ಪ್ರಕರಣಕ್ಕೆ ಸಂಬಂಧಿಸಿ ಪಾರ್ಲಿಮೆಂಟಿನಲ್ಲಿ ಹೇಳಿಕೆ ನೀಡಿದ ವೆಂಕಯ್ಯ ನಾಯ್ಡುರವರು, ‘ದೇಶದಾದ್ಯಂತ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರೋಣ’ ಎಂದರು. ಬಹುಶಃ, ಆಗ್ರಾದ ಮತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಹೇಳಿಕೆಗಳನ್ನೂ ಮತ್ತು ವೆಂಕಯ್ಯ ನಾಯ್ಡು ಅವರ ಹೇಳಿಕೆಯನ್ನೂ ಜೊತೆಯಾಗಿಟ್ಟು ನೋಡಿದರೆ ಷಡ್ಯಂತ್ರದ ಅಸ್ಪಷ್ಟ ಚಿತ್ರವೊಂದು ಮೂಡಿಬರುತ್ತದೆ. ಮತಾಂತರ ವಿರೋಧಿ ಕಾನೂನನ್ನು ರಚಿಸುವ ಮತ್ತು ಅದನ್ನು ದೇಶದಾದ್ಯಂತ ಏಕಪ್ರಕಾರ ಹೇರುವ ಉದ್ದೇಶದಿಂದಲೇ ಆಗ್ರ ಮತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತೇ? ಆಗ್ರಾದಲ್ಲಿ ಮತಾಂತರ ನಡೆದೇ ಇಲ್ಲ ಎಂದು ಅದರಲ್ಲಿ ಭಾಗವಹಿಸಿದವರು ಹೇಳಿಕೊಳ್ಳುತ್ತಿದ್ದಾರೆ. ರೇಶನ್ ಕಾರ್ಡನ್ನು ಪಡಕೊಳ್ಳುವುದಕ್ಕಾಗಿ ನಾವು ಆ ಕಾರ್ಯಕ್ರಮಕ್ಕೆ ಹೋಗಿರುವುದಾಗಿ ಅನೇಕರು ಹೇಳಿಕೊಂಡಿದ್ದಾರೆ. ಅದರಲ್ಲಿ ಭಾಗವಹಿಸಿದವರು ಆ ಕಾರ್ಯಕ್ರಮದ ಬಳಿಕವೂ ಮಸೀದಿಗೆ ಹೋದದ್ದು ಮತ್ತು ತಾವು ಈಗಲೂ ಮುಸ್ಲಿಮರೇ ಆಗಿರುವುದಾಗಿ ಮಾಧ್ಯಮಗಳ ಮುಂದೆ ಹೇಳಿಕೊಂಡಿರುವುದೂ ನಡೆದಿದೆ. ಇವೆಲ್ಲ ಸೂಚಿಸುವುದೇನನ್ನು? ಮತಾಂತರ ಎಂಬುದು ಒಂದು ಪೂಜಾ ಕಾರ್ಯಕ್ರಮದ ಸುತ್ತ ನೆರೆಯುವುದರ ಹೆಸರು ಅಲ್ಲವಲ್ಲ. ಅದು ಸೈದ್ಧಾಂತಿಕ ಪರಿವರ್ತನೆ. ಒಂದು ಸಿದ್ಧಾಂತದಿಂದ ವಿಮುಖಗೊಂಡು ಇನ್ನೊಂದರಲ್ಲಿ ನೆಲೆ, ಬೆಲೆ ಹುಡುಕುವ ಪ್ರಕ್ರಿಯೆ. ಆಗ್ರಾ ಮತಾಂತರ ಪ್ರಕರಣದಲ್ಲಿ ಇಂಥ ಯಾವ ಅಂಶಗಳೂ ವ್ಯಕ್ತಗೊಂಡೇ ಇಲ್ಲ. ಬಡ ಮನುಷ್ಯರು ಒಂದು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದುದನ್ನು ಬಿಟ್ಟರೆ ಉಳಿದಂತೆ ಯಾವ ಬದಲಾವಣೆಗಳೂ ನಡೆದಿಲ್ಲ. ಇಂಥದ್ದೊಂದು ನಿರ್ಜೀವ ಕಾರ್ಯಕ್ರಮವನ್ನು ಸಂಘಪರಿವಾರ ಹಮ್ಮಿಕೊಂಡಿರುವುದಕ್ಕೆ ಕಾರಣಗಳೇನು? ಅವು ನಿಜವಾಗಿಯೂ ಮತಾಂತರ ಮಾಡಲು ಬಯಸಿತ್ತೇ ಅಥವಾ ಅಂಥದ್ದೊಂದು ಹುಯಿಲೆಬ್ಬಿಸುವ ಉದ್ದೇಶವನ್ನಷ್ಟೇ ಹೊಂದಿತ್ತೇ? ಮತಾಂತರವು ದೇಶದಾದ್ಯಂತ ಚರ್ಚೆಗೊಳಗಾಗಲಿ ಮತ್ತು ಮತಾಂತರ ವಿರೋಧಿ ಕಾನೂನನ್ನು ರಚಿಸಲು ಕೇಂದ್ರ ಸರಕಾರಕ್ಕೆ ತಕ್ಕ ಸಂದರ್ಭ ಒದಗಿ ಬರಲಿ ಎಂಬ ತಂತ್ರ ಅದರ ಹಿಂದಿತ್ತೇ?
 ಮತಾಂತರ ವೈಯಕ್ತಿಕವಾದುದು. ಕಾಂಗ್ರೆಸಿಗನೋರ್ವ ಬಿಜೆಪಿಗನಾಗುವುದು, ಬಿಜೆಪಿಗನೋರ್ವ ಕಮ್ಯುನಿಸ್ಟನಾಗುವುದು ಅಥವಾ ಕಮ್ಯುನಿಸ್ಟನು ಕಾಂಗ್ರೆಸಿಗನಾಗುವುದು ಹೇಗೆ ಸಹಜ ಮತ್ತು ಸರಾಗವೋ ಹಿಂದೂವೊಬ್ಬ ಮುಸ್ಲಿಮ್ ಆಗುವುದು, ಮುಸ್ಲಿಮನೋರ್ವ ಕ್ರೈಸ್ತ ಆಗುವುದು ಅಥವಾ ಕ್ರೈಸ್ತನೋರ್ವ ಹಿಂದೂ ಆಗುವುದು ಕೂಡ ಅಷ್ಟೇ ಸಹಜ ಮತ್ತು ಸರಾಗ ಆಗಬೇಕು. ಬಿಜೆಪಿ ಸಿದ್ಧಾಂತದಿಂದ ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಸಿದ್ಧಾಂತರವಾಗುವುದು ತಲ್ಲಣ ಸೃಷ್ಟಿಸುವುದಿಲ್ಲವಾದರೆ ಇಸ್ಲಾಮ್‍ನಿಂದ ಹಿಂದೂ ಧರ್ಮಕ್ಕೆ ಧರ್ಮಾಂತರವಾಗುವುದು ಯಾಕೆ ತಲ್ಲಣ ಉಂಟು ಮಾಡಬೇಕು? ಧರ್ಮಾಂತರ ಓರ್ವ ವ್ಯಕ್ತಿಯ ಸಹಜ ಸ್ವಾತಂತ್ರ್ಯ. ಸಿದ್ಧಾಂತಗಳನ್ನು ಅಧ್ಯಯನ ನಡೆಸುತ್ತ ಆತ ಒಂದರಿಂದ ಇನ್ನೊಂದಕ್ಕೆ ವಾಲಬಲ್ಲ. ಚೆಗೆವಾರನನ್ನು ಓದುತ್ತಾ ಪುಳಕಿತಗೊಂಡ ವ್ಯಕ್ತಿ ಮುಂದೆ ಪ್ರವಾದಿ ಮುಹಮ್ಮದ್‍ರನ್ನು ಓದುತ್ತಾ ಪ್ರಭಾವಿತನಾಗಬಲ್ಲ. ಅದು ಅಧ್ಯಯನನಿರತ ವ್ಯಕ್ತಿಯ ಸ್ವಾತಂತ್ರ್ಯ. ಈ ಸ್ವಾತಂತ್ರ್ಯಕ್ಕೆ ಅಪಾಯ ಒದಗುವುದು ಯಾವಾಗ ಎಂದರೆ ಆಮಿಷಗಳು ಮತ್ತು ಬೆದರಿಕೆಗಳು ಈ ಪ್ರಕ್ರಿಯೆಯಲ್ಲಿ ಜಾಗ ಪಡಕೊಂಡಾಗ. ಅಧ್ಯಯನದಿಂದಾಗಿ ಓರ್ವ ವ್ಯಕ್ತಿಯಲ್ಲಿ ಉಂಟಾಗುವ ಸೈದ್ಧಾಂತಿಕ ಬದಲಾವಣೆಗೂ ಬೆದರಿಕೆಗಳ ಕಾರಣಕ್ಕಾಗಿ ಓರ್ವ ವ್ಯಕ್ತಿ ಸಿದ್ಧಾಂತವನ್ನು ಬದಲಿಸಿಕೊಳ್ಳುವುದಕ್ಕೂ ವ್ಯತ್ಯಾಸ ಇದೆ. ಯಾವ ಸಿದ್ಧಾಂತವೂ ಆಮಿಷಗಳಿಂದಲೋ ಬೆದರಿಕೆಗಳಿಂದಲೋ ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಯಾಕೆಂದರೆ, ಸಿದ್ಧಾಂತವೊಂದು ಅಸ್ತಿತ್ವಕ್ಕೆ ಬರುವುದು ಬೆದರಿಕೆಗಳ ಮೂಲಕ ಕೂಡಿಹಾಕಿದ ಅನುಯಾಯಿಗಳಿಂದಲ್ಲ. ಅಂಥ ಅನುಯಾಯಿಗಳು ಆ ಸಿದ್ಧಾಂತದ ಜಾರಿಯಲ್ಲಿ ಪಾಲುಗೊಳ್ಳಲಾರರು. ಅವರನ್ನು ನೋಡಿ ಇತರರು ಆ ಸಿದ್ಧಾಂತಕ್ಕೆ ಆಕರ್ಷಿತರೂ ಆಗಲಾರರು. ಒಂದು ರೀತಿಯಲ್ಲಿ, ಅಂಥ ಅನುಯಾಯಿಗಳು ಆ ಸಿದ್ಧಾಂತದ ಪರಾಜಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಬಲ್ಲರೇ ಹೊರತು ವಿಜಯದಲ್ಲಲ್ಲ. ಆದ್ದರಿಂದಲೇ, ಪವಿತ್ರ ಕುರ್‍ಆನ್- ಧರ್ಮದಲ್ಲಿ ಬಲಾತ್ಕಾರವಿಲ್ಲ (2:256) ಎಂದು ಬಲವಾಗಿ ಸಾರಿದೆ. ಇದು ಆಗ್ರದಲ್ಲಿ ಮತಾಂತರ ಕಾರ್ಯಕ್ರಮವನ್ನು ಹಮ್ಮಿಕೊಂಡವರಿಗೆ ಗೊತ್ತಿಲ್ಲ ಎಂದಲ್ಲ. ಆಮಿಷಗಳಿಗೆ ಮನಸೋತು ಬರುವವರು ನಿಷ್ಠಾವಂತ ಅನುಯಾಯಿಗಳಾಗಲಾರರು ಎಂಬುದು ತೀರಾ ಸಾಮಾನ್ಯರಿಗೂ ಗೊತ್ತಿರುತ್ತದೆ. ನಾಳೆ ರೇಶನ್ ಕಾರ್ಡ್‍ಗಿಂತಲೂ ಬೆಲೆಬಾಳುವ ಆಮಿಷವನ್ನು ಇನ್ನಾರೋ ಒಡ್ಡಿದರೆ ಇವರು ತಮ್ಮ ನಿಷ್ಠೆಯನ್ನು ಖಂಡಿತ ಬದಲಿಸಬಲ್ಲರು. ಯಾಕೆಂದರೆ, ಹಸಿದವರಿಗೆ ಹೊಟ್ಟೆಯೇ ಮೊದಲ ಧರ್ಮ. ಹಸಿವಿನಿಂದ ಮುಕ್ತವಾಗಬೇಕೋ ಅಥವಾ ಸಿದ್ಧಾಂತ ಬೇಕೋ ಎಂಬೆರಡು ಆಯ್ಕೆಗಳ ಮುಂದೆ ಬಡವರು ಹಸಿವಿನಿಂದ ಮುಕ್ತವಾಗುವುದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆಗ್ರದಲ್ಲಿ ಇಂಥದ್ದೊಂದು ಆಮಿಷದ ಮೂಲಕ ಜನರನ್ನು ಸೇರಿಸಲಾಗಿದೆ. ಬಹುಶಃ ಸೇರಿಸಿದವರಿಗೆ ಒಂದು ಉದ್ದೇಶವಿರುವಂತೆಯೇ ಸೇರಿದವರಿಗೂ ಒಂದು ಉದ್ದೇಶವಿತ್ತು. ಸೇರಿದವರ ಉದ್ದೇಶ ರೇಶನ್ ಕಾರ್ಡ್ ಮತ್ತಿತರ ಸೌಲಭ್ಯ ಪಡಕೊಳ್ಳುವುದು. ಆದರೆ ಸೇರಿಸಿದವರ ಉದ್ದೇಶ? ಹಿಂದೂ ಧರ್ಮಕ್ಕೆ ಮತಾಂತರಿಸುವುದೋ ಅಥವಾ ಮತಾಂತರ ವಿರೋಧಿ ಕಾನೂನು ರಚನೆಗೆ ಮೋದಿ ಸರಕಾರಕ್ಕೆ ಅವಕಾಶ ಸೃಷ್ಟಿಸಿಕೊಡುವುದೋ? ಸದ್ಯದ ಬೆಳವಣಿಗೆಗಳನ್ನು ನೋಡಿದರೆ ಆ ಮತಾಂತರದ ಉದ್ದೇಶ ಏನೆಂದು ಸ್ಪಷ್ಟವಾಗುತ್ತದೆ.

No comments:

Post a Comment