ಕೇಂದ್ರ ಸರಕಾರದ ಕಾರ್ಯಶುದ್ಧಿಯ ಮೇಲೆ ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿ ಸೌದಿ ರಾಜತಾಂತ್ರಿಕ ಅಧಿಕಾರಿಯೋರ್ವರು ಭಾರತ ಬಿಟ್ಟು ಹೊರಟು ಹೋಗಿದ್ದಾರೆ. ಗುರ್ಗಾಂವ್‍ನಲ್ಲಿರುವ ಸೌದಿ ರಾಜತಾಂತ್ರಿಕ ಕಚೇರಿಯಲ್ಲಿ ಕೆಲಸಕ್ಕಿದ್ದ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯವೆಸಗಿದ ಆರೋಪವು ಮಜೀದ್ ಹಸನ್ ಅಶೂರ್ ಎಂಬ ಈ ಅಧಿಕಾರಿಯ ಮೇಲಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಈ ಆರೋಪಗಳು ಸಾಬೀತುಗೊಂಡಿರುವ ವರದಿಯೂ ಬಂದಿದೆ. ಇಷ್ಟಿದ್ದೂ, ಯಾವೊಂದು ತನಿಖೆಗೂ ಒಳಪಡಿಸದೇ ಈ ಅಧಿಕಾರಿಯನ್ನು ದೇಶಬಿಟ್ಟು ತೆರಳಲು ಕೇಂದ್ರ ಸರಕಾರ ಅನುವು ಮಾಡಿಕೊಟ್ಟದ್ದು ಹೇಗೆ ಮತ್ತು ಯಾಕೆ? ಭಾರತ ಮತ್ತು ಸೌದಿ ಸರಕಾರಗಳ ನಡುವೆ ಈ ಕುರಿತಂತೆ ಮಾತುಕತೆಗಳು ನಡೆದಿವೆಯೇ? ಅದರ ವಿವರಗಳು ಏನೆಲ್ಲ? ಗೃಹಸಚಿವಾಲಯ ಯಾಕೆ ಯಾವ ಮಾಹಿತಿಯನ್ನೂ ಸಾರ್ವಜನಿಕರಿಗೆ ಬಿಟ್ಟುಕೊಡುತ್ತಿಲ್ಲ? ಆರ್ಥಿಕ ಲೆಕ್ಕಾಚಾರಗಳು ಇದರ ಹಿಂದೆ ಕೆಲಸ ಮಾಡಿವೆಯೇ? ಜಿನೇವಾ ಒಡಂಬಡಿಕೆಯ ಕಟ್ಟಳೆಗಳೇನೇ ಇರಲಿ, ಮಹಿಳೆಯರ ಬಗ್ಗೆ ಅಪಾರ ಕಕ್ಕುಲಾತಿಯನ್ನು ತೋರ್ಪಡಿಸುವ ಸರಕಾರವೊಂದು ಈ ಮಟ್ಟದಲ್ಲಿ ತಗ್ಗಿ-ಬಗ್ಗಿ ನಡೆದದ್ದೇಕೆ? ಕೇರಳದ ಮೀನುಗಾರರನ್ನು ಹತ್ಯೆಗೈದ ಇಟಲಿಯ ನಾವಿಕರ ವಿಷಯದಲ್ಲಿ ಮನಮೋಹನ್ ಸಿಂಗ್ ಸರಕಾರವನ್ನು ಈ ಹಿಂದೆ ಬಿಜೆಪಿ ತೀವ್ರ ತರಾಟೆಗೆ ಎತ್ತಿಕೊಂಡಿತ್ತು. ಆ ನಾವಿಕರನ್ನು ಇಟಲಿಗೆ ಬಿಟ್ಟು ಕೊಡಬಾರದೆಂದು ಪ್ರಬಲವಾಗಿ ವಾದಿಸಿತ್ತು. ಮನಮೋಹನ್ ಸಿಂಗ್ ಸರಕಾರವು ಈ ಕುರಿತಂತೆ ಮೃದು ನೀತಿಯನ್ನು ಹೊಂದಿದೆ ಎಂದು ಬಾರಿಬಾರಿಗೂ ಟೀಕಿಸಿತ್ತು. ಭೋಪಾಲ್ ಅನಿಲ ದುರಂತದ ಆರೋಪಿ ವಾರೆನ್ ಆಂಡರ್ಸನ್‍ನನ್ನು ಯಾವ ತನಿಖೆಗೂ ಒಳಪಡಿಸದೇ ಅಮೇರಿಕಕ್ಕೆ ತೆರಳಲು ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಪಕ್ಷವನ್ನು ಅದು ಈಗಲೂ ಟೀಕಿಸುತ್ತಿದೆ. ಪಾಕಿಸ್ತಾನವು ಭಾರತೀಯ ಸೈನಿಕರ ಒಂದು ತಲೆಯನ್ನು ಉರುಳಿಸಿದರೆ ಪಾಕ್‍ನ ಹತ್ತು ತಲೆಯನ್ನು ಉರುಳಿಸುವೆವು ಎಂದು ಸಾರಿದ ಮತ್ತು ಸಾರುತ್ತಿರುವ ಪಕ್ಷ ಬಿಜೆಪಿ. ಇಂಥ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್‍ನಂತೆಯೇ ಆಡುತ್ತಿರುವುದೇಕೆ? ಅತ್ಯಾಚಾರದ ವಿರುದ್ಧ ಈ ದೇಶದಲ್ಲಿ 3 ವರ್ಷಗಳ ಹಿಂದೆ ದೊಡ್ಡದೊಂದು ಚಳವಳಿ ನಡೆದಿದೆ. ಆ ಚಳವಳಿ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ, ಅತ್ಯಾಚಾರದ ವಿರುದ್ಧ ಪ್ರಬಲ ಕಾನೂನನ್ನೇ ರಚಿಸುವಷ್ಟು. ಆ ಬಳಿಕ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗಳ ಸರಣಿ ಘೋಷಣೆಗಳು ನ್ಯಾಯಾಲಯಗಳಿಂದ ಪ್ರಕಟವಾದುವು. ಬಿಜೆಪಿಯನ್ನು ಬೆಂಬಲಿಸುವ ಸಂಘಪರಿವಾರವಂತೂ ಅತ್ಯಾಚಾರ ಬಿಡಿ, ಹೆಣ್ಣು-ಗಂಡು ಪರಸ್ಪರ ಮಾತಾಡುವುದನ್ನೇ ಅಪರಾಧ ಎಂದು ಹೇಳುವಷ್ಟು ನಿಷ್ಠುರತೆಯನ್ನು ಪ್ರದರ್ಶಿಸುತ್ತಿದೆ. ಹೆಣ್ಣನ್ನು ರಕ್ಷಿಸುವ ಹೆಸರಲ್ಲಿ ಥಳಿತ, ಹಲ್ಲೆ, ಹತ್ಯೆಗಳಂತಹ ಕೃತ್ಯಕ್ಕೂ ಕೈ ಹಾಕುತ್ತಿದೆ. ಹೀಗಿರುವಾಗ, ಕೇಂದ್ರ ಸರಕಾರದ ಈ ನಡೆಗೆ ಏನೆನ್ನಬೇಕು? ಹಾಗಾದರೆ ಹೆಣ್ಣಿನ ಬಗ್ಗೆ ಬಿಜೆಪಿ ಮತ್ತು ಅದರ ಪರಿವಾರಗಳು ವ್ಯಕ್ತಪಡಿಸುತ್ತಿರುವ ಗೌರವಾದರದ ಮಾತುಗಳು ನಕಲಿಯೇ? ಕನಿಷ್ಠ ಅಮೇರಿಕದಲ್ಲಿ ಭಾರತದ ರಾಜತಾಂತ್ರಿಕೆಯಾಗಿದ್ದ ದೇವಯಾನಿ ಖೋಬ್ರಗದೆಯವರ ಬಗ್ಗೆ ಅಮೇರಿಕ ವರ್ಷಗಳ ಹಿಂದೆ ನಡೆದುಕೊಂಡಷ್ಟಾದರೂ ನಿಷ್ಠುರತೆಯನ್ನು ಭಾರತಕ್ಕೆ ತೋರಬಹುದಿಲ್ಲವೇ? ರಾಯಭಾರ ಕಚೇರಿಯ ಅಧಿಕಾರಿಯಾಗಿದ್ದರೂ ಖೋಬ್ರಗದೆಯವರನ್ನು ಅಮೇರಿಕ ಸುಲಭದಲ್ಲಿ ಬಿಟ್ಟುಕೊಡಲಿಲ್ಲ. ಜಿನೇವಾ ಒಡಂಬಡಿಕೆಯಲ್ಲಿ ಅಷ್ಟರ ಮಟ್ಟಿಗೆ ಅವಕಾಶ ಇದೆಯೆಂದಾದರೆ ಮೋದಿಯವರು ಅದನ್ನೇಕೆ ಬಳಸಿಕೊಳ್ಳಲಿಲ್ಲ? ಹಾಗಂತ, ಇದನ್ನು ಕೇಂದ್ರದ ರಾಜತಾಂತ್ರಿಕ ವೈಫಲ್ಯ ಎಂಬ ಷರಾದೊಂದಿಗೆ ಮುಚ್ಚಿಹಾಕಬಹುದು. ದಿ ಹಿಂದೂ ಸಹಿತ ಹೆಚ್ಚಿನೆಲ್ಲಾ ಪತ್ರಿಕೆಗಳು ತಮ್ಮ ಸಂಪಾದಕೀಯಕ್ಕೆ ಕೊಟ್ಟ ಶೀರ್ಷಿಕೆಯೂ ಇದುವೇ. ಆದರೆ ವಾರನ್ ಆಂಡರ್ಸನ್, ಇಟಲಿಯ ನಾವಿಕರು ಅಥವಾ ಖೋಬ್ರಗದೆಯ ವಿಷಯದಲ್ಲಿ ಧಾರಾಳ ಮಾತಾಡಿದ್ದ ಬಿಜೆಪಿಯು ಸೌದಿ ಅಧಿಕಾರಿಯ ಕುರಿತಂತೆ ಒಂದು ವಾಕ್ಯದ ಸ್ಪಷ್ಟೀಕರಣವನ್ನೂ ಕೊಡದಷ್ಟು ಮೌನಿಯಾಗಿರುವುದೇಕೆ? ಈ ಮೌನದ ಹಿಂದಿರುವುದು ಅಸಹಾಯಕೆಯೋ ಅನಿವಾರ್ಯತೆಯೋ?
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮನಮೋಹನ್ ಸಿಂಗ್‍ರನ್ನು ದುರ್ಬಲ ಪ್ರಧಾನಿ ಎಂದು ಕರೆದಿದ್ದ ಬಿಜೆಪಿಯು ಆಗ ಸ್ವಯಂ ತನಗೆ ತಾನೇ ಪೌರುಷದ ಇಮೇಜನ್ನು ಕೊಟ್ಟುಕೊಂಡಿತ್ತು. ಭಾರತದ ಒಂದು ತಲೆಗೆ ಪಾಕಿಸ್ತಾನದ ಹತ್ತು ತಲೆಗಳ ಸ್ಲೋಗನ್ ಉದುರಿದ್ದೂ ಆವಾಗಲೇ. ಮನಮೋಹನ್ ಸಿಂಗ್‍ರ ಮೃದುತನದ ಎದುರು ಮೋದಿಯವರು ಖಡಕ್ ವ್ಯಕ್ತಿಯಾಗಿ ಕಂಗೊಳಿಸಿದ್ದರು. ಅವರು ಸಕಲ ಸಮಸ್ಯೆಗಳಿಗೂ ಪರಿಹಾರವಾಗಿ ಕಂಡರು. ಅವರ ಮಾತುಗಾರಿಕೆ, ಬಾಡಿ ಲಾಂಗ್ವೇಜ್, ಪ್ರಾಸಬದ್ಧ ಪದಗಳು ಮತ್ತು ಮಾತಿನ ಅಬ್ಬರಗಳೆಲ್ಲ ನಿಷ್ಠುರತೆಯ ಸಂಕೇತಗಳಾಗಿ ಕಂಡವು. ಮುಸ್ಲಿಮ್ ಧರ್ಮಗುರುಗಳು ನೀಡಿದ ಟೋಪಿಯನ್ನು ನಿರಾಕರಿಸಿದ್ದು, ‘ಹಮ್ ಪಾಂಚ್, ಹಮಾರೆ ಪಚ್ಚೀಸ್’ ಎಂದು ಹೇಳಿದ್ದು, ತಾನು ‘ಸ್ವಯಂ ಸೇವಕ' ಎಂದು ಬಹಿರಂಗವಾಗಿಯೇ ಘೋಷಿಸಿದ್ದು.. ಎಲ್ಲವೂ ಅವರ ಸುತ್ತ ನಿಷ್ಠುರತೆಯ ಪ್ರಭಾವಳಿಯೊಂದನ್ನು ಸೃಷ್ಟಿಸಿತ್ತು. ‘ಮೋದಿಯವರು ಪ್ರಧಾನಿಯಾದರೆ ಪಾಕ್‍ಗೆ ಅಣುಬಾಂಬ್ ಹಾಕುತ್ತಾರೆ..' ಎಂದು ಅವರ ಅನುಯಾಯಿಗಳು ಹೇಳುವಷ್ಟು ಅವರ ಗಡಸು ಇಮೇಜು ಜನಪ್ರಿಯವಾಯಿತು. ಆದರೆ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯಾದ ಬಳಿಕ ಪೌರುಷದ ಪ್ರಭಾವಳಿ ನಿಧಾನಕ್ಕೆ ದೂರ ಸರಿಯುತ್ತಿದೆ. ಅವರು ಇನ್ನೋರ್ವ ಮನಮೋಹನ್ ಸಿಂಗ್ ಆಗುತ್ತಿದ್ದಾರೆಯೇ ಹೊರತು ನಿಷ್ಠುರ ನರೇಂದ್ರ ಮೋದಿಯಲ್ಲ ಎಂಬುದು ದಿನೇ ದಿನೇ ಸ್ಪಷ್ಟವಾಗುತ್ತಿದೆ. ಅವರು ಪ್ರಧಾನಿಯಾದ ಒಂದು ವರ್ಷದಲ್ಲಿ ಪಾಕ್‍ನಿಂದ ಗಡಿ ಉಲ್ಲಂಘನೆಯ ಪ್ರಕರಣಗಳು ಈ ಹಿಂದೆಂದೂ ಆಗದಷ್ಟು ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆ. ಪಾಕ್ ಸೈನಿಕರ ಗುಂಡಿನ ದಾಳಿಯಿಂದ ಭಾರತೀಯ ಸೈನಿಕರು ಆಗಾಗ ಸಾವನ್ನಪ್ಪುತ್ತಲೂ ಇದ್ದಾರೆ. ಮಾಧ್ಯಮಗಳು ಈ ಕುರಿತಂತೆ ಅಂಕಿ-ಅಂಶಗಳನ್ನೂ ಬಹಿರಂಗಪಡಿಸುತ್ತಲೂ ಇದೆ. ಆದರೆ ಮನಮೋಹನ್ ಸಿಂಗ್‍ರನ್ನು ಇದೇ ಗಡಿ ಪ್ರಶ್ನೆಯನ್ನು ಮುಂದಿಟ್ಟು ನಿಷ್ಕ್ರಿಯ ಸರಕಾರ ಎಂದು ಕರೆದಿದ್ದ ಬಿಜೆಪಿಯು ಇದೀಗ ಅದೇ ನಿಷ್ಕ್ರಿಯ ಪ್ರತಿಕ್ರಿಯೆಯನ್ನಷ್ಟೇ ತೋರುತ್ತಿದೆ. ಪೌರುಷದ ಮಾತುಗಳಾಚೆಗೆ ಪ್ರಾಯೋಗಿಕವಾಗಿ ಅದು ಏನನ್ನೂ ಮಾಡುತ್ತಿಲ್ಲ. ಸೌದಿ ರಾಜತಾಂತ್ರಿಕ ಪ್ರಕರಣವು ಇದಕ್ಕೆ ಇನ್ನೊಂದು ಉದಾಹರಣೆ ಅಷ್ಟೇ.
ಹಾಗಂತ, ಸಾಮಾನ್ಯ ನಾಗರಿಕರನ್ನು ಹಿಡಿದು ಜೈಲಿಗಟ್ಟುವಂತೆ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಶಿಕ್ಷಿಸಲು ಸಾಧ್ಯವಿಲ್ಲ ನಿಜ. ಜಿನೇವಾ ಒಡಂಬಡಿಕೆಯ ಪ್ರಕಾರವೇ ‘ರಾಜತಾಂತ್ರಿಕ' ಪ್ರಕರಣ ಗಳನ್ನು ಇತ್ಯರ್ಥಪಡಿಸಬೇಕಾಗುತ್ತದೆ. ಆದರೆ ಕದ್ದು ಮುಚ್ಚಿ ವಿಮಾನದಲ್ಲಿ ಕಳುಹಿಸಿಕೊಡುವಷ್ಟು ಜಿನೇವಾ ಒಡಂಬಡಿಕೆ ಕ್ರೂರವೇ? ಹಾಗಿದ್ದರೆ ದೇವಯಾನಿ ಖೋಬ್ರಗದೆ ಪ್ರಕರಣದಲ್ಲಿ ಅಮೇರಿಕ ಅಷ್ಟು ನಿಷ್ಠುರವಾಗಿ ನಡೆದುಕೊಂಡದ್ದು ಹೇಗೆ? ಅವರನ್ನು ಅಮೇರಿಕದ ಪೊಲೀಸರು ಕೈಕೋಳ ತೊಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತನಿಖೆಗೂ ಒಳಪಡಿಸಿದ್ದರು. ಆದರೆ ಮೋದಿಯವರ ಸರಕಾರವು ಕನಿಷ್ಠ ತನಿಖೆಗೂ ಒಳಪಡಿಸದೇ ರಹಸ್ಯವಾಗಿ ಸೌದಿ ರಾಜತಾಂತ್ರಿಕರನ್ನು ಕಳುಹಿಸಿಕೊಟ್ಟಿದೆ. ಇದು ಯಾವುದರ ಸೂಚನೆ? ಮೋದಿಯವರು ಮಾತಿನಲ್ಲಿ ಮಾತ್ರ ನಿಷ್ಠುರವೇ, ಕೃತಿಯಲ್ಲಿ ಅವರೂ ಮನಮೋಹನ್ ಸಿಂಗೇ ಆಗಿರುವರೇ?