Friday, 11 December 2015

ಹಾರೆ, ಪಿಕ್ಕಾಸು, ಗುದ್ದಲಿಗಳನ್ನು ಎತ್ತಿಕೊಳ್ಳುವ ಮೊದಲು...

       ಕಳೆದವಾರ ಎರಡು ಮಸೀದಿಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಒಳಗಾದುವು. ಒಂದು; ಡಿ. 6ರ ಬಾಬರಿ ಮಸೀದಿಯಾದರೆ ಇನ್ನೊಂದು, ನಿರಾಶ್ರಿತರಿಗೆ ಆಶ್ರಯ ಒದಗಿಸಿದ ಚೆನ್ನೈಯ ಮಸೀದಿ. ಪ್ರವಾಹ ಪೀಡಿತರನ್ನು ತನ್ನೊಳಗೆ ತುಂಬಿಸಿಕೊಂಡು ಭಕ್ತರನ್ನು ಹೊರಗೆ ನಿಲ್ಲಿಸಿದ ಚೆನ್ನೈಯ ಮಸೀದಿಯ ಕುರಿತಂತೆ ಟು ಸರ್ಕಲ್ ಡಾಟ್ ನೆಟ್, ರೆಡಿಫ್ ಡಾಟ್ ಕಾಮ್ ಸಹಿತ ವಿವಿಧ ಇಂಟರ್‍ನೆಟ್ ಪತ್ರಿಕೆಗಳು ಸಚಿತ್ರವಾಗಿ ವರದಿ ಮಾಡಿವೆ. ನೆರೆಪೀಡಿತರು, ಮಸೀದಿಯ ಸಭಾಂಗಣದಲ್ಲಿ ನಿಂತು ಆಹಾರ ಪಡೆಯುತ್ತಿರುವ ದೃಶ್ಯಗಳು ಅತ್ಯಂತ ಭಾವನಾತ್ಮಕ. ಅಲ್ಲಿ ಮನುಷ್ಯರು ಮಾತ್ರ ಇದ್ದರು. ಹಿಂದೂ-ಮುಸ್ಲಿಮ್-ಕ್ರೈಸ್ತ ಇತ್ಯಾದಿಯಾಗಿ ವಿಭಜಿಸಲು ಸಾಧ್ಯವೇ ಆಗದಷ್ಟು ಸಮಾನಾಂಶಗಳು ಅವರೆಲ್ಲರಲ್ಲೂ ಇದ್ದುವು. ಸಾರಿ ಉಟ್ಟ ಮತ್ತು ಶಿರವಸ್ತ್ರ ಧರಿಸದ ಮಹಿಳೆಯರು; ಪಂಚೆ ಉಟ್ಟ ಪುರುಷರು, ಲಂಗ-ಧಾವಣಿಯಲ್ಲಿ ಯುವತಿಯರು.. ಹೀಗೆ ಮನುಷ್ಯರೆಲ್ಲ ಮಸೀದಿಯಲ್ಲಿದ್ದರು. ತಂತಮ್ಮ ಬದುಕನ್ನು ಕಟ್ಟಿಕೊಳ್ಳುವ ತುರ್ತಿನ ಹೊರತಾದ ಇನ್ನಾವುದೂ ಅವರಲ್ಲಿ ಕಂಡುಬರುತ್ತಿರಲಿಲ್ಲ. ಇದೇ ವೇಳೆ, ಚೆನ್ನೈಯ ಮಳೆಯಿಂದ ಯಾವ ತೊಂದರೆಗೂ ಒಳಗಾಗದ ಭಾರತದ ಇತರ ಭಾಗಗಳಲ್ಲಿ ಸಂತೋಷ ಕೂಟಗಳು ಏರ್ಪಾಡಾಗಿದ್ದುವು. ಆ ಸಂತೋಷ ಕೂಟಗಳಿಗೆ ‘ವಿಜಯ ದಿವಸ’ ಎಂಬ ಹೆಸರನ್ನೂ ಕೊಡಲಾಗಿತ್ತು. 1992ರಲ್ಲಿ ಅಯೋಧ್ಯೆಯಲ್ಲಿ ಮಸೀದಿಯೊಂದನ್ನು ಉರುಳಿಸಿದುದೇ ಈ ಸಂತೋಷ ಕೂಟಕ್ಕೆ ಮುಖ್ಯ ಕಾರಣವಾಗಿತ್ತು. ಆ ಧ್ವಂಸ ಕೃತ್ಯವನ್ನು ಈ ಕೂಟಗಳಲ್ಲಿ ಮೆಚ್ಚಿಕೊಳ್ಳಲಾಯಿತು. ಅದಕ್ಕಾಗಿ ಹೆಮ್ಮೆ ಪಡಲಾಯಿತು. ಏನೆನ್ನಬೇಕು ಈ ವೈರುಧ್ಯಕ್ಕೆ? ನಿರಾಶ್ರಿತರಿಗೆ ಮಸೀದಿಯು ಸಮಸ್ಯೆಯಾಗಲಿಲ್ಲ. ಮಸೀದಿಗೂ ಅವರು ಸಮಸ್ಯೆಯಾಗಲಿಲ್ಲ. ನಿರಾಶ್ರಿತರ ಧರ್ಮ, ಜಾತಿ, ವರ್ಣ, ರಾಜಕೀಯ ಒಲವು, ಆಹಾರ ಕ್ರಮ.. ಯಾವುದನ್ನೂ ಪ್ರಶ್ನಿಸದೇ ಮಸೀದಿಯು ಎಲ್ಲರನ್ನೂ ತಬ್ಬಿಕೊಂಡಿತು. ಮನುಷ್ಯರು ಎಂಬ ಏಕ ಹೆಸರಿನ ಹೊರತಾದ ಇನ್ನಾವ ಗುರುತೂ ಅವರಿಗಿರಲಿಲ್ಲ. ಈ ನಿರಾಶ್ರಿತರಿಗೆ ಹಾರೆ, ಪಿಕ್ಕಾಸು, ಗುದ್ದಲಿಯನ್ನು ಕೊಟ್ಟು - ‘ಈ ಮಸೀದಿಯನ್ನು ಉರುಳಿಸಿ’ ಎಂದು ಆಜ್ಞಾಪಿಸಿದರೆ ಅವರ ಉತ್ತರ ಏನಿರಬಹುದು? ಆಜ್ಞಾಪಿಸಿದವರನ್ನು ಧರ್ಮದ್ರೋಹಿಗಳು ಎಂದು ಅವರು ಕರೆಯಲಾರರೇ? ಖಂಡಿಸಲಾರರೇ? ಉರುಳಿಸಬೇಕಾದದ್ದು ಮನದೊಳಗಿನ ದ್ವೇಷದ ಗೋಡೆಯನ್ನೇ ಹೊರತು ಮಸೀದಿಯನ್ನೋ ಮಂದಿರವನ್ನೋ ಅಲ್ಲ ಎಂದು ಸಾರಲಾರರೇ?  ಅಷ್ಟಕ್ಕೂ, ಒಬ್ಬರ ಆರಾಧ್ಯ ಕೇಂದ್ರವನ್ನು ಉರುಳಿಸುವುದು ಸಂತಸಕ್ಕೆ ಕಾರಣವಾಗುವುದಾದರೆ ಆ ಸಂತಸ ಹುಟ್ಟು ಪಡೆದದ್ದು ಎಲ್ಲಿ? ಅದರ ನಿರ್ಮಾತೃಗಳು ಯಾರು? ವಿಷಾದ ಪಡಬೇಕಾದ ಕೃತ್ಯವೊಂದನ್ನು ಸಂತಸ ಪಡುವ ಕೃತ್ಯವಾಗಿ ಮಾರ್ಪಡಿಸಲು ಅವರು ಯಶಸ್ವಿಯಾಗಿದ್ದು ಹೇಗೆ? ಇದಕ್ಕಾಗಿ ಅವರು ಹಂಚಿರಬಹುದಾದ ವಿಷದ ಪ್ರಮಾಣ ಎಷ್ಟು?
  ಅಂದಹಾಗೆ, ಮಂದಿರ, ಮಸೀದಿ, ಚರ್ಚ್ ಸಹಿತ ಧಾರ್ಮಿಕ ಕೇಂದ್ರಗಳು ಪ್ರಕೃತಿ ವಿರೋಧಿ ಬೇಲಿಗಳನ್ನು ಕಟ್ಟಿಕೊಂಡು ಸ್ವಯಂ ಬಂಧನಕ್ಕೆ ಒಳಗಾದಂತೆ ಗೋಚರಿಸುತ್ತಿರುವ ಇಂದಿನ ದಿನಗಳಲ್ಲಿ ಚೆನ್ನೈಯ ಮಳೆ ಮತ್ತು ಮಸೀದಿ ನಮ್ಮೊಳಗನ್ನು ಗಾಢವಾಗಿ ತಟ್ಟಬೇಕಿದೆ. ಮಳೆಯಿಂದಾಗಿ ಚೆನ್ನೈ ನದಿಯಂತೆ ತೇಲುತ್ತಿರುವ ಸಂದರ್ಭದಲ್ಲಿಯೇ ಮಹಾರಾಷ್ಟ್ರದಲ್ಲಿ ಶುದ್ಧೀಕರಣವೊಂದು ನಡೆಯಿತು. ಮಹಿಳೆಯೋರ್ವರು ಶನಿ ದೇಗುಲದೊಳಕ್ಕೆ ತೆರಳಿ ಪೂಜೆಗೈದುದೇ ಈ ಶುದ್ಧೀಕರಣಕ್ಕೆ ಕಾರಣವಾಗಿತ್ತು. ಮಹಿಳೆ ದೇಗುಲ ಪ್ರವೇಶಿಸಿದುದನ್ನು ಅಶುದ್ಧ ಕಾರ್ಯವೆಂದು ಸಾರಲಾಯಿತಲ್ಲದೇ ಅದಕ್ಕೆ ಪ್ರಾಯಶ್ಚಿತ್ತವಾಗಿ ಶುದ್ಧೀಕರಣ ನಡೆಸಲಾಯಿತು. ಈ ಶುದ್ಧೀಕರಣದ ಎರಡು ದಿನಗಳ ಬಳಿಕ ಉತ್ತರ ಪ್ರದೇಶದ ದಾದ್ರಿಯಲ್ಲೂ ಶುದ್ಧೀಕರಣ ನಡೆಯಿತು. ಮುಹಮ್ಮದ್ ಅಖ್ಲಾಕ್‍ನನ್ನು ಥಳಿಸಿ ಕೊಂದ ಬಿಶಾರ ಗ್ರಾಮದಲ್ಲಿ ಗೋಮುತ್ರವನ್ನು ಸಿಂಪಡಿಸಿ ಶುದ್ಧೀಕರಣ ನಡೆಸಲಾಯಿತು. ಅಖ್ಲಾಕ್‍ನು ಗೋವನ್ನು ಕೊಂದುದರಿಂದ ಗ್ರಾಮವು ಅಶುದ್ಧವಾಗಿದೆ ಎಂದು ಶುದ್ಧೀಕರಣ ನಡೆಸಿದವರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡರು. ಬಹುಶಃ ಧ್ವಂಸ ಮತ್ತು ಶುದ್ಧೀಕರಣಗಳು ಲಜ್ಜೆಯಿಲ್ಲದೇ ಸಮರ್ಥನೆಗೊಳಗಾಗುತ್ತಿರುವ ಈ ದಿನಗಳಲ್ಲಿ ಧಾರ್ಮಿಕ ಕೇಂದ್ರಗಳು ಹಾಗೂ ಧಾರ್ಮಿಕ ನಿಲುವುಗಳು ಮರು ವ್ಯಾಖ್ಯಾನಕ್ಕೆ ಒಳಗಾಗಬೇಕಾದ ಅಗತ್ಯವಿದೆ. ಈ ಕುರಿತಂತೆ ಚೆನ್ನೈಯ ಮಸೀದಿ ಅತ್ಯಂತ ಪರಿಣಾಮಕಾರಿ ಮಾದರಿಯನ್ನು ದೇಶದ ಮುಂದಿಟ್ಟಿದೆ. ನಿಜವಾಗಿ, ಅನುಮಾನದ ದೊಡ್ಡದೊಂದು ಹುತ್ತವನ್ನು ಬಿಗಿದುಕೊಂಡಿರುವ ಜಾಗಗಳಾಗಿ ಧಾರ್ಮಿಕ ಕೇಂದ್ರಗಳು ಈ ದೇಶದಲ್ಲಿ ಗುರುತಿಸಿಕೊಂಡಿವೆ. ಮಸೀದಿ, ಮದ್ರಸಗಳು; ಚರ್ಚ್-ಮಂದಿರಗಳು ಈ ದೇಶದ ಎಲ್ಲರಿಗೂ ಸರಿಯಾಗಿ ಇನ್ನೂ ತೆರೆದುಕೊಂಡಿಲ್ಲ. ಮಸೀದಿ ಅಥವಾ ಮಂದಿರದ ಅನುಯಾಯಿಗಳಿಗೇ ಅನೇಕ ಬಾರಿ ಅವುಗಳ ಅಗತ್ಯ, ಕಾರ್ಯಕ್ಷೇತ್ರ, ಅವುಗಳ ಹೊಣೆಗಾರಿಕೆಯ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯೂ ಇಲ್ಲ. ಮಸೀದಿಗೋ ಮಂದಿರಕ್ಕೋ ಕಲ್ಲೆಸೆಯುವುದು ಅಥವಾ ಹಂದಿಯದ್ದೋ ದನದ್ದೋ ತಲೆಯನ್ನು ಅವುಗಳ ಎದುರು ಬಿಸಾಡುವುದು ಮತ್ತು ಅದಕ್ಕೆ ಉನ್ಮಾದಗೊಳ್ಳುವುದೆಲ್ಲ ಈ ತಿಳುವಳಿಕೆಯ ಕೊರತೆಯಿಂದಲೇ. ದೇವನನ್ನು ಧ್ಯಾನಿಸುವ ಕೇಂದ್ರವೊಂದು ಹಿಂದೂವನ್ನೋ ಕ್ರೈಸ್ತರನ್ನೋ ದ್ವೇಷಿಸುವುದಕ್ಕೆ ಸಾಧ್ಯವೇ ಇಲ್ಲ. ದೇವನು ನಿರ್ದಿಷ್ಟ ಮನುಷ್ಯರ ಮಧ್ಯೆ ಹಂಚಿಹೋಗಿಲ್ಲ. ಆತ ಎಲ್ಲರ ದೇವ ಎಂದಾದರೆ ಮತ್ತು ನಾಮಗಳು ಮಾತ್ರ ಭಿನ್ನ ಅನ್ನುವುದಾದರೆ, ಮಸೀದಿಯನ್ನು ಧ್ವಂಸಗೊಳಿಸುವುದರಿಂದ ಸಂತಸ ಪಡುವುದಕ್ಕಾದರೂ ಏನಿದೆ? ದೇವಾಲಯಕ್ಕೆ ಕಲ್ಲೆಸೆದು ಜಂಭ ಕೊಚ್ಚಿಕೊಳ್ಳುವುದರಲ್ಲಿ ಏನರ್ಥವಿದೆ? ದುರಂತ ಏನೆಂದರೆ, ಇವತ್ತು ಭಕ್ತರಿಗಿಂತ ಭಕ್ತಿಯ ಕೇಂದ್ರಗಳೇ ಹೆಚ್ಚು ಸುದ್ದಿಗೊಳಗಾಗುತ್ತಿವೆ. ಮನುಷ್ಯರಿಗೆ ನೆಮ್ಮದಿ ನೀಡಬೇಕಾದ ಕೇಂದ್ರಗಳು ನೆಮ್ಮದಿ ರಹಿತವಾದ ಆಘಾತಕಾರಿ ಸುದ್ದಿಗಳನ್ನು ಹೊರತರುತ್ತಿವೆ. ಬಹಿಷ್ಕಾರ, ಹಾದರ, ಶುದ್ಧೀಕರಣ, ಅಸ್ಪೃಶ್ಯತೆಗಳಿಂದಾಗಿ ಧಾರ್ಮಿಕ ಕೇಂದ್ರಗಳೂ ವ್ಯಾವಹಾರಿಕ ಕಟ್ಟಡಗಳೆಂಬಂತೆ ವರ್ತಿಸತೊಡಗಿವೆ. ಇಂಥ ಸ್ಥಿತಿಯಲ್ಲಿ ಚೆನ್ನೈಯ ಮಸೀದಿಯನ್ನು
ಮುಂದಿಟ್ಟುಕೊಂಡು ಮಾಧ್ಯಮಗಳು ಗಂಭೀರ ಚರ್ಚೆಯೊಂದನ್ನು ಹಮ್ಮಿಕೊಳ್ಳಬೇಕಾಗಿದೆ. ಮಸೀದಿಯನ್ನು ಉರುಳಿಸಿ ಸಂತಸಪಡುವ ಮಂದಿಯ ಎದುರು ಜನರಿಗೆ ಆಶ್ರಯ ನೀಡಿದ ಮಸೀದಿಯನ್ನು ತಂದು ನಿಲ್ಲಿಸಬೇಕಾಗಿದೆ.
           ಒಂದು ರೀತಿಯಲ್ಲಿ ದೇವಾಲಯ ಮತ್ತು ಮಸೀದಿಯನ್ನು ಪರಮ ವೈರಿಗಳಂತೆ ಎದುರು-ಬದುರಾಗಿ ನಿಲ್ಲಿಸುವ ಶ್ರಮವು ಸ್ವಾತಂತ್ರ್ಯ ಪೂರ್ವದಿಂದಲೇ ಈ ದೇಶದಲ್ಲಿ ನಡೆಯುತ್ತಿದೆ. 80ರ ದಶಕದ ಬಳಿಕ ಈ ಪ್ರಯತ್ನ ಎಷ್ಟು ಪ್ರಾಬಲ್ಯ ಪಡೆಯಿತೆಂದರೆ, ಮಸೀದಿಯನ್ನು ಭಯಾನಕವಾಗಿ, ಹಿಂದೂ ವಿರೋಧಿಯಾಗಿ, ಷಡ್ಯಂತ್ರದ ತಾಣವಾಗಿ ವ್ಯಾಖ್ಯಾನಿಸುವಷ್ಟು. ಮದರಗಳನ್ನು ಭಯೋತ್ಪಾದಕ ಕೇಂದ್ರವಾಗಿ ಬಿಂಬಿಸಲಾದದ್ದೂ ಆ ಬಳಿಕವೇ. 1992ರಲ್ಲಿ ಬಾಬರಿ ಮಸೀದಿಯನ್ನು ಉರುಳಿಸಲಾಯಿತು. ಈ ಧ್ವಂಸ ಕೃತ್ಯಕ್ಕಿಂತಲೂ ಭೀಕರ ಏನೆಂದರೆ, ಆ ಕೃತ್ಯವನ್ನು ಎಲ್ಲರೆದುರೇ ಧ್ವಂಸಕರು ಸಮರ್ಥಿಸಿಕೊಂಡದ್ದು. ಇದಾಗಿ 23 ವರ್ಷಗಳ ಬಳಿಕ ಚೆನ್ನೈಯ ಮಸೀದಿಯು ಉರುಳಿಸಿದವರನ್ನೂ ಉರುಳಿದವರನ್ನೂ ಸಮಾನವಾಗಿ ತನ್ನೊಳಗೆ ಸೇರಿಸಿಕೊಂಡಿದೆ. ಆ ಮೂಲಕ 23 ವರ್ಷಗಳ ಹಿಂದೆ ಧ್ವಂಸಗೊಳಿಸಿದವರ ಕಾರ್ಯಶುದ್ಧತೆಯನ್ನು ಪ್ರಶ್ನಿಸಿದೆ. ಈಗ ಉತ್ತರಿಸಬೇಕಾದವರು ಬಾಬರಿಯನ್ನು ಉರುಳಿಸಿ ಸಿಹಿ ಹಂಚಿಕೊಂಡವರು. ವಿಜಯೋತ್ಸವ ಆಚರಿಸಿದವರು. ಮಸೀದಿಯನ್ನು ಉರುಳಿಸುವುದಕ್ಕಾಗಿ ಷಡ್ಯಂತ್ರ ರಚಿಸಿದವರು. ಆದರೆ ಅವರು ಈ ಕುರಿತಂತೆ ಮಾತನ್ನೇ ಆಡುತ್ತಿಲ್ಲ. ಚೆನ್ನೈಯ ಮಸೀದಿಯಲ್ಲಿ ನೀವೇಕೆ ತಂಗಿದಿರಿ ಎಂದು ತಂಗಿದವರನ್ನು ಪ್ರಶ್ನಿಸುತ್ತಿಲ್ಲ. ಅಂಥದ್ದೊಂದು ಘಟನೆ ನಡೆದೇ ಇಲ್ಲವೋ ಎಂಬಂತೆ ಅವರೆಲ್ಲ ವಿಜಯ ದಿವಸದಲ್ಲಿ ಮಗ್ನರಾಗಿದ್ದಾರೆ. ನಿಜವಾಗಿ, ಚೆನ್ನೈ ಮಳೆಯಲ್ಲಿ ಸಿಕ್ಕ ಹಲವಾರು ಪಾಠಗಳಲ್ಲಿ ಮನುಷ್ಯ ಪ್ರೇಮದ ಈ ಪಾಠವೂ ಒಂದು. ನಾವು-ಅವರು, ಮ್ಲೇಚ್ಛರು-ಶ್ರೇಷ್ಠರು ಎಂದೆಲ್ಲಾ ವಿಭಜಿಸಿಕೊಂಡು ಬದುಕುತ್ತಿರುವವರಿಗೆ ಮಳೆ ಅನೇಕಾರು ಪಾಠಗಳನ್ನು ಹೇಳಿದೆ. ಎಲ್ಲರೂ ಸಮಾನರು ಮತ್ತು ಪರಸ್ಪರ ಕೊಡು-ಕೊಳ್ಳುವಿಕೆಯೊಂದಿಗೆ ಬದುಕಬೇಕಾದವರು ಎಂಬುದೇ ಮಳೆ ಸಾರಿದ ಪ್ರಮುಖ ಸಂದೇಶ. ಧ್ವಂಸಕೋರರಿಗೆ ಇದು ಅರ್ಥವಾಗಲಿ.


No comments:

Post a Comment