Friday, 1 January 2016

ಅಡಗಿಕೊಳ್ಳಬೇಕಾದುದು ಹೆಣ್ಣಲ್ಲ, ಅತ್ಯಾಚಾರಿ ...

         ದೆಹಲಿಯ ಜಂತರ್ ಮಂತರ್‍ನಲ್ಲಿ ಕಳೆದ ವಾರ ನಡೆದ ‘ನಿರ್ಭಯ ಚೇತನ್ ದಿವಸ್' ಸಭೆಯು ಕೆಲವು ಕಾರಣಗಳಿಗಾಗಿ ಮಹತ್ವಪೂರ್ಣವಾದುದು. 2015ಕ್ಕೆ ವಿಶಿಷ್ಟ ರೀತಿಯಲ್ಲಿ ತೆರೆ ಎಳೆಯಲಾದ ಸಂದರ್ಭವಾಗಿ ಆ ಸಭೆಯನ್ನು ನಾವು ಪರಿಗಣಿಸಬಹುದಾಗಿದೆ. ಈ ಸಭೆಯಲ್ಲಿ ‘ನಿರ್ಭಯ'ಳ ತಾಯಿ ಆಶಾ ದೇವಿಯವರು ತನ್ನ ಮಗಳ ಹೆಸರನ್ನು ಅಧಿಕೃತವಾಗಿ ಘೋಷಿಸಿದರು. ಮಾತ್ರವಲ್ಲ, ಮಾಧ್ಯಮಗಳು ಜ್ಯೋತಿಸಿಂಗ್ ಎಂಬ ಹೆಸರಿನಿಂದಲೇ ತನ್ನ ಮಗಳನ್ನು ಗುರುತಿಸಬೇಕೆಂದು ಕರೆಕೊಟ್ಟರು. ಆದರೆ ಭಾರತೀಯ ದಂಡಸಂಹಿತೆ 228Aಯ ಪ್ರಕಾರ, ಅತ್ಯಾಚಾರಕ್ಕೀಡಾದ ಸಂತ್ರಸ್ತೆಯ ಹೆಸರನ್ನು ಪ್ರಕಟಿಸುವುದು ಕ್ರಿಮಿನಲ್ ಅಪರಾಧ. ಆದರೂ ದಂಡಸಂಹಿತೆ 228A(2)(C)ಯಲ್ಲಿರುವ  ಕೆಲವು ರಿಯಾಯಿತಿಗಳನ್ನು ಬಳಸಿಕೊಂಡು ಹೆಸರನ್ನು ಪ್ರಕಟಿಸಬಹುದಾದರೂ ಪತ್ರಿಕೆಗಳು ಈ ಮೊದಲಿನ ನಿರ್ಧಾರಕ್ಕೇ ಅಂಟಿಕೊಂಡವು. ‘ನಿರ್ಭಯ'ಳ ನಿಜ ಹೆಸರನ್ನು ಪ್ರಕಟಿಸಬಾರದಾಗಿ ತೀರ್ಮಾನಿಸಿದವು. ಇದು ಪರ-ವಿರುದ್ಧ ಚರ್ಚೆಗೆ ವೇದಿಕೆ ಒದಗಿಸಿತು. ಹೈದರಾಬಾದ್‍ನ ನಲ್ಸರ್ ವಿಶ್ವವಿದ್ಯಾಲಯದ  ಆನಂದಿತಾ ಮುಖರ್ಜಿ ಪತ್ರಿಕೆಗಳ ಈ ನಿಲುವನ್ನು ಪ್ರತಿಭಟಿಸಿದರು. ಈ ಕುರಿತಂತೆ ತನ್ನ ಅಸಮಾಧಾನವನ್ನು ಸೂಚಿಸಿ ದಿ ಹಿಂದೂ ಪತ್ರಿಕೆಗೆ ಖಾರ ಪತ್ರವನ್ನೂ ಬರೆದಳು. ವಿಶೇಷ ಏನೆಂದರೆ, ಕೆಲವು ತಿಂಗಳುಗಳ ಹಿಂದಷ್ಟೇ ತಟಸ್ಥ ಲಿಂಗ (Gender Neutrality) ಸರ್ಟಿಫಿಕೇಟ್‍ಗೆ ಆಗ್ರಹಿಸಿ ಕೋರ್ಟಿನಿಂದ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಅದನ್ನು ಆಕೆ ಪಡೆದುಕೊಂಡಿದ್ದರು. Mr, Ms  ಎಂಬ ಗೌರವ ಸೂಚಕ ಪದಗಳಂತೆಯೇ ತನ್ನ ಹೆಸರಿನ ಮೊದಲು Mx  ಸೇರಿಸಿಕೊಳ್ಳುವುದಕ್ಕೆ ಕೋರ್ಟು ಆಕೆಗೆ ಅನುಮತಿಯನ್ನು ನೀಡಿತ್ತು.
         
       Mx ಗಾಗಿ ಆನಂದಿತಾ ಮುಖರ್ಜಿಯ ಹೋರಾಟವೇನೇ ಇರಲಿ, ಅದರಲ್ಲೊಂದು ಧೈರ್ಯ ಇದೆ. ಆ ಧೈರ್ಯದ ಮುಂದುವರಿದ ಭಾಗವಾಗಿ ನಾವು ಆಶಾದೇವಿಯ ಹೇಳಿಕೆಯನ್ನು ಪರಿಗಣಿಸಬಹುದಾಗಿದೆ. ನಿಜವಾಗಿ, ಈ ದೇಶದಲ್ಲಿ ಹೆಣ್ಣಿನ ಕುರಿತಂತೆ ಮೈಲಿಗೆಯ ಹತ್ತು-ಹಲವು ಕತೆಗಳಿವೆ. ಹೆಜ್ಜೆ ಹೆಜ್ಜೆಗೂ ನಿರ್ಬಂಧಗಳಿವೆ. ಕಟ್ಟುಪಾಡುಗಳಿವೆ. ಅನಾದಿ ಕಾಲದಿಂದಲೂ ಹೆಣ್ಣನ್ನು ದಮನಿಸುವ ಪರಂಪರೆಯೊಂದು ಈ ದೇಶಕ್ಕಿದೆ. ಈ ಪರಂಪರೆ ಎಷ್ಟು ಪರಿಚಿತ ಮತ್ತು ಸಹಜ ಅನ್ನಿಸಿಕೊಂಡಿದೆ ಯೆಂದರೆ, ಆಕೆ ಪತಿಯ ಚಿತೆಗೂ ಹಾರಬಲ್ಲಳು. ಕೆರೆಗೂ ಹಾರವಾಗಬಲ್ಲಳು. ದೇವದಾಸಿಯಾಗಬಲ್ಲಳು. ಅಮಂಗಲೆ ಅನ್ನಿಸಿಕೊಳ್ಳಬಲ್ಲಳು. ಮುಟ್ಟಾಗಿ ಊರ ಹೊರಗೆ ಬದುಕಬಲ್ಲಳು. ವೈಧವ್ಯದ ಪರಮ ಕ್ರೂರ ಬದುಕಿಗೆ ಒಗ್ಗಿಕೊಳ್ಳಬಲ್ಲಳು. ಅಂತಪುರದಲ್ಲಿ ಸಖಿಯಾಗಬಲ್ಲಳು. ಎಲ್ಲವನ್ನೂ ಸಹಿಸಿಕೊಳ್ಳುತ್ತಾ ಎಲ್ಲೂ ಪ್ರತಿಭಟಿಸದೆಯೇ ಕಳೆದು ಹೋಗುವ ಪರಮ ಸಭ್ಯ ಪಾತ್ರವಾಗಿಯೇ ಮಹಿಳೆ ಇತಿಹಾಸ ದುದ್ದಕ್ಕೂ ಈ ದೇಶದಲ್ಲಿ ಗುರುತಿಸಿಕೊಂಡಿದ್ದಾಳೆ. ಇವತ್ತಿಗೂ ಮಹಿಳೆಯ ಆ ಪಾತ್ರದಲ್ಲಿ ಅಭೂತ ಪೂರ್ವವೆನ್ನಬಹುದಾದ ಬದಲಾವಣೆಯೇನೂ ಆಗಿಲ್ಲ. ವರದಕ್ಷಿಣೆಯ ಹೆಸರಲ್ಲಿ ಆಕೆಯನ್ನು ಸತಾ ಯಿಸಲಾಗುತ್ತದೆ. ಮರ್ಯಾದೆಗೇಡು ಹತ್ಯೆಯಲ್ಲಿ ಆಕೆಯೇ ಮೊದಲು ಗುರಿಯಾಗುತ್ತಾಳೆ. ಆಕೆಯನ್ನು ಭ್ರೂಣಧಲ್ಲೇ ಮುಗಿಸಿಬಿಡುವ ಘಟನೆಗಳಂತೂ ಧಾರಾಳವಾಗಿ ನಡೆಯುತ್ತಿವೆ. ಇದರ ಜೊತೆಗೇ ಅತ್ಯಾಚಾರ ಪ್ರಕರಣಗಳನ್ನು ಸೇರಿಸಿದರೆ ಹೆಣ್ಣು ಮತ್ತಷ್ಟು ದುರ್ಬಲವಾಗಿ ಕಾಣುತ್ತಾಳೆ. ಆದ್ದರಿಂದಲೇ ಆಶಾದೇವಿಯ ಹೇಳಿಕೆಯನ್ನು ಸಮಾಜ ವರ್ಷದ ಹೇಳಿಕೆಯಾಗಿ ಪರಿಗಣಿಸಬೇಕೆಂದು ಅನಿಸುವುದು. ಅಂದಹಾಗೆ, ಅತ್ಯಾಚಾರವೆಂಬುದು ವರದಕ್ಷಿಣೆ, ಲಿಂಗ ತಾರತಮ್ಯ, ಮರ್ಯಾದೆಗೇಡು ಹತ್ಯೆ ಮುಂತಾದುವುಗಳಂತೆ ಅಲ್ಲವಲ್ಲ. ಇವುಗಳಿಗಾದರೋ ಆಯ್ಕೆಯ ಅವಕಾಶಗಳಿವೆ. ವರದಕ್ಷಿಣೆಯ ಮದುವೆಯನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಅವಕಾಶವೊಂದು ಹೆಣ್ಣಿನ ಮುಂದಿರುತ್ತದೆ. ಅನೇಕ ಸಂದರ್ಭಗಳಲ್ಲಿ ಈ ಅವಕಾಶಕ್ಕೆ ಮಿತಿ ಇರಬಹುದಾದರೂ ಆಯ್ಕೆಯ ಸ್ವಾತಂತ್ರ್ಯವನ್ನಂತೂ ನಿರಾಕರಿಸಲು ಸಾಧ್ಯವಿಲ್ಲ. ಮರ್ಯಾದೆಗೇಡು ಹತ್ಯೆಯ ವಿಷಯವೂ ಇಷ್ಟೇ. ಇಲ್ಲೂ, ಮನೆಯವರಿಗೆ ಇಷ್ಟವಿಲ್ಲದ ಯುವಕನನ್ನು ಪ್ರೀತಿಸುವ ಅಥವಾ ಪ್ರೀತಿಸದೇ ಇರುವ ಅವಕಾಶವೊಂದು ಹೆಣ್ಣಿಗಿರುತ್ತದೆ. ಲಿಂಗ ತಾರತಮ್ಯವನ್ನು ಕೂಡ ಪ್ರಶ್ನಿಸುವುದಕ್ಕೆ ಅವಕಾಶ ಇದೆ. ಹೆಣ್ಣು ಧೈರ್ಯ ತಂದುಕೊಂಡರೆ ಈ ಬಗ್ಗೆ ನೆರವಾಗುವುದಕ್ಕೆ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳಿವೆ. ಆದರೆ ಅತ್ಯಾಚಾರ ಹೀಗಲ್ಲ. ಹೆಣ್ಣಿನ ಅಸಹಾಯಕತೆಯನ್ನೇ ಗುರಿಯಾಗಿಟ್ಟುಕೊಂಡು ಮಾಡುವ ಹೇಯ ಕ್ರೌರ್ಯ ಅದು. ಅತ್ಯಾಚಾರದಲ್ಲಿ ಹೆಣ್ಣಿಗೆ ಆಯ್ಕೆಗಳಿರುವುದಿಲ್ಲ. ನಿಜವಾಗಿ, ಅತ್ಯಾಚಾರಕ್ಕಿಂತಲೂ ಭಯಾನಕ ಏನೆಂದರೆ, ಅತ್ಯಾಚಾರದ ಬಳಿಕದ ಜೀವನ. ಅತ್ಯಾಚಾರಿ ತನ್ನ ಕೃತ್ಯದ ಬಳಿಕ ‘ಏನೂ ಆಗಿಲ್ಲ ವೆಂಬಂತೆ' ಹೊರಟು ಹೋಗುವಾಗ ಸಂತ್ರಸ್ತೆಯು ಅಪರಾಧಿಯಂತೆ ಎಲ್ಲವನ್ನೂ ನುಂಗಿಕೊಂಡು ಬದುಕುವುದಕ್ಕೆ ಹೆಚ್ಚಿನ ಬಾರಿ ತೀರ್ಮಾನಿಸುತ್ತಾಳೆ. ಒಡಲೊಳಗೆ ಅತ್ಯಾಚಾರವೆಂಬ ಬೆಂಕಿಯ ಉರಿಯನ್ನು ಸಹಿಸಿಕೊಳ್ಳುತ್ತಲೇ ಹೊರಗೆ ಅದರ ಕಾವು ಕಾಣದಂತೆ ಅದುಮಿಡಲು ಪ್ರಯತ್ನಿಸುತ್ತಾಳೆ. ಇದಕ್ಕೆ ಕಾರಣ ಏನೆಂದರೆ, ‘ಅತ್ಯಾಚಾರದ ಸಂತ್ರಸ್ತೆ' ಎಂಬ ಹಣೆಪಟ್ಟಿಯನ್ನು ಸಮಾಜ ಇಷ್ಟಪಡದೇ ಇರುವುದು. ಅದು ಭವಿಷ್ಯದಲ್ಲಿ ಆ ಹೆಣ್ಣು ಮಗಳ ಮದುವೆಯನ್ನು, ಸಾಮಾಜಿಕ ಮನ್ನಣೆಯನ್ನು, ಕುಟುಂಬದ ಮರ್ಯಾದೆಯನ್ನು ನಾಶ ಮಾಡಬಹುದಾದ ಹಣೆಪಟ್ಟಿ. ಸಮಾಜದಲ್ಲಿ ಇತರರಂತೆ ಬದುಕುವ ಸ್ವಾತಂತ್ರ್ಯವನ್ನು ಆ ಹಣೆಪಟ್ಟಿ ನಿರಾಕರಿಸುತ್ತದೆ. ಅದು ಆಕೆಯನ್ನು ಪ್ರತಿದಿನವೂ ಇರಿಯಬಹುದು. ವ್ಯಂಗ್ಯಕ್ಕೆ ಒಳಗಾಗಿಸಬಹುದು. ಊರು ಬಿಡುವಂತೆ ಬಲವಂತಪಡಿಸಬಹುದು. ಇವು ಮತ್ತು ಇಂತಹ ಹತ್ತಾರು ಸವಾಲುಗಳನ್ನು ಸಂತ್ರಸ್ತೆ ಎದುರಿಸಬಹುದಾದ ಅಪಾಯ ಇರುವುದರಿಂದಲೇ ಭಾರತೀಯ ದಂಡ ಸಂಹಿತೆಯಲ್ಲಿ ಸಂತ್ರಸ್ತೆಯ ಹೆಸರನ್ನು ಗೌಪ್ಯವಾಗಿಡುವ ತೀರ್ಮಾನ ಮಾಡಿರಬೇಕು. ಅಂದಹಾಗೆ, ಈ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಪ್ರತಿದಿನ ನಡೆಯುತ್ತಿದ್ದರೂ ಅವುಗಳಲ್ಲಿ ಸುದ್ದಿಯಾಗುವುದು ಕೆಲವೇ ಕೆಲವು. ಹೆಚ್ಚಿನ ಸುದ್ದಿಗಳು ಮನೆತನದ ಗೌರವ, ಹೆಣ್ಣು ಮಗಳ ಭವಿಷ್ಯ ಅಥವಾ ಅತ್ಯಾಚಾರಿಗಳ ಬೆದರಿಕೆಗಳಿಂದಾಗಿ ಸತ್ತು ಹೋಗುತ್ತವೆ. ಇನ್ನು, ಸುದ್ದಿಯಾಗುವ ಪ್ರಕರಣಗಳಲ್ಲೂ ಸಂತ್ರಸ್ತೆಯ ಹೆಸರು ಪ್ರಕಟವಾಗದಂತೆ ಎಚ್ಚರ ವಹಿಸಲಾಗುತ್ತದೆ. ಹಾಗಂತ, ಈ ಎಚ್ಚರಿಕೆಗೆ ಭಾರತೀಯ ದಂಡಸಂಹಿತೆಯೊಂದೇ ಕಾರಣ ಎಂದು ಹೇಳುವಂತಿಲ್ಲ. ದೇಶದ ಸಾಮಾಜಿಕ ರೀತಿ-ನೀತಿಗಳೇ ಹಾಗಿವೆ. ‘ಅತ್ಯಾಚಾರದ ಸಂತ್ರಸ್ತೆ'ಯನ್ನು ಒಂದು ಬಗೆಯ ಅಸ್ಪೃಶ್ಯ ದೃಷ್ಟಿಕೋನದಲ್ಲಿ ನೋಡುವ ಮನಸ್ಥಿತಿ ಇಲ್ಲಿ ಈಗಲೂ ಇದೆ. ಯುವಕ-ಯುವತಿಯರಿಗೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಹೆಣ್ಣನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ವಾತಾವರಣ ಇದೆ. ಇಂಥ ಸ್ಥಿತಿಯಲ್ಲಿ ಆಶಾದೇವಿಯವರ ಹೇಳಿಕೆಯನ್ನು ನಾವು ವಿಶ್ಲೇಷಿಸಬೇಕಾಗಿದೆ. ಸಂತ್ರಸ್ತೆಯನ್ನು ಅಡಗಿಸುವ ಬದಲು ಸಮಾಜದ ಮುಂದೆ ನಿಲ್ಲಿಸುವ ಮತ್ತು ಆ ಮೂಲಕ ಅತ್ಯಾಚಾರಿಗಳು ನಾಚಿಕೊಳ್ಳುವಂತೆ ಮಾಡುವ ಧೈರ್ಯದ ಹೇಳಿಕೆ ಅದು. ಅತ್ಯಾಚಾರವು ಗಂಡಿಗೆ ಅವಮಾನವೇ ಹೊರತು ಹೆಣ್ಣಿಗಲ್ಲ ಎಂದು ಬಲವಾಗಿ ಸಾರಿದ ಸಂದರ್ಭವಿದು. ಆದ್ದರಿಂದಲೇ, ಈ ಹೇಳಿಕೆಯನ್ನು ವರ್ಷದ ಹೇಳಿಕೆಯಾಗಿ ಗೌರವಿಸಬೇಕಾಗಿದೆ.
      ಏನೇ ಆಗಲಿ, ತನ್ನ ದೈಹಿಕ ರಚನೆಗೆ ನೊಂದುಕೊಳ್ಳದೇ, ಅದನ್ನು ಪ್ರಕೃತಿಯ ಕೊಡುಗೆಯಾಗಿ ಸ್ವೀಕರಿಸಿಕೊಂಡು ಸಮಾಜದ ಮುಂದೆ ಬಹಿರಂಗವಾಗಿ ಸಾರಿದ Mx ಆನಂದಿತಾ ಮುಖರ್ಜಿಯ ಧೈರ್ಯ ಒಂದು ಕಡೆಯಾದರೆ, ಆಶಾದೇವಿಯ ಧೈರ್ಯ ಇನ್ನೊಂದು ಕಡೆ. 2015ರ ಕೊನೆಯಲ್ಲಿ ಕಾಣಿಸಿಕೊಂಡ ಈ ಎರಡು ಧೈರ್ಯಗಳನ್ನು ನಾವು ಮೆಚ್ಚಿಕೊಳ್ಳಬೇಕು. 2016ನೇ ಇಸವಿಯು ಹೆಣ್ಣನ್ನು ಸುರಕ್ಷಿತವಾಗಿಡಲು ಈ ಧೈರ್ಯ ಪ್ರಚೋದಕವಾಗಬೇಕು. ಹಾಗಾಗಲಿ ಎಂದು ಹಾರೈಸೋಣ.

No comments:

Post a Comment