Thursday, 28 January 2016

ಪಂಡಿತರ ಸಮಸ್ಯೆ ಮತ್ತು ಓಂಕಾರ್ ರಾಜ್‍ದಾನ್ ರ ಮೂರಂತಸ್ತಿನ ಮನೆ

ಓಂಕಾರ್ ರಾಜ್ದಾನ್ ಕಾಶ್ಮೀರಿಗಳೊಂದಿಗೆ
       ಕಾಶ್ಮೀರವನ್ನು ಹಿಂದೂ-ಮುಸ್ಲಿಮ್ ಎಂಬ ಪ್ರತ್ಯೇಕ ಕಾಲನಿಗಳಾಗಿ ಒಡೆಯುವ ಪ್ರಧಾನಿ ಮೋದಿಯವರ ನಿಲುವನ್ನು ಕಾಶ್ಮೀರದ ಪಂಡಿತ ಕುಟುಂಬವೊಂದು ಬಲವಾಗಿ ಆಕ್ಷೇಪಿಸಿದೆ. ಮಾತ್ರವಲ್ಲ, ಪ್ರಸ್ತಾವಿತ ಹಿಂದೂ ಕಾಲನಿಯ ಬದಲು ಮುಸ್ಲಿಮರೇ ಅಧಿಕವಿರುವ ಹುಮ್‍ಹಮಾ ಪ್ರದೇಶದಲ್ಲಿ ಈ ಕುಟುಂಬವು ಮೂರಂತಸ್ತಿನ ಮನೆಯನ್ನು ಕಟ್ಟಿದೆ. ಮನೆಗೆ `ಬೆಳಕಿನ ಹುಟ್ಟು' ಎಂಬ ಚಂದದ ಹೆಸರನ್ನೂ ಕೊಟ್ಟಿದೆ. ಅಲ್ಲೇ ವಾಸಿಸತೊಡಗಿದೆ. 1990ರಲ್ಲಿ ಕಾಶ್ಮೀರದಿಂದ ವಲಸೆ ಹೋದ ಕುಟುಂಬಗಳಲ್ಲಿ ಈ ಓಂಕಾರ್ ರಾಜದಾನ್ ಕುಟುಂಬವೂ ಒಂದು. ಅಂದಹಾಗೆ, ಜಗ್ಮೋಹನ್‍ರು ರಾಜ್ಯಪಾಲರಾಗಿದ್ದ ಕಾಲದಲ್ಲಿ ನಡೆದ ಈ ವಲಸೆಯ ಸರಿ-ತಪ್ಪುಗಳ ಕುರಿತಂತೆ ಈ ದೇಶದಲ್ಲಿ ಅನೇಕಾರು ಬಾರಿ ಚರ್ಚೆಗಳಾಗಿವೆ. ಜಗ್ಮೋಹನ್‍ರ ಬಲಪಂಥೀಯ ವಿಚಾರಧಾರೆಯು ಆ ಇಡೀ ವಲಸೆ ಪ್ರಕ್ರಿಯೆಯ ಹಿಂದೆ ಕೆಲಸ ಮಾಡಿರುವ ಬಗ್ಗೆ ಅನೇಕ ಬಾರಿ ಅನುಮಾನ ಪಡಲಾಗಿದೆ. ಜಗ್ಮೋಹನ್ ಕಾಶ್ಮೀರವನ್ನು ಬೆಂಕಿಯ ಕುಲುವೆಯಾಗಿಸಿದರು. ತನ್ನ ಅಪರಿಪಕ್ವ ನೀತಿಗಳ ಮೂಲಕ ಉಗ್ರವಾದಕ್ಕೆ ಪೋಷಣೆ ನೀಡಿದರು.(ಇದೀಗ  ಮೋದಿ ಸರಕಾರವು ಜಗಮೋಹನ್ ರಿಗೆ ಪದ್ಮಶ್ರೀ ಕೊಟ್ಟು ಸನ್ಮಾನಿಸಿದೆ) ದೇಶ ವಿಭಜನೆಯ ಸಮಯದಲ್ಲಿ ಇಡೀ ದೇಶದಲ್ಲಿಯೇ ಅಲ್ಪಸಂಖ್ಯಾತರ ವಿರುದ್ಧ ದಾಳಿಗಳು ನಡೆಯುತ್ತಿದ್ದಾಗ ಕಾಶ್ಮೀರದ ಅಲ್ಪಸಂಖ್ಯಾತ ಪಂಡಿತ ಸಮುದಾಯದ ಮೇಲೆ ಒಂದೇ ಒಂದು ದಾಳಿ ನಡೆದಿರಲಿಲ್ಲ. ಹಿಂದೂ-ಮುಸ್ಲಿಮ್ ಎಂಬುದು ಕಾಶ್ಮೀರವನ್ನು ವಿಭಜಿಸುವ ಬದಲು ಜೋಡಿಸುವ ಸೇತುವೆಯಾಗಿತ್ತು. ಕಾಶ್ಮೀರದ ಪ್ರತ್ಯೇಕತಾವಾದಿ ಹೋರಾಟದ ಅಪದ್ಧಗಳೇನೇ ಇರಲಿ, ಅದು ಕಾಶ್ಮೀರಿ ಪಂಡಿತರ ವಿರೋಧಿ ಆಗಿರಲಿಲ್ಲ. ಬಹುಶಃ ಅದನ್ನು ಪಂಡಿತ ವಿರೋಧಿಯಾಗಿ ಚಿತ್ರೀಕರಿಸಿದ್ದು ಮತ್ತು ಪಂಡಿತ ವಿರೋಧಿಯಾಗುವಂತೆ ಷಡ್ಯಂತ್ರ ರೂಪಿಸಿದ್ದು ರಾಜಕೀಯವೇ ಇರಬೇಕು. ಆ ಇಡೀ ಹೋರಾಟವನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವ  ಹುನ್ನಾರವೊಂದಕ್ಕೆ ಕಾಶ್ಮೀರದ ಹೊರಗೆ ಸ್ಕ್ರಿಪ್ಟ್ ಅನ್ನು ರಚಿಸಲಾಯಿತು. ಪ್ರತ್ಯೇಕತಾವಾದಿಗಳನ್ನು ಉದ್ರೇಕಿಸುವ ಮತ್ತು ಇಡೀ ಮುಸ್ಲಿಮ್ ಸಮುದಾಯವನ್ನು ಪ್ರತ್ಯೇಕತಾವಾದದ ಹೆಸರಲ್ಲಿ ಹೀನಾಯವಾಗಿ ನಡೆಸಿಕೊಳ್ಳುವ ಷಡ್ಯಂತ್ರಗಳು ನಡೆದುವು. ಕಾಶ್ಮೀರ ಎಂದೂ ಪ್ರತ್ಯೇಕತಾವಾದಿಗಳ ಮುಷ್ಠಿಯಲ್ಲಿರಲಿಲ್ಲ. ದೇಶದ ಇತರೆಲ್ಲ ಕಡೆ ಇರುವಂತಹ ಅಸಹನೆಯ ಸಣ್ಣ ಗುಂಪೊಂದು ಪ್ರತ್ಯೇಕತೆಯ ಹಾಡು ಹಾಡುತ್ತಿತ್ತು. ಪಾಕಿಸ್ತಾನ ಆ ಹಾಡಿಗೆ ತಾಳ ಹಾಕುತ್ತಿತ್ತು. ಅದನ್ನು ಬಿಟ್ಟರೆ ರಾಜಕೀಯವಾಗಿ ಯಾವ ಬಲವೂ ಇಲ್ಲದ ಮತ್ತು ಕನಿಷ್ಠ ಪಂಚಾಯತಿ ಚುನಾವಣೆಯಲ್ಲಿ ಒಂದು ಸೀಟನ್ನೂ ಗೆಲ್ಲಲಾಗದಷ್ಟು ಆ ಹೋರಾಟ ಬಲಹೀನವಾಗಿತ್ತು. ಒಂದು ರೀತಿಯಲ್ಲಿ, ಈ ದುರ್ಬಲ ಶಿಶುವನ್ನು ಪೋಷಿಸಿದ್ದೇ ಬಲಪಂಥೀಯ ವಿಚಾರಧಾರೆಯ ರಾಜಕೀಯ ನಾಯಕರು. ರಾಜಕೀಯ ಹಿತಾಸಕ್ತಿಯೊಂದೇ ಅವರ ಮುಂದಿದ್ದುದಲ್ಲ, ಕಾಶ್ಮೀರಿ ಮುಸ್ಲಿಮರನ್ನು ಪಾಕ್ ಪ್ರೇಮಿಗಳೆಂದೂ ಹಿಂದೂ ವಿರೋಧಿಗಳೆಂದೂ ಮುದ್ರೆ ಹಾಕುವುದು ಅವರಿಗೆ ಬೇಕಾಗಿತ್ತು. ಇಡೀ ದೇಶದಲ್ಲಿಯೇ ಮುಸ್ಲಿಮರು ಬಹುಸಂಖ್ಯಾತರಾಗಿರುವುದು ಕಾಶ್ಮೀರದಲ್ಲಿ. ಹಿಂದುಗಳು ಅಲ್ಪಸಂಖ್ಯಾತರಾಗಿರುವುದೂ ಅಲ್ಲೇ. ಈ ಎರಡೂ ಸಮುದಾಯ ಅನ್ಯೋನ್ಯತೆಯಿಂದ ಬದುಕುವುದು ಮುಸ್ಲಿಮ್ ವಿರೋಧಿಗಳನ್ನು ಕಳವಳಕ್ಕೆ ಈಡಾಗಿಸಿತ್ತು. ಬಹುಶಃ, ಜಗ್ಮೋಹನ್‍ರು ಆ ವಿಚಾರಧಾರೆಯ ಪ್ರತಿನಿಧಿಯಾಗಿ ಕಾಶ್ಮೀರಕ್ಕೆ ಪ್ರವೇಶಿಸಿದ್ದಾರೆಂದೇ ಹೇಳಬೇಕು. ಅವರಿಂದಾಗಿ, ಇಡೀ ಕಾಶ್ಮೀರದ ನಕ್ಷೆಯೇ ಬದಲಾಯಿತು. ಪ್ರತ್ಯೇಕತಾವಾದವು ಹಿಂದೂ ವಿರೋಧಿಯಾಗಿ ಮಾರ್ಪಡಲು ಬೇಕಾದ ತಂತ್ರಗಳನ್ನು ಹೆಣೆಯಲಾಯಿತು. ಅದು ಫಲಿಸಲು ಪ್ರಾರಂಭವಾದದ್ದೇ ತಡ ಇಡೀ ಕಾಶ್ಮೀರಿ ಮುಸ್ಲಿಮರು ಹಿಂದೂ ವಿರೋಧಿಗಳಂತೆ ಮತ್ತು ಇಡೀ ಹಿಂದೂ ಪಂಡಿತರನ್ನು ಸಂತ್ರಸ್ತರಂತೆ ಬಿಂಬಿಸಲಾಯಿತು. ಬಿಸಿ ರಕ್ತದ ಪ್ರತ್ಯೇಕತಾವಾದಿಗಳನ್ನು ಹಾಗೆ ಆಲೋಚಿಸುವಂತೆ ಮಾಡುವುದಕ್ಕೆ ಗಡಿಯ ಒಳಗಿನ ಮತ್ತು ಹೊರಗಿನ ರಾಜಕೀಯವು ಶಕ್ತಿ ಮೀರಿ ಪ್ರಯತ್ನಿಸಿತು. ಅದು
      
ಯಶಸ್ವಿಯಾಗುತ್ತಿದ್ದಂತೆಯೇ ಪಂಡಿತರ ಸಾಮೂಹಿಕ ವಲಸೆ ಆರಂಭವಾಯಿತು. ಮನೆ-ಮಾರುಗಳನ್ನು ಬಿಟ್ಟು ಒಂದು ಸಮುದಾಯವು ದಿಲ್ಲಿ ಮುಂತಾದ ಅಪರಿಚಿತ ಪ್ರದೇಶದಲ್ಲಿ ವಾಸಿಸಲೇ ಬೇಕಾದ ಅನಿವಾರ್ಯತೆ ಎದುರಾಯಿತು. ಮಾತ್ರವಲ್ಲ ಬಲಪಂಥೀಯ ರಾಜಕೀಯ ಪಕ್ಷ ಮತ್ತು ಅದರ ಬೆಂಬಲಿಗರು ಈ ಹಿಂದೂ ಸಂತ್ರಸ್ತತತೆಯನ್ನು ಎತ್ತಿಕೊಂಡು ಹಿಂದೂ ಧ್ರುವೀಕರಣಕ್ಕೆ ಶ್ರಮಿಸತೊಡಗಿದರು. ಆಗಾಗ ಪಂಡಿತರ ಹೆಸರಲ್ಲಿ ಉಗ್ರ ಭಾಷಣ ಮಾಡುವ ಮತ್ತು ಅವರ ಹೆಸರಲ್ಲಿ ವಿಷಾದ ಗೀತೆಯನ್ನು ರಚಿಸುವ ಸಂದರ್ಭಗಳು ಸೃಷ್ಟಿಯಾದುವು. ಪ್ರತ್ಯೇಕತಾವಾದವೂ ಇದಕ್ಕಿಂತ ಭಿನ್ನವಲ್ಲ. ಕೇಂದ್ರ ಸರಕಾರವನ್ನು ಕಾಶ್ಮೀರ ವಿರೋಧಿ ಎಂದು ಅದು ಬಿಂಬಿಸುತ್ತಿದ್ದುದಲ್ಲದೇ ತಮ್ಮ ವಾದಕ್ಕೆ ಪುರಾವೆಯಾಗಿ ವ್ಯವಸ್ಥೆಯಿಂದ ಆಗಿರಬಹುದಾದ ಬಿಡಿ ಘಟನೆಗಳಿಗೆ ಉತ್ಪ್ರೇಕ್ಷಿತ ವ್ಯಾಖ್ಯಾನವನ್ನು ಕೊಟ್ಟಿತು. ಇದರಿಂದ ಅತ್ಯಂತ ಸಂಕಟ ಪಟ್ಟದ್ದು ಕಾಶ್ಮೀರ. ಕಾಶ್ಮೀರಿಗಳ ಪ್ರತಿ ಮನೆಗೂ ಅನುಮತಿಯಿಲ್ಲದೇ ಪ್ರವೇಶಿಸುವ ಮುಕ್ತ ಸ್ವಾತಂತ್ರ್ಯವನ್ನು ಭದ್ರತಾ ಪಡೆಗಳಿಗೆ ಈ ವಾತಾವರಣ ಒದಗಿಸಿಕೊಟ್ಟಿತು. ಕಾಶ್ಮೀರಿಗಳನ್ನು ಒಂದೋ ಭಯೋತ್ಪಾದಕರು ಇಲ್ಲವೇ ಭಯೋತ್ಪಾದಕರ ಸಿಂಫಥೈಸರ್‍ಗಳು ಎಂದು ಸಗಟು ರೂಪದಲ್ಲಿ ಮುದ್ರೆ ಒತ್ತುವುದಕ್ಕೆ ಇದು ಅವಕಾಶ ಒದಗಿಸಿತು. ಭಯೋತ್ಪಾದನೆಯನ್ನು ದಮನಿಸುವ ಹೆಸರಲ್ಲಿ ಕಾಶ್ಮೀರದಲ್ಲಿ ಆಗಿರುವ ಹತ್ಯೆಗಳು, ಅಪಹರಣಗಳು, ನಾಪತ್ತೆ ಪ್ರಕರಣಗಳನ್ನು ಲೆಕ್ಕ ಹಾಕಿದರೆ ಮತ್ತು ಕಾಶ್ಮೀರ ಹೊರಗೆ ಈ ಘಟನೆಗಳಿಗೆ ಸ್ಥಳೀಯ ಮಟ್ಟದ ಕಳ್ಳತನದ ಪ್ರಕರಣದಷ್ಟೂ ಮಾಧ್ಯಮ ಕವರೇಜ್ ಸಿಗದೇ ಇರುವುದಕ್ಕೆ ಕಾಶ್ಮೀರದ ಕುರಿತಂತೆ ಸಾರ್ವತ್ರಿಕವಾಗಿರುವ ಈ ನೆಗೆಟಿವ್ ನಿಲುವೇ ಕಾರಣವೆನ್ನಬೇಕು. ಈ ನಿಲುವನ್ನು ಈ ದೇಶದಲ್ಲಿ ಎರಡು ದಶಕಗಳಿಂದ ಬಿತ್ತಿ ಬೆಳೆಸಲಾಯಿತು. ಇವತ್ತು ಬಿಜೆಪಿಗೆ ಕಾಶ್ಮೀರವು ಮತ ಧ್ರುವೀಕರಣಕ್ಕೆ ಉಪಕರಣವಾಗಿದೆ. ಬಿಜೆಪಿಯ ಬೆಂಬಲಿಗ ಪರಿವಾರಕ್ಕೆ ಹಿಂದೂ ಧ್ರುವೀಕರಣ ಮತ್ತು ಮುಸ್ಲಿಮ್ ದ್ವೇಷ ವಾತಾವರಣ ಬೆಳೆಸುವುದಕ್ಕೆ ವಸ್ತುವಾಗಿದೆ. ಮುಸ್ಲಿಮರನ್ನು ಹಿಂದೂ ವಿರೋಧಿಗಳು ಎಂದು ಬಿಂಬಿಸುವುದಕ್ಕೂ ಅವರೆಲ್ಲ ಕಾಶ್ಮೀರವನ್ನು ಮತ್ತು ಪಂಡಿತರನ್ನು ಎತ್ತಿ ತೋರಿಸುತ್ತಿದ್ದಾರೆ. ಈ ವಿಭಜನಾ ರಾಜಕೀಯ ಒಂದು ಹಂತದವರೆಗೆ ಯಶಸ್ವಿಯಾಗುತ್ತಿರುವುದರಿಂದಲೇ ಕಾಶ್ಮೀರದಲ್ಲಿ ಹಿಂದೂ-ಮುಸ್ಲಿಮ್ ಪ್ರತ್ಯೇಕ ಕಾಲನಿಗಳನ್ನು ನಿರ್ಮಿಸುವ ಬಗ್ಗೆ ಮೋದಿಯವರು ಮಾತಾಡಿದ್ದು. ಆ ಮೂಲಕ ಹಿಂದೆ ಆಗಿರುವ ಗಾಯವನ್ನು ಮತ್ತು ಆ ಗಾಯವು ಹುಟ್ಟು ಹಾಕಿರಬಹುದಾದ ನಕಾರಾತ್ಮಕ ಭಾವನೆಯನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ತಂತ್ರ ಹೆಣೆದದ್ದು. ಓಂಕಾರ್ ರಾಜ್‍ದಾನ್ ಪ್ರಶ್ನಿಸಿರುವುದೇ ಇದನ್ನು. ಕಾಶ್ಮೀರದ ಹಳೆ ಪಟ್ಟಣದಲ್ಲಿರುವ ಗಣಪತಿ ದೇವಸ್ಥಾನಕ್ಕೆ ಮತ್ತು ಉತ್ತರ ಭಾಗದಲ್ಲಿರುವ ಖೀರ್ ಭವಾನಿ ದೇವಸ್ಥಾನಕ್ಕೆ ಸದಾ ಭೇಟಿಕೊಡುತ್ತಿರುವ ಓಂಕಾರ್‍ರ ಮನೆಯ ಅಕ್ಕ-ಪಕ್ಕ ಇರುವವರೆಲ್ಲ ಮುಸ್ಲಿಮರೇ. ಅವರು ದೆಹಲಿಗೆ ಹೋಗುವಾಗ ಮನೆಯ ಬೀಗದ ಕೈಯನ್ನು ಪಕ್ಕದ ಮುಸ್ಲಿಮ್ ಎಲೆಕ್ಟ್ರೀಶಿಯನ್ ವ್ಯಕ್ತಿಯೊಬ್ಬರಲ್ಲಿ ಕೊಟ್ಟು ಹೋಗುತ್ತಾರೆ.
         ಪಂಡಿತರು ಕಾಶ್ಮೀರಕ್ಕೆ ಮರಳುವ ವಿಷಯದ ಮೇಲೆ ಕಳೆದವಾರ ಮಾಧ್ಯಮಗಳಲ್ಲಿ ಚರ್ಚೆಗಳಾಗಿತ್ತು. ದೆಹಲಿ ಮುಂತಾದ ಪಟ್ಟಣಗಳಲ್ಲಿ ನೆಲೆಸಿರುವ ಮತ್ತು ಉದ್ಯೋಗ ಮಾಡುತ್ತಿರುವ ಕಾಶ್ಮೀರಿ ಪಂಡಿತರ ಹೊಸ ತಲೆಮಾರು ಮತ್ತೆ ಕಾಶ್ಮೀರಕ್ಕೆ ಮರಳಲು ನಿರಾಸಕ್ತಿ ತೋರುತ್ತಿರುವುದೂ ವ್ಯಕ್ತವಾಗಿತ್ತು. ಕಾಶ್ಮೀರದಲ್ಲಿ ತಮ್ಮ ಮನೆ, ಭೂಮಿಯನ್ನು ಪಂಡಿತ ಕುಟುಂಬವು ಈಗಾಗಲೇ ಮಾರಿರುವುದಾಗಿಯೂ ಸುದ್ದಿಗಳು ಪ್ರಕಟವಾಗಿದ್ದುವು. ಇಂಥ ಸ್ಥಿತಿಯಲ್ಲಿ ಓಂಕಾರ್ ರಾಜದಾನ್‍ರ ಮೂರಂತಸ್ತಿನ ಮನೆ ಮತ್ತು ಅವರ ಕಾಶ್ಮೀರಿ ನಿಲುವು ಮುಖ್ಯವಾಗುತ್ತದೆ. ಪಂಡಿತರಿಗೆ ಪ್ರತ್ಯೇಕ ಕಾಲನಿ ಮಾಡುವ ಮೋದಿಯವರಿಗೆ ಮತ್ತು ಪಂಡಿತರಿಗೆ ಮರಳಲು ಕಾಶ್ಮೀರಿಗಳು ಅವಕಾಶ ಕೊಡುತ್ತಿಲ್ಲ ಎಂದು ಪ್ರಚಾರ ಮಾಡುತ್ತಿರುವವರಿಗೆ ಇದರಲ್ಲಿ ದೊಡ್ಡ ಪಾಠವಿದೆ



No comments:

Post a Comment