Friday, 26 August 2016

ಕಾಶ್ಮೀರಕ್ಕೆ ಬಲೂಚಿಸ್ತಾನ ಉತ್ತರವೇ?

       ಆಗಸ್ಟ್  15ರಂದು ಕೆಂಪು ಕೋಟೆಯಿಂದ ನೀಡಿದ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಬಲೂಚಿಸ್ತಾನವನ್ನು ಪ್ರಸ್ತಾಪ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನಕ್ಕೆ ಪ್ರಬಲ ಎದಿರೇಟನ್ನು ನೀಡಿದ್ದಾರೆ ಎಂದು ಅವರ ಬೆಂಬಲಿಗರು ಮತ್ತು ಮಾಧ್ಯಮದ ಒಂದು ವಿಭಾಗವು ಕೊಂಡಾಡುತ್ತಿರುವುದು ಪರ ವಿರುದ್ಧ ಅಭಿಪ್ರಾಯಕ್ಕೆ ಕಾರಣವಾಗಿದೆ. ಕಾಶ್ಮೀರ ಮತ್ತು ಬಲೂಚಿಸ್ತಾನ ಪರಸ್ಪರ ಹೋಲಿಕೆಗೆ ಅರ್ಹವೇ? ಎರಡೂ ಕಡೆಯ ವಾತಾವರಣ ಒಂದೇ ರೀತಿಯದೇ? ಇಂಥದ್ದೊಂದು ಹೋಲಿಕೆಯಿಂದ ಆಗಬಹುದಾದ ದೂರಗಾಮಿ ಪರಿಣಾಮಗಳೇನು? ಕಳೆದ 65-70 ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಗಳಿಸಿಕೊಂಡು ಬಂದ ವಿಶ್ವಾಸ ಮತ್ತು ವರ್ಚಸ್ಸಿನ ಮೇಲೆ ಮೋದಿಯವರ `ಬಲೂಚಿಸ್ತಾನ’ ಯಾವ ಬಗೆಯ ಪರಿಣಾಮ ಬೀರಬಹುದು?
     ನಾವು ಈ ಹೋಲಿಕೆಯ ಲಾಭ-ನಷ್ಟಗಳನ್ನು ಲೆಕ್ಕ ಹಾಕುವುದಕ್ಕೆ ನೆಹರೂ, ಇಂದಿರಾ, ವಾಜಪೇಯಿ ಮತ್ತು ಮನಮೋಹನ್ ಸಿಂಗ್‍ರ ಆಡಳಿತ ಕಾಲದಲ್ಲಿ ಕಾಶ್ಮೀರಿ ಸಮಸ್ಯೆಯನ್ನು ಪರಿಹರಿಸಲು ನೀಡಲಾದ ಒತ್ತು ಮತ್ತು ಪ್ರಯತ್ನದ ವಿವರಗಳನ್ನು ಇಲ್ಲಿ ಕಲೆ ಹಾಕಬೇಕಾಗಿಲ್ಲ ಅಥವಾ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹೋರಾಟದ ರಕ್ತ ಸಿಕ್ತ ಅಧ್ಯಾಯವನ್ನು ಎಣಿಸಿ ಎಣಿಸಿ ಹೇಳಬೇಕಾಗಿಯೂ ಇಲ್ಲ. ಕೇವಲ ಕಳೆದ ಎರಡು ತಿಂಗಳಲ್ಲಿ ವಿಶ್ವಸಂಸ್ಥೆಯ ವಿವಿಧ ಅಂಗಸಂಸ್ಥೆಗಳಿಗೆ ಪಾಕಿಸ್ತಾನವು ಬರೆದಿರುವ ಕಾಶ್ಮೀರ ಸಂಬಂಧಿ ಪತ್ರಗಳೇ ಇದಕ್ಕೆ ಧಾರಾಳ ಸಾಕು. ಪಾಕಿಸ್ತಾನದ ಈ ಪತ್ರಗಳಿಗೆ ಜಗತ್ತಿನ ಯಾವ ರಾಷ್ಟ್ರವೂ ತನ್ನ ಬೆಂಬಲವನ್ನು ವ್ಯಕ್ತಪಡಿಸಿಲ್ಲ. ನರೇಂದ್ರ ಮೋದಿಯವರು ಬಲೂಚಿಸ್ತಾನವನ್ನು ಪ್ರಸ್ತಾಪ ಮಾಡಿದ ಈ ಹೊತ್ತಿನ ವರೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ತೀರಾ ತೀರಾ ಒಂಟಿ. ಇದು ಸಾಧ್ಯವಾಗಿರುವುದು ನರೇಂದ್ರ ಮೋದಿಯವರಿಂದಲ್ಲ. ಈ ದೇಶವನ್ನು ಈ ಮೊದಲು ಆಳಿದ ಪ್ರಧಾನಿಗಳ ದೂರದೃಷ್ಟಿ ಮತ್ತು ಚತುರ ವಿದೇಶ ನೀತಿಯಿಂದ. ಕಾಶ್ಮೀರವನ್ನು ಭಾರತದ ಭಾಗವಾಗಿ ಜಗತ್ತಿಗೆ ಮನದಟ್ಟು ಮಾಡುವುದಕ್ಕೆ ಅವರೆಲ್ಲ ಅತ್ಯಂತ ಯಶಸ್ವಿಯಾಗಿದ್ದರು. ಅಪರೂಪಕ್ಕೆ ಪಾಕಿಸ್ತಾನವು ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ಪ್ರಸ್ತಾಪ ಎತ್ತುತ್ತಿದ್ದರೂ ಜಗತ್ತು ಅದಕ್ಕೆ ಕಿವಿಗೊಡದಷ್ಟು ಭಾರತದ ವಿದೇಶಾಂಗ ನೀತಿ ಪ್ರಭಾವಶಾಲಿಯಾಗಿತ್ತು. ಸದ್ಯ ನರೇಂದ್ರ ಮೋದಿಯವರು ಈ ಪರಂಪರೆಯಿಂದ ಹೊರಬಂದಿದ್ದಾರೆ. ಪಾಕಿಸ್ತಾನದ ಕಾಶ್ಮೀರ ಮಂತ್ರಕ್ಕೆ ಪ್ರತಿಮಂತ್ರವಾಗಿ ಅವರು ಬಲೂಚಿಸ್ತಾನವನ್ನು ಜಪಿಸಿದ್ದಾರೆ. ಬಹುಶಃ ಸ್ವಾತಂತ್ರ್ಯದ 70 ವರ್ಷಗಳಲ್ಲೇ ಭಾರತೀಯ ವಿದೇಶಾಂಗ ನೀತಿಯಲ್ಲಾದ ಬಹುದೊಡ್ಡ ಪಲ್ಲಟ ಇದು. ಇದನ್ನು ಅವರ ಬೆಂಬಲಿಗರು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದಾರೆ. ಪಾಕ್‍ನಿಂದ ದೇಶಭ್ರಷ್ಟರಾಗಿ ಬದುಕುತ್ತಿರುವ ಬಲೂಚಿಗಳು ಮೋದಿಯವರನ್ನು ಅಭಿನಂದಿಸಿರುವುದನ್ನು ವೈಭವೀಕರಿಸಿ ಪ್ರಸಾರ ಮಾಡುತ್ತಿದ್ದಾರೆ. ಇದಕ್ಕೆ ಹೊರತಾಗಿ ಬಲೂಚಿಸ್ತಾನಕ್ಕೂ ಕಾಶ್ಮೀರಕ್ಕೂ ನಡುವೆ ಹೋಲಿಕೆ ಸಿಂಧುವೇ ಎಂಬ ಮುಖ್ಯ ಪ್ರಶ್ನೆಯನ್ನು ಯಾರೂ ಮುನ್ನೆಲೆಗೆ ತರುತ್ತಿಲ್ಲ. ಇವತ್ತು ನರೇಂದ್ರ ಮೋದಿಯವರನ್ನು ಅಭಿನಂದಿಸಿ ಹೊರಬರುತ್ತಿರುವ ವೀಡಿಯೋ ಕ್ಲಿಪ್ಪಿಂಗ್‍ಗಳು ಮತ್ತು ಹೇಳಿಕೆಗಳೆಲ್ಲ ಪಾಕ್‍ನಲ್ಲಿ ನಿಷೇಧಕ್ಕೆ ಒಳಗಾಗಿರುವ ಬಲೂಚಿಸ್ತಾನದ ಬಲೂಚ್ ರಿಪಬ್ಲಿಕನ್ ಪಾರ್ಟಿಯ ನಾಯಕರದ್ದು ಅಥವಾ ಬೆಂಬಲಿಗರದ್ದು. ಭಯೋತ್ಪಾದನಾ ಚಟುವಟಿಕೆಯ ಆರೋಪದಲ್ಲಿ ಈ ಪಕ್ಷವನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಗಿದೆ. ಅದರ ನಾಯಕರು ದೇಶಭ್ರಷ್ಟ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ, ಅವರ ಮೋದಿ ಗುಣಗಾನಕ್ಕೆ ನಾವು ಹಿಗ್ಗುವುದು ಮತ್ತು ಮೋದಿಯವರ ವಿದೇಶ ನೀತಿಗೆ ಸಿಕ್ಕ ಮಾನ್ಯತೆ ಇದು ಎಂದು ಬಿಂಬಿಸಿಕೊಳ್ಳುವುದು ಎಷ್ಟು ಅಪ್ರಬುದ್ಧ ಮತ್ತು ಅಪಾಯಕಾರಿ ನಿಲುವು ಎಂದರೆ, ಇದು ಈಶಾನ್ಯ ಭಾರತದಲ್ಲಿ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಡುತ್ತಿರುವ ನಿಷೇಧಿತ ಸಂಘಟನೆಗಳ ನಾಯಕರ ಹೇಳಿಕೆಗಳನ್ನು ಪಾಕಿಸ್ತಾನ ಮೆಚ್ಚಿಕೊಂಡಂತೆ. ಮಣಿಪುರ, ಮೇಘಾಲಯ ಅಥವಾ ಒಟ್ಟು ಈಶಾನ್ಯ ಭಾರತದಲ್ಲಿ ಪ್ರತ್ಯೇಕತೆಗಾಗಿ ಸಶಸ್ತ್ರ ಹೋರಾಟಗಳು ನಡೆಯುತ್ತಿವೆ. ಒಂದಕ್ಕಿಂತ ಹೆಚ್ಚು ಸಂಘಟನೆಗಳು ನಿಷೇಧಕ್ಕೆ ಒಳಗಾಗಿವೆ. ಅದರ ನಾಯಕರು ದೇಶಭ್ರಷ್ಟರಾಗಿ ಬರ್ಮಾ, ಚೀನಾ, ಬಂಗ್ಲಾದೊಳಗೆ ಬದುಕುತ್ತಿದ್ದಾರೆ. ಬಲೂಚಿಸ್ತಾನದ ಪರಿಸ್ಥಿತಿ ಬಹುತೇಕ ಹೀಗೆಯೇ. ಆದ್ದರಿಂದ, ನರೇಂದ್ರ ಮೋದಿಯವರು ಬಲೂಚಿಸ್ತಾನವನ್ನು ಪ್ರಸ್ತಾಪಿಸುವ ಮೂಲಕ ಪಾಕ್‍ನ ಕಾಶ್ಮೀರವೆಂಬ ದುರ್ಬಲ ಅಸ್ತ್ರಕ್ಕೆ ಈಶಾನ್ಯ ರಾಜ್ಯಗಳನ್ನು ಕೊಟ್ಟುಬಿಟ್ಟು ಅವರ ಅಸ್ತ್ರವನ್ನು ಪ್ರಬಲಗೊಳಿಸುವ ಪ್ರಯತ್ನ ನಡೆಸಿದಂತಾಗಿದೆ. ನಾಳೆ ವಿಶ್ವಸಂಸ್ಥೆಯಲ್ಲಿ, ಕಾಶ್ಮೀರದ ಜೊತೆಗೇ ಈಶಾನ್ಯ ಭಾರತದಲ್ಲಾಗುವ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆಯೂ ಪಾಕ್ ಧ್ವನಿ ಎತ್ತಬಹುದು. ನಕ್ಸಲ್ ನಿಗ್ರಹದ ಹೆಸರಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನೂ ಅದು ಉಲ್ಲೇಖಿಸಬಹುದು. ಆಗ ಈಶಾನ್ಯ ರಾಜ್ಯಗಳ ಪ್ರತ್ಯೇಕತಾವಾದಿ ಸಂಘಟನೆಗಳು ಪಾಕಿಸ್ತಾನವನ್ನು ಅಭಿನಂದಿಸಿ ವೀಡಿಯೋ ಕ್ಲಿಪ್ಪಿಂಗ್‍ಗಳನ್ನು ಕಳುಹಿಸಬಹುದು. ಪಾಕ್‍ನ ಮಾಧ್ಯಮಗಳು ಅದನ್ನು ಪಾಕ್‍ನ ರಾಜತಾಂತ್ರಿಕತೆಗೆ ಸಿಕ್ಕ ಜಯ ಎಂದು ಬಿಂಬಿಸಬಹುದು. ಇದರಿಂದ ಭಾರತ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಒಂದು ಕಾಶ್ಮೀರವನ್ನು ಹಿಡಿದು ಒದ್ದಾಡುತ್ತಿರುವ ಪಾಕ್‍ನ ಕೈಗೆ ಪುಕ್ಕಟೆಯಾಗಿ ಈಶಾನ್ಯ ಭಾರತವನ್ನೇ ಕೊಡುವ ದೂರದೃಷ್ಟಿ ರಹಿತ ಉದ್ವೇಗದ ನಿಲುವು ಇದು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಪಡಿಸಲು ಮೋದಿಯವರ ಪಕ್ಷ ಚಿಂತಿಸುತ್ತಿರುವಾಗ ಪಾಕಿಸ್ತಾನವು 2009ರಲ್ಲೇ ಬಲೂಚಿಸ್ತಾನಕ್ಕೆ ಸ್ವಯಮಾಡಳಿತದ ವಿಶೇಷ ಅವಕಾಶವನ್ನು ಒದಗಿಸಿಕೊಟ್ಟಿದೆ. ಆದ್ದರಿಂದ, ಬಲೂಚ್‍ನಲ್ಲಿರುವಂತೆ ಕಾಶ್ಮೀರದಲ್ಲೂ ಸ್ವಯಮಾಡಳಿತಕ್ಕೆ ಅವಕಾಶ ಮಾಡಿಕೊಡಿ ಎಂದು ಕಾಶ್ಮೀರೀಗಳು ಮುಂದಿನ ದಿನಗಳಲ್ಲಿ ಒತ್ತಾಯಿಸಿದರೆ ಮೋದಿಯವರು ಏನು ಮಾಡಬಲ್ಲರು? 370ನೇ ವಿಧಿಯನ್ನೇ ಒಪ್ಪಿಕೊಳ್ಳಲು ಸಿದ್ಧವಿಲ್ಲದ ಪಕ್ಷವೊಂದು ಸ್ವಯಮಾಡಳಿತ ಬೇಡಿಕೆಯನ್ನು ಒಪ್ಪಿಕೊಳ್ಳಲು ಸಿದ್ಧವಾಗುತ್ತದೆಯೇ? ನರೇಂದ್ರ ಮೋದಿಯವರ ಪ್ರಸ್ತಾಪವನ್ನು ಪರಿಗಣಿಸಿ ಬಲೂಚಿಸ್ತಾನದಲ್ಲಾಗುತ್ತಿರುವ  ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ ವಿಶ್ವರಾಷ್ಟ್ರಗಳು ಅಧ್ಯಯನಕ್ಕೆ ಮುಂದಾದರೆ ಅದರ ಪರಿಣಾಮ ಭಾರತದ ಮೇಲೂ ಆಗದೇ? ಭಾರತವೂ ಅಂಥದ್ದೊಂದು ವಿದೇಶಿ ಹಸ್ತಕ್ಷೇಪಕ್ಕೆ ಬಾಗಿಲು ತೆರೆದು ಕೊಡಬೇಕಾದ ಅನಿವಾರ್ಯತೆಗೆ ಒಳಗಾಗದೇ? ಹಾಗಂತ,
        ಕಳೆದೆರಡು ವರ್ಷಗಳಲ್ಲಿ ನರೇಂದ್ರ ಮೋದಿಯವರು ಭಾರತ ಮತ್ತು ಪಾಕ್‍ಗಳ ನಡುವೆ ಸಂಬಂಧ ಸುಧಾರಣೆಗೆ ಪ್ರಯತ್ನಿಸಿರುವುದನ್ನು ನಾವು ತೃಣೀಕರಿಸಬೇಕಿಲ್ಲ. ತನ್ನ ಪ್ರತಿಜ್ಞಾ ವಿಧಿ ಕಾರ್ಯಕ್ರಮಕ್ಕೇ ಅವರು ಪಾಕ್ ಪ್ರಧಾನಿ ನವಾಝ ಶರೀಫ್‍ರನ್ನು ಆಹ್ವಾನಿಸಿದರು. ಮಾತುಕತೆಗೂ ಆಹ್ವಾನ ನೀಡಿದರು. ಪಠಾಣ್‍ಕೋಟ್ ದಾಳಿಯ ತರುವಾಯ ಪಾಕ್‍ನ ಭಯೋತ್ಪಾದನಾ ತನಿಖಾ ತಂಡಕ್ಕೆ ಪಠಾಣ್‍ಕೋಟ್‍ಗೆ ಬಂದು ತನಿಖಿಸಲು ಅವಕಾಶ ಮಾಡಿಕೊಟ್ಟರು. ಶರೀಫ್‍ರ ಹುಟ್ಟು ಹಬ್ಬದಲ್ಲಿ ದಿಢೀರ್ ಭಾಗಿಯಾದರು.. ಆದರೂ ಪಾಕ್‍ನಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂಬ ಆಕ್ರೋಶ ಅವರಲ್ಲಿದ್ದರೆ ಅದನ್ನು ಅಸಾಧು ಎನ್ನುವಂತಿಲ್ಲ. ಆದರೆ, ವಿದೇಶಾಂಗ ನೀತಿಯೆಂಬುದು ಎರಡೂವರೆ ಗಂಟೆಗಳಲ್ಲಿ ಎಲ್ಲವೂ ಮುಗಿದು ಹೋಗುವ ಸಿನಿಮಾದಂತೆ ಅಲ್ಲವಲ್ಲ. ಅದು  ಆಕ್ರೋಶಕ್ಕಿಂತ ಹೊರತಾದುದು.  ಅದು ಬುದ್ಧಿವಂತಿಕೆ, ಜಾಣತನ, ಸಂಯಮ, ಚತುರತೆಯನ್ನು ಬಯಸುತ್ತದೆ. ದೂರಗಾಮಿ ಗುರಿಯನ್ನು ಇಟ್ಟುಕೊಂಡು ಅತ್ಯಂತ ನಾಜೂಕಿನಿಂದ ನಡೆಯಬೇಕಾದ ಕ್ಷೇತ್ರ ಇದು.  ಭವಿಷ್ಯದ ಅಸಂಖ್ಯ ಗಂಟೆಗಳನ್ನು ಗಮನದಲ್ಲಿಟ್ಟು ಚಿತ್ರಕತೆ ಹೆಣೆಯಬೇಕಾದ ಕ್ಷೇತ್ರ. ಇಲ್ಲಿನ ಪ್ರತಿ ಡಯಲಾಗಿಗೂ ಎಷ್ಟು ವರ್ಷಗಳು ಕಳೆದರೂ ಪ್ರಸ್ತುತ ಅನಿಸಿಕೊಳ್ಳಬೇಕಾದ ಚರಿಷ್ಮಾ ಇರಬೇಕಾಗುತ್ತದೆ. ಹೀರೋನ (ನಾಯಕ) ಮಾತು, ಕೃತಿ, ವರ್ತನೆಗಳೂ ಅಷ್ಟೇ ಪ್ರೌಢವಾಗಿರಬೇಕಾಗುತ್ತದೆ. ವಿಷಾದ ಏನೆಂದರೆ, ನರೇಂದ್ರ ಮೋದಿಯವರಲ್ಲಿ ಆ ಹೀರೋಯಿಸಂ ಕಾಣಿಸುತ್ತಿಲ್ಲ. ಅವರಲ್ಲೀಗ ಎರಡೂವರೆ ಗಂಟೆಗಳಲ್ಲಿ ಮುಗಿಯುವ ಸಿನಿಮಾದ ಹೀರೋತನವಷ್ಟೇ ಇದೆ.

Wednesday, 24 August 2016

ನಾಗರಿಕತೆ ಮತ್ತು ಅನಾಗರಿಕತೆಯ ಮುಖಾಮುಖಿ

       ಅನಾಗರಿಕತೆ ಎಂಬ ಪದದಿಂದ ‘ಅ’ವನ್ನು ಕಿತ್ತು ಹಾಕಿದರೆ ಉಳಿಯುವ ಪದದಲ್ಲಿ ಒಂದು ಸೌಖ್ಯ ಭಾವವಿದೆ. ಕಿತ್ತು ಹಾಕುವುದು ‘ಅ’ ಎಂಬ ಏಕೈಕ ಶಬ್ದವನ್ನಾದರೂ ಅದರಿಂದಾಗಿ ಒಂದು ಪದಗುಚ್ಛದಲ್ಲಿ ಆಗುವ ವ್ಯತ್ಯಾಸ ಅಪಾರವಾದುದು. ಜನರ ಗುಂಪನ್ನು ನಾವು ನಾಗರಿಕ ಮತ್ತು ಅನಾಗರಿಕ ಎಂದು ವಿಭಜಿಸುವಾಗ ಅಲ್ಲಿ ಮನುಷ್ಯರ ಎರಡು ತಂಡಗಳಷ್ಟೇ ತಯಾರಾಗುವುದಲ್ಲ. ಎರಡು ಮನಸ್ಥಿತಿಯನ್ನು ಪ್ರತಿನಿಧಿಸುವ ಎರಡು ತಂಡಗಳು ತಯಾರಾಗುತ್ತವೆ. ನಾಗರಿಕತೆ ಎಂಬುದು ಮೌಲ್ಯಗಳನ್ನು ಪ್ರತಿನಿಧಿಸುವ ಪದ. ಶಾಂತಿ, ಮಾನವೀಯತೆ, ಕರುಣೆ, ನ್ಯಾಯ, ಸತ್ಯ, ಪ್ರಾಮಾಣಿಕತೆ, ಸಹಿಷ್ಣು.. ಮುಂತಾದ ಗುಣಗಳು ತುಂಬಿ ತುಳುಕುವ ಒಂದು ಸಾಮಾಜಿಕ ಜೀವನ ವಿಧಾನದ ಗುರುತು ಇದು. ಅನಾಗರಿಕತೆ ಈ ಎಲ್ಲವುಗಳ ವಿರೋಧಿ. ಅದು ಅಶಾಂತವಾಗಿರುತ್ತದೆ, ಅಮಾನವೀಯವಾಗಿರುತ್ತದೆ, ಅಸಹಿಷ್ಣುವಾಗಿರುತ್ತದೆ. ಇನ್ನೊಂದು ಆಗಸ್ಟ್ 15 ಈ ದೇಶಕ್ಕೆ ವಿದಾಯ ಕೋರುತ್ತಿರುವ ಈ ಹೊತ್ತಿನಲ್ಲಿ, ಅನಾಗರಿಕತೆ ಮತ್ತು ನಾಗರಿಕತೆಯನ್ನು ಮುಖಾಮುಖಿಯಾಗಿಸಿ ನಾವು ವಿಶ್ಲೇಷಿಸಬೇಕಾಗಿದೆ. ಅಷ್ಟಕ್ಕೂ, ಒಂದು ದೇಶ ಸಂಪೂರ್ಣ ನಾಗರಿಕ ಗುಣಗಳಿಂದ ಮಾತ್ರವೇ ತುಂಬಿ ತುಳುಕುತ್ತಿರುವುದಕ್ಕೆ ಸಾಧ್ಯವೇ ಇಲ್ಲ. ಎಲ್ಲೆಲ್ಲೂ ಶಾಂತಿ, ಎಲ್ಲೆಲ್ಲೂ ಮಾನವೀಯತೆ ಎಂಬಂತಹ ವಾತಾವರಣ ಮಾತ್ರವೇ ನೆಲೆಸಿರುವ ಭೂಭಾಗ ಜಗತ್ತಿನಲ್ಲಿರುವುದು ಅಸಾಧ್ಯ. ಮನುಷ್ಯರಿರುವಲ್ಲೆಲ್ಲಾ ಶಾಂತಿಯೂ ಇರುತ್ತದೆ. ಅಶಾಂತಿಯೂ ಇರುತ್ತದೆ. ಮಾನವೀಯತೆಯೂ ಇರುತ್ತದೆ. ಅಮಾನವೀಯತೆಯೂ ಇರುತ್ತದೆ. ಆದರೆ ಯಾವ ಹಂತದಲ್ಲೂ ಅಮಾನವೀಯತೆ ವಿಜ್ರಂಭಿಸುವುದನ್ನು ಮತ್ತು ಅದು ಪ್ರಾಬಲ್ಯ ಸಾಧಿಸುವುದನ್ನು ನಾಗರಿಕ ಸಮಾಜ ಇಷ್ಟಪಡುವುದಿಲ್ಲ. 28ನೇ ವರ್ಷದಲ್ಲಿ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳುವ ಮೊದಲು ಇರೋಮ್ ಶರ್ಮಿಳಾರ ಮುಂದೆ ಎರಡು ಆಯ್ಕೆಗಳಿದ್ದುವು. ಒಂದು, ಭೂಗತವಾಗಿದ್ದುಕೊಂಡು, ನಾಗರಿಕ ಸಮಾಜ ಒಪ್ಪಿಕೊಂಡಿರುವ ಎಲ್ಲ ಹೋರಾಟ ಮಾದರಿಗಳನ್ನೂ ತಿರಸ್ಕರಿಸಿ ಗೆರಿಲ್ಲಾ ಮಾರ್ಗವನ್ನು ಆಯ್ದುಕೊಳ್ಳುವುದು. ಇನ್ನೊಂದು, ಅನಾಗರಿಕ ಅನ್ನಬಹುದಾದ ಎಲ್ಲ ಹೋರಾಟ ದಾರಿಗಳಿಂದಲೂ ದೂರ ಇದ್ದುಕೊಂಡು ನ್ಯಾಯಯುತ ಹೋರಾಟ ಮಾದರಿಯನ್ನು ಆಯ್ಕೆ ಮಾಡುವುದು. 16 ವರ್ಷಗಳ ಕಾಲ ಸತತ ಉಪವಾಸ ಸತ್ಯಾಗ್ರಹದಿಂದ ಇದೀಗ ಇರೋಮ್ ಹೊರಬಂದರೂ ಆಕೆ ಇವತ್ತು ಸರ್ವರ ಗೌರವಕ್ಕೆ ಪಾತ್ರವಾಗಿರುವುದೇ ಆಕೆಯ ವಿಧಾನ ಎಷ್ಟು ಮಾನವೀಯವಾದುದು ಎಂಬುದಕ್ಕೆ ಸ್ಪಷ್ಟ ಪುರಾವೆ. ಇದಕ್ಕೆ ತೀರಾ ವಿರುದ್ಧವಾದ ಹೋರಾಟ ಮಾದರಿಯನ್ನು ನಾವು ಗುಜರಾತ್‍ನ ಉನಾದಲ್ಲಿ ಕಂಡಿದ್ದೇವೆ. ದಲಿತರನ್ನು ಬೆತ್ತಲೆಗೊಳಿಸಿ ಥಳಿಸಿದವರು ಅವನ್ನು ಒಂದು ಹೋರಾಟ ಮಾದರಿಯಾಗಿ ಬಿಂಬಿಸುತ್ತಾರೆ. ಕೇವಲ ಉನಾದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶದ ದಾದ್ರಿಯಲ್ಲಿ, ಕರ್ನಾಟಕದ ಕರಾವಳಿ ಭಾಗಗಳಲ್ಲಿ, ಮಧ್ಯ ಪ್ರದೇಶದಲ್ಲಿ, ದೆಹಲಿಯಲ್ಲಿ.. ಸಹಿತ ಎಲ್ಲೆಡೆಯೂ ಅವರು ಇದೇ ಮಾದರಿಯನ್ನು ತಮ್ಮ ಐಡೆಂಟಿಟಿಯಾಗಿ ಬಿಂಬಿಸುತ್ತಲೂ ಇದ್ದಾರೆ. ಆದ್ದರಿಂದಲೇ, ಇವೆರಡೂ ಮುಖಾಮುಖಿ ವಿಶ್ಲೇಷಣೆಗೆ ಒಳಪಡಬೇಕೆಂದು ಬಯಸುವುದು. ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಪುತ್ರ ವಿಯೋಗವಾದುದನ್ನು ಸಂಭ್ರಮಿಸಿದ ಮಂದಿ ಕೂಡ ಇದೇ ‘ಥಳಿಸುವ’ ಗುಂಪಿನ ಬೆಂಬಲಿಗರಾಗಿದ್ದಾರೆ. ಸಾಹಿತಿಗಳಾದ ಅನಂತಮೂರ್ತಿ ಮತ್ತು ಕಲ್ಬುರ್ಗಿಯವರ ಸಾವಿಗೂ ಸಂಭ್ರಮಿಸಿದ್ದು ಇದೇ ಮನಸ್ಥಿತಿ. ಅಷ್ಟಕ್ಕೂ, ಸಾವನ್ನು ಆನಂದಿಸುವಂತಹ ಈ ಮನಸ್ಥಿತಿಯ ಹುಟ್ಟು ಎಲ್ಲಿ? ನಾಗರಿಕ ಸಮಾಜದ ಪಾಲಿಗೆ ಆ ಮನಸ್ಥಿತಿ ಎಲ್ಲಿಯವರೆಗೆ ಸಹ್ಯ? ವಿಷಾದ ಏನೆಂದರೆ, ಇಂಥ ಮನಸ್ಥಿತಿಯ ಹುಟ್ಟು ಅಲ್ಲ, ಆ ಮನಸ್ಥಿತಿಯನ್ನು ಪೋಷಿಸಿ ಬೆಳೆಸುವವರು ಈ ನಾಗರಿಕ ಸಮಾಜದಲ್ಲಿ ನಾಗರಿಕತೆಯ ಪೋಷಾಕಿನಲ್ಲೇ ಬದುಕುತ್ತಿದ್ದಾರೆ ಎಂಬುದು. 120 ಕೋಟಿ ಜನಸಂಖ್ಯೆಯಲ್ಲಿ ಸರ್ವರೂ ಶಾಂತಿ ಮತ್ತು ಮಾನವೀಯತೆಯ ಕಟ್ಟಾಳುವಾಗಿರುತ್ತಾರೆ ಎಂದು ನಿರೀಕ್ಷಿಸುವುದು ಬಾಲಿಶ. ಆದರೆ ಶಾಂತಿ ಮತ್ತು ಮಾನವೀಯ ಗುಣಗಳನ್ನು ಪ್ರೀತಿಸುವ ಸಮಾಜದ ಲಕ್ಷಣ ಏನೆಂದರೆ, ಅಮಾನವೀಯವಾದುದನ್ನು ಲಾಭ-ನಷ್ಟಗಳ ತಕ್ಕಡಿಯಲ್ಲಿಟ್ಟು ನೋಡದೇ ವಿರೋಧಿಸುವುದು. ಈ ಪ್ರಕ್ರಿಯೆ ಜೀವಂತವಾಗಿರುವಷ್ಟು ದಿನ ಸಮಾಜದಲ್ಲಿ ಅನಾಗರಿಕರು ಪ್ರಾಬಲ್ಯ ಪಡೆಯುವುದಕ್ಕೆ ಸಾಧ್ಯವಿಲ್ಲ. ಸಿದ್ಧರಾಮಯ್ಯನವರ ಮಗನ ಸಾವನ್ನು ಆನಂದಿಸಿದವರು ತಮ್ಮ ಕೃತ್ಯಕ್ಕೆ ಸ್ವತಃ ನಾಚಿಕೊಳ್ಳುವಂತಹ ವಾತಾವರಣ ಯಾಕೆ ನಿರ್ಮಾಣವಾಯಿತೆಂದರೆ, ನಾಗರಿಕ ಸಮಾಜದಲ್ಲಿ ಆ ಮನಸ್ಥಿತಿಗೆ ತೀವ್ರ ಖಂಡನೆ ವ್ಯಕ್ತವಾದುದರಿಂದ. ಪಕ್ಷ-ಬೇಧ ಮರೆತು ರಾಜಕೀಯ ನಾಯಕರು ಸಿದ್ಧರಾಮಯ್ಯನವರ ನೋವಿನಲ್ಲಿ ಭಾಗಿಯಾದುದರಿಂದ. ಇದು ಅನಾಗರಿಕ ಮನಸ್ಥಿತಿಗೆ ಸಡ್ಡು ಹೊಡೆವ ಪ್ರತಿಕ್ರಿಯೆ. ಸಿದ್ಧರಾಮಯ್ಯರನ್ನು ಆಲಿಂಗಿಸಿಕೊಂಡು ಡಿ.ವಿ. ಸದಾನಂದ ಗೌಡ ಹರಿಸಿದ ಕಣ್ಣೀರು  ಅತ್ಯಂತ ಪ್ರಬಲ ಸಂದೇಶವನ್ನು ರವಾನಿಸಿತು. ಆನಂದಿಸಿದವರು ಸ್ವತಃ ಆ ಸಂದೇಶಕ್ಕೆ ತತ್ತರಿಸಿ ಹೋದರು. ಇಂಥ ಪ್ರಕ್ರಿಯೆ ಪ್ರಾಬಲ್ಯಕ್ಕೆ ಬರುತ್ತಿರುವಷ್ಟು ದಿನ ಯಾವ ಅನಾಗರಿಕತೆಯೂ ಸಾಮಾಜಿಕ ಮನ್ನಣೆ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲ. ಉನಾ ಆಗಲಿ ದಾದ್ರಿ ಆಗಲಿ ಎಲ್ಲವೂ ಇವತ್ತು ಸಾಧ್ಯ ಆಗಿರುವುದರ ಹಿಂದೆ ನಮ್ಮನ್ನಾಳುವವರ ಮೌನಕ್ಕೆ ಪಾತ್ರ ಇದೆ. ಅವರ ಕುಮ್ಮಕ್ಕಿಗೆ ಪಾಲು ಇದೆ.
       ನಾಗರಿಕತೆ ಮತ್ತು ಅನಾಗರಿಕತೆಯ ನಡುವಿನ ವ್ಯತ್ಯಾಸದ ಗೆರೆಯನ್ನು ತೀರಾ ತೀರಾ ತೆಳುವಾಗಿಸುವ ಪೀಳಿಗೆಯೊಂದರ ಬಗ್ಗೆ ಆಗಸ್ಟ್ 15ರ ನಂತರ ಭಾರತ ಗಂಭೀರವಾಗಿ ಆಲೋಚಿಸಬೇಕು. ಒಂದು ದೇಶದ ಐಡೆಂಟಿಟಿಯು ಆ ದೇಶದಲ್ಲಿ ಅಸ್ತ್ತಿತ್ವದಲ್ಲಿರುವ ಶಾಂತಿ ಮತ್ತು ಮಾನವೀಯತೆಯನ್ನು ಆಧಾರವಾಗಿಸಿಕೊಂಡಿರುತ್ತದೆ. ದೇಶ ಎಷ್ಟೇ ದೊಡ್ಡದಿರಲಿ ಮತ್ತು ಜನಸಂಖ್ಯೆ ಎಷ್ಟೇ ಕೋಟಿಗಳ ಲೆಕ್ಕದಲ್ಲಿರಲಿ, ಅವೆಲ್ಲವನ್ನೂ ನಕಾರಾತ್ಮಕಗೊಳಿಸುವುದಕ್ಕೆ ಒಂದು ಉನಾ, ಒಂದು ದಾದ್ರಿ ಧಾರಾಳ ಸಾಕು. ಈ ದೇಶದಲ್ಲಂತೂ ಉನಾದಂತಹ ಘಟನೆ ಮಾಮೂಲಿ ಪಟ್ಟಿಯನ್ನು ಸೇರುವಷ್ಟು ಪರಿಚಿತವೆನಿಸಿಕೊಳ್ಳುತ್ತಿದೆ. ದಲಿತರು, ಮುಸ್ಲಿಮರು ಮತ್ತು ದುರ್ಬಲ ವರ್ಗದವರು ಪದೇ ಪದೇ ಆಹಾರ, ಮೈಬಣ್ಣ, ಜಾತಿ, ಆಚಾರಗಳ ನೆಪದಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಲೇ ಇದ್ದಾರೆ. ಸಮಾಜದಿಂದ ಶಾಂತಿ ಮರೆಯಾಗುತ್ತಿದೆ. ನಗರಗಳು, ಗ್ರಾಮಗಳು, ಹಳ್ಳಿಗಳೆಲ್ಲ ಅಮಾನವೀಯ ಕೃತ್ಯಗಳಿಗೆ ಸಾಕ್ಷಿಯಾಗುತ್ತಿವೆ. ಸೆಗಣಿ ತಿನ್ನಿಸುವವರು, ಥಳಿಸುವವರು ಮತ್ತು ಜಾತಿಯ ಕಾರಣಕ್ಕಾಗಿಯೇ ದೇವಾಲಯಗಳಿಂದ ಹೊರ ದಬ್ಬುವವರು ಹೆಚ್ಚುತ್ತಿದ್ದಾರೆ. ಒಂದು ದೇಶದ ಪಾಲಿಗೆ ಇದು ಅತ್ಯಂತ ಹೀನ ಕೃತ್ಯ. ಇದು ಬದಲಾಗಬೇಕು. ಈ ವಾತಾವರಣಕ್ಕೆ ತಡೆ ಬೀಳದೇ ಹೋದರೆ ಇದನ್ನೇ ನೋಡಿಕೊಂಡು ಬೆಳೆಯುವ ಪೀಳಿಗೆಯೊಂದು ಮುಂದೆ ಇದನ್ನೇ ನಾಗರಿಕತೆಯಾಗಿ ಪರಿಭಾವಿಸುವುದಕ್ಕೆ ಅವಕಾಶವಾಗುತ್ತದೆ. ಶಾಂತ ಮತ್ತು ಮಾನವೀಯ ಸಮಾಜದ ನಿರ್ಮಾಣ ಯಾವುದಾದರೊಂದು ನಿರ್ದಿಷ್ಟ ಧರ್ಮ-ಜಾತಿ-ಪಂಗಡದ ಬಯಕೆಯಲ್ಲ, ಅದು ಎಲ್ಲರ ಅಗತ್ಯ.
ಆದ್ದರಿಂದ ಅಂಥದ್ದೊಂದು ಸುಖೀ ಭಾವದ ಸಮಾಜದ ಕಟ್ಟುವಲ್ಲಿ ವ್ಯವಸ್ಥೆ ಮುತುವರ್ಜಿ ತೋರಬೇಕು. ಅನಾಗರಿಕರನ್ನು ಮತ್ತು ಅಮಾನವೀಯತೆಯ ಪ್ರತಿಪಾದಕರನ್ನು ದುರ್ಬಲಗೊಳಿಸಬೇಕು. ಕಾನೂನು ಪ್ರಾಬಲ್ಯಕ್ಕೆ ಬರಲಿ. ಶಾಂತಿ-ಮಾನವೀಯತೆ ನೆಲೆಗೊಳ್ಳಲಿ.

Friday, 12 August 2016

ಅಂತಃಕರಣ ಸತ್ತವರ ನಡುವೆ ಆಗಸ್ಟ್ 15..

       ಸ್ವಾತಂತ್ರ್ಯದ ಇತಿ-ಮಿತಿಗಳು ಗಂಭೀರ ಚರ್ಚೆಗೆ ಒಳಗಾಗಿರುವ ಈ ಹೊತ್ತಿನಲ್ಲಿ ಆಗಸ್ಟ್ 15 ಆಗಮಿಸುತ್ತಿದೆ. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೊಡ್ಡದೊಂದು ಪಾತ್ರ ವಹಿಸಿದ್ದು ಗಾಂಧೀಜಿಯವರ ಉಪವಾಸ ಸತ್ಯಾಗ್ರಹ. ಅದರ ಯಶಸ್ಸಿಗೆ 68 ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ, ಇರೋಮ್ ಶರ್ಮಿಳ ಎಂಬ ಹೆಣ್ಣು ಮಗಳು ಅದೇ ಸತ್ಯಾಗ್ರಹದ ಜರ್ಝರಿತ ಮುಖವಾಗಿ ನಮ್ಮೆಲ್ಲರ ಎದುರಿದ್ದಾರೆ. ಸ್ವಾತಂತ್ರ್ಯ ಪೂರ್ವದ ಗಾಂಧೀಜಿಯವರ ಉಪವಾಸ ಮತ್ತು ಸ್ವಾತಂತ್ರ್ಯಾ  ನಂತರದ ಇರೋಮ್ ಶರ್ಮಿಳಾರ ಉಪವಾಸ ಇವೆರಡನ್ನು ಪರಸ್ಪರ ಮುಖಾಮುಖಿಗೊಳಿಸಿದರೆ ನಮಗೆ ಸಿಗಬಹುದಾದ ಫಲಿತಾಂಶ ಏನು? ಈ ಫಲಿತಾಂಶದಲ್ಲಿ ಹೆಚ್ಚಿನ ಅಂಕ ಯಾರಿಗೆ ಲಭಿಸೀತು? 16 ವರ್ಷಗಳ ಕಾಲ ಸತತವಾಗಿ ಉಪವಾಸ ಸತ್ಯಾಗ್ರಹ ನಡೆಸಿ ಕೊನೆಗೆ ಭ್ರಮನಿರಸನಗೊಂಡು ಈ ಹೋರಾಟವನ್ನೇ ಕೈಬಿಡಲು ಇರೋಮ್ ನಿರ್ಧರಿಸುತ್ತಾರಲ್ಲ, ಇದು ಕೊಡುವ ಸಂದೇಶವೇನು? ಇರೋಮ್‍ಗೆ ಹೋಲಿಸಿದರೆ ಗಾಂಧೀಜಿಯವರ ಉಪವಾಸ ತೀರಾ ಹೃಸ್ವವಾಗಿತ್ತು. ವರ್ಷ ಬಿಡಿ, ತಿಂಗಳುಗಟ್ಟಲೆ ಅವರು ಉಪವಾಸ ಕೂತ ಉದಾಹರಣೆಗಳೇ ಕಡಿಮೆ. ಬ್ರಿಟಿಷ್ ಸರಕಾರ ಅಷ್ಟು ಶೀಘ್ರವಾಗಿ ಅವರ ಆಗ್ರಹವನ್ನು ಆಲಿಸುತ್ತಿತ್ತು. ಅದಕ್ಕೆ ವಿಶೇಷ ಮಹತ್ವವನ್ನು ಕಲ್ಪಿಸಿತ್ತು. ಸತ್ಯಾಗ್ರಹವನ್ನು ಅದು ಇತರೆಲ್ಲ ಹೋರಾಟ ಮಾದರಿಗಿಳಿಗಿಂತ ಅತ್ಯಂತ ಗಂಭೀರ ಮತ್ತು ಮಹತ್ವಪೂರ್ಣ ಹೋರಾಟವಾಗಿ ಪರಿಗಣಿಸಿರುವುದಕ್ಕೆ ಈ ತುರ್ತು ಸ್ಪಂದನೆಗಳೇ ಸಾಕ್ಷಿ. ನಿಜವಾಗಿ, ಭಾರತದ ಇಂದಿನ ಆಡಳಿತಗಾರರಿಗೆ ಹೋಲಿಸಿದರೆ, ಭಾರತ ಮತ್ತು ಭಾರತೀಯರೊಂದಿಗೆ ಬ್ರಿಟಿಷರ ಹೊಣೆಗಾರಿಕೆ ತೀರಾ ತೀರಾ ಕಡಿಮೆಯೆಂದೇ ಹೇಳಬಹುದು. ಒಂದನೆಯದಾಗಿ ಅವರು ಈ ದೇಶದವರೇ ಅಲ್ಲ. ಈ ದೇಶವನ್ನು ಅಭಿವೃದ್ಧಿ ಪಡಿಸುವುದರಿಂದ ಮತ್ತು ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದರಿಂದ ಅವರಿಗೆ ಆಗಬೇಕಾದ್ದೇನೂ ಇಲ್ಲ. ಇಲ್ಲಿ ಇರುವಷ್ಟು ದಿನ ತಮ್ಮ ಹುಟ್ಟಿದೂರನ್ನು ಮತ್ತು ಅಲ್ಲಿನ ಖಜಾನೆಯನ್ನು ಬೆಚ್ಚಗಿಡುವುದಷ್ಟೇ ಅವರ ಮುಖ್ಯ ಗುರಿ. ಇಂಥವರು ಓರ್ವ ತುಂಡುಡುಗೆ ಫಕೀರನ ಸತ್ಯಾಗ್ರಹಕ್ಕೆ ತುರ್ತು ಸ್ಪಂದನೆ ನೀಡುತ್ತಿದ್ದುದು ಯಾಕಾಗಿ? ಬಹುಶಃ ಅವರು ಆ ಹೋರಾಟದ ಭಾವತೀವ್ರತೆಗೆ ಮಾರು ಹೋಗಿದ್ದರು. ಅದನ್ನು ಅವರು ಓರ್ವ ವ್ಯಕ್ತಿಯ ಬರೇ ದೇಹ ದಂಡನೆಯಾಗಿ ನೋಡದೇ ಉದ್ದೇಶ ಸಾಧನೆಗಾಗಿ ಸ್ವತಃ ಶಿಕ್ಷೆಯನ್ನು ಕೊಟ್ಟುಕೊಳ್ಳುವ ಸಂತತನವನ್ನು ಅದರಲ್ಲಿ ಅವರು ಕಂಡುಕೊಂಡಿದ್ದರು. ಜಗತ್ತಿನಲ್ಲಿ ಹೋರಾಟದ ನೂರಾರು ಮಾದರಿಗಳಿವೆ. ಆದರೆ ಆ ಎಲ್ಲ ಮಾದರಿಗಳಿಗಿಂತ ಸತ್ಯಾಗ್ರಹ ತೀರಾ ಭಿನ್ನ. ಅದರಲ್ಲಿ ಮಗುವಿನ ಮುಗ್ಧತೆಯಿದೆ. ತನಗೆ ಟಾಯ್ಸ್ ಕೊಡದಿದ್ದರೆ, ಚಾಕಲೇಟು, ಆಟಿಕೆ ಕಾರು, ರಿಕ್ಷಾಗಳನ್ನು ನೀಡದಿದ್ದರೆ ನಾನು ಊಟ ಮಾಡಲಾರೆ ಎಂದು ರಚ್ಚೆ ಹಿಡಿಯುವ ಮಗುತನವಿದೆ. ಹಾಗಂತ, ಊಟ ಮಾಡದಿದ್ದರೆ ಹಸಿವಾಗುವುದು ತಾಯಿಗಲ್ಲ ಎಂಬುದು ತಾಯಿಗೂ ಗೊತ್ತು, ಮಗುವಿಗೂ ಗೊತ್ತು. ಆದರೆ ಆ ಬೆದರಿಕೆ ಅತ್ಯಂತ ಹೆಚ್ಚು ಪ್ರಭಾವ ಬೀಳುವುದು ತಾಯಿಯ ಮೇಲೆಯೇ. ತಾಯಿಯೊಳಗೊಂದು ತಳಮಳ, ಮಾನವೀಯ ಅಂತಃಕರಣ ಸ್ಪುರಿಸುತ್ತದೆ. ಗಾಂಧೀಜಿಯವರು ಹಸಿವಿನಿಂದಿರುವ ಬೆದರಿಕೆಯನ್ನು ಹಾಕಿದಾಗ, ಅದು ಮಗುತನವನ್ನು ದಾಟಿದ ಅತ್ಯಂತ ಪ್ರಬುದ್ಧ ವ್ಯಕ್ತಿಯ ಜಾಣ ಬೆದರಿಕೆ ಎಂಬುದು ಬ್ರಿಟಿಷ್ ಸರಕಾರಕ್ಕೆ ಗೊತ್ತಿತ್ತು ನಿಜ. ಅದರ ಜೊತೆಗೇ, ಆ ಬೆದರಿಕೆಯು ಗೌರವಕ್ಕೆ ಅರ್ಹತೆ ಪಡೆಯಲೇ ಬೇಕಾದ ವಿಶಿಷ್ಟ ಮಾದರಿ ಎಂದೂ ಅವರು ಭಾವಿಸಿದ್ದರು. ನ್ಯಾಯವನ್ನು ಆಗ್ರಹಿಸುತ್ತಾ ಓರ್ವನು/ಳು ಸ್ವತಃ ತನ್ನನ್ನೇ ದಂಡಿಸಿಕೊಳ್ಳುವುದು ತೀರಾ ಸುಲಭ ಅಲ್ಲ. ಅದಕ್ಕೆ ಪ್ರಬಲ ಇಚ್ಛಾಶಕ್ತಿಯ ಅಗತ್ಯವಿದೆ. ಸತ್ಯಾಗ್ರಹ ಎಂಬ ಹೋರಾಟ ಮಾದರಿಯಲ್ಲಿ ಬ್ರಿಟಿಷರು ಕಂಡುಕೊಂಡಿದ್ದು ಈ ಇಚ್ಛಾಶಕ್ತಿಯನ್ನು. ಇತರರನ್ನು ಹಿಂಸಿಸದ ಮತ್ತು ತೊಂದರೆ ಕೊಡದ ಹೋರಾಟವನ್ನು ವ್ಯಕ್ತಿಗತಗೊಳಿಸದೇ ಅವರು ಅದನ್ನು ಹೃದಯದಿಂದ ವೀಕ್ಷಿಸಿದರು. ದುರಂತ ಏನೆಂದರೆ, ಭಾರತೀಯರಿಗೆ ಭಾರತೀಯರದೇ ಸರಕಾರ ಲಭ್ಯವಾದಾಗ ಮೊತ್ತಮೊದಲು ಕಳೆದುಹೋದದ್ದೇ ಈ ಹೃದಯ. ಇರೋಮ್ ಶರ್ಮಿಳ ಅದರ ಒಂದು ಉದಾಹರಣೆ ಅಷ್ಟೇ. ಅಂತಃಕರಣ ಇಲ್ಲದ ಆಡಳಿತಗಾರರು ಮತ್ತು ನಾಗರಿಕರ ದೊಡ್ಡ ದಂಡನ್ನೇ ಸ್ವಾತಂತ್ರ್ಯಾ  ನಂತರದ ಭಾರತವು ಈ ಜಗತ್ತಿಗೆ ಅರ್ಪಿಸಿದೆ. ಅದರ ಅತ್ಯಂತ ಆಧುನಿಕ ಮುಖವೇ ಗೋರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ಹೃದಯಹೀನ ದೌರ್ಜನ್ಯ. ಆಗಸ್ಟ್ 15ನ್ನು ಸ್ವಾಗತಿಸುವುದಕ್ಕೆ ದೇಶ ಸಜ್ಜಾಗುತ್ತಿರುವ ಈ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಈ ಹೃದಯಹೀನರ ಅಪಾಯವನ್ನು ಮೊನ್ನೆ ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ.
       ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಭಾರತೀಯರನ್ನು ನಡೆಸಿಕೊಂಡ ರೀತಿ-ನೀತಿಗಳಿಗೆ ಹೋಲಿಸಿದರೆ, ಸ್ವಾತಂತ್ರ್ಯಾ ನಂತರದ ಭಾರತವು ಅವರಿಗಿಂತ ಎಷ್ಟೋ ಪಟ್ಟು ಅಧಿಕ ಬೇಜವಾಬ್ದಾರಿ ನಾಗರಿಕರನ್ನು ಸೃಷ್ಟಿಸಿದೆ ಎಂಬುದಕ್ಕೆ ಉದಾಹರಣೆಗಳ ಅಗತ್ಯವೂ ಇಲ್ಲದಷ್ಟು ಸ್ಪಷ್ಟವಾಗುತ್ತದೆ. ಹೃದ್ಯಭಾವನೆ, ಅಂತಃಕರಣಗಳ ಪ್ರಶ್ನೆ ಬಂದಾಗಲೆಲ್ಲ ಇವತ್ತು ಈ ದೇಶದಲ್ಲಿ ಶಂಕಿತ ಸ್ಥಾನದಲ್ಲಿ ಕಾಣಿಸಿಕೊಳ್ಳುವುದೇ ಪ್ರಧಾನಿ ನರೇಂದ್ರ ಮೋದಿ. ಗೋರಕ್ಷಕರ ಬಗ್ಗೆ ಅವರು ಆಡಿತ ಕಠಿಣ ಮಾತುಗಳಿಗೆ ಚಪ್ಪಾಳೆ ಬೀಳದಷ್ಟು ಅವರ ಅಂತಃಕರಣ ಸಾರ್ವಜನಿಕ ಜಿಜ್ಞಾಸೆಗೆ ಒಳಪಟ್ಟಿದೆ. ಈ ದೇಶದಲ್ಲಿ ಅಂತಃಕರಣ ಸತ್ತ ಕೆಲವು ದುಷ್ಕರ್ಮಿಗಳು ಬೆತ್ತಲೆಗೊಳಿಸಿ ಥಳಿಸುವುದು, ಬೆಂಕಿ ಕೊಟ್ಟು ಸುಡುವುದು ಇಲ್ಲವೇ ಸೆಗಣಿ ತಿನ್ನಿಸುವುದನ್ನೆಲ್ಲ ನಡೆಸುತ್ತಿರುವಾಗ ಪ್ರಧಾನಿ ಎಂಬ ನೆಲೆಯಲ್ಲಿ ಅವರಿಂದ ಈ ದೇಶ ನಿರೀಕ್ಷಿಸಿದ್ದು ಅಪಾರವಾದುದನ್ನು. ಅವರು ಖಂಡಿಸುತ್ತಾರೆ, ಆಕ್ರೋಶ ವ್ಯಕ್ತಪಡಿಸುತ್ತಾರೆ.. ಎಂದೆಲ್ಲಾ ಗಾಂಧೀಜಿಯ ಭಾರತ ನಿರೀಕ್ಷಿಸಿತ್ತು. ಇಂಥ ನಿರೀಕ್ಷೆಗೆ ಇನ್ನೊಂದು ಕಾರಣ ಏನೆಂದರೆ, ಮೋದಿಯವರು ಸಣ್ಣ-ಪುಟ್ಟ ಬೆಳವಣಿಗೆಗಳಿಗೂ ಶೀಘ್ರ ಸ್ಪಂದಿಸುವ ವ್ಯಕ್ತಿಯಾಗಿದ್ದಾರೆ ಎಂಬುದು. ಶಾಲಾ ಬಾಲಕ ಪತ್ರ ಬರೆದರೆ, ಓರ್ವ ಸಾಮಾನ್ಯ ನಾಗರಿಕ ಅಹವಾಲು ಸಲ್ಲಿಸಿದರೆ ಅಥವಾ ಭಾರತೀಯರು ಕ್ರೀಡಾರಂಗದಲ್ಲಿ ಸಾಧನೆಗೈದರೆ ಇಲ್ಲವೇ ವಿಲ್ಸನ್‍ರು ಮ್ಯಾಗ್ಸೇಸೆ ಪುರಸ್ಕಾರಕ್ಕೆ ಭಾಜನರಾದರೆ.. ಇಲ್ಲೆಲ್ಲಾ ಮೋದಿಯವರು ಎಷ್ಟು ಚುರುಕಾಗಿರುತ್ತಾರೆಂದರೆ, ತಕ್ಷಣ ಟ್ವೀಟ್ ಮಾಡಿ ಸ್ಪಂದಿಸುತ್ತಾರೆ. ಬಾಯ್ಮಾತಿನ ಹೇಳಿಕೆಗಳಿಗಿಂತಲೂ ಮೊದಲು ಅಂತರ್ಜಾಲದಲ್ಲಿ ಅವರ ಪ್ರತಿಕ್ರಿಯೆ ವ್ಯಕ್ತವಾಗಿರುತ್ತದೆ. ಇಂಥ ಪ್ರಧಾನಿ ಅಂತಃಕರಣ ಸತ್ತವರ ಬಗ್ಗೆ ಸಣ್ಣ ಪ್ರತಿಕ್ರಿಯೆ ಕೊಡುವುದಕ್ಕೂ ತಿಂಗಳುಗಟ್ಟಲೆ ಕಾಯುತ್ತಾರೆಂದರೆ, ಈ ಹೃದಯಕ್ಕೆ ಏನೆನ್ನಬೇಕು? ಈ ಅಂತಃಕರಣ ಸತ್ತ ಮನುಷ್ಯರ ಕ್ರೌರ್ಯಗಳಿಗೆ ಪಾರ್ಲಿಮೆಂಟ್ ಮೂಲಕ ಅವರು ಕಠಿಣ ಪ್ರತಿಕ್ರಿಯೆ ನೀಡುತ್ತಾರೆಂದು ಹೃದಯವಂತ ಭಾರತೀಯರು ಕಾದು ಕುಳಿತಿದ್ದರು. ಆದರೆ ಅಲ್ಲೂ ನಿರಾಶೆಯಾಯಿತು. ಇದೀಗ ಪಾರ್ಲಿಮೆಂಟ್‍ನಿಂದ ಎಲ್ಲೋ ದೂರದಲ್ಲಿ ಮತ್ತು ಪ್ರಶ್ನೋತ್ತರಗಳಿಗೆ ಅವಕಾಶವಿಲ್ಲದ ಸಭೆಯೊಂದರಲ್ಲಿ ಅಂತಃಕರಣ ಸತ್ತವರ ಬಗ್ಗೆ ಅವರು ಆಡಿತ ಮಾತುಗಳು ಅವರ ಪ್ರಾಮಾಣಿಕತೆಯನ್ನು ಶಂಕೆಯ ಮೊನೆಯಲ್ಲೇ ನಿಲ್ಲಿಸಿದೆ. ಅವರೇಕೆ ಈ ಮಾತುಗಳನ್ನು ಆಡಲು ಇಷ್ಟು ತಡ ಮಾಡಿದರು? ಭಯೋತ್ಪಾದನೆಯ ನೆಪದಲ್ಲಿ ಆಸ್ಟ್ರೇಲಿಯಾ ಸರಕಾರವು ಡಾ| ಹನೀಫ್‍ರನ್ನು ಬಂಧಿಸಿದ ಸಂದರ್ಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಒಂದು ಹೇಳಿಕೆಯನ್ನು ಕೊಟ್ಟಿದ್ದರು. ಹನೀಫ್‍ರ ಪತ್ನಿ, ಕುಟುಂಬದವರ ಕಣ್ಣೀರು ತನ್ನೊಳಗನ್ನು ಎಷ್ಟರ ಮಟ್ಟಿಗೆ ಕಾಡಿದೆಯೆಂದರೆ, ನನಗೆ ಆ ರಾತ್ರಿ ನಿದ್ದೆಯೇ ಬರಲಿಲ್ಲ ಅಂದಿದ್ದರು. ಹೃದಯ ಸತ್ತವರ ಹೊರತಾಗಿ ಉಳಿದ ಎಲ್ಲರಿಗೂ ಅದು ಓರ್ವ ಹೃದಯವಂತನ ಹೃದ್ಯ ಮತ್ತು ಭಾವುಕ ಪದಗಳಾಗಿ ಕೇಳಿಸಿತ್ತು. ಸ್ವಾತಂತ್ರ್ಯ ಪೂರ್ವದ ಬ್ರಿಟಿಷರಲ್ಲಿ ಒಂದು ಹಂತದವರೆಗೆ ಆ ಹೃದಯವಿತ್ತು. ಆದ್ದರಿಂದ, ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಆ ಹೃದಯ ನೂರುಪಟ್ಟು ವಿಕಸನ ಹೊಂದಿ ಸರ್ವರ ಮಾನ್ಯತೆಗೆ ಪಾತ್ರವಾಗಬೇಕಿತ್ತು. ಆದರೆ, ದಿನೇ ದಿನೇ ಹೃದಯಶೂನ್ಯರು ಮತ್ತು ಅಂತಃಕರಣ ಸತ್ತವರು ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಪ್ರಧಾನಿ ಸ್ಥಾನದಲ್ಲಿರುವವರ ಅಂತಃಕರಣವೇ ಶಂಕಿತಗೊಳ್ಳುವ ಹಂತಕ್ಕೆ ಆ ಪ್ರಕ್ರಿಯೆ ತಲುಪಿಬಿಟ್ಟಿದೆ. ಇರೋಮ್‍ರ ಉಪವಾಸ ಸಾರುತ್ತಿರುವುದೂ ಇದನ್ನೇ. ಆದ್ದರಿಂದ,
        ಆಗಸ್ಟ್ 15ನ್ನು ಸ್ವಾಗತಿಸಲು ಸಿದ್ಧತೆ ನಡೆಸುತ್ತಿರುವ ಪ್ರತಿಯೋರ್ವ ಭಾರತೀಯನೂ/ಳೂ ಸತ್ತ ಹೃದಯಗಳೊಂದಿಗೆ ಓಡಾಡುವವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುವ ಮೂಲಕ ಅಂತಃಕರಣವುಳ್ಳ  ಹೊಸ ಮುಂಜಾವನ್ನು ಹಾರೈಸಬೇಕಿದೆ.

Monday, 8 August 2016

ಮಕ್ವಾನ ಹಿಂತಿರುಗಿಸಿದ ದಲಿತ ಪ್ರಶಸ್ತಿ ಮತ್ತು ವಿಲ್ಸನ್ ರ ಮ್ಯಾಗ್ಸೇಸೆ

      ಸಫಾಯಿ ಕರ್ಮಚಾರಿ ಆಂದೋಲನ್ ಎಂಬ ಸಂಘವನ್ನು ಕಟ್ಟಿಕೊಂಡು ಮಲ ಹೊರುವ ಪದ್ಧತಿಯ ವಿರುದ್ಧ ಹೋರಾಟ ನಡೆಸಿದ್ದಕ್ಕಾಗಿ ಬೆಂಜವಾಡ ವಿಲ್ಸನ್ ಅವರು ಮ್ಯಾಗ್ಸೇಸೆ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಸುದ್ದಿಯು ಪತ್ರಿಕೆಗಳಲ್ಲಿ ಪ್ರಕಟವಾಗುವುದಕ್ಕಿಂತ ಒಂದು ದಿನ ಮೊದಲು ಗುಜರಾತ್‍ನ ಪ್ರಮುಖ ಸಾಹಿತಿ ಅಮೃತ್‍ಲಾಲ್ ಮಕ್ವಾನಾ ಅವರು ತಮಗೆ ಗುಜರಾತ್ ಸರಕಾರ ನೀಡಿರುವ ಸಾಹಿತ್ಯ ಪ್ರಶಸ್ತಿ ಮತ್ತು 25 ಸಾವಿರ ರೂಪಾಯಿ ಮೊತ್ತವನ್ನು ಸರಕಾರಕ್ಕೆ ಹಿಂತಿರುಗಿಸಿದರು. ವಿಶೇಷ ಏನೆಂದರೆ, ವಿಲ್ಸನ್ ಮತ್ತು ಮಕ್ವಾನ ಇಬ್ಬರೂ ದಲಿತರು. ಅಷ್ಟು ಮಾತ್ರವಲ್ಲ, ಇವರಿಬ್ಬರೂ ದಲಿತ ಸಬಲೀಕರಣವನ್ನೇ ಗುರಿಯಾಗಿಸಿಕೊಂಡವರು. 2014ರಲ್ಲಿ ಗುಜರಾತ್ ಸರಕಾರವು ಉತ್ತಮ ದಲಿತ ಸಾಹಿತ್ಯ ಪುರಸ್ಕಾರಕ್ಕೆ ಮಕ್ವಾನರನ್ನು ಆಯ್ಕೆ ಮಾಡಿರುವುದಕ್ಕೆ, ರಾಜ್ಯದ ದಲಿತರ ಸಂಕಷ್ಟಭರಿತ ಜೀವನದ ಮೇಲೆ ಅವರು ಬರೆದ ಸಾಹಿತ್ಯ ಕೃತಿಯೇ ಪ್ರಮುಖ ಕಾರಣವಾಗಿತ್ತು. ಆದರೆ ಇದೀಗ ಅವರ ಆ ಕೃತಿಯನ್ನೇ ಅಣಕಿಸುವಂತೆ, ಗುಜರಾತ್‍ನಲ್ಲಿ ದಲಿತರ ಮೇಲೆ ಹಲ್ಲೆ ನಡೆದಿದೆ. ಹಾಗಂತ, ಸತ್ತ ದನದ ಚರ್ಮ ಸುಲಿದ ಕಾರಣಕ್ಕಾಗಿ ಉನಾದಲ್ಲಿ ದಲಿತ ಯುವಕರ ಮೇಲೆ ನಡೆದ ಹಲ್ಲೆ ಕೇವಲ ಮಕ್ವಾನರನ್ನು ಮಾತ್ರ ಕೆರಳಿಸಿದ್ದಲ್ಲ. ಗುಜರಾತ್‍ನಾದ್ಯಂತ ದಲಿತರನ್ನು ಬೀದಿಗಿಳಿಯುವಂತೆ ಮಾಡಿದೆ. ಸತ್ತ ದನಗಳು ಚರ್ಮ ಸುಲಿಸಿಕೊಳ್ಳದೇ ಗುಜರಾತ್‍ನಾದ್ಯಂತ ದಫನಕ್ಕೆ ಒಳಗಾಗುತ್ತಿವೆ. ದಲಿತರ ಅಸಹಕಾರದಿಂದಾಗಿ ಸುರೇಂದ್ರ ನಗರ್ ಜಿಲ್ಲೆಯೊಂದರಲ್ಲೇ ಒಂದೇ ದಿನ ಸುಮಾರು 80 ದನಗಳನ್ನು ಚರ್ಮ ಸಮೇತ ವ್ಯವಸ್ಥೆಯೇ ದಫನ ಮಾಡಬೇಕಾಗಿ ಬಂದಿದೆ. ನಿಜವಾಗಿ, ಈ ದೇಶದಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ದಲಿತರು ಓರ್ವರೇ ಅಲ್ಲ. ಬಹುಶಃ, ಮುಸ್ಲಿಮರು ಈ ದೌರ್ಜನ್ಯದ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಸಾಧ್ಯತೆಯೇ ಹೆಚ್ಚು. ಉನಾ ಘಟನೆಯ ವಾರದ ಬಳಿಕ ಮಧ್ಯಪ್ರದೇಶದಲ್ಲಿ ಇದೇ ದನದ ನೆಪದಲ್ಲಿ ಇಬ್ಬರು ಮುಸ್ಲಿಮ್ ಮಹಿಳೆಯರನ್ನು ಸಾರ್ವಜನಿಕವಾಗಿಯೇ ಥಳಿಸಲಾಯಿತು. ಇದಕ್ಕಿಂತಲೂ ಆಘಾತಕಾರಿ ಸಂಗತಿ ಏನೆಂದರೆ, ಅರೆಬಿಕ್ ಭಾಷೆ ಕಲಿಸುವುದನ್ನು ವಿರೋಧಿಸಿ ನಮ್ಮ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಸಂತ ಥಾಮಸ್ ಪ್ರಾಥಮಿಕ್ ಶಾಲೆಯ ಮೇಲೆ ದಾಳಿ ನಡೆಯಿತು. ತರಗತಿಗೆ ನುಗ್ಗಿ ಕೋಲಾಹಲ ಸೃಷ್ಟಿಸಲಾಯಿತು. ಇಷ್ಟಕ್ಕೂ, ಮುಸ್ಲಿಮರು ಮತ್ತು ದಲಿತರನ್ನು ಗುರಿಯಾಗಿಸಿ ಹೀಗೆ ಹತ್ಯೆ ಮತ್ತು ಹಲ್ಲೆಗಳಲ್ಲಿ ತೊಡಗಿರುವುದು ಒಂದೇ ಗುಂಪು. ಈ ಗುಂಪಿಗೂ ಪ್ರಧಾನಿ ನರೇಂದ್ರ ಮೋದಿಯವರ ಪಕ್ಷಕ್ಕೂ ನೇರಾತಿನೇರ ಸಂಬಂಧ ಇದೆ. ಬಿಜೆಪಿ ತಳಮಟ್ಟದಲ್ಲಿ ಆಶ್ರಯಿಸಿಕೊಂಡಿರುವುದೇ ಈ ಗುಂಪನ್ನು. ಅದು ಈ ಗೂಂಡಾ ಗುಂಪನ್ನು ಬೆಂಬಲಿಸುತ್ತದೆ. ಜೈಲಿನಿಂದ ಬಿಡಿಸಿ ತರುತ್ತದೆ. ನ್ಯಾಯಾಲಯಗಳಲ್ಲಿ ಅವರ ಪರವಾಗಿ ವಾದಿಸುವುದಕ್ಕೆ ಸೂಕ್ತ ವ್ಯವಸ್ಥೆ ಮಾಡುತ್ತದೆ. ಇವೆಲ್ಲ ಸೂಚಿಸುವುದೇನನ್ನು? ಒಂದು ಕಡೆ ದಲಿತ-ಅಲ್ಪಸಂಖ್ಯಾತರ ಕಲ್ಯಾಣದ ಬಗ್ಗೆ ಮಾತಾಡುತ್ತಲೇ ಇನ್ನೊಂದು ಕಡೆ ಅವರ ಮೇಲಿನ ಹಲ್ಲೆಕೋರರನ್ನು ರಕ್ಷಿಸುವುದು ಯಾವುದರ ಪ್ರತೀಕ? ನಿಜವಾಗಿ, ಮಕ್ವಾನರು ತನ್ನ ಪುರಸ್ಕಾರವನ್ನು ವ್ಯವಸ್ಥೆಯ ಮುಖಕ್ಕೆ ಎಸೆದಿರುವುದಕ್ಕೆ ಬರೇ ಉನಾ ಘಟನೆ ಒಂದೇ ಕಾರಣ ಇಲ್ಲ. ಗುಜರಾತ್‍ನಲ್ಲಿ ಈ ಹಿಂದೆ ನಡೆದ ದಲಿತ ಹಲ್ಲೆ ಪ್ರಕರಣವನ್ನೂ ಅವರು ಉಲ್ಲೇಖಿಸಿದ್ದಾರೆ. ವಿಲ್ಸನ್ ತನ್ನ ಮ್ಯಾಗ್ಸೇಸೆ ಪುರಸ್ಕಾರವನ್ನು ಇಡಬೇಕಾದ ಭಾರತವೆಂಬ ಕಪಾಟು ಮನುಷ್ಯ ವಿರೋಧಿಗಳಿಂದ ಹೀಗೆ ತುಂಬಿ ಹೋಗಿದೆ ಎಂಬುದನ್ನು ಮಕ್ವಾನ ಈ ಮೂಲಕ ನೆನಪಿಸಿದ್ದಾರೆ.
      ನಿಜವಾಗಿ, ವಿಲ್ಸನ್ ಮತ್ತು ಮಕ್ವಾನ ಈ ದೇಶದ ಎರಡು ಸ್ಥಿತಿಗಳ ಪ್ರತೀಕವಾಗಿದ್ದಾರೆ. ಶ್ರೇಷ್ಠ ಪುರಸ್ಕಾರಕ್ಕೆ ಭಾಜನರಾಗಿಯೂ ಅದನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಿಲ್ಲದ ದುರಂತ ಸ್ಥಿತಿ ಈ ಇಬ್ಬರದು. ಮ್ಯಾಗ್ಸೇಸೆ ಪುರಸ್ಕಾರಕ್ಕೆ ವಿಲ್ಸನ್ ಆಯ್ಕೆಯಾಗಿದ್ದರೂ ಅವರ ಸಮುದಾಯ ಮಲ ಎತ್ತುವ ದೌರ್ಜನ್ಯದಿಂದ ಇನ್ನೂ ಮುಕ್ತವಾಗಿಲ್ಲ. ಅತ್ಯುತ್ತಮ ದಲಿತ ಪುರಸ್ಕಾರ ಪಡೆದ ಹೊರತೂ ಮಕ್ವಾನರ ಸಮುದಾಯ ಸತ್ತ ಪ್ರಾಣಿಯ ಚರ್ಮ ಸುಲಿಯುವ ವೃತ್ತಿಯಿಂದ ಹೊರಬಂದಿಲ್ಲ. ಈ ಎರಡೂ ವೃತ್ತಿಗಳು ತಲೆತಲಾಂತರದಿಂದ ಈ ಸಮುದಾಯದಲ್ಲೇ ಯಾಕೆ ಗಿರಕಿ ಹೊಡೆಯುತ್ತಿದೆ ಎಂಬ ಪತ್ತೆ ಕಾರ್ಯದಲ್ಲಿ ಒಂದೊಮ್ಮೆ ತೊಡಗಿದ್ದೇ ಆದರೆ, ಅಂತಿಮವಾಗಿ ನಾವು ತಲುಪುವುದು - ದಲಿತರು ಮತ್ತು ಮುಸ್ಲಿಮರ ಮೇಲೆ ಹಲ್ಲೆ ನಡೆಸುವವರನ್ನು ರಾಜಕೀಯವಾಗಿ ಸಾಕುವವರ ಅಂಗಳಕ್ಕೆ. ಮುಸ್ಲಿಮರೆಲ್ಲ ಮಾಂಸೋದ್ಯಮದಲ್ಲಿ ತೊಡಗುವುದನ್ನು ಈ ಮಂದಿ ಬಯಸುತ್ತಾರೆ. ದಲಿತರು ಮಲ ಎತ್ತುವ, ಚರ್ಮ ಸುಲಿಯುವ ಅಧಮ ಮನಸ್ಥಿತಿಯಲ್ಲೇ ಬೆಳೆಯುವುದನ್ನು ಅವರು ಇಷ್ಟಪಡುತ್ತಾರೆ. ಈ ವಾತಾವರಣವನ್ನು ಉಳಿಸಿ, ಕಾಪಾಡಲಿಕ್ಕಾಗಿ ಶ್ರಮಿಸುತ್ತಾರೆ. ಮುಸ್ಲಿಮರು ಮತ್ತು ದಲಿತರು ಉನ್ನತ ಶಿಕ್ಷಣ ಪಡೆಯುವುದನ್ನು ಬೇರೆ ಬೇರೆ ವಿಧಾನಗಳ ಮೂಲಕ ತಡೆಯುತ್ತಿರುತ್ತಾರೆ. ಸ್ಕಾರ್ಫ್‍ನ ನೆಪದಲ್ಲಿ ಒಂದು ಕಡೆ ಮುಸ್ಲಿಮ್ ಹೆಣ್ಮಕ್ಕಳ ಶಿಕ್ಷಣಕ್ಕೆ ತಡೆ ಒಡ್ಡುವಾಗ ಇನ್ನೊಂದು ಕಡೆ ನಿತ್ಯ ಕಿರುಕುಳ ಮತ್ತು ಅವಮಾನದಿಂದ ಬೇಯಿಸಿ ದಲಿತರನ್ನು ‘ವೇಮುಲ’ ಮತ್ತು ‘ಅಶ್ವತಿ’ಗೊಳಿಸಲಾಗುತ್ತದೆ. ಈ ಎರಡೂ ಸಮುದಾಯ ಇದ್ದ ಸ್ಥಿತಿಯಲ್ಲೇ ಉಳಿಯಬೇಕೆಂಬುದು ಅವರ ತಂತ್ರ. ಅವರು ಅಧಿಕಾರ ಪಡೆಯಬೇಕಾದರೆ ಹಿಂದುಳಿದ ಮುಸ್ಲಿಮರು ಇರಲೇಬೇಕು. ಈ ಹಿಂದುಳಿದವರ ಮೇಲೆ ಹಲ್ಲೆ, ದೌರ್ಜನ್ಯಗಳನ್ನು ಆಗಾಗ ನಡೆಸುತ್ತಾ, ಅವರನ್ನು ಸಂತ್ರಸ್ತ ಮನಸ್ಥಿತಿಯಲ್ಲೇ ಉಳಿಸಿಕೊಳ್ಳುತ್ತಾ, ಅದನ್ನೇ ತಮ್ಮ ಪಾಲಿನ ಸಾಧನೆಯಾಗಿ ಮತ್ತು ಈ ಸಾಧನೆಯನ್ನು ಧಾರ್ಮಿಕವಾಗಿ ಮತ್ತು ರಾಜಕೀಯವಾಗಿ ನಗದೀಕರಿಸಿಕೊಳ್ಳುವ ಅವಕಾಶ ಇರಬೇಕು. ಅಂದಹಾಗೆ, ಇಂಥ ಹೀನಕೃತ್ಯಕ್ಕೆ ಸ್ಥಿತಿವಂತ ಸಮುದಾಯ ಯಾವ ಕೊಡುಗೆಯನ್ನು ಖಂಡಿತ ನೀಡಲಾರದು. ಆದ್ದರಿಂದಲೇ, ‘ಹಿಂದುಳಿದ’ ಒಂದು ಸಮುದಾಯ ಸದಾ ಅಸ್ತಿತ್ವದಲ್ಲಿ ಇರಬೇಕಾಗುತ್ತದೆ. ದಲಿತರನ್ನು ತಲೆತಲಾಂತರದಿಂದಲೇ ಹಿಂದುಳಿದ ಮನಸ್ಥಿತಿಯಲ್ಲಿ ಉಳಿಸಿಕೊಂಡು ಬರಲಾಗಿರುವುದರಿಂದ ಅವರನ್ನು ಅದೇ ಸ್ಥಿತಿಯಲ್ಲಿ ಮತ್ತು ಅದೇ ವೃತ್ತಿಯಲ್ಲಿ ಉಳಿಸಿಕೊಳ್ಳುವುದು ಪ್ರಾಯೋಗಿಕವಾಗಿ ಹೆಚ್ಚು ಸುಲಭ. ಹೀಗೆ ಎರಡು ‘ಹಿಂದುಳಿದ’ ಸಮುದಾಯವನ್ನು ಉಳಿಸಿಕೊಂಡು ಮತ್ತು ಬಳಸಿಕೊಂಡು ಒಂದು ರಾಜಕೀಯ ಸಿದ್ಧಾಂತ ಅಧಿಕಾರದ ರುಚಿಯನ್ನು ಅನುಭವಿಸುತ್ತಿದೆ. ಅಷ್ಟಕ್ಕೂ, ಅರೆಬಿಕ್ ಅನ್ನು ಒಂದು ಭಾಷೆಯಾಗಿ ಶಾಲೆಯಲ್ಲಿ ಕಲಿಸಬಾರದೆಂದು ಆಗ್ರಹಿಸಿ ಈ ದೇಶದ ಇನ್ನೆಲ್ಲೂ ಈ ವರೆಗೂ ದಾಳಿ ನಡೆದಿಲ್ಲ. ದಕ್ಷಿಣ ಕನ್ನಡದಲ್ಲಿ ಇದೀಗ ಅರೆಬಿಕ್‍ನ ಹೆಸರಲ್ಲಿ ಮೊಟ್ಟಮೊದಲ ದಾಳಿ ನಡೆದಿದೆ. ಬಹುಶಃ, ಮುಸ್ಲಿಮರನ್ನು ಸದಾ ಅಪರಾಧಿಗಳ ಸ್ಥಾನದಲ್ಲಿ ಕೂರಿಸುವುದಕ್ಕೆ ವಿಷಯಗಳ ಕೊರತೆಯೇನೂ ಇಲ್ಲ ಎಂಬುದನ್ನು ಸಾರಿದ ವಿಕ್ಷಣ ಸಂದರ್ಭವೂ ಇದುವೇ. ಈ ವರೆಗೆ ಗೋವು, ಮದ್ರಸ, ಭಯೋತ್ಪಾದನೆ, ಸ್ಕಾರ್ಫ್...  ಮುಂತಾದುವುಗಳನ್ನು ಈ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು. ಇದೀಗ ಅರೆಬಿಕ್. ಹಾಗಂತ ಅರೆಬಿಕ್ ಎಂಬುದು ಫ್ರೆಂಚ್, ಜರ್ಮನ್, ಇಂಗ್ಲಿಷ್‍ನಂತೆ ಕೇವಲ ಒಂದು ಸಂವಹನ ಮಾಧ್ಯಮವೇ ಹೊರತು ಬೇರೇನೂ ಅಲ್ಲ. ದಾಳಿಗೊಳಗಾದ ಶಾಲೆಯಲ್ಲಿ ಅರೆಬಿಕ್‍ನಂತೆಯೇ ಫ್ರೆಂಚ್ ಮತ್ತು ಇಂಗ್ಲಿಷನ್ನೂ ಕಲಿಸಲಾಗುತ್ತಿತ್ತು. ದಾಳಿಕೋರರ ಉದ್ದೇಶವೇನು ಎಂಬುದನ್ನು ಇದುವೇ ಸ್ಪಷ್ಟಪಡಿಸುತ್ತದೆ. ಅವರು ಅರೆಬಿಕ್‍ನ ವಿರೋಧಿಗಳಲ್ಲ. ಅವರು ಮುಸ್ಲಿಮರ ವಿರೋಧಿಗಳು. ಯಾವುದಾದರೊಂದು ರೀತಿಯಲ್ಲಿ ಮುಸ್ಲಿಮರನ್ನು ತಪ್ಪಿತಸ್ಥರಂತೆ ಮತ್ತು ತಿರಸ್ಕೃತ ಸಮುದಾಯದಂತೆ ನಡೆಸಿಕೊಳ್ಳುತ್ತಾ ಸಂತ್ರಸ್ತ ವಾತಾವರಣವೊಂದು ಈ ಸಮುದಾಯದಲ್ಲಿ ನೆಲೆಸಿರಬೇಕೆಂಬುದು ಅವರ ಮುಖ್ಯ ಗುರಿ. ದಲಿತರು ಮಲದ ಗುಂಡಿ ಮತ್ತು ಚರ್ಮದ ಕೊಟ್ಟಿಗೆಯಲ್ಲೇ ಜೀವ ತೇದು ತೇದು ಕೊನೆಯುಸಿರೆಳೆಯಬೇಕೆಂಬುದೂ ಅವರದೇ ಮಹದಾಸೆ. ನಿಜವಾಗಿ, ಅವರ ರಾಜಕೀಯ ಸಿದ್ಧಾಂತದ ಅಳಿವು-ಉಳಿವು ಈ ಮಂದಿಯನ್ನೇ ಆಶ್ರಯಿಸಿದೆ. ಸಂತ್ರಸ್ತ ಮನಸ್ಥಿತಿ ಮತ್ತು ಹಿಂದುಳಿಯುವಿಕೆ, ಎರಡೂ ಈ ರಾಜಕೀಯದ ಮೂಲ ತಾಯಿ ಬೇರು. ಇವರಿಬ್ಬರನ್ನೂ ಪರಸ್ಪರ ಎತ್ತಿ ಕಟ್ಟುವುದು ಮತ್ತು ಇಬ್ಬರ ಮೇಲೂ ಒಂದೇ ಬಗೆಯ ಹಲ್ಲೆಗಳಾಗುವುದು ಈ ರಾಜಕೀಯ ಚದುರಂಗದಾಟದ ಜಾಣ ನಡೆಯಾಗಿದೆ. ಉತ್ತರ ಪ್ರದೇಶದ ಅಖ್ಲಾಕ್ ಕುಟುಂಬದ ಮೇಲೂ ಮತ್ತು ಗುಜರಾತ್‍ನ ಉನಾದಲ್ಲಿ ದಲಿತ ಯುವಕರ ಮೇಲೂ ನಡೆದಿರುವ ಹಲ್ಲೆ ಇದನ್ನೇ ಸೂಚಿಸುತ್ತದೆ. ಎರಡರ ಕಾರಣವೂ ಒಂದೇ. ಆದರೆ, ಹಲ್ಲೆಗೊಳಗಾಗಿರುವವರು ಮಾತ್ರ ಬೇರೆ ಬೇರೆ. ದಲಿತರು ಮತ್ತು ಮುಸ್ಲಿಮರನ್ನು ಈ ರಾಜಕೀಯ ಸಿದ್ಧಾಂತ ಒಂದೇ ತಕ್ಕಡಿಯಲ್ಲಿಟ್ಟಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಪುರಾವೆಗಳ ಅಗತ್ಯ ಇಲ್ಲ. ಅಂದಹಾಗೆ,
       ವಿಲ್ಸನ್‍ರ ಮ್ಯಾಗ್ಸೇಸೆ ಸಾಧನೆಯನ್ನು ಪೂರ್ಣ ಪ್ರಮಾಣದಲ್ಲಿ ಆನಂದಿಸುವ ಸ್ಥಿತಿಯಲ್ಲಿ ಈ ದೇಶ ಇಲ್ಲ ಎಂಬುದನ್ನು ಮಕ್ವಾನ್‍ರು ತನ್ನ ಪ್ರಶಸ್ತಿ ಹಿಂದಿರುಗಿಸುವಿಕೆಯ ಮೂಲಕ ಸೂಚ್ಯವಾಗಿ ತಿಳಿಸಿದ್ದಾರೆ. ಆದ್ದರಿಂದ ಮಲದ ವಿರುದ್ಧ ಜಾಗೃತಿ ಮೂಡಿಸಿದ ವಿಲ್ಸನ್‍ರು ಮಲಿನ ಮನಸ್ಸುಗಳ ಬಗ್ಗೆಯೂ ದಲಿತ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಯಶಸ್ವಿಯಾಗಲಿ ಎಂದಷ್ಟೇ ಈ ಸಂದರ್ಭದಲ್ಲಿ ಹಾರೈಸಬಹುದು.