Tuesday, 6 June 2017

ದೌರ್ಬಲ್ಯಗಳ ಪಟ್ಟಿಯೊಂದಿಗೆ ಉಪವಾಸಿಗ

      ತಝ್ಕಿಯಾ ಮತ್ತು ತದ್‍ಸಿಯಾ ಎಂಬೆರಡು ಪದಗುಚ್ಛಗಳ ನಡುವೆ ತಕ್ಷಣಕ್ಕೆ ಇವೆರಡೂ ಒಂದೇ ಎಂದು ಅನಿಸುವಷ್ಟು ಹತ್ತಿರದ ಸಾಮ್ಯತೆ ಇದೆ. ಆದರೆ ವಾಸ್ತವ ಹೀಗಿಲ್ಲ. ಇವೆರಡರ ನಡುವಿನ ಅರ್ಥವ್ಯತ್ಯಾಸ ಬಹಳ ದೊಡ್ಡದು. ತಝ್ಕಿಯಾ ಎಂಬುದು ಸಂಸ್ಕರಣೆ, ಶುದ್ಧೀಕರಣ ಎಂಬ ಅರ್ಥಗಳನ್ನು ಕೊಟ್ಟರೆ ತದ್‍ಸಿಯಾ ಎಂಬುದು ಭ್ರಷ್ಟ ಎಂಬ ಅರ್ಥವನ್ನು ಕೊಡುತ್ತದೆ. ರಮಝಾನ್ ತದ್‍ಸಿಯದಿಂದ ತಝ್ಕಿಯದೆಡೆಗೆ ಸಾಗಲು ಒತ್ತಾಯಿಸುವ ತಿಂಗಳಾಗಿದೆ. ಭ್ರಷ್ಟತನ ಅನ್ನುವುದು ಮಾನವ ಜಗತ್ತಿಗೆ ಹೊಸತಲ್ಲ. ಸಂಸ್ಕರಣೆಯೂ ಹಾಗೆಯೇ. ಆದಿಪಿತ ಆದಮ್‍ರ(ರ) ಕಾಲದಲ್ಲೇ ಭ್ರಷ್ಟತನ ಆರಂಭವಾಗಿದೆ. ಸಂಸ್ಕರಣೆಯೂ ಅವರಿಂದಲೇ ಆರಂಭವಾಗಿದೆ. ಮನುಷ್ಯ ಭ್ರಷ್ಟನಾಗಲಾರ ಎಂದು ಯಾರೂ ಖಾತ್ರಿ ಕೊಡಲಾರರು. ನಿತ್ಯದ ಬದುಕಿನ ನಡುವೆ ಮನುಷ್ಯ ಭ್ರಷ್ಟ ಆಗುವುದಕ್ಕೆ ನೂರಾರು ದಾರಿಗಳಿವೆ. ಹಣ ಅದರ ಅತೀ ಸಣ್ಣ ಭಾಗ ಮಾತ್ರ. ಮಾತಿನಲ್ಲೂ ಮನುಷ್ಯ ಭ್ರಷ್ಟ ಆಗಬಹುದು. ನೋಟದಲ್ಲಿ, ನಡತೆಯಲ್ಲಿ, ಭಾವನೆಯಲ್ಲಿ, ನಗುವಿನಲ್ಲಿ, ವ್ಯಾಪಾರದಲ್ಲಿ, ಆಲೋಚನೆಯಲ್ಲಿ... ಹೀಗೆ ದಾರಿಗಳು ಅನೇಕ. ಮನುಷ್ಯ ಭ್ರಷ್ಟನಾಗಲಾರ ಎಂದು ಪವಿತ್ರ ಕುರ್‍ಆನ್ ಹೇಳಲಿಲ್ಲ. ಅದರ ಬದಲು ಸಂಸ್ಕರಣೆಯ ಹತ್ತಾರು ವಿಧಾನಗಳನ್ನು ಹೇಳಿಕೊಟ್ಟಿದೆ. ದಾನವು ಮನುಷ್ಯನನ್ನು ಶುದ್ಧೀಕರಿಸುತ್ತದೆ (9:103) ಎಂದು ಅದು ಹೇಳಿದೆ. ತನ್ನ ಆತ್ಮವನ್ನು ಸಂಸ್ಕರಿಸಿಕೊಂಡವ ವಿಜಯಿಯಾದ (91:9) ಎಂದು ಅಭಿಪ್ರಾಯಪಟ್ಟಿದೆ. ತನ್ನನ್ನು ಸಂಸ್ಕರಿಸಿಕೊಂಡವರಿಗೆ ಸ್ವರ್ಗ ಇದೆ (20:76) ಎಂದು ಮಾತ್ರವಲ್ಲ, ಪ್ರವಾದಿಗಳು ಬಂದಿರುವುದೇ ಸಂಸ್ಕರಿಸುವ ವಿಧಾನ ತಿಳಿಸಲು (3:164) ಎಂದು ವಿವರಿಸಿದೆ. ಅದೇವೇಳೆ, ವಿವೇಚಿಸುವ ಸಾಮರ್ಥ್ಯವುಳ್ಳ ಹೃದಯವಿದ್ದೂ ವಿವೇಚಿಸದ ಮನುಷ್ಯರನ್ನು ಅದು ತರಾಟೆಗೆ ಎತ್ತಿಕೊಂಡಿದೆ. ಅವರ ಹೃದಯಕ್ಕೆ ಬೀಗ ಜಡಿದಿದೆಯೇ (47:24) ಎಂಬ ಮಾರ್ಮಿಕ ಪ್ರಶ್ನೆಯ ಜೊತೆಗೆ ಅವರ ಹೃದಯಕ್ಕೆ ತುಕ್ಕು ಹಿಡಿದಿದೆ (83:15) ಎಂಬ ಷರಾವನ್ನು ಬರೆದಿದೆ. ಪ್ರವಾದಿ ಮುಹಮ್ಮದರು(ಸ) ಒಂದು ಅತಿ ಸರಳ ಮತ್ತು ಮಾರ್ಮಿಕ ಮಾತನ್ನು ಹೇಳಿದ್ದಾರೆ-
ಮನುಷ್ಯನ ಶರೀರದಲ್ಲಿ ಮಾಂಸದ ಮುದ್ದೆಯೊಂದು ಇದೆ. ಅದು ಆರೋಗ್ಯ ಪೂರ್ಣವಾಗಿದ್ದರೆ ಇಡೀ ಶರೀರವೇ ಆರೋಗ್ಯಪೂರ್ಣವಾಗಿರುತ್ತದೆ. ಅದು ಅನಾರೋಗ್ಯಕ್ಕೀಡಾದರೆ ಇಡೀ ಶರೀರದ ಆರೋಗ್ಯವೇ ಕೆಡುತ್ತದೆ. ಅದುವೇ ಹೃದಯ ಎಂದು ವಿವರಿಸಿದ್ದಾರೆ.
ಶುದ್ಧೀಕರಣ ಪ್ರಕ್ರಿಯೆಯು ಮಾನವ ಉಗಮದಿಂದಲೇ ಆರಂಭವಾಗಿದೆ. ಆದ್ದರಿಂದಲೇ ಶುದ್ಧೀಕರಣಕ್ಕೆ ಅಕಾಲ ಅಂತ್ಯ ಎಂಬುದಿಲ್ಲ. ಮಾನವ ಅಸ್ತಿತ್ವ ಇರುವವರೆಗೆ ತಝ್ಕಿಯಾ ಮತ್ತು ತದ್‍ಸಿಯಾ ಅಸ್ತಿತ್ವದಲ್ಲಿ ಸದಾ ಇದ್ದೇ ಇರುತ್ತದೆ. ಹಾಗಂತ ಮನುಷ್ಯ ರಮಝಾನ್ ತಿಂಗಳಲ್ಲಿ ಮಾತ್ರ ಸಂಸ್ಕರಣೆಗೆ ತೆರೆದುಕೊಳ್ಳಬೇಕು, ಉಳಿದ 11 ತಿಂಗಳು ಭ್ರಷ್ಟನಾಗಬಹುದು ಎಂದಲ್ಲ. ಪ್ರತಿದಿನ ಮನುಷ್ಯ ಆತ್ಮಾವಲೋಕನ ಮಾಡಿಕೊಳ್ಳಬೇಕು. ದಿನದಲ್ಲಿ ತಾನು ಎಷ್ಟೆಷ್ಟು ಪ್ರಮಾಣದಲ್ಲಿ ಭ್ರಷ್ಟನಾದೆ/ಳಾದೆ ಎಂದು ಆತ್ಮ ನಿವೇದನೆ ಮಾಡಿಕೊಳ್ಳುವ ಪರಿಪಾಠ ಬೆಳೆಸಿಕೊಂಡರೆ, ಆತ್ಮ ಶುದ್ಧೀಕರಣವೆಂಬುದು ತೀರಾ ಸಲೀಸು. ಭ್ರಷ್ಟತನ ಎಂಬುದು ನಿರ್ದಿಷ್ಟ ಧರ್ಮದ ಸೊತ್ತಲ್ಲ. ಸಂಸ್ಕರಣೆಯೂ ಹಾಗೆಯೇ. ಯಾವಾಗೆಲ್ಲ ಮಾನವ ಸಮೂಹದಲ್ಲಿ ಸಂಸ್ಕರಣೆಯ ಪ್ರಜ್ಞೆ ಜಾಗೃತವಾಗಿರುತ್ತದೋ ಆವಾಗೆಲ್ಲ ಆ ಸಮೂಹ ಉತ್ಕೃಷ್ಟವಾಗಿ ಗುರುತಿಸಿಕೊಂಡಿರುತ್ತದೆ. ರಮಝಾನ್ ತಿಂಗಳ ಉಪವಾಸವು ಈ  ಉತ್ಕೃಷ್ಟ ಸಮೂಹದ ನಿರ್ಮಾಣವನ್ನು ಗುರಿಯಾಗಿಸಿಕೊಂಡಿದೆ. ಮುಂಜಾನೆಯಿಂದ ಮುಸ್ಸಂಜೆಯ ವರೆಗಿನ ಅನ್ನ-ಪಾನೀಯಗಳ ತ್ಯಜಿಸುವಿಕೆಯು ಆ ಉದ್ದೇಶ ಸಾಧನೆಗಾಗಿರುವ ಒಂದು ಷರತ್ತು. ವ್ಯಕ್ತಿಯನ್ನು ಪಳಗಿಸುವ ವಿಧಾನ. ಪವಿತ್ರ ಕುರ್‍ಆನಿನ ಮೇಲೆ ವಿಶ್ವಾಸವಿಟ್ಟವರೆಲ್ಲರೂ ಉಪವಾಸವೆಂಬ ಈ ಕುಲುಮೆಯಲ್ಲಿ ಒಂದು ತಿಂಗಳು ಬೇಯಬೇಕು. ಹಾಗೆ ತಿಂಗಳ ಬಳಿಕ ಪುಟಕ್ಕಿಟ್ಟ ಚಿನ್ನವಾಗಿ ಹೊರಬರಬೇಕು. ಇದುವೇ ಅವರ ಸಾಮಾಜಿಕ ಗುರುತು. ಒಂದು ವೇಳೆ,
ಸ್ವಸಂಸ್ಕರಣೆಗೆ ನಾವು ಸಿದ್ಧವಾಗದಿದ್ದರೆ ಉಪವಾಸವೆಂಬ ಕುಲುಮೆಯಲ್ಲಿ ಒಂದು ತಿಂಗಳು ಬೇಯಬೇಕಾದ ಅಗತ್ಯವೇ ಇಲ್ಲ.


No comments:

Post a Comment