ಸದ್ಯ ಕರ್ನಾಟಕದಲ್ಲಿ ಬಿಜೆಪಿಯು ನಿರ್ವಾತ ಸ್ಥಿತಿಯಲ್ಲಿದೆ. ಪಕ್ಷವನ್ನು ಮಂದಿನ ಚುನಾವಣೆಯಲ್ಲಿ ಎದ್ದು ನಿಲ್ಲಿಸಬಲ್ಲ ವರ್ಚಸ್ವಿ ನಾಯಕರಾಗಲೀ, ಪ್ರಬಲ ಇಶ್ಯೂವಾಗಲೀ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲೂ ಕಾಂಗ್ರೆಸ್‍ನ ಪ್ರತಿನಿಧಿಗಳೇ ಇದ್ದಾರೆ. ಇವುಗಳನ್ನು ಮರಳಿ ಪಡೆಯಬೇಕಾದರೆ ಯಡಿಯೂರಪ್ಪರನ್ನೋ ಜಗದೀಶ್ ಶೆಟ್ಟರನ್ನೋ ಜಿಲ್ಲೆಗೆ ಕರೆಸಿ ಭಾಷಣ ಮಾಡಿಸುವುದರಿಂದ ಸಾಧ್ಯವಿಲ್ಲ ಎಂಬುದು ಇಡೀ ಜಿಲ್ಲೆಗೇ ಗೊತ್ತು. ಜಿಲ್ಲೆಯ ದೇರಳಕಟ್ಟೆ ಎಂಬಲ್ಲಿ ಕಾರ್ತಿಕ್ ರಾಜ್ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿ ಯಡಿಯೂರಪ್ಪ ಕೊಟ್ಟಿರುವ ಹೇಳಿಕೆಯ ಮುಜುಗರದಿಂದ ಬಿಜೆಪಿ ಇನ್ನೂ ಹೊರಬಂದಿಲ್ಲ. ಆದ್ದರಿಂದ ಬಿಜೆಪಿಗೆ ತಕ್ಪಣಕ್ಕೊಂದು ಗ್ಲುಕೋಸ್ ಬೇಕಾಗಿದೆ. ಪ್ರಭಾಕರ ಭಟ್ಟರ ಬಂಧನದಿಂದ ಈ ಗ್ಲೂಕೋಸ್ ಲಭ್ಯವಾಗುವ ಸಾಧ್ಯತೆ ಇದೆ ಎಂದು ಬಿಜೆಪಿಯ ಚಿಂತಕ ಚಾವಡಿ ಗಂಭೀರವಾಗಿಯೇ ಭಾವಿಸಿದೆ. ಈ ಭಾವನೆಗೆ ಇರುವ ಇನ್ನೊಂದು ಕಾರಣ, ಪ್ರಭಾಕರ ಭಟ್ಟರಿಗೆ ಇರುವ ‘ಹಿಂದೂ ಧರ್ಮ ರಕ್ಷಕ’ ಎಂಬ ಇಮೇಜ್. ಅವರ ಬಂಧನವಾದರೆ ಅವರು ಬಿಡುಗಡೆಗೊಳ್ಳುವ ವರೆಗೆ ಧರಣಿ, ಸತ್ಯಾಗ್ರಹ, ಪ್ರತಿಭಟನೆಗಳನ್ನು ಸರಣಿ ಕ್ರಮದಲ್ಲಿ ಹಮ್ಮಿಕೊಳ್ಳಬಹುದು. ಅಮಿತ್ ಶಾರಿಂದ ಹಿಡಿದು ಸಾಕ್ಷಿ ಮಹಾರಾಜ್‍ರ ವರೆಗೆ ಪ್ರಖರ ನಾಲಗೆಯ ನಾಯಕರನ್ನು ಜಿಲ್ಲೆಗೆ ಕರೆತರಬಹುದು ಮತ್ತು ಅವರಿಂದ ಉಗ್ರ ಭಾಷಣ ಮಾಡಿಸಬಹುದು. ಕಾರಣವಿಲ್ಲದೇ ಉಗ್ರ ಭಾಷಣ ಮಾಡುವುದಕ್ಕೂ ಬಂಧನದ ಹಿನ್ನೆಲೆಯಲ್ಲಿ ಭಾಷಣ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಭಾಷಣವನ್ನು ಉಗ್ರತನದಿಂದ ಅತ್ಯುಗ್ರತನಕ್ಕೆ ಒಯ್ಯಲು ಇಂಥ ಸಂದರ್ಭಗಳ ಹೊರತು ಅಸಾಧ್ಯ. ಆದ್ದರಿಂದಲೇ ಕಲ್ಲಡ್ಕವನ್ನು ಮತ್ತೆ ಮತ್ತೆ ಕುಲುಮೆ ಮಾಡಲಾಗುತ್ತಿದೆಯೇನೋ ಎಂಬ ಅನುಮಾನ ಮೂಡುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಮೇಲೆ ಒತ್ತಡಗಳು ಹೆಚ್ಚಾದಂತೆಲ್ಲ ಭಟ್ಟರ ಪಾಳಯಕ್ಕೆ ಎರಡು ರೀತಿಯಲ್ಲಿ ಲಾಭಗಳಿವೆ. ಒಂದು ರಮಾನಾಥ ರೈ ನಾಲಾಯಕ್ಕು ಅನ್ನುವ ಸಂದೇಶ ಜಿಲ್ಲೆಯಾದ್ಯಂತ ರವಾನೆಯಾಗುವುದು ಅಥವಾ ಹಾಗೇ ರವಾನೆಯಾಗುವಂತೆ ನೋಡಿಕೊಳ್ಳುವುದು. ಇನ್ನೊಂದು, ಈ ಸಂದೇಶಕ್ಕೆ ಕುದಿಗೊಂಡು ಸ್ವತಃ ರಮಾನಾಥ ರೈಯವರೇ ದುಡುಕಿನ ಕ್ರಮಕ್ಕೆ ಮುಂದಾಗುವುದು. ಈ ಎರಡೂ ಭಟ್ಟರ ಪಾಲಿಗೆ ಅನುಕೂಲಕರವೇ. ಇದೀಗ ಈ ಎರಡೂ ಉದ್ದೇಶಗಳು ಬಹುತೇಕ ಈಡೇರುತ್ತಿರುವ ಸ್ಥಿತಿಯಿದೆ. ಕಲ್ಲಡ್ಕ ಭಟ್ಟರನ್ನು ಕ್ರಿಮಿನಲ್ ಮೊಕದ್ದಮೆ ಹೂಡಿ ಬಂಧಿಸುವಂತೆ ಜಿಲ್ಲಾ ಎಸ್ಪಿ ಭೂಷಣ್ ಕುಮಾರ್ ಬೊರಸೆಯವರಿಗೆ ರೈಯವರು ನಿರ್ದೇಶನ ನೀಡುವ ವೀಡಿಯೋವೊಂದು ಬಿಡುಗಡೆಗೊಂಡಿದೆ. ತಕ್ಷಣ ಯಡಿಯೂರಪ್ಪರಿಂದ ಹಿಡಿದು ತಳಮಟ್ಟದ ನಾಯಕರ ವರೆಗೆ ಎಲ್ಲರೂ ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಒಂದು ಬಗೆಯ ಪ್ರತಿಭಟನಾ ಸಿದ್ಧತೆಗಳೂ ನಡೆಯುತ್ತಿವೆ. ನಿಜವಾಗಿ, ಇದು ಬಿಜೆಪಿಯ ಒಳತಂತ್ರ. ಪ್ರಭಾಕರ ಭಟ್ಟರನ್ನು ಬಂಧಿಸುವುದೆಂದರೆ ಜಿಲ್ಲೆಯ ನಾಡಿ-ಮಿಡಿತವನ್ನು ಒಂದಷ್ಟು ಅವಧಿಗೆ ಬಲವಂತದಿಂದಲಾದರೂ ಸ್ಥಬ್ಧಗೊಳಿಸುವುದು ಎಂದರ್ಥ. ಅವರ ಬಂಧನದ ಹೆಸರಲ್ಲಿ ಜಿಲ್ಲೆಯನ್ನು ಮತ್ತೆ ಅಶಾಂತಿಗೆ ತಳ್ಳಬಹುದು. ಅಲ್ಲಲ್ಲಿ ಇರಿತ, ಕಲ್ಲು ತೂರಾಟ, ಹತ್ಯಾ ಯತ್ನಗಳೂ ನಡೆಯಬಹುದು. ಇವಕ್ಕೆಲ್ಲ ಜಿಲ್ಲಾ ಉಸ್ತುವಾರಿ ಸಚಿವರ ಅಲ್ಪಸಂಖ್ಯಾತ ತುಷ್ಟೀಕರಣವೇ ಕಾರಣ ಎಂದೂ ಸಮರ್ಥಿಸಿಕೊಳ್ಳಬಹುದು.
ನಿಜವಾಗಿ, ಕಲ್ಲಡ್ಕವನ್ನು ಮತ್ತು ಆ ಮೂಲಕ ಜಿಲ್ಲೆಯನ್ನು ಗಲಭೆ ರಹಿತ ಪ್ರದೇಶವನ್ನಾಗಿ ಮಾಡುವುದಕ್ಕೆ ಆವೇಶದ ಹೇಳಿಕೆ ಮತ್ತು ದುಡುಕಿನ ನಿರ್ಧಾರಗಳು ಪರಿಹಾರ ಅಲ್ಲ. ಕಲ್ಲಡ್ಕದ ಘರ್ಷಣೆಗೆ ಬಿಜೆಪಿ ಒಂದು ಪರಿಹಾರವನ್ನು ತಯಾರಿಸಿ ಇಟ್ಟಿದೆ. ಆಗಾಗ ಘರ್ಷಣೆಗಳು ಆಗುತ್ತಿರಬೇಕು ಮತ್ತು ಅಂತಿಮವಾಗಿ ತಾವು ರೂಪಿಸಿರುವ ಪರಿಹಾರವನ್ನೇ ಉಸ್ತುವಾರಿ ಸಚಿವರು ಪರಿಹಾರವಾಗಿ ಆಯ್ದುಕೊಳ್ಳಬೇಕು ಎಂದೂ ಅದು ನಿರೀಕ್ಷಿಸುತ್ತಿದೆ. ಅದುವೇ ಭಟ್ಟರ ಬಂಧನ. ಈ ಖೆಡ್ಡಾಕ್ಕೆ ಉಸ್ತುವಾರಿ ಸಚಿವರು ಬಿದ್ದರೆ ಬಳಿಕ ಇಡೀ ಜಿಲ್ಲೆಯನ್ನೇ ತಮ್ಮ ಖೆಡ್ಡಾಕ್ಕೆ ಬೀಳಿಸಬಹುದು ಎಂಬುದು ಅವರ ಲೆಕ್ಕಾಚಾರ. ಆದ್ದರಿಂದ ಜಿಲ್ಲೆಯ ಆರೋಗ್ಯದ ದೃಷ್ಟಿಯಿಂದ ಹೊಸ ರಣತಂತ್ರವನ್ನು ರೂಪಿಸಬೇಕಾಗಿದೆ. ಗಲಭೆ ಹುಟ್ಟುಹಾಕುವವರ ಮಾಹಿತಿ ಕಲೆ ಹಾಕುವ ಪ್ರಬಲ ತಂಡವೊಂದನ್ನು ಸರಕಾರ ರೂಪಿಸಬೇಕಾಗಿದೆ. ಈ ತಂಡ ಅತ್ಯಂತ ರಹಸ್ಯವಾಗಿ ತನ್ನ ಚಟುವಟಿಕೆಯಲ್ಲಿ ತೊಡಗಬೇಕು ಮತ್ತು ಗಲಭೆಗಿಂತ ಮೊದಲೇ ಅಂಥವರನ್ನು ವಶಕ್ಕೆ ಪಡೆದು ಸರಿಪಡಿಸುವ ಕೆಲಸಗಳಾಗಬೇಕು. ಗಲಭೆ ಹುಟ್ಟುಹಾಕುವವರ ಮೇಲೆ ಕಠಿಣ ಪರಿಚ್ಛೇದಗಳಡಿಯಲ್ಲಿ ಮೊಕದ್ದಮೆ ದಾಖಲಿಸುವಂತಾಗಬೇಕು. ಗೂಂಡಾ ಕಾಯ್ದೆಯನ್ನು ಹೇರಿ ಗಡೀಪಾರು ಮಾಡುವುದಕ್ಕೂ ಹಿಂಜರಿಕೆ ತೋರಬಾರದು. ಅದೇ ವೇಳೆ, ‘ಮೆದುಳು ತೊಳೆಯಲಾದ’ ಯುವಕರ ಸಂಭಾವ್ಯ ಪಟ್ಟಿಯನ್ನು ತಯಾರಿಸಿ ಅವರ ಹೆತ್ತವರೊಂದಿಗೆ ಮಾತುಕತೆ ನಡೆಸಬೇಕಲ್ಲದೇ, ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ರವಾನಿಸಬೇಕು. ಒಂದು ಕಡೆ ಗಲಭೆಯನ್ನು ಹುಟ್ಟುಹಾಕುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಲೇ ಇನ್ನೊಂದು ಕಡೆ ‘ತೊಳೆದ ಮೆದುಳಿನ’ ಯುವಕರಲ್ಲಿ ಕಾನೂನಿನ ಭಯ ಮತ್ತು ಅವರ ಹೆತ್ತವರಿಗೆ ಎಚ್ಚರಿಕೆ ರವಾನಿಸುವ ಎರಡೂ ಕ್ರಮಗಳು ಜೊತೆ ಜೊತೆಯಾಗಿ ನಡೆಯಬೇಕು. ಬದ್ಧತೆಯಿಂದ ದುಡಿಯುವ ಅಧಿಕಾರಿಗಳಿಂದ ಇದು ಖಂಡಿತ ಸಾಧ್ಯ. ಹೀಗಾದರೆ ಬಿಜೆಪಿಯ ಷಡ್ಯಂತ್ರಕ್ಕೆ ಸೋಲಾಗುತ್ತದೆ. ಭಟ್ಟರೂ ಸೋಲುತ್ತಾರೆ. ಆದರೆ ಕಲ್ಲಡ್ಕ ಗೆಲ್ಲುತ್ತದೆ. ಜಿಲ್ಲೆಯೂ ಗೆಲ್ಲುತ್ತದೆ.
No comments:
Post a Comment