ಮದ್ಯ ಸೇವನೆಗೂ ಅಪರಾಧ ಜಗತ್ತಿಗೂ ನಡುವೆ ಇರುವ ಸಂಬಂಧ ಯಾವ ಬಗೆಯದು ಎಂಬುದನ್ನು ವಿವರಿಸಿ ಹೇಳಬೇಕಿಲ್ಲ. ಇತ್ತೀಚೆಗೆ ಅಗ್ನಿ ಶ್ರೀಧರ್ ಅವರ ಮನೆಯ ಮೇಲೆ ನಡೆದ ಪೊಲೀಸ್ ದಾಳಿಯ ಸಂದರ್ಭದಲ್ಲಿ ಮದ್ಯದ ಬಾಟಲಿಗಳು ಸದ್ದು ಮಾಡಿದ್ದುವು. ಕೇರಳದ ನಟಿಯ ಮೇಲೆ ಲೈಂಗಿಕ ಹಲ್ಲೆ ನಡೆಸಿದವರು ಮದ್ಯಪಾನಿಗಳಾಗಿದ್ದರು ಎಂಬ ಸುದ್ದಿ ಪ್ರಕಟವಾಗಿದೆ. ದೆಹಲಿಯ ನಿರ್ಭಯಳನ್ನು ಕ್ರೂರವಾಗಿ ಕೊಂದವರೂ ಮದ್ಯಪಾನಿಗಳಾಗಿದ್ದರು. ಅಷ್ಟಕ್ಕೂ, ಮನುಷ್ಯನೋರ್ವ ತನ್ನಂತೆಯೇ ಇರುವ ಇನ್ನೋರ್ವರನ್ನು ಕೊಚ್ಚಿ ಕೊಚ್ಚಿ ಸಾಯಿಸುವುದು ಅಥವಾ ಅತ್ಯಾಚಾರ ನಡೆಸಿ ಕೊಲೆಗೈಯುವುದು ಇಲ್ಲವೇ ನಂಬಿಕೆ ಬೇರೆ ಎಂಬ ಕಾರಣಕ್ಕಾಗಿ ಅಮಾನುಷವಾಗಿ ನಡಕೊಳ್ಳುವುದನ್ನೆಲ್ಲ ಏನೆಂದು ವಿಶ್ಲೇಷಿಸಬೇಕು? ಇದು ಪ್ರಕೃತಿದತ್ತ ಗುಣವೇ? ಸ್ವಸ್ಥ ಮನುಷ್ಯನೋರ್ವ ವಿನಾ ಕಾರಣ ಇನ್ನೋರ್ವರನ್ನು ಇರಿದು ಕೊಲ್ಲುವನೇ? ಹೆಣ್ಣಿನ ಮೇಲೆ ಅತ್ಯಾಚಾರ ಎಸಗುವ ಧೈರ್ಯ ತೋರುವನೇ? ಇವು ಮತ್ತು ಇಂಥ ಇನ್ನಿತರ ಪ್ರಶ್ನೆಗಳಿಗೆಲ್ಲ ಈ ವರೆಗೆ ಉತ್ತರ ಕೊಟ್ಟಿರುವುದು ಮದ್ಯ. ಸ್ವಸ್ಥ ಮನುಷ್ಯರನ್ನು ಮದ್ಯ ಅಸ್ವಸ್ಥಗೊಳಿಸುತ್ತದೆ. ವಿವೇಕವನ್ನು ಅವಿವೇಕವಾಗಿ ಪರಿವರ್ತಿಸುತ್ತದೆ. ಮದ್ಯ ಸೇವಿಸದೇ ಇರುವಾಗ ಯಾವುದರ ಬಗ್ಗೆ ಭಯ ಇರುತ್ತದೋ ಮದ್ಯ ಸೇವನೆಯ ಬಳಿಕ ಆ ಭಯ ಹೊರಟು ಹೋಗುತ್ತದೆ. ಕಳ್ಳತನ, ಕೊಲೆ, ಸುಲಿಗೆ, ಅತ್ಯಾಚಾರ.. ಎಲ್ಲವನ್ನೂ ಮದ್ಯ ಮಾಡಿಸಿಬಿಡುತ್ತದೆ. ದುರಂತ ಏನೆಂದರೆ, ನಮ್ಮಲ್ಲಿರುವ ಕಾನೂನುಗಳು ಎಷ್ಟು ಮುಗ್ಧ ಸ್ವರೂಪಿ ಅಂದರೆ, ಅವು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಮನುಷ್ಯರನ್ನು ಶಿಕ್ಷಿಸಬಲ್ಲವೇ ಹೊರತು ಅದಕ್ಕೆ ಧೈರ್ಯ ಒದಗಿಸಿದ ಬಾಟಲಿಗಳನ್ನಲ್ಲ. ಆದ್ದರಿಂದಲೇ, ಅಪರಾಧ ಜಗತ್ತಿನಲ್ಲಿ ಹೊಸ ಹೊಸ ಸದಸ್ಯರು ಪ್ರತಿದಿನ ತಮ್ಮ ಹೆಸರನ್ನು ನೋಂದಾಯಿಸುತ್ತಲೇ ಇದ್ದಾರೆ. ಒಂದು ವೇಳೆ, ಸರಕಾರವೊಂದಕ್ಕೆ ಅಪರಾಧ ಕೃತ್ಯಗಳ ಪ್ರಮಾಣವನ್ನು ತಗ್ಗಿಸಬೇಕೆಂಬ ಪ್ರಾಮಾಣಿಕ ಕಳಕಳಿ ಇದ್ದಿದ್ದೇ ಆದರೆ ಪ್ರಥಮವಾಗಿ ಅದು ಮದ್ಯದ ಮೇಲೆ ನಿಷೇಧ ಹೇರಬೇಕು. ಬಿಹಾರದಲ್ಲಿ ಇದು ಸಾಬೀತಾಗಿದೆ. 2016 ಎಪ್ರಿಲ್‍ನಿಂದ ಬಿಹಾರದಲ್ಲಿ ಘೋಷಿಸಲಾದ ಸಂಪೂರ್ಣ ಪಾನ ನಿಷೇಧವು ಅಪರಾಧ ಕೃತ್ಯಗಳಲ್ಲಿ ಭಾರೀ ಮಟ್ಟದ ಇಳಿಕೆಗೆ ಕಾರಣವಾಗಿದೆ. ಅದರ ಪ್ರೇರಣೆಯಿಂದಲೇ ಇತ್ತೀಚೆಗೆ ಬಿಹಾರ ಸರಕಾರವು ಮದ್ಯದ ವಿರುದ್ಧ 11,292 ಕಿ.ಮೀಟರ್ ಉದ್ದದ ಮಾನವ ಸರಪಳಿಯನ್ನು ಏರ್ಪಡಿಸಿತು. ವಿರೋಧ ಪಕ್ಷಗಳ ನಾಯಕರು ಮತ್ತು ಬೆಂಬಲಿಗರೂ ಅದರಲ್ಲಿ ಭಾಗವಹಿಸಿದರು. ಭಾಗವಹಿಸಿದರು ಅನ್ನುವುದಕ್ಕಿಂತ ಹಾಗೆ ಭಾಗಿಯಾಗಲೇಬೇಕಾದ ವಾತಾವರಣವೊಂದು ಅಲ್ಲಿ ಈಗಾಗಲೇ ನಿರ್ಮಾಣವಾಗಿದೆ ಎಂದೇ ಹೇಳಬೇಕು. ಇದೀಗ, ಬಿಹಾರದ ಸರಕಾರಿ ಅಧಿಕಾರಿಗಳು, ನ್ಯಾಯಾಧೀಶರುಗಳು ಮುಂತಾದ ಯಾರೂ ದೇಶದಲ್ಲಿ ಬಿಡಿ, ವಿದೇಶಗಳಲ್ಲೂ ಮದ್ಯಪಾನ ಮಾಡುವಂತಿಲ್ಲ ಎಂಬ ಕಾನೂನನ್ನು ಜಾರಿಗೆ ತರಲಾಗಿದೆ. ಮದ್ಯ ಸೇವಿಸಿ ಸಿಕ್ಕಿಬಿದ್ದರೆ ಹುದ್ದೆಯಿಂದಲೇ ಕಿತ್ತು ಹಾಕಬಹುದಾದ ಕಠಿಣ ಕಾನೂನು ಕ್ರಮಗಳ ಎಚ್ಚರಿಕೆಯನ್ನೂ ನೀಡಲಾಗಿದೆ. ವಿಶೇಷ ಏನೆಂದರೆ, ಕರ್ನಾಟಕ ಮತ್ತು ಬಿಹಾರದಲ್ಲಿ ಮುಖ್ಯಮಂತ್ರಿಗಳಾಗಿರುವವರು ಸಮಾಜವಾದಿ ಹಿನ್ನೆಲೆಯ ಸಿದ್ಧರಾಮಯ್ಯ ಮತ್ತು ನಿತೀಶ್ ಕುಮಾರ್. ಸಾಮಾಜಿಕ ನ್ಯಾಯ, ಸಮಾಜ ಕಲ್ಯಾಣ, ಸಮಸಮಾಜ ಮುಂತಾದುವುಗಳಿಗೆ ಸಾಕಷ್ಟು ನಿಷ್ಠವಾಗಿರುವ ವಿಚಾರಧಾರೆ ಎಂಬ ನೆಲೆಯಲ್ಲಿ ಇವರಿಬ್ಬರನ್ನೂ ನಾವು ಮುಖಾಮುಖಿಗೊಳಿಸುವುದು ಉತ್ತಮ ಎನಿಸುತ್ತದೆ. ಕರ್ನಾಟಕಕ್ಕೆ ಹೋಲಿಸಿದರೆ ಬಿಹಾರ ಬಡ ರಾಜ್ಯ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಯಲ್ಲಿ ಬಿಹಾರಕ್ಕಿಂತ ಕರ್ನಾಟಕ ಸಾಕಷ್ಟು ಮುಂದಿದೆ. ಒಂದು ವೇಳೆ, ಮದ್ಯದ ಆದಾಯವಿಲ್ಲದೇ ಸರಕಾರ ನಡೆಸಲು ಸಾಧ್ಯವಿಲ್ಲ ಎಂಬ ವಾದ ಸಂಪೂರ್ಣ ಸರಿ ಎಂದಾದರೆ, ನಿತೀಶ್ ಕುಮಾರ್ ಈಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕಿತ್ತು. ಆದರೆ ಅಲ್ಲಿಯ ಬೆಳವಣಿಗೆ ಇದಕ್ಕೆ ತದ್ವಿರುದ್ಧವಾಗಿದೆ. ಅವರ ಮಧ್ಯ ವಿರೋಧಿ ನಿಲುವು ಎಷ್ಟು ಜನಪ್ರಿಯತೆ ಗಳಿಸಿಕೊಳ್ಳುತ್ತಿದೆಯೆಂದರೆ, ವಿರೋಧ ಪಕ್ಷಗಳೂ ಅವರನ್ನು ಬೆಂಬಲಿಸಲೇಬೇಕಾದ ಅನಿವಾರ್ಯತೆಗೆ ಒಳಗಾಗಿವೆ. ಹೀಗಿರುವಾಗ, ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಮದ್ಯಪರ ನಿಲುವನ್ನು ಎಷ್ಟರವರೆಗೆ ಪ್ರಾಮಾಣಿಕ ಎಂದು ಹೇಳಬಹುದು? ಕಳೆದ ವರ್ಷದ ಬಜೆಟ್‍ನಲ್ಲಿ ಮದ್ಯದಿಂದ 16,510 ಕೋಟಿ ರೂಪಾಯಿ ಆದಾಯವನ್ನು ಅವರು ನಿರೀಕ್ಷಿಸಿದ್ದರು. ಆದರೆ ನೋಟು ಅಮಾನ್ಯ ಮತ್ತಿತರ ಕಾರಣಗಳಿಂದಾಗಿ ಮದ್ಯ ಮಾರಾಟದಲ್ಲಿ ಕುಸಿದ ಉಂಟಾದುದರಿಂದ ಈ ಫೆಬ್ರವರಿ-ಮಾರ್ಚ್‍ನೊಳಗೆ 3,270 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಬೇಕೆಂಬ ಒತ್ತಡವನ್ನು ಸರಕಾರ ಮದ್ಯ ಮಾರಾಟಗಾರರ ಮೇಲೆ ಹಾಕಿದೆ ಎಂಬ ಸುದ್ದಿ ಪ್ರಕಟವಾಗಿದೆ. ಜನರನ್ನು ಹೆಚ್ಚೆಚ್ಚು ಕುಡುಕರನ್ನಾಗಿಸದ ಹೊರತು ಈ ಗುರಿ ಸಾಧನೆ ಸಾಧ್ಯವಿಲ್ಲ. ಜನರ ಕೈಗೆ ಬಾಟಲಿ ಕೊಟ್ಟು ಅವರ ಜೇಬು ಬರಿದು ಮಾಡುವ ಈ ನೀತಿ ನೈತಿಕವೇ? ಸಿದ್ಧರಾಮಯ್ಯನವರ ಸಮಾಜವಾದ ಈ ಅಭಿವೃದ್ಧಿ ಮಾದರಿಯನ್ನು ನಿಜಕ್ಕೂ ಒಪ್ಪುತ್ತದೆಯೇ?
ನಿಜವಾಗಿ, ಯಾವುದೇ ಒಂದು ಪಕ್ಷದ ಅಳಿವು-ಉಳಿವು ಹಣವನ್ನು ಹೊಂದಿಕೊಂಡಿದೆ. ಪಕ್ಷದ ಅಭಿವೃದ್ಧಿಯಲ್ಲಿ ಹಣಕ್ಕೆ ಬಹು ಮುಖ್ಯ ಪಾತ್ರ ಇದೆ. ಅದನ್ನು ಒದಗಿಸುವುದರಲ್ಲಿ ಮದ್ಯದ ಮಾಲಕರು ಮುಂಚೂಣಿಯಲ್ಲಿರುತ್ತಾರೆ. ಅವರ ಪ್ರಭಾವ ಪಕ್ಷದೊಳಗೂ ಇರುತ್ತದೆ. ಸಚಿವ ಸಂಪುಟದಲ್ಲೂ ಅವರ ಸ್ಥಾನ ಪಡೆದಿರುತ್ತಾರೆ. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಮತ್ತು ಯಾವ ಪಕ್ಷದ ಸದಸ್ಯರೂ ಆಗಿರದ ವಿಜಯ ಮಲ್ಯರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವುದೇ ಇದಕ್ಕೆ ಅತ್ಯುತ್ತಮ ಪುರಾವೆ. ಹಣವೇ ಅವರ ಅರ್ಹತೆ. ಇಂಥವರನ್ನು ಎದುರು ಹಾಕಿಕೊಂಡು ಪಕ್ಷವನ್ನು ಬೆಳೆಸುವುದು ಅಥವಾ ಸರಕಾರವನ್ನು ಮುನ್ನಡೆಸುವುದು ಸುಲಭ ಅಲ್ಲ. ಪಕ್ಷ ಬೆಳೆಯಬೇಕಾದರೆ ಹಣದ ಅಗತ್ಯವಿರುತ್ತದೆ. ಹಣದ ಹೊರತು ಚುನಾವಣೆಯನ್ನು ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಇದೆ. ಹೀಗಿರುವಾಗ ಸಂಪೂರ್ಣ ಪಾನ ನಿಷೇಧವನ್ನು ಜಾರಿಗೊಳಿಸುವುದೆಂದರೆ, ಈ ಎಲ್ಲರನ್ನೂ ಎದುರು ಹಾಕಿಕೊಳ್ಳುವುದು ಎಂದೇ ಅರ್ಥ. ಇದಕ್ಕೆ ಎಂಟೆದೆ ಬೇಕು. ಆದರೆ, ಸಿದ್ಧರಾಮಯ್ಯ ಮತ್ತೆ ಮತ್ತೆ ಈ ವಿಷಯದಲ್ಲಿ ಎಡವುತ್ತಿದ್ದಾರೆ. ಆದ್ದರಿಂದ, ನಿತೀಶ್ ಕುಮಾರ್‍ರಿಗೆ ಸಾಧ್ಯವಾದದ್ದು ಸಿದ್ಧರಾಮಯ್ಯನವರಿಗೆ ಯಾಕೆ ಸಾಧ್ಯವಿಲ್ಲ ಎಂಬುದಕ್ಕೆ ಅವರು ಸ್ಪಷ್ಟನೆ ನೀಡಬೇಕು. ಈಗಾಗಲೇ ಸ್ವಾತಂತ್ರ್ಯ ಹೋರಾಟಗಾರ ದೊರೈ ಸ್ವಾಮಿಯವರು ಮದ್ಯ ವಿರೋಧಿ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ. ಜನರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ. ಸಿದ್ಧರಾಮಯ್ಯನವರು ಈ ಎಲ್ಲವನ್ನೂ ಗಮನಿಸಬೇಕು. ‘ಮದ್ಯದ ಆದಾಯದಿಂದ ಅಭಿವೃದ್ಧಿ’ ಎಂಬ ಘೋಷವಾಕ್ಯದ ಬದಲು ‘ಮದ್ಯ ಮುಕ್ತ ಕರ್ನಾಟಕ’ ಎಂಬ ನೀತಿಯನ್ನು ಅವರು ಅಳವಡಿಸಿಕೊಳ್ಳಬೇಕು. ಸಿದ್ದರಾಮಯ್ಯನವರಿಂದ ಇದು ಸಾಧ್ಯವಿದೆ. ಒಂದು ವೇಳೆ, ಅವರು ಸಂಪೂರ್ಣ ಪಾನ ನಿಷೇಧವನ್ನು ಜಾರಿಗೊಳಿಸಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇದುವೇ ಮುಖ್ಯ ಚರ್ಚಾ ವಿಷಯವಾಗಬಹುದು ಮತ್ತು ವಿರೋಧ ಪಕ್ಷಗಳು ಸಿದ್ದರಾಮಯ್ಯನವರಿಗೆ ಶರಣಾಗಲೇ ಬೇಕಾದ ಅನಿವಾರ್ಯತೆಗೂ ಒಳಗಾಗಬಹುದು. ಇಲ್ಲದಿದ್ದರೆ ಸಮಾಜವಾದದ ನಾಮಫಲಕದಲ್ಲಿ ಅಸಮವಾದವನ್ನು ಬೆಳೆಸಿ, ಉಳಿಸಿ ಹೋದ ಮುಖ್ಯಮಂತ್ರಿಯಾಗಿ ಅವರು ಚರಿತ್ರೆಯ ಪುಟದಲ್ಲಿ ಗುರುತಿಸಿಕೊಂಡಾರು.