Thursday, 27 July 2017

ದಲಿತ್ ಮೀಸಲಾತಿಗಿರುವ ಬೆಂಬಲ ಮುಸ್ಲಿಮರಿಗೇಕಿಲ್ಲ?

ಅಮಾನತುಗೊಂಡ ಬಿಜೆಪಿ ಶಾಸಕರು
     ಪರಿಶಿಷ್ಟ ಜಾತಿ-ಪಂಗಡಗಳು ಮತ್ತು ದಲಿತರಿಗೆ ಮೀಸಲಾತಿ ಸೌಲಭ್ಯವನ್ನು ಒದಗಿಸುವಾಗ ಕಾಣಿಸಿಕೊಳ್ಳದ ಪ್ರತಿಭಟನೆಯು ಮುಸ್ಲಿಮರಿಗೆ ಸಂಬಂಧಿಸಿ ಮಾತ್ರ ಕಾಣಿಸಿಕೊಳ್ಳುವುದೇಕೆ? ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್ ಎಂಬುದಕ್ಕೆ ‘ಮುಸ್ಲಿಮರನ್ನು ಹೊರತುಪಡಿಸಿ’ ಎಂಬರ್ಥವಿದೆಯೇ? ತೆಲಂಗಾಣ ರಾಜ್ಯದಲ್ಲಿ ಸದ್ಯ ಮೀಸಲಾತಿಗೆ ಸಂಬಂಧಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಮರಿಗೆ 12% ಮೀಸಲಾತಿ ಕಲ್ಪಿಸುವ ಮಸೂದೆಯನ್ನು ತೆಲಂಗಾಣ ಸರಕಾರ ಜಾರಿಗೊಳಿಸುವ ಇರಾದೆ ವ್ಯಕ್ತಪಡಿಸಿರುವುದೇ ಈ ಪ್ರತಿಭಟನೆಗೆ ಕಾರಣ. ಬಿಜೆಪಿಯ ಎಲ್ಲ ಐವರು ಶಾಸಕರೂ ವಿಧಾನಸಭಾ ಕಲಾಪದಿಂದ ಅಮಾನತುಗೊಂಡಿದ್ದಾರೆ. ಮೀಸಲಾತಿಯು ತೆಲಂಗಾಣದಲ್ಲಿ ಇನ್ನೋರ್ವ ಯೋಗಿ ಆದಿತ್ಯನಾಥ್‍ರನ್ನು ಸೃಷ್ಟಿಸುವುದಕ್ಕೆ ಕಾರಣವಾಗಬಹುದು ಎಂದು ಆ ಪಕ್ಷ ಬೆದರಿಕೆ ಹಾಕಿದೆ. ಹಾಗಂತ, ಮುಸ್ಲಿಮರಿಗೆ ಮೀಸಲಾತಿ ಸೌಲಭ್ಯವನ್ನು ಒದಗಿಸುವ ಯೋಜನೆಯು ದಿಢೀರ್ ಘೋಷಣೆಯಾದುದಲ್ಲ. 3 ವರ್ಷಗಳ ಹಿಂದೆ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (TRS) ಅಧ್ಯಕ್ಷ ಚಂದ್ರಶೇಖರ್ ರಾವ್ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲೇ ಘೋಷಿಸಿದ್ದರು. ನಿಜವಾಗಿ, ಪ್ರಣಾಳಿಕೆಯಲ್ಲಿ ನೀಡಲಾದ ಭರವಸೆಯನ್ನು ಜಾರಿಗೊಳಿಸಲು ಮೂರು ವರ್ಷ ತಡ ಮಾಡಿದುದಕ್ಕೆ ಬಿಜೆಪಿ ಪ್ರತಿಭಟನೆ ವ್ಯಕ್ತಪಡಿಸಬೇಕಾಗಿತ್ತೇ ಹೊರತು ಜಾರಿಯ ವಿರುದ್ಧ ಅಲ್ಲ. ಒಂದು ಕಡೆ, ಬಿಜೆಪಿ ಸಬ್‍ಕಾ ವಿಕಾಸ್ ಎಂಬ ಮಂತ್ರವನ್ನು ಜಪಿಸುತ್ತಿದೆ. ಸಬಲ ಸಮುದಾಯವಾಗಿ ಗುರುತಿಸಿಕೊಂಡಿರುವ ಜಾಟರಿಗೆ ಮೀಸಲಾತಿ ಒದಗಿಸುವುದಕ್ಕೂ ಉಮೇದು ತೋರಿಸುತ್ತಿದೆ. ಇನ್ನೊಂದು ಕಡೆ, ದೇಶದ ಅತ್ಯಂತ ಹಿಂದುಳಿದ ಸಮುದಾಯವಾಗಿ ಗುರುತಿಸಿಕೊಂಡಿರುವ ಮುಸ್ಲಿಮರಿಗೆ ಮೀಸಲಾತಿ ಒದಗಿಸುವುದನ್ನು ವಿರೋಧಿಸುತ್ತಿದೆ. ಏನಿದರ ಅರ್ಥ? ಶೈಕ್ಷಣಿಕ ಕ್ಷೇತ್ರದಲ್ಲಿ ಮುಸ್ಲಿಮರ ಸ್ಥಿತಿ-ಗತಿ ಹೇಗಿದೆ ಎಂಬುದು ದೇಶವನ್ನಾಳುವ ಪಕ್ಷವಾಗಿ ಬಿಜೆಪಿಗೆ ಚೆನ್ನಾಗಿ ಗೊತ್ತು. ಪರಿಶಿಷ್ಟ ಜಾತಿ-ಪಂಗಡಗಳಿಗೆ ಸರಿಸಮಾನವಾಗಿ ನಿಲ್ಲಲೂ ಸಾಧ್ಯವಾಗದ ಸ್ಥಿತಿ ಮುಸ್ಲಿಮರದ್ದು ಎಂಬುದನ್ನು ಸಾಚಾರ್ ಸಮಿತಿ ಹೇಳಿದೆ. ಸಾಚಾರ್ ಸಮಿತಿ ಕೇಂದ್ರ ಸರಕಾರಕ್ಕೆ ವರದಿಯನ್ನು ಸಲ್ಲಿಸಿ 10 ವರ್ಷಗಳು ಸಂದಿರುವ ಈ ಹೊತ್ತಿನಲ್ಲಿ ಮತ್ತು ಕೇಂದ್ರದಲ್ಲಿ ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್ ಘೋಷಣೆಯಲ್ಲಿ ನಂಬಿಕೆಯಿರಿಸಿರುವ ಸರಕಾರ ಇದೆ ಎಂಬ ನೆಲೆಯಲ್ಲಿ ಮುಸ್ಲಿಮರು ತಮ್ಮ ಅಭಿವೃದ್ಧಿಗಾಗಿ ಕಲ್ಯಾಣ ಯೋಜನೆಗಳನ್ನು ಸರಕಾರಗಳಿಂದ ನಿರೀಕ್ಷಿಸುವುದು ಅಪರಾಧವೇನೂ ಅಲ್ಲ. ಅಂದಹಾಗೆ, ಶೈಕ್ಷಣಿಕವಾಗಿ ತಳಮಟ್ಟದಲ್ಲಿರುವ ಸಮುದಾಯದಿಂದ ಸರಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ. ಪರಿಶಿಷ್ಟ ಜಾತಿ-ಪಂಗಡಗಳಿಗೂ ಈ ಮಾತು ಅನ್ವಯ. ಆದ್ದರಿಂದ, ಯಾವುದೇ ಸರಕಾರ ಈ ಹಿಂದುಳಿದವರ ಅಭಿವೃದ್ಧಿಗೆ ಕಲ್ಯಾಣ ಯೋಜನೆಗಳನ್ನು ಪ್ರಕಟಿಸಿದರೆ ಅದು ಚಪ್ಪಾಳೆ ತಟ್ಟಿ ಸ್ವಾಗತಿಸಬೇಕಾದಷ್ಟು ಮಹತ್ವಪೂರ್ಣವಾಗಬೇಕು. ಆದರೆ, ಬಿಜೆಪಿ ಮಾತ್ರ ಮುಸ್ಲಿಮರನ್ನು ಈ ಅಭಿವೃದ್ಧಿ ಪಥದಿಂದ ಹೊರಗಿಡಲು ಬಯಸುತ್ತಿದೆ. ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವುದರಿಂದ ಯಾಕೆ ಯೋಗಿ ಆದಿತ್ಯನಾಥ್‍ರು ಸೃಷ್ಟಿಯಾಗಬೇಕು? ದಲಿತರಿಗೆ ಮೀಸಲಾತಿ ಕೊಡುವಾಗ ಯಾಕೆ ಅವರು ಹುಟ್ಟುವುದಿಲ್ಲ? ಪರಿಶಿಷ್ಟ ಜಾತಿ-ಪಂಗಡಗಳಿಗೆ ಮೀಸಲಾತಿ ಒದಗಿಸುವುದು ಯಾಕೆ ಬಿಜೆಪಿಯನ್ನು ಕೆರಳಿಸುವುದಿಲ್ಲ? ಇದು ಪಕ್ಷಪಾತಿ ನೀತಿಯಲ್ಲವೇ?
     ಈ ದೇಶದಲ್ಲಿ ಮುಸ್ಲಿಮ್ ಜನಸಂಖ್ಯೆ 20 ಕೋಟಿಯಷ್ಟಿದೆ. ಅವರಲ್ಲಿ ಶಿಕ್ಷಣ ತಜ್ಞರಿದ್ದಾರೆ. ಉದ್ಯಮಿಗಳಿದ್ದಾರೆ. ವಿಜ್ಞಾನಿಗಳಿದ್ದಾರೆ. ಸಾಹಿತಿಗಳಿದ್ದಾರೆ. ಮಂತ್ರಿಗಳಿದ್ದಾರೆ. ಕೃಷಿಕರಿದ್ದಾರೆ. ಈ ದೇಶಕ್ಕೆ ಅತ್ಯಂತ ಹೆಚ್ಚು ವಿದೇಶಿ ವಿನಿಮಯವನ್ನು ಒದಗಿಸುವ ಸಮುದಾಯ ಕೂಡ ಇದುವೇ. ಒಂದು ವೇಳೆ, ಈ 20 ಕೋಟಿ ಜನಸಂಖ್ಯೆಯಲ್ಲಿ ಎಲ್ಲರೂ ಈ ದೇಶದಲ್ಲಿಯೇ ಉದ್ಯೋಗವನ್ನರಸುವ ಸ್ಥಿತಿಗೆ ತಲುಪಿರುತ್ತಿದ್ದರೆ ಅದರ ಪರಿಣಾಮ ಏನಾಗಿರುತ್ತಿತ್ತು? ಒಂದೆಡೆ ಶೈಕ್ಷಣಿಕವಾಗಿ ಈ ಸಮುದಾಯ ಹಿಂದೆ. ಇನ್ನೊಂದೆಡೆ ಈ ಸಮುದಾಯಕ್ಕೆ ಉದ್ಯೋಗವನ್ನು ಒದಗಿಸಿಕೊಡಬೇಕಾದ ಅನಿವಾರ್ಯತೆ.. ಇವೆರಡರಿಂದ ಸರಕಾರದ ಮೇಲೆ ಬೀಳಬಹುದಾದ ಹೊರೆಯನ್ನೊಮ್ಮೆ ಊಹಿಸಿ. ಬಹುಶಃ, ವಿದೇಶಗಳಲ್ಲಿ ಅದರಲ್ಲೂ ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವವರಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆ ಮುಸ್ಲಿಮರದ್ದು. ಈ ದೇಶದ 80% ಮಂದಿ ಈ ದೇಶದಲ್ಲೇ ಉದ್ಯೋಗವನ್ನು ಅರಸುವಾಗ ಅಥವಾ ಅವರಿಗೆ ಉದ್ಯೋಗ ಒದಗಿಸಬೇಕಾದ ಒತ್ತಡದಲ್ಲಿ ಸರಕಾರವಿದ್ದಾಗ ಆ ಹೊರೆಯನ್ನು ಕಡಿಮೆಗೊಳಿಸಿದ್ದು ಮುಸ್ಲಿಮರು. ಅವರು ಸರಕಾರಗಳ ಮೇಲೆ ಭಾರವನ್ನು ಹೇರದೇ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ಆ ಮೂಲಕ ಸರಕಾರಗಳಿಗೆ ವಿದೇಶಿ ವಿನಿಮಯವನ್ನು ಒದಗಿಸುವ ಆದಾಯ ಮೂಲವೂ ಆದರು. ತಮ್ಮ ಕುಟುಂಬವನ್ನೂ ಸಬಲಗೊಳಿಸಿದರು. ಸರಕಾರಗಳ ಪ್ರೋತ್ಸಾಹದ ಕೊರತೆಯಿಂದಾಗಿ ಶಿಕ್ಷಣವನ್ನು ಮುಂದುವರಿಸಲಾಗದೆ ಹೊಟ್ಟೆಪಾಡಿಗಾಗಿ ಗಲ್ಫ್ ಗೆ ತೆರಳಿ ಸಣ್ಣ-ಪುಟ್ಟ ಉದ್ಯೋಗ ಮಾಡಿಕೊಂಡು ತಮ್ಮನ್ನೂ ತಮ್ಮ ಕುಟುಂಬಿಕರನ್ನೂ ಮಾತ್ರವಲ್ಲ, ಅವರು ದೇಶದ ಆದಾಯ ಮೂಲವೇ ಆಗಿ ಬದಲಾಗಿರುವುದು ಸಣ್ಣ ಸಾಧನೆ ಅಲ್ಲ. ಇಂಥದ್ದೊಂದು ಸಾಧನೆಯನ್ನು ಈ ದೇಶದ ಇನ್ನಾವ ಸಮುದಾಯವೂ ಮಾಡಿಲ್ಲ. ಜಾತಿ ಶ್ರೇಣಿಯಲ್ಲಿ ಉನ್ನತವಾಗಿರುವ ಮತ್ತು ಆರ್ಥಿಕವಾಗಿ ಸಬಲವಾಗಿರುವ ಸಮುದಾಯದ ಮಂದಿ ಉನ್ನತ ಶಿಕ್ಷಣ ಪಡೆದು ಅಮೇರಿಕದಲ್ಲೋ ಬ್ರಿಟನ್-ಕೆನಡದಲ್ಲೋ ಉದ್ಯೋಗಕ್ಕೆ ಸೇರುವುದು ವಿಶೇಷ ಏನಲ್ಲ. ಅಲ್ಲದೇ ಕೊನೆಗೆ ಅವರು ಆ ದೇಶದ ಪೌರತ್ವವನ್ನು ಪಡೆದು ಅಲ್ಲಿಯವರೇ ಆಗುತ್ತಿರುವುದನ್ನೂ ನಾವು ನೋಡುತ್ತಿದ್ದೇವೆ. ಇದಕ್ಕೆ ಹೋಲಿಸಿದರೆ ಈ ದೇಶದ ಮುಸ್ಲಿಮರು ಅತ್ಯಂತ ದೇಶನಿಷ್ಠೆಯುಳ್ಳವರು. ಸರಕಾರಗಳ ನಿರ್ಲಕ್ಷ್ಯದ ನಡುವೆಯೂ ಅವರು ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳಲು ಯತ್ನಿಸಿದ್ದಾರೆ. ಈ ದೇಶದ ಅಭಿವೃದ್ಧಿಗೆ ಕೊಡುಗೆಯನ್ನೂ ನೀಡುತ್ತಿದ್ದಾರೆ. ಇಂಥವರ ಅಭಿವೃದ್ಧಿಗೆ ಸರಕಾರ ಯೋಜನೆಯನ್ನು ರೂಪಿಸುವುದೆಂದರೆ ಅದು ವಿರೋಧಕ್ಕೆ ಕಾರಣವಾಗಬೇಕಾದ ಯಾವ ಅಗತ್ಯವೂ ಇಲ್ಲ. ಮುಸ್ಲಿಮ್ ಸಮುದಾಯದ ಮಂದಿ ಇವತ್ತು ಸರಕಾರಿ ಉದ್ಯೋಗ ರಂಗದಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಅಂಕಿ-ಅಂಶಗಳ ತುಲನೆ ಮಾಡಿ ನೋಡುವುದಾದರೆ ಅವರ ಸ್ಥಾನ ದಲಿತರಿಗಿಂತಲೂ ಕೆಳಗಡೆ ಇದೆ. 20 ಕೋಟಿಯಲ್ಲಿ ತೀರಾ ತೀರಾ ಸಣ್ಣದೊಂದು ವಿಭಾಗ ಗಲ್ಫ್ ನಲ್ಲಿ ದುಡಿಯುತ್ತಿರುವಾಗ ದೊಡ್ಡ ಭಾಗವು ಈ ದೇಶದಲ್ಲಿ ಅತಿ ಕಡಿಮೆ ಆದಾಯದ ಕೆಲಸಗಳಲ್ಲಿ ದಿನದೂಡುತ್ತಿವೆ. ಇವರನ್ನು ನಿರ್ಲಕ್ಷಿಸಿಕೊಂಡು ದೇಶ ಮುಂದುವರಿಯಲು ಸಾಧ್ಯವಿಲ್ಲ. ಇವರ ಅಭಿವೃದ್ಧಿಗೆ ಕಲ್ಯಾಣ ಯೋಜನೆಗಳು ಪ್ರಕಟವಾಗಬೇಕು. ದಲಿತ-ಹಿಂದುಳಿದ ವರ್ಗಗಳಂತೆಯೇ ಇವರಿಗೂ ಮೀಸಲಾತಿ ಮತ್ತಿತರ ಸೌಲಭ್ಯಗಳು ಲಭ್ಯವಾಗಬೇಕು. ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್‍ನಿಂದ ಮುಸ್ಲಿಮರನ್ನು ಹೊರತಳ್ಳುವುದೆಂದರೆ ಅದು ಅಭಿವೃದ್ಧಿಪಥದಿಂದ ದೇಶವನ್ನೇ ಹೊರತಳ್ಳಿದಂತೆ. ಹಾಗೆ ಒತ್ತಾಯಿಸುವವರು ಯಾರೇ ಆದರೂ ಅವರು ಜನದ್ರೋಹಿಗಳು. ಖಂಡನಾರ್ಹರು.

No comments:

Post a Comment