ದ.ಕ. ಜಿಲ್ಲೆಯ ಕುರಿತಂತೆ ಜಿಲ್ಲೆಯ ಹೊರಗೆ ಕೆಲವು ಮೆಚ್ಚುಗೆಯ ಮಾತುಗಳು ಚಾಲ್ತಿಯಲ್ಲಿವೆ. ಇಲ್ಲಿ ಗುಣಮಟ್ಟದ ಶಿಕ್ಷಣ ಕೇಂದ್ರಗಳಿವೆ, ಉನ್ನತ ದರ್ಜೆಯ ಹಲವು ಆಸ್ಪತ್ರೆಗಳಿವೆ, ಜನರ ಜೀವನ ಮಟ್ಟವೂ ಸಾಕಷ್ಟು ಉತ್ತಮವಾಗಿದೆ, ಜಿಲ್ಲೆಯ ಜನರು ಬುದ್ಧಿವಂತರಿದ್ದಾರೆ.. ಇತ್ಯಾದಿ ಇತ್ಯಾದಿ. ಹಾಗಂತ, ಇವನ್ನೆಲ್ಲ ತಿರಸ್ಕರಿಸಬೇಕಿಲ್ಲ. ಇದರ ಜೊತೆಗೇ ಇಲ್ಲಿ ಸುಡುವ ಬಿಸಿಲಿದೆ, ಧಾರಾಕಾರ ಮಳೆಯಿದೆ, ಬೆಂಗಳೂರಿಗೆ ಸರಿಗಟ್ಟುವಷ್ಟು ಎರಡು ಬೃಹತ್ ಮಾಲ್‍ಗಳಿವೆ, ಬಹುತೇಕ ಎಲ್ಲ ದೈನಿಕಗಳ ಬ್ಯೂರೋಗಳಿವೆ, ಟಿವಿ ಚಾನೆಲ್‍ಗಳ ಕಚೇರಿಗಳಿವೆ, ಇತರೆಲ್ಲ ಜಿಲ್ಲೆಗಳಿಗಿಂತ ಹೆಚ್ಚು ಸಂಘ ಸಂಸ್ಥೆಗಳಿವೆ, ಜಿಲ್ಲೆಯ ಮಂದಿ ಕನಿಷ್ಠ 5 ಭಾಷೆಯಲ್ಲಿ ಸಂವಹನ ನಡೆಸುವಷ್ಟು ಸಮರ್ಥರಿದ್ದಾರೆ.. ಇತ್ಯಾದಿಗಳೂ ನಿಜವೇ. ಈ ಮೆಚ್ಚುಗೆ ಮತ್ತು ವಿಶೇಷತೆಗಳ ಆಚೆಗೆ ಜಿಲ್ಲೆಯನ್ನು ಕಾಡುವ ಕೆಲವು ಪ್ರಶ್ನೆಗಳಿವೆ. ಇಲ್ಲಿ ಯಾಕಿಷ್ಟು ರಕ್ತದಾಹ? ಇಲ್ಲಿನ ಹಿಂದುಗಳು ಮುಸ್ಲಿಮರನ್ನು ಸಹಿಸುವುದಿಲ್ಲವೇ ಅಥವಾ ಮುಸ್ಲಿಮರು ಹಿಂದೂಗಳನ್ನು ದ್ವೇಷಿಸುತ್ತಾರಾ? ಇಲ್ಲಿನ ವ್ಯಾಪಾರ-ವಹಿವಾಟುಗಳು ಹೇಗಿವೆ? ವಿಶೇಷ ಏನೆಂದರೆ, ಸದ್ಯ ಜಿಲ್ಲೆಯಲ್ಲಿ ಆಗಿರುವ ಎರಡು ಹತ್ಯೆ ಮತ್ತು ಹಲವು ಇರಿತ ಪ್ರಕರಣಗಳಿಗೆ ಮೂಲ ಕಾರಣವೆಂದು ನಂಬಲಾಗಿರುವ ಘಟನೆ ಚುಡಾವಣೆಯದ್ದಲ್ಲ. ‘ಗೋ ಸಾಗಾಟ ಮತ್ತು ಥಳಿತ’ ಎಂಬ ಪಟ್ಟಿಗೆ ಸೇರಿದ್ದೂ ಅಲ್ಲ. `ಲವ್ ಜಿಹಾದ್’ ಎಂಬ ಅತಿ ವಿಶೇಷ ಕೆಟಗರಿಯಲ್ಲೂ ಇದಕ್ಕೆ ಸ್ಥಾನವಿಲ್ಲ. ಕಲ್ಲಡ್ಕ ಎಂಬ ಅತಿ ಸಣ್ಣ ಪಟ್ಟಣದಲ್ಲಿ ಹಿಂದೂ ಮತ್ತು ಮುಸ್ಲಿಮರಿಬ್ಬರ ನಡುವೆ ನಡೆದ ಘಟನೆಯನ್ನೇ ಇದಕ್ಕೆ ಕಾರಣವಾಗಿ ಕೊಡಲಾಗುತ್ತಿದೆ. ಅವರಿಬ್ಬರೂ ಅಷ್ಟು ಪ್ರಭಾವಿಗಳೇ? ಜಿಲ್ಲೆ ಅಷ್ಟೂ ಸೆನ್ಸಿಟಿವ್ ಆಗಿದೆಯೇ? ಆ ಒಂದು ಘಟನೆಯನ್ನು ವಾರಗಳ ತನಕ ತಲೆಯಲ್ಲಿ ಹೊತ್ತು ತಿರುಗುವಷ್ಟು ಮತ್ತು ಹಿಂದೂ-ಮುಸ್ಲಿಮ್ ಆಗಿ ವಿಭಜನೆಗೊಂಡು ಹತ್ಯೆ, ಹಲ್ಲೆಗಳಲ್ಲಿ ಏರ್ಪಡುವಷ್ಟು ಜಿಲ್ಲೆ ಬೌದ್ಧಿಕ ದಾರಿದ್ರ್ಯಕ್ಕೆ ಒಳಪಟ್ಟಿದೆಯೇ? ಒಂದು ವೇಳೆ, ಯಾರಾದರೂ ಈ ಕಾರಣಕ್ಕಾಗಿ ಜಿಲ್ಲೆಯಲ್ಲಿ ಅಧ್ಯಯನ ನಡೆಸಲು ಮುಂದಾಗುವುದಾದರೆ, ಅವರಿಗೆ ಅಚ್ಚರಿಯಾಗುವ ಸಾಧ್ಯತೆಯೇ ಹೆಚ್ಚು. ಜಿಲ್ಲೆ ಹಿಂದೂ-ಮುಸ್ಲಿಮ್ ಆಗಿ ವಿಭಜನೆಗೊಂಡಿಲ್ಲ. ವ್ಯಾಪಾರ-ವಹಿವಾಟುಗಳು ನಾವು-ಅವರಾಗಿ ಮಾರ್ಪಾಟಾಗಿಲ್ಲ. ಅದೇ ಮೀನು ಮಾರುಕಟ್ಟೆ, ಅದೇ ಧಕ್ಕೆ. ತರಕಾರಿ ಮಾರುವವರಲ್ಲಿ ಅವರೂ-ಇವರೂ ಇದ್ದಾರೆ. ದಿನಸಿ ಅಂಗಡಿಗಳ ಗಿರಾಕಿಗಳಲ್ಲಿ ಅವರೂ ಇದ್ದಾರೆ, ಇವರೂ ಇದ್ದಾರೆ. ಮೀನು ಹಿಡಿಯುವವರಲ್ಲೂ ಅವರು ಇದ್ದಾರೆ. ಮಾರುವವರಲ್ಲೂ ಅವರು ಇದ್ದಾರೆ. ಇವರೂ ಇದ್ದಾರೆ. ತರಕಾರಿಯನ್ನು ಬೆಳೆದು ಮಾರುಕಟ್ಟೆಗೆ ತರುವವರು, ಮಾರುವವರು ಮತ್ತು ಅದನ್ನು ಖರೀದಿಸುವವರು ಹಿಂದೂ-ಮುಸ್ಲಿಮ್ ಆಗಿ ಬೇರ್ಪಟ್ಟಿಲ್ಲ. ಮಂಗಳೂರಿನ ಕೇಂದ್ರ ಮಾರುಕಟ್ಟೆ ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿರುವ ಸಣ್ಣ ಪುಟ್ಟ ಮಾರುಕಟ್ಟೆಗಳು ಈಗಲೂ ಮನುಷ್ಯರಲ್ಲಿಯೇ ಇವೆ. ಅವರ್ಯಾರೂ ಧರ್ಮದ ಕಾರಣಕ್ಕಾಗಿ ಭಾರೀ ಸಂಖ್ಯೆಯಲ್ಲಿ ಅಂಗಡಿಗಳನ್ನು ಬದಲಿಸಿಕೊಂಡಿಲ್ಲ. ಇಲ್ಲಿ ಸಾಲಗಳ ವಹಿವಾಟೂ ಈ ಹಿಂದಿನಂತೆಯೇ ನಡೆಯುತ್ತಿದೆ. ಹೊಟೇಲುಗಳಲ್ಲಿ ಅವೇ ತಮಾಷೆಯ ಮಾತುಗಳು ವಿನಿಮಯವಾಗುತ್ತಿವೆ. ಕೆಲವು ಕಡೆ ಒಂದಷ್ಟು ವ್ಯತಿರಿಕ್ತ ಬೆಳವಣಿಗೆಗಳಾಗಿವೆಯಾದರೂ ಉದ್ದೇಶಪೂರ್ವಕವಾಗಿ ಹಿಂದೂ ಕಾಲನಿ ಮತ್ತು ಮುಸ್ಲಿಮ್ ಕಾಲನಿಗಳು ತಲೆಯೆತ್ತಿಲ್ಲ. ಆದರೂ ಜಿಲ್ಲೆಯ ಜನರು ತಮ್ಮ ಮಾತುಕತೆಗೆ ಒಂದು ಅಘೋಷಿತ ಮಿತಿಯನ್ನು ಅಳವಡಿಸಿಕೊಂಡಿರುವುದು ಅನೇಕ ಸಂದರ್ಭಗಳಲ್ಲಿ ವ್ಯಕ್ತವಾಗುತ್ತಲೇ ಇವೆ. ಅದು ರಾಜಕೀಯ. ಮಾತುಕತೆಗಳ ನಡುವೆ ರಾಜಕೀಯ ನುಸುಳದಂತೆ ಬಲವಂತದ ಎಚ್ಚರಿಕೆ ವಹಿಸಲಾಗುತ್ತಿದೆ. ಈ ಹಿಂದೆ ಈ ಮಡಿವಂತಿಕೆ ಇರಲಿಲ್ಲ. ಬಹುಶಃ ಜಿಲ್ಲೆಯ ರಕ್ತದಾಹಕ್ಕೆ ಕಾರಣಗಳು ಇಲ್ಲೇ ಇರುವ ಸಾಧ್ಯತೆಯೇ ಹೆಚ್ಚು. ಜನರು ಯಾವುದರ ಬಗ್ಗೆ ಮಾತಾಡಲು ಹೆಚ್ಚು ಭಯಪಡುತ್ತಾರೋ ಅದಕ್ಕೆ ಮುಖ್ಯವಾಗಿ ಎರಡು ಕಾರಣಗಳಿರುತ್ತವೆ. ಒಂದೋ ಅವರಿಗೆ ಆ ಬಗ್ಗೆ ಜ್ಞಾನವಿಲ್ಲ ಅಥವಾ ಹಾಗೇ ಮಾತಾಡುವುದರಿಂದ ಅಪಾಯ ಇದೆ. ಸದ್ಯ ಈ ಎರಡನೇ ಕಾರಣವೇ ಒಟ್ಟು ಬೆಳವಣಿಗೆಯ ಮೂಲವೆನ್ನಬಹುದು. ಈ ಸಂಭಾವ್ಯ ಅಪಾಯವನ್ನು ಪರಿಗಣಿಸಿಯೇ ಜನಸಾಮಾನ್ಯರು ತಮ್ಮ ಮಾತುಕತೆಗಳ ವೇಳೆ ರಾಜಕೀಯವನ್ನು ದೂರ ಇಡುತ್ತಿದ್ದಾರೆ. ಜಿಲ್ಲೆಯ ಆರೋಗ್ಯದ ಬಗ್ಗೆ ಕಾಳಜಿ ಇರುವವರು ಹೆಚ್ಚು ಒತ್ತು ಕೊಡಬೇಕಾದ ಜಾಗ ಇದು. ಮೂಲ ಕಾರಣ ಏನೆಂದು ಸ್ಪಷ್ಟವಾದರೆ ಆ ಬಳಿಕ ಪರಿಹಾರದ ದಾರಿಗಳನ್ನು ಕಂಡುಕೊಳ್ಳುವುದು ಸುಲಭವಾಗುತ್ತದೆ. ಆದ್ದರಿಂದ, ಸದ್ಯ ರಾಜಕೀಯ ಉದ್ದೇಶ ಇಲ್ಲದ ಜಿಲ್ಲೆಯ ಎಲ್ಲ ಸಂಘಸಂಸ್ಥೆಗಳು ಒಟ್ಟು ಸೇರಬಹುದಾದ ಸಂದರ್ಭವೊಂದನ್ನು ತುರ್ತಾಗಿ ಸೃಷ್ಟಿಸಿಕೊಳ್ಳಬೇಕು. ಹಿಂದೂ ಮತ್ತು ಮುಸ್ಲಿಮ್ ಸಂಘಸಂಸ್ಥೆಗಳು ಈ ವಿಷಯದಲ್ಲಿ ಮಡಿವಂತಿಕೆ ತೋರದೇ ಒಂದೇ ಕಡೆ ಸೇರಬೇಕು. ಸಮಿತಿ ರಚಿಸಬೇಕು. ಪ್ರಥಮವಾಗಿ- ಸೂಕ್ಷ್ಮವೆಂದು ನಂಬಲಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿಯ ಸಂಘಸಂಸ್ಥೆಗಳನ್ನು ಜೊತೆ ಸೇರಿಸಿಕೊಂಡು ಪ್ರತಿ ಮನೆ ಮನೆಯ ಬಾಗಿಲಿಗೂ ಹೋಗಬೇಕು. ಅವರೊಂದಿಗೆ ಮಾತಾಡಬೇಕು. ರಾಜಕೀಯದ ಒಳ ಉದ್ದೇಶಗಳನ್ನು ಯಾವ ಮುಲಾಜೂ ಇಲ್ಲದೇ ಮಾತಾಡುವಷ್ಟು ರಾಜಕೀಯೇತರ ಧ್ವನಿಯಾಗಿ ಈ ಸಮಿತಿಗಳು ಹೊರ ಹೊಮ್ಮಬೇಕು. ಪ್ರತಿ ಮನೆಯ ಸಮಸ್ಯೆಗಳಿಗೆ ಕಿವಿಯಾಗಬೇಕು. ಈ ಸಮಸ್ಯೆಗಳು ಪರಿಹಾರವಾಗಬೇಕಾದರೆ ಜಿಲ್ಲೆಯಲ್ಲಿ ಶಾಂತಿ ಇರಬೇಕಾದುದು ಎಷ್ಟು ಅಗತ್ಯ ಎಂಬುದನ್ನು ಮನವರಿಕೆ ಮಾಡಿಸಬೇಕು. ಎರಡನೆಯದಾಗಿ, ಇರಿತದಲ್ಲಿ ಭಾಗಿಯಾದ ಆರೋಪಿಗಳ ಮನೆಗಳಿಗೆ ಭೇಟಿ ಕೊಡಬೇಕು. ಆ ಮನೆಯವರಿಗೆ ವಾಸ್ತವವನ್ನು ತಿಳಿ ಹೇಳಬೇಕು. ಸಾಧ್ಯವಾದರೆ, ಆರೋಪಿಗಳನ್ನು ಭೇಟಿಯಾಗುವುದು ಬಹಳ ಬಹಳ ಪ್ರಯೋಜನಕಾರಿ. ಅವರನ್ನು ಭೇಟಿಯಾಗುವುದರಿಂದ ಆಗುವ ಇನ್ನೊಂದು ಲಾಭ ಏನೆಂದರೆ, ಅವರ ವಿಚಾರಧಾರೆಗಳೇನು ಎಂಬುದು ಗೊತ್ತಾಗುತ್ತದೆ. ಇನ್ನಷ್ಟು ಯುವಕರು ಅಂಥ ವಿಚಾರಧಾರೆಯೊಂದಿಗೆ ಬೆಳೆಯದಂತೆ ನೋಡಿಕೊಳ್ಳುವುದಕ್ಕೆ ರೂಪು-ರೇಷೆಯನ್ನು ಸಿದ್ಧಪಡಿಸುವುದಕ್ಕೆ ಅವಕಾಶವಾಗುತ್ತದೆ. ಇದೇ ವೇಳೆ, ಆರೋಪಿಗಳ ಮನೆಗೆ ನೀಡುವ ಭೇಟಿಯನ್ನು ಚಿತ್ರೀಕರಿಸಿಕೊಳ್ಳುವುದು ಬಹಳ ಅಗತ್ಯ. ಅವರ ಹೆತ್ತವರು, ಒಡಹುಟ್ಟಿದವರು ಮತ್ತಿತರರ ಮಾತುಗಳನ್ನು ಸಮಾಜದ ಮುಂದೆ ಇಡುವುದರಿಂದ ಸಾಕಷ್ಟು ಪ್ರಯೋಜನ ಇದೆ. ಸಾಧ್ಯವಾದರೆ ದೃಶ್ಯ ಮಾಧ್ಯಮಗಳೂ ಸೇರಿದಂತೆ ಎಲ್ಲ ಮಾಧ್ಯಮಗಳಲ್ಲಿ ಬಿತ್ತರಿಸುವುದಕ್ಕೆ ಅದರಿಂದ ಅನುಕೂಲವಾಗುತ್ತದೆ. ಜಿಲ್ಲೆಯ ಜನರನ್ನು ಅಂಥ ವೀಡಿಯೋಗಳು ಖಂಡಿತ ಪ್ರಭಾವಿತಗೊಳಿಸಬಹುದು. ವಾಟ್ಸ್ಯಾಪ್ ಮಾಧ್ಯಮವನ್ನೂ ಇದರ ಪ್ರಸಾರಕ್ಕಾಗಿ ಬಳಸಿಕೊಳ್ಳಬಹುದು. ಸಂತ್ರಸ್ತರು ಮತ್ತು ಆರೋಪಿ ಕುಟುಂಬಗಳ ಪ್ರತಿ ಮಾತು-ತುಡಿಗಳು ಸಮಾಜಕ್ಕೆ ಬಹಳ ದೊಡ್ಡ ಸಂದೇಶವನ್ನು ನೀಡಬಲ್ಲುದು.
ಆರೋಗ್ಯ ಮತ್ತು ಅನಾರೋಗ್ಯಗಳ ನಡುವೆ ಆಯ್ಕೆಯ ಪ್ರಶ್ನೆ ಬಂದರೆ ಯಾರೇ ಆಗಲಿ ಆರೋಗ್ಯವನ್ನೇ ಇಷ್ಟಪಡುತ್ತಾರೆ. ದ.ಕ. ಜಿಲ್ಲೆಯ ಮಂದಿ ಕೂಡ ಇದಕ್ಕೆ ಹೊರತಾಗಿಲ್ಲ. ಅನಾರೋಗ್ಯ ಪೀಡಿತ ಜಿಲ್ಲೆಯಿಂದ ಯಾರಿಗೂ ಸುಖ ಇಲ್ಲ. ಮಕ್ಕಳೂ ಸುಖವಾಗಿರಲ್ಲ. ಇದನ್ನು ಜನರಿಗೆ ಮನಮುಟ್ಟುವಂತೆ ಹೇಳುವ ಪ್ರಯತ್ನ ನಡೆಯಬೇಕಾಗಿದೆ. ಜಿಲ್ಲೆಯ ಸಂಘ ಸಂಸ್ಥೆಗಳು ತುರ್ತಾಗಿ ಈ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕಿದೆ.
ಆರೋಗ್ಯ ಮತ್ತು ಅನಾರೋಗ್ಯಗಳ ನಡುವೆ ಆಯ್ಕೆಯ ಪ್ರಶ್ನೆ ಬಂದರೆ ಯಾರೇ ಆಗಲಿ ಆರೋಗ್ಯವನ್ನೇ ಇಷ್ಟಪಡುತ್ತಾರೆ. ದ.ಕ. ಜಿಲ್ಲೆಯ ಮಂದಿ ಕೂಡ ಇದಕ್ಕೆ ಹೊರತಾಗಿಲ್ಲ. ಅನಾರೋಗ್ಯ ಪೀಡಿತ ಜಿಲ್ಲೆಯಿಂದ ಯಾರಿಗೂ ಸುಖ ಇಲ್ಲ. ಮಕ್ಕಳೂ ಸುಖವಾಗಿರಲ್ಲ. ಇದನ್ನು ಜನರಿಗೆ ಮನಮುಟ್ಟುವಂತೆ ಹೇಳುವ ಪ್ರಯತ್ನ ನಡೆಯಬೇಕಾಗಿದೆ. ಜಿಲ್ಲೆಯ ಸಂಘ ಸಂಸ್ಥೆಗಳು ತುರ್ತಾಗಿ ಈ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕಿದೆ.
No comments:
Post a Comment