Wednesday, 27 September 2017

ರಾಜಕಾರಣಿಗಳು ಬಯಸುವ ಭಾರತ-ಪಾಕ್

        ಭಾರತದ ರಾಜಕಾರಣಿಗಳು ಪಾಕಿಸ್ತಾನವನ್ನು ಪ್ರೀತಿಸುವಷ್ಟು ಬಹುಶಃ ಭಾರತೀಯರನ್ನೇ ಪ್ರೀತಿಸಲಾರರೇನೋ ಅನಿಸುತ್ತದೆ. ರಾಜಕಾರಣಿಗಳಿಗೆ ಅದರಲ್ಲೂ ಮುಖ್ಯವಾಗಿ ಆಡಳಿತ ಪಕ್ಷಕ್ಕೆ ಯಾವಾಗಲೂ ವೈರಿ ರಾಷ್ಟ್ರವೊಂದು ಕಡ್ಡಾಯವಾಗಿ ಇರಬೇಕಾಗುತ್ತದೆ. ಇದು ಭಾರತದ ರಾಜಕಾರಣಿಗಳ ಅಗತ್ಯ ಮಾತ್ರ ಅಲ್ಲ. ಜಾಗತಿಕ ರಾಷ್ಟ್ರಗಳ ಅಗತ್ಯವೂ ಹೌದು. ಅಮೇರಿಕವು ರಷ್ಯವನ್ನು ಮತ್ತು ರಷ್ಯವು ಅಮೇರಿಕವನ್ನು ಒಂದು ಕಾಲದಲ್ಲಿ ಹೇಗೆ ವೈರಿ ರಾಷ್ಟ್ರವಾಗಿ ಬಿಂಬಿಸುತ್ತಾ ತಂತಮ್ಮ ರಾಷ್ಟ್ರಗಳ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿದುವೋ ಮತ್ತ ಗದ್ದುಗೆಯನ್ನು ಉಳಿಸಿಕೊಳ್ಳುವುದಕ್ಕೆ ಹೇಗೆ ಈ ಹಗೆ ಭಾವವನ್ನು ಬಳಸಿಕೊಂಡವೋ ಅದರ ಅತ್ಯಂತ ನವೀನ ಮಾದರಿಯಾಗಿ ಭಾರತ ಮತ್ತು ಪಾಕಿಸ್ತಾನಗಳಿವೆ. ಭಾರತದ ಪಕ್ಕ ಪಾಕಿಸ್ತಾನ ಇರಬೇಕು ಅಥವಾ ಪಾಕಿಸ್ತಾನದ ಪಕ್ಕ ಭಾರತ ಇರಬೇಕು ಎಂಬುದನ್ನು ತೀರ್ಮಾನಿಸಿದ್ದು ಈ ಎರಡೂ ರಾಷ್ಟ್ರಗಳ ನಾಗರಿಕರೋ ಅಥವಾ ರಾಜಕಾರಣಿಗಳೋ ಅಲ್ಲ. ಅದು ಪ್ರಕೃತಿಯ ಕೊಡುಗೆ. ಆದರೆ, ಭಾರತ ಮತ್ತು ಪಾಕಿಸ್ತಾನಗಳು ಅಕ್ಕ-ಪಕ್ಕ ಸದಾ ಇರಲಿ ಎಂದು ಈ ಎರಡೂ ದೇಶಗಳ ರಾಜಕಾರಣಿಗಳು ಇವತ್ತು ಬಯಸುತ್ತಿರುವ ಸಾಧ್ಯತೆ ಖಂಡಿತ ಇದೆ. ಅವರು ಈ ನೆರೆ-ಹೊರೆಯನ್ನು ಮನಸಾರೆ ಆನಂದಿಸುತ್ತಿದ್ದಾರೆ. ಅವರ ಎಲ್ಲ ವೈಫಲ್ಯಗಳನ್ನು ತಕ್ಷಣಕ್ಕೆ ಸರಿಸಿ ಬಿಡುವ ಸಾಮಥ್ರ್ಯ ಈ ನೆರೆಹೊರೆಗಿದೆ. ಪಾಕಿಸ್ತಾನಕ್ಕೆ ಭಾರತದಲ್ಲಿ ಎಷ್ಟು ಬೆಂಬಲಿಗರಿದ್ದಾರೆ ಎಂಬುದನ್ನು 2014ರ ಲೋಕಸಭಾ ಚುನಾವಣೆ ಬಹಳ ದೊಡ್ಡ ಮಟ್ಟದಲ್ಲಿ ಸಾಬೀತುಪಡಿಸಿತು. ನರೇಂದ್ರ ಮೋದಿಯವರು ಬಹುತೇಕ ಪ್ರತಿ ಚುನಾವಣಾ ಸಭೆಯಲ್ಲೂ ಪಾಕಿಸ್ತಾನವನ್ನು ಪ್ರಸ್ತಾಪಿಸಿದರು. ಪ್ರಧಾನಿ ಮನ್‍ಮೋಹನ್ ಸಿಂಗ್‍ರ ವಿದೇಶಾಂಗ ನೀತಿಯನ್ನು ಅಣಕಿಸಿದರು. ಲವ್ ಲೆಟರ್ ವಿದೇಶ ನೀತಿ ಎಂದು ಟೀಕಿಸಿದರು. ಗಡಿಯಲ್ಲಿ ಉರುಳುವ ಭಾರತದ ಓರ್ವ ಯೋಧನ ತಲೆಗೆ ಪಾಕಿಸ್ತಾನದ 10 ಯೋಧರ ತಲೆಯನ್ನು ತರುವ ಅದ್ಭುತ ಯೋಜನೆಯನ್ನು ಅವರ ಪಕ್ಷ ಮತದಾರರ ಮುಂದಿಟ್ಟಿತು. ದಾವೂದ್ ಇಬ್ರಾಹೀಮ್‍ನನ್ನು ಭಾರತಕ್ಕೆ ಕರೆತರುವ ಭರವಸೆ ನೀಡಲಾಯಿತು. ಬಹುಶಃ ಬಿಜೆಪಿ ಕೊಡುತ್ತಿದ್ದ ಭರವಸೆಗಳನ್ನು ನಂಬುವುದಾದರೆ ಅದು ಅಧಿಕಾರಕ್ಕೆ ಬಂದ ತಕ್ಷಣ ಪಾಕ್‍ನ ವಿರುದ್ಧ ಯುದ್ಧ ಸಾರಿ ಬಿಡುತ್ತದೇನೋ ಎಂದೇ ಅಂದುಕೊಳ್ಳಬೇಕಿತ್ತು. ದುರಂತ ಏನೆಂದರೆ, ಚುನಾವಣೆಯ ಸಮಯದಲ್ಲಿ ಪಾಕ್‍ನ ನೆರಳನ್ನೂ ದ್ವೇಷಿಸುವ ರೀತಿಯಲ್ಲಿ ಮಾತಾಡುತ್ತಿದ್ದ ಬಿಜೆಪಿಯು ಗೆದ್ದ ಬಳಿಕ ಪಾಕ್ ಪ್ರಧಾನಿಯನ್ನೇ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿತು. ಆ ಬಳಿಕ ಪ್ರಧಾನಿ ನರೇಂದ್ರ ಮೋದಿಯವರೇ ಗುಟ್ಟಾಗಿ ಪಾಕಿಸ್ತಾನಕ್ಕೆ ತೆರಳಿ ಪ್ರಧಾನಿ ನವಾಝ್ ಶರೀಫ್‍ರ ಖಾಸಗಿ ಕುಟುಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅವರ ತಾಯಿಗೆ ಉಡುಗೊರೆಯನ್ನು ಕಳುಹಿಸಿದರು. ಹಾಗಂತ, ಈ ಎಲ್ಲ ಸಂದರ್ಭಗಳಲ್ಲಿ ಪಾಕಿಸ್ತಾನ ಬದಲಾಗಿತ್ತು ಎಂದಲ್ಲ. ಮನ್‍ಮೋಹನ್ ಸಿಂಗ್‍ರ ಕಾಲದಲ್ಲಿದ್ದ ಗಡಿ ಹಾಗೆಯೇ ಇತ್ತು. ಗಡಿಯಲ್ಲಿ ಯೋಧರ ಸಾವು, ಘರ್ಷಣೆ, ಒಳನುಸುಳುವಿಕೆಗಳೆಲ್ಲ ನಡೆಯುತ್ತಲೇ ಇದ್ದುವು. ಆದರೂ ನರೇಂದ್ರ ಮೋದಿ ನೇತೃತ್ವದ ಈ ಮೂರು ವರ್ಷಗಳ ಅವಧಿಯಲ್ಲಿ ಪಾಕಿಸ್ತಾನದ ವಿರುದ್ಧ ನಿರೀಕ್ಷಿತ ಯಾವ ಕ್ರಮವನ್ನೂ ಕೈಗೊಳ್ಳಲಾಗಿಲ್ಲ. ಕಾಶ್ಮೀರ ಈ ಹಿಂದೆಂದಿಗಿಂತಲೂ ಹೆಚ್ಚು ಇವತ್ತು ಉದ್ವಿಗ್ನ ಸ್ಥಿತಿಯಲ್ಲಿದೆ. ನೂರಕ್ಕಿಂತಲೂ ಅಧಿಕ ದಿನಗಳ ವರೆಗೆ ಕಾಶ್ಮೀರಿಗಳು ಪ್ರತಿಭಟನೆ ನಡೆಸಿದಂತಹ ಅಭೂತಪೂರ್ವ ಬೆಳವಣಿಗೆಯೂ ನಡೆಯಿತು. ಆದರೆ ಗಡಿಯಲ್ಲಿ ಮಾಮೂಲಾಗಿರುವ ಮತ್ತು ಎಲ್ಲ ಆಡಳಿತಗಳ ಕಾಲದಲ್ಲೂ ನಡೆದಿರುವ ಪ್ರತಿದಾಳಿಯನ್ನೇ ಸರ್ಜಿಕಲ್ ಸ್ಟ್ರೈಕ್ ಎಂಬ ಹೆಸರಲ್ಲಿ ವೈಭವೀಕರಿಸಿ ಹೇಳುವ ಪ್ರಯತ್ನ ಮಾಡಿದ್ದನ್ನು ಬಿಟ್ಟರೆ ಮೋದಿಯವರು ಪಾಕ್‍ನ ವಿರುದ್ಧ ಇನ್ನಾವ ಬಿಗು ಕ್ರಮವನ್ನೂ ಕೈಗೊಂಡಿಲ್ಲ. ಅದರ ಬದಲು ಮನ್‍ಮೋಹನ್ ಸಿಂಗ್ ಸರಕಾರಕ್ಕಿಂತ ತುಸು ಹೆಚ್ಚೇ ಅದು ಪಾಕ್ ಪ್ರೇಮಿ ನೀತಿಯನ್ನು ತಳೆದಿದೆ ಅನ್ನುವುದನ್ನು ಕಳೆದವಾರ ಕೇಂದ್ರ ಸರಕಾರದ ಗೃಹ ಇಲಾಖೆ ಬಿಡುಗಡೆಗೊಳಿಸಿದ ಅಂಕಿ-ಅಂಶಗಳು ಸ್ಪಷ್ಟಪಡಿಸಿವೆ. 2012-13ರಲ್ಲಿ ಮನ್‍ಮೋಹನ್ ಸಿಂಗ್ ಸರಕಾರವು ಪಾಕ್ ನಾಗರಿಕರಿಗಾಗಿ 1,32,590 ವಿಸಾಗಳನ್ನು ಮಂಜೂರು ಮಾಡಿತ್ತು. ಆದರೆ ನರೇಂದ್ರ ಮೋದಿ ಸರಕಾರವು 2015-16ರ ಅವಧಿಯಲ್ಲಿ 1,72,536 ವಿಸಾಗಳನ್ನು ಮಂಜೂರು ಮಾಡಿದೆ. ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ, ಮನ್‍ಮೋಹನ್ ಸಿಂಗ್ ಸರಕಾರವು 2011ರಲ್ಲಿ 48,640 ವಿಸಾಗಳನ್ನು, 2012ರಲ್ಲಿ 59,846 ಮತ್ತು 2013ರಲ್ಲಿ 72,744 ವಿಸಾಗಳನ್ನು ಮಂಜೂರು ಮಾಡಿದ್ದರೆ ಮೋದಿ ಸರಕಾರವು 2014ರಲ್ಲಿ 94,993 ಮತ್ತು 2015ರಲ್ಲಿ 72,543 ವಿಸಾಗಳನ್ನು ಮಂಜೂರು ಮಾಡಿದೆ. ಅಲ್ಲದೇ 2016ರಲ್ಲಿ 1,04,720 ಮಂದಿ ಪಾಕ್ ನಾಗರಿಕರು ಭಾರತಕ್ಕೆ ಭೇಟಿ ನೀಡಿರುವರು ಎಂಬ ವರದಿಯೂ ಇದೆ. ಒಂದು ಕಡೆ ಪಾಕಿಸ್ತಾನವನ್ನು ತೆಗಳುತ್ತಾ ಮತ್ತು ಪಾಕ್ ನಾಗರಿಕರನ್ನು ಭಯೋತ್ಪಾದಕರಂತೆ ಬಿಂಬಿಸುತ್ತಲೇ ಇನ್ನೊಂದು ಕಡೆ ಪಾಕಿಸ್ತಾನಿಯರನ್ನು ಭಾರತಕ್ಕೆ ಸ್ವಾಗತಿಸುವಲ್ಲಿ ಮನ್‍ಮೋಹನ್ ಸಿಂಗ್ ಸರಕಾರಕ್ಕಿಂತಲೂ ಹೆಚ್ಚು ಉತ್ಸಾಹ ತೋರುತ್ತಿರುವುದಕ್ಕೆ ಏನೆನ್ನಬೇಕು; ದ್ವಂದ್ವ, ಕಾಪಟ್ಯ, ಮೋಸ, ದಗಲ್ಬಾಜಿ.. ಎಂದರೆ ಸಾಕೇ? ತಮಾಷೆ ಏನೆಂದರೆ, ಪಾಕ್ ನಾಗರಿಕರಿಗೆ ಭಾರೀ ಸಂಖ್ಯೆಯಲ್ಲಿ ವಿಸಾ ಮಂಜೂರು ಮಾಡಿರುವ ಮಾಹಿತಿ ಬಿಡುಗಡೆಗೊಂಡ ದಿನವೇ ಕೇಂದ್ರದ ಸಾಮಾಜಿಕ ನ್ಯಾಯ ಖಾತೆಯ ಸಹಾಯಕ ಸಚಿವ ರಾಮದಾಸ್ ಅಠವಳೆ ಅವರ ಹೇಳಿಕೆಯೂ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ‘ಪಾಕಿಸ್ತಾನದ ವಿರುದ್ಧ ಯುದ್ಧ ಸಾರುವ ಸಮಯ ಬಂದಿದೆ..’ ಎಂದವರು ಹೇಳಿದ್ದಾರೆ. 2014ರ ಲೋಕಸಭಾ ಚುನಾವಣೆಯನ್ನು ಬಿಜೆಪಿ ಎದುರಿಸಿದ್ದೇ  ಯುದ್ಧದ ಭಾಷೆಯನ್ನು ಬಳಸಿ. ಆದರೆ ಕಳೆದ ಮೂರು ವರ್ಷಗಳ ಆಡಳಿತಾವಧಿಯಲ್ಲಿ ಆ ಭಾಷೆಗೆ ತದ್ವಿರುದ್ಧವಾಗಿ ಅದು ನಡೆದುಕೊಂಡಿದೆ. ಎಲ್ಲಿಯ ವರೆಗೆಂದರೆ, ವಿಸಾ ಮಂಜೂರಾತಿಯಲ್ಲೂ ಅದು ಮನ್‍ಮೋಹನ್ ಸಿಂಗ್ ಸರಕಾರವನ್ನು ಹಿಂದಿಕ್ಕಿದೆ. ಹೀಗಿರುತ್ತಾ, ಯುದ್ಧ ಸನ್ನಿಹಿತವಾಗಿದೆ ಅಂದರೆ ಏನರ್ಥ? ಇದು ಯಾರನ್ನು ಮೋಸಗೊಳಿಸುವ ಹೇಳಿಕೆ? ಈ ಹೇಳಿಕೆಯ ಅಗತ್ಯ ಈಗ ಏನಿತ್ತು? ಮೋದಿಯವರು ಚುನಾವಣಾ ಸಮಯದಲ್ಲಿ ನೀಡಿದ ಭರವಸೆಗಳ ಕುರಿತಂತೆ ಜನರು ನಿರಾಶರಾಗುತ್ತಿದ್ದಾರೆ ಎಂಬುದರ ಸೂಚನೆಯೇ ಈ ಹೇಳಿಕೆ? ಕಪ್ಪು ಹಣ ಮರಳಿ ಭಾರತಕ್ಕೆ ತರುವ ಭರವಸೆ, ನೋಟು ಅಮಾನ್ಯೀಕರಣದ ಸಮಯದಲ್ಲಿ ನೀಡಿದ ಭರವಸೆ, ಜಿಎಸ್‍ಟಿ ನೀತಿಗಳು ಬಿಜೆಪಿಯನ್ನು ನಂಬಿಕೆಗನರ್ಹ ಪಕ್ಪವಾಗಿ ಪರಿವರ್ತಿಸುತ್ತಿದೆ ಅನ್ನುವುದನ್ನು ಈ ಹೇಳಿಕೆ ಬಿಂಬಿಸುತ್ತಿದೆಯೇ? ಆ ಕಾರಣದಿಂದಲೇ ಚರ್ಚೆಯಲ್ಲೇ ಇಲ್ಲದ ಪಾಕಿಸ್ತಾನವನ್ನು ಅಠವಳೆ ಚರ್ಚೆಗೆ ಎಳೆದು ತಂದರೇ? ಬೆಲೆಯೇರಿಕೆಯ ಕುರಿತು ಜನರು ಚರ್ಚಿಸುತ್ತಿರುವ ಈ ಹೊತ್ತಿನಲ್ಲಿ ‘ಪಾಕ್‍ನ ವಿರುದ್ಧ ಯುದ್ಧ’ ಎಂಬ ಹಳೆ ಡಯಲಾಗನ್ನು ಮರು ಉಚ್ಚರಿಸಿದುದರ ಹಿಂದೆ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರ ಇದೆಯೇ? ಮುಂದಿನ ದಿನಗಳಲ್ಲಿ ಇನ್ನಷ್ಟು ಸಚಿವರು ಪಾಕ್ ಕೇಂದ್ರಿತ ಹೇಳಿಕೆಗಳನ್ನು ನೀಡುವರೇ? ‘ಗಡಿ ಉದ್ವಿಗ್ನ’ಗೊಂಡ ಒಂದಷ್ಟು ಸುದ್ದಿಗಳು ಮತ್ತೆ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಬಹುದೇ?
ಅಂದಹಾಗೆ, ಪಾಕಿಸ್ತಾನವು ಭಾರತದ ಶತ್ರುವಲ್ಲ ಅಥವಾ ಭಾರತವು ಪಾಕಿಸ್ತಾನದ ಶತ್ರುವೂ ಅಲ್ಲ. ನಿಜವಾದ ಶತ್ರುಗಳು ಎರಡೂ ದೇಶಗಳಲ್ಲಿರುವ ರಾಜಕಾರಣಿಗಳು. ಶತ್ರುತ್ವದ ಭಾಷೆಯಲ್ಲಿ ಮಾತಾಡುವ ರಾಜಕಾರಣಿಗಳನ್ನು ಮನೆಗಟ್ಟುವುದೇ ಇದಕ್ಕಿರುವ ಸೂಕ್ತ ಪರಿಹಾರ.


Saturday, 23 September 2017

ಸುಶ್ಮಿತಾಳ ಪ್ರಶ್ನೆಗೆ ನಮ್ಮಲ್ಲಿ ಏನುತ್ತರವಿದೆ?

     ಸುಶ್ಮಿತಾ ಆಚಾರ್ಯ ಎಂಬ 11 ವರ್ಷದ ಮಗು ದೊಡ್ಡಪ್ಪನ ಬೈಕಲ್ಲಿ ಕೂರುತ್ತದೆ. ಕಂಸಾಳೆ ನೃತ್ಯಪಟುವಾಗಿದ್ದ ಮಗುವಿಗೆ ಅಪ್ಪನ ಸೈಟು ನೋಡುವ ಆಸೆ. ಬಸ್ಸು ನಿಲ್ಲುತ್ತದೆ. ಹಿಂಬದಿಯಲ್ಲಿ ಸಾಗುತ್ತಿದ್ದ ಬೈಕೂ ನಿಲ್ಲುತ್ತದೆ. ಹಿಂದಿನಿಂದ ವೇಗವಾಗಿ ಬರುತ್ತಿದ್ದ ಲಾರಿಯೊಂದು ಬೈಕ್‍ಗೆ ಡಿಕ್ಕಿ ಹೊಡೆಯುತ್ತದೆ. ಬಸ್ಸು ಮತ್ತು ಲಾರಿಯ ನಡುವೆ ಸಿಲುಕಿಕೊಂಡ ಬೈಕ್‍ನಿಂದ ಮಗು ರಸ್ತೆಗೆ ಬೀಳುತ್ತದೆ. ಲಾರಿ ಮಗುವಿನ ಮೇಲೆ ಚಲಿಸುತ್ತದೆ.. ಮುಂದಿನದನ್ನು ಹೇಳಬೇಕಿಲ್ಲ. ಮಗು ಮೃತಪಡುತ್ತದೆ.
      ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ಕಳೆದವಾರ ಸಂಭವಿಸಿದ ಈ ಘಟನೆಯಿಂದ ಸುಶ್ಮಿತಾ, ಉಡುಪಿ ಮತ್ತು ಕಟಪಾಡಿ ಎಂಬ ನಾಮಪದಗಳನ್ನು ಕಳಚಿದರೆ, ಈ ಸುದ್ದಿ ಕರ್ನಾಟಕದ್ದಷ್ಟೇ ಆಗಿ ಉಳಿಯಲ್ಲ, ಇದು ತಮಿಳ್ನಾಡಿನದ್ದೂ ಆದೀತು, ದೆಹಲಿ, ಮಧ್ಯಪ್ರದೇಶ, ರಾಜಸ್ಥಾನದ್ದೂ ಆದೀತು. ಅಪಘಾತಗಳು ಈ ದೇಶದಲ್ಲಿ ಅಷ್ಟರ ಮಟ್ಟಿಗೆ ಸಾಮಾನ್ಯವಾಗಿದೆ. ಕಳೆದವಾರ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು 2016ರಲ್ಲಿ ಸಂಭವಿಸಿದ ಅಪಘಾತ ಮತ್ತು ಸಾವು-ನೋವುಗಳ ವಿವರವನ್ನು ದೇಶದ ಮುಂದಿಟ್ಟರು. ಈ ವಿವರಗಳು ಎಷ್ಟು ಭಯಾನಕವಾಗಿವೆಯೆಂದರೆ, ದೇಶದ ರಸ್ತೆಗಳನ್ನೆಲ್ಲ ಶಾಶ್ವತವಾಗಿ ಮುಚ್ಚಿಬಿಟ್ಟು ಕಾಲುದಾರಿಯನ್ನು ಆರಂಭಿಸಿ ಬಿಟ್ಟರೆ ಹೇಗೆ ಎಂದು ಚಿಂತಿಸುವಂತಾಗಿದೆ. 2016ರಲ್ಲಿ ಒಟ್ಟು 4.81 ಲಕ್ಷ ಅಪಘಾತ ಪ್ರಕರಣಗಳು ನಡೆದಿವೆ. ಇದು ಅಧಿಕೃತ ಪ್ರಕರಣಗಳು ಮಾತ್ರ. ಪೊಲೀಸ್ ಠಾಣೆಯನ್ನು ಹತ್ತದ ಸಣ್ಣ-ಪುಟ್ಟ ಅಪಘಾತ ಪ್ರಕರಣಗಳು ಈ ಲೆಕ್ಕದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಒಟ್ಟು 1.51 ಲಕ್ಷ ಮಂದಿ ಅಪಘಾತಗಳಿಂದಾಗಿ ಸಾವಿಗೀಡಾಗಿದ್ದಾರೆ. ಅಪಘಾತಗಳಲ್ಲಿ ಭಾಗಿಯಾದ ಹೆಚ್ಚಿನ ಚಾಲಕರ ವಯಸ್ಸು 25ರಿಂದ 35 ವರ್ಷಗಳ ಒಳಗೆ. ಸಾವಿಗೀಡಾದವರಲ್ಲಿ 85% ಮಂದಿಯ ವಯಸ್ಸು 18ರಿಂದ 60 ವರ್ಷದೊಳಗೆ. 18ರಿಂದ 60 ಎಂಬ ವಯಸ್ಸು ಯಾವುದೇ ದೇಶದ ಪಾಲಿಗೆ ಅತೀ ಮಹತ್ವದ ವಯಸ್ಸು. ಅದು ದುಡಿಯುವ ವಯಸ್ಸು. ಕೌಶಲ್ಯವನ್ನು ಅಭಿವೃದ್ಧಿಪಡಿಸುವ ವಯಸ್ಸು. ದೇಶದ ಸಂಪನ್ಮೂಲವಾಗಬಹುದಾದ ವಯಸ್ಸು. ದುರಂತ ಏನೆಂದರೆ, ಅಪಘಾತಗಳಲ್ಲಿ ಸಾವಿಗೀಡಾದ ಹೆಚ್ಚಿನವರ ವಯಸ್ಸು 18 ರಿಂದ 60 ಎಂದು ಮಾತ್ರವಲ್ಲ, ಅಪರಾಧಿಗಳಾಗಿ ಜೈಲು ಸೇರಿದವರಲ್ಲಿ ಹೆಚ್ಚಿನವರು 25 ರಿಂದ 35 ವಯಸ್ಸಿನ ಒಳಗಿನವರು ಎಂಬುದು. ದ್ವಿಚಕ್ರ ವಾಹನವನ್ನು ಬಳಸುವುದು ಬಹುತೇಕ ಯುವ ಸಮೂಹ. ಅಪಘಾತಗಳಲ್ಲಿ ಸಿಂಹಪಾಲನ್ನು ಈ ದ್ವಿಚಕ್ರಗಳೇ ಹೊತ್ತುಕೊಂಡಿವೆ- 34.8%. 2015ಕ್ಕೆ ಹೋಲಿಸಿದರೆ 2016ರಲ್ಲಿ ಸಾವಿಗೀಡಾದವರ ಸಂಖ್ಯೆ 3% ಹೆಚ್ಚಿದೆ. ಒಟ್ಟು ಅಪಘಾತ ಪ್ರಕರಣಗಳಲ್ಲಿ ಶೇ. 84 ರಷ್ಟು ಅಪಘಾತಗಳಿಗೆ ಚಾಲಕರ ಮಿತಿ ಮೀರಿದ ವೇಗವೇ ಕಾರಣ ಎಂದೂ `Road Accidents in India -2016’ ಎಂಬ ಶೀರ್ಷಿಕೆಯಲ್ಲಿ ಗಡ್ಕರಿಯವರು ಬಿಡುಗಡೆಗೊಳಿಸಿದ ವರದಿಯಲ್ಲಿದೆ. ಇದನ್ನು ಹೇಗೆ ಜೀರ್ಣಿಸಿಕೊಳ್ಳುವುದು?
       ಭಾರತದ ರಸ್ತೆಗಳನ್ನು ಜೈಶ್ ಮುಹಮ್ಮದ್, ಇಂಡಿಯನ್ ಮುಜಾಹಿದೀನ್, ಮಾವೋವಾದಿ ನಕ್ಸಲ್ ಮುಂತಾದ ನಿಷೇಧಿತ ಭಯೋತ್ಪಾದಕ ಗುಂಪುಗಳೇನೂ ನಿರ್ವಹಿಸುತ್ತಿಲ್ಲ. ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರ ಹೆದ್ದಾರಿ ಎಂದು ವಿಭಜಿಸಿ ಒಟ್ಟು ರಸ್ತೆಗಳ ನಿರ್ವಹಣೆ ಮಾಡುತ್ತಿರುವುದು ನಮ್ಮ ಸರಕಾರಗಳೇ. ಒಂದುವೇಳೆ, ರಸ್ತೆಯಲ್ಲಿ ಹುದುಗಿಸಿಟ್ಟಿರುವ ಬಾಂಬ್‍ಗಳು ಸ್ಫೋಟಗೊಂಡು ಅಪಘಾತಗಳಾಗುತ್ತಿವೆ ಎಂದಾಗಿದ್ದರೆ ಭಯೋತ್ಪಾದನಾ ತಂಡಗಳ ತಲೆಗೆ ಕಟ್ಟಿಯಾದರೂ ಈ ಸಾವುಗಳ ಹೊಣೆಯಿಂದ ಸರಕಾರಗಳಿಗೆ ತಪ್ಪಿಸಿಕೊಳ್ಳಬಹುದಿತ್ತು. ಆದರೆ ನಮ್ಮ ರಸ್ತೆಗಳೆಂದೂ ಹಾಗೆ ಸಿಡಿದಿಲ್ಲ. ಯಾವ ಸವಾರನ ಮೇಲೂ ಅದು ದಾಳಿ ಮಾಡಿಲ್ಲ. ಹೀಗಿರುವಾಗ ಒಂದೂವರೆ ಲಕ್ಷದಷ್ಟು ಮಂದಿಯನ್ನು ಬರೇ ಒಂದೇ ವರ್ಷದಲ್ಲಿ ಸಾಯಿಸಿದ ಹೊಣೆಯನ್ನು ಯಾರು ಹೊರಬೇಕು? 25ರಿಂದ 35 ವರ್ಷದೊಳಗಿನ ಚಾಲಕರೇ, ಸಾವಿಗೀಡಾದವರೇ, ವಾಹನಗಳೇ? ಒಂದು ಕಡೆ ಬಯಲುಮುಕ್ತ ಶೌಚಾಲಯಕ್ಕಾಗಿ ಸರಕಾರದ ವತಿಯಿಂದ ಗಂಭೀರ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಜನರ ಆರೋಗ್ಯವೇ ಇದರ ಪ್ರಧಾನ ಗುರಿ. ಇನ್ನೊಂದು ಕಡೆ ಸ್ವಚ್ಛ ಭಾರತ ಅಭಿಯಾನಗಳೂ ನಡೆಯುತ್ತಿವೆ. ಇದರ ಗುರಿಯೂ ಆರೋಗ್ಯಪೂರ್ಣ ಪರಿಸರವೇ. ಜನರ ಆರೋಗ್ಯಕ್ಕಾಗಿ ಮತ್ತು ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕಾಗಿ ವರ್ಷಂಪ್ರತಿ ನಮ್ಮ ಸರಕಾರಗಳು ಕೋಟ್ಯಾಂತರ ರೂಪಾಯಿಯನ್ನು ವ್ಯಯ ಮಾಡುತ್ತಿವೆ. ಗಂಗಾನದಿಯನ್ನು ಸ್ವಚ್ಛಗೊಳಸುವುದು ಕೂಡ ಈ ಅಭಿಯಾನದ ಒಂದು ಭಾಗ. ಗಂಗೆ ಮಲಿನವಾಗುವುದೆಂದರೆ, ಆ ನದಿಯ ತಟದಲ್ಲಿರುವ ಲಕ್ಷಾಂತರ ಕುಟುಂಬಗಳ ಆರೋಗ್ಯ ಮಲಿನವಾಗುವುದು ಎಂದರ್ಥ. ಜನರ ಆರೋಗ್ಯಕ್ಕಾಗಿ ಇಷ್ಟೆಲ್ಲ ಕಷ್ಟಪಟ್ಟು ಸರಕಾರಗಳು ಹಣ ವ್ಯಯಿಸುತ್ತಿರುವಾಗ ಇನ್ನೊಂದು ಕಡೆ ಇದೇ ಆರೋಗ್ಯವಂತ ಮತ್ತು ಬಹುಮುಖ್ಯವಾಗಿ ಯುವಸಮೂಹ ರಸ್ತೆಯಲ್ಲಿ ಹೆಣವಾಗುವುದನ್ನು ಏನೆಂದು ಕರೆಯಬೇಕು? ಆರೋಗ್ಯವಂತರಾದ ಮಂದಿ ಪ್ರತಿದಿನ ಅಪಘಾತಕ್ಕೆ ಸಿಲುಕಿ ದೇಶದ ಸಂಪನ್ಮೂಲ ಪಟ್ಟಿಯಿಂದ ಹೊರಬೀಳುತ್ತಿರುವುದಕ್ಕೆ ಏನು ಪರಿಹಾರವಿದೆ? ಇದಕ್ಕೆ ಬಾಯಿಬಾರದ ರಸ್ತೆಗಳನ್ನು ದೂರಿ ಯಾವ ಪ್ರಯೋಜನವೂ ಇಲ್ಲ. ಇಂಥ ರಸ್ತೆಗಳನ್ನು ನಿರ್ಮಿಸಿದವರು, ರಸ್ತೆ ಸಾರಿಗೆ ಅಧಿಕಾರಿಗಳು, ರಸ್ತೆ ಸುರಕ್ಷಿತಾ ನಿಯಮಗಳನ್ನು ಉಲ್ಲಂಘಿಸಿದ ಚಾಲಕರ ಮೇಲೆ ಕಠಿಣ ಕ್ರಮ ಕೈಗೊಳ್ಳದವರು, ಅಧಿಕಾರಶಾಹಿಗಳು, ಭ್ರಷ್ಟತನ, ಲಂಚಗುಳಿತನ, ವ್ಯವಸ್ಥೆಯ ಬೇಜವಾಬ್ದಾರಿತನ.. ಎಲ್ಲವೂ ಈ ಸಾವುಗಳ ಹೊಣೆಯನ್ನು ಹೊತ್ತುಕೊಳ್ಳಬೇಕು. ಈ ಸಾವುಗಳನ್ನು ಈ ಎಲ್ಲರೂ ಸೇರಿಕೊಂಡು ನಡೆಸಿರುವ ಹತ್ಯೆಯೆಂದೇ ನಾವು ಪರಿಗಣಿಸಬೇಕು. ಅಂದಹಾಗೆ, ಅಪಘಾತಗಳನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಿಲ್ಲ ಎಂಬುದರ ಅರ್ಥ- ಈಗ ನಡೆಯುತ್ತಿರುವ ಅಪಘಾತಗಳೆಲ್ಲ ತಪ್ಪಿಸಲಸಾಧ್ಯವಾದುದು ಎಂದಲ್ಲ. ವಾಹನಗಳಿಂದ ತೆರಿಗೆಯ ರೂಪದಲ್ಲಿ ಅಪಾರ ಪ್ರಮಾಣದಲ್ಲಿ ದುಡ್ಡು ಸಂಗ್ರಹಿಸುವ ಸರಕಾರಗಳು ಆ ಹಣದಿಂದ ಸಮರ್ಪಕ ರಸ್ತೆ ನಿರ್ಮಾಣಕ್ಕಾಗಿ ವ್ಯಯ ಮಾಡುವ ಮೊತ್ತವೆಷ್ಟು ಎಂಬುದು ಮೊದಲಾಗಿ ಬಹಿರಂಗಕ್ಕೆ ಬರಬೇಕು. ರಸ್ತೆ ತೆರಿಗೆಯ ಮೊದಲ ಹಕ್ಕುದಾರ ರಸ್ತೆಗಳೇ. ಸುರಕ್ಷಿತ ಮತ್ತು ಸಂಚಾರಯೋಗ್ಯ ರಸ್ತೆಗಳ ನಿರ್ಮಾಣದ ಹೊಣೆಯನ್ನು ಸಂಪೂರ್ಣವಾಗಿ ಸರಕಾರಗಳೇ ಹೊತ್ತುಕೊಳ್ಳಬೇಕು. ಅಪಘಾತದ ಮೂಲಕ ಆಗುವ ಪ್ರತಿ ಸಾವಿಗೂ ಸರಕಾರ ನಡೆಸುವ ಹತ್ಯೆಯೆಂಬಷ್ಟು ಗಂಭೀರವಾಗಿ ಸಮಾಜ ಪ್ರತಿಕ್ರಿಯಿಸಬೇಕು. ಸುರಕ್ಷಿತ ರಸ್ತೆ ನಿರ್ಮಾಣದಲ್ಲಿ ವ್ಯವಸ್ಥೆ ಅಸಡ್ಡೆ ತೋರಿದರೆ ಜನರು ತೆರಿಗೆ ಪಾವತಿಯನ್ನು ತಡೆ ಹಿಡಿಯಬೇಕು. ‘ತೆರಿಗೆ ತಡೆ’ ಚಳವಳಿ ಎಲ್ಲೆಡೆಯೂ ಕಾಣಿಸಿಕೊಳ್ಳಬೇಕು. ಪ್ರತಿವರ್ಷ ಒಂದೂವರೆ ಲಕ್ಷದಷ್ಟು ಮಂದಿ ರಸ್ತೆಯಲ್ಲಿ ಹೆಣವಾಗುತ್ತಿರುವುದನ್ನು ಸಹಜ ಸಾವಾಗಿ ಪರಿಗಣಿಸಲು ಖಂಡಿತ ಸಾಧ್ಯವಿಲ್ಲ. ಎಲ್ಲೆಲ್ಲ ಲೋಪ ಸಂಭವಿಸಿದೆಯೋ ಅಲ್ಲೆಲ್ಲ ಲೋಪ ತಿದ್ದುವ ತುರ್ತು ಕ್ರಮಗಳನ್ನು ಸರಕಾರಗಳು ಕೈಗೊಳ್ಳಬೇಕು. ಇನ್ನಷ್ಟು ಸುಶ್ಮಿತಾರು ನಮ್ಮನ್ನು ಮೌನವಾಗಿಸುವ ಮೊದಲು ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದೊಂದು ದಿನ ಸಾರಿಗೆ ಸಚಿವರನ್ನೇ ಜನರು ‘ಭಯೋತ್ಪಾದಕ’ ಎಂದು ಕರೆದು ಕೇಸು ದಾಖಲಿಸಿಯಾರು.

Monday, 11 September 2017

ವೃದ್ಧಾಶ್ರಮ ಪರಿಹಾರವಾಗುವ ಮೊದಲು...

      ಏಜ್‍ವೆಲ್ ಫೌಂಡೇಶನ್ ಎಂಬ ಸಂಸ್ಥೆಯು ವೃದ್ಧರಿಗೆ ಸಂಬಂಧಿಸಿ 2015ರಲ್ಲಿ ಬಿಡುಗಡೆಗೊಳಿಸಿದ Human Rights of elderly in India: A critical reflection on social Development ಎಂಬ ಹೆಸರಿನ ಸಮೀಕ್ಷಾ ವರದಿಯನ್ನು ಗಮನಿಸುವಾಗ ಕಳೆದವಾರ ಸುಪ್ರೀಮ್ ಕೋರ್ಟ್ ನೀಡಿದ ಆದೇಶವು ಮಹತ್ವಪೂರ್ಣವಾಗಿ ಕಾಣುತ್ತದೆ. ಎಲ್ಲ ಜಿಲ್ಲೆಗಳ ಪ್ರತಿಯೊಂದು ವೃದ್ಧಾಶ್ರಮದ ಸ್ಥಿತಿಗತಿಯ ಕುರಿತು ವರದಿ ನೀಡುವಂತೆ ಸು. ಕೋರ್ಟು ದೇಶದ ಎಲ್ಲ ರಾಜ್ಯಗಳಿಗೆ ಆದೇಶ ನೀಡಿದೆ. ರಾಜ್ಯದ ಸಚಿವ ಸಂಪುಟ ವಿಸ್ತರಣೆ, ಬಾಬಾ ರಾಮ್-ರಹೀಮ್, ಜಿಡಿಪಿ ಕುಸಿತ, ನೋಟು ಅಮಾನ್ಯೀಕರಣದ ವೈಫಲ್ಯಗಳ ಚರ್ಚೆಯಲ್ಲಿ ಬಹುತೇಕ ಸುದ್ದಿಯಾಗದೇ ಹೋದ ಈ ಆದೇಶವು ಸುಮಾರು 10 ಕೋಟಿಗಿಂತಲೂ ಅಧಿಕ ವೃದ್ಧರನ್ನು ಹೊಂದಿರುವ ದೇಶವೊಂದರಲ್ಲಿ ಚರ್ಚೆಯಾಗದೇ ಹೋಗುವುದು ಅತ್ಯಂತ ವಿಷಾದಕರ.
     ಹಿರಿಯರನ್ನು ಗೌರವದಿಂದ ಕಾಣುವ ಪರಂಪರೆಯೊಂದು ಈ ದೇಶಕ್ಕಿದೆ. ಮಾತೃ ದೇವೋಭವ, ಪಿತೃ ದೇವೋಭವ ಎಂಬ ಪದಗುಚ್ಛ ಈ ದೇಶದಲ್ಲಿ ಪ್ರಚಲಿತದಲ್ಲಿದೆ. ತಂದೆ ಮತ್ತು ತಾಯಿಯು ದೇವನಿಗೆ ಸಮಾನವೆಂಬಷ್ಟು ಗೌರವಾರ್ಹ ಭಾವನೆಯು ಈ ದೇಶದ ಸಂಸ್ಕೃತಿಯ ಭಾಗವಾಗಿ ಬಿಟ್ಟಿದೆ. ಆದ್ದರಿಂದಲೋ ಏನೋ ಮುಂದುವರಿದ ಮತ್ತು ಜನಸಂಖ್ಯೆಯಲ್ಲಿ ತೀರಾ ಕಡಿಮೆ ಇರುವ ರಾಷ್ಟ್ರಗಳಿಗೆ ಹೋಲಿಸಿದರೆ, ಜನಸಂಖ್ಯೆಯಲ್ಲಿ ಎಷ್ಟೋ ಪಾಲು ಅಧಿಕ ಇರುವ ಭಾರತದಲ್ಲಿ ವೃದ್ಧಾಶ್ರಮಗಳು ಕಡಿಮೆ. ಎಲ್ಲ ರಾಜ್ಯಗಳಲ್ಲಿರುವ ಅಧಿಕೃತ ವೃದ್ಧಾಶ್ರಮಗಳ ಸಂಖ್ಯೆ 500ರನ್ನು ಮೀರುವುದಿಲ್ಲ. 10 ಕೋಟಿಗಿಂತಲೂ ಅಧಿಕ ವೃದ್ಧರಿರುವ ದೇಶವೊಂದಕ್ಕೆ 500ರಷ್ಟು ವೃದ್ಧಾಶ್ರಮಗಳು ಸಾಲಬಹುದೇ ಎಂಬುದು ಒಂದು ಪ್ರಶ್ನೆಯಾದರೆ, ವೃದ್ಧರಿಗೆ ವೃದ್ಧಾಶ್ರಮಗಳ ಅಗತ್ಯವಿದೆಯೇ ಎಂಬ ಪ್ರಶ್ನೆಯೂ ಇದರ ಜೊತೆಜೊತೆಗೇ ಹುಟ್ಟಿಕೊಳ್ಳುತ್ತದೆ.
       ಹುಟ್ಟುವಾಗ ಯಾರೂ ವೃದ್ಧರಾಗಿ ಹುಟ್ಟುವುದಿಲ್ಲ. ಮಗುತನ, ಹದಿಹರೆಯ, ಯೌವನ, ನಡುವಯಸ್ಸನ್ನು ದಾಟಿಯೇ ಪ್ರತಿಯೊಬ್ಬರೂ ವೃದ್ಧಸ್ಥಿತಿಗೆ ತಲುಪುತ್ತಾರೆ. ಇದೊಂದು ಪ್ರಕ್ರಿಯೆ. ಮಗುವಾಗಿದ್ದವರು ವಿವಿಧ ಹಂತಗಳನ್ನು ದಾಟಿ ವೃದ್ಧಾವಸ್ಥೆಗೆ ತಲುಪುವಾಗ ಅವರ ಮಕ್ಕಳು ಅವರನ್ನು ಈ ಪ್ರಕ್ರಿಯೆಯಲ್ಲಿ ಹಿಂಬಾಲಿಸುತ್ತಾ ಇರುತ್ತಾರೆ. ಅಪ್ಪ ಮತ್ತು ಅಮ್ಮ ನಡುವಯಸ್ಸನ್ನು ದಾಟುವಾಗ ಅವರ ಮಕ್ಕಳು ಹದಿಹರೆಯಕ್ಕೋ ಅದಕ್ಕಿಂತ ಸಣ್ಣ ಪ್ರಾಯಕ್ಕೋ ತಲುಪಿರುತ್ತಾರೆ. ಹೆತ್ತವರು ದುಡಿಯುವುದು, ತಮ್ಮ ಇಷ್ಟಗಳನ್ನು ಪೂರೈಸುವುದು, ಶಾಲಾ ಖರ್ಚು ವೆಚ್ಚವನ್ನು ನೋಡಿಕೊಳ್ಳುವುದು, ಸುತ್ತಾಡಿಸುವುದು.. ಇತ್ಯಾದಿಗಳು ಪ್ರತಿದಿನ ಈ ಮಕ್ಕಳ ಕಣ್ಣೆದುರಲ್ಲೇ ನಡೆಯುತ್ತಿರುತ್ತವೆ. ಆದ್ದರಿಂದ ಹೆತ್ತವರು ವೃದ್ಧಾಪ್ಯಕ್ಕೆ ತಲುಪುವುದೆಂಬುದು ದಿಢೀರ್ ಪ್ರಕ್ರಿಯೆಯಲ್ಲ. ಹೆತ್ತವರನ್ನು ಆ ಸ್ಥಿತಿಯಲ್ಲಿ ನೋಡುವುದಕ್ಕೆ ನಾವಿನ್ನೂ ಮಾನಸಿಕವಾಗಿ ಸಜ್ಜಾಗಿಲ್ಲ ಎಂದು ಮಕ್ಕಳು ಸಬೂಬು ಹೇಳುವಂತೆಯೂ ಇಲ್ಲ. ಪವಿತ್ರ ಕುರ್‍ಆನ್ ಅಂತೂ ವೃದ್ಧ ಹೆತ್ತವರ ಆರೈಕೆಯ ಸಂಪೂರ್ಣ ಹೊಣೆಯನ್ನು ಅವರ ಮಕ್ಕಳ ಮೇಲೆ ಹೇರಿದೆ. ಹೆತ್ತವರು ತಮ್ಮ ಮಕ್ಕಳನ್ನು ಶಿಶು ಪ್ರಾಯದಲ್ಲಿ ಹೇಗೆ ಆರೈಕೆ ಮಾಡಿದ್ದರೋ ಮತ್ತು ಯಾವ ಪ್ರೇಮಭಾವವನ್ನು ಹೊಂದಿದ್ದರೋ ಅದೇ ರೀತಿಯಲ್ಲಿ ಆ ಮಕ್ಕಳು ವೃದ್ಧರಾದ ತಮ್ಮ ಹೆತ್ತವರನ್ನು ಆರೈಕೆ ಮಾಡಬೇಕೆಂದು ಅದು ತಾಕೀತು ಮಾಡಿದೆ. ಎಲ್ಲಿಯ ವರೆಗೆಂದರೆ, ಎಷ್ಟೇ ದೊಡ್ಡ ಧರ್ಮಿಷ್ಟನಾದರೂ ಆತ ತನ್ನ ಹೆತ್ತವರ ಕೋಪಕ್ಕೆ ಗುರಿಯಾಗಿದ್ದರೆ ಸ್ವರ್ಗ ಪಡೆಯಲಾರ ಎಂದು ಕಟುವಾಗಿ ಎಚ್ಚರಿಸುವಷ್ಟು. ಹೆತ್ತವರ ಬಗ್ಗೆ ‘ಛೆ’ ಎಂಬ ತಿರಸ್ಕಾರದ ಧ್ವನಿಯನ್ನೂ ಉದ್ಘರಿಸಬಾರದು ಅನ್ನುವಷ್ಟು. ಹಾಗಂತ, ಹೆತ್ತವರನ್ನು ಗೌರವಿಸುವಂತೆ ತಾಕೀತು ಮಾಡಿರುವುದು ಪವಿತ್ರ ಕುರ್‍ಆನ್ ಮಾತ್ರವಲ್ಲ, ಹಿಂದೂ ಧರ್ಮದಲ್ಲೂ ಇದಕ್ಕೆ ನಿದರ್ಶನಗಳಿವೆ. ಶ್ರವಣಕುಮಾರನ ಕತೆ ಬಹುತೇಕ ಜನಜನಿತ. ಆದರೆ ಏಜ್‍ವೆಲ್ ಫೌಂಡೇಶನ್ ನೀಡಿರುವ ವರದಿ ಮತ್ತು ಮಾಧ್ಯಮಗಳಲ್ಲಿ ನಾವು ಆಗಾಗ ಓದುತ್ತಿರುವ ಸುದ್ದಿಗಳನ್ನು ಪರಿಗಣಿಸಿದರೆ, ಈ ಪರಂಪರೆಯಲ್ಲಿ ಬಿರುಕು ಮೂಡಿರುವುದು ಹಾಗೂ ತೇಪೆ ಹಚ್ಚಲಾಗದಷ್ಟು ಅವು ಅಪಾಯಕಾರಿ ಹಂತಕ್ಕೆ ತಲುಪುತ್ತಿರುವುದು ಸ್ಪಷ್ಟವಾಗುತ್ತಿದೆ. ದೇಶದ್ಯಾಂತ ಪ್ರತಿ ಮೂವರು ವೃದ್ಧರಲ್ಲಿ ಒಬ್ಬರು ತಮ್ಮ ಕುಟುಂಬಸ್ಥರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎಂದು ಏಜ್‍ವೆಲ್ ಫೌಂಡೇಶನ್ ಬಿಡುಗಡೆ ಮಾಡಿರುವ ವರದಿ ಹೇಳುತ್ತದೆ. ಪ್ರತಿ ಮೂವರಲ್ಲಿ ಓರ್ವ ವೃದ್ಧರು ದೈಹಿಕವಾಗಿ ಹಿಂಸೆಗೆ ಒಳಗಾಗುತ್ತಾರೆ ಮತ್ತು ನಿಂದನೀಯ ಮಾತುಗಳನ್ನು ಆಲಿಸುತ್ತಾರೆ ಎಂದು ವರದಿ ವಿವರಿಸಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ದೇಶಾದ್ಯಂತದ ಸುಮಾರು 5 ಸಾವಿರ ಮಂದಿಯನ್ನು ಭೇಟಿಯಾಗಿ ತಯಾರಿಸಲಾದ ವರದಿ ಇದು. 2490 ಮಂದಿ ಪುರುಷರು ಮತ್ತು 2510 ಮಂದಿ ಮಹಿಳೆಯರನ್ನು ಈ ವರದಿ ತಯಾರಿಕೆಯ ವೇಳೆ ಭೇಟಿ ಮಾಡಲಾಗಿದೆ. ನಗರ ಪ್ರದೇಶದ ವೃದ್ಧರಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದ ವೃದ್ಧರೇ ಹೆಚ್ಚು ಸುರಕ್ಷಿತರು ಎಂದೂ ಹೇಳಲಾಗಿದೆ. ಅಂದಹಾಗೆ, 10 ಕೋಟಿಗಿಂತಲೂ ಅಧಿಕ ವೃದ್ಧರಿರುವ ದೇಶದಲ್ಲಿ ಬರೇ 5 ಸಾವಿರ ಮಂದಿಯ ಅಭಿಪ್ರಾಯಗಳು ಹೇಗೆ 10 ಕೋಟಿಯನ್ನು ಪ್ರತಿನಿಧಿಸಬಲ್ಲುದು ಎಂಬ ಪ್ರಶ್ನೆಯ ಆಚೆಗೆ ಈ ವರದಿಯ ಮೇಲೆ ಈ ದೇಶದಲ್ಲಿ ವಿಶ್ಲೇಷಣೆ ನಡೆಯಬೇಕು. ವೃದ್ಧರು ತಮ್ಮ ವಯಸ್ಸನ್ನು ಭಾರವಾಗಿ ನೋಡದಂಥ ಸೌಖ್ಯ ವಾತಾವರಣವನ್ನು ನಿರ್ಮಿಸುವುದು ಹೇಗೆ? ಪ್ರತಿಭಟನೆ ಮಾಡುವಂಥ ವಯಸ್ಸು ಅವರದಲ್ಲ. ಇನ್ನೊಬ್ಬರೊಂದಿಗೆ ದುಮ್ಮಾನ ಹೇಳಿಕೊಳ್ಳುವುದು ಅನೇಕ ಬಾರಿ ಅವರ ಪಾಲಿಗೆ ಅಪಾಯಕಾರಿಯಾಗಿರುತ್ತದೆ. ಆದ್ದರಿಂದಲೇ ಹೆಚ್ಚಿನ ಬಾರಿ ಅವರ ಸಮಸ್ಯೆಗಳು ಹೊರ ಜಗತ್ತಿನ ಮುಂದೆ ತೆರೆದುಕೊಳ್ಳುವುದೇ ಇಲ್ಲ. ಇಂಥ ಸ್ಥಿತಿಯಲ್ಲಿ, ವೃದ್ಧರಿಗೆ ಸೌಖ್ಯ ಭಾವ ಒದಗಿಸಿಕೊಡುವ ವಿಧಾನ ಯಾವುದು? ವೃದ್ಧಾಶ್ರಮಗಳಲ್ಲಿ ಇದನ್ನು ಹುಡುಕಬಹುದೇ? ಅದು ಅವರಿಗೆ ನೆಮ್ಮದಿಯನ್ನು ಕೊಡಬಹುದೇ? ದೇಶದ  ವೃದ್ಧಾಶ್ರಮಗಳ ಪರಿಸ್ಥಿತಿ ಹೇಗಿದೆ, ಅವು ವೃದ್ಧರನ್ನು ಸೇರಿಸಿಕೊಳ್ಳುವ ಮೊದಲು ಏನೆಲ್ಲ ಷರತ್ತುಗಳನ್ನು ಹಾಕುತ್ತವೆ, ಆ ಷರತ್ತುಗಳನ್ನು ಪೂರೈಸಲು ಎಷ್ಟು ವೃದ್ಧರು ಶಕ್ತರಿದ್ದಾರೆ, ಪೂರೈಸಲಾಗದ ಷರತ್ತಿನ ಕಾರಣಕ್ಕಾಗಿಯೇ ಎಷ್ಟು ವೃದ್ಧರು ಬೀದಿಗೆ ಬಿದ್ದಿದ್ದಾರೆ, ವೃದ್ಧಶ್ರಮದಲ್ಲಿರುವ ವೃದ್ಧರ ಅಭಿಪ್ರಾಯಗಳೇನು... ಇತ್ಯಾದಿಗಳೂ ಮುಖ್ಯವಾಗುತ್ತವೆ. ಸುಪ್ರೀಮ್ ಕೋರ್ಟ್‍ನ ಆದೇಶ ಪ್ರಾಮುಖ್ಯತೆ ಪಡಕೊಳ್ಳುವುದು ಈ ಎಲ್ಲವುಗಳ ಹಿನ್ನಲೆಯಲ್ಲಿ.
ದೇಶದಲ್ಲಿ ವೃದ್ಧರ ಪರವಾದ ಹಲವು ಕಾನೂನುಗಳಿವೆ. ಆದರೆ, ಅವು ಅವರ ಪಾಲಿಗೆ ನೆರವಾಗಿ ಬರಬೇಕೆಂದರೆ ಮೊದಲು ಅವರು ದೂರು ಕೊಡಬೇಕು. ಪೊಲೀಸು ಠಾಣೆ, ಕೋರ್ಟು- ಕಚೇರಿಗೆ ಹೋಗುವ ಧೈರ್ಯ ತೋರಬೇಕು. ವೃದ್ಧರಲ್ಲಿ ಇಷ್ಟು ಆರೋಗ್ಯ ಮತ್ತು ಧೈರ್ಯ ಇದೆಯೇ ಅನ್ನುವುದು ಇಲ್ಲಿಯ ಮುಖ್ಯ ಪ್ರಶ್ನೆ. ಅಲ್ಲದೇ ಕುಟುಂಬದ ಮರ್ಯಾದೆಯ ಪ್ರಶ್ನೆಯೂ ಇಲ್ಲಿ ಅವರನ್ನು ಕಾಡುತ್ತದೆ. ಬದುಕಿರುವ ವರೆಗೆ ಹೇಗಾದರೂ ದಿನದೂಡುವುದು ಅನ್ನುವ ಹೊಂದಾಣಿಕೆಯ ಮನಸ್ಥಿತಿಗೆ ತಯಾರಾಗಲು ಅವರ ಸುತ್ತಲಿನ ಪರಿಸ್ಥಿತಿ ಒತ್ತಡವನ್ನು ಹೇರುತ್ತಿರುತ್ತದೆ. ಇದರಾಚೆಗೆ ಧೈರ್ಯ ತೋರುವ ವೃದ್ಧರಷ್ಟೇ ಕಾನೂನಿನಿಂದ ಲಾಭವನ್ನು ಪಡೆದುಕೊಳ್ಳಬಹುದು. ಇದು ಬಾಹ್ಯ ನೋಟಕ್ಕೆ ತೋರುವಷ್ಟು ಸುಲಭದ ಹಾದಿಯಂತೂ ಅಲ್ಲ. ವೃದ್ಧರನ್ನು ಅವರ ಮುಸ್ಸಂಜೆಯ ಪ್ರಾಯದಲ್ಲಿ ಕೋರ್ಟು- ಕಾನೂನು ಎಂದು ಅಲೆದಾಡಿಸುವುದು ಅಥವಾ ಪ್ರತಿಭಟನೆಗೆ ಕೂರಿಸುವುದು ಇವೆರಡರ ಹೊರತಾಗಿ ಮೂರನೆಯ ಆಯ್ಕೆಯಾಗಿ ವೃದ್ಧಾಶ್ರಮಗಳಷ್ಟೇ ಇರುವುದೇ? ಇದರಾಚೆಗೆ ಅವರ ಮನೆಯನ್ನೇ ಅವರಿಗೆ ನೆಮ್ಮದಿಯ ತಾಣವನ್ನಾಗಿ ಮಾಡಲು ಸಾಧ್ಯವಿಲ್ಲವೇ? ಮಕ್ಕಳಿಗೆ ಚಿಕ್ಕಂದಿನಲ್ಲೇ ಹೆತ್ತವರು ಆ ಬಗ್ಗೆ ತರಬೇತಿ ನೀಡುವುದು ಒಂದು ಆಯ್ಕೆಯಾಗಬಾರದೇ? ಹೆತ್ತವರ ಬಗ್ಗೆ ಮಕ್ಕಳು ಹೆಮ್ಮೆ ಪಟ್ಟುಕೊಳ್ಳುವ ಮತ್ತು ಅವರ ಸುಖಕ್ಕಾಗಿ ಸರ್ವ ತ್ಯಾಗಕ್ಕೂ ಸಿದ್ಧವಾಗಲು ಪ್ರೇರೇಪಿಸುವ ಬರಹ, ವೀಡಿಯೋ, ಸಿನಿಮಾ, ನಾಟಕಗಳನ್ನು ಮಕ್ಕಳಿಗೆ ತೋರಿಸುವುದನ್ನೂ ಒಂದು ಆಯ್ಕೆಯಾಗಿ ಎತ್ತಿಕೊಳ್ಳಬಹುದಲ್ಲವೇ?
      ಮುಖ್ಯವಾಗಿ, ವೃದ್ಧ ಹೆತ್ತವರನ್ನು ಗೌರವದಿಂದ ಕಾಣುವಂಥ ಶುದ್ಧ ಮನಸ್ಸನ್ನು ಆಯಾ ಹೆತ್ತವರು ಚಿಕ್ಕಂದಿನಲ್ಲೇ ತಮ್ಮ ಮಕ್ಕಳಲ್ಲಿ ಬಿತ್ತಬೇಕು. ಸಂದರ್ಭ, ಸನ್ನಿವೇಶವನ್ನು ಅದಕ್ಕಾಗಿ ಬಳಸಿಕೊಳ್ಳಬೇಕು. ಮುಂದಿನ ತಲೆಮಾರು ವೃದ್ಧ ಹೆತ್ತವರಿಗೆ ವೃದ್ಧಾಶ್ರಮಗಳನ್ನು ಪರ್ಯಾಯ ಮನೆಯಾಗಿ ಕಂಡುಕೊಳ್ಳದಂತೆ ಪ್ರೇರೇಪಣೆ ನೀಡಬೇಕು. ಅನಿವಾರ್ಯ ಕಾರಣಗಳ ಹೊರತು ವೃದ್ಧಾಶ್ರಮ ಎಂದೂ ಪರಿಹಾರ ಆಗಬಾರದು.

Sunday, 3 September 2017

ಖಾಸಗಿತನವನ್ನು ಚರ್ಚಿಸಬೇಕಾದವರು ತ್ರಿವಳಿಯಲ್ಲಿ ಕಳೆದುಹೋದರೆ?

     ಖಾಸಗಿತನ ಅಂದರೇನು, ಅದರ ವ್ಯಾಪ್ತಿ ಎಷ್ಟು, `ಖಾಸಗಿತನವು ವ್ಯಕ್ತಿಯ ಮೂಲಭೂತ ಹಕ್ಕು’ ಎಂದು ಸುಪ್ರೀಮ್‍ಕೋರ್ಟ್ ತೀರ್ಪು ನೀಡಿರುವುದು ಏನೆಲ್ಲ ಬದಲಾವಣೆಗಳಿಗೆ ಕಾರಣವಾಗಬಹುದು, ಈಗಾಗಲೇ ಇರುವ ಯಾವೆಲ್ಲ ಕಾನೂನುಗಳ ಮೇಲೆ ಅದು ಪರಿಣಾಮ ಬೀರಬಹುದು ಇತ್ಯಾದಿ ಇತ್ಯಾದಿಗಳ ಮೇಲೆ ಗಂಭೀರ ಚರ್ಚೆಗೆ ತೆರೆದುಕೊಳ್ಳಬೇಕಾಗಿದ್ದ ಮಾಧ್ಯಮಗಳು ಈ ಹೊಣೆಗಾರಿಕೆಯಿಂದ ಬಹುತೇಕ ನುಣುಚಿಕೊಂಡಿವೆ. ತ್ರಿವಳಿ ತಲಾಕ್‍ನ ಮೇಲೆ ತೀರ್ಪು ನೀಡಿದ ಎರಡು ದಿನಗಳ ಬಳಿಕ ಖಾಸಗಿತನದ ಮೇಲೂ ಸುಪ್ರೀಮ್ ಕೋರ್ಟ್ ತೀರ್ಪು ನೀಡಿತು. ತ್ರಿವಳಿ ತಲಾಕ್ ತೀರ್ಪಿಗೆ ಹೋಲಿಸಿದರೆ ಖಾಸಗಿತನದ ಮೇಲಿನ ತೀರ್ಪು ಹೆಚ್ಚು ಮಹತ್ವಪೂರ್ಣ ಮತ್ತು ದೂರಗಾಮಿ ಪರಿಣಾಮ ಬೀರುವಂಥದ್ದು. ತ್ರಿವಳಿ ತಲಾಕ್‍ನ ಬಗ್ಗೆ ತೀರ್ಪು ನೀಡುವ ವೇಳೆ ಐವರು ನ್ಯಾಯಾಧೀಶರ ನ್ಯಾಯಪೀಠದಲ್ಲಿ ಭಿನ್ನಮತ ತಲೆದೋರಿತ್ತು. ಇಬ್ಬರು ನ್ಯಾಯಾಧೀಶರು ತ್ರಿವಳಿ ತಲಾಕನ್ನು ಸಂವಿಧಾನಬದ್ಧ ಎಂದು ವ್ಯಾಖ್ಯಾನಿಸಿದರು. ಸಂವಿಧಾನದ 25ನೇ ಪರಿಚ್ಛೇದವು ಮೂಲಭೂತ ಹಕ್ಕಾಗಿ ಪರಿಗಣಿಸಿರುವ ಧಾರ್ಮಿಕ ಹಕ್ಕಿನ ವ್ಯಾಪ್ತಿಯೊಳಗೆ ತ್ರಿವಳಿ ತಲಾಕ್ ಒಳಪಡುತ್ತದೆ ಎಂದವರು ಅಭಿಪ್ರಾಯಪಟ್ಟರು. ಆದರೆ ಐವರು ನ್ಯಾಯಾಧೀಶರ ಪೀಠದ ಒಮ್ಮತದ ತೀರ್ಪಿನಲ್ಲಿ ಈ ಅಭಿಪ್ರಾಯವು ಅಮಾನ್ಯಗೊಂಡಿತಾದರೂ ತ್ರಿವಳಿ ತಲಾಕ್ ಮೇಲಿನ ಚರ್ಚೆ ಎಷ್ಟು ಸೂಕ್ಷ್ಮವಾಗಿರಬೇಕು ಎಂಬುದನ್ನು ಈ ಭಿನ್ನಮತ ಸ್ಪಷ್ಟಪಡಿಸುತ್ತದೆ. ಆದರೆ ಖಾಸಗಿತನವು ಮೂಲಭೂತ ಹಕ್ಕು ಎಂಬ ಬಗ್ಗೆ ನ್ಯಾಯಪೀಠದ 9 ನ್ಯಾಯಾಧೀಶರಲ್ಲಿ ಯಾರಿಗೂ ಭಿನ್ನಾಭಿಪ್ರಾಯ ಇರಲಿಲ್ಲ. ತ್ರಿವಳಿ ತಲಾಕ್ ಶರೀಅತ್‍ನ ಭಾಗವೋ ಅಲ್ಲವೋ ಎಂಬ ಬಗ್ಗೆ ಮುಸ್ಲಿಮ್ ಸಮುದಾಯದೊಳಗೆ ಹೇಗೆ ಭಿನ್ನಾಭಿಪ್ರಾಯ ಇತ್ತೋ ಹಾಗೆಯೇ ಖಾಸಗಿತನವು ಮೂಲಭೂತ ಹಕ್ಕು ಹೌದೋ ಅಲ್ಲವೋ ಎಂಬ ಬಗ್ಗೆ ಕೇಂದ್ರ ಸರಕಾರ ಮತ್ತು ವಿರೋಧ ಪಕ್ಷಗಳ ನಡುವೆಯೂ ಭಿನ್ನಾಭಿಪ್ರಾಯ ಇತ್ತು. ಈ ದೇಶದ ನಾಗರಿಕರಲ್ಲೂ ಈ ಬಗ್ಗೆ ವಿವಿಧ ಅಭಿಪ್ರಾಯಗಳಿದ್ದುವು. ಸದ್ಯ ಕೇಂದ್ರದ ವಾದವನ್ನು ಸುಪ್ರೀಮ್‍ಕೋರ್ಟ್ ತಿರಸ್ಕರಿಸಿದೆ. ಖಾಸಗಿತನವನ್ನು ಅದು ಮೂಲಭೂತ ಹಕ್ಕಾಗಿ ಪರಿಗಣಿಸಿದೆ. ಇಲ್ಲಿರುವ ಕುತೂಹಲ ಏನೆಂದರೆ, ಖಾಸಗಿತನವನ್ನು ಮೂಲಭೂತ ಹಕ್ಕಾಗಿ ಪರಿಗಣಿಸಲು ಕೇಂದ್ರ ಸರಕಾರ ಹಿಂಜರಿದುದು ಯಾವ ಕಾರಣಕ್ಕಾಗಿ ಎಂಬುದು. ಒಂದುವೇಳೆ, ಈ ಕುರಿತಂತೆ ಆಳ ಅಧ್ಯಯನ ನಡೆಸಿದರೆ ಮತ್ತು 547 ಪುಟಗಳ ತೀರ್ಪಿನ ಮೇಲೆ ವಿಶ್ಲೇಷಣೆ ನಡೆಸಿದರೆ ಒಂದೊಂದಾಗಿ ಕಾರಣಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ.
ಕೇಂದ್ರದ ಬಿಜೆಪಿ ಸರಕಾರ ಮತ್ತು ಅದರ ಬೆಂಬಲಿಗ ವರ್ಗವು ಈ ದೇಶದಲ್ಲಿ ಕೆಲವು ಅನಾಹುತಗಳನ್ನು ಮಾಡಿಟ್ಟಿವೆ. ಯಾರು ಯಾವ ಆಹಾರವನ್ನು ಸೇವಿಸಬೇಕು ಎಂಬುದನ್ನು ಅವು ನಿರ್ದೇಶಿಸತೊಡಗಿವೆ. ಗಂಡು ಮತ್ತು ಹೆಣ್ಣು ಮಾತಾಡುವುದರ ಮೇಲೂ ಅವು ನಿರ್ಬಂಧ ವಿಧಿಸಿವೆ. ಮನೆಯ ಫ್ರೀಝರ್‍ನಲ್ಲಿ ಏನೇನಿದೆ ಎಂಬ ಬಗ್ಗೆ ಅವು ದಾಳಿ ಮಾಡಿ ಪತ್ತೆ ಹಚ್ಚತೊಡಗಿವೆ. ಇದೊಂದು ಭಾಗವಾದರೆ ಇನ್ನೊಂದು ಆಧಾರ್ ಕಾರ್ಡ್. ಆಧಾರ್ ಕಾರ್ಡನ್ನು ರದ್ದುಪಡಿಸುವೆ ಎಂಬ ಭರವಸೆಯೊಂದಿಗೆ ಕಳೆದ ಲೋಕಸಭಾ ಚುನಾವಣೆಯನ್ನು ಎದುರಿಸಿದವರು ನರೇಂದ್ರ ಮೋದಿ. ಆದರೆ ಗುಜರಾತ್‍ನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪ್ರಧಾನಿ ನರೇಂದ್ರ ಮೋದಿಯಾಗಿ ಬದಲಾದ ಬಳಿಕ ಆಧಾರ್ ಕಾರ್ಡ್‍ನ ವಿಷಯದಲ್ಲೂ ಸಂಪೂರ್ಣ ಬದಲಾದರು. ಆಧಾರ್ ಕಾರ್ಡನ್ನು ರದ್ದುಗೊಳಿಸುವ ಬದಲು ಎಲ್ಲದಕ್ಕೂ ಕಡ್ಡಾಯಗೊಳಿಸಿದರು. ರೈಲು ಟಿಕೇಟು, ವಿಮಾನ ಟಿಕೇಟು, ಶಾಲಾ ಸೇರ್ಪಡೆಯಂಥ ತೀರಾ ತೀರಾ ಸಾಮಾನ್ಯ ವಿಷಯಗಳಿಗೂ ಆಧಾರನ್ನು ಅನಿವಾರ್ಯಗೊಳಿಸಿದರು. ಸುಪ್ರೀಮ್ ಕೋರ್ಟ್‍ನ ತೀರ್ಪು ಪ್ರಾಮುಖ್ಯತೆ ಪಡಕೊಳ್ಳುವುದೇ ಇಲ್ಲಿ. ಬಿಜೆಪಿ ಮತ್ತು ಅದರ ಬೆಂಬಲಿಗ ವರ್ಗದ ಮೇಲೆ ಈ ತೀರ್ಪು ಯಾವೆಲ್ಲ ರೀತಿಯಲ್ಲಿ ಪರಿಣಾಮ ಬೀರಬಹುದು? ಆಹಾರದ ಆಯ್ಕೆಯು ಓರ್ವನ/ಳ ಖಾಸಗಿ ಹಕ್ಕು. ಯಾರು ಯಾರ ಜೊತೆ ಮಾತಾಡಬೇಕು, ಮನೆಯಲ್ಲಿ ಯಾವ ಆಹಾರವನ್ನು ತಂದಿಟ್ಟುಕೊಳ್ಳಬೇಕು ಅನ್ನುವುದೂ ಖಾಸಗಿ ವಿಚಾರವೇ. ಆಧಾರ್‍ನ ಅಸ್ತಿತ್ವವೂ ಇಲ್ಲಿ ಪ್ರಶ್ನಾರ್ಹಗೊಳ್ಳುತ್ತದೆ. ಆಧಾರ್ ಕಾರ್ಡನ್ನು ನಿರ್ವಹಿಸುತ್ತಿರುವುದು ಖಾಸಗಿ ಸಂಸ್ಥೆಗಳು. ಈ ದೇಶದ 120 ಕೋಟಿ ಮಂದಿಯ ಸರ್ವ ಖಾಸಗಿ ಸಂಗತಿಗಳನ್ನು ಉತ್ತದಾಯಿ ಇಲ್ಲದ ಖಾಸಗಿ ಸಂಸ್ಥೆಗಳ ಸುಪರ್ದಿಗೆ ವಹಿಸಿಕೊಡುವ ಪ್ರಕ್ರಿಯೆ ಎಷ್ಟು ಸುರಕ್ಷಿತ? ವ್ಯಕ್ತಿಯ ಕಣ್ಣು ಮತ್ತು ಕೈ ಬೆರಳುಗಳು ಬಹು ಅಮೂಲ್ಯ ದಾಖಲೆಗಳು. ಅವಲ್ಲದೇ ಬ್ಯಾಂಕ್ ಖಾತೆ ಸಂಖ್ಯೆ, ಜನ್ಮ ದಿನಾಂಕ, ಶೈಕ್ಷಣಿಕ ಮತ್ತು ಉದ್ಯೋಗ ವಿವರಗಳು, ಮೊಬೈಲ್ ಸಂಖ್ಯೆ ಸಹಿತ ಬಹುತೇಕ ಎಲ್ಲ ಖಾಸಗಿ ವಿವರಗಳೂ ಆಧಾರ್‍ನ ಹೆಸರಲ್ಲಿ ಖಾಸಗಿ ಸಂಸ್ಥೆಗಳ ಮೂಲಕ ಪಡಕೊಳ್ಳಲಾಗುತ್ತದೆ. ಮಾತ್ರವಲ್ಲ, ಈ ಸಂಸ್ಥೆಗಳ ಕೈಯಲ್ಲಿ ಈ ದಾಖಲೆಗಳು ಸುರಕ್ಷಿತವಲ್ಲ ಎಂಬುದನ್ನೂ ಒಂದಕ್ಕಿಂತ ಹೆಚ್ಚು ಪ್ರಕರಣಗಳ ದೃಢಪಡಿಸುತ್ತಲೂ ಇವೆ. ಛತ್ತೀಸ್‍ಗಢದಲ್ಲಿ 16 ಲಕ್ಷ ಮಂದಿಯ ಆಧಾರ್ ದಾಖಲೆಗಳು ಸೋರಿಕೆಯಾದದ್ದು ಇತ್ತೀಚೆಗೆ ವರದಿಯಾಗಿತ್ತು. Mygov ಎಂಬ ಆ್ಯಪ್ ಅನ್ನು ತಯಾರಿಸಿದ ಶ್ರೀವಾಸ್ತವ್ ಎಂಬವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಈ ಆ್ಯಪ್‍ನ ಮೂಲಕ ಆಧಾರ್ ವಿವರಗಳನ್ನು ಪಡೆಯಲಾದುದೂ 50 ಸಾವಿರ ಮಂದಿ ಈ ಆ್ಯಪನ್ನು ಡೌನ್‍ಲೋಡ್ ಮಾಡಿರುವುದೂ ಬಹಿರಂಗವಾಗಿತ್ತು. ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿಯ ಆಧಾರ್ ಭಾವಚಿತ್ರ ಸೋರಿಕೆಯಾಗಿರುವ ಬಗ್ಗೆ ಅವರ ಪತ್ನಿ ಸಾಕ್ಷಿ ಧೋನಿ ಈ ಹಿಂದೆ ಮಾಧ್ಯಮಗಳೊಂದಿಗೆ ಆತಂಕ ತೋಡಿಕೊಂಡದ್ದನ್ನೂ ಇಲ್ಲಿ ಸ್ಮರಿಸಿಕೊಳ್ಳಬಹುದು. ಇಂಥ ಸ್ಥಿತಿಯಲ್ಲಿ, ಖಾಸಗಿತನವು ಮೂಲಭೂತ ಹಕ್ಕಾಗುವುದು ಏನೆಲ್ಲ ಬದಲಾವಣೆಗಳಿಗೆ ಕಾರಣವಾಗಬಹುದು? ಮಾಧ್ಯಮಗಳು ನಡೆಸುವ ಸ್ಟಿಂಗ್ ಆಪರೇಶನ್‍ಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆಯೇ? ಸೆಲೆಬ್ರಿಟಿಗಳ ಖಾಸಗಿ ವಿಚಾರಗಳನ್ನು ಪ್ರಸಾರ ಮಾಡುವುದು ಅಪರಾಧ ಆಗಲಿದೆಯೇ? ಗೌಪ್ಯವಾಗಿಡಬೇಕೆಂದು ರೋಗಿಯೋರ್ವ ಬಯಸುವ ರೋಗ ವಿವರಗಳನ್ನು ಆಸ್ಪತ್ರೆ ಅಥವಾ ವೈದ್ಯರು ಬಹಿರಂಗಪಡಿಸುವುದು ಇದರ ವ್ಯಾಪ್ತಿಗೆ ಒಳಪಡುತ್ತದೆಯೇ? ಅರ್ಧರಾತ್ರಿ ಮನೆಗೆ ನುಗ್ಗಿ ಆರೋಪಿಯನ್ನು ಪೊಲೀಸರು ಎಳೆದು ತರುವ ಬೆಳವಣಿಗೆಗಳು ಇನ್ನು ಮುಂದೆ ನಿಲ್ಲಲಿದೆಯೇ? ನಿದ್ದೆ ಖಾಸಗಿ ಹಕ್ಕು. ಅದನ್ನು ನಿಷೇಧಿಸುವುದು ಮೂಲಭೂತ ಹಕ್ಕನ್ನು ನಿಷೇಧಿಸಿದ ಅಪರಾಧವಾಗಿ ಪರಿಗಣಿಸಲ್ಪಡಬಹುದೇ? ಹೀಗಿದ್ದೂ, ತ್ರಿವಳಿ ತಲಾಕನ್ನು ರುಚಿಕಟ್ಟಾಗಿಸಿ ಮತ್ತೆ ಮತ್ತೆ ಬಡಿಸಿದ ಮಾಧ್ಯಮಗಳು ಖಾಸಗಿ ಹಕ್ಕಿನ ಮೇಲಿನ ತೀರ್ಪಿನ ಸುತ್ತ ಇಂಥದ್ದೊಂದು ಚರ್ಚೆಯನ್ನು ಗಂಭೀರವಾಗಿ ನಡೆಸಲೇ ಇಲ್ಲವಲ್ಲ, ಏನು ಕಾರಣ? ಕೇಂದ್ರ ಸರಕಾರವನ್ನು ತರಾಟೆಗೆ ಎತ್ತಿಕೊಳ್ಳಬೇಕಾಗುತ್ತದೆ ಎಂಬ ಜಿ ಹುಜೂರ್ ಮನಸ್ಥಿತಿಯೇ? ತಮ್ಮ ಕಾರ್ಯವ್ಯಾಪ್ತಿಯನ್ನು ತೀರ್ಪು ಮೋಟಕುಗೊಳಿಸುತ್ತದೆ ಎಂಬ ಸಿಟ್ಟೇ? ಜನರನ್ನು ಈ ಕುರಿತು ಜಾಗೃತಿಗೊಳಿಸಿದಷ್ಟೂ ತಮಗೆ ಅಪಾಯಗಳು ಜಾಸ್ತಿಯಾಗುತ್ತಾ ಹೋಗಬಹುದು ಎಂಬ ಭಯವೇ?
    ತ್ರಿವಳಿ ತಲಾಕ್ ಮತ್ತು ಖಾಸಗಿತನದ ತೀರ್ಪು ಇವೆರಡರಲ್ಲಿ ಖಾಸಗಿತನದ ಮೇಲಿನ ತೀರ್ಪೇ ಅತ್ಯಂತ ಹೆಚ್ಚು ಪ್ರಾಮುಖ್ಯತೆ ಪಡೆಯಬೇಕಾದುದು. ತ್ರಿವಳಿ ತಲಾಕ್‍ನಿಂದಾಗಿ ಶೋಷಣೆಗೀಡಾದವರಿಗೆ ಹೋಲಿಸಿದರೆ ಖಾಸಗಿತನದ ಮೇಲಿನ ಹಲ್ಲೆಯಿಂದಾಗಿ ಸಂತ್ರಸ್ತರಾದವರ ಸಂಖ್ಯೆ ಸಾವಿರಾರು ಪಟ್ಟು ಅಧಿಕ. ಆದರೆ ಖಾಸಗಿತನದ ಮೇಲಿನ ತೀರ್ಪನ್ನು ಮಾಧ್ಯಮಗಳು ಜುಜುಬಿಯಾಗಿ ಪರಿಗಣಿಸಿದುವು. ತ್ರಿವಳಿ ತಲಾಕನ್ನು ಅತಿ ಗಂಭೀರವಾಗಿ ಕಂಡುವು. ಮಾಧ್ಯಮ ಮನಸ್ಥಿತಿಯನ್ನು ಮತ್ತು ಅದರ ಬೇಜವಾಬ್ದಾರಿ ನೀತಿಯನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ಇದು ಧಾರಾಳ ಸಾಕು.