Sunday, 3 September 2017

ಖಾಸಗಿತನವನ್ನು ಚರ್ಚಿಸಬೇಕಾದವರು ತ್ರಿವಳಿಯಲ್ಲಿ ಕಳೆದುಹೋದರೆ?

     ಖಾಸಗಿತನ ಅಂದರೇನು, ಅದರ ವ್ಯಾಪ್ತಿ ಎಷ್ಟು, `ಖಾಸಗಿತನವು ವ್ಯಕ್ತಿಯ ಮೂಲಭೂತ ಹಕ್ಕು’ ಎಂದು ಸುಪ್ರೀಮ್‍ಕೋರ್ಟ್ ತೀರ್ಪು ನೀಡಿರುವುದು ಏನೆಲ್ಲ ಬದಲಾವಣೆಗಳಿಗೆ ಕಾರಣವಾಗಬಹುದು, ಈಗಾಗಲೇ ಇರುವ ಯಾವೆಲ್ಲ ಕಾನೂನುಗಳ ಮೇಲೆ ಅದು ಪರಿಣಾಮ ಬೀರಬಹುದು ಇತ್ಯಾದಿ ಇತ್ಯಾದಿಗಳ ಮೇಲೆ ಗಂಭೀರ ಚರ್ಚೆಗೆ ತೆರೆದುಕೊಳ್ಳಬೇಕಾಗಿದ್ದ ಮಾಧ್ಯಮಗಳು ಈ ಹೊಣೆಗಾರಿಕೆಯಿಂದ ಬಹುತೇಕ ನುಣುಚಿಕೊಂಡಿವೆ. ತ್ರಿವಳಿ ತಲಾಕ್‍ನ ಮೇಲೆ ತೀರ್ಪು ನೀಡಿದ ಎರಡು ದಿನಗಳ ಬಳಿಕ ಖಾಸಗಿತನದ ಮೇಲೂ ಸುಪ್ರೀಮ್ ಕೋರ್ಟ್ ತೀರ್ಪು ನೀಡಿತು. ತ್ರಿವಳಿ ತಲಾಕ್ ತೀರ್ಪಿಗೆ ಹೋಲಿಸಿದರೆ ಖಾಸಗಿತನದ ಮೇಲಿನ ತೀರ್ಪು ಹೆಚ್ಚು ಮಹತ್ವಪೂರ್ಣ ಮತ್ತು ದೂರಗಾಮಿ ಪರಿಣಾಮ ಬೀರುವಂಥದ್ದು. ತ್ರಿವಳಿ ತಲಾಕ್‍ನ ಬಗ್ಗೆ ತೀರ್ಪು ನೀಡುವ ವೇಳೆ ಐವರು ನ್ಯಾಯಾಧೀಶರ ನ್ಯಾಯಪೀಠದಲ್ಲಿ ಭಿನ್ನಮತ ತಲೆದೋರಿತ್ತು. ಇಬ್ಬರು ನ್ಯಾಯಾಧೀಶರು ತ್ರಿವಳಿ ತಲಾಕನ್ನು ಸಂವಿಧಾನಬದ್ಧ ಎಂದು ವ್ಯಾಖ್ಯಾನಿಸಿದರು. ಸಂವಿಧಾನದ 25ನೇ ಪರಿಚ್ಛೇದವು ಮೂಲಭೂತ ಹಕ್ಕಾಗಿ ಪರಿಗಣಿಸಿರುವ ಧಾರ್ಮಿಕ ಹಕ್ಕಿನ ವ್ಯಾಪ್ತಿಯೊಳಗೆ ತ್ರಿವಳಿ ತಲಾಕ್ ಒಳಪಡುತ್ತದೆ ಎಂದವರು ಅಭಿಪ್ರಾಯಪಟ್ಟರು. ಆದರೆ ಐವರು ನ್ಯಾಯಾಧೀಶರ ಪೀಠದ ಒಮ್ಮತದ ತೀರ್ಪಿನಲ್ಲಿ ಈ ಅಭಿಪ್ರಾಯವು ಅಮಾನ್ಯಗೊಂಡಿತಾದರೂ ತ್ರಿವಳಿ ತಲಾಕ್ ಮೇಲಿನ ಚರ್ಚೆ ಎಷ್ಟು ಸೂಕ್ಷ್ಮವಾಗಿರಬೇಕು ಎಂಬುದನ್ನು ಈ ಭಿನ್ನಮತ ಸ್ಪಷ್ಟಪಡಿಸುತ್ತದೆ. ಆದರೆ ಖಾಸಗಿತನವು ಮೂಲಭೂತ ಹಕ್ಕು ಎಂಬ ಬಗ್ಗೆ ನ್ಯಾಯಪೀಠದ 9 ನ್ಯಾಯಾಧೀಶರಲ್ಲಿ ಯಾರಿಗೂ ಭಿನ್ನಾಭಿಪ್ರಾಯ ಇರಲಿಲ್ಲ. ತ್ರಿವಳಿ ತಲಾಕ್ ಶರೀಅತ್‍ನ ಭಾಗವೋ ಅಲ್ಲವೋ ಎಂಬ ಬಗ್ಗೆ ಮುಸ್ಲಿಮ್ ಸಮುದಾಯದೊಳಗೆ ಹೇಗೆ ಭಿನ್ನಾಭಿಪ್ರಾಯ ಇತ್ತೋ ಹಾಗೆಯೇ ಖಾಸಗಿತನವು ಮೂಲಭೂತ ಹಕ್ಕು ಹೌದೋ ಅಲ್ಲವೋ ಎಂಬ ಬಗ್ಗೆ ಕೇಂದ್ರ ಸರಕಾರ ಮತ್ತು ವಿರೋಧ ಪಕ್ಷಗಳ ನಡುವೆಯೂ ಭಿನ್ನಾಭಿಪ್ರಾಯ ಇತ್ತು. ಈ ದೇಶದ ನಾಗರಿಕರಲ್ಲೂ ಈ ಬಗ್ಗೆ ವಿವಿಧ ಅಭಿಪ್ರಾಯಗಳಿದ್ದುವು. ಸದ್ಯ ಕೇಂದ್ರದ ವಾದವನ್ನು ಸುಪ್ರೀಮ್‍ಕೋರ್ಟ್ ತಿರಸ್ಕರಿಸಿದೆ. ಖಾಸಗಿತನವನ್ನು ಅದು ಮೂಲಭೂತ ಹಕ್ಕಾಗಿ ಪರಿಗಣಿಸಿದೆ. ಇಲ್ಲಿರುವ ಕುತೂಹಲ ಏನೆಂದರೆ, ಖಾಸಗಿತನವನ್ನು ಮೂಲಭೂತ ಹಕ್ಕಾಗಿ ಪರಿಗಣಿಸಲು ಕೇಂದ್ರ ಸರಕಾರ ಹಿಂಜರಿದುದು ಯಾವ ಕಾರಣಕ್ಕಾಗಿ ಎಂಬುದು. ಒಂದುವೇಳೆ, ಈ ಕುರಿತಂತೆ ಆಳ ಅಧ್ಯಯನ ನಡೆಸಿದರೆ ಮತ್ತು 547 ಪುಟಗಳ ತೀರ್ಪಿನ ಮೇಲೆ ವಿಶ್ಲೇಷಣೆ ನಡೆಸಿದರೆ ಒಂದೊಂದಾಗಿ ಕಾರಣಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ.
ಕೇಂದ್ರದ ಬಿಜೆಪಿ ಸರಕಾರ ಮತ್ತು ಅದರ ಬೆಂಬಲಿಗ ವರ್ಗವು ಈ ದೇಶದಲ್ಲಿ ಕೆಲವು ಅನಾಹುತಗಳನ್ನು ಮಾಡಿಟ್ಟಿವೆ. ಯಾರು ಯಾವ ಆಹಾರವನ್ನು ಸೇವಿಸಬೇಕು ಎಂಬುದನ್ನು ಅವು ನಿರ್ದೇಶಿಸತೊಡಗಿವೆ. ಗಂಡು ಮತ್ತು ಹೆಣ್ಣು ಮಾತಾಡುವುದರ ಮೇಲೂ ಅವು ನಿರ್ಬಂಧ ವಿಧಿಸಿವೆ. ಮನೆಯ ಫ್ರೀಝರ್‍ನಲ್ಲಿ ಏನೇನಿದೆ ಎಂಬ ಬಗ್ಗೆ ಅವು ದಾಳಿ ಮಾಡಿ ಪತ್ತೆ ಹಚ್ಚತೊಡಗಿವೆ. ಇದೊಂದು ಭಾಗವಾದರೆ ಇನ್ನೊಂದು ಆಧಾರ್ ಕಾರ್ಡ್. ಆಧಾರ್ ಕಾರ್ಡನ್ನು ರದ್ದುಪಡಿಸುವೆ ಎಂಬ ಭರವಸೆಯೊಂದಿಗೆ ಕಳೆದ ಲೋಕಸಭಾ ಚುನಾವಣೆಯನ್ನು ಎದುರಿಸಿದವರು ನರೇಂದ್ರ ಮೋದಿ. ಆದರೆ ಗುಜರಾತ್‍ನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪ್ರಧಾನಿ ನರೇಂದ್ರ ಮೋದಿಯಾಗಿ ಬದಲಾದ ಬಳಿಕ ಆಧಾರ್ ಕಾರ್ಡ್‍ನ ವಿಷಯದಲ್ಲೂ ಸಂಪೂರ್ಣ ಬದಲಾದರು. ಆಧಾರ್ ಕಾರ್ಡನ್ನು ರದ್ದುಗೊಳಿಸುವ ಬದಲು ಎಲ್ಲದಕ್ಕೂ ಕಡ್ಡಾಯಗೊಳಿಸಿದರು. ರೈಲು ಟಿಕೇಟು, ವಿಮಾನ ಟಿಕೇಟು, ಶಾಲಾ ಸೇರ್ಪಡೆಯಂಥ ತೀರಾ ತೀರಾ ಸಾಮಾನ್ಯ ವಿಷಯಗಳಿಗೂ ಆಧಾರನ್ನು ಅನಿವಾರ್ಯಗೊಳಿಸಿದರು. ಸುಪ್ರೀಮ್ ಕೋರ್ಟ್‍ನ ತೀರ್ಪು ಪ್ರಾಮುಖ್ಯತೆ ಪಡಕೊಳ್ಳುವುದೇ ಇಲ್ಲಿ. ಬಿಜೆಪಿ ಮತ್ತು ಅದರ ಬೆಂಬಲಿಗ ವರ್ಗದ ಮೇಲೆ ಈ ತೀರ್ಪು ಯಾವೆಲ್ಲ ರೀತಿಯಲ್ಲಿ ಪರಿಣಾಮ ಬೀರಬಹುದು? ಆಹಾರದ ಆಯ್ಕೆಯು ಓರ್ವನ/ಳ ಖಾಸಗಿ ಹಕ್ಕು. ಯಾರು ಯಾರ ಜೊತೆ ಮಾತಾಡಬೇಕು, ಮನೆಯಲ್ಲಿ ಯಾವ ಆಹಾರವನ್ನು ತಂದಿಟ್ಟುಕೊಳ್ಳಬೇಕು ಅನ್ನುವುದೂ ಖಾಸಗಿ ವಿಚಾರವೇ. ಆಧಾರ್‍ನ ಅಸ್ತಿತ್ವವೂ ಇಲ್ಲಿ ಪ್ರಶ್ನಾರ್ಹಗೊಳ್ಳುತ್ತದೆ. ಆಧಾರ್ ಕಾರ್ಡನ್ನು ನಿರ್ವಹಿಸುತ್ತಿರುವುದು ಖಾಸಗಿ ಸಂಸ್ಥೆಗಳು. ಈ ದೇಶದ 120 ಕೋಟಿ ಮಂದಿಯ ಸರ್ವ ಖಾಸಗಿ ಸಂಗತಿಗಳನ್ನು ಉತ್ತದಾಯಿ ಇಲ್ಲದ ಖಾಸಗಿ ಸಂಸ್ಥೆಗಳ ಸುಪರ್ದಿಗೆ ವಹಿಸಿಕೊಡುವ ಪ್ರಕ್ರಿಯೆ ಎಷ್ಟು ಸುರಕ್ಷಿತ? ವ್ಯಕ್ತಿಯ ಕಣ್ಣು ಮತ್ತು ಕೈ ಬೆರಳುಗಳು ಬಹು ಅಮೂಲ್ಯ ದಾಖಲೆಗಳು. ಅವಲ್ಲದೇ ಬ್ಯಾಂಕ್ ಖಾತೆ ಸಂಖ್ಯೆ, ಜನ್ಮ ದಿನಾಂಕ, ಶೈಕ್ಷಣಿಕ ಮತ್ತು ಉದ್ಯೋಗ ವಿವರಗಳು, ಮೊಬೈಲ್ ಸಂಖ್ಯೆ ಸಹಿತ ಬಹುತೇಕ ಎಲ್ಲ ಖಾಸಗಿ ವಿವರಗಳೂ ಆಧಾರ್‍ನ ಹೆಸರಲ್ಲಿ ಖಾಸಗಿ ಸಂಸ್ಥೆಗಳ ಮೂಲಕ ಪಡಕೊಳ್ಳಲಾಗುತ್ತದೆ. ಮಾತ್ರವಲ್ಲ, ಈ ಸಂಸ್ಥೆಗಳ ಕೈಯಲ್ಲಿ ಈ ದಾಖಲೆಗಳು ಸುರಕ್ಷಿತವಲ್ಲ ಎಂಬುದನ್ನೂ ಒಂದಕ್ಕಿಂತ ಹೆಚ್ಚು ಪ್ರಕರಣಗಳ ದೃಢಪಡಿಸುತ್ತಲೂ ಇವೆ. ಛತ್ತೀಸ್‍ಗಢದಲ್ಲಿ 16 ಲಕ್ಷ ಮಂದಿಯ ಆಧಾರ್ ದಾಖಲೆಗಳು ಸೋರಿಕೆಯಾದದ್ದು ಇತ್ತೀಚೆಗೆ ವರದಿಯಾಗಿತ್ತು. Mygov ಎಂಬ ಆ್ಯಪ್ ಅನ್ನು ತಯಾರಿಸಿದ ಶ್ರೀವಾಸ್ತವ್ ಎಂಬವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಈ ಆ್ಯಪ್‍ನ ಮೂಲಕ ಆಧಾರ್ ವಿವರಗಳನ್ನು ಪಡೆಯಲಾದುದೂ 50 ಸಾವಿರ ಮಂದಿ ಈ ಆ್ಯಪನ್ನು ಡೌನ್‍ಲೋಡ್ ಮಾಡಿರುವುದೂ ಬಹಿರಂಗವಾಗಿತ್ತು. ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿಯ ಆಧಾರ್ ಭಾವಚಿತ್ರ ಸೋರಿಕೆಯಾಗಿರುವ ಬಗ್ಗೆ ಅವರ ಪತ್ನಿ ಸಾಕ್ಷಿ ಧೋನಿ ಈ ಹಿಂದೆ ಮಾಧ್ಯಮಗಳೊಂದಿಗೆ ಆತಂಕ ತೋಡಿಕೊಂಡದ್ದನ್ನೂ ಇಲ್ಲಿ ಸ್ಮರಿಸಿಕೊಳ್ಳಬಹುದು. ಇಂಥ ಸ್ಥಿತಿಯಲ್ಲಿ, ಖಾಸಗಿತನವು ಮೂಲಭೂತ ಹಕ್ಕಾಗುವುದು ಏನೆಲ್ಲ ಬದಲಾವಣೆಗಳಿಗೆ ಕಾರಣವಾಗಬಹುದು? ಮಾಧ್ಯಮಗಳು ನಡೆಸುವ ಸ್ಟಿಂಗ್ ಆಪರೇಶನ್‍ಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆಯೇ? ಸೆಲೆಬ್ರಿಟಿಗಳ ಖಾಸಗಿ ವಿಚಾರಗಳನ್ನು ಪ್ರಸಾರ ಮಾಡುವುದು ಅಪರಾಧ ಆಗಲಿದೆಯೇ? ಗೌಪ್ಯವಾಗಿಡಬೇಕೆಂದು ರೋಗಿಯೋರ್ವ ಬಯಸುವ ರೋಗ ವಿವರಗಳನ್ನು ಆಸ್ಪತ್ರೆ ಅಥವಾ ವೈದ್ಯರು ಬಹಿರಂಗಪಡಿಸುವುದು ಇದರ ವ್ಯಾಪ್ತಿಗೆ ಒಳಪಡುತ್ತದೆಯೇ? ಅರ್ಧರಾತ್ರಿ ಮನೆಗೆ ನುಗ್ಗಿ ಆರೋಪಿಯನ್ನು ಪೊಲೀಸರು ಎಳೆದು ತರುವ ಬೆಳವಣಿಗೆಗಳು ಇನ್ನು ಮುಂದೆ ನಿಲ್ಲಲಿದೆಯೇ? ನಿದ್ದೆ ಖಾಸಗಿ ಹಕ್ಕು. ಅದನ್ನು ನಿಷೇಧಿಸುವುದು ಮೂಲಭೂತ ಹಕ್ಕನ್ನು ನಿಷೇಧಿಸಿದ ಅಪರಾಧವಾಗಿ ಪರಿಗಣಿಸಲ್ಪಡಬಹುದೇ? ಹೀಗಿದ್ದೂ, ತ್ರಿವಳಿ ತಲಾಕನ್ನು ರುಚಿಕಟ್ಟಾಗಿಸಿ ಮತ್ತೆ ಮತ್ತೆ ಬಡಿಸಿದ ಮಾಧ್ಯಮಗಳು ಖಾಸಗಿ ಹಕ್ಕಿನ ಮೇಲಿನ ತೀರ್ಪಿನ ಸುತ್ತ ಇಂಥದ್ದೊಂದು ಚರ್ಚೆಯನ್ನು ಗಂಭೀರವಾಗಿ ನಡೆಸಲೇ ಇಲ್ಲವಲ್ಲ, ಏನು ಕಾರಣ? ಕೇಂದ್ರ ಸರಕಾರವನ್ನು ತರಾಟೆಗೆ ಎತ್ತಿಕೊಳ್ಳಬೇಕಾಗುತ್ತದೆ ಎಂಬ ಜಿ ಹುಜೂರ್ ಮನಸ್ಥಿತಿಯೇ? ತಮ್ಮ ಕಾರ್ಯವ್ಯಾಪ್ತಿಯನ್ನು ತೀರ್ಪು ಮೋಟಕುಗೊಳಿಸುತ್ತದೆ ಎಂಬ ಸಿಟ್ಟೇ? ಜನರನ್ನು ಈ ಕುರಿತು ಜಾಗೃತಿಗೊಳಿಸಿದಷ್ಟೂ ತಮಗೆ ಅಪಾಯಗಳು ಜಾಸ್ತಿಯಾಗುತ್ತಾ ಹೋಗಬಹುದು ಎಂಬ ಭಯವೇ?
    ತ್ರಿವಳಿ ತಲಾಕ್ ಮತ್ತು ಖಾಸಗಿತನದ ತೀರ್ಪು ಇವೆರಡರಲ್ಲಿ ಖಾಸಗಿತನದ ಮೇಲಿನ ತೀರ್ಪೇ ಅತ್ಯಂತ ಹೆಚ್ಚು ಪ್ರಾಮುಖ್ಯತೆ ಪಡೆಯಬೇಕಾದುದು. ತ್ರಿವಳಿ ತಲಾಕ್‍ನಿಂದಾಗಿ ಶೋಷಣೆಗೀಡಾದವರಿಗೆ ಹೋಲಿಸಿದರೆ ಖಾಸಗಿತನದ ಮೇಲಿನ ಹಲ್ಲೆಯಿಂದಾಗಿ ಸಂತ್ರಸ್ತರಾದವರ ಸಂಖ್ಯೆ ಸಾವಿರಾರು ಪಟ್ಟು ಅಧಿಕ. ಆದರೆ ಖಾಸಗಿತನದ ಮೇಲಿನ ತೀರ್ಪನ್ನು ಮಾಧ್ಯಮಗಳು ಜುಜುಬಿಯಾಗಿ ಪರಿಗಣಿಸಿದುವು. ತ್ರಿವಳಿ ತಲಾಕನ್ನು ಅತಿ ಗಂಭೀರವಾಗಿ ಕಂಡುವು. ಮಾಧ್ಯಮ ಮನಸ್ಥಿತಿಯನ್ನು ಮತ್ತು ಅದರ ಬೇಜವಾಬ್ದಾರಿ ನೀತಿಯನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ಇದು ಧಾರಾಳ ಸಾಕು.

No comments:

Post a Comment