Monday, 11 September 2017

ವೃದ್ಧಾಶ್ರಮ ಪರಿಹಾರವಾಗುವ ಮೊದಲು...

      ಏಜ್‍ವೆಲ್ ಫೌಂಡೇಶನ್ ಎಂಬ ಸಂಸ್ಥೆಯು ವೃದ್ಧರಿಗೆ ಸಂಬಂಧಿಸಿ 2015ರಲ್ಲಿ ಬಿಡುಗಡೆಗೊಳಿಸಿದ Human Rights of elderly in India: A critical reflection on social Development ಎಂಬ ಹೆಸರಿನ ಸಮೀಕ್ಷಾ ವರದಿಯನ್ನು ಗಮನಿಸುವಾಗ ಕಳೆದವಾರ ಸುಪ್ರೀಮ್ ಕೋರ್ಟ್ ನೀಡಿದ ಆದೇಶವು ಮಹತ್ವಪೂರ್ಣವಾಗಿ ಕಾಣುತ್ತದೆ. ಎಲ್ಲ ಜಿಲ್ಲೆಗಳ ಪ್ರತಿಯೊಂದು ವೃದ್ಧಾಶ್ರಮದ ಸ್ಥಿತಿಗತಿಯ ಕುರಿತು ವರದಿ ನೀಡುವಂತೆ ಸು. ಕೋರ್ಟು ದೇಶದ ಎಲ್ಲ ರಾಜ್ಯಗಳಿಗೆ ಆದೇಶ ನೀಡಿದೆ. ರಾಜ್ಯದ ಸಚಿವ ಸಂಪುಟ ವಿಸ್ತರಣೆ, ಬಾಬಾ ರಾಮ್-ರಹೀಮ್, ಜಿಡಿಪಿ ಕುಸಿತ, ನೋಟು ಅಮಾನ್ಯೀಕರಣದ ವೈಫಲ್ಯಗಳ ಚರ್ಚೆಯಲ್ಲಿ ಬಹುತೇಕ ಸುದ್ದಿಯಾಗದೇ ಹೋದ ಈ ಆದೇಶವು ಸುಮಾರು 10 ಕೋಟಿಗಿಂತಲೂ ಅಧಿಕ ವೃದ್ಧರನ್ನು ಹೊಂದಿರುವ ದೇಶವೊಂದರಲ್ಲಿ ಚರ್ಚೆಯಾಗದೇ ಹೋಗುವುದು ಅತ್ಯಂತ ವಿಷಾದಕರ.
     ಹಿರಿಯರನ್ನು ಗೌರವದಿಂದ ಕಾಣುವ ಪರಂಪರೆಯೊಂದು ಈ ದೇಶಕ್ಕಿದೆ. ಮಾತೃ ದೇವೋಭವ, ಪಿತೃ ದೇವೋಭವ ಎಂಬ ಪದಗುಚ್ಛ ಈ ದೇಶದಲ್ಲಿ ಪ್ರಚಲಿತದಲ್ಲಿದೆ. ತಂದೆ ಮತ್ತು ತಾಯಿಯು ದೇವನಿಗೆ ಸಮಾನವೆಂಬಷ್ಟು ಗೌರವಾರ್ಹ ಭಾವನೆಯು ಈ ದೇಶದ ಸಂಸ್ಕೃತಿಯ ಭಾಗವಾಗಿ ಬಿಟ್ಟಿದೆ. ಆದ್ದರಿಂದಲೋ ಏನೋ ಮುಂದುವರಿದ ಮತ್ತು ಜನಸಂಖ್ಯೆಯಲ್ಲಿ ತೀರಾ ಕಡಿಮೆ ಇರುವ ರಾಷ್ಟ್ರಗಳಿಗೆ ಹೋಲಿಸಿದರೆ, ಜನಸಂಖ್ಯೆಯಲ್ಲಿ ಎಷ್ಟೋ ಪಾಲು ಅಧಿಕ ಇರುವ ಭಾರತದಲ್ಲಿ ವೃದ್ಧಾಶ್ರಮಗಳು ಕಡಿಮೆ. ಎಲ್ಲ ರಾಜ್ಯಗಳಲ್ಲಿರುವ ಅಧಿಕೃತ ವೃದ್ಧಾಶ್ರಮಗಳ ಸಂಖ್ಯೆ 500ರನ್ನು ಮೀರುವುದಿಲ್ಲ. 10 ಕೋಟಿಗಿಂತಲೂ ಅಧಿಕ ವೃದ್ಧರಿರುವ ದೇಶವೊಂದಕ್ಕೆ 500ರಷ್ಟು ವೃದ್ಧಾಶ್ರಮಗಳು ಸಾಲಬಹುದೇ ಎಂಬುದು ಒಂದು ಪ್ರಶ್ನೆಯಾದರೆ, ವೃದ್ಧರಿಗೆ ವೃದ್ಧಾಶ್ರಮಗಳ ಅಗತ್ಯವಿದೆಯೇ ಎಂಬ ಪ್ರಶ್ನೆಯೂ ಇದರ ಜೊತೆಜೊತೆಗೇ ಹುಟ್ಟಿಕೊಳ್ಳುತ್ತದೆ.
       ಹುಟ್ಟುವಾಗ ಯಾರೂ ವೃದ್ಧರಾಗಿ ಹುಟ್ಟುವುದಿಲ್ಲ. ಮಗುತನ, ಹದಿಹರೆಯ, ಯೌವನ, ನಡುವಯಸ್ಸನ್ನು ದಾಟಿಯೇ ಪ್ರತಿಯೊಬ್ಬರೂ ವೃದ್ಧಸ್ಥಿತಿಗೆ ತಲುಪುತ್ತಾರೆ. ಇದೊಂದು ಪ್ರಕ್ರಿಯೆ. ಮಗುವಾಗಿದ್ದವರು ವಿವಿಧ ಹಂತಗಳನ್ನು ದಾಟಿ ವೃದ್ಧಾವಸ್ಥೆಗೆ ತಲುಪುವಾಗ ಅವರ ಮಕ್ಕಳು ಅವರನ್ನು ಈ ಪ್ರಕ್ರಿಯೆಯಲ್ಲಿ ಹಿಂಬಾಲಿಸುತ್ತಾ ಇರುತ್ತಾರೆ. ಅಪ್ಪ ಮತ್ತು ಅಮ್ಮ ನಡುವಯಸ್ಸನ್ನು ದಾಟುವಾಗ ಅವರ ಮಕ್ಕಳು ಹದಿಹರೆಯಕ್ಕೋ ಅದಕ್ಕಿಂತ ಸಣ್ಣ ಪ್ರಾಯಕ್ಕೋ ತಲುಪಿರುತ್ತಾರೆ. ಹೆತ್ತವರು ದುಡಿಯುವುದು, ತಮ್ಮ ಇಷ್ಟಗಳನ್ನು ಪೂರೈಸುವುದು, ಶಾಲಾ ಖರ್ಚು ವೆಚ್ಚವನ್ನು ನೋಡಿಕೊಳ್ಳುವುದು, ಸುತ್ತಾಡಿಸುವುದು.. ಇತ್ಯಾದಿಗಳು ಪ್ರತಿದಿನ ಈ ಮಕ್ಕಳ ಕಣ್ಣೆದುರಲ್ಲೇ ನಡೆಯುತ್ತಿರುತ್ತವೆ. ಆದ್ದರಿಂದ ಹೆತ್ತವರು ವೃದ್ಧಾಪ್ಯಕ್ಕೆ ತಲುಪುವುದೆಂಬುದು ದಿಢೀರ್ ಪ್ರಕ್ರಿಯೆಯಲ್ಲ. ಹೆತ್ತವರನ್ನು ಆ ಸ್ಥಿತಿಯಲ್ಲಿ ನೋಡುವುದಕ್ಕೆ ನಾವಿನ್ನೂ ಮಾನಸಿಕವಾಗಿ ಸಜ್ಜಾಗಿಲ್ಲ ಎಂದು ಮಕ್ಕಳು ಸಬೂಬು ಹೇಳುವಂತೆಯೂ ಇಲ್ಲ. ಪವಿತ್ರ ಕುರ್‍ಆನ್ ಅಂತೂ ವೃದ್ಧ ಹೆತ್ತವರ ಆರೈಕೆಯ ಸಂಪೂರ್ಣ ಹೊಣೆಯನ್ನು ಅವರ ಮಕ್ಕಳ ಮೇಲೆ ಹೇರಿದೆ. ಹೆತ್ತವರು ತಮ್ಮ ಮಕ್ಕಳನ್ನು ಶಿಶು ಪ್ರಾಯದಲ್ಲಿ ಹೇಗೆ ಆರೈಕೆ ಮಾಡಿದ್ದರೋ ಮತ್ತು ಯಾವ ಪ್ರೇಮಭಾವವನ್ನು ಹೊಂದಿದ್ದರೋ ಅದೇ ರೀತಿಯಲ್ಲಿ ಆ ಮಕ್ಕಳು ವೃದ್ಧರಾದ ತಮ್ಮ ಹೆತ್ತವರನ್ನು ಆರೈಕೆ ಮಾಡಬೇಕೆಂದು ಅದು ತಾಕೀತು ಮಾಡಿದೆ. ಎಲ್ಲಿಯ ವರೆಗೆಂದರೆ, ಎಷ್ಟೇ ದೊಡ್ಡ ಧರ್ಮಿಷ್ಟನಾದರೂ ಆತ ತನ್ನ ಹೆತ್ತವರ ಕೋಪಕ್ಕೆ ಗುರಿಯಾಗಿದ್ದರೆ ಸ್ವರ್ಗ ಪಡೆಯಲಾರ ಎಂದು ಕಟುವಾಗಿ ಎಚ್ಚರಿಸುವಷ್ಟು. ಹೆತ್ತವರ ಬಗ್ಗೆ ‘ಛೆ’ ಎಂಬ ತಿರಸ್ಕಾರದ ಧ್ವನಿಯನ್ನೂ ಉದ್ಘರಿಸಬಾರದು ಅನ್ನುವಷ್ಟು. ಹಾಗಂತ, ಹೆತ್ತವರನ್ನು ಗೌರವಿಸುವಂತೆ ತಾಕೀತು ಮಾಡಿರುವುದು ಪವಿತ್ರ ಕುರ್‍ಆನ್ ಮಾತ್ರವಲ್ಲ, ಹಿಂದೂ ಧರ್ಮದಲ್ಲೂ ಇದಕ್ಕೆ ನಿದರ್ಶನಗಳಿವೆ. ಶ್ರವಣಕುಮಾರನ ಕತೆ ಬಹುತೇಕ ಜನಜನಿತ. ಆದರೆ ಏಜ್‍ವೆಲ್ ಫೌಂಡೇಶನ್ ನೀಡಿರುವ ವರದಿ ಮತ್ತು ಮಾಧ್ಯಮಗಳಲ್ಲಿ ನಾವು ಆಗಾಗ ಓದುತ್ತಿರುವ ಸುದ್ದಿಗಳನ್ನು ಪರಿಗಣಿಸಿದರೆ, ಈ ಪರಂಪರೆಯಲ್ಲಿ ಬಿರುಕು ಮೂಡಿರುವುದು ಹಾಗೂ ತೇಪೆ ಹಚ್ಚಲಾಗದಷ್ಟು ಅವು ಅಪಾಯಕಾರಿ ಹಂತಕ್ಕೆ ತಲುಪುತ್ತಿರುವುದು ಸ್ಪಷ್ಟವಾಗುತ್ತಿದೆ. ದೇಶದ್ಯಾಂತ ಪ್ರತಿ ಮೂವರು ವೃದ್ಧರಲ್ಲಿ ಒಬ್ಬರು ತಮ್ಮ ಕುಟುಂಬಸ್ಥರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎಂದು ಏಜ್‍ವೆಲ್ ಫೌಂಡೇಶನ್ ಬಿಡುಗಡೆ ಮಾಡಿರುವ ವರದಿ ಹೇಳುತ್ತದೆ. ಪ್ರತಿ ಮೂವರಲ್ಲಿ ಓರ್ವ ವೃದ್ಧರು ದೈಹಿಕವಾಗಿ ಹಿಂಸೆಗೆ ಒಳಗಾಗುತ್ತಾರೆ ಮತ್ತು ನಿಂದನೀಯ ಮಾತುಗಳನ್ನು ಆಲಿಸುತ್ತಾರೆ ಎಂದು ವರದಿ ವಿವರಿಸಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ದೇಶಾದ್ಯಂತದ ಸುಮಾರು 5 ಸಾವಿರ ಮಂದಿಯನ್ನು ಭೇಟಿಯಾಗಿ ತಯಾರಿಸಲಾದ ವರದಿ ಇದು. 2490 ಮಂದಿ ಪುರುಷರು ಮತ್ತು 2510 ಮಂದಿ ಮಹಿಳೆಯರನ್ನು ಈ ವರದಿ ತಯಾರಿಕೆಯ ವೇಳೆ ಭೇಟಿ ಮಾಡಲಾಗಿದೆ. ನಗರ ಪ್ರದೇಶದ ವೃದ್ಧರಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದ ವೃದ್ಧರೇ ಹೆಚ್ಚು ಸುರಕ್ಷಿತರು ಎಂದೂ ಹೇಳಲಾಗಿದೆ. ಅಂದಹಾಗೆ, 10 ಕೋಟಿಗಿಂತಲೂ ಅಧಿಕ ವೃದ್ಧರಿರುವ ದೇಶದಲ್ಲಿ ಬರೇ 5 ಸಾವಿರ ಮಂದಿಯ ಅಭಿಪ್ರಾಯಗಳು ಹೇಗೆ 10 ಕೋಟಿಯನ್ನು ಪ್ರತಿನಿಧಿಸಬಲ್ಲುದು ಎಂಬ ಪ್ರಶ್ನೆಯ ಆಚೆಗೆ ಈ ವರದಿಯ ಮೇಲೆ ಈ ದೇಶದಲ್ಲಿ ವಿಶ್ಲೇಷಣೆ ನಡೆಯಬೇಕು. ವೃದ್ಧರು ತಮ್ಮ ವಯಸ್ಸನ್ನು ಭಾರವಾಗಿ ನೋಡದಂಥ ಸೌಖ್ಯ ವಾತಾವರಣವನ್ನು ನಿರ್ಮಿಸುವುದು ಹೇಗೆ? ಪ್ರತಿಭಟನೆ ಮಾಡುವಂಥ ವಯಸ್ಸು ಅವರದಲ್ಲ. ಇನ್ನೊಬ್ಬರೊಂದಿಗೆ ದುಮ್ಮಾನ ಹೇಳಿಕೊಳ್ಳುವುದು ಅನೇಕ ಬಾರಿ ಅವರ ಪಾಲಿಗೆ ಅಪಾಯಕಾರಿಯಾಗಿರುತ್ತದೆ. ಆದ್ದರಿಂದಲೇ ಹೆಚ್ಚಿನ ಬಾರಿ ಅವರ ಸಮಸ್ಯೆಗಳು ಹೊರ ಜಗತ್ತಿನ ಮುಂದೆ ತೆರೆದುಕೊಳ್ಳುವುದೇ ಇಲ್ಲ. ಇಂಥ ಸ್ಥಿತಿಯಲ್ಲಿ, ವೃದ್ಧರಿಗೆ ಸೌಖ್ಯ ಭಾವ ಒದಗಿಸಿಕೊಡುವ ವಿಧಾನ ಯಾವುದು? ವೃದ್ಧಾಶ್ರಮಗಳಲ್ಲಿ ಇದನ್ನು ಹುಡುಕಬಹುದೇ? ಅದು ಅವರಿಗೆ ನೆಮ್ಮದಿಯನ್ನು ಕೊಡಬಹುದೇ? ದೇಶದ  ವೃದ್ಧಾಶ್ರಮಗಳ ಪರಿಸ್ಥಿತಿ ಹೇಗಿದೆ, ಅವು ವೃದ್ಧರನ್ನು ಸೇರಿಸಿಕೊಳ್ಳುವ ಮೊದಲು ಏನೆಲ್ಲ ಷರತ್ತುಗಳನ್ನು ಹಾಕುತ್ತವೆ, ಆ ಷರತ್ತುಗಳನ್ನು ಪೂರೈಸಲು ಎಷ್ಟು ವೃದ್ಧರು ಶಕ್ತರಿದ್ದಾರೆ, ಪೂರೈಸಲಾಗದ ಷರತ್ತಿನ ಕಾರಣಕ್ಕಾಗಿಯೇ ಎಷ್ಟು ವೃದ್ಧರು ಬೀದಿಗೆ ಬಿದ್ದಿದ್ದಾರೆ, ವೃದ್ಧಶ್ರಮದಲ್ಲಿರುವ ವೃದ್ಧರ ಅಭಿಪ್ರಾಯಗಳೇನು... ಇತ್ಯಾದಿಗಳೂ ಮುಖ್ಯವಾಗುತ್ತವೆ. ಸುಪ್ರೀಮ್ ಕೋರ್ಟ್‍ನ ಆದೇಶ ಪ್ರಾಮುಖ್ಯತೆ ಪಡಕೊಳ್ಳುವುದು ಈ ಎಲ್ಲವುಗಳ ಹಿನ್ನಲೆಯಲ್ಲಿ.
ದೇಶದಲ್ಲಿ ವೃದ್ಧರ ಪರವಾದ ಹಲವು ಕಾನೂನುಗಳಿವೆ. ಆದರೆ, ಅವು ಅವರ ಪಾಲಿಗೆ ನೆರವಾಗಿ ಬರಬೇಕೆಂದರೆ ಮೊದಲು ಅವರು ದೂರು ಕೊಡಬೇಕು. ಪೊಲೀಸು ಠಾಣೆ, ಕೋರ್ಟು- ಕಚೇರಿಗೆ ಹೋಗುವ ಧೈರ್ಯ ತೋರಬೇಕು. ವೃದ್ಧರಲ್ಲಿ ಇಷ್ಟು ಆರೋಗ್ಯ ಮತ್ತು ಧೈರ್ಯ ಇದೆಯೇ ಅನ್ನುವುದು ಇಲ್ಲಿಯ ಮುಖ್ಯ ಪ್ರಶ್ನೆ. ಅಲ್ಲದೇ ಕುಟುಂಬದ ಮರ್ಯಾದೆಯ ಪ್ರಶ್ನೆಯೂ ಇಲ್ಲಿ ಅವರನ್ನು ಕಾಡುತ್ತದೆ. ಬದುಕಿರುವ ವರೆಗೆ ಹೇಗಾದರೂ ದಿನದೂಡುವುದು ಅನ್ನುವ ಹೊಂದಾಣಿಕೆಯ ಮನಸ್ಥಿತಿಗೆ ತಯಾರಾಗಲು ಅವರ ಸುತ್ತಲಿನ ಪರಿಸ್ಥಿತಿ ಒತ್ತಡವನ್ನು ಹೇರುತ್ತಿರುತ್ತದೆ. ಇದರಾಚೆಗೆ ಧೈರ್ಯ ತೋರುವ ವೃದ್ಧರಷ್ಟೇ ಕಾನೂನಿನಿಂದ ಲಾಭವನ್ನು ಪಡೆದುಕೊಳ್ಳಬಹುದು. ಇದು ಬಾಹ್ಯ ನೋಟಕ್ಕೆ ತೋರುವಷ್ಟು ಸುಲಭದ ಹಾದಿಯಂತೂ ಅಲ್ಲ. ವೃದ್ಧರನ್ನು ಅವರ ಮುಸ್ಸಂಜೆಯ ಪ್ರಾಯದಲ್ಲಿ ಕೋರ್ಟು- ಕಾನೂನು ಎಂದು ಅಲೆದಾಡಿಸುವುದು ಅಥವಾ ಪ್ರತಿಭಟನೆಗೆ ಕೂರಿಸುವುದು ಇವೆರಡರ ಹೊರತಾಗಿ ಮೂರನೆಯ ಆಯ್ಕೆಯಾಗಿ ವೃದ್ಧಾಶ್ರಮಗಳಷ್ಟೇ ಇರುವುದೇ? ಇದರಾಚೆಗೆ ಅವರ ಮನೆಯನ್ನೇ ಅವರಿಗೆ ನೆಮ್ಮದಿಯ ತಾಣವನ್ನಾಗಿ ಮಾಡಲು ಸಾಧ್ಯವಿಲ್ಲವೇ? ಮಕ್ಕಳಿಗೆ ಚಿಕ್ಕಂದಿನಲ್ಲೇ ಹೆತ್ತವರು ಆ ಬಗ್ಗೆ ತರಬೇತಿ ನೀಡುವುದು ಒಂದು ಆಯ್ಕೆಯಾಗಬಾರದೇ? ಹೆತ್ತವರ ಬಗ್ಗೆ ಮಕ್ಕಳು ಹೆಮ್ಮೆ ಪಟ್ಟುಕೊಳ್ಳುವ ಮತ್ತು ಅವರ ಸುಖಕ್ಕಾಗಿ ಸರ್ವ ತ್ಯಾಗಕ್ಕೂ ಸಿದ್ಧವಾಗಲು ಪ್ರೇರೇಪಿಸುವ ಬರಹ, ವೀಡಿಯೋ, ಸಿನಿಮಾ, ನಾಟಕಗಳನ್ನು ಮಕ್ಕಳಿಗೆ ತೋರಿಸುವುದನ್ನೂ ಒಂದು ಆಯ್ಕೆಯಾಗಿ ಎತ್ತಿಕೊಳ್ಳಬಹುದಲ್ಲವೇ?
      ಮುಖ್ಯವಾಗಿ, ವೃದ್ಧ ಹೆತ್ತವರನ್ನು ಗೌರವದಿಂದ ಕಾಣುವಂಥ ಶುದ್ಧ ಮನಸ್ಸನ್ನು ಆಯಾ ಹೆತ್ತವರು ಚಿಕ್ಕಂದಿನಲ್ಲೇ ತಮ್ಮ ಮಕ್ಕಳಲ್ಲಿ ಬಿತ್ತಬೇಕು. ಸಂದರ್ಭ, ಸನ್ನಿವೇಶವನ್ನು ಅದಕ್ಕಾಗಿ ಬಳಸಿಕೊಳ್ಳಬೇಕು. ಮುಂದಿನ ತಲೆಮಾರು ವೃದ್ಧ ಹೆತ್ತವರಿಗೆ ವೃದ್ಧಾಶ್ರಮಗಳನ್ನು ಪರ್ಯಾಯ ಮನೆಯಾಗಿ ಕಂಡುಕೊಳ್ಳದಂತೆ ಪ್ರೇರೇಪಣೆ ನೀಡಬೇಕು. ಅನಿವಾರ್ಯ ಕಾರಣಗಳ ಹೊರತು ವೃದ್ಧಾಶ್ರಮ ಎಂದೂ ಪರಿಹಾರ ಆಗಬಾರದು.

No comments:

Post a Comment