Thursday, 31 August 2017

ಪ್ರವಾದಿ ಇಬ್ರಾಹೀಮ್ ಪ್ರಸ್ತುತಪಡಿಸಿದ ಶ್ರಮಸಂಸ್ಕೃತಿ

    ಶ್ರಮಸಂಸ್ಕೃತಿ  ಅನ್ನುವ ಪದಗುಚ್ಛವಿದೆ. ಕಾರ್ಲ್ ಮಾರ್ಕ್ಸ್ ನ ಚಿಂತನೆ ಹರಳುಗಟ್ಟುವುದೇ ಶ್ರಮಸಂಸ್ಕೃತಿಯ ಮೇಲೆ. ಬಸವಣ್ಣ ಬೋಧಿಸಿದ `ಕಾಯಕವೇ ಕೈಲಾಸ' ಎಂಬ ತತ್ವ ಪದವು ಲಿಂಗಾಯತ ಧರ್ಮದ ಮೂಲ ಬೇರು. ಬುದ್ಧನೂ ಇದಕ್ಕೆ ಹೊರತಲ್ಲ. ಇವುಗಳ ಜೊತೆಗೇ ಇಸ್ಲಾಮ್, ಕ್ರೈಸ್ತ ಮತ್ತು ಯಹೂದಿ- ಈ ಮೂರೂ ಧರ್ಮಗಳು ಗೌರವಿಸುವ ಮತ್ತು ಮಾನ್ಯ ಮಾಡುವ ಪ್ರವಾದಿ ಇಬ್ರಾಹೀಮ್(ಅ)ರು ಪರಿಚಯ ಪಡಿಸಿದ ಶ್ರಮಸಂಸ್ಕೃತಿಯನ್ನು ಹೋಲಿಸಿ ನೋಡಿದರೆ ಹೇಗನಿಸುತ್ತದೆ? ಬುದ್ಧ, ಬಸವ, ಮಾರ್ಕ್ಸ್ ಮತ್ತು ಇಂಥ ಇನ್ನಿತರ ಸುಧಾರಕರ ಚಿಂತನೆಗಳಿಗೂ ಪ್ರವಾದಿ ಇಬ್ರಾಹೀಮರ(ಅ) ಚಿಂತನೆಗೂ ನಡುವೆ ಇರುವ ಪ್ರಮುಖ ವ್ಯತ್ಯಾಸ ಏನೆಂದರೆ, ಅದು ಆಧ್ಯಾತ್ಮಿಕತೆ. ಇಬ್ರಾಹೀಮರು(ಅ) ಶ್ರಮಸಂಸ್ಕೃತಿಯನ್ನು ಆಧ್ಯಾತ್ಮಿಕತೆ ಯೊಂದಿಗೆ ಜೋಡಿಸಿದರು. ಅವರು ಶ್ರಮವನ್ನೇ ಕೈಲಾಸ ಅನ್ನಲಿಲ್ಲ. ಶ್ರಮ ಮತ್ತು ಕೈಲಾಸವನ್ನು ವಿಭಜಿಸಿ, ಒಂದನ್ನೊಂದು ಪೋಣಿಸಿದರು. ಶ್ರಮ ಜೀವಂತ ವ್ಯಕ್ತಿಗೆ ಸಂಬಂಧಿಸಿದ್ದು. ಕೈಲಾಸವಾದರೋ ಶ್ರಮದ ಸಂಕಲ್ಪಕ್ಕೆ ಹೊಂದಿಕೊಂಡು ಮರಣಾನಂತರ ಲಭ್ಯವಾಗುವಂಥದ್ದು ಎಂದು ವಾದಿಸಿದರು. ಇರಾಕ್‍ನ ಉರ್ ಎಂಬ ಪಟ್ಟಣದಿಂದ ಬಹುದೂರದ ಮಕ್ಕಾಕ್ಕೆ ಪತ್ನಿ ಹಾಜರಾ ಮತ್ತು ಹಸುಳೆ ಇಸ್ಮಾಈಲ್‍ರ ಜೊತೆ ಅವರು ಪಯಣ ಬೆಳೆಸಿದ್ದು, ಮಕ್ಕಾದ ನಿರ್ಜನ ಭೂಮಿಯಲ್ಲಿ ಪತ್ನಿ ಮತ್ತು ಮಗುವನ್ನು ತಂಗುವಂತೆ ಹೇಳಿದ್ದು ಮತ್ತು ಮಗುವಿನ ಕಾಲಬುಡದಲ್ಲಿ ನೀರಿನ ಒರತೆ ಚಿಮ್ಮಿದ್ದು... ಇವೆಲ್ಲದರಲ್ಲಿ ಬರೇ ಶ್ರಮವೊಂದೇ ಗೋಚರವಾಗುವುದಲ್ಲ, ದೇವನ ಮೇಲಿನ ಅಚಲ ವಿಶ್ವಾಸ ಮತ್ತು ಅದಕ್ಕೆ ಲಭ್ಯವಾದ ಪುರಸ್ಕಾರವೂ ಗೋಚರವಾಗುತ್ತದೆ. ಬರೇ ಹೊಟ್ಟೆಪಾಡಿನ (ಶ್ರಮ) ಗುರಿಯೊಂದಿಗೆ ಇಬ್ರಾಹೀಮ್ ಮತ್ತು ಅವರ ಕುಟುಂಬ ಯಾತ್ರೆ ಹೊರಟಿರುತ್ತಿದ್ದರೆ ಮಕ್ಕಾದಲ್ಲಿ ಹಾಜರಾರು ಹೇಗೆ ವರ್ತಿಸುತ್ತಿದ್ದರು? ಇಬ್ರಾಹೀಮರೊಂದಿಗೆ ಏನೆಂದು ಪ್ರಶ್ನಿಸುತ್ತಿದ್ದರು? ಆಧ್ಯಾತ್ಮಿಕ ರಹಿತ ಯಾತ್ರೆ (ಶ್ರಮ) ಮತ್ತು ಆಧ್ಯಾತ್ಮಿಕ ಸಹಿತ ಯಾತ್ರೆಗಳು ಮುಖಾಮುಖಿಯಾಗುವುದು ಇಲ್ಲೇ. ಮಕ್ಕಾದಲ್ಲಿ ತಂಗುವಂತೆ ಹೇಳಿ ಹೊರಟು ನಿಂತ ಪತಿ ಇಬ್ರಾಹೀಮ್‍ರರೊಂದಿಗೆ(ಅ) ಹಾಜರಾ- ‘ಇದು ದೇವನ ಆದೇಶವೇ’ ಎಂದು ಪ್ರಶ್ನಿಸುತ್ತಾರೆ. ಇಹಲೋಕ ಮತ್ತು ಪರಲೋಕ ಎಂಬ ಆಧ್ಯಾತ್ಮಿಕ ಸತ್ಯವನ್ನು ಒಪ್ಪಿಕೊಂಡ ಹಾಗೂ ಇಹದ ಜೀವನವನ್ನು ಆಧಾರವಾಗಿಸಿಕೊಂಡು ಪಾರತ್ರಿಕ ಕೈಲಾಸ ಲಭ್ಯವಾಗುತ್ತದೆ ಎಂದು ವಿಶ್ವಾಸವಿಡುವವರಿಂದ ಮಾತ್ರ ಇಂಥ ಪ್ರಶ್ನೆ ಸಾಧ್ಯ. ‘ನಾನಿಲ್ಲಿರುವುದು ದೇವನ ಇಚ್ಛೆ ಎಂದಾದರೆ, ಹಾಗೆಯೇ ಆಗಲಿ’ ಎಂದು ಹಾಜರಾ ಹೇಳುತ್ತಾರೆ. ಮಾತ್ರವಲ್ಲ, ಮಗುವಿಗೆ ನೀರಿನ ಅಗತ್ಯ ಕಂಡು ಬಂದಾಗ ಹುಡುಕಲಾರಂಭಿಸುತ್ತಾರೆ. ಬೆಟ್ಟಗಳ ನಡುವೆ ಅಲೆಯುತ್ತಾರೆ. ಆಗ ಉದ್ಭವವಾಗುವ ನೀರಿನ ಚಿಲುಮೆಯೇ ಝಂ ಝಂ. ಅದು ಶ್ರಮ ಮತ್ತು ದೇವನ ಮೇಲಿನ ಅಚಂಚಲ ವಿಶ್ವಾಸದ ಪ್ರತೀಕ. ಬರೇ ಶ್ರಮ ಅಥವಾ ಬರೇ ವಿಶ್ವಾಸಗಳ ಆಚೆಗಿನ ಕತೆಯೊಂದನ್ನು ಝಂ ಝಂ ಹೇಳುತ್ತದೆ. ಶ್ರಮ ಮತ್ತು ದೇವ ವಿಶ್ವಾಸವು ಅಪೂರ್ವ ಮತ್ತು ಅನೂಹ್ಯವಾದ ಸಾಧನೆಯನ್ನು ಮಾಡಿಸಬಲ್ಲುದು ಅನ್ನುವುದಕ್ಕೆ ಸಾಕ್ಷಿ ಝಂ ಝಂ. ಸಾಮಾನ್ಯವಾಗಿ ಬರೇ ಶ್ರಮವನ್ನೇ ಗುರಿಯಾಗಿಸಿಕೊಂಡು, ಅದನ್ನೇ ಕೈಲಾಸವೆಂದುಕೊಂಡು ಮತ್ತು ಮರಣಾನಂತರ ಏನೂ ಇಲ್ಲ ಎಂದುಕೊಂಡು ಬದುಕುವವರು ಹಾಜರಾರ ಸ್ಥಾನದಲ್ಲಿರುತ್ತಿದ್ದರೆ ಅಲ್ಲಿ ನಡೆಯಬಹುದಾಗಿದ್ದ ಮಾತುಕತೆಯ ಸನ್ನಿವೇಶವನ್ನೊಮ್ಮೆ ಕಲ್ಪಿಸಿಕೊಳ್ಳಿ. ನೀರಿಲ್ಲದ ಮತ್ತು ಜನವಾಸವಿಲ್ಲದ ಪ್ರದೇಶದಲ್ಲಿ ತಾಯಿ ಮತ್ತು ಮಗುವು ತಂಗುವಂತೆ ಹೇಳುವುದೇ ಅತೀ ದೊಡ್ಡ ಪ್ರಮಾದವಾಗಿ ಆಧ್ಯಾತ್ಮಿಕರಹಿತ ಶ್ರಮಸಂಸ್ಕೃತಿ  ವ್ಯಾಖ್ಯಾನಿಸುವ ಸಾಧ್ಯತೆಯಿದೆ. ಆದ್ದರಿಂದಲೇ, ಪ್ರವಾದಿ ಇಬ್ರಾಹೀಮ್(ಅ) ಪ್ರಸ್ತುತಪಡಿಸಿದ ಶ್ರಮಸಂಸ್ಕೃತಿ  ವಿಭಿನ್ನವಾದುದು. ಅವರ ಶ್ರಮಸಂಸ್ಕೃತಿಯಲ್ಲಿ ದೇವನು ಹೊರಗಲ್ಲ, ಒಳಗೆ. ದೇವನ ಮೇಲಿನ ವಿಶ್ವಾಸವು- ಎಷ್ಟೇ ಕಠಿಣ ಮತ್ತು ಅಪಾಯಕಾರಿ ಶ್ರಮವನ್ನೂ ಸುಲಭಗೊಳಿಸಬಲ್ಲುದು ಎಂದು ಅದು ಸಾರುತ್ತದೆ. ಇದಕ್ಕೆ ಹಾಜರಾ ಮತ್ತು ಝಂ ಝಂ ಉತ್ತಮ ಉದಾಹರಣೆ. 5 ಸಾವಿರ ವರ್ಷಗಳಷ್ಟು ಹಿಂದೆ ಆಗಿ ಹೋದ ಶ್ರಮವು ಸಾರ್ವಕಾಲಿಕ ಶ್ರಮಸಂಸ್ಕೃತಿಯಾಗಿ ಮಾರ್ಪಾಟುಗೊಂಡಿರುವುದು ಮತ್ತು ಪ್ರತಿವರ್ಷ ಈ ಶ್ರಮಸಂಸ್ಕೃತಿಯ ಭಾಗವಾಗಲು ವಿಶ್ವಾದ್ಯಾಂತ ಜನರಿಂದ ಪೈಪೋಟಿ ನಡೆಯುತ್ತಿರುವುದು ಆ ಶ್ರಮದ ಮಹತ್ವ ಮತ್ತು ಯಶಸ್ಸನ್ನು ಹೇಳುತ್ತದೆ. ಆದ್ದರಿಂದಲೇ ಹಜ್ಜ್ ವಿಭಿನ್ನ, ಸಾರ್ವಕಾಲಿಕ. 

No comments:

Post a Comment