Friday, 11 August 2017

32 + 16= ?

        ಇರೋಮ್ ಶರ್ಮಿಳಾ ಮತ್ತು ಮೇಧಾ ಪಾಟ್ಕರ್ ಮತ್ತೆ ಸುದ್ದಿಯಲ್ಲಿದ್ದಾರೆ. ಇವರಲ್ಲಿ ಇರೋಮ್ ಶರ್ಮಿಳಾ ಸದ್ಯ ಕೊಡೈಕನಾಲ್‍ನಲ್ಲಿ ಮದುವೆ ತಯಾರಿಯಲ್ಲಿ ಬ್ಯುಝಿಯಾಗಿದ್ದಾರೆ. ಮೇಧಾ ಪಾಟ್ಕರ್ ಅವರು ಮಧ್ಯ ಪ್ರದೇಶದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹದಲ್ಲಿ ನಿರತರಾಗಿದ್ದಾರೆ. ವಿಷಾದ ಏನೆಂದರೆ, ಬಹುತೇಕ ಕನ್ನಡ ಪತ್ರಿಕೆಗಳು (ಸತ್ಯಾಗ್ರಹದ 15 ದಿನಗಳ ವರೆಗೆ.) ಮೇಧಾರ ಸತ್ಯಾಗ್ರಹದ ಸುದ್ದಿಯನ್ನು ಪ್ರಕಟಿಸಿಯೇ ಇಲ್ಲ. ಅದೇ ವೇಳೆ, ರಾಷ್ಟ್ರಮಟ್ಟದ ಇಂಗ್ಲಿಷ್ ಪತ್ರಿಕೆಗಳು ಈ ಸತ್ಯಾಗ್ರಹಕ್ಕೆ ಒಳಪುಟದಲ್ಲಿ ಒಂದು ಕಾಲಂನಷ್ಟು ಜಾಗವನ್ನಷ್ಟೇ ಕೊಟ್ಟಿವೆ. ಇದಕ್ಕೆ ಹೋಲಿಸಿದರೆ ಇರೋಮ್ ಭಾಗ್ಯಶಾಲಿ. ಆಕೆ ಕೊಡೈಕನಾಲ್‍ನಲ್ಲಿ ತಂಗಿರುವುದು, ಬ್ರಿಟಿಷ್ ಪೌರತ್ವ ಪಡೆದಿರುವ ಡೆಸ್ಮಾಂಡ್ ಕುಟಿನ್ಹೊ ಜೊತೆ ಅಂತರ್ಧಮೀಯ ವಿವಾಹಕ್ಕಾಗಿ ನೋಂದಣಿ ಮಾಡಿಕೊಂಡಿರುವುದು ಮತ್ತು ಹಿಂದೂ ಮಕ್ಕಳ ಕಚ್ಚಿಯಂಥ ಸಂಘಟನೆಗಳು ಆ ಮದುವೆಗೆ ವಿರೋಧ ಸೂಚಿಸಿ ದೂರು ದಾಖಲಿಸಿರುವುದೆಲ್ಲ ಮಾಧ್ಯಮಗಳ ಪಾಲಿಗೆ ರಸವತ್ತಾದ ಸುದ್ದಿಯಾಗಿ ಮಾರ್ಪಾಟುಗೊಂಡಿದೆ. 2000 ಇಸವಿಯಲ್ಲಿ ಇರೋಮ್ ಶರ್ಮಿಳಾ ಆಮರಣಾಂತ ಉಪವಾಸವನ್ನು ಕೈಗೊಂಡು ದೇಶದಾದ್ಯಂತ ಸುದ್ದಿಯಾಗಿದ್ದರು. ಹರೆಯದ ಯುವತಿಯೊಬ್ಬಳು ಪ್ರಜಾಸತ್ತಾತ್ಮಕ ವಿಧಾನದ ಮೂಲಕ ವ್ಯವಸ್ಥೆಯನ್ನು ಎದುರಿಸುವ ನಿರ್ಧಾರ ತಳೆದುದು ಅತ್ಯಂತ ಧೈರ್ಯದ ಕೆಲಸ. ಮಣಿಪುರದ ಮೇಲೆ ಕೇಂದ್ರ ಸರಕಾರ ಹೇರಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ(AFSPA )ಯನ್ನು ಹಿಂತೆಗೆಯಬೇಕು ಎಂಬುದು ಯುವತಿಯ ಬೇಡಿಕೆಯಾಗಿತ್ತು. ಆ ಯುವತಿ ಅನ್ನ, ನೀರು ತ್ಯಜಿಸಿದಳು. ಕನ್ನಡಿ ನೋಡಲ್ಲ, ತಲೆಗೂದಲು ಬಾಚಲ್ಲ ಎಂದು ಶಪಥಗೈದಳು. ಆಕೆಯ ಸಾವನ್ನು ತಪ್ಪಿಸುವುದಕ್ಕಾಗಿ ಸರಕಾರ ಆಗಾಗ ಬಂಧಿಸಿ ನಳಿಕೆಯ ಮೂಲಕ ಬಲವಂತದಿಂದ ಆಹಾರವನ್ನು ಕೊಡಲು ಪ್ರಾರಂಭಿಸಿತು. ಕ್ರಮೇಣ ಮಾಧ್ಯಮಗಳೂ ಆಕೆಯ ಸತ್ಯಾಗ್ರಹದ ಮೇಲೆ ಆಸಕ್ತಿಯನ್ನು ಕಳಕೊಳ್ಳತೊಡಗಿದುವು. ಜನರು ನಿಧಾನಕ್ಕೆ ಅವರ ಸುತ್ತಲಿನಿಂದ ಕರಗತೊಡಗಿದರು. ಬಳಿಕ ವರ್ಷಕ್ಕೊಮ್ಮೆ ಸ್ಮರಣೆಗೆ ಒಳಗಾಗುವ ವ್ಯಕ್ತಿತ್ವವಾಗಿ ಇರೋಮ್ ಬದಲಾದರು. ಹಾಗಂತ, ಇರೋಮ್ ತನ್ನ ಶಪಥದಲ್ಲಿ ಯಾವ ರಾಜಿಯನ್ನೂ ಮಾಡಿಕೊಂಡಿರಲಿಲ್ಲ. ಮಾತ್ರವಲ್ಲ, ಮಣಿಪುರದಲ್ಲಿರುವ ಸಶಸ್ತ್ರ ಪಡೆಗಳು ಪರಮ ದಯಾಳುವಾಗಿಯೂ ಮಾರ್ಪಟ್ಟಿರಲಿಲ್ಲ. ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳು ಮಣಿಪುರದಲ್ಲಿ 2000 ಇಸವಿಯ ಬಳಿಕವೂ ಧಾರಾಳ ನಡೆದಿದೆ. ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ನೇತೃತ್ವದಲ್ಲಿ ನಡೆದ ತನಿಖಾ ಸಮಿತಿಯು 1500 ಎನ್‍ಕೌಂಟರ್‍ಗಳ ಬಗ್ಗೆ ಶಂಕೆ ವ್ಯಕ್ತಪಡಿಸಿ ಸುಪ್ರೀಮ್ ಕೋರ್ಟ್‍ಗೆ ವರದಿಯನ್ನು ನೀಡಿದೆ. ಆ ಬಗ್ಗೆ ಸುಪ್ರೀಮ್ ಕೋರ್ಟ್ ತನಿಖೆಗೂ ಆದೇಶಿಸಿದೆ. ಇಷ್ಟಿದ್ದೂ ಇರೋಮ್‍ರ ಹೋರಾಟವು ನಿಧಾನವಾಗಿ ಜನರ ನಿರ್ಲಕ್ಷ್ಯಕ್ಕೆ ಯಾಕೆ ಒಳಗಾಯಿತೆಂಬ ಪ್ರಶ್ನೆ ಖಂಡಿತ ಪ್ರಸ್ತುತ. ವ್ಯವಸ್ಥೆ ಅತ್ಯಂತ ಯೋಜಿತವಾಗಿ ಆಕೆಯ ವಿರುದ್ಧ ಅಪಪ್ರಚಾರದಲ್ಲಿ ತೊಡಗಿತು. ಆಕೆಯ ಹೋರಾಟ ಮಾದರಿಯನ್ನು ಅಪ್ರಸ್ತುತವೆಂದು ಸಾರಿತು. ಇರೋಮ್‍ರದ್ದು ನಕಾರಾತ್ಮಕ ಸಿದ್ಧಾಂತವೆಂದು ಪ್ರತಿಪಾದಿಸಿತು. ಮಣಿಪುರದ ಪಾಲಿಗೆ ಅಪಾಯಕಾರಿಯಾಗಿರುವ ಸಶಸ್ತ್ರ ಕಾಯ್ದೆಯನ್ನು ಹಿಂಪಡೆಯದೆಯೇ ಇರೋಮ್‍ರನ್ನೇ ಅಪಾಯಕಾರಿಯಾಗಿ ಬಿಂಬಿಸುವ ಶ್ರಮ ನಡೆಯಿತು. ಅಂತಿಮವಾಗಿ 2016ರ ಆಗಸ್ಟ್ ನಲ್ಲಿ ಇರೋಮ್ ತನ್ನ 16 ವರ್ಷಗಳ ಸತ್ಯಾಗ್ರಹಕ್ಕೆ ವಿದಾಯ ಕೋರಿದರು. ಪ್ರಜಾ (People resurgence and Justice Allaiance ) ಎಂಬ ಪಕ್ಷವನ್ನು ಕಟ್ಟಿ ರಾಜಕೀಯಕ್ಕೆ ಧುಮುಕಿದರು. ಮಣಿಪುರ ವಿಧಾನಸಭೆಗೆ ಸ್ಪರ್ಧಿಸಿದರು. ಆದರೆ ಅವರಿಗೆ ಲಭಿಸಿದ್ದು ಬರೇ 90 ಮತ. ಮಣಿಪುರದ ಜನತೆಗಾಗಿ ಅತಿ ಬೆಲೆಬಾಳುವ ಯೌವನವನ್ನೇ ಧಾರೆಯೆರೆದ ಇರೋಮ್‍ರಿಗೆ ಸಿಕ್ಕ ಪುರಸ್ಕಾರ ಇದು.
     ಇರೋಮ್‍ಗೆ ಹೋಲಿಸಿದರೆ ಮೇಧಾ ಇನ್ನೂ ಹೋರಾಟದ ಕಣದಲ್ಲಿದ್ದಾರೆ. 1985ರಲ್ಲಿ ನರ್ಮದಾ ಬಚಾವೋ ಆಂದೋಲನ್ (NBA) ಅನ್ನು ಕಟ್ಟಿ ಸತತ 32 ವರ್ಷಗಳಿಂದ ಹೋರಾಟ ನಡೆಸುತ್ತಿರುವ ಮೇಧಾ ಈ ಇಳಿ ವಯಸ್ಸಿನಲ್ಲೂ ಅನಿರ್ದಿಷ್ಟಾವಧಿ ಸತ್ಯಾಗ್ರಹ ಕೈಗೊಂಡಿದ್ದಾರೆ. ನರ್ಮದಾ ಅಣೆಕಟ್ಟಿನ ಗೇಟ್‍ಗಳನ್ನು ಮುಚ್ಚಲು ಕೇಂದ್ರ ಸರಕಾರವು ಗುಜರಾತ್‍ಗೆ ಅನುಮತಿ ನೀಡಿರುವುದರಿಂದ ಮಧ್ಯಪ್ರದೇಶದ ನಾಲ್ಕು ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶಗಳು ಮುಳುಗಲಿದ್ದು 40 ಸಾವಿರ ಕುಟುಂಬಗಳು ನಿರಾಶ್ರಿತವಾಗಲಿವೆ ಎಂಬುದು ಅವರ ಆತಂಕ. ಈ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡದೆಯೇ ಗೇಟ್ ಮುಚ್ಚುವ ಕ್ರಮ ಕೈಗೊಳ್ಳಬಾರದೆಂಬುದು ಅವರ ಆಗ್ರಹ. ನಿಜವಾಗಿ 1985ರಲ್ಲಿ ನರ್ಮದಾ ಚಳುವಳಿಯನ್ನು ರೂಪಿಸುವಾಗ ಮೇಧಾ ಆಗಿನ್ನೂ ಯುವತಿ. ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶಗಳಿಗೆ ನೀರು ಮತ್ತು ವಿದ್ಯುತ್ ಒದಗಿಸುವ ಉದ್ದೇಶದ ಬೃಹತ್ ನರ್ಮದಾ ಅಣೆಕಣ್ಣು ಯೋಜನೆಯ ಬಗ್ಗೆ ಮೇಧಾ ಅಧ್ಯಯನಕ್ಕಿಳಿದರು. ಅದನ್ನು ಸುತ್ತಿಕೊಂಡಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಪ್ರಶ್ನಿಸಿದರು. ಯೋಜನೆಯಿಂದ ನಿರಾಶ್ರಿತರಾಗಲಿರುವ ಲಕ್ಷಾಂತರ ಮಂದಿಗೆ ಪುನರ್ವಸತಿ ಮತ್ತು ಪರಿಹಾರಕ್ಕಾಗಿ ಆಗ್ರಹಿಸಿದರು. ಜನರನ್ನು ಸೇರಿಸಿ ಪ್ರತಿಭಟನೆ ನಡೆಸಿದರು. ವಿಷಾದ ಏನೆಂದರೆ, ವ್ಯವಸ್ಥೆ ಮೇಧಾರ ದೇಶ ಬದ್ಧತೆಯನ್ನೇ ಪ್ರಶ್ನಿಸತೊಡಗಿತು. ಅಭಿವೃದ್ಧಿ ವಿರೋಧಿ ಎಂಬ ಪುಕಾರನ್ನು ಹಬ್ಬಿಸಿತು. ಅವರ ವಿರುದ್ಧ ಕೈಗೊಳ್ಳಲಾದ ನಕಾರಾತ್ಮಕ ಪ್ರಚಾರ ಯುದ್ಧವು ಎಷ್ಟು ಪ್ರಬಲವಾಗಿತ್ತೆಂದರೆ 2014ರ ಲೋಕಸಭಾ ಚುನಾವಣೆಯಲ್ಲಿ ಈಶಾನ್ಯ ಮುಂಬಯಿ ಕ್ಷೇತ್ರದಿಂದ ಸ್ಪರ್ಧಿಸಿದ ಮೇಧಾರನ್ನು ಮತದಾರರನ್ನು ತಿರಸ್ಕರಿಸಿದರು. ಬರೇ 8.9% ಮತಗಳೊಂದಿಗೆ ಅವರು 3ನೇ ಸ್ಥಾನಕ್ಕೆ ಕುಸಿದರು.
     ಬ್ರಿಟಿಷರನ್ನು ಮಣಿಸಿದ ಗಾಂಧೀಜಿಯ ಹೋರಾಟ ಮಾದರಿಯನ್ನು ನೆಚ್ಚಿಕೊಂಡು ಹೋರಾಟಕ್ಕೆ ಧುಮುಕಿದ ಇಬ್ಬರು ಉತ್ಸಾಹಿ ಯುವತಿಯರನ್ನು ಅದೇ ಗಾಂಧೀಜಿಯ ಭಾರತವು ಅತ್ಯಂತ ವ್ಯವಸ್ಥಿತವಾಗಿ ಹತ್ತಿಕ್ಕಿದ ವಿಷಾದಕರ ಚರಿತ್ರೆ ಇದು. ಒಂದು ಕಡೆ ನಕ್ಸಲೀಯರ ಶಸ್ತ್ರಸಜ್ಜಿತ ಹೋರಾಟ ಮಾದರಿಯನ್ನು ವ್ಯವಸ್ಥೆಯು ದೇಶವಿರೋಧಿ ಪಟ್ಟಿಯಲ್ಲಿಟ್ಟು ಸೇನೆಯ ಮೂಲಕ ಹತ್ತಿಕ್ಕುತ್ತಿದ್ದರೆ ಇನ್ನೊಂದು ಕಡೆ ಅತ್ಯಂತ ಪ್ರಜಾಸತ್ತಾತ್ಮಕವಾದ ಹೋರಾಟ ಮಾದರಿಯನ್ನು ಅಪಪ್ರಚಾರ ಮತ್ತು ನಿರ್ಲಕ್ಷ್ಯ ಧೋರಣೆಯ ಮೂಲಕ ದಮನಿಸುತ್ತಿದೆ. ಧರಣಿ, ಸತ್ಯಾಗ್ರಹ, ಪ್ರತಿಭಟನೆಗಳ ಮೇಲೆ ಜನರು ಭರವಸೆ ಕಳಕೊಳ್ಳುವುದಕ್ಕೆ ಪೂರಕವಾದ ವಾತಾವರಣವನ್ನು ಅದು ನಿರ್ಮಿಸುತ್ತಿದೆ. ನಿಜವಾಗಿ, ಪ್ರತಿಭಟನೆ ಎಂಬುದು ಪ್ರಜಾತಂತ್ರದ ಉಸಿರು. ವ್ಯವಸ್ಥೆಯನ್ನು ಸದಾ ಎಚ್ಚರದಲ್ಲಿಡುವ ಬಲು ದೊಡ್ಡ ಅಸ್ತ್ರ ಇದು. ಆದರೆ ಕಾರ್ಪೋರೇಟ್ ವ್ಯವಸ್ಥೆ ಈ ಪ್ರತಿಭಟನೆಗೆ ಭಯಪಡುತ್ತದೆ. ತಮ್ಮ ಯೋಜನೆಯ ದಾರಿಯಲ್ಲಿ ‘ಪ್ರತಿಭಟನೆ’ಯನ್ನು ಅದು ಹಂಪ್‍ಗಳೆಂದು ಪರಿಗಣಿಸುತ್ತದೆ. ಹಂಪ್ ಇಲ್ಲದ ಸರಾಗ ದಾರಿ ಅದರ ಅಗತ್ಯ. ಇಂಥ ದಾರಿಯನ್ನು ಒದಗಿಸಬೇಕೆಂದರೆ ಪ್ರತಿಭಟನೆಯಲ್ಲಿ ಆಸಕ್ತಿಯನ್ನು ಕಳಕೊಂಡ ಯುವ ತಲೆಮಾರನ್ನು ತಯಾರುಗೊಳಿಸಬೇಕಾದ ಅಗತ್ಯ ಇದೆ. ಪ್ರತಿಭಟನೆಯನ್ನು ಅಭಿವೃದ್ಧಿ ವಿರೋಧಿ ಎಂದು ಮುದ್ರೆ ಒತ್ತಬೇಕೆಂದು ಕಾರ್ಪೋರೇಟ್ ಜಗತ್ತು ಬಯಸುತ್ತಿದೆ. ಅಂದಹಾಗೆ, ಹಿಂಸಾತ್ಮಕ ಪ್ರತಿಭಟನೆಯನ್ನು ಮಟ್ಟ ಹಾಕುವುದು ತುಂಬಾ ಸುಲಭ. ನಕ್ಸಲಿಸಂ ಇದಕ್ಕೆ ಅತ್ಯುತ್ತಮ ಉದಾಹರಣೆ. ಆದರೆ ಅಹಿಂಸಾತ್ಮಕ ಹೋರಾಟ ಮಾದರಿಯನ್ನು ಮಟ್ಟ ಹಾಕುವುದು ಸುಲಭ ಅಲ್ಲ. ಸದ್ಯ ವ್ಯವಸ್ಥೆ ಇದರಲ್ಲಿ ಯಶಸ್ಸು ಪಡೆಯುತ್ತಿದೆ. ಇರೋಮ್ ಮತ್ತು ಮೇಧಾ ಇದಕ್ಕೆ ಒಳ್ಳೆಯ ಉದಾಹರಣೆ.


No comments:

Post a Comment