Tuesday, 8 August 2017

ದೇಶಪ್ರೇಮದ ಅಭಿಯಾನಕ್ಕೆ ಅನ್ವರ್ಥವಾಗಬಹುದೇ ಹೆರ್ನೆಯ ಮೊಲಗಳು?

      ಪ್ರವಾಹ ಪೀಡಿತ ನ್ಯೂಝಿಲ್ಯಾಂಡಿನಿಂದ ಕಳೆದವಾರ ವರದಿಯಾದ ಸಚಿತ್ರ ಸುದ್ದಿಯೊಂದು ಜಾಗತಿಕ ಅಚ್ಚರಿಗೆ ಕಾರಣವಾಯಿತು. ಕುರಿಗಾಹಿಯಾಗಿರುವ 65 ವರ್ಷದ ಹೆರ್ನೆ ಎಂಬವರು ತನ್ನ ನೀರು ತುಂಬಿದ ಜಮೀನಿನಿಂದ ಕುರಿಗಳ ಹಿಂಡನ್ನು ಸುರಕ್ಷಿತ ಪ್ರದೇಶಕ್ಕೆ ತಲುಪಿಸಲು ತೀರ್ಮಾನಿಸಿದರು. ಆಗ ಅವರಿಗೆ ಕುರಿಗಳ ಮೇಲೆ 3 ಕಾಡು ಮೊಲಗಳು ಕುಳಿತಿರುವುದು ಕಾಣಿಸಿತು. ಎರಡು ಮೊಲಗಳು ಒಂದೇ ಕುರಿಯ ಬೆನ್ನಿನ ಮೇಲೆ ಕುಳಿತಿದ್ದರೆ, ಇನ್ನೊಂದು ಮತ್ತೊಂದರ ಮೇಲೆ ಕುಳಿತಿತ್ತು. ಸುರಕ್ಷಿತ ಸ್ಥಳಕ್ಕೆ ತಲುಪುವ ವರೆಗೆ ಆ ಮೊಲಗಳು ಕುರಿಯ ಮೇಲಿಂದ ಕದಲಿರಲಿಲ್ಲ. ಹೆರ್ನೆ ಆ ದೃಶ್ಯವನ್ನು ಕ್ಲಿಕ್ಕಿಸಿ ಹಂಚಿಕೊಂಡರು. ನಿಜವಾಗಿ ಆ ಮೊಲಗಳ ಸಾವು ಮತ್ತು ಬದುಕು ಹೆರ್ನೆ ಮತ್ತು ಕುರಿಗಳನ್ನು ಅವಲಂಬಿಸಿತ್ತು. ಒಂದು ವೇಳೆ ಮೊಲಗಳು ತನ್ನ ಬೆನ್ನನ್ನು ಅಲುಗಾಡಿಸಿ ಮೊಲಗಳನ್ನು ಕೆಳಗೆ ಬೀಳಿಸುತ್ತಿದ್ದರೆ ಅಥವಾ ಹೆರ್ನೆ ಅವುಗಳನ್ನು ಓಡಿಸುತ್ತಿದ್ದರೆ ಅವು ನೀರಿಗೆ ಬಿದ್ದು ಅಪಾಯಕ್ಕೆ ಸಿಲುಕಿಕೊಳ್ಳುತ್ತಿತ್ತು. ಬಹುಶಃ ಪ್ರಧಾನಿ ನರೇಂದ್ರ ಮೋದಿ ಸರಕಾರದ ಹೊಸ ಯೋಜನೆಯೊಂದು ಕೋಟ್ಯಂತರ ಮಂದಿ ಭಾರತೀಯರ ಪಾಲಿಗೆ ಈ ಮೊಲದ ಸ್ಥಿತಿಯನ್ನು ತಂದೊಡ್ಡಬಹುದೇ ಅನ್ನುವ ಅನುಮಾನ ಕಾಡತೊಡಗಿದೆ. ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದ ಚಲೇಜಾವ್ ಚಳವಳಿಗೆ 75 ವರ್ಷಗಳು ತುಂಬುವ ಹಿನ್ನೆಲೆಯಲ್ಲಿ ಮತ್ತು ಬ್ರಿಟಿಷರಿಂದ ಸ್ವತಂತ್ರಗೊಂಡ ಭಾರತಕ್ಕೆ 70 ವರ್ಷಗಳಾಗುವ ಆಧಾರದಲ್ಲಿ ‘ನಾನು ನನ್ನ ದೇಶವನ್ನು ಬೆಂಬಲಿಸುತ್ತೇನೆ’ ಎಂಬ ಘೋಷವಾಕ್ಯದೊಡನೆ ಪ್ರಜಾ ಆಂದೋಲನವನ್ನು ಕೈಗೊಳ್ಳಲು ಸರಕಾರ ಉದ್ದೇಶಿಸಿದೆ. ಯುವ ಸಮೂಹದಲ್ಲಿ ದೇಶಪ್ರೇಮವನ್ನು ಉತ್ತೇಜಿಸುವುದು ಇದರ ಗುರಿ. ಜೊತೆಗೇ ಕೇಂದ್ರ ಸರಕಾರದ ಸಾಧನೆಯನ್ನು ಜನರ ಬಳಿಗೆ ತಲುಪಿಸುವ ಉದ್ದೇಶವೂ ಈ ಆಂದೋಲನಕ್ಕಿದೆ.
     ದೇಶಪ್ರೇಮ ಮತ್ತು ದೇಶದ್ರೋಹದ ಬಗ್ಗೆ ಅತ್ಯಂತ ಏಕಮುಖ ನಿಲುವನ್ನು ಹೊಂದಿರುವ ಪಕ್ಷವೊಂದು ಹಮ್ಮಿಕೊಳ್ಳುವ ‘ನಾನು ನನ್ನ ದೇಶವನ್ನು ಬೆಂಬಲಿಸುತ್ತೇನೆ’ ಎಂಬ ಅಭಿಯಾನವು ಹೇಗಿರಬಹುದು ಮತ್ತು ಅದು ಯಾವೆಲ್ಲ ಆಯಾಮಗಳನ್ನು ಹೊಂದಬಹುದೇ ಎಂಬುದೇ ಇಲ್ಲಿನ ಬಹುಮುಖ್ಯ ಪ್ರಶ್ನೆ. ಈ ಪ್ರಶ್ನೆಗೆ ಒಂದಕ್ಕಿಂತ ಹೆಚ್ಚು ಕಾರಣಗಳಿವೆ. ಗೋ ಪ್ರೇಮದ ಹೆಸರಲ್ಲಿ ಈ ದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯಗಳು ಈ ಪ್ರಶ್ನೆಯ ಹುಟ್ಟಿಗೆ ಮೊದಲ ಕಾರಣವೆನ್ನಬಹುದು. ಗೋವಿನ ಬಗ್ಗೆ ಕೇಂದ್ರ ಸರಕಾರ ಮತ್ತು ಅದರ ಬೆಂಬಲಿಗ ವರ್ಗದ ನಿಲುವು ಏನಿದೆಯೋ ಅದು ಈ ದೇಶದ ಸರ್ವರನ್ನೂ ಪ್ರತಿನಿಧಿಸುತ್ತಿಲ್ಲ. ಗೋವಿಗೆ ಈ ವರ್ಗ ಕೊಡುವ ವ್ಯಾಖ್ಯಾನಕ್ಕಿಂತ ಭಿನ್ನವಾದ ಹತ್ತು ಹಲವು ವ್ಯಾಖ್ಯಾನಗಳು ಈ ದೇಶದಲ್ಲಿವೆ. ಪ್ರತಿವಾದಗಳಿವೆ. ಗೋಮಾಂಸವನ್ನು ನಿಷೇಧಿಸಬೇಕು ಎಂಬ ಆಗ್ರಹಕ್ಕೆ ವಿರುದ್ಧವಾದ ಆಗ್ರಹಗಳು ದೇಶಾದ್ಯಾಂತ ಇವೆ. ನಿಜವಾಗಿ, ಈ ಎರಡೂ ವಾದಗಳು ಭಾರತೀಯವೇ. ಒಂದನ್ನು ಭಾರತೀಯ ಮತ್ತು ಇನ್ನೊಂದನ್ನು ಅಭಾರತೀಯ ಎಂದು ವಿಂಗಡಿಸುವುದು ಮಹಾತ್ಮಾ ಗಾಂಧೀಯವರನ್ನು ದೇಶಪ್ರೇಮಿಯಾಗಿಯೂ ಸುಭಾಶ್ ಚಂದ್ರ ಬೋಸ್‍ರನ್ನು ದೇಶದ್ರೋಹಿಯಾಗಿಯೂ ವಿಂಗಡಿಸಿದಂತೆ. ನಿಜವಾಗಿ ಇಂಥ ಅಸಹಿಷ್ಣುವಾದವೇ ದೇಶದ್ರೋಹ. ಸದ್ಯ ಕೇಂದ್ರ ಸರಕಾರ ಮತ್ತು ಅದರ ಬೆಂಬಲಿಗ ಗುಂಪು ಗೋಪ್ರೇಮದ ವಿಷಯದಲ್ಲಿ ಸರ್ವರೂ ಈ ಸಂಕುಚಿತ ವಾದವನ್ನು ಅಂಗೀಕರಿಸುವಂತೆ ಬಲವಂತಪಡಿಸುತ್ತಿದೆ. ಗೋಪ್ರೇಮವನ್ನು ‘ದೇಶಪ್ರೇಮ’ಕ್ಕೆ ಪರ್ಯಾಯ ಪದವಾಗಿ ರೂಢಿಗೆ ತರಲು ಪ್ರಯತ್ನಿಸುತ್ತಿದೆ. ತನ್ನ ವಾದವನ್ನು ಒಪ್ಪದವರ ಮೇಲೆ ಸವಾರಿ ಮಾಡುತ್ತಿದೆ. ಬೀದಿಯಲ್ಲಿ ಥಳಿಸುವ, ಮೂತ್ರ ಕುಡಿಸುವ, ಹತ್ಯೆಗೈಯುವ ಮತ್ತು ಜೈಶ್ರೀರಾಮ್ ಹೇಳಿಸುವ ಕ್ರೌರ್ಯಗಳನ್ನು ಈ ಗುಂಪು ಮಾಡುತ್ತಾ ಬಂದಿದೆ. ಹೀಗಿರುವಾಗ `ನಾನು ನನ್ನ ದೇಶವನ್ನು ಬೆಂಬಲಿಸುತ್ತೇನೆ’ ಅನ್ನುವ ಜನಾಂದೋಲನ ಯಾವ ತಿರುವನ್ನು ಪಡಕೊಳ್ಳಬಹುದು? ಈ ವರ್ಗದ ಕೈಯಲ್ಲಿ ಈ ಅಭಿಯಾನ ಯಾವೆಲ್ಲ ಅನಾಹುತಗಳನ್ನು ಹುಟ್ಟುಹಾಕಬಹುದು? ಜೆಎನ್‍ಯುನ ಕನ್ಹಯ್ಯ ಕುಮಾರ್ ಮತ್ತು ಅವರ ತಂಡವನ್ನು ಈ ಗುಂಪು ಹೇಗೆ ದೇಶದ್ರೋಹಿಯಾಗಿ ಚಿತ್ರಿಸಿತು ಅನ್ನುವುದು ಎಲ್ಲರಿಗೂ ಗೊತ್ತು. ‘ನನ್ನ ತಂದೆಯನ್ನು ಪಾಕಿಸ್ತಾನ ಕೊಂದಿಲ್ಲ, ಯುದ್ಧ ಕೊಂದಿದೆ’ ಎಂದ ಗುರ್‍ಮೆಹರ್ ಕೌರ್ ಎಂಬ ಹುತಾತ್ಮ ಯೋಧನ ಮಗಳ ಮೇಲೆ ಈ ವರ್ಗ ಹರಿಹಾಯ್ದ ರೀತಿಯನ್ನು ನೋಡಿದರೆ, ಈ ಅಭಿಯಾನದ ಕೊನೆ ಹೇಗಾಗಬಹುದು ಎಂಬ ಆತಂಕವನ್ನು ಸಹಜವೆನ್ನಬೇಕಾಗುತ್ತದೆ. ಈ ಅಭಿಯಾನದ ಬೆಂಬಲಿಗರನ್ನೆಲ್ಲ ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲಿಗರಂತೆ ತಿರುಚುವುದಕ್ಕೂ ಅವಕಾಶ ಇದೆ.
    ನಿಜವಾಗಿ, ದೇಶವನ್ನು ಬೆಂಬಲಿಸುವುದು ಎಂಬ ಘೋಷವಾಕ್ಯವೇ ಗೊಂದಲಪೂರಿತ. ಈ ಅಭಿಯಾನದ ಪ್ರಸ್ತುತತೆ ಮತ್ತು ಅದು ಒಳಗೊಂಡಿರಬಹುದಾದ ರಾಜಕೀಯ ದುರುದ್ದೇಶವನ್ನು ಎತ್ತಿಕೊಂಡು ಯಾರಾದರೂ ಈ ಅಭಿಯಾನದ ಅಗತ್ಯವನ್ನು ಪ್ರಶ್ನಿಸಿದರೆ ಅವರನ್ನು ದೇಶದ್ರೋಹಿ ಪಟ್ಟಿಯಲ್ಲಿಡುವ ಎಲ್ಲ ಸಾಧ್ಯತೆಗಳಿಗೂ ಇದು ಅವಕಾಶ ಮಾಡಿಕೊಡಬಹುದು. ಗೋಪ್ರೇಮದ ವಾದವನ್ನು ಹೇಗೆ ಏಕಮುಖಿಗೊಳಿಸಲಾಗಿದೆಯೋ ಅದೇ ರೀತಿಯಲ್ಲಿ ‘ದೇಶವನ್ನು ಬೆಂಬಲಿಸುತ್ತೇನೆ’ ಎಂಬುದನ್ನು ಸಂಕುಚಿತಗೊಳಿಸಿ, ಥಳಿತ-ಬಡಿತ-ಹತ್ಯೆಗಳ ವರೆಗೆ ತಂದು ಮುಟ್ಟಿಸುವುದಕ್ಕೂ ಅವಕಾಶ ಇದೆ. ಈ ದೇಶಕ್ಕೆ ನೆಹರೂರಿಂದ ಹಿಡಿದು ಮನಮೋಹನ್ ಸಿಂಗ್‍ರ ವರೆಗೆ ದೊಡ್ಡದೊಂದು ರಾಜಕೀಯ ಪರಂಪರೆಯಿದೆ. ಕಳೆದ 70 ವರ್ಷಗಳಲ್ಲಿ ಈ ದೇಶ ಏನೆಲ್ಲ ಕಂಡಿದೆಯೋ, ಅವೆಲ್ಲಕ್ಕೂ ಹಕ್ಕುದಾರರಿದ್ದಾರೆ. ಜೈಜವಾನ್-ಜೈ ಕಿಸಾನ್ ಆಗಿರಬಹುದು, ಅಣ್ವಸ್ತ್ರ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದಿರಬಹುದು, ಬಾಹ್ಯಾಕಾಶ ಯೋಜನೆಯಲ್ಲಿ ಪ್ರಾಬಲ್ಯವನ್ನು ಸ್ಥಾಪಿಸಿದ್ದಿರಬಹುದು, ಆಹಾರ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವತ್ತ ಶ್ರಮಿಸಿದ್ದಿರಬಹುದು.. ಎಲ್ಲದಕ್ಕೂ ಈ ಕಳೆದ 70 ವರ್ಷಗಳ ರಾಜಕೀಯ ಚಿಂತನೆಗಳಿಗೆ ಬಹುಮುಖ್ಯ ಪಾತ್ರ ಇದೆ. ಆದರೆ ಕೇಂದ್ರ ಸರಕಾರದ ಅಭಿಯಾನವು ಈ ಸತ್ಯಗಳನ್ನೆಲ್ಲ ಮರೆಯಿಸಿಟ್ಟು ‘ಎಲ್ಲದಕ್ಕೂ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ’ ಎಂಬ ಸುಳ್ಳನ್ನು ತೇಲಿಸಿ ಬಿಡುವ ಸಂದರ್ಭವಾಗಿಯೂ ಈ ಅಭಿಯಾನವು ದುರ್ಬಳಕೆಗೀಡಾಗುವ ಸಾಧ್ಯತೆಯಿದೆ. ಹೊರನೋಟಕ್ಕೆ ಈ ಅಭಿಯಾನವು ಯುವ ಸಮೂಹದಲ್ಲಿ ದೇಶಪ್ರೇಮವನ್ನು ಉತ್ತೇಜಿಸುವ ಮಹತ್ವಪೂರ್ಣ ಯೋಜನೆಯಂತೆ ಕಂಡರೂ ಆಂತರಿಕವಾಗಿ ಕೇಂದ್ರದ ವರ್ಚಸ್ಸನ್ನು ಹೆಚ್ಚಿಸುವ ಮತ್ತು ಮುಂದಿನ ಚುನಾವಣೆಗೆ ಪ್ರಚಾರ ಕಾರ್ಯವನ್ನು ಹಮ್ಮಿಕೊಳ್ಳುವ ಅಭಿಯಾನದಂತೆಯೇ ಕಾಣಿಸುತ್ತಿದೆ.
       ದೇಶಪ್ರೇಮ ಎಂಬುದು ಬಲವಂತದಿಂದ ಹುಟ್ಟಿಸುವಂಥದ್ದಲ್ಲ. ಅದು ಸಹಜವಾಗಿ ಹುಟ್ಟಿಕೊಳ್ಳಬೇಕಾದ ಭಾವನೆ. ಅದಕ್ಕೆಂದೇ ಒಂದು ಅಭಿಯಾನದ ಅಗತ್ಯ ಖಂಡಿತ ಇಲ್ಲ. ಸರಕಾರಗಳು ತನ್ನ ಪ್ರಜೆಗಳನ್ನು ತನ್ನವರಂತೆ ನೋಡಿದಾಗ ಮತ್ತು ಸರ್ವರನ್ನೂ ಒಂದೇ ರೀತಿಯಲ್ಲಿ ಪರಿಗಣಿಸಿದಾಗ ಇದು ಸಹಜವಾಗಿಯೇ ಪ್ರಕಟವಾಗುತ್ತದೆ. ಇದನ್ನು ಒಪ್ಪದ ಅಥವಾ ಅನುಸರಿಸದ ಆಡಳಿತ ವರ್ಗಕ್ಕೆ ದೇಶಪ್ರೇಮಿಗಳನ್ನು ಬಲವಂತದಿಂದ ತಯಾರಿಸುವ ಅಗತ್ಯ ಕಂಡುಬರುತ್ತದೆ. ಬಹುಶಃ ಮುಂದಿನ ದಿನಗಳಲ್ಲಿ ಗೋರಕ್ಪಕ ಪಡೆ ದೇಶಪ್ರೇಮಿ ವೇಷದಲ್ಲಿ ಬೀದಿಗಿಳಿಯಬಹುದು ಮತ್ತು ಒಂದೋ ಅಭಿಯಾನವನ್ನು ಬೆಂಬಲಿಸಿ ಇಲ್ಲವೇ ದೇಶದ್ರೋಹಿಯಾಗಿ ಎಂದು ಒತ್ತಡ ಹೇರಬಹುದು. ಹೆರ್ನೆಯ ಕೈಯಲ್ಲಿ ಮೊಲಗಳ ಸಾವು-ಬದುಕು ಇದ್ದಂತೆ ಈ ಅಭಿಯಾನವನ್ನು ಪ್ರಶ್ನಿಸಿದವರ ಬದುಕು ಇವರ ಮರ್ಜಿಯನ್ನು ಅವಲಂಬಿಸುವ ಸಾಧ್ಯತೆ ಇದೆ.

No comments:

Post a Comment