ಝೈಬುನ್ನಿಸಾ ಎಂಬ ಪುಟ್ಟ ಬಾಲಕಿ ಈ ಸಮಾಜದ ಮುಂದೆ ಕೆಲವು ಪ್ರಶ್ನೆಗಳನ್ನೆಸೆದು ಹೊರಟು ಹೋಗಿದ್ದಾಳೆ. ಇದರ ಬೆನ್ನಿಗೇ ರಚನಾ ಎಂಬ ಯುವತಿಯೂ ಹೊರಟು ಹೋಗಿದ್ದಾಳೆ. ಎರಡು ದಿನಗಳ ನಡುವೆ ನಡೆದ ಇಬ್ಬರ ಹಠಾತ್ ನಿರ್ಗಮನಕ್ಕೆ `ಆತ್ಮಹತ್ಯೆ’ ಎಂಬ ಬಹೂಪಯೋಗಿ ಆರೋಪವನ್ನು ಹೊರಿಸಿ ಈ ಸಮಾಜ ಕೈ ತೊಳೆದುಕೊಳ್ಳುವ ಸ್ಥಿತಿಯಲ್ಲಿದೆ. ರಚನಾ- ಮೂಡಬಿದಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಕಾಲೇಜು ವಿದ್ಯಾರ್ಥಿನಿ. ಝೈಬುನ್ನಿಸಾ- ಮಂಡ್ಯದ ಕೆ.ಆರ್. ಪೇಟೆಯಲ್ಲಿರುವ ಅಲ್ಪಸಂಖ್ಯಾತ ವಸತಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ. ಈ ಇಬ್ಬರಲ್ಲಿ ಝೈಬುನ್ನಿಸಾ ನಮ್ಮನ್ನು ಮತ್ತೆ ಮತ್ತೆ ಕಾಡುತ್ತಾಳೆ. ಅದಕ್ಕಿರುವ ಕಾರಣ- ಒಂದು ಆಡಿಯೋ. ಸಾವಿಗಿಂತ ಕೆಲವು ಗಂಟೆಗಳ ಮೊದಲು ಈ ಮಗು ತನ್ನ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತಾಡಿದೆ. ಆ ಮಾತುಕತೆಯನ್ನು ಆ ತಾಯಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಎಳೆಯ ಪ್ರಾಯದ ಈ ಮಗು ತನ್ನ ಶಾಲೆಯ ಬಗ್ಗೆ ಮತ್ತು ರವಿ ಎಂಬ ಶಿಕ್ಷಕನ ಬಗ್ಗೆ ಅತ್ಯಂತ ಆತಂಕದಿಂದ ಮಾತಾಡಿದೆ. ತನ್ನ ಮೇಲಾಗುತ್ತಿರುವ ದೌರ್ಜನ್ಯವನ್ನು ಹೇಳಿಕೊಂಡಿದೆ. ಯಾರ ಹೃದಯವನ್ನೂ ಅಲುಗಾಡಿಸುವಷ್ಟು ನೋವು ಆ ಮಗುವಿನ ಧ್ವನಿಯಲ್ಲಿದೆ. ವಿಶೇಷ ಏನೆಂದರೆ, ಈ ಮಗುವಿನ ಓರ್ವ ತಂಗಿ ಮತ್ತು ತಮ್ಮ ಇದೇ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಒಂದು ರೀತಿಯಲ್ಲಿ, ಮೂವರ ಪುಟ್ಟ ತಂಡವೇ ಆ ವಸತಿ ಶಾಲೆಯಲ್ಲಿತ್ತು. ಮನೆಯಿಂದ ದೂರ ಇದ್ದು ಕಲಿಯುವ ಮಕ್ಕಳ ಪಾಲಿಗೆ ಇಂಥ ಸಂದರ್ಭಗಳು ಸೃಷ್ಟಿಯಾಗುವುದು ತೀರಾ ತೀರಾ ಕಡಿಮೆ. ಹೀಗೆ ಮಾನಸಿಕವಾಗಿ ಧೈರ್ಯವನ್ನು ತುಂಬಬಲ್ಲ ವಾತಾವರಣ ಇದ್ದಾಗ್ಯೂ ಝೈಬುನ್ನಿಸಾ ಆತ್ಮಹತ್ಯೆ ಮಾಡಿಕೊಂಡಳೇ ಅಥವಾ ಇನ್ನೇನಾದರೂ ನಡೆದಿದೆಯೇ? ನಾಲ್ವರು ಶಿಕ್ಷಕಿಯರು ಮತ್ತು ಓರ್ವ ಶಿಕ್ಷಕನಿರುವ ಈ ವಸತಿ ಶಾಲೆಯಿಂದ ತಿಂಗಳ ಹಿಂದೆ ಪ್ರವಾಸ ಕೈಗೊಳ್ಳಲಾಗಿತ್ತು. ಝೈಬುನ್ನಿಸಾ ಆ ಪ್ರವಾಸದಲ್ಲಿ ಭಾಗಿಯಾಗಿದ್ದಳು. ಮಾತ್ರವಲ್ಲ, ಪ್ರವಾಸದಿಂದ ಹಿಂತಿರುಗಿ ಬಂದ ಬಳಿಕ ಮಂಕಾಗಿದ್ದಳು ಎಂಬ ನೋವು ಹೆತ್ತವರದ್ದು. ಈ ಮಂಕುತನಕ್ಕೆ ಕಾರಣವೇನು? ಆಕೆಯೊಳಗೆ ರಹಸ್ಯವೇನಾದರೂ ಇತ್ತೇ? ಆ ರಹಸ್ಯ ಬಹಿರಂಗವಾಗುವ ಬಗ್ಗೆ ಯಾರಿಗಾದರೂ ಭಯವಿತ್ತೇ? ಆ ಭಯವೇ ಆಕೆಯನ್ನು ಹತ್ಯೆ ಮಾಡಿತೆ?
ಕೆಲವು ತಿಂಗಳುಗಳ ಹಿಂದೆ ಕಾವ್ಯ ಎಂಬ ಬಾಲಕಿ ಸಾವಿಗೀಡಾಗಿದ್ದಳು. ಅದಕ್ಕೂ ಆತ್ಮಹತ್ಯೆ ಎಂಬ ನಾಲ್ಕಕ್ಪರವನ್ನೇ ಆರೋಪಿ ಸ್ಥಾನದಲ್ಲಿ ಕೂರಿಸಲಾಗಿತ್ತು. ರಚನಾ ಓದಿದ ಅದೇ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದ ಕಾವ್ಯ ಸಾವಿಗಿಂತ ಮೊದಲು ತನ್ನ ತಾಯಿಯೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಳು. ಆ ತಾಯಿಯೂ ಆ ಸಂಭಾಷಣೆಯನ್ನು ದಾಖಲಿಸಿಕೊಂಡಿದ್ದರು. ಆ ಸಂಭಾಷಣೆಯನ್ನು ಆಲಿಸುವ ಯಾರೂ ಈ ಮಗು ಆತ್ಮಹತ್ಯೆ ಮಾಡಿಕೊಳ್ಳುತ್ತದೆ ಎಂಬುದನ್ನು ಒಪ್ಪಲಾರರು. ಅಷ್ಟು ಲವಲವಿಕೆಯಿಂದ ಆ ಮಗು ತನ್ನ ತಾಯಿಯೊಂದಿಗೆ ಮಾತಾಡಿತ್ತು. ಆದರೆ ಮರುದಿನ ಆ ಮಗು ನಿರ್ಜೀವವಾಗಿ ಮಲಗಿಕೊಂಡಿತ್ತು. ನಿಜಕ್ಕೂ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಯೇ? ಅಷ್ಟೊಂದು ಒತ್ತಡ ಅವರ ಮೇಲಿರುತ್ತದೆಯೇ? ಹೌದು ಎಂದಾದರೆ, ಆ ಒತ್ತಡವನ್ನು ಯಾರು ಹೇರುತ್ತಿದ್ದಾರೆ? ಆ ಒತ್ತಡದ ಹುಟ್ಟು ಎಲ್ಲಿ? ಯಾವ ಕಾರಣಕ್ಕಾಗಿ ಒತ್ತಡವಿದೆ? ಈ ಒತ್ತಡದಲ್ಲಿ ಮನೆಯವರ ಪಾಲು ಎಷ್ಟು, ಶಿP್ಷÀಕರ ಪಾಲು ಎಷ್ಟು, ಕಲಿಕೆಯ ಪಾಲು ಎಷ್ಟು ಅಥವಾ ಬಾಹ್ಯ ಜಗತ್ತಿನ ಪಾಲು ಎಷ್ಟು? ಯಾವುದೇ ಪಠ್ಯಪುಸ್ತಕವು ಆತ್ಮಹತ್ಯೆಗೆ ಪ್ರಚೋದಿಸುವಷ್ಟು ಅಪಾಯಕಾರಿಯಾಗಿಲ್ಲ. ಅಲ್ಲದೇ ಒಂದು ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ಎಲ್ಲ ಮಕ್ಕಳೂ ರಾಂಕ್ ಪಡೆಯಬಲ್ಲಷ್ಟು ಪ್ರತಿಭಾವಂತರೂ ಆಗಿರುವುದಿಲ್ಲ. ಪ್ರಕೃತಿ ಸಹಜವಾದ ಈ ಸತ್ಯವನ್ನು ಶಿಕ್ಷಕರಂತೂ ಖಂಡಿತ ಅರಿತಿರುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳ ಸಾವಿಗೆ ‘ಕಲಿಕಾ ಒತ್ತಡ’ ಎಂಬ ಕಾರಣವನ್ನು ಒಪ್ಪಲು ಸಾಧ್ಯವೇ ಇಲ್ಲ. ಕಲಿಕಾ ಒತ್ತಡ ಎಂಬುದೇ ಕೃತಕ ಸೃಷ್ಟಿ. ಕಲಿಕೆ ಸಹಜವಾಗಿ ದಕ್ಕಬೇಕಾದುದು. ಕೆಲವರಿಗೆ ಬೇಗ ಮತ್ತು ಹೆಚ್ಚು ದಕ್ಕುತ್ತದೆ ಮತ್ತು ಇನ್ನೂ ಕೆಲವರಿಗೆ ಕಡಿಮೆ ದಕ್ಕುತ್ತದೆ ಎಂಬುದನ್ನು ಬಿಟ್ಟರೆ ಉಳಿದಂತೆ ಸಾವಿಗೂ ಶಿಕ್ಷಣಕ್ಕೂ ಸಂಬಂಧ ಕಲ್ಪಿಸಬೇಕಿಲ್ಲ. ನಿಜವಾಗಿ, ಒತ್ತಡ ರಹಿತವಾದ ಶಿಕ್ಷಣವನ್ನು ಒತ್ತಡಭರಿತವನ್ನಾಗಿ ಮಾಡುವುದೇ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರು. ಶಿಕ್ಷಣ ಸಂಸ್ಥೆಗಳ ಪ್ರತಿಷ್ಠೆಗಾಗಿ ವಿದ್ಯಾರ್ಥಿಗಳ ಮೇಲೆ ತಾಳಲಾಗದ ಒತ್ತಡವನ್ನು ಹೇರಲಾಗುತ್ತದೆ. ರಾಂಕು, ಡಿಸ್ಟಿಂಕ್ಷನ್‍ಗಾಗಿ ವಿದ್ಯಾರ್ಥಿಗಳನ್ನು ಖೈದಿಗಳಂತೆ ನಡೆಸಿಕೊಳ್ಳಲಾಗುತ್ತದೆ. ಒಂದು ವೇಳೆ ಈ ಒತ್ತಡವನ್ನು ತಾಳಲಾರದೇ ಮಗುವೊಂದು ಮೃತಪಟ್ಟರೆ ತಕ್ಷಣ ಅದಕ್ಕೆ ಆತ್ಮಹತ್ಯೆ ಎಂಬ ಲೇಬಲ್ಲನ್ನು ಹಚ್ಚಿಬಿಟ್ಟು ಎಲ್ಲರೂ ಹೊಣೆಗಾರಿಕೆಯಿಂದ ಮುಕ್ತರಾಗುತ್ತಾರೆ. ಆದ್ದರಿಂದ ಮಕ್ಕಳ ಸಾವನ್ನು ‘ಆತ್ಮಹತ್ಯೆ’ ಎಂಬ ಭರಣಿಯಲ್ಲಿಟ್ಟು ಮುಚ್ಚಿಡುವುದನ್ನು ಈ ಸಮಾಜ ಮೊಟ್ಟಮೊದಲು ಪ್ರಶ್ನಿಸಬೇಕು. ಆತ್ಮಹತ್ಯೆ ಎಂಬುದು ಮಕ್ಕಳನ್ನು ಸಾಯಿಸುವುದಕ್ಕೆ ದೊಡ್ಡವರು ಕಂಡುಕೊಂಡ ಸುಲಭ ಪರಿಹಾರವಾಗಿರಬಹುದೇ ಎಂಬ ಅನುಮಾನವೊಂದನ್ನು ಸದಾ ತಮ್ಮ ಬಳಿ ಸಮಾಜ ಇಟ್ಟುಕೊಳ್ಳಬೇಕು. ಕಾವ್ಯ, ರಚನಾ ಮತ್ತು ಝೈಬುನ್ನಿಸಾ ನಮಗೆ ಮುಖ್ಯವಾಗಬೇಕಾದುದು ಈ ಕಾರಣಕ್ಕಾಗಿಯೇ. ಈ ಮೂವರಲ್ಲಿ ಕಾವ್ಯ ಮತ್ತು ಝೈಬುನ್ನಿಸಾ ತಮ್ಮ ಸಾವಿಗಿಂತ ಕೆಲವು ಗಂಟೆಗಳ ಮೊದಲು ಹೆತ್ತವರೊಂದಿಗೆ ದೂರವಾಣಿಯಲ್ಲಿ ಮಾತಾಡಿz್ದÁರೆ. ಕಾವ್ಯ ಅತ್ಯಂತ ಲವಲವಿಕೆಯಿಂದ ಮಾತಾಡಿದರೆ, ಝೈಬು ಅತ್ಯಂತ ಆತಂಕದಿಂದ ಮಾತಾಡಿz್ದÁಳೆ. ನಿಜವಾಗಿ, ಲವಲವಿಕೆ ಮತ್ತು ಆತಂಕ ಎರಡೂ ವಿರುದ್ಧಾರ್ಥ ಪದಗಳು. ಆದರೆ ಈ ಎರಡರ ಅಂತ್ಯವೂ ಒಂದೇ ರೀತಿಯಲ್ಲಿ ಆಗಿದೆ. ಬಹುಶಃ, ಕಲಿಕೆಗಿಂತ ಹೊರತಾದ ಇನ್ನಾವುದೋ ಒತ್ತಡವೊಂದು ಈ ಮಕ್ಕಳ ಮೇಲಾಗಿದೆ ಅಥವಾ ಅವರು ಸಾಯಲೇಬೇಕಾದ ಅಗತ್ಯವೊಂದು ಇನ್ನಾರಿಗೋ ಉಂಟಾಗಿದೆ. ಅವರೇ ಆತ್ಮಹತ್ಯೆ ಎಂಬ ಕತೆ, ಚಿತ್ರಕತೆಯನ್ನು ರಚಿಸಿ ಸಮಾಜಕ್ಕೆ ಅರ್ಪಿಸಿದ್ದಾರೆ.
ಝೈಬುನ್ನಿಸಾ ತನ್ನ ಶಿಕ್ಷಕನ ಮೇಲೆ ಕೆಲವು ಗಂಭೀರ ಆರೋಪಗಳನ್ನು ಹೊರಿಸಿದ್ದಾಳೆ. ಬಹುಶಃ, ಇದು ಆಕೆಯೊಬ್ಬಳ ಆರೋಪವಾಗಿರುವ ಸಾಧ್ಯತೆ ಇಲ್ಲ. ಆ ವಸತಿ ಶಾಲೆಯಲ್ಲಿ ಇನ್ನೆಷ್ಟು ಝೈಬುಗಳಿದ್ದಾರೆ ಮತ್ತು ಅವರೊಳಗಿರುವ ಆತಂಕಗಳು ಏನೇನು ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನಗಳಾಗಬೇಕು. ಹೆತ್ತವರೊಂದಿಗೆ ಹಂಚಿಕೊಳ್ಳಲಾಗದ ಮತ್ತು ದೂರವಾಣಿಯಲ್ಲಿ ಹೇಳಿಕೊಳ್ಳಲಾಗದ ದೂರುಗಳು ಆಕೆಯೊಳಗಿದ್ದುವೇ, ಗೆಳತಿಯರೊಂದಿಗೆ ಆಕೆ ಅದನ್ನು ಹಂಚಿಕೊಂಡಿದ್ದಳೇ, ಸಂಭಾವ್ಯ ಅಪಾಯವನ್ನು ಆಕೆ ಗ್ರಹಿಸಿದ್ದಳೇ.. ಇತ್ಯಾದಿಗಳು ತನಿಖೆಗೆ ಒಳಪಡಬೇಕು. ಅಲ್ಪಸಂಖ್ಯಾತ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ.. ಮುಂತಾದ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವುದು ಬಡವರ ಮಕ್ಕಳು. ತಮ್ಮ ಮಕ್ಕಳನ್ನು ಇಂಥ ಶಾಲೆಯಲ್ಲಿ ಬಿಟ್ಟು ಬರುವ ಹೆತ್ತವರಲ್ಲಿ ನೋವು ಮತ್ತು ಖುಷಿ ಎರಡೂ ಇರುತ್ತದೆ. ಕರುಳಕುಡಿಯನ್ನು ಅಗಲುವ ನೋವು ಒಂದು ಕಡೆಯಾದರೆ, ಮಗುವಿಗೆ ಶಿಕ್ಷಣ ಸಿಗುತ್ತದೆ ಅನ್ನುವ ಖುಷಿ ಇನ್ನೊಂದೆಡೆ. ಈ ಹಿನ್ನೆಲೆಯಲ್ಲಿ, ಸರಕಾರವು ಝೈಬುನ್ನಿಸಾ ಸಾವನ್ನು ಗಂಭೀರವಾಗಿ ಪರಿಗಣಿಸಬೇಕು. ಬಡವರ ಪಾಲಿನ ಖುಷಿಯನ್ನು ಕಸಿದು ಬಿಡುವ ಇಂಥ ಘಟನೆಗಳು ಇನ್ನೆಂದೂ ನಡೆಯಬಾರದು. ಮಕ್ಕಳು ಈ ಭೂಮಿಯ ನಕ್ಷತ್ರಗಳು. ಅವಕ್ಕೆ ಈ ಜಗತ್ತಿನ ರಾಗ-ದ್ವೇಷಗಳು ಗೊತ್ತಿರುವುದಿಲ್ಲ. ದೊಡ್ಡವರ ಸಂಚುಗಳನ್ನು ಅರ್ಥ ಮಾಡಿಕೊಳ್ಳುವಷ್ಟು ಅವು ಪ್ರಬುದ್ಧವೂ ಆಗಿರುವುದಿಲ್ಲ. ಝೈಬು ಅಂಥದ್ದೇ ಒಂದು ನಕ್ಷತ್ರ. ಇಂಥ ನಕ್ಷತ್ರಗಳು ಈ ದೇಶದಲ್ಲಿ ಕೋಟ್ಯಂತರ ಇವೆ. ಅವೆಲ್ಲವೂ ಮಿಂಚಬೇಕು. ದೊಡ್ಡವರು ಈ ನಕ್ಷತ್ರಗಳಿಗೆ ಕಾವಲು ನಿಲ್ಲಬೇಕು. ಯಾರು ಈ ನಕ್ಷತ್ರಗಳನ್ನು ಚಿವುಟಿ ಹಾಕಬಯಸುತ್ತಾರೋ ಅವರ ಹೆಸರು, ಧರ್ಮ, ಪ್ರಭಾವವನ್ನು ಪರಿಗಣಿಸದೆಯೇ ತೀವ್ರವಾಗಿ ದಂಡಿಸಬೇಕು. ಅಂದಹಾಗೆ, ಝೈಬುನ್ನಿಸಾಳನ್ನು ಮರಳಿ ಬದುಕಿಸಿಕೊಳ್ಳುವುದಕ್ಕೆ ಈ ಸಮಾಜದಿಂದ ಸಾಧ್ಯವಿಲ್ಲ. ಆದರೆ ಆಕೆ ಬಿಟ್ಟು ಹೋದ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸಿದರೆ ಇನ್ನಷ್ಟು ಮಕ್ಕಳು ಝೈಬುಗಳಾಗುವುದನ್ನು ತಡೆಯಬಹುದು.
No comments:
Post a Comment