Thursday, 17 May 2018

ಒಳಗಿನ ಹೊಗೆ, ಹೊರಗಿನ ಧಗೆಯಲ್ಲಿ ಬೇಯುತ್ತಿರುವ ಬಿಜೆಪಿ..



      2019ರ ಲೋಕಸಭಾ ಚುನಾವಣೆಯು ಬಿಜೆಪಿಯ ಪಾಲಿಗೆ 2014ರಷ್ಟು ಸುಲಭವಾಗಿರುವುದಿಲ್ಲ ಅನ್ನುವುದನ್ನು ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದಿನೇ ದಿನೇ ಖಚಿತಪಡಿಸತೊಡಗಿವೆ. 2014ರಲ್ಲಿ ಬಿಜೆಪಿಯನ್ನು ಏಕಕಂಠದಿಂದ ಬೆಂಬಲಿಸಿದ್ದ ದಲಿತರೇ 2019ರಲ್ಲಿ ಬಿಜೆಪಿಯ ಸೋಲನ್ನು ಬರೆಯಲಿದ್ದಾರೆ ಎಂಬುದೂ ದೃಢವಾಗತೊಡಗಿದೆ. ಈ ದೇಶದಲ್ಲಿ ಸುಮಾರು 30 ಕೋಟಿಯಷ್ಟು ದಲಿತರಿದ್ದಾರೆ. 66 ದಲಿತ ಮೀಸಲು ಲೋಕಸಭಾ ಕ್ಷೇತ್ರಗಳಿವೆ. ಮಾತ್ರವಲ್ಲ, 2014ರಲ್ಲಿ ಈ 66ರಲ್ಲಿ 40 ಸ್ಥಾನಗಳನ್ನು ಗೆದ್ದಿದ್ದು ಬಿಜೆಪಿಯೇ. ಆದರೆ, ಬಿಜೆಪಿಯನ್ನು ದಲಿತ ಸಮೂಹವು ಇಷ್ಟು ಪ್ರಬಲವಾಗಿ ಬೆಂಬಲಿಸಿದ ಹೊರತಾಗಿಯೂ ಕೇಂದ್ರ ಸಚಿವ ಸಂಪುಟದಲ್ಲಿ ದಲಿತರಿಗೆ ಅರ್ಹಪಾಲು ಸಿಕ್ಕಿಲ್ಲ ಅನ್ನುವ ಅಸಮಾಧಾನ ಬಿಜೆಪಿಯ ದಲಿತ ಪ್ರತಿನಿಧಿಗಳಲ್ಲಿ ಆರಂಭದಲ್ಲೇ ಇತ್ತು. ಪಾಸ್ವಾನ್, ಅಟವಳೆ, ಗೆಹ್ಲೋಟ್, ಜಿಗಜಿಣಗಿಯಂಥ ದಲಿತ ಪ್ರತಿನಿಧಿಗಳಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕರೂ ಅದು ನಾಮ್‍ಕಾವಾಸ್ತೆ ಅನ್ನುವುದು ಸ್ವತಃ ಅವರಿಗೂ ಗೊತ್ತಿತ್ತು. ಈ ಅಸಮಾಧಾನವನ್ನು ಅವರು ಬಹಿರಂಗ ವೇದಿಕೆಗಳಲ್ಲಿ ವ್ಯಕ್ತಪಡಿಸದಿದ್ದರೂ ಆಂತರಿಕವಾಗಿ ಪರಸ್ಪರ ಹಂಚಿಕೊಳ್ಳುತ್ತಿದ್ದರು ಎಂಬುದು ಬಹಿರಂಗ ರಹಸ್ಯ. ಈ ನಡುವೆ, 2014ರ ಬಳಿಕ ದಲಿತರ ಮೇಲೆ ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆ ಪ್ರಕರಣಗಳಲ್ಲಿ ಮಹತ್ವದ ಏರಿಕೆಗಳೂ ಕಾಣಿಸಿಕೊಂಡವು. ಈ ಏರಿಕೆ ಬಿಜೆಪಿಯ ದಲಿತ ಸಂಸದರಿಗೆ ಮತ್ತು ದಲಿತ ಮುಖಂಡರಿಗೆ ಗೊತ್ತಿರಲಿಲ್ಲ ಎಂದಲ್ಲ. ಅವರನ್ನು ಒಳಗೊಳಗೇ ಈ ಬೆಳವಣಿಗೆಗಳು ಇರಿಯುತ್ತಿದ್ದುವು. ಅದಕ್ಕಿಂತಲೂ ಮುಖ್ಯವಾಗಿ, ದಲಿತ ಸಮೂಹದಲ್ಲಿ ಬಿಜೆಪಿಯ ಮೇಲಿನ ಆಕರ್ಷಣೆಯನ್ನು ಇವು ನಿಧಾನಕ್ಕೆ ಕಡಿಮೆಗೊಳಿಸತೊಡಗಿದ್ದುವು. ಆದರೆ, ಇದು ಪ್ರಥಮವಾಗಿ ದೊಡ್ಡ ಮಟ್ಟದಲ್ಲಿ ಪ್ರಕಟವಾದದ್ದು 2016ರಲ್ಲಿ ನಡೆದ ವೇಮುಲಆತ್ಮಹತ್ಯೆ ಪ್ರಕರಣ ಮತ್ತು ಗುಜರಾತ್‍ನ ಊನಾದಲ್ಲಿ ನಡೆದ ದಲಿತ ಯುವಕರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ. ಇವೆರಡೂ ಘಟನೆಗಳು ಬಿಜೆಪಿಯ ಘೋಷಿತ ‘ದಲಿತ ಪರ’ ನೀತಿಯನ್ನು ಅಲುಗಾಡಿಸಿದುವು. ‘ಬಿಜೆಪಿಯು ದಲಿತ ವಿರೋಧಿ’ ಎಂಬ ಭಾವನೆಯನ್ನು ದಲಿತರಲ್ಲಿ ದೃಢಗೊಳಿಸುವುದಕ್ಕೆ ಊನಾದ ನಾಲ್ವರು ಯುವಕರ ದೀನಸ್ಥಿತಿ ದೊಡ್ಡ ಪಾತ್ರವನ್ನು ನಿರ್ವಹಿಸಿತು. ಆ ಬಳಿಕ, ಮಹಾರಾಷ್ಟ್ರದ ಭೀಮಾ-ಕೋರೆಗಾಂವ್‍ನಲ್ಲಿ ನಡೆದ ಘಟನೆಯಂತೂ ದಲಿತರಲ್ಲಿ ಭಾರೀ ಆಕ್ರೋಶವನ್ನು ಹುಟ್ಟು ಹಾಕಿತು. ‘ಮೇಲ್ಜಾತಿಯ ವಿರುದ್ಧ ದಲಿತರ ವಿಜಯ’ ಎಂಬುದಾಗಿ ಗುರುತಿಸಿಕೊಂಡಿರುವ ಭೀಮಾ-ಕೋರೆಗಾಂವ್ ಘಟನೆಯ 200ನೇ ವಿಜಯೋತ್ಸವದಲ್ಲಿ ಭಾಗವಹಿಸಿದ ದಲಿತರ ಮೇಲೆ ಮೇಲ್ಜಾತಿಯ ಮಂದಿ ಹಲ್ಲೇ ನಡೆಸಿದರು. ಇಡೀ ಕಾರ್ಯಕ್ರಮ ಅಸ್ತವ್ಯಸ್ತವಾಯಿತು.
     ಇದರ ಬಳಿಕ ಉತ್ತರ ಪ್ರದೇಶದ ಶಹರಾಣ್‍ಪುರದಲ್ಲಿ ಅಂಬೇಡ್ಕರ್ ಜನ್ಮಶತಮಾನೋತ್ಸವದ ಪ್ರಯುಕ್ತ ದಲಿತರು ಹಮ್ಮಿಕೊಂಡ ಮೆರವಣಿಗೆಯು ದಲಿತರು ಮತ್ತು ರಾಜಪೂತ್ ಸಮುದಾಯದ ನಡುವಿನ ಘರ್ಷಣೆಯಾಗಿ ಮುಕ್ತಾಯವನ್ನು ಕಂಡಿತು. ಸುಮಾರು 25ಕ್ಕಿಂತಲೂ ಅಧಿಕ ದಲಿತರ ಮನೆಗಳು ಬೆಂಕಿಗೆ ಆಹುತಿಯಾದುವು. ಅಪಾರ ನಾಶ-ನಷ್ಟವೂ ಸಂಭವಿಸಿತು. ಈ ಅಸಮಾಧಾನದ ಬೆನ್ನಿಗೇ ಇದೀಗ ಸುಪ್ರೀಮ್ ಕೋರ್ಟು ಎಸ್‍ಸಿ-ಎಸ್‍ಟಿ ಕಾಯ್ದೆಗೆ ಸಂಬಂಧಿಸಿ ನೀಡಿರುವ ತೀರ್ಪು ಬೆಂಕಿಗೆ ತುಪ್ಪವನ್ನು ಸುರಿದಂತಾಗಿದೆ. ಎಸ್‍ಸಿ-ಎಸ್‍ಟಿ ಕಾಯ್ದೆಯು ದುರ್ಬಳಕೆಯಾಗುತ್ತಿದೆ ಎಂದು ಕೇಂದ್ರ ಸರಕಾರವು ಸುಪ್ರೀಮ್ ಕೋರ್ಟಿನಲ್ಲಿ ವಾದಿಸಿತ್ತು. ಈ ವಾದದ ಆಧಾರದಲ್ಲಿಯೇ ಈ ಕಾಯ್ದೆಯನ್ನು ದುರ್ಬಲಗೊಳಿಸಬಹುದಾದ ರೀತಿಯ ತೀರ್ಪನ್ನು ಸುಪ್ರೀಮ್ ಕೋರ್ಟು ನೀಡಿತ್ತು. ‘ಈ ಕಾಯ್ದೆಯ ಅಡಿಯಲ್ಲಿ ದಲಿತರು ದೂರು ದಾಖಲಿಸಿದರೆ, ತಕ್ಷಣ ಎಫ್‍ಐಆರ್ ಮಾಡಬಾರದು ಮತ್ತು ಯಾರನ್ನೂ ಬಂಧಿಸಬಾರದು’ ಎಂದು ಸುಪ್ರೀಮ್ ಕೋರ್ಟು ತೀರ್ಪು ನೀಡಿದ್ದರೆ ಮತ್ತು ದೂರಿನ ಮೇಲೆ ತನಿಖೆ ನಡೆಸಿದ ವರದಿ ಬಂದ ಬಳಿಕವೇ ಎಫ್‍ಐಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದ್ದರೆ ಅದಕ್ಕೆ ಕಾಯ್ದೆ ದುರ್ಬಳಕೆಯಾಗುತ್ತಿದೆ ಎಂದು ಕೇಂದ್ರ ವ್ಯಕ್ತಪಡಿಸಿದ ಅಭಿಪ್ರಾಯವೇ ಮೂಲ ಕಾರಣ. ಆದರೆ ತೀರ್ಪಿನ ವಿರುದ್ಧ ದಲಿತರು ಪ್ರತಿಭಟನೆಗಿಳಿದಾಗ ತೀರ್ಪು ಮರು ಪರಿಶೀಲಿಸುವಂತೆ ಕೇಂದ್ರ ಮನವಿ ಮಾಡಿಕೊಂಡಿತು. ಕೇಂದ್ರದ ಈ ನಡೆಗೆ ಸುಪ್ರೀಮ್ ಕೋರ್ಟು ಅಸಮಾಧಾನವನ್ನೂ ವ್ಯಕ್ತಪಡಿಸಿತು. ‘ನಿಮ್ಮ ಅಭಿಪ್ರಾಯದ ಆಧಾರದಲ್ಲಿಯೇ’ ತೀರ್ಪು ನೀಡಿರುವುದಾಗಿಯೂ ಅದು ಸಮರ್ಥಿಸಿಕೊಂಡಿತು. ಒಂದು ರೀತಿಯಲ್ಲಿ,
     ಕಳೆದ ನಾಲ್ಕು ವರ್ಷಗಳಿಂದ ದಲಿತರಲ್ಲಿ ಸಂಗ್ರವಾಗುತ್ತಿದ್ದ ಅಸಮಾಧಾನದ ಹೊಗೆಯು ಎಸ್‍ಸಿ-ಎಸ್‍ಟಿ ಕಾಯ್ದೆಯ ಹೆಸರಲ್ಲಿ ಆಕ್ರೋಶವಾಗಿ ಹೊರಹೊಮ್ಮಿದೆ ಎಂದೇ ಹೇಳಬೇಕಾಗುತ್ತದೆ. ದಲಿತರ ಈ ಪ್ರತಿಭಟನೆಯನ್ನು ಬಿಜೆಪಿ ಆಡಳಿತವಿರುವ ರಾಜ್ಯ ಸರಕಾರಗಳು ನಿರ್ವಹಿಸಿದ ರೀತಿಯೂ ಇಲ್ಲಿ ಗಮನಾರ್ಹ. ಉತ್ತರ ಪ್ರದೇಶದ ಬುಂದೇಲ್‍ಖಂಡ್ ಪ್ರದೇಶವು ದಲಿತರ ಪ್ರಾಬಲ್ಯಕ್ಕಾಗಿಯೇ ಗುರುತಿಸಿಕೊಂಡಿದೆ. ಮಾಯಾವತಿಯವರ ಪಕ್ಷದ ಭದ್ರ ಕೋಟೆಯಾಗಿಯೂ ಇದನ್ನು ಪರಿಗಣಿಸಲಾಗುತ್ತದೆ. ಆದರೆ, 2017ರ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಎಲ್ಲ 19 ಕ್ಷೇತ್ರಗಳನ್ನೂ ಬಿಜೆಪಿಯೇ ಬುಟ್ಟಿಗೆ ಹಾಕಿಕೊಂಡಿತ್ತು. ಅಚ್ಚರಿಯ ವಿಷಯ ಏನೆಂದರೆ, ಎಸ್‍ಸಿ-ಎಸ್‍ಟಿ ತೀರ್ಪು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಅತ್ಯಂತ ಹೆಚ್ಚು ನಾಶ-ನಷ್ಟ ಅನುಭವಿಸಿದ್ದು ಇದೇ ಬುಂದೇಲ್‍ಖಂಡ್. ದಲಿತರ ಮೇಲೆ ಯೋಗಿ ಸರಕಾರ ನಿರ್ದಯವಾಗಿ ನಡೆದುಕೊಂಡಿದೆ ಎಂದು ಉತ್ತರ ಪ್ರದೇಶದ ಬಿಜೆಪಿ ಸಂಸದರೇ ಅಸಮಾಧಾನ ಹೊರಹಾಕುವಷ್ಟು ಈ ದೌರ್ಜನ್ಯ ಚರ್ಚೆಗೆ ಒಳಗಾಗಿದೆ. ಕಳೆದ 4 ವರ್ಷಗಳಲ್ಲಿ ದಲಿತರಿಗೆ ಬಿಜೆಪಿ ಏನ್ನು ಮಾಡಿಲ್ಲ ಎಂದು ಬಿಜೆಪಿ ಸಂಸದ ಯಶ್ವಂತ್ ಸಿಂಗ್ ಬಹಿರಂಗ ಹೇಳಿಕೆ ನೀಡಿದ್ದು ಈ ದೌರ್ಜನ್ಯದ ಬಳಿಕ. ಇವರಲ್ಲದೇ ಸಾವಿತ್ರಿಭಾೈ ಫುಲೆ, ಚೋಟೇಲಾಲ್ ಕಾರ್‍ವಾನ್ ಮತ್ತು ಅಶೋಕ್ ಕುಮಾರ್ ದೋಹ್ರಿ ಎಂಬ ಮೂವರು ಬಿಜೆಪಿ ದಲಿತ ಸಂಸದರೂ ವಾರಗಳ ಹಿಂದೆ ಬಿಜೆಪಿಯನ್ನು ಟೀಕಿಸಿದ್ದಾರೆ. ಸಂವಿಧಾನದ ಕುರಿತು, ದಲಿತ ಸಬಲೀಕರಣದ ಕುರಿತು ಸ್ವಪಕ್ಷದ ನಿಲುವನ್ನು ಪ್ರಶ್ನಿಸಿದ್ದಾರೆ. ಹೀಗೆ ದಿನೇ ದಿನೇ ಒಳಗಿನಿಂದಲೇ ಏಳುತ್ತಿರುವ ಈ ಬಂಡಾಯದ ಧ್ವನಿಗೆ ಸ್ವತಃ ಬಿಜೆಪಿಯೂ ಭಯಪಡತೊಡಗಿದೆ. 50% ದಲಿತರು ವಾಸಿಸುತ್ತಿರುವ ಗ್ರಾಮಗಳಲ್ಲಿ ಬಿಜೆಪಿಯ ಹಾಲಿ ಸಂಸದ ಅಥವಾ ಸಚಿವರು ಒಂದು ದಿನ ವಾಸ್ತವ್ಯ ಹೂಡಬೇಕೆಂದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಆದೇಶಿಸಿರುವುದಕ್ಕೆ ಮುಖ್ಯ ಕಾರಣ ಈ ಭಯವೇ.     
        2014ರಲ್ಲಿ ಬಿಜೆಪಿಯ ಮುಂದೆ ಮನಮೋಹನ್ ಸಿಂಗ್ ಇದ್ದರು. ಭ್ರಷ್ಟಾಚಾರವೂ ಇತ್ತು. ಅಲ್ಲದೇ ಪಾಕಿಸ್ತಾನವೂ ಇತ್ತು. ಆದರೆ 2019ರಲ್ಲಿ ಬರೇ ಪಾಕಿಸ್ತಾನ ಮಾತ್ರವೇ ಉಳಿದಿರುತ್ತದೆ. ಅದೂ ಕೂಡ ನರೇಂದ್ರ ಮೋದಿಯವರಿಂದ ಏನೇನೂ ಮಾಡಲಾಗದ ಮತ್ತು ಮನಮೋಹನ್ ಸಿಂಗ್ ಅವಧಿಯಲ್ಲಿ ಹೇಗಿತ್ತೋ ಹಾಗೆಯೇ ಇರುವ ಪಾಕಿಸ್ತಾನ. ಆದ್ದರಿಂದ, 2019ರಲ್ಲಿ ಪಾಕಿಸ್ತಾನದ ಹೆಸರೆತ್ತುವುದಕ್ಕೆ ಬಿಜೆಪಿ ಹಿಂಜರಿಯುವ ಸಾಧ್ಯತೆಯೇ ಹೆಚ್ಚು. ಉಳಿದಂತೆ, ಬಿಜೆಪಿ ಇರುವ ಅವಕಾಶ ಏನೆಂದರೆ, ತನ್ನ ಸಾಧನೆಗಳನ್ನು ಹೇಳಿಕೊಂಡು ಜನರನ್ನು ಒಲಿಸುವುದು. ಇದಂತೂ ಬಿಜೆಪಿಯ ಪಾಲಿಗೆ ದೊಡ್ಡ ಸವಾಲು. ಸಾಧನೆಗಿಂತ ಸಮಸ್ಯೆಯನ್ನೇ ಅದು ಈ ದೇಶದ ಜನರಿಗೆ ಈವರೆಗೆ ನೀಡುತ್ತಾ ಬಂದಿದೆ. ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಬಂದ ಮೋದಿ ಸರಕಾರದ ವರ್ಚಸ್ಸು, ಇನ್ನೊಂದು ವರ್ಷದಲ್ಲಿ ಹೆಚ್ಚಬಹುದಾದ ಯಾವ ಸೂಚನೆಗಳೂ ಕಾಣಿಸುತ್ತಿಲ್ಲ. ಈಗಿನ ಸ್ಥಿತಿಯನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ, ಮುಂದಿನ ಪ್ರತಿ ದಿನಗಳೂ ಬಿಜೆಪಿಯ ಜನಪ್ರಿಯತೆಯನ್ನು ಇನ್ನಷ್ಟು ಕಡಿಮೆಗೊಳಿಸುತ್ತಲೇ ಹೋಗುವ ಸಂಭವವೇ ಹೆಚ್ಚು. ಬಹುಶಃ, ಬಿಜೆಪಿ 2019ರ ಬದಲು 2018ರ ಕೊನೆಯಲ್ಲೇ ಲೋಕಸಭಾ ಚುನಾವಣೆ ಘೋಷಿಸಿದರೂ ಅಚ್ಚರಿಯಿಲ್ಲ.

No comments:

Post a Comment