Thursday, 17 May 2018

ಅತ್ಯಾಚಾರಿಗೆ ಮರಣದಂಡನೆ- ಎಲ್ಲಿಯವರೆಗೆ?

     
 
  ದೇಶದಲ್ಲಿ ಅತ್ಯಾಚಾರದ ಸುತ್ತ ಗಂಭೀರ ಚರ್ಚೆಯೊಂದರ ಹುಟ್ಟಿಗೆ ಜಮ್ಮುವಿನ ಕಥುವಾದ ಬಾಲೆ ಮರು ಚಾಲನೆಯನ್ನು ನೀಡಿದ್ದಾಳೆ.  2013ರಲ್ಲಿ ನಿರ್ಭಯ ಈ ಚರ್ಚೆಗೆ ಆರಂಭವನ್ನು ಕೊಟ್ಟಿದ್ದಳು. ನಿರ್ಭಯ ಮತ್ತು ಕಥುವಾದ ಬಾಲೆಯ ನಡುವಿನ ವ್ಯತ್ಯಾಸ ಏನೆಂದರೆ,  ಪ್ರಾಯ. ನಿರ್ಭಯ ವಯಸ್ಕರ ಪಟ್ಟಿಯಲ್ಲಿ ಗುರುತಿಸಿಕೊಂಡರೆ, ಕಥುವಾದ ಬಾಲೆ ಅಪ್ರಾಪ್ತರ ಪಟ್ಟಿಯಲ್ಲಿ ಗುರುತಿಸಿಕೊಳ್ಳುತ್ತಾಳೆ. ನಿಜವಾಗಿ,  ನಿರ್ಭಯ ಪ್ರಕರಣದ ಬಳಿಕ ಜನರು ದೊಡ್ಡ ಮಟ್ಟದಲ್ಲಿ ಬೀದಿಗಿಳಿದ ಪ್ರಕರಣ ಕಥುವಾ. ನಿರ್ಭಯ ಪ್ರಕರಣವು ಈ ದೇಶದ ವ್ಯವಸ್ಥೆಯ  ಮೇಲೆ ಎಷ್ಟು ದೊಡ್ಡ ಒತ್ತಡವನ್ನು ಹಾಕಿತೆಂದರೆ, ಭಾರತೀಯ ಅಪರಾಧ ದಂಡಸಂಹಿತೆಗೆ ತಿದ್ದುಪಡಿ ತರಬೇಕಾದಷ್ಟು. ಹೆಣ್ಣನ್ನು ಅತ್ಯಾಚಾರ  ಮಾಡಿ ಕೊಲೆಗೈಯುವವರಿಗೆ ಈ ತಿದ್ದುಪಡಿ ಮೂಲಕ ಮರಣದಂಡನೆ ಶಿಕ್ಷೆಯನ್ನು ಘೋಷಿಸಲಾಯಿತು. 2013ರಲ್ಲಿ ಆದ ಈ ಕಾನೂನಿಗೆ  ಬಹುದೊಡ್ಡ ಬೆಂಬಲ ವ್ಯಕ್ತವಾಯಿತು. ಆಗಿನ ಮನ್‍ಮೋಹನ್ ಸಿಂಗ್ ಸರಕಾರವು ನಿರ್ಭಯ ನಿಧಿಯನ್ನು ಸ್ಥಾಪಿಸಿತು. ಮಹಿಳೆಯರೇ ನಿ ರ್ವಹಿಸುವ ಪೋಸ್ಟ್ ಆಫೀಸ್, ರಿಕ್ಷಾ, ಬಸ್ಸ್‍ಗಳೂ ಸುದ್ದಿಗೀಡಾದುವು. ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ತುಂಬುವ ದೊಡ್ಡ ಮಟ್ಟದ  ಪ್ರಯತ್ನಗಳೂ ನಡೆದುವು. ಆದರೂ, 2013ರ ಬಳಿಕದ ಈ 2018ರ ವರೆಗಿನ ಸ್ಥಿತಿಯನ್ನು ಅವಲೋಕಿಸಿದರೆ ಅತ್ಯಾಚಾರ ಮತ್ತು ಹತ್ಯೆ  ಘಟನೆಗಳಲ್ಲಿ ಇಳಿಕೆಯೇನೂ ಕಂಡು ಬಂದಿಲ್ಲ ಅನ್ನುವುದು ಗೊತ್ತಾಗುತ್ತದೆ. ಕಳೆದ ನಾಲ್ಕು ವರ್ಷಗಳ ಅಂಕಿ ಅಂಶಗಳು ‘2013ರ  ಮರಣದಂಡನೆ ಕಾನೂನು ಮಹಿಳಾ ಪೀಡಕರನ್ನು ಬೆದರಿಸಿಲ್ಲ’ ಅನ್ನುವುದನ್ನು ಬಾರಿ ಬಾರಿಗೂ ನೆನಪಿಸುತ್ತಿದೆ. ಆ ಕಾನೂನಿನ ಪ್ರಕಾರ,  ಅತ್ಯಾಚಾರಗೈದು ಕೊಲೆಗೈದವರಿಗೆ ಮರಣದಂಡನೆಯಾದರೆ, ಅತ್ಯಾಚಾರಗೈದವರಿಗೆ ಜೀವಾವಧಿ ಶಿಕ್ಷೆ ನೀಡಲಾಗುತ್ತದೆ. ಆದರೂ ಮಹಿಳಾ  ಪೀಡನೆಯಲ್ಲಿ ಇಳಿಕೆಯಾಗದೇ ಇರುವುದು ಏನನ್ನು ಸೂಚಿಸುತ್ತದೆ? ಹೀಗಿರುತ್ತಾ, ಮಕ್ಕಳ ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವ  ಸುಗ್ರೀವಾಜ್ಞೆಯಿಂದ ಯಾವ ಬದಲಾವಣೆ ಸಾಧ್ಯವಾಗಬಹುದು? ಇಲ್ಲೋಂದು ಗಂಭೀರ ಅಂಶವಿದೆ. ಅತ್ಯಾಚಾರಿಗಳಿಗೆ ಕಾನೂನು ಪ್ರಕಾರ  ಶಿಕ್ಷೆಯಾಗಬೇಕೆಂದರೆ, ಆ ಶಿಕ್ಷೆಗಿಂತ ಮೊದಲಿನ ಪ್ರಕ್ರಿಯೆಗಳು ಸರಿಯಾಗಿ ನಡೆದಿರಬೇಕಾಗುತ್ತದೆ. ಪ್ರಕರಣವನ್ನು ದಾಖಲಿಸುವ ಪೋಲಿಸರಿಂದ  ಹಿಡಿದು ಫಾರೆನ್ಸಿಕ್ ವರದಿಯ ವರೆಗೆ, ಎಫ್‍ಐಆರ್ ತಯಾರಿಸುವಲ್ಲಿಂದ ಮೊದಲ್ಗೊಂಡು ನ್ಯಾಯಾಲಯದ ವಿಚಾರಣೆಯವರೆಗೆ ಪ್ರತಿ ¸ ಸಂದರ್ಭವೂ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತವೆ.
      ಅತ್ಯಾಚಾರವೆಂಬುದು ಈ ದೇಶದಲ್ಲಿ ಈಗಲೂ ಮುಚ್ಚಿಡಬೇಕಾದ ಒಂದು ¸ ಸಂಗತಿಯಾಗಿಯೇ ಗುರುತಿಸಿಕೊಂಡಿದೆ. ಯಾಕೆ ಮುಚ್ಚಿಡುವುದೆಂದರೆ, ಸಂತ್ರಸ್ತೆಯ ಮುಂದಿನ ಬದುಕು ಸುರಕ್ಷಿತವಾಗಿರುವುದಕ್ಕಾಗಿ. ಒಂದು  ವೇಳೆ ಬಹಿರಂಗವಾದರೆ, ಆಕೆಯ ವಿವಾಹಕ್ಕೆ ಅದು ಅಡ್ಡಿಯಾಗಬಹುದು. ಸಾಮಾಜಿಕ ಬಹಿಷ್ಕಾರಕ್ಕೋ ಸಮಾಜದ ಅಸ್ಪøಶ್ಯ ವರ್ತನೆಗೋ  ಅದು ಕಾರಣವಾಗಬಹುದು. ಆ ಹೆಣ್ಣು ಜೀವನದುದ್ದಕ್ಕೂ ಸಮಾಜದಲ್ಲಿ ಅಂತರವನ್ನು ಕಾಯ್ದುಕೊಂಡ ರೀತಿಯಲ್ಲಿ ಬದುಕಬೇಕಾಗಬಹುದು.  ಒಂದು ವೇಳೆ, ಈ ಮಾತಿಗೆ ಸಡ್ಡು ಹೊಡೆದು ಓರ್ವ ಹೆಣ್ಣು ಮಗಳು ತನ್ನ ಮೇಲಾದ ಅತ್ಯಾಚಾರವನ್ನು ಪ್ರಶ್ನಿಸುತ್ತಾಳೆಂದೇ  ಇಟ್ಟುಕೊಂಡರೂ ಅದು ತೀರಾ ಸಲೀಸಲ್ಲ. ಮೊಟ್ಟ ಮೊದಲು ಪೊಲೀಸ್ ಠಾಣೆಯಲ್ಲಿ ಆಕೆಯ ಪರೀಕ್ಷೆ ನಡೆಯುತ್ತದೆ. ಈ ದೇಶದ ಪೊಲೀಸು  ಠಾಣೆಗಳೆಷ್ಟು ಸಭ್ಯವಾಗಿವೆ ಎಂಬುದು ಎಲ್ಲರಿಗೂ ಗೊತ್ತು. ಲೈಂಗಿಕ ಪೀಡನೆಯ ದೂರಿನೊಂದಿಗೆ ಓರ್ವಳು ಠಾಣೆ ಪ್ರವೇಶಿಸಿದರೆ ಆಕೆಯನ್ನೇ  ಕುಲಟೆಯಂತೆ ನೋಡುವ ಸಂದರ್ಭಗಳೇ ಹೆಚ್ಚು. ಉನ್ನಾವೋದ ಹದಿಹರೆಯದ ಹೆಣ್ಣು ಅನುಭವಿಸಿದ್ದೂ ಇದನ್ನೇ. ಪೊಲೀಸರು ಪ್ರಕರಣ  ದಾಖಲಿಸುವ ಮೊದಲು ಕೇಳುವ ಪ್ರಶ್ನೆಗಳು ಕೆಲವೊಮ್ಮೆ ಅತ್ಯಾಚಾರಕ್ಕಿಂತಲೂ ಭೀಭತ್ಸವಾಗಿರುತ್ತದೆ ಎಂದು ಸಂತ್ರಸ್ತರು ಈ ಹಿಂದೆ ಹೇಳಿ ಕೊಂಡದ್ದೂ ಇದೆ. ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸುವ ಕಾನೂನನ್ನು 2013ರಲ್ಲಿ ಜಾರಿಗೊಳಿಸಿದ್ದರೂ ಅದೇಕೆ ಇನ್ನೂ  ಅತ್ಯಾಚಾರಿಗಳಲ್ಲಿ ಭಯ ಹುಟ್ಟಿಸಲು ಯಶಸ್ವಿಯಾಗಿಲ್ಲ ಅನ್ನುವುದಕ್ಕಿರುವ ಮೊದಲ ಉತ್ತರ ಪೊಲೀಸು ಠಾಣೆಗಳು. ಅಲ್ಲಿ ಸಮರ್ಪಕವಾಗಿ  ಎಫ್‍ಐಆರ್ ದಾಖಲಾದರೆ, ಫಾರೆನ್ಸಿಕ್ ವರದಿಗಳೂ ಸಹಿತ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಶ್ರಮವಹಿಸಿ ಪುರಾವೆಗಳನ್ನು ಸಂಗ್ರಹಿಸುವುದು  ನಡೆದರೆ ಅತ್ಯಾಚಾರಿ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ದುರಂತ ಏನೆಂದರೆ, ಹೆಚ್ಚಿನ ಅತ್ಯಾಚಾರ ಪ್ರಕರಣಗಳು ಬಿದ್ದು ಹೋಗುವುದೇ ದುರ್ಬಲ ಎಫ್‍ಐಆರ್‍ಗಳಿಂದ. ಅತ್ಯಾಚಾರದ ದೂರಿನ ಬಗ್ಗೆ ಪೊಲೀಸು ಠಾಣೆಗಳು ಉಡಾಫೆ ಭಾವದಿಂದಿರುವುದೇ ಇದಕ್ಕೆ ಕಾರಣ. ಇನ್ನು, ¸ಸಂತ್ರಸ್ತೆಯು ಪೆÇಲೀಸರ ಇರಿಯುವ ಪ್ರಶ್ನೆಗಳನ್ನು ಎದುರಿಸುವ ಛಲವಂತಿಕೆ ತೋರಿಸಿದರೂ, ಮುಜುಗರದ ಸನ್ನಿವೇಶ ಅಲ್ಲಿಗೇ ಕೊನೆಗೊಳ್ಳ¨ ಬೇಕೆಂದಿಲ್ಲ. ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಯಲ್ಲೂ ಅದನ್ನು ಎದುರಿಸಬೇಕಾಗಿ ಬರುತ್ತದೆ.
      ಅತ್ಯಾಚಾರಿಯ ಪರ ವಾದಿಸುವ  ನ್ಯಾಯವಾದಿಯಿಂದ ಉಗ್ರ ಕ್ರಾಸ್ ಪ್ರಶ್ನೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಅಲ್ಲದೇ ದೂರು ದಾಖಲಾಗಿ ನ್ಯಾಯಾಲಯದಲ್ಲಿ  ವಿಚಾರಣೆಯ ಹಂತಕ್ಕೆ ಬರುವಾಗ ಪ್ರಕರಣಕ್ಕೆ ವರ್ಷಗಳೂ ಸಂದಿರುತ್ತವೆ. ಈ ಅವಧಿಯಲ್ಲಿ ಸಾಕ್ಷಿದಾರರು ಮೇಲೆ ವಿವಿಧ ರೀತಿಯ  ಒತ್ತಡಗಳಿಗೆ ಒಳಗಾಗಿರುವುದಕ್ಕೂ ಅವಕಾಶವಿರುತ್ತದೆ. ಆರೋಪಿಗಳು ಬೆದರಿಕೆ ಹಾಕಿ ಸಾಕ್ಷಿದಾರರು ಸಾಕ್ಷಿ ಬದಲಿಸುವಂತೆ ಮಾಡುವುದೂ  ಇದೆ. ಒಂದು ರೀತಿಯಲ್ಲಿ, ನಮ್ಮ ವ್ಯವಸ್ಥೆ ಹೇಗಿದೆಯೆಂದರೆ, ಒಮ್ಮೆ ಅತ್ಯಾಚಾರಕ್ಕೀಡಾದ ಹೆಣ್ಣನ್ನು ಮತ್ತೆ ಮತ್ತೆ ಅತ್ಯಾಚಾರ ಮಾಡುವಂತಿದೆ.  ಈ ಎಲ್ಲ ಸಂದರ್ಭಗಳನ್ನು ಎದುರಿಸಿ ನಿಲ್ಲುವುದಕ್ಕೆ ಹೆಣ್ಣಿಗೆ ಬಲವಾದ ಬೆಂಬಲ ಸಿಗದು ಹೊರತು ಸಾಧ್ಯವಿಲ್ಲ. ನಗರ ಪ್ರದೇಶದ, ಹೆಚ್ಚು  ಕಲಿತ ಮತ್ತು ಸಾಮಾಜಿಕ ಸಂಘಟನೆಗಳೊಂದಿಗೆ ತೊಡಗಿಸಿಕೊಂಡ ಹೆಣ್ಣು ಇಂಥ ಛಾತಿಯನ್ನು ತೋರಿಸಬಲ್ಲಳೇ ಹೊರತು ಹಳ್ಳಿಯ ಬಡ  ಹೆಣ್ಣು ಮಗಳು ಇಷ್ಟೊಂದು ಧೈರ್ಯ ತೋರುವುದಕ್ಕೆ ಕಷ್ಟವಿದೆ. ಇಷ್ಟಿದ್ದೂ, ಅತ್ಯಾಚಾರ ಪ್ರಕರಣಗಳು ಪ್ರತಿದಿನ ದಾಖಲಾಗುತ್ತಿವೆ. ಅಂದರೆ,  ಅದರರ್ಥ- ಇಂಥ ಕ್ರೌರ್ಯಗಳ ಸಂಖ್ಯೆ ಸಾಕಷ್ಟಿದೆ ಮತ್ತು ಅವುಗಳಲ್ಲಿ ತೀರಾ ಸಣ್ಣ ಸಂಖ್ಯೆಯ ಪ್ರಕರಣಗಳು ಮಾತ್ರ ಬಹಿರಂಗಕ್ಕೆ ಬರುತ್ತಿವೆ  ಎಂದಾಗಿದೆ. ದುರಂತ ಏನೆಂದರೆ, ಹೀಗೆ ಬಹಿರಂಗಕ್ಕೆ ಬರುವ ಪ್ರಕರಣಗಳು ದುರ್ಬಲ ಎಫ್.ಐ.ಆರ್. ಮತ್ತು ಕಾನೂನು ಪ್ರಕ್ರಿಯೆಗಳ  ಜಟಿಲತೆಯಿಂದಾಗಿ ಬಹುತೇಕ ಬಿದ್ದು ಹೋಗುತ್ತವೆ. ಆದ್ದರಿಂದಲೇ, 2013ರ ಮರಣ ದಂಡನೆ ಕಾನೂನಿನ ಬಳಿಕ ಎಷ್ಟು ಮಂದಿ  ಅತ್ಯಾಚಾರಿಗಳಿಗೆ ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆಯಾಗಿದೆಯೆಂದು ಹುಡುಕಿದರೆ ದೀರ್ಘ ನಿರಾಶೆಯೊಂದೇ ಉತ್ತರವಾಗಿ  ಸಿಗುತ್ತದೆ. ಹೀಗಿರುವಾಗ, ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಮರಣ ದಂಡನೆ ವಿಧಿಸುವ ಕಾನೂನು ಮಕ್ಕಳಿಗೆ ಎಷ್ಟು ನೆಮ್ಮದಿಯನ್ನು ನೀಡ ಬಹುದು ಎಂಬ ಪ್ರಶ್ನೆಗೆ ಬಲ ಬರುವುದು. ಬರೇ ಕಾನೂನು ರೂಪಿಸುವುದರಿಂದ ಅಪರಾಧ ಕೃತ್ಯಗಳು ಕಡಿಮೆಗೊಳ್ಳಲು ಸಾಧ್ಯವಿಲ್ಲ.  ಕಾನೂನು ಪರಿಣಾಮಕಾರಿಯಾಗುವುದು ಅದಕ್ಕೆ ಪೂರಕವಾಗಿ ಕೆಲಸ ಮಾಡುವ ಅಧಿಕಾರಿಗಳು ಲಭ್ಯವಾದಾಗ. ಮೊದಲು ನಮ್ಮ ಪೊಲೀಸು  ಠಾಣೆಗಳನ್ನು ಜನಸ್ನೇಹಿಯಾಗಿಸಬೇಕು. ಅಲ್ಲಿಗೆ ಬರುವ ದೂರುಗಳನ್ನು ಧರ್ಮ, ಜಾತಿ, ರಾಜಕೀಯ ಒಲವು ಇತ್ಯಾದಿಗಳಿಗೆ ಅನುಸಾರವಾಗಿ  ವಿಭಜಿಸಿ ತೂಗುವುದಕ್ಕೆ ಅಂತ್ಯ ಹಾಡಿ ಸಂಪೂರ್ಣ ಪಾರದರ್ಶಕ ವಾತಾವರಣವನ್ನು ಜಾರಿಗೆ ತರಬೇಕು. ಪೊಲೀಸು ಠಾಣೆಗಳು  ನ್ಯಾಯಪೂರ್ಣವಾಗಿ ಕಾರ್ಯವೆಸಗಲು ಪ್ರಾರಂಭಿಸಿದರೆ ಈಗ ಇರುವ ಕಾನೂನುಗಳೇ ಅಪರಾಧಿಗಳನ್ನು ಮಟ್ಟ ಹಾಕಲು ಧಾರಾಳ ಸಾಕು.
      ಸದ್ಯ ಸುಧಾರಣೆಯಾಗಬೇಕಾದುದು ಕಾನೂನುಗಳಲ್ಲಲ್ಲ, ಪೊಲೀಸು ಠಾಣೆಗಳಲ್ಲಿ. ಅವು ಜವಾಬ್ದಾರಿ ಅರಿತು ಕಾರ್ಯಪ್ರವೃತ್ತವಾದರೆ  ಅತ್ಯಾಚಾರಗಳು ಕಡಿಮೆಗೊಳ್ಳುವುದಕ್ಕೆ ಹೊಸ ಕಾನೂನಿನ ಅಗತ್ಯವೇ ಬರಲಾರದು.

No comments:

Post a Comment