ಭ್ರಷ್ಟಾಚಾರವನ್ನು ಪ್ರಶ್ನಿಸಿ, ಖಂಡಿಸಿ ಮತ್ತು ಈ ಕಾರಣಕ್ಕಾಗಿ ಪ್ರಧಾನಿ ಮನ್‍ಮೋಹನ್ ಸಿಂಗ್‍ರನ್ನು ತಮಾಷೆ ಮಾಡಿ 2014ರ ಲೋಕಸಭಾ ಚುನಾವಣೆಯನ್ನು ಎದುರಿಸಿದ್ದ ಬಿಜೆಪಿಯು ಸದ್ಯ ಮನ್‍ಮೋಹನ್ ಸಿಂಗ್‍ರ ಸ್ಥಿತಿಯನ್ನೇ ಎದುರಿಸುತ್ತಿದೆ. ಅಧಿಕಾರದ ಕೇವಲ ನಾಲ್ಕು ವರ್ಷಗಳೊಳಗೆ ಎರಡು ಬೃಹತ್ ಹಗರಣಗಳು ಬಿಜೆಪಿಯ ಕೊರಳನ್ನು ಸುತ್ತಿಕೊಂಡಿದೆ. ಮಾತ್ರವಲ್ಲ, ದಿನೇ ದಿನೇ ಈ ಉರುಳು ಬಿಗಿಯಾಗುತ್ತಲೂ ಇದೆ. ಇದರಲ್ಲಿ ಒಂದು: ರಫೇಲ್ ಯುದ್ಧ ವಿಮಾನಗಳ ಖರೀದಿಯದ್ದಾದರೆ, ಇನ್ನೊಂದು: ನೋಟು ನಿಷೇಧ. ‘Refale talks were on when, Reliance Entertainment helped produce film for Francois Hollande’s partner’ ಎಂಬ ಶೀರ್ಷಿಕೆಯಲ್ಲಿ ‘ದ ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಯು ಆಗಸ್ಟ್ 31ರಂದು ದೀರ್ಘ ಲೇಖನವನ್ನೇ ಪ್ರಕಟಿಸಿತ್ತು.
ರಫೇಲ್ ಒಡಂಬಡಿಕೆಯ ಸಮಯದಲ್ಲಿ ಫ್ರಾನ್ಸ್ ನ ಅಧ್ಯಕ್ಷರಾಗಿದ್ದವರು ಫ್ರಾಂಕೋಯಿಸ್ ಹೊಲ್ಲಾಂಡೆ. ಇವರ ಗೆಳತಿ ಮತ್ತು ನಟಿಯಾಗಿರುವ ಜೂಲಿ ಗಯೆಟೆ ಅವರ ‘ರಗ್ ಇಂಟರ್ ನಾಶನಲ್ ಸಂಸ್ಥೆ’ಯೊಂದಿಗೆ ಸೇರಿಕೊಂಡು ಫ್ರೆಂಚ್ ಸಿನಿಮಾ ತಯಾರಿಸುವುದಾಗಿ 2016 ಜನವರಿ 24ರಂದು ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಎಂಟರ್ ಟೈನ್ ಮೆಂಟ್ ಸಂಸ್ಥೆಯು ಘೋಷಿಸುತ್ತದೆ. ಇದಾಗಿ ಎರಡು ದಿನಗಳ ಬಳಿಕ- ಜನವರಿ 26ರಂದು -ಗಣರಾಜ್ಯೋತ್ಸವ ಅತಿಥಿಯಾಗಿ ಭಾರತಕ್ಕೆ ಬಂದ ಫ್ರಾನ್ಸ್ ಅಧ್ಯಕ್ಷ ಹೊಲ್ಲಾಂಡೆಯವರು ರಫೇಲ್ ಖರೀದಿಯ ತಿಳುವಳಿಕಾ ಪತ್ರಕ್ಕೆ ಸಹಿ ಹಾಕುತ್ತಾರೆ. ವಿಶೇಷ ಏನೆಂದರೆ, ರಫೇಲ್ ವಿಮಾನಗಳ ಉತ್ಪಾದನೆಯನ್ನು ಫ್ರಾನ್ಸ್ ನ ಡಸಲ್ಟ್ ಏವಿಯೇಶನ್ ಮತ್ತು ಅನಿಲ್ ಅಂಬಾನಿಯವರ ಒಡೆತನ ರಕ್ಷಣಾ ಸಂಸ್ಥೆಯು ಜೊತೆಯಾಗಿ ಮಾಡಲಿದ್ದು, ಗಯೆಟೆಯ ಸಿನಿಮಾದ ಸಹ ನಿರ್ಮಾಪಕನಾಗಿ ಇದೇ ಡಸಲ್ಟ್ ಸಂಸ್ಥೆಯು ಭಾಗಿಯಾಗಿದೆ. ಅಂದರೆ, ಫ್ರಾನ್ಸ್ ಅಧ್ಯಕ್ಷ ಹೊಲ್ಲಾಂಡೆಯವರ ಗೆಳತಿಯ ಸಿನಿಮಾದಲ್ಲಿ ರಿಲಯನ್ಸ್ ಮತ್ತು ಡಸಲ್ಡ್ ಎರಡೂ ಸಂಸ್ಥೆಗಳು ಭಾಗಿಯಾಗಿವೆ ಮತ್ತು ಇವೆರಡೂ ಜೊತೆ ಸೇರಿಕೊಂಡೇ ರಫೇಲ್ ಯುದ್ಧ ವಿಮಾನಗಳನ್ನು ಉತ್ಪಾದಿಸಲಿವೆ. ಗಯೆಟೆ ಅವರ ಸಿನಿಮಾವನ್ನು ತಯಾರಿಸಲು ತೀರ್ಮಾನಿಸಿರುವುದಾಗಿ ಘೋಷಿಸಿದ ಎರಡು ದಿನಗಳ ಬಳಿಕ ರಫೇಲ್ ಖರೀದಿಯ ಬಗೆಗಿನ ತಿಳುವಳಿಕಾ ಪತ್ರಕ್ಕೆ ಫ್ರಾನ್ಸ್ ಅಧ್ಯಕ್ಷರು ಸಹಿ ಹಾಕುತ್ತಾರೆ. ಬಾಹ್ಯನೋಟಕ್ಕೆ ಕಾಕತಾಳೀಯವೆಂಬಂತೆ ಕಾಣುವ ಈ ಬೆಳವಣಿಗೆಯು ಕಾಕತಾಳೀಯಕ್ಕಿಂತಲೂ ಹೊರತಾದ ಇನ್ನಾವುದನ್ನೋ ಅಡಗಿಸಿಕೊಂಡಿದೆ ಅನ್ನುವ ಅನುಮಾನಕ್ಕೆ ಇದುವೇ ಕಾರಣ. ಬೋಫೋರ್ಸ್‍ಗಿಂತಲೂ ದೊಡ್ಡ ಹಗರಣ ಇದು ಎಂದು ಖ್ಯಾತ ನ್ಯಾಯವಾದಿ ಪ್ರಶಾಂತ್ ಭೂಷಣ್ ಮತ್ತು ಬಿಜೆಪಿ ಮುಖಂಡ ಯಶವಂತ್ ಸಿನ್ಹ ಅವರು ಆರೋಪಿಸಿದ್ದಾರೆ.
ದಶಕದ ಹಿಂದೆ ಮನ್‍ಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಸುಮಾರು 126 ರಫೇಲ್ ವಿಮಾನಗಳ ಖರೀದಿಗೆ ಫ್ರಾನ್ಸ್‍ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆಗ ಒಂದು ವಿಮಾನಕ್ಕೆ ಸುಮಾರು 560 ಕೋಟಿ ರೂಪಾಯಿಯನ್ನು ನಿಗದಿಪಡಿಸಲಾಗಿತ್ತು. ಅಲ್ಲದೇ ಈ ವಿಮಾನಗಳ ಉತ್ಪಾದನೆಯು ಕರ್ನಾಟಕದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆಯ ಜಂಟಿ ಸಹಭಾಗಿತ್ವದಲ್ಲಿ ಮಾಡಲಾಗುವುದೆಂದು ಘೋಷಿಸಲಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಈ ಒಪ್ಪಂದಕ್ಕೆ ಮರುರೂಪವನ್ನು ಕೊಟ್ಟರಲ್ಲದೇ ಸರಕಾರಿ ಸಂಸ್ಥೆಯಾದ HAL ಅನ್ನು ಕೈಬಿಟ್ಟು ರಿಲಯನ್ಸ್ ಸಂಸ್ಥೆಯನ್ನು ಸೇರಿಸಿಕೊಂಡರು. ಮಾತ್ರವಲ್ಲ, ಪ್ರತಿ ಯುದ್ಧ ವಿಮಾನಕ್ಕೆ ಮನ್‍ಮೋಹನ್ ಸಿಂಗ್ ಸರಕಾರ ತೀರ್ಮಾನಿಸಿದ್ದ 560 ಕೋಟಿ ರೂಪಾಯಿಯ ಬದಲು 1,660 ಕೋಟಿ ರೂಪಾಯಿಯನ್ನು ನಿಗದಿಪಡಿಸಲಾಯಿತು. ಈ ನಿಗದಿಯಲ್ಲೂ ಒಂದು ಗೊಂದಲ ಇದೆ. ಪ್ರಶಾಂತ್ ಭೂಷಣ್ ಅವರ ಪ್ರಕಾರ, ಪ್ರತಿ ವಿಮಾನಕ್ಕೆ 670 ಕೋಟಿ ರೂಪಾಯಿ ತಗಲುತ್ತದೆ ಎಂದು ಇದೇ ಸರಕಾರ ನವೆಂಬರ್ 2016ರಲ್ಲಿ ಹೇಳಿತ್ತು. ಆದರೆ ಆ ಬಳಿಕ ಪ್ರತಿ ವಿಮಾನಕ್ಕೆ 1,660 ಕೋಟಿ ರೂಪಾಯಿ ಖರ್ಚಾಗುತ್ತದೆಂದು ರಿಲಯನ್ಸ್ ಮತ್ತು ಡಸಲ್ಡ್ ಸಂಸ್ಥೆಯು ಘೋಷಿಸಿತು.
ಒಂದು ರೀತಿಯಲ್ಲಿ, ಈ ಇಡೀ ಒಪ್ಪಂದವು ತರಾತುರಿಯಿಂದ ನಡೆದಿದೆ. ಬೃಹತ್ ಹಗರಣವೊಂದರ ಸರ್ವಸಾಧ್ಯತೆಯನ್ನು ತೆರೆದಿಟ್ಟ ಈ ಒಪ್ಪಂದದ ಬಗ್ಗೆ ಹೆಚ್ಚಿನ ವಿವರವನ್ನು ಹಂಚಿಕೊಳ್ಳಲು ಕೇಂದ್ರ ಸರಕಾರ ನಿರಾಕರಿಸುತ್ತಿದೆ. ಸರಕಾರದ ಕೈ ಸ್ವಚ್ಛವಾಗಿದ್ದರೆ ಅಳುಕು ಏಕೆ? ಪ್ರಶ್ನೆಗಳಿಗೆ ಉತ್ತರಿಸದೇ ಸರಕಾರ ಮರೆಯಲ್ಲಿ ಅಡಗುವುದೇಕೆ? ಸರಕಾರಿ ಸಂಸ್ಥೆಯಾದ ಊಂಐ ಅನ್ನು ಕೈಬಿಟ್ಟು ಅನನುಭವಿ ರಿಲಯನ್ಸ್ ಅನ್ನು ಈ ಉತ್ಪಾದನಾ ರಂಗದಲ್ಲಿ ಸಹಭಾಗಿಗೊಳಿಸಿದ್ದು ಯಾವ ಉದ್ದೇಶದಿಂದ? ಈ ರಫೇಲ್ ಇನ್ನೊಂದು ಬೋಫೋರ್ಸ್ ಹಗರಣವೇ ಎಂಬ ಪ್ರಶ್ನೆ ವಿವಿಧೆಡೆಗಳಿಂದ ಕೇಳಿಬರತೊಡಗಿದೆ. ಇದರ ಜೊತೆಗೇ ನಾವು ನೋಟು ನಿಷೇಧವನ್ನೂ ಇಟ್ಟು ನೋಡಬೇಕು.
2016 ನವೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದಿಢೀರ್ ಆಗಿ 500 ಮತ್ತು 1 ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಅಮಾನ್ಯಗೊಳಿಸಿದರು. ಕಪ್ಪುಹಣವನ್ನು ನಿರ್ಮೂಲನಗೊಳಿಸುವುದು ಇದರ ಮುಖ್ಯ ಗುರಿ ಎಂದವರು ಆಗ ಸಾರಿದ್ದರು. ಕಾಶ್ಮೀರದ ಘರ್ಷಣೆಗೆ ಮತ್ತು ನಕ್ಸಲ್ ಹಿಂಸಾಚಾರಕ್ಕೆ ಕಪ್ಪು ಹಣದ ಪ್ರಭಾವವೇ ಕಾರಣ ಎಂದೂ ಅವರು ಹೇಳಿದ್ದರು. ಇದೀಗ ಆರ್ ಬಿ ಐ ಕಳೆದವಾರ ನೋಟು ಅಮಾನ್ಯದ ಫಲಿತಾಂಶವನ್ನು ಪ್ರಕಟಿಸಿದೆ. ನಿಷೇಧಿತ ನೋಟುಗಳ ಪೈಕಿ 99.3% ನೋಟುಗಳೂ ಮರಳಿ ಬಂದಿವೆ ಎಂದೂ ಅದು ಹೇಳಿದೆ. ಇದರರ್ಥ, ನೋಟಿನ ರೂಪದಲ್ಲಿ ಕಪ್ಪುಹಣದ ಚಲಾವಣೆ ಶೂನ್ಯ ಅನ್ನುವಷ್ಟು ಕಡಿಮೆ ಇತ್ತು ಎಂದೇ.
ನಿಜವಾಗಿ, ನೋಟು ಅಮಾನ್ಯ ಅನ್ನುವುದು ಬಹುದೊಡ್ಡ ವೈಫಲ್ಯ. ಸಾಮಾನ್ಯ ಮಂದಿ ತಮ್ಮ ಬಳಿ ಇರುವ ನೋಟುಗಳನ್ನು ಬದಲಿಸಿಕೊಳ್ಳಲು ಬ್ಯಾಂಕುಗಳೆದುರು ಕ್ಯೂ ನಿಂತು ಬಸವಳಿದು ಹೋದರು. ಶ್ರೀಮಂತರು ಪ್ರಭಾವವನ್ನು ಬಳಸಿ ತಮ್ಮ ಬಳಿಯಿರುವ ನೋಟುಗಳನ್ನು ಬಿಳಿಯಾಗಿಸಿಕೊಂಡರು. ಈ ನೋಟು ಅಮಾನ್ಯದಿಂದ ಕಾಶ್ಮೀರದ ಹಿಂಸಾಚಾರವೂ ತಗ್ಗಲಿಲ್ಲ. ನಕ್ಸಲರೂ ಸುಮ್ಮನಾಗಲಿಲ್ಲ. ಆದರೆ ಕೋಟ್ಯಂತರ ಉದ್ಯೋಗಗಳು ನಾಶಗೊಂಡವು. ಸಣ್ಣ-ಪುಟ್ಟ ಉದ್ದಿಮೆಗಳು ನೆಲ ಕಚ್ಚಿದುವು. ಉದ್ಯೋಗ ಮತ್ತು ಕೃಷಿ ಕ್ಷೇತ್ರದ ಮೇಲೆ ಬಲವಾದ ಹೊಡೆತಗಳು ಬಿದ್ದುವು. ಜನಸಾಮಾನ್ಯರ ಕೈಯಲ್ಲಿದ್ದ ಹಣವನ್ನೆಲ್ಲ ಬ್ಯಾಂಕುಗಳು ವಶಪಡಿಸಿಕೊಂಡವಲ್ಲದೇ ಬೃಹತ್ ಉದ್ಯಮಿಗಳ ಕೋಟ್ಯಂತರ ರೂಪಾಯಿ ಸಾಲವನ್ನು ಮನ್ನಾ ಮಾಡಲಾಯಿತು. ಕೆಲವು ಶ್ರೀಮಂತ ಉದ್ಯಮಿಗಳು ಬ್ಯಾಂಕುಗಳನ್ನು ದೋಚಿ ಪಲಾಯನ ಮಾಡಿದರು. ಉದ್ಯಮಿಗಳಿಗೆ ಕೊಟ್ಟ ಕೋಟ್ಯಂತರ ರೂಪಾಯಿ ಸಾಲವನ್ನು ವಸೂಲು ಮಾಡಲಾಗದೆ ಖಜಾನೆ ಖಾಲಿ ಮಾಡಿಕೊಂಡಿದ್ದ ಬ್ಯಾಂಕುಗಳು ಆ ನಷ್ಟವನ್ನು ತುಂಬಿಸಿಕೊಳ್ಳುವುದಕ್ಕಾಗಿ ನೋಟು ನಿಷೇಧದ ದಂಧೆಗಿಳಿದವೋ ಅನ್ನುವ ಅನುಮಾನವೂ ಇದೆ. ಸಾಲ ಎತ್ತಿರುವ ಉದ್ಯಮಿಗಳೇ ಇಂಥದ್ದೊಂದು ತಂತ್ರವನ್ನು ಸರಕಾರಕ್ಕೆ ನೀಡಿದರೋ ಎಂದೂ ಪ್ರಶ್ನಿಸಬೇಕಾಗಿದೆ.
ನೋಟು ನಿಷೇಧ ಮತ್ತು ರಫೇಲ್ - ಇವೆರಡೂ ಇವತ್ತು ಸಾಕಷ್ಟು ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದೆ. ಇವೆರಡರಿಂದಲೂ ಈ ದೇಶಕ್ಕಾದ ಲಾಭ ಏನು ಅನ್ನುವ ಪ್ರಶ್ನೆಗೆ ಸಮರ್ಪಕ ಉತ್ತರವನ್ನು ನೀಡಲು ಈ ಸರಕಾರ ಹಿಂದೇಟು ಹಾಕುತ್ತಿದೆ. ಅದೇವೇಳೆ, ‘ಕೋಟ್ಯಂತರ ರೂಪಾಯಿಗಳ ಎರಡು ಬೃಹತ್ ಹಗರಣಗಳ ಹೆಸರುಗಳಿವು’ ಎಂಬ ವಾದಕ್ಕೆ ದಿನೇ ದಿನೇ ಆಧಾರಗಳು ಲಭ್ಯವಾಗುತ್ತಿವೆ.
ಅಂದಹಾಗೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ನೋಟು ಮತ್ತು ರಫೇಲ್ ಎರಡೂ ಸೇರಿಕೊಂಡು ಮೋದಿಯವರನ್ನು ಕೆಳಗಿಳಿಸಿದರೂ ಅಚ್ಚರಿಯಿಲ್ಲ.
No comments:
Post a Comment